ನೀವೂ ಕಲಿಯಿರಿ, “ವಾಟ್ಸಾಪ್ ಮನಶ್ಶಾಸ್ತ್ರ”

Share Button

“ಹೀಗೂ ಒಂದು ಮನಃಶ್ಶಾಸ್ತ್ರ ಇದೆಯೇ?ನಮಗೆ ಗೊತ್ತೇ ಇರಲಿಲ್ಲ” ಅನ್ನಬೇಡಿ. ಇಂಥದ್ದೊಂದು ಮನಶ್ಶಾಸ್ತ್ರದ ಶಾಖೆ ಇನ್ನೂ ಶುರುವಾಗಿಲ್ಲ. ಸದ್ಯದ ವಿದ್ಯಮಾನಗಳನ್ನು ಗಮನಿಸಿದಾಗ ಹೊಸ ಮನಶ್ಶಾಸ್ತ್ರ ಶಾಖೆಯಾಗಿ ಇದು ಸೇರ್ಪಡೆಯಾಗುವ ಸಾಧ್ಯತೆಯಂತೂ ದಟ್ಟವಾಗಿದೆ. ಅಂಗೈಯಲ್ಲಿರುವ ಈ ವಾಟ್ಸಾಪ್ ಬ್ರಹ್ಮಾಂಡದ ಮುಂದೆ ಯಾವ ಪ್ರಪಂಚವೂ ಲೆಕ್ಕಕ್ಕಿಲ್ಲದಂತಾಗಿದೆ. ವಾಟ್ಸಾಪ್ ನಲ್ಲಿ ಏನುಂಟು?ಏನಿಲ್ಲ? ಅದರ ಸಾಧ್ಯತೆಗಳೇನು? ಈ ಬಗ್ಗೆ ಯೋಚಿಸಿದ್ದೀರಾ? ನಮ್ಮ ನಿಮ್ಮೆಲ್ಲರ ಚಿಂತನೆಗೆ ನಿಲುಕದಷ್ಟು ಬೃಹತ್ ಸಾಧ್ಯತೆಗಳು ವಾಟ್ಸಾಪ್ ಗಿದೆ. ಇತ್ತೀಚೆಗೆ ವಾಟ್ಸಾಪ್ ಕವಿಗಳ ಬಳಗವೊಂದು ತಮ್ಮ ವಾಟ್ಸಾಪ್ ಗುಂಪಿನ ಸದಸ್ಯರ ಕವನ ಸಂಕಲನವೊಂದನ್ನು ಹೊರತಂದಿತ್ತು. ಇದೇ ವಾಟ್ಸಾಪ್ ನ ಒಂದು ಮನಶ್ಶಾಸ್ತ್ರೀಯ ಲಕ್ಷಣ. ಅದು ಸಮಾನ ಮನಸ್ಕರನ್ನು ಒಂದುಗೂಡಿಸುತ್ತದೆ. ಮಹಿಳಾ ಸಾಹಿತಿಗಳ ಗುಂಪು, ಪ್ರಸಿದ್ಧ ಸಾಹಿತಿಗಳ ಗುಂಪು, ಉದಯೋನ್ಮುಖ ಸಾಹಿತಿಗಳ ಗುಂಪು, ಶಿಕ್ಷಕರು, ಉಪನ್ಯಾಸಕರು, ಬ್ಯಾಂಕ್ ಉದ್ಯೋಗಿಗಳು, ವೈದ್ಯರು ಹೀಗೆ ವಿವಿಧ ರೀತಿಯ ವೃತ್ತಿಪರರ ಗುಂಪುಗಳು , ಒಂದೇ ಬ್ಯಾಚಲ್ಲಿ ಒಂದು ಸಂಸ್ಥೆಯಲ್ಲಿ ಕಲಿತವರ ಗುಂಪು, ಕುಟುಂಬದ ಸದಸ್ಯರ ಗುಂಪು… ಗುಂಪುಗಳ ವಿಧ, ಸ್ವರೂಪಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದು ಹನುಮಂತನ ಬಾಲದಂತೆ ಬೆಳೆಯಬಹುದು.

ಇತ್ತೀಚೆಗೆ ನನ್ನ ಸಂಬಂಧಿಕರೋರ್ವರ ವಾಟ್ಸಾಪ್ ಗ್ರೂಪ್ ಗಳ ಹೆಸರುಗಳನ್ನು ಕುತೂಹಲಕ್ಕಾಗಿ ನೋಡಿದೆ. “ಬ್ಯಾಂಗ್ ಬ್ಯಾಂಗ್”,       “ನಾಕ್ ಔಟ್”, “ಬಾಜಲ್ ಗೈಸ್” (ತುಳುವಿನಲ್ಲಿ ಬಾಜಲ್ ಅಂದರೆ ಬಾಯಾರಿಕೆ) ಇತ್ಯಾದಿ ವಿಚಿತ್ರ ಹೆಸರುಗಳನ್ನು ಕಂಡಾಗ ಮೊದಲು ಅರ್ಥವಾಗದಿದ್ದರೂ ,ಇದು ಹೈಟೆಕ್ ಕುಡುಕರ ವಾಟ್ಸಾಪ್ ಗುಂಪುಗಳೆಂದು ನಂತರ ಅರ್ಥಮಾಡಿಕೊಂಡೆ. ಒಂದುದಿನ “ಬ್ಯಾಂಗ್ ಬ್ಯಾಂಗ್” ಗ್ರೂಪಿನ ಸೋಕಾಲ್ಡ್ ಹೈಫೈ ಗಂಡಸರು ಒಂದು ಪಾರ್ಟಿಯಲ್ಲಿ ಕುಡಿತದಲ್ಲಿ ನಿರತರಾದಾಗ, ವೈಫೈ ಬಳಸಿ ಚಾಟ್ ಮಾಡುತ್ತಿದ್ದ ಅವರ ವೈಫುಗಳು “ಆ್ಯಂಗ್ರಿ ವೈವ್ಸ್ ಗ್ಯಾಂಗ್” ಎಂಬ ಗ್ರೂಪ್ ರಚಿಸಿ , ತಮ್ಮ ಮನೆಗಳಲ್ಲಿರುವ ಲಟ್ಟಣಿಗೆ, ಸೌಟು ಇತ್ಯಾದಿಗಳಲ್ಲಿ ಪರಿಣಾಮಕಾರಿ ಆಯುಧ ಯಾವುದೆಂಬ ಚರ್ಚೆಯಲ್ಲಿ ತೊಡಗಿದ್ದರು. ಪಾಪ ಯುವ ಪ್ರಾಯದ ತಮ್ಮ ಮಕ್ಕಳು ಸದಸ್ಯರಾಗಿರುವ “ಸ್ಮಾಲ್ ಬಾಯ್ಸ್” ಎಂಬ ಗುಂಪಿನ ನಿಜವಾದ ಅರ್ಥ ನಶೆಯಲ್ಲಿ ತೇಲುವ ಅಪ್ಪಂದಿರಿಗಾಗಲೀ, ಅವರನ್ನು ಮಟ್ಟ ಹಾಕಲು ನಿರಂತರ ತಂತ್ರಗಳನ್ನು ಹೆಣೆದು ಸೋಲುವ ಅಮ್ಮಂದಿರಿಗಾಗಲೀ ತಿಳಿದಿರಲಿಲ್ಲ.. ತಮ್ಮಲ್ಲೊಬ್ಬನ ಬರ್ತ್ ಡೇ ಪಾರ್ಟಿಯ ರಾತ್ರಿ ,ಸ್ಮಾಲಿನ ಬದಲು ಲಾರ್ಜ್ ಏರಿಸಿಕೊಂಡ ಸ್ಮಾಲ್ ಬಾಯ್ಸ್ ತಮ್ಮ ತಮ್ಮ ಗರ್ಲ್ ಫ್ರೆಂಡ್ ಜೊತೆ ಡಿ.ಜೆ.ಮ್ಯೂಸಿಕ್ ಗೆ ಕುಣಿಯುತ್ತಿರಬೇಕಾದರೆ ಕಿಕ್ ಏರಿದ ಒಬ್ಬ ತನ್ನ ಗೆಳತಿಯೆಂದು ಇನ್ನೊಬ್ಬನ ಗೆಳತಿಗೆ ಕಿಸ್ ಕೊಟ್ಟು, ಅವಳು, ಅವಳ ಗೆಳೆಯ, ತನ್ನ ಗೆಳತಿ ಈ ಎಲ್ಲರಿಂದ ಪೆಟ್ಟು ತಿಂದು ಮುಖ ಊದಿಸಿಕೊಂಡಿದ್ದ.ಇಂಗು ತಿಂದ ಮಂಗನಂತಹ ಮುಖದೊಂದಿಗೆ ಮನೆ ತಲುಪಿದ ಮಗ, ಎಲ್ಲೋ ಜಾರಿ ಬಿದ್ದನೆಂದು ನೆಪ ಹೇಳಿದಾಗ ಅವನಮ್ಮ ಪಾಪ, ಶುಶ್ರೂಷೆ ಮಾಡಿದ್ದೇ ಮಾಡಿದ್ದು. ತಮ್ಮ ಹಾದಿ ಹಿಡಿದ ಮಕ್ಕಳು ತಮಗಿಂತ ಬಹಳ ಮುಂದೆ ಹೋಗಿದ್ದಾರೆಂದು ಅರಿವಾದ ಕೆಲವು ಅಪ್ಪಂದಿರು ಏನೇನೋ ಕಸರತ್ತು ಮಾಡಿ ಕುಡಿತ ಬಿಟ್ಟು, “ಜಲ ಸಂರಕ್ಷಣಾ ತಂಡ” ಎಂಬ ವಾಟ್ಸಾಪ್ ಗುಂಪು ರಚಿಸಿಕೊಂಡರೆಂದೂ ,ತನ್ಮೂಲಕ ಬಿಸ್ಲೇರಿ ನೀರು ಹಾಗೂ ಸೋಡಾವನ್ನೂ ಉಳಿಸುತ್ತಿದ್ದಾರೆ.
ವಾಟ್ಸಾಪ್ ಗುಂಪುಗಳ ಹೆಸರು ನಿಮ್ಮ ಹಿನ್ನೆಲೆಯನ್ನೇ ಬಯಲು ಮಾಡಬಹುದು. ನೀವಿಟ್ಟ ಹೆಸರು ನಿಮ್ಮ ಗುಂಪಿನ ಮನಶ್ಶಾಸ್ತ್ರವನ್ನು ಹೇಳುತ್ತದೆ. ಆದಕಾರಣ ಹೆಸರಿಡುವಾಗ ಜಾಗೃತರಾಗಿರಿ. ವಾಟ್ಸಾಪ್ ಗ್ರೂಪ್ ಹೆಸರುಗಳನ್ನು ಕೇಳಿದರೆ ಬಹುಶಃ ಇದರ ಬಗ್ಗೆ ಪಿ.ಎಚ್.ಡಿಮಾಡುವಾ ಅನಿಸಬಹುದು. “ಕ್ರೇಜೀ ಬಾಯ್ಸ್, ಕ್ರೇಜೀ ಕಸಿನ್ಸ್, ದ ಗ್ರೇಟ್ ಫ್ಯಾಮಿಲಿ, ಬ್ಯಾಚ್ ಮೇಟ್ಸ್ , ಊರಿನ ಹೆಸರಿನ ಜೊತೆಗೊಂದು ಸ್ಟಾರ್ಸ್ ,ಯಾವುದೋ ಪ್ರಸಿದ್ಧ ವ್ಯಕ್ತಿಯ ಹೆಸರಿನ ಮುಂದೊಂದು ಫ್ಯಾನ್ಸ್  ಈ ರೀತಿ ಚಿತ್ರ ವಿಚಿತ್ರ ಹೆಸರುಗಳ, ವಿಭಿನ್ನ ಉದ್ದೇಶಗಳಿಗಾಗಿ ಕಟ್ಟಲ್ಪಟ್ಟ ಗುಂಪುಗಳಿವೆ. ಹೀಗೆ ಗ್ರೂಪ್ ಗಳು ಹುಟ್ಟುತ್ತಾ ಹೋದರೆ ಮುಂದೊಂದು ದಿನ ಗ್ರೂಪ್ ಹೆಸರಿಗೆ ಪೇಟೆಂಟ್ ತೆಗೆದುಕೊಳ್ಳಬೇಕಾಗಿ ಬರಬಹುದು. ಗ್ರೂಪಿನ ಹೆಸರು ಓದುವಾಗಲೇ ಆ ಗ್ರೂಪಿನ ಸಾಮಾನ್ಯ ಮನೋಧರ್ಮ ನಮಗೆ ಅರ್ಥವಾಗಿಬಿಡುತ್ತದೆ. ಗ್ರೂಪಿನ ಐಕನ್ ಅಥವಾ ಡಿಸ್ ಪ್ಲೇ ಪಿಕ್ಚರ್ (ಡಿ.ಪಿ) ಆ ಗ್ರೂಪಿನ ಟ್ರೇಡ್ ಮಾರ್ಕಿನಂತಿರುತ್ತದೆ. ಅಡ್ಮಿನ್ ಎಂಬ , ಗುಂಪಿನ ಆಡಳಿತಾಧಿಕಾರಿ! ಬಹಳ ಆಲೋಚನೆ ಮಾಡಿ ಆರಿಸಿದ ಡಿ.ಪಿ ಯನ್ನು ಕೆಲವು ಸದಸ್ಯರು ಆಗಾಗ ಬದಲಿಸುತ್ತಾರೆ. ಈ ಸಂಬಂಧ ಗ್ರೂಪಲ್ಲಿ ಅಸಮಾಧಾನ ಮೂಡುವುದೂ ಉಂಟು. ‌ಗ್ರೂಪ್ ಗಳ ಕತೆ ಹೀಗಾದರೆ ವ್ಯಕ್ತಿಗತ ವಾಟ್ಸಾಪ್ ಖಾತೆಗಳಿಂದ ಹೆಚ್ಚುಕಮ್ಮಿ ಒಬ್ಬ ವ್ಯಕ್ತಿಯ ಜನ್ಮ ಜಾಲಾಡಬಹುದು. ರಸವತ್ತಾದ ವಿವರಗಳನ್ನು ತಿಳಿದುಕೊಳ್ಳಬಹುದು. ಅದಕ್ಕೆ ಅವರ ವೈಯಕ್ತಿಕ ಚಾಟ್ ಗಳನ್ನು ನೋಡಬೇಕಾಗಿಲ್ಲ. ಬದಲು ಡಿ.ಪಿ ಹಾಗೂ ಸ್ಟೇಟಸ್ ಗಳನ್ನು ನೋಡಿದರೆ ಸಾಕು. ಇತ್ತೀಚೆಗೆ ಪ್ರೊಫೈಲ್ ಪಿಕ್ಚರ್ ಜೊತೆಗಿನ ಸ್ಟೇಟಸ್ ಅಲ್ಲದೇ ಪ್ರತ್ಯೇಕ ಸ್ಟೇಟಸ್ ಸೌಲಭ್ಯವೂ ವಾಟ್ಸಪ್ಪಿನಲ್ಲಿದೆ. ಅದರಲ್ಲಿ ಚಿತ್ರ, ಬರಹ, ವೀಡಿಯೋ ಹೀಗೆ ಯಾವುದನ್ನೂ ಅಪ್ ಲೋಡ್ ಮಾಡಬಹುದಾಗಿದ್ದು, ಇದು  24 ಗಂಟೆಗಳ ಕಾಲ ಊರ್ಜಿತದಲ್ಲಿರುತ್ತದೆ. ನಂತರ ಪುನಃ ಹೊಸತನ್ನು ಅಪ್ ಲೋಡ್ ಮಾಡಬೇಕು. ಇಲ್ಲಿ ನಾನು ಹೇಳುತ್ತಿರುವ ಸ್ಟೇಟಸ್ ಅದಲ್ಲ. ಡಿಪಿ ಜೊತೆಗಿನ ಸ್ಟೇಟಸ್ .

.

ಡಿಪಿ ಬದಲಿಸಲಿಕ್ಕಾಗಿಯೇ ಸೆಲ್ಫೀ ತೆಗೆದುಕೊಳ್ಳುವವರು, ವಿವಿಧ ಸ್ಥಳಗಳಲ್ಲಿ ನಿಂತು, ವಿವಿಧ ಭಂಗಿಯ ಫೋಟೋಗಳನ್ನು ತೆಗೆದುಕೊಳ್ಳುವವರಿದ್ದಾರೆ. ಕೆಲವು ಗಂಭೀರ ಸ್ವಭಾವದವರು ಹಾಗೂ ಅಧಿಕ ಕೆಲಸದ ಒತ್ತಡ ಇರುವವರ ಸ್ಟೇಟಸ್, ಡಿಫಾಲ್ಟ್ ಸ್ಟೇಟಸ್ ಗಳಲ್ಲಿ ಒಂದಾಗಿರುತ್ತದೆ. ಹೇ, ಐ ಆ್ಯಮ್ ಯೂಸಿಂಗ್ ವಾಟ್ಸಾಪ್ , ಬ್ಯುಸಿ, ಅವೈಲೇಬಲ್, ಎಟ್ ಆಫೀಸ್, ಎಟ್ ವರ್ಕ್ ಇತ್ಯಾದಿ ಸ್ಟೇಟಸ್ ಇಟ್ಟುಕೊಳ್ಳುವ ಅವರಿಗೆ ಡಿ.ಪಿಬದಲಿಸುವ ಹುಚ್ಚೂ ಇರುವುದಿಲ್ಲ. ಬದಲಿಸಿದರೂ ಬಹಳ ಅಪರೂಪಕ್ಕೊಮ್ಮೆ ಅಷ್ಟೇ. ಇವರು ವಾಟ್ಸಾಪ್ ಬಳಸುವುದೂ ವಿರಳವಾಗಿರುವ ಸಂದರ್ಭವೇ ಹೆಚ್ಚು. ಅನಗತ್ಯ ಚಾಟಿಂಗ್ ನಿಂದ ಇವರು ಮಾರು ದೂರವಿರುತ್ತಾರೆ. ಇನ್ನು ಕೆಲವರಿಗೆ ಆಗಾಗ ಡಿ.ಪಿ ಹಾಗೂಸ್ಟೇಟಸ್ ಬದಲಿಸದಿದ್ದರೆ ಏನೋ ಚಡಪಡಿಕೆ. ತಮಗಿಷ್ಟವಾದ ಸಿನೆಮಾ ಹಾಡಿನ ಸಾಲು, ನುಡಿಮುತ್ತು, ತಮ್ಮದೇ ಆದೊಂದು ಹೇಳಿಕೆ ಇತ್ಯಾದಿಗಳನ್ನು ಆಗಾಗ ಸ್ಟೇಟಸ್ ಹಾಕುವವರಿರುತ್ತಾರೆ. ಕೆಲವರ ಸ್ಟೇಟಸ್ ನಲ್ಲಿ ಯಾವಾಗಲೂ ಒಂದಲ್ಲಾ ಒಂದು ವಿರಹ ಗೀತೆಯ ಸಾಲಿರುತ್ತದೆ. ಅವರು ಭಗ್ನ ಪ್ರೇಮಿಗಳೆಂದು ಯಾರೂ ಬಿಡಿಸಿ ಹೇಳಬೇಕಾಗಿಲ್ಲ. ಕೆಲವರು ಕೇವಲ ಇಮೋಜಿಗಳನ್ನಷ್ಟೇ ಸ್ಟೇಟಸ್ ಆಗಿ ಬಳಸುವವರೂ , ಒಂದುವಾಕ್ಯದ ಜೊತೆ ಅದಕ್ಕೆ ಹೊಂದುವ ಇಮೋಜಿ ಬಳಸುವವರೂ ಇದ್ದಾರೆ. ಇವುಗಳಿಂದ ವ್ಯಕ್ತಿಯ ಮಾನಸಿಕ ಸ್ಥಿತಿಗತಿ, ಭಾವನೆ, ಧೋರಣೆ, ಆಸಕ್ತಿ, ಆಸೆ,ಆಕಾಂಕ್ಷೆ ,ದೈಹಿಕ, ಮಾನಸಿಕ ಆರೋಗ್ಯ, ಎಲ್ಲವನ್ನೂ ಅಂದಾಜಿಸಬಹುದಾಗಿದೆ. ಅಷ್ಟೇ ಅಲ್ಲ ಅವರಿಗೆ ಸಂಬಂಧಪಟ್ಟವರ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಜನನ, ಮರಣದ ವಾರ್ತೆಗಳು ಎಲ್ಲವನ್ನೂ ತಿಳಿದುಕೊಳ್ಳಬಹುದು. ಯಾರಲ್ಲೂ ನೇರವಾಗಿ ಹೇಳಲಾಗದ್ದನ್ನು ಸ್ಟೇಟಸ್ ಹಾಕಿ ಸಮಾಧಾನಪಟ್ಟುಕೊಳ್ಳುವವರಿದ್ದಾರೆ. ಕೆಲವು ಪ್ರೇಮಿಗಳು “ಪ್ರೀತಿ ಕುರುಡು” ಎಂದು ಅಕ್ಷರಶಃ ನಂಬಿ ತಮ್ಮ ಪ್ರೇಮಿಗೋಸ್ಕರ ಸ್ಟೇಟಸ್ ಹಾಕುತ್ತಾರೆ. ಉಳಿದವರು ಕೂಡಾ ಅದನ್ನು ನೋಡುತ್ತಾರೆ ಎಂಬ ಕನಿಷ್ಠ ಪರಿಜ್ಞಾನವೂ ಅವರಿಗಿಲ್ಲವೋ,ಅಥವಾ ಉಳಿದವರು ಓದಿದರೆ ಅವರಿಗೆ ಸಂತೋಷವಾಗುತ್ತದೋ ಗೊತ್ತಿಲ್ಲ. ಕೆಲವರ ಡಿ.ಪಿ, ಸ್ಟೇಟಸ್ ಗಳಲ್ಲಿ ಒಂಟಿತನ , ಪ್ರೀತಿಗಾಗಿ ಇರುವ ಹಂಬಲ ವ್ಯಕ್ತವಾಗುತ್ತದೆ. ಇಂತಹವರಿಗೆ ಯಾರಿಂದಾದರೂ ಪ್ರೇಮಾಭ್ಯರ್ಥನೆ ಬಂದರೆ ಆಶ್ಚರ್ಯವಿಲ್ಲ. ಡಿ.ಪಿಯಲ್ಲಿ ಬೇರೆ ಯಾರದೋ ಫೋಟೋ ಹಾಕಿ ಅಮಾಯಕರನ್ನು ಮೋಸಗೊಳಿಸುವವರೂ , ಡಿ.ಪಿ ನೋಡಿ ಪ್ರೀತಿ ಮಾಡಿ ಮೋಸ ಹೋಗುವವರೂ ಇದ್ದಾರೆ ಬಿಡಿ.
.
ವಾಟ್ಸಾಪ್ ಮನಶ್ಶಾಸ್ತ್ರ ಕಲಿಯುವ ಹಂಬಲವಿದ್ದರೆ ನಮ್ಮ ವಾಟ್ಸಾಪ್ ಗೆಳೆಯರು ಹಾಗೂ ಗುಂಪುಗಳಿಂದ ದಿನಕ್ಕೊಂದು ವಿಷಯ ಕಲಿಯಬಹುದು. ಸ್ಟೇಟಸ್ ನೋಡಿ ಆ ವ್ಯಕ್ತಿ ಬದುಕಲ್ಲಿ ಸಂತುಷ್ಟನೇ?, ಸಮಸ್ಯೆಗಳಿರುವವನೇ, ದುಃಖಿ ಅಥವಾ ಏಕಾಂಗಿಯೇ? ಎಂದು ತಿಳಿಯುತ್ತದೆ. ಇತರರ ಬಗ್ಗೆ ಕಾಳಜಿಯಿರುವವರು ಯಾರೆಂಬುದನ್ನೂ ಸ್ಟೇಟಸ್ ನೋಡಿ ಹೇಳಬಹುದು. ಎಂತಹ ಬಿಗು ವ್ಯಕ್ತಿತ್ವದವರ ತುಟಿಯಂಚಲ್ಲೂ ಒಂದು ಕಿರುನಗೆ ಮೂಡಿಸುವ ತರದ ಸ್ಟೇಟಸ್ ಹಾಕುವವರಿದ್ದಾರೆ. ಸ್ವತಃ ತಮ್ಮಲ್ಲೂ ,ಓದುವ ಇತರರಲ್ಲೂ ಸಂತೋಷ ,ಉತ್ಸಾಹ, ಭರವಸೆಗಳನ್ನು ತುಂಬುವ ಸ್ಟೇಟಸ್ ಹಾಕುವವರು ಧನಾತ್ಮಕ ಚಿಂತನೆಯವರಾಗಿರುತ್ತಾರೆ. ಕೆಲವು ನಿರಾಶಾವಾದಿಗಳ ಸ್ಟೇಟಸ್ ಓದಿದರೆ ಓದಿದವರು ಕೂಡಾ ಉತ್ಸಾಹ ಕಳೆದುಕೊಳ್ಳುತ್ತಾರೆ. “ನಗು ನಗುತಾ ನಲಿ” “ಬಿ ಪಾಸಿಟಿವ್” “ಯಾವುದೂ ಅಸಾಧ್ಯವಲ್ಲ” “ಇಂದಿನ ದಿನ ಶುಭದಿನ” “ಐ ಕ್ಯಾನ್ ಡೂ ಇಟ್ “ಇತ್ಯಾದಿ ಮಾತುಗಳಲ್ಲಿರುವ ಧನಾತ್ಮಕ ಶಕ್ತಿಯನ್ನೂ , ” ಯಾರೂ ನಂಬಿಕೆಗೆ ಅರ್ಹರಲ್ಲ”, ” ಇದು ಮೋಸಗಾರರ ಪ್ರಪಂಚ” “ಬದುಕು ದುಃಖ ಸಾಗರ” ಇತ್ಯಾದಿಗಳ ಋಣಾತ್ಮಕ ಶಕ್ತಿಯನ್ನೂ ಗಮನಿಸಿ. ಕೆಲವು ಸ್ಟೇಟಸ್ ಗಳು ಬಹಳ ಮಾರ್ಮಿಕವಾಗಿರುತ್ತವೆ.     “ನೀನು ದ್ರೌಪದಿ , ನಾನು ರಾಮ” ಎಂಬ ಒಂದು ಸ್ಟೇಟಸ್ಸನ್ನು ಇತ್ತೀಚೆಗೆ ಓದಿದ್ದೆ.
ವಾಟ್ಸಾಪ್ ಮನಶ್ಶಾಸ್ತ್ರ ಕಲಿಯುವ ಹಂಬಲ ನಿಮಗೂ ಮೂಡಿರಬಹುದಲ್ವಾ? ಇರಿ.ಇನ್ನೂ ಸ್ವಲ್ಪ ಟಿಪ್ಸ್ ಕೊಡ್ತೇನೆ. ಗ್ರೂಪ್ ಗಳಿಂದ ಅದರ ಸದಸ್ಯರ ಮನಶ್ಶಾಸ್ತ್ರವನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಕೆಲವರು ಗ್ರೂಪಿಗೆ ಅಸಭ್ಯ ಚಿತ್ರಗಳು, ಮೆಸೇಜ್ ಹಾಗೂ ವೀಡಿಯೋಗಳನ್ನು ಕಳಿಸುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ಕೆಲವರು ಅವಹೇಳನಕಾರಿ ಪೋಸ್ಟ್ ಗಳನ್ನಷ್ಟೇ ಕಳಿಸುತ್ತಾರೆ. ಕೆಲವರು ಹೆಲ್ತ್ ಟಿಪ್ಸ್ ಕಳಿಸುವುದರಲ್ಲಿ ಆಸಕ್ತಿ ಹೊಂದಿದ್ದರೆ , ಇನ್ನು ಕೆಲವರು ಆಗಾಗ ಹೇರ್ ಸ್ಟೈಲ್, ಮೆಹಂದಿ, ಹೊಸ ಫ್ಯಾಶನ್ ಇತ್ಯಾದಿಗಳನ್ನು ಕಳಿಸುತ್ತಾರೆ. ಕೆಲವರು ಸದಭಿರುಚಿಯ ನಗೆಹನಿಗಳು, ಹಾಗೂ ನಕ್ಕು ನಗಿಸುವ ವೀಡಿಯೋಗಳನ್ನು, ಸಂಗೀತ, ನೃತ್ಯ ,ಇತರ ಕಲೆಗಳಿಗೆ ಸಂಬಂಧಪಟ್ಟ ವೀಡಿಯೋಗಳನ್ನು ಕಳಿಸುತ್ತಾರೆ. ಕೆಲವರು ಮಹಾತ್ಮರ ನುಡಿಮುತ್ತುಗಳು, ಸಾಮಾನ್ಯಜ್ಞಾನ ಇತ್ಯಾದಿಗಳನ್ನು ಹಂಚಿ ಕೊಳ್ಳುತ್ತಾರೆ. ಇಲ್ಲಿ ನಾವು ಅವರ ಸ್ವಭಾವ ತಿಳಿದುಕೊಳ್ಳುವುದು ಬಹಳ ಸುಲಭ. ಅವರು ನಮ್ಮ ಆಸಕ್ತಿಯ ಪೋಸ್ಟನ್ನಲ್ಲ ಅವರದೇ ಆಸಕ್ತಿಯ ಪೋಸ್ಟನ್ನು ಕಳಿಸಿರುತ್ತಾರೆ. ಅಂದರೆ ಅವರ ಸ್ವಭಾವ, ಆಸಕ್ತಿ, ಮನೋಧೋರಣೆಗಳು ಪೋಸ್ಟ್ ಗಳ ರೂಪದಲ್ಲಿ ವ್ಯಕ್ತವಾಗಿರುತ್ತವೆ. ವ್ಯಕ್ತಿ ಮೂರ್ಖನೋ, ಜಾಣನೋ, ಭಾಷೆಯ ಮೇಲೆ ಹಿಡಿತ ಇರುವವನೋ ಅಲ್ಲವೋ, ಎಲ್ಲವನ್ನೂ  ವಾಟ್ಸಾಪ್ ಬಳಕೆಯ ರೀತಿ ತಿಳಿಸಿಬಿಡುತ್ತದೆ. ಯಾವುದೇ ಪೋಸ್ಟ್ ಬಂದರೂ ವಿವೇಚನೆಯಿಲ್ಲದೇ ಉಳಿದವರಿಗೆ ಫಾರ್ವರ್ಡ್ ಮಾಡುವವರು ಮೂರ್ಖರೆಂಬುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲವಲ್ಲ. ಎಂತಹ ಸಂದರ್ಭದಲ್ಲೂ ,ಯಾರೊಂದಿಗೂ ಒಂದು ಇಮೋಜಿಯ ಮೂಲಕವಷ್ಟೇ  ಪ್ರತಿಕ್ರಿಯಿಸುವವರು ಉದಾಸೀನದ ಮೂರ್ತಿಗಳು. ಅನಗತ್ಯ, ಅಪ್ರಸ್ತುತ, ವಿವಾದಾತ್ಮಕ, ಕೋಮುಪ್ರಚೋದಕ ಪೋಸ್ಟ್ ಗಳನ್ನು ಉದ್ದೇಶಪೂರ್ವಕವಾಗಿ ಗ್ರೂಪಿಗೆ ಕಳಿಸಿ, ಗುಂಪಿನ ಸದಸ್ಯರು ಪರಸ್ಪರ ಶೀತಲ ಸಮರದಲ್ಲಿ , ಕಾವೇರಿದ ಚರ್ಚೆಗಳಲ್ಲಿ ತೊಡಗುವುದನ್ನು ನೋಡಿ ಖುಷಿ ಪಡುವವರನ್ನು ವಿಘ್ನ ಸಂತೋಷಿಗಳು ಎನ್ನಬಹುದೇನೋ. ಗುಂಪಿನ ಉದ್ದೇಶ, ಸದಸ್ಯರ ಬೌದ್ಧಿಕ ಸಾಮರ್ಥ್ಯ, ಸಹಕಾರ ಮನೋಭಾವ, ಪರಸ್ಪರ ಗೌರವ, ಒಟ್ಟಾರೆ ಸ್ವಭಾವ ಎಲ್ಲವನ್ನೂ ವಾಟ್ಸಾಪ್ ತಿಳಿಸಿಕೊಡುತ್ತದೆ..
.
ನೀವೂ ವಾಟ್ಸಾಪ್ ಬಳಕೆದಾರರಾಗಿದ್ದರೆ ಎಚ್ಚರವಾಗಿರಿ. ನಿಮ್ಮ ಸ್ಟೇಟಸ್, ಡಿ.ಪಿ ಗಳನ್ನು ಬದಲಿಸುವಾ, ಯಾವುದಾದರೂ ಮೆಸೇಜಿಗೆ ಪ್ರತಿಕ್ರಿಯಿಸುವಾಗ, ನಿಮ್ಮ ಗುಣಾವಗುಣಗಳು, ನಿಮ್ಮ ವ್ಯಕ್ತಿತ್ವ ಬಟಾಬಯಲಾಗುತ್ತದೆ. ನೀವಾಗಿ ನಿಮ್ಮ ಬೆಲೆ ಕಳೆದುಕೊಳ್ಳಬೇಡಿ. ನಿಮ್ಮ ವಾಟ್ಸಾಪ್ ಗೆಳೆಯರಲ್ಲಿ ಟೊಳ್ಳು-ಗಟ್ಟಿ ಯಾರೆಂಬುದು ಈಗ ವ್ಯಕ್ತವಾಗುತ್ತಿರಬಹುದಲ್ವಾ?,
ಅಂದಹಾಗೆ  ನಾನೂ ಆಗಾಗ ಸ್ಟೇಟಸ್ ಬದಲಿಸುತ್ತೇನೆ.  ಉದ್ದೇಶಪೂರ್ವಕ ಸ್ಟೇಟಸ್ ಬದಲಿಸುತ್ತಾ ನನ್ನ ಮಾನಸಿಕ ಆರೋಗ್ಯ, ನೆಮ್ಮದಿಗಳನ್ನು ಕಾಪಾಡಿಕೊಂಡು ಉತ್ಸಾಹ, ಲವಲವಿಕೆಗಳಿಂದಿರಲು ಪ್ರಯತ್ನಿಸುತ್ತೇನೆ. ಧನಾತ್ಮಕ ಸ್ಟೇಟಸ್ ಗಳನ್ನು ಇಷ್ಟಪಡುವ ನಾನು ,ಬೇರೆಯವರ ಮಾತುಗಳನ್ನು ಕಾಪಿ ಮಾಡುವ ಬದಲು ನನ್ನದೇ ಸ್ವಂತ ಹೇಳಿಕೆಯನ್ನು ನಮೂದಿಸುತ್ತೇನೆ. ಬಹುಶಃ ಅದು ನನ್ನ ಸ್ವಾಭಿಮಾನದ ಸೂಚಕ. ಮನಸ್ಸಿಗೆ ಮಂಕುತನ ಕವಿದಾಗ ,ಉತ್ಸಾಹ ಮರಳಿಪಡೆಯಲು ಸ್ಟೇಟಸ್ ಗಳನ್ನು  ಬಳಸಿಕೊಳ್ಳುತ್ತೇನೆ. ನನ್ನ “ಸ್ಟೇಟಸ್ ಥೆರಪಿ” ನೀವೂ ಪ್ರಯತ್ನಿಸಿನೋಡಿ. ಈಗ ನಿಮ್ಮನ್ನೆಲ್ಲಾ ನಾನು ವಾಟ್ಸಾಪ್ ಮನಶ್ಶಾಸ್ತ್ರದಲ್ಲಿ ನಿಪುಣರನ್ನಾಗಿ ಮಾಡಿದ್ದೇನೆ.ಕಲಿಕಾಶುಲ್ಕಕೊಡ್ತೀರೋ ಬಿಡ್ತೀರೋ, ಅವಿವೇಕದ ಸ್ಟೇಟಸ್ ಹಾಕಿ ಮರ್ಯಾದೆ ಕಳೆದುಕೊಳ್ಳಬೇಡಿ. ಯಾರ ಬಳಿಯಾದರೂ “ನಿಮ್ಮ ಮನಶ್ಶಾಸ್ತ್ರ ಹೇಳುತ್ತೇನೆಂದು” ಪರೀಕ್ಷಿಸಲು ಹೋಗಿ ಪೆಟ್ಟು ತಿಂದರೆ ನಾನು ಜವಾಬ್ದಾರಳಲ್ಲ.

.

 – ಜೆಸ್ಸಿ.ಪಿ.ವಿ, ಪುತ್ತೂರು

4 Responses

  1. Doddabasappa P says:

    ಚೆನ್ನಾಗಿದೆ .

  2. Hema says:

    ಬರಹ ಇಷ್ಟವಾಯಿತು

  3. Muralikrishna says:

    Timely article. I think it is not only true for whatsapp, it is equally relevant for Facebook, Facebook chat, Hangout, Instagram, etc. Be careful if you find someone is addicted to fake I’d supporting social media.

  4. Anonymous says:

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: