ಸೂಪರ್ ಪಾಕ

ನೆಲ್ಲಿಕಾಯಿ ಚಟ್ಟು…ಹೊಟ್ಟೆನೋವು ರಟ್ಟು…

Share Button

Shankari Sharma Puttur

‘ಅಮ್ಮಾ,ಸೂಟುಕೇಸಲ್ಲಿ ನೆಲ್ಲಿಚಟ್ಟು ಇಟ್ಟಿದ್ದೀಯಾ…ಮರ್ತುಬಿಡ್ಬೇಡ ಮತ್ತೆ..??’..ಮಗಳು ಉವಾಚ…ಅಮೇರಿಕಕ್ಕೆ ಕುಟುಂಬ ಸಮೇತ ಹೊರಡುವ ತಯಾರಿ ನಡೆಯುತ್ತಿತ್ತು..ಎಲ್ಲಾ ಸಾಮಾನುಗಳ ಜೊತೆಗೆ ನೆಲ್ಲಿಚಟ್ಟಿಗೆ ಮೊದಲ ಸ್ಥಾನ…ಹಾಗೆಯೇ ಅದಕ್ಕೆ ವಿದೇಶ ಪ್ರಯಾಣದ ಯೋಗ..!! ಮನೆಯೊಳಗೆ ಅದೊಂದಿದ್ದರೆ ಮನಸ್ಸಿಗೆ ನೆಮ್ಮದಿ..

ನೆಲ್ಲಿಕಾಯಿಯನ್ನು ತಿಳಿಯದವರು ಇಲ್ಲ ಅಂತಲೇ ಹೇಳಬಹುದು.ನಿಸರ್ಗದಲ್ಲಿ ಸಿಗುವ ಪರಿಪೂರ್ಣ ಔಷದೀಯ ಫಲ ಇದಾಗಿದೆ.ಅಮೃತಫಲವೆಂದು ಕರೆಸಿಕೊಳ್ಳುವ ಇದು ಚಳಿಗಾಲದಲ್ಲಿ ಬಿಡುವ ಫಲ.ಆಮ್ಲಿಕಾ ಎಂಬೆಲ್ಲಿಕಸ್ ಎಂಬುದು ಇದರ ವೈಜ್ನಾನಿಕ ಹೆಸರು.ಹಿಂದಿ ಮತ್ತು ಮರಾಠಿಯಲ್ಲಿ ಇದಕ್ಕೆ ಅಮಲಾ ಎನ್ನುತ್ತಾರೆ.ಆಯುರ್ವೇದದ ಜನಪ್ರಿಯ ಚ್ಯವನಪ್ರಾಶದಲ್ಲಿ ಪ್ರಮುಖವಾಗಿ ನೆಲ್ಲಿಕಾಯಿಯನ್ನು ಬಳಸುತ್ತಾರೆ.

ಇದರಲ್ಲಿ ಸಿ ಜೀವಸತ್ವವು  ಹೇರಳವಾಗಿದೆ,ಅಂದರೆ ಕಿತ್ತಳೆ ಹಣ್ಣಿಗಿಂತಲೂ ಮೂವತ್ತು ಪಟ್ಟು ಹೆಚ್ಚು..!! ಹಾಗಾಗಿ ಗಂಟಲು ಮತ್ತು ಶ್ವಾಸನಾಳದ ತೊಂದರೆಗಳ ನಿವಾರಣೆಯಲ್ಲಿ ಹೆಚ್ಚು ಪರಿಣಾಮಕಾರಿ.ಹೃದಯ ಸಂರಕ್ಷಣೆಯಲ್ಲಿ ಕೂಡಾ ಇದರ ಪಾತ್ರ ತುಂಬಾ ಮಹತ್ವವಾದುದು ..ಈಗ ಬೃಹದ್ರಾಕ್ಷಸಾಕಾರವಾಗಿ ಬೆಳೆದಿರುವ ಮಧುಮೇಹ ರೋಗಕ್ಕೆ ಹಾಗೂ ಅದರ ಅಡ್ಡ ಪರಿಣಾಮಗಳ ಚಿಕಿತ್ಸೆಗೆ ಆಯುರ್ವೇದ ಚಿಕಿತ್ಸೆಯಲ್ಲಿ ನೆಲ್ಲಿಕಾಯಿ ಹೆಚ್ಚಾಗಿ ಬಳಕೆಯಲ್ಲಿದೆ.ಬಾಯಿ ಹುಣ್ಣಿಗಂತೂ ಇದು ದಿವ್ಯಔಷಧಿ.ತೀವ್ರತರದ ಬಾಯಾರಿಕೆಯನ್ನು ತಗ್ಗಿಸುವ ಗುಣವನ್ನೂ ಹೊಂದಿದೆ..ಇನ್ನೂ ತುಂಬಾ ತರಹಗಳ ತೊಂದರೆಗಳ ನಿವಾರಣೆಗಳಿಗೆ ಬಳಕೆಯಾಗುವ ನೆಲ್ಲಿಕಾಯಿ ನಮ್ಮ ಮನೆಯಲ್ಲೇ ವರ್ಷವಿಡೀ ಸಿಗುವಂತಿದ್ದರೆ ಎಷ್ಟು ಚೆನ್ನ ಅಲ್ಲವೇ..

ಹಾಂ…ಅದಕ್ಕಾಗಿಯೇ ನಮ್ಮ ಹಿರಿಯರು ಚಳಿಗಾಲದಲ್ಲಿ ಗುಡ್ಡಗಳಲ್ಲಿ ಧಾರಾಳವಾಗಿ ಸಿಗುತ್ತಿದ್ದ ನೆಲ್ಲಿಕಾಯಿಯನ್ನು ತಂದು,ಸಂಸ್ಕರಿಸಿ ವರ್ಷಗಟ್ಟಲೆ ಹಾಳಾಗದಂತೆ ಇರಿಸುತ್ತಿದ್ದರು.ನೆಲ್ಲಿಕಾಯಿ ಉಪ್ಪಿನಕಾಯಿ,ಚಟ್ನಿ,ತಂಬುಳಿಗಳು ಸಾಧಾರಣವಾಗಿ ಎಲ್ಲರಿಗೂ ತಿಳಿದಿರುತ್ತವೆಯಲ್ಲವೆ..? ತಿಂದ ಆಹಾರ ಹೆಚ್ಚು ಕಮ್ಮಿ ಆಗಿ ಹೊಟ್ಟೆ ನೋವು ಇದ್ದರೆ ನೆಲ್ಲಿ ಚಟ್ಟನ್ನು ಮಜ್ಜಿಗೆಯಲ್ಲಿ ಕದಡಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ನೋವು ಮಂಗಮಾಯ.ಆದರೆ ನೆಲ್ಲಿಕಾಯಿ ಚಟ್ಟು ತಯಾರಿ ಸ್ವಲ್ಪ ಕೆಲಸವನ್ನು ಬೇಡುತ್ತದೆ. ಹಲವಾರು ವರ್ಷಗಳ ಹಿಂದೆ ನೆಲ್ಲಿಕಾಯಿ ಎಂದರೆ ಒಂದೇ…ಅದೇ, ಗುಡ್ಡಗಳಲ್ಲಿ ಸಿಗುತ್ತಿದ್ದ ಬೆಟ್ಟದ ನೆಲ್ಲಿಕಾಯಿ.ಸಣ್ಣ ಗಾತ್ರದ ಇದು ಅತೀ ಹೆಚ್ಚು ಔಷದೀಯ ಗುಣಗಳನ್ನು ಹೊಂದಿದೆ. ಆದರೆ ಈಗ..?? ವರ್ಷವಿಡೀ ತರಹೇವಾರಿ ವಿವಿಧ ಗಾತ್ರದ ನೆಲ್ಲಿಕಾಯಿಗಳು ಸಿಗುತ್ತಿರುತ್ತವೆ..!! ಬೆಟ್ಟದ ನೆಲ್ಲಿಕಾಯಿ ಈಗ ದುರ್ಲಭ ಆದ್ದರಿಂದ ಯಾವ ನೆಲ್ಲಿಯಾದರೂ ಸರಿ…ಸಿಕ್ಕಿದ್ದು ಸಾಕೆಂದು  ತೃಪ್ತಿ  ಪಡುವುದೇ ಲೇಸು ಅಲ್ಲವೆ..?

 Gooseberry

ಮೊನ್ನೆ ನಮ್ಮ ಪಕ್ಕದ ಮನೆಯವರು  ಕೈಯಲ್ಲಿ ಏನೋ ತೋರಿಸಿ ಇದೇನೆಂದು ಹೇಳಿ ನೋಡೋಣ ಎಂದರು..ಎಂದಿನಂತೆ ಆಕಡೆ ಈಕಡೆ ತರಕಾರಿ,ಹಣ್ಣು ವಿನಿಮಯ ಇದ್ದದ್ದೆ ಆದ್ದರಿಂದ ಪೇರಳೆ ಎಂದೆ…ನೋಡಿದರೆ ಅದು ನೆಲ್ಲಿಕಾಯಿ ಆಗಿತ್ತು..!! ನನ್ನ ಜೀವನದಲ್ಲೇ ಮೊದಲ ಬಾರಿಗೆ ಅಷ್ಟು ದೊಡ್ಡ ನೆಲ್ಲಿಕಾಯಿ ನೋಡಿದ್ದಾಗಿತ್ತು..!! ನಮ್ಮಲ್ಲಿ ಅಡಿಗೆ ಮಾಡುವಾಗ ಹುಳಿ ಎಷ್ಟು ಹಾಕಬೇಕೆಂದರೆ ಒಂದು ನೆಲ್ಲಿಕಾಯಿಯಷ್ಟು ಹಾಕು ಎನ್ನುವರಲ್ವಾ..ಆದರೆ ಈಗ ಹಾಗೆಂದರೆ ನಳಪಾಕ ಹೋಗಿ ದಮಯಂತಿ ಪಾಕ ಆಗಬಹುದೇನೋ..

ಇನ್ನು ನಮ್ಮ ನೆಲ್ಲಿಚಟ್ಟು ಮಾಡುವ ಬಗ್ಗೆ ಸ್ವಲ್ಪ ನೋಡೋಣ ಅಲ್ವಾ. ? .ಬೆಟ್ಟದ ನೆಲ್ಲಿಕಾಯಿ ಸಿಕ್ಕಿದರೆ, ಅದನ್ನು ಚೆನ್ನಾಗಿ ತೊಳೆದು ನೀರು ಅರಿದ ಮೇಲೆ ಚೆನ್ನಾಗಿ ಜಜ್ಜಿ ಕಲ್ಲುಪ್ಪು ಬೆರೆಸಿ ಗಾಳಿಯಾಡದಂತೆ ಬಾಟಲಿಯಲ್ಲಿ ಹಾಕಿ 8-10  ದಿನ ಇಡ್ಬೇಕು.ದಿನಕ್ಕೊಮ್ಮೆ ಅದನ್ನು ಬೆರೆಸುತ್ತಾ ಇರಲು ಮರೆಯಬಾರದು. ಅದು ಮೆತ್ತಗಾಗುವಾಗ ಚೆನ್ನಾಗಿ ಹಿಸುಕಿ ಜರಡಿಯಲ್ಲಿ ಜಾಳಿಸಿ ಬೀಜವನ್ನು ಬೇರ್ಪಡಿಸಬೇಕು.ನೆಲ್ಲಿ ಹಿಟ್ಟನ್ನು ತೆಳುವಾಗಿ ಹರಡಿ ಬಿಸಿಲಿನಲ್ಲಿ ಒಣಗಿಸಬೇಕು. ಅದು ಸ್ವಲ್ಪ ಗಟ್ಟಿಯಾದಾಗ ಸಣ್ಣ ಸಣ್ಣ ಬಿಲ್ಲೆಯಾಕಾರ ಮಾಡಿ ಅದು ಗಟ್ಟಿಯಾಗುವ ತನಕ ಒಣಗಿಸಬೇಕು. ಈ ಬಿಲ್ಲೆಗಳನ್ನು ಗಾಳಿಯಾಡದಂತೆ ಡಬ್ಬದಲ್ಲಿ ಹಾಕಿಟ್ಟರೆ ವರ್ಷಾನುಗಟ್ಟಲೆ ಹಾಳಾಗುವುದಿಲ್ಲ.ಇನ್ನು ನಮ್ಮ ದೊಡ್ಡಣ್ಣನ ವಿಷಯ(ದೊಡ್ಡ ನೆಲ್ಲಿಕಾಯಿ)…ಅದಂತೂ ಮುಷ್ಟಿ ಗಾತ್ರ…! ಅದನ್ನು ತುರಿಯುವುದೇ ಮೇಲು..ಮಾಡಲು ತುಂಬಾ ಸುಲಭ ಕೂಡಾ.ತುರಿಯನ್ನು ಉಪ್ಪು ಬೆರೆಸಿ ಸರಿಯಾಗಿ ಒಣಗಿಸಿದರೆ ಮುಗಿಯಿತು.ಡಬ್ಬದಲ್ಲಿ ಗಾಳಿ ತಾಗದಂತೆ ಇಟ್ಟರೆ ಬೇಕಾದಾಗ ಉಪಯೋಗಿಸಬಹುದು.

Nellichattu

ನಮ್ಮ ಬಾಲ್ಯದ ನೆನಪು ಈ ನೆಲ್ಲಿಕಾಯಿಯೊಂದಿಗೆ ಗಾಢವಾಗಿ ಬೆಸೆದುಕೊಂಡಿದೆ …ನಾವಾಗ ಹೈಸ್ಕೂಲಿಗೆ ಹೋಗುವ ಸಮಯ..೪-೫ ಮೈಲುಗಳನ್ನು ಗುಡ್ಡಗಳ ದಾರಿಯಲ್ಲಿ ನಡೆದೇ ಹೋಗಬೇಕಿತ್ತು..ಗುಡ್ಡ ತುಂಬಾ ನೆಲ್ಲಿ ಮರಗಳು.ಚಳಿಗಾಲ ಬಂತೆಂದರೆ ಅವುಗಳ ತುಂಬಾ ನೆಲ್ಲಿಕಾಯಿ.ಕೈಗೆ ಸಿಗುವಷ್ಟುಅದನ್ನು ಚೀಲದಲ್ಲಿ ತುಂಬಿಸಿಕೊಂಡು,ನಾವೂ ತಿಂದು,ಎಲ್ಲರಿಗೂ ಹಂಚಿ ಖುಷಿ ಪಡುವುದು…ಅದರಲ್ಲೂ ಕಹಿ ಕಹಿ ನೆಲ್ಲಿಕಾಯಿ ತಿಂದು ನೀರು ಕುಡಿದಾಗ ಬಾಯಿಯೆಲ್ಲಾ ಸಿಹಿ ಸಿಹಿ..ಆಹಾ..ಆ ಮಜಾನೇ ಬೇರೆ…ಈಗಿನ ನೆಲ್ಲಿಕಾಯಿ ಬರೇ ಹುಳಿ..ಹುಳಿ..ಮೊದಲಿನ ಮಜಾನೇ ಇಲ್ಲ…ಅಲ್ವೇ..??

 

 – ಶಂಕರಿ ಶರ್ಮ, ಪುತ್ತೂರು

8 Comments on “ನೆಲ್ಲಿಕಾಯಿ ಚಟ್ಟು…ಹೊಟ್ಟೆನೋವು ರಟ್ಟು…

  1. ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಧನ್ಯವಾದಗಳು…

  2. ನನಗೂ ಹಳೆ ನೆಲ್ಲಿ ಕಾಯಿ ನೆನಪಾಗಿ ಬಾಲ್ಯ ನೆನಪಾಯಿತು .ಲೇ ಖನ ಹಾಸ್ಯ ಮಿಶ್ರಿತ ವಾಗಿ ಚೆನ್ನಾಗಿದೆ

  3. ನಮ್ಮಲ್ಲಿ ಸದಾ ಇದು ಇರುವ ಹಾಗೆ ನೋಡಿಕೊಳ್ಳುತ್ತಿದ್ದರು ಅಪ್ಪ ಅಮ್ಮ , ನೀವು ಹೇಳಿದ ಹಾಗೆ ಅದರ ಚಟ್ನಿ, ತಂಬುಳಿ ಬೇಸಗೆಯ ಖಡ್ಡಾಯವಾಗಿತ್ತು. ಈಗಿನವರಿಗೆ ಇದರ ಹೆಸರು ಪ್ರಸಿದ್ಧಿ ಗೊತ್ತಿಲ್ಲವೆದಂದರೆ ತಪ್ಪಾಗಲಾರದು. ಚಿಕ್ಕ ಪುಟ್ಟ ಖಾಯಿಲೆಗೆಲ್ಲಾ ಆಂಗ್ರೇಜೀ ಔಶದ ನೋಡೋ ಇವರಿಗೆ ಇದರ ಮಹತ್ವ ಗೊತ್ತಿರೋದಿಲ್ಲ ಬಿಡಿ..
    ತುಂಬಾನೇ ಉಪಯುಕ್ತ ಲೇಖನ ಧನ್ಯವಾದಗಳು

  4. ಬರಹವನ್ನು ಮೆಚ್ಚಿದ ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *