ನೋವಿನಾಚೆಗೂ ನಲಿವು ಕಾಯುತ್ತಿದೆ…
ಸಾಮಾನ್ಯವಾಗಿ ಎಲ್ಲದ್ದಕ್ಕೂ ಸಮ, ಅಸಮ,ಭಿನ್ನ,ವಿಭಿನ್ನಗಳ ವಿರುದ್ಧಾರ್ಥಕಗಳ ಸಂಭವನೀಯತೆಗಳು ಇದ್ದೇ ಇರುತ್ತವೆ.ಹೀಗೆ ಎಲ್ಲಾ ಸಂಗತಿಗಳಿಗೆ ವಿರುದ್ಧಾರ್ಥಕ ಭಾವ ಇದ್ದೇ ಇರುವುದೆಂಬ ಅರಿವು ನಮ್ಮಲ್ಲಿ ಎಚ್ಚರವಾಗಿರುವಾಗಲೆಲ್ಲಾ ನಮಗೆ ಆ ಭಾವವನ್ನು ಹೆಚ್ಚು ಅನುಭವಿಸಲು ಮತ್ತು ಆ ಸಂಗತಿ ನಮಗೆ ಹೆಚ್ಚು ತಟ್ಟಲು ಕಾರಣವಾಗುತ್ತದೆ.ಗೊತ್ತೇ ಇದೆ, ಬಡತನಕ್ಕೆ ವಿರುದ್ಧಾರ್ಥಕವಾಗಿ ಶ್ರೀಮಂತಿಕೆ ನಿಂತಿರುವುದು. ಹಾಗಾಗಿ ಬಡತನ ಆವರಿಸಿಕೊಂಡಿರುವಾಗಲೆಲ್ಲಾ ಶ್ರೀಮಂತಿಕೆಯ ಪದ ದೂರದಲ್ಲೆಲ್ಲೋ ಅಂಚಿನಲ್ಲಿ ಕಂಡೂ ಕಾಣದಂತೆ ಮಿನುಗುವುದು ಗೋಚರಿಸುವ ಕಾರಣದಿಂದಲೇ ಬಡತನ ನಮಗೆ ಸಹ್ಯವಾಗುವುದು,ಮತ್ತು ಅಷ್ಟೊಂದು ಯಾತನಾಮಯ ದಿನಗಳಲ್ಲೂ ಭರವಸೆಯ ಮಿಂಚು ಬೆಳಗುತ್ತಾ ಬರುವುದು.ಅಂತೆಯೇ ಅದಕ್ಕೆ ಸಮೀಪವೆನ್ನಿಸುವ ಸುಖ ,ದು:ಖ,ನೋವು,ನಲಿವು ಎಲ್ಲವೂ.ಆದರೆ ಅರ್ಥೈಸಲಾಗದ ಸತ್ಯ ಸಂಗತಿಯೆಂದರೆ ನಾವುಗಳ್ಯಾರೂ ಪೂರ್ಣ ತೃಪ್ತಿಗಳಲ್ಲ.ತೃಪ್ತಿಯ ವಿಚಾರಕ್ಕೆ ಬಂದಾಗ ಮಾತ್ರ ಎಲ್ಲರೂ ಅತೃಪ್ತರೇ ಎಂಬುದು ಮಾತ್ರ ಒಪ್ಪತಕ್ಕ ಮಾತೇ ಸರಿ.ಪರಮಾತ್ಮನ ಯಾವ ವರದಿಂದಲೂ ಕೂಡ ಮನುಷ್ಯನನ್ನ ಸುಖಿಯಾಗಿಡಲು ಸಾಧ್ಯವಿಲ್ಲವೇನೋ..
ಇರುವುದರೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ. ಹೌದು! ಬದುಕೆಂದರೆ ಅಷ್ಟೇ ತಾನೇ.ಕಾಯುವಿಕೆಯ ಆಶಾವಾದದ ಭಾವವೊಂದೇ ನಮ್ಮನ್ನು ಬದುಕಿಸಬಲ್ಲದು ಎಂಬುದು ಮಾತ್ರ ಸರ್ವಕಾಲಕ್ಕೂ ಸತ್ಯ. ಆದರೆ ಈ ತುಡಿಯುವಿಕೆ ಒಂದು ಪ್ರಯತ್ನವಾಗಿರಬೇಕೇ ಹೊರತು ಅದು ಕೊರಗುವಿಕೆಯಾಗಬಾರದೆಂಬ ತಿಳಿವು ಇಲ್ಲಿ ಅಷ್ಟೇ ಮುಖ್ಯ.ತಮ್ಮ ನೋವಿನಾಚೆಗೂ ಛಲದಿಂದ ಬದುಕು ಕಟ್ಟಿಕೊಂಡು,ನಲಿವನ್ನು ಕಂಡುಕೊಂಡ ಅದೆಷ್ಟೋ ಸಂತೃಪ್ತ ಜೀವಗಳು ನಮ್ಮ ಮುಂದೆ ಆದರ್ಶ ಉದಾಹರಣೆಯಾಗಿ ನಿಂತಿವೆ. ಅರುಣಿಮಾ ಕಾಲಿಲ್ಲದೆಯೇ ಶಿಖರದ ತುತ್ತ ತುದಿಯವರೆಗೂ ಹೆಜ್ಜೆ ಹಾಕಿಬಿಟ್ಟಳು.ಸುಧಾ ಚಂದ್ರನ್ ಕೃತಕ ಕಾಲುಗಳ ನಡುವೆಯೂ ಸಹಜವಾಗಿ ನರ್ತಿಸಿ ನಿಬ್ಬೆರಗಾಗಿಸಿದಳು.ಅಶ್ವಿನಿ ಅಂಗಡಿ ಕಣ್ಣಿಲ್ಲದೆಯೇ ದೇಶದಾದ್ಯಂತ ಸಂಚರಿಸಿ ಸಂಚಲನ ಮೂಡಿಸಿದಳು.ತುಡಿತವಿದ್ದರೆ ಬದುಕಲು ಎಷ್ಟೊಂದು ಕಾರಣಗಳು ಎಂಬುದಕ್ಕೆ ಇನ್ನೆಷ್ಟು ಸಾಕ್ಷಿ ಬೇಕು?.
ಸಾಮಾನ್ಯರಾಗಿದ್ದುಕೊಂಡೇ ಪರಿಸ್ಥಿತಿಯ ವಿರುದ್ಧ ಈಜಿ ಹೇಗೆ ನಮ್ಮೆಲ್ಲರ ನಮ್ಮೆಲ್ಲರ ಮುಂದೆ ಅಸಾಮಾನ್ಯರಾಗಿ ನಿಂತು ಬಿಡುತ್ತಾರೆ ಎಂಬುದನ್ನ ಸಕರಾತ್ಮಕವಾಗಿ ಯೋಚಿಸುತ್ತಾ ಹೋದರೆ ಬದುಕಲು ಎಷ್ಟೊಂದು ಕಾರಣಗಳಿವೆ?.ಕಟ್ಟ ಕಡೆಯ ಹಂತದವರೆಗೂ ಬದುಕನ್ನ ಎಷ್ಟು ಪೂರ್ಣವಾಗಿ ಸವಿಯಬಹುದು ಎಂಬುದಕ್ಕೆ ನೂರೆಂಟು ಕಾರಣಗಳಿವೆ.ಮೈಗೆ ಧರಿಸುವ ಉಡುಪೊಂದು ಹರಿದುಕೊಂಡಾಗ,ತೇಪೆ ಹಾಕಿ ಸ್ವಲ್ಪ ದಿನ ಸುಧಾರಿಸಬಹುದು,ಅದೂ ಸಾಧ್ಯವಾಗದಾಗ ಮನೆ ಒರೆಸಲು, ಅದೂ ಸಾಧ್ಯವಾಗದಾಗ ಕಾಲೊರೆಸಲು,ತದನಂತರ ಬತ್ತಿಯಾಗಿ ಹೊಸೆದುಕೊಂಡು ದೀಪ ಬೆಳಗಿ ಜಗತ್ತನ್ನೇ ಬೆಳಗಿಸಿದ ಸುಖದಲ್ಲಿ ತಾನೂ ತೃಪ್ತಿಯಿಂದ ಕಳೆದುಹೋಗಬಹುದೆಂಬ ನೀತಿ ಕತೆಯೊಂದು ಬದುಕಿನ ಸಾರವನ್ನು ತೆರೆದಿಟ್ಟಿದೆ.ನಮ್ಮ ಅಂತರ್ಯದೊಳಗೆ ಅಂತಹ ಸಾರವನ್ನು ಇಳಿಸಿಬಿಟ್ಟರೆ ಸಾಕು.ಅಸಾಧ್ಯವಾದುದೆಲ್ಲವೂ ಸಾಧ್ಯವಾಗಿ ನಾವೂ ಬೆಳಕಿನ ಒಂದು ಭಾಗವಾಗಿ ಹೋಗುವುದು ನಮ್ಮರಿವಿಗೂ ನಿಲುಕದ ಅಚ್ಚರಿಯ ಸಂಗತಿಯೇ ಸರಿ. ಅದಕ್ಕೆಲ್ಲವೂ ಮೂಲ ಕಾರಣ ನಮ್ಮ ಮನಸೆ. ನಕರಾತ್ಮಕವಾದುವುಗಳಿಗೆಲ್ಲಾ ವಿರುದ್ಧ ಪದ ಹಚ್ಚಿ ಅದನ್ನು ಸಕರಾತ್ಮಕ ಪದ ಮಾಡಿಕೊಂಡಾಗಲಷ್ಟೇ ನಾವು ಮತ್ತು ನಮ್ಮ ಸುತ್ತುಮುತ್ತಲಿನ ಬದುಕೆಲ್ಲವೂ ಧನಾತ್ಮಕವಾಗಿ ರೂಪುಗೊಂಡು ನಿಂತುಬಿಡುವುದು ಮಾತ್ರ ಎಂದಿಗೂ ಅಲ್ಲಗಳೆಯಲಾಗದ ಸತ್ಯ ಸಂಗತಿಯಷ್ಟೆ,
ಅಳುವ ಕಡಲೊಳು ತೇಲಿ ಬರುತ್ತಲಿದೆ ನಗೆಯ ಹಾಯಿ ದೋಣಿ .. ಅಂತ ಕವಿ ಎಷ್ಟು ನವಿರಾಗಿ ಅಳುವಿನೊಳಗೆ ತೇಲಿ ಬರುವ ನಗುವಿನ ಅಲೆಯನ್ನ ಗುರುತಿಸಿಕೊಂಡಿದ್ದಾರೆ.ಬದುಕಿನ ದೊಡ್ಡ ದೊಡ್ಡ ದುರಂತಗಳಲ್ಲಿಬದುಕಿನ ಸಣ್ಣ ಪುಟ್ಟ ಖುಷಿಯ ಹೂವುಗಳು ಅರಳಿಕೊಂಡಿರುತ್ತವೆ.ಅವುಗಳನ್ನು ಆಯ್ದು ಮಾಲೆ ಕಟ್ಟುವ ವ್ಯವಧಾನವಿದ್ದರಷ್ಟೇ ಅದು ಮುಂದೊಮ್ಮೆ ಸುಗಂಧಭರಿತ ಪುಷ್ಪ ಮಾಲೆಯಾಗಲು ಸಾಧ್ಯವಿದೆ.ಇದರ ಆರ್ಥ ಸ್ಪಷ್ಟ.ನೋವಿನ ಮುಂದೆ ನಲಿವನ್ನ ಸಮದೂಗಿಸಿಕೊಳ್ಳುವುದು ಕಷ್ಟ.ಹಾಗಾದಾಗ ಪುಟ್ಟ ಪುಟ್ಟ ನಲಿವಿನ ಎಳೆಗಳನ್ನು ಉಡಿಯೊಳಗೆ ಜೋಪಾನವಾಗಿರಿಸಿಕೊಂಡಾಗಲೇ ಸ್ಪಷ್ಟ ಆಕಾರ ಗಿಟ್ಟಿಸಿಕೊಳ್ಳಲು ಸಾಧ್ಯವಾಗಬಹುದು.ನಲಿವು ಸಣ್ಣದಾದರೂ ಅದನ್ನು ಆವಾಹಿಸಿಕೊಳ್ಳುವ ಕಲೆಯನ್ನು ನಾವು ಕರಗತ ಮಾಡಿಕೊಂಡರೆ,ಹೆಬ್ಬಂಡೆಯಂತಹ ನೋವೂ ಕೂಡ ಕಿರಿದಾಗಿ ಮಸುಕು ಮಸುಕಾಗಿಬಿಡುತ್ತದೆ.ನಲಿವಿಗೆ ಅಷ್ಟೊಂದು ಬೆಳಗುವ ಪ್ರಭೆಯಿದೆ.ಅದು ಅಮೂರ್ತವಾಗಿ ನಮ್ಮೊಳಗೇ ಅಡಗಿಕೊಂಡಿದೆಯಷ್ಟೆ.ಪ್ರತೀ ರಾತ್ರೆಗೂ ಒಂದು ಬೆಳಗಿದೆ.ಪ್ರತೀ ದಿನಕ್ಕೂ ಮತ್ತೊಂದು ನಾಳೆಗಳಿವೆ.ಇವತ್ತು ಕನಸು ಕಾಣೋಣ.ನಾಳೆ ಅದನ್ನು ನನಸಾಗಿಸೋಣ.ಅಸುಖಿಯಾಗದವ ಕವಿಯಾಗಲಾರ ಅಂತೆ.ಕವಿತೆಯ ಧ್ಯಾನದಲ್ಲಿರೋಣ.ಕವಿತೆ ಬದುಕು ಬೆಳಗಿಸಬಲ್ಲುದು.
.
-ಸ್ಮಿತಾ ಅಮೃತರಾಜ್.ಸಂಪಾಜೆ
ನಿಜ ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ, ಹಾಗಿರುವಾಗ ನೋವು ಯಾಕೆ ಶಾಶ್ವತವೆಂದೆಣಿಸಬೇಕು ನಮ್ಮ ಬದುಕು ನಮ್ಮದು…..
ಚೆನ್ನಾಗಿದೆ ಬರಹ ಧನ್ಯವಾದಗಳು