“ಯೇಗ್ದಾಗೆಲ್ಲಾ ಐತೆ ” – ಪುಸ್ತಕ ಪರಿಚಯ

Share Button

Nagesh Mysore

ಕನ್ನಡದಲ್ಲಿ ಪುಸ್ತಕಗಳು ಒಂದು ಮುದ್ರಣ ಕಾಣುವುದೆ ಕಷ್ಟ. ಹೆಚ್ಚು ಪುಸ್ತಕಗಳು ಅಚ್ಚಿನ ಮನೆಯ ಮುಖವನ್ನೆ ಕಾಣುವುದಿಲ್ಲ. ಅಂತದ್ದರಲ್ಲಿ ಪುಸ್ತಕವೊಂದು ಹತ್ತು ಬಾರಿಗೂ ಮೀರಿ ಮುದ್ರಣ ಭಾಗ್ಯ ಕಂಡಿದೆಯೆಂದರೆ ? ಖಂಡಿತ ಅದರಲ್ಲೇನೊ ವಿಶೇಷ ಇರಲೇಬೇಕು. ಹಾಗೆಂದುಕೊಂಡೆ ಬೆಂಗಳೂರಿಗೆ ಭೇಟಿಯಿತ್ತಾಗ ಕೊಂಡು ತಂದ ಪುಸ್ತಕ – ‘ಯೇಗ್ದಾಗೆಲ್ಲಾ ಐತೆ’. 25 ಸಾವಿರಕ್ಕೂ ಅಧಿಕ ಪ್ರತಿಗಳು ಅಚ್ಚಾಗಿದ್ದೇ ಅಲ್ಲದೆ ಇತರ ನಾಲ್ಕು ಭಾಷೆಗಳಿಗೂ ಅನುವಾದವಾಗಿದ್ದು, ನಾಟಕದ ರೂಪದಲ್ಲು ಜನಮನ ತಲುಪಿದ್ದು – ಇದೆಲ್ಲಾ ನೋಡಿದರೆ ಚಾಪೆಯಡಿ ನುಸುಳುವ ನೀರಂತೆ ಹರಿದು ಜನಪ್ರಿಯವಾಗುವುದು ಈ ಪುಸ್ತಕದ ‘ಯೇಗ್ದಾಗೇ‘ ಇರುವಂತೆ ಕಾಣುತ್ತಿದೆ.

ಒಂಭತ್ತಿಂಚಿನ ಪೀಜಾಗು 300 ರಿಂದ 600 ರೂಪಾಯಿ ಪೀಕುವ ಈ ಕಾಲದಲ್ಲಿ, 140 ಪುಟಗಳ ಈ ಪುಸ್ತಕ, ಎಷ್ಟೋ ಕಡೆ ತೆರುವ ಕಾಫಿಯ ಕಾಸಿಗಿಂತಲು ಅಗ್ಗವಾಗಿ 60 ರೂಪಾಯಿಗೆ ಸಿಕ್ಕಿತ್ತು ! ರೆಸ್ಟೊರೆಂಟಿನಲ್ಲಿ ಹಿಂದೆಮುಂದೆ ನೋಡದೆ ಸಾವಿರಾರು ಸುರಿವ ನಮಗೆ – ವರ್ಷಕ್ಕೊಂದು ಸಾರಿಯಾದರು ಕನ್ನಡ ಪುಸ್ತಕ ಕೊಳ್ಳುವುದು ‘ ಯೇಗ್ದಾಗೆ ಬರ್ದಿಲ್ಲ’ ಅಂತ ಕಾಣುತ್ತೆ. ಆದರು ಪ್ಲೀಸ್ – ಓದಲಿ, ಬಿಡಲಿ ಛಾನ್ಸ್ ಸಿಕ್ಕಿದ್ರೆ ಈ ಪುಸ್ತಕ ಮಾತ್ರ ಕೊಂಡುಕೊಂಡು ಬಿಡಿ. ಯಾಕೇಂದ್ರೆ ಈ ಪುಸ್ತಕ ಮಾರಿ ಬಂದ ಆದಾಯವೆಲ್ಲ ನೇರವಾಗಿ ಹೋಗೋದು ಬೆಳಗೆರೆಯ ಶ್ರೀ ಶಾರದಾಮಂದಿರ ವಿದ್ಯಾಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳಿಗೆ. ಓದದೇ ಇದ್ದರು ನಿಮ್ಮಿಂದ ಪುಕ್ಕಟೆ ಸಮಾಜ ಸೇವೆ ಮಾಡಿಸುತ್ತೆ ಈ ಪುಸ್ತಕ – ಅದೂ ತೀರಾ ಅಗ್ಗವಾಗಿ!

ಈ ಪುಸ್ತಕ ಮೂಲತಃ ಶ್ರೀ ಸಾಮಾನ್ಯನಂತಿದ್ದೂ ಅದ್ಭುತ ಯೋಗಿಯ ಬಾಳು ಬದುಕಿದ ಶ್ರೀ ಮುಕುಂದೂರು ಸ್ವಾಮಿಗಳ ‘ಪವಾಡ’ ವನ್ನು ಕುರಿತದ್ದು. ಪವಾಡವೆಂದರೆ ಇದು ಯಾವುದೊ ‘ಛೂ ಮಂತ್ರಕಾಳಿ’ಯ ತರದ ಬೂಟಾಟಿಕೆಯ ಪುಸ್ತಕವೆಂದು ಮೂಗು ಮುರಿಯಬೇಡಿ ತಾಳಿ… ಈ ಸ್ವಾಮಿಗಳನ್ನು ಹತ್ತಿರದಿಂದ ಕಂಡು ಅಲ್ಲೇನಾದರು ಢೋಂಗಿತನವಿತ್ತೆ ಎಂದು ಸ್ವತಃ ತಾವೆ ಅಳೆದು ನೋಡಲೆತ್ನಿಸಿದ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳು ವಿಜ್ಞಾನದ ನಿಲುಕಿಗೆ ಸಿಗದ ನೂರಾರು ಘಟನೆ, ಅನುಭವಗಳಿಂದ ವಿಸ್ಮಿತರಾಗಿ ನೆನಪಿನ ಕೋಶದಿಂದ ಸಿಕ್ಕಷ್ಟನ್ನು ಹೆಕ್ಕಿ ಕೊನೆಗೆ ಈ ಪುಸ್ತಕರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದು ವೇಳೆ ಬರೆಯುವ ಉದ್ದೇಶದಿಂದಲೆ ಅಭ್ಯಸಿಸಿ ಬರೆದಿದ್ದರೆ ಈ ಪುಸ್ತಕ ಇನ್ನೂ ಹೇಗಿರುತ್ತಿತ್ತೊ ?!

Yegdagellaaite kannada book

ತಾವು ಪವಾಡ ಪುರುಷರೆಂಬಂತೆ ಕರೆಸಿಕೊಳ್ಳಲೆ ಹಿಂಜರಿಯುತ್ತಿದ್ದ ಈ ಮುಕುಂದೂರು ಸ್ವಾಮಿಗಳು ಅದಕ್ಕಾಗಿಯೆ ಹಿನ್ನಲೆಯ ಅಲೆಮಾರಿ ಬೈರಾಗಿಯ ಬದುಕು ಸಾಗಿಸಿದ್ದಿರಬೇಕು. ಯಾವುದೇ ಶಾಸ್ತ್ರಾಧ್ಯಯನ, ವ್ಯಾಸಂಗದ ಹಂಗಿಲ್ಲದೆ ತಮ್ಮದೇ ಆದ ಆಡುಭಾಷೆಯಲ್ಲಿ ತೆಳುಹಾಸ್ಯದ ಲಹರಿ ಬೆರೆಸಿ ಗಹನವಾದ ವಿಷಯಗಳನ್ನು ಸರಳವಾಗಿ ಹೇಳುತ್ತಿದ್ದ ರೀತಿಯೇ ಅದ್ಭುತ.. ಅದರ ವೈವಿಧ್ಯಮಯ ತುಣುಕುಗಳನ್ನು ಪುಸ್ತಕದ ಪ್ರತೀ ಪುಟದಲ್ಲೂ ಕಾಣಬಹುದು. ಪ್ರತಿಯೊಂದನ್ನು ಹೊರ ಆವರಣದ ಹಾಸ್ಯದ ಹೊದಿಕೆ ಸರಿಸಿ ಒಳಗಿಣುಕಿದರೆ ಆಧ್ಯಾತ್ಮ, ವೇದಾಂತದ ಗಹನ ತತ್ವಗಳನ್ನೆಲ್ಲ ಸುಲಭದಲ್ಲಿ ಸಿಪ್ಪೆ ಸುಳಿದಿಟ್ಟ ಬಾಳೆಯ ಹಣ್ಣಿನಂತೆ ಕೈಗಿಟ್ಟುಬಿಡುತ್ತದೆ – ತೀರಾ ಸಾಮಾನ್ಯನ ತಲೆಯೊಳಗು ನಾಟುವಂತೆ, ಅದೂ ತೀರಾ ಲೌಕಿಕದ ಸಣ್ಣ ಪುಟ್ಟ ಉದಾಹರಣೆಯಲ್ಲಿ. ಆ ಗಹನತೆಯಲ್ಲಿರುವ ಸರಳತೆಯನ್ನು ಮಾತಿನಲ್ಲಿ ವಿವರಿಸುವ ಬದಲು ಕೆಳಗಿರುವ ಕೆಲವು ಉದಾಹರಣೆಗಳ ಮೂಲಕ ನೋಡಿ – ನಿಮಗೇ ತಿಳಿಯುತ್ತದೆ !

*********

1. ದೇವರಿಗೆ ಪೂಜಿಸಿ ಎಡೆಯಿಡುವ ಕುರಿತು ಸ್ವಾಮಿಗಳು ಆಡುವ ಮಾತು : ” ಅಲ್ಲಾ ಯೆಡೆ ಅಂದ್ರೆ ಜಾಗ…ಜಾಗ ತಂದಿಕ್ಕೋದೆಂಗೆ? ಯೆಡೆ ತಂದಿಕ್ಕು ಅಂತಾರೆ (ನಕ್ಕು) ಅವ್ನೆಂದು ಉಪಾಸ ಇದ್ದ. ಅದೂ ಐತೆ ಅವನಿಗೆ ಯೆಡೆ ಮಾಡು ಅಂದ್ರೆ ಅವನಿಗೆ ಜಾಗ ಮಾಡು ನನ್ನೊಳಗೆ ಅಂಬೋ ಮಾತು….. ‘

2. ಬಯಲಾಟದ ನೆಪದಲ್ಲಿ ಬೋಧಿಸಿದ ಆಧ್ಯಾತ್ಮವಿದು. ಜೂಜಿನಲ್ಲಿ ಗೆದ್ದು ದ್ರೌಪದಿಯ ವಸ್ತ್ರಾಪಹರಣ ಮಾಡಲು ನಿಂತ ದುಶ್ಯಾಸನನೊಡನೆ ನಡೆವ ಸಂವಾದದ ತುಣುಕು: (ಪುಸ್ತಕ ಓದುವಾಗ ಗಮನಿಸಿ : ಪಂಚಪಾಂಡವರು-ಪಂಚೆಂದ್ರಿಯಗಳು, ದ್ರೌಪತಿ – ಪ್ರಕೃತಿ, ದುಶ್ಯಾಸನ – ದುಸ್ವಾಸ)

‘…. (ಪಂಚೇಂದ್ರಿಯಗಳನ್ನು ತೋರಿಸಿ) ಪಂಚ ಪಾಂಡವರು ಸೋತ ಮೇಲೆ ಆ ದ್ರೌಪತಿ ಅನ್ನೋ ಗ್ನಾನಾಂಬಿಕೆ ಆಗೋದು – ಪ್ರಕೃತಿ ಅನ್ನೋ ಆವರ್ಣ ಅಳಿದು ಸುದ್ಧ ಗ್ನಾನಾಂಬಿಕೆ ಆಗೋದು……’ ‘ಸುದ್ದ ಗ್ನಾನಾಂಬಿಕೆ ಆದ ಮ್ಯಾಲೆ ಪ್ರಕೃತಿ ಇದ್ದರೂ ಇರಬೌದು , ಇಲ್ಲದಿರಲೂ ಬಹುದು. ಅದು ಸುದ್ಧ ಅಂದ್ರೆ ಸುದ್ಧ. ಅದಕ್ಕೆ ದುಸ್ವಾಸ ಅವಳ ಸೀರೆ ಸೆಳೆದ. ಅದು ಕೊನೆ ಮೊದಲು ಇಲ್ಲದ್ದು. ಅದನ್ನ ಸೆಳೆಯಾಕೆ ಆಗಲೇ ಇಲ್ಲ ನೋಡು.’

3. ಬೆಟ್ಟ ಹತ್ತುವಾಗ :

ಕೃಷ್ಣಶಾಸ್ತ್ರಿಗಳು: ‘ಇಲ್ಲಿಂದ ಎಲ್ಲಿಯೂ ನಿಲ್ಲದೆ ಒಂದೇ ಸಮನಾಗಿ ಹತ್ತಿ, ಈ ಬೆಟ್ಟದ ನೆತ್ತಿಯ ಮೇಲಿರುವ ಗುಹೆಯೊಳಗೆ ಹೋಗಿ, ಅಲ್ಲಿಯ ಗಂಟೆಯನ್ನು ಬಾರಿಸಬೇಕು. ಯಾರು ಗೆಲ್ಲುತ್ತಾರೋ ನೋಡೋಣ..’

ಸ್ವಾಮಿಗಳು:ಹೂಂ! ಒಳ್ಳೆಯ ಪಂದ್ಯ ಕಣೋ ( ತಮ್ಮ ಎದೆಯನ್ನು ತೋರಿಸುತ್ತ ) ಈ ಗವಿಯೊಳಗೆ ಹೊಕ್ಕು ನೋಡ್ ಬೇಕು ಅಂದ್ರೆ ನಾಮುಂದು ತಾಮುಂದು ಅಂತ ನುಗ್ಗಬೇಕು’

4. ಶರೀರಕ್ಕಾದ ವ್ರಣವೊಂದರ ಬಗೆ: ‘ಬಂದವನು ಹೋಗ್ತಾನೇ, ಇರುವವನು ಹೋಗೋಲ್ಲ’

5. ರಾಮಾಣ್ಯ ಅಂದ್ರೆ ಸಾಮಾನ್ಯ ಅಲ್ಲಾ..!

‘ ….ದಸರತ ಅಂತ ಒಬ್ಬ. ಅಂಗಂದ್ರೇನು ? ಕರ್ಮೇಂದ್ರಿಯಗಳು ಐದು. ಜ್ಞಾನೇಂದ್ರಿಯಗಳು ಐದು. ಇವು ಅತ್ತು ಸೇರಿ ರಥ ಮಾಡಿಕೊಂಡು ಹತ್ತಿ ಸವಾರಿ ಮಾಡಿದ ಅವನು. ಅಂದ್ರೆ ಇಂದ್ರಿಯಗಳನ್ನು ಸ್ವಾಧೀನ ಮಾಡ್ಕೊಂಡವನು ಯಾರೇ ಆಗಿರಲಿ ಅವನು ದಸರತ..’

‘ರಾವಣ ಅತ್ತು ತಲೆ, ಅದೇ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು. ದಸರತ ಅವನ್ನೇ ರತ ಊಡಿಕೊಂಡು ಸವಾರಿ ಮಾಡ್ದ. ಅಂದ್ರೆ ಅವನ್ನ ತಾನೇಳ್ದಂಗೆ ಕೇಳಾಂಗೆ ಸ್ವಾಧೀನ ಮಾಡ್ಕೊಂಡಿದ್ದ. ಅದೇ ರಾವಣಾಸುರ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು ತಲೆ ತುಂಬ ತುಂಬಿಕೊಂಡು ಅವನ್ನೇ ಒತ್ಕೊಂಡು ಓಡಾಡ್ತಿದ್ದ. ಅವು ಅವನ್ತಲೇ ಮೇಲೆ ಕುಂತು ಅವನ್ನ ಆಟ ಆಡಿಸ್ತಿದ್ವು. ಅಂದ್ರೆ ಇಂದ್ರಿಯಗಳಿಗೆ ದಾಸನಾಗಿದ್ದ. ಇವನಿಗೆ ಇಪ್ಪತ್ತು ಕೈಗಳು. ನಿಜ-ನಿಜ ಇಪ್ಪತ್ತು ಕೈಗಳು ಸಪ್ತಧಾತುಗಳು, ಸಪ್ತ ವ್ಯಸನಗಳು, ಅರಿಷಡ್ವರ್ಗಗಳು. ಅಲ್ಲಿಗೆ ಇಪ್ಪತ್ತು ಕೈಗಳು ಆದವಲ್ಲಾ. ಅವುಗಳದೇ ಕಾರುಬಾರು..’

‘ ಅವನು ಸೀತಮ್ಮನನ್ನು ಬಯಸಿದ. ಅಂದರೆ ಜ್ಞಾನಾಂಬಿಕೆಯನ್ನು. ಅಲ್ಲ, ಸಪ್ತ ಧಾತುಗಳು, ಸಪ್ತ ವ್ಯಸನಗಳು, ಅರಿಷಡ್ವರ್ಗಗಳನ್ನು ಒತ್ಕೊಂಡು ಮೆರೆಯೋರಿಗೆ ಜ್ಞಾನಾಂಬಿಕೆ ವಶವಾದಾಳೆ ? ಅವಳು ಅಶೋಕವನದಾಗಿದ್ಲು. ಅವಳಿಗೆ ಶೋಕ ಎಲ್ಲೀದು ?’

*********

ನೋಡಿದಿರಾ…? ಇಡೀ ಪುಸ್ತಕದ ಪ್ರತಿ ಪುಟದಲ್ಲೂ ಬರೀ ಇಂತಾ ವಿವರಣೆಯೇ ! ಪಂಡಿತರಿಂದ ಹಿಡಿದು ಪಾಮರರವರೆಗೂ ರುಚಿಸುವಂತ ಅಚ್ಚುಕಟ್ಟಾದ ರಸಗವಳ – ವಿಸ್ಡಮ್ ಸರ್ವ್ಡ್ ವಿತ್ ಅ ಟಚ್ ಆಫ್ ಹ್ಯೂಮರ್ ! ಅದೂ ಕೈ ಕಚ್ಚದ ಅಗ್ಗದ ದರದಲ್ಲಿ..!
ಹೇಳೋಕೆ ಹೊರಟರೆ ಇನ್ನು ಎಷ್ಟೋ ಉದಾಹರಣೆ ಸೇರಿಸಬಹುದು – ಆದರೆ ಪುಸ್ತಕ ಓದೋ ಸ್ವಾರಸ್ಯ ಕೆಡದೆ ಇರೋಕೆ ಇಲ್ಲಿಗೆ ಸಾಕು ಮಾಡೋಣ..

ನಿಜ ಹೇಳೋದಾದ್ರೆ ನಾವು ಕೊಡೊ ಅರವತ್ತೆಪ್ಪತ್ತು ರೂಪಾಯಿಯ ಕಿಮ್ಮತ್ತು ಏನಕ್ಕೂ ಇಲ್ಲ. ಈ ಪರಿಚಯ ಲೇಖನ ಓದಿಯೆ ಮುಂಗಡವಾಗಿ ಪೈಸಾ ವಸೂಲಾದಂತೆ. ಇನ್ನು ಪುಸ್ತಕದಲ್ಲಿ ಓದೋ ಮಿಕ್ಕಿದ್ದೆಲ್ಲ ಪೂರಾ ಬೋನಸ್..! ಇನೇನು ಯೋಚನೆ ? ವೀಕೆಂಡಲ್ಲಿ ಸ್ವಪ್ನಲೋ, ಇಲ್ಲಾ ಯಾವ್ದಾದ್ರು ಆನ್ಲೈನ್ ಸ್ಟೋರಲ್ಲೊ ಹುಡುಕಿ ತಂದು ಓದಿಬಿಡಿ.. ಈ ಪುಸ್ತಕ ಓದೋ ಭಾಗ್ಯ ‘ಎಲ್ಲಾರ ಯೇಗ್ದಾಗೂ ಐತೆ’ ಅನ್ಸಿಬಿಡೋಣ…!

 

– ನಾಗೇಶ ಮೈಸೂರು

 

1 Response

  1. Srinath says:

    Well said.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: