ನಡೆದು ನೋಡಾ ವಾಡೆ ಮಲ್ಲೇಶ್ವರ ಬೆಟ್ಟದ ಸೊಬಗ
ಮೈಸೂರಿನ ವಾರ್ತಾಭವನದ ಬಳಿಯಿಂದ ನಾವು 22 ಮಂದಿ ಸಣ್ಣ ಬಸ್ಸಿನಲ್ಲಿ 28-02-2016 ರಂದು ಬೆಳಗ್ಗೆ 6.30 ಗಂಟೆಗೆ ವಾಡೆ ಮಲ್ಲೇಶ್ವರದ ಕಡೆಗೆ ಹೊರಟೆವು. ಮೈಸೂರು ಬೆಂಗಳೂರು ದಾರಿಯಲ್ಲಿ ಸಾಗಿ ಚನ್ನಪಟ್ಟಣದ ಬಳಿ ಬಲಕ್ಕೆ ಹೊರಳಿ ಹಲಗೂರು ಮಾರ್ಗವಾಗಿ ಮುಂದುವರಿದು ಕೋಡಂಬಳ್ಳಿ ಕೆರೆ ಏರಿ ಮೇಲೆ ಸಾಗಿದೆವು. ಕೋಡಂಬಳ್ಳಿ ಕೆರೆ ನೀರು ತುಂಬಿ ಭರ್ತಿಯಾಗಿದೆ. ಈ ವರ್ಷ ಶಿಂಷಾ ನದಿಯಿಂದ ಈ ಕೆರೆಗೆ ನೀರು ಹರಿಸಿದ್ದಾರೆ. ಕೆರೆ ಏರಿಯ ರಸ್ತೆಗೆ ತಡೆಗೋಡೆ ಇಲ್ಲ. ರಸ್ತೆಯೂ ಕಿರಿದಾಗಿ ಅಪಾಕಾರಿಯಾಗಿದೆ. ತುಸು ಎಚ್ಚರ ತಪ್ಪಿದರೂ ವಾಹನ ಕೆರೆಗೆ ಆಹುತಿಯಾಗುವ ಪರಿಸ್ಥಿತಿ. ಕೋಡಂಬಳ್ಳಿ ದಾಟಿ ಮುಂದೆ ಬ್ಯಾಡರಹಳ್ಳಿ ತಲಪಿ ವಾಡೆ ಮಲ್ಲೇಶ್ವರ ಬೆಟ್ಟದ ಬುಡಕ್ಕೆ ತಲಪಿದೆವು. ಅಲ್ಲಿರುವ ಕೆರೆಯಲ್ಲಿರುವ ತಾವರೆ ಹೂ ನಮ್ಮನ್ನು ಸ್ವಾಗತಿಸಿತು.
ಅಲ್ಲಿ ಇಡ್ಲಿ, ಬರ್ಫಿ ಸೇವನೆಯಾಗಿ ನಮ್ಮ ನಮ್ಮ ಪರಿಚಯ ಮಾಡಿಕೊಂಡೆವು. ಸ್ಥಳೀಯರಾದ ರಾಜ ನಮಗೆ ದಾರಿ ತೋರಲು ಸಜ್ಜಾಗಿ ಬಂದಿದ್ದರು. ಬೆಳಗ್ಗೆ 9.30 ಗೆ ನಾವು ಅವರ ಹಿಂದೆ ವಾಡೆ ಮಲ್ಲೇಶ್ವರ ಬೆಟ್ಟ ಏರಲು ನಡೆದೆವು. ಅಂಥ ದೊಡ್ಡ ಬೆಟ್ಟವಲ್ಲ. ಬೇಗ ಹೋಗಿ ಬಂದು ಪಕ್ಕದ ಸಿದ್ದೇಶ್ವರ ಬೆಟ್ಟ ಏರಬಹುದು ಎಂದು ಸಂಘಟಕರು ಹೇಳಿದ್ದರು. ಕುರುಚಲು ಸಸ್ಯಗಳಿರುವ ಕಾಡು ದಾರಿ. ರಾಜ ಮುಂದೆ ಹೋಗಿ ಹುಲ್ಲು ಸವರಿ ನಮಗೆ ದಾರಿ ಸುಗಮಗೊಳಿಸಿದರು. ಪ್ರಾಣಿಗಳು ಓಡಾಡುವ ದಾರಿ ಆನೆ ಅಲ್ಲೆಲ್ಲ ಸಾಕಷ್ಟು ಇವೆಯಂತೆ. ಅದರ ಕುರುಹಾಗಿ ನಮಗೆ ಅಲ್ಲಲ್ಲಿ ಅದರ ಲದ್ದಿ ದರ್ಶನವಾಯಿತು! ಹಾಗೂ ಆನೆ ನಾಡಿಗೆ ಬರದಂತೆ ಬೆಟ್ಟದ ಸುತ್ತ ಅಗಳು ತೋಡಿದ್ದರು. ಅದೇನೂ ಅಂತ ಆಳವಿರಲಿಲ್ಲ. ಆ ಕಣಿವೆ ದಾಟುವುದು ಆನೆಗೇನೂ ಕಷ್ಟವಲ್ಲ.
ದಾರಿಯಲ್ಲಿ ದೊಡ್ಡಬಂಡೆಗಳು, ಕಲ್ಲುಬಂಡೆಗಳು ಎದುರಾಗುತ್ತದೆ. ಅಲ್ಲೊಂದು ಇಲ್ಲೊಂದು ಮರ ಬಿಟ್ಟರೆ, ಒಣಗಿದ ಹುಲ್ಲು ಇರುವ ಬೋಳು ಸ್ಥಳವೆಂದೇ ಹೇಳಬಹುದು. ಬಿಸಿಲಿಗೆ ಬೆವರು ಧಾರಾಕಾರವಾಗಿ ಇಳಿಯಿತು. ಕೊಂಡೋದ ನೀರು ಬಲುಬೇಗ ಖಾಲಿಯಾಯಿತು. ಕಿತ್ತಳೆ, ಸೌತೆಕಾಯಿ ಕ್ಷಣದಲ್ಲಿ ಉದರ ಸೇರಿತು. ಆಗ ಹುಟ್ಟಿತು ನವ್ಯ ಕಾವ್ಯ! ಅಲ್ಲಲ್ಲ ನವ್ಯ ಗದ್ಯ!
ಬಿರು ಬಿಸಿಲಲ್ಲಿ ಚಾರಣ ಹೋಗ್ಬಾರ್ದು ರಿ ಹೋಗ್ಬಾರ್ದು
ಮೈಮುಖವೆಲ್ಲ ಸುಟ್ಟೋಗ್ತದೆ ರಿ ಸುಟ್ಟೋಗ್ತದೆ
ಕೊಂಡೋದ ನೀರೆಲ್ಲ ಬಲುಬೇಗ ಖಾಲಿಯಾಗ್ತದೆ ರಿ ಖಾಲಿಯಾಗ್ತದೆ
ಬೆವರು ದಾರಾಕಾರ ಇಳಿದೋಗ್ತದೆ ರಿ ಇಳಿದೋಗ್ತದೆ
ನಡೆವಾಗ ಬಲುಬೇಗ ಸುಸ್ತಾಗ್ತದೆ ರಿ ಸುಸ್ತಾಗ್ತದೆ
ಚಾರಣದ ಹುಚ್ಚಿರುವವರಿಗೆಲ್ಲ ಈ ಬಿಸಿಲು ಮಳೆ ಚಳಿ ಲೆಕ್ಕವಲ್ಲ
ಬಿಸಿಲಿಗೆ ತುಂಬುತೋಳಿನ ಅಂಗಿ ಧರಿಸಬೇಕು
ತಲೆಗೆ ಟೋಪಿ ಹಾಕಬೇಕು
ಸಾಕಷ್ಟು ನೀರು ಒಯ್ಯಬೇಕು
ಇಷ್ಟು ಮುಂಜಾಗ್ರತೆ ವಹಿಸಬೇಕು
ಆಗ ಬಿರುಬಿಸಿಲಲ್ಲೂ ಚಾರಣ ಹೋಗುವುದೇನೂ ಕಷ್ಟವಲ್ಲ
ಅಲ್ಲಲ್ಲಿ ಕೂತು ವಿಶ್ರಮಿಸಿ ನೀರು ಕುಡಿದು ಮುಂದೆ ಸಾಗಿದೆವು. ‘ನಿಧಾನಕ್ಕೆ ಬನ್ನಿ. ಒಟ್ಟಿನಲ್ಲಿ ನಿಮಗೆ ಟೈಮ್ ಪಾಸ್ ಆದರೆ ಆಯಿತಲ್ಲ. ಎಲ್ಲ ಕಡೆ ಕರೆದುಕೊಂಡು ಹೋಗುತ್ತೇನೆ’ ಎಂದು ಆಗಾಗ ರಾಜ ಹೇಳುತ್ತಿದ್ದರು! ನಡೆಯಲು ಕಷ್ಟಪಡುವ ಕೆಲವರಿಗೆ ರಾಜ ಬಿದಿರು ದೊಣ್ಣೆ ಕಡಿದು ಕೊಟ್ಟರು. ಅಲ್ಲಲ್ಲಿ ಕುರುಚಲು ಹುಲ್ಲಿಗೆ ಬೆಂಕಿ ಹಾಕಿದ್ದರು. ಅದೇ ದಾರಿಯಲ್ಲಿ ನಡೆದೆವು. ಚಪ್ಪಲಿ ಧರಿಸಿ ಬಂದವರ ಕಾಲಂತೂ ಕರ್ರಗೆ ಮಿಂಚುತ್ತಿತ್ತು! ಬಿಳಿಬಣ್ಣದ ಪ್ಯಾಂಟ್ ಧರಿಸಿ ಬಂದವರು ಆ ಪ್ಯಾಂಟ್ ತೊಳೆಯುವ ಬಗೆ ಹೇಗೆ ಎಂದು ಚಿಂತಿಸಿದರು. ಸಾಬೂನಿನ ಕಂಪೆನಿಯವರಿಗೆ ಈ ಪ್ಯಾಂಟ್ ಕೊಟ್ಟು ಕರೆ ಹೋಗಿಸಿ ಕೊಡಿ ಎಂದು ಚಾಲೆಂಜ್ ಮಾಡಬಹುದು ಎಂಬ ಸಲಹೆ ಬಂತು!
ಅಂತೂ ೧೧.೩೦ಗೆ ವಾಡೆ ಮಲ್ಲೇಶ್ವರ ಬೆಟ್ಟ ಹತ್ತಿದೆವು. ಅಲ್ಲಿಂದ ನೋಡಿದರೆ ಸುತ್ತಲೂ ಬೆಟ್ಟಗಳ ಸಾಲು ಸಾಲು ಕಣ್ಮನ ಸೆಳೆಯುತ್ತವೆ. ಎತ್ತರದ ಕಬ್ಬಾಲೆ ದುರ್ಗಾ, ಭೀಮನಕಿಂಡಿ, ಇತ್ಯಾದಿ ಬೆಟ್ಟಗಳು ಮುಂದಿನ ಸಲ ಇಲ್ಲಿಗೂ ಬನ್ನಿ ಎಂದು ನಮ್ಮನ್ನು ಕೈಬೀಸಿ ಕರೆದಂತೆ ಭಾವಿಸಿದೆವು! ಆಗಲೇ ಆ ಬೆಟ್ಟಗಳನ್ನೆಲ್ಲ ಹತ್ತಬೇಕು ಎಂದು ಮನಸ್ಸು ಲೆಕ್ಕ ಹಾಕಲು ಸಿದ್ಧತೆ ಮಾಡಲು ತೊಡಗುತ್ತದೆ! ಯಾವಗಲಾದರೂ ಆ ಬೆಟ್ಟಗಳಿಗೆ ಕರೆದುಕೊಂಡು ಹೋಗಿ ಎಂದು ನಾಗೇಂದ್ರಪ್ರಸಾದರಿಗೆ ಅರಿಕೆ ಮಾಡಿಕೊಂಡೆವು.
ವಾಡೆಮಲ್ಲೇಶ್ವರ ಬೆಟ್ಟದಲ್ಲಿ ದೊಡ್ಡನೆತ್ತಿ ಚಿಕ್ಕನೆತ್ತಿ ಎಂಬ ಎರಡು ಬೆಟ್ಟಗಳಿವೆ. ದೊಡ್ಡನೆತ್ತಿ ಏರಿದ ಮೇಲೆ ಚಿಕ್ಕನೆತ್ತಿಗೆ ಇಳಿದೆವು. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು. ಅಲ್ಲಿ ಆರ್ಕಿಡ್ ಹೂವೊಂದು ಅರಳಿತ್ತು. ಅದು ಗೋಪಕ್ಕನ ಕಣ್ಣಿಗೆ ಕಂಡಿತು. ನಾವು ಅದನ್ನು ಕ್ಯಾಮರಾಕಣ್ಣಲ್ಲಿ ಸೆರೆಹಿಡಿದು ಭದ್ರಪಡಿಸಿಕೊಂಡೆವು. ಎಂಥ ಚಂದದ ಹೂ ಅದು. ಕಿವಿಯೋಲೆಯಂಥ ನಮೂನೆಯಲ್ಲಿತ್ತು. ಒಂದು ಗಿಡದಲ್ಲಿ ಅರಸಿನ ಬಣ್ಣದ ಒಂದೇ ಒಂದು ಹೂ ಅರಳಿ ನಮ್ಮನ್ನು ಸ್ವಾಗತಿಸಿತ್ತು. ಆ ಹೂ ನೋಡಿದಾಗ ಎಂಥ ಚಂದದ ಹೂ ಅರಳಿದೆ. ನೋಡುವವರೇ ಇಲ್ಲ ಈ ಕಾಡಿನಲ್ಲಿ ಅನಿಸಿತು. ಬಿಳಿಗೆರೆ ಕೃಷ್ಣಶಾಸ್ತ್ರಿಗಳು ಬರೆದ ಯೇಗ್ದಾಗೆಲ್ಲ ಐತೆ ಪುಸ್ತಕದಲ್ಲಿ ಮೂಕೂಂದೂರು ಸ್ವಾಮಿಗಳು ಕಾಡು ಹೂಗಳನ್ನು ಕಂಡು ಹೇಳಿದ ಮಾತುಗಳು ಆ ಸಂದರ್ಭದಲ್ಲಿ ನೆನಪಾದವು. (ಆಧ್ಯಾತ್ಮದ ಅನುಭವ ದಕ್ಕಿಸಿಕೊಳ್ಳಲು ಯೇಗ್ದಾಗೆಲ್ಲ ಐತೆ ಪುಸ್ತಕ ಅವಶ್ಯ ಓದಬೇಕು) “ಈಗ್ಗಳಪ್ಪ! ಈಕೆ ನೋಡಪ್ಪ! ಏನ್ ಪಸಂದ್ ಐದಾಳೆ ಈಯಮ್ಮ ಓಡಿ ಹೋಗಲ್ಲ. ಒಳ್ಳೆ ನಿಧಾನವಂತೆ. ನೋಡು ಹತ್ರಾನೆ ಬಾ ಅಂತ ತಲೆ ತೂಗಿ ಕರೀತಾ ಅವ್ಳೆ. ಎಂದು ನುಡಿದು ಹೂ ಹತ್ತಿರ ಹೋದರಂತೆ ಸ್ವಾಮಿಗಳು. ಮತ್ತೆ ಮಾತಾಡುತ್ತ, ಎಂಥ ಸೋಜಿಗ! ಅಲ್ಲಾ ಏನ್ ಚೆಂದೊಳ್ಳಿ ಚೆಲುವೆ ನೀನು! ಇಲ್ಲಿ ಬಂದು ಒಬ್ಳೇ ಕೂತಿದ್ದೀಯಲ್ಲ! ಈ ಕಾಡ್ನಾಗಿದ್ರೆ ಯಾರ್ ನೋಡ್ತಾರೆ! ನಿನ್ನ ಅಂದಚಂದ ಎಲ್ಲನಿರಾವರ್ತ, ಯಾವುದಾದರೂ ಊರ ಮುಂದೆ ಇದ್ರೆ ನಾಲ್ಕು ಜನ ನೋಡ್ಯಾರು,ಮುದ್ದಾಡ್ಯಾರು, ಕೊಂಡಾಡ್ಯಾರು, ಇನ್ನು ನಾಲ್ಕು ಜನಕ್ಕೆ ಹೇಳ್ಯಾರು. ‘ನಮ್ಮೂರಾಗೆ ಚೆಲುವಕ್ಕ ಐದಾಳೆ, ಬಂದು ನೋಡಿ’ ಅಂತ. ಏನ್ ಚಂದ ಇದ್ರೇನು? ಬುದ್ಧಿ ಇಲ್ಲ ನಿನಗೆ. ಅಡವಿ ಸೇರಿದ್ದೀಯ! ಹಾಗೆಂದು ಹೂಗಿಡದ ಬಳಿ ಹೋಗಿ ಏನೋ ಕೇಳಿಸಿಕೊಂಡವರಂತೆ, ಆ! ಏನಂದೆಮ್ಮ? ಓಹೋಹೋ! ಹೌದು, ನಿನ್ನ ಮಾತು ಸರಿ ಕಣಕ್ಕ, ಒಪ್ಪಲೇಬೇಕು. ಕೇಳಿದೇನಪ್ಪಾ ನಮ್ಮವ್ವ ಹೇಳಿದ್ದು! ‘ನಾನು ಊರಾಗಿದ್ರೆ ಜನ ನನ್ನನ್ನ ಹಿಂಗೇ ಉಳೀಗೊಡುತಿದ್ರಾ? ಕಿತ್ತು ಹೊಸಗಿ ಸಾಯಿಸಿ ಬುಡ್ತಾರೆ’ ಅಂತಾಳೆ. ನಿಜ ಅವಳಮಾತೇ ಸರಿ. ಕಣ್ಣಿಗೆ ಕಂಡದ್ದನ್ನೆಲ್ಲ ಮನುಷ್ಯ ತನ್ನ ಸುಖಕ್ಕೆಂತ ಹಾಳು ಮಾಡ್ತಾನೆ. ಹಾಳು ಮಾಡೋದನ್ನ ಕಲಿತು ತಾನೂ ಹಾಳಾಗ್ತಾನೆ!. ಎಷ್ಟು ಸತ್ಯ ಈ ಮಾತು ಎಂದೆನಿಸಿತು.
ನಿಮ್ಮನ್ನು ಇನ್ನೊಂದು ದಾರಿಯಲ್ಲಿ ಬೆಟ್ಟ ಇಳಿಸುತ್ತೇನೆ. ಬಂದದಾರಿಯಲ್ಲೇ ಬೇಡ. ಒಟ್ಟಿನಲ್ಲಿ ನಿಮಗೆ ತಿರುಗಾಟ ಆದರೆ ಆಯಿತಲ್ಲ. ಒಂದೂವರೆ ಘಂಟೆಯೊಳಗೆ ನಿಮ್ಮನ್ನು ಬಸ್ಸಿನ ಬಳಿ ತಲಪಿಸಿದರೆ ಸಾಕಲ್ಲ. ನಿಮಗೆ ಟೈಮ್ ಪಾಸ್ ಆಗುತ್ತದೆ. ಎಂದು ಹೇಳಿದ ರಾಜ ಅಲ್ಲಿಂದ ಮುಂದೆ ಮುಂದೆ ಕರೆದೊಯ್ದರು. ಮುಂದೆ ದಾರಿಯೇ ಸರಿ ಇಲ್ಲ. ಒಣಹುಲ್ಲು ಸಾಕಷ್ಟು ಬೆಳೆದಿತ್ತು. ಸರಸರ ಮುಂದೆ ನಡೆದ ರಾಜ ನಮಗೆ ಕಾಣದಾದಾಗ, ರಾಜ, ಓ ರಾಜ ಎಂದು ಕೂಗು ಹಾಕುತ್ತಿದ್ದೆವು. ಇಲ್ಲೇ ಇದ್ದೀನೇಳಿ, ನಿಧಾನವಾಗಿ ಬನ್ನಿ. ಎಲ್ಲೂ ಹೋಗಿಲ್ಲ ಎಂದು ಪ್ರತಿಕ್ರಿಯಿಸಿ ನಗುತ್ತ ನಿಲ್ಲುತ್ತಿದ್ದರು ರಾಜ.
ಸಣ್ಣಬೆಟ್ಟವೆಂದು ಕರೆ ತಂದ ರಾಜ ನಮ್ಮನ್ನು ಸಾಕಷ್ಟು ನಡೆಸಿದ್ದರು. ಎಷ್ಟು ನಡೆದರೂ ಬಸ್ಸಿನ ಸ್ಥಳ ಸಿಗುವುದು ಕಾಣುವುದಿಲ್ಲ. ಅಂತೂ ನಡೆಸಿ ನಡೆಸಿ ದೊಡ್ಡ ಬಂಡೆ ಇರುವ ಕಡೆ ಕರೆತಂದರು. ಆ ಬಂಡೆ ನೋಡಿದ್ದೇ ಎಲ್ಲರ ಕೈ ಕಾಲು ನಡುಗಲು ತೊಡಗಿತು. ಈ ಬಂಡೆ ಇಳಿಯಲು ಎಲ್ಲರಿಗೂ ಸಾಧ್ಯವಿಲ್ಲ ರಾಜ ಎಂದದ್ದಕ್ಕೆ, “ಏಕೆ ಸಾಧ್ಯವಿಲ್ಲ? ಕುರಿಮೇಕೆಗಳೇ ಸಲೀಸಾಗಿ ಸರಸರ ಇಳಿಯುತ್ತವೆ. ನಮಗೆ ಸಾಧ್ಯವಿಲ್ಲವೆ?’’ ಎಂದ ರಾಜ ಕ್ಷಣಾರ್ಧದಲ್ಲಿ ಸರಸರ ಬಂಡೆ ಇಳಿದು ಕೆಳಗೆ ತಣ್ಣಗೆ ಕುಳಿತೇ ಬಿಟ್ಟರು! ರಾಜ ಇಳಿದದ್ದು ನೋಡಿ ನಾವು ಕೆಲವರು ಸ್ಫೂರ್ತಿಗೊಂಡು ಕುರಿಮೇಕೆಗಳಿಂದ ನಾವೇನು ಕಮ್ಮಿ ಇಲ್ಲ ಎಂದು ಧೈರ್ಯಮಾಡಿ ಬಂಡೆ ಇಳಿದೆವು! ಮತ್ತೆ ಕೆಲವರು ನಿಧಾನವಾಗಿ ಬಂಡೆ ಇಳಿದರು. ರಾಜ ಓ ರಾಜ ಇಳಿಯಲಾಗುತ್ತಿಲ್ಲ ಕೈ ಹಿಡಿದು ನಡೆಸೆನ್ನನು ಎಂಬ ಆರ್ತ ಮೊರೆ ಮೇಲಿಂದ ಕೇಳಿ ಬಂದಾಗ ರಾಜ ನಗುತ್ತ ಸರಸರ ಬಂಡೆ ಏರಿ ಅವರ ಬ್ಯಾಗ್ ಹೆಗಲಿಗೇರಿಸಿ ಕೈ ಹಿಡಿದು ಇಳಿಸಿದರು. ಮತ್ತೆ ಕೆಲವರು ಬಾಲ್ಯದಲ್ಲಿ ನಾವು ಜಾರುಬಂಡೆಯಾಡಿಲ್ಲ ಎಂಬ ದುಃಖ ಮರೆಯಲು ಈ ಬಂಡೆಯಲ್ಲಿ ಆ ಆಸೆ ನೆರವೇರಿಸಿಕೊಂಡರು ಹಾಗೂ ಹಾಕಿದ್ದ ಪ್ಯಾಂಟಿನ ಆಸೆಯನ್ನು ಕೈಬಿಟ್ಟರು!
ಅದಾಗಲೇ ಎಲ್ಲರೂ ಬಂಡೆ ಇಳಿಯಲು ಅರ್ಧ ಗಂಟೆಗೂ ಹೆಚ್ಚುಕಾಲ ಬೇಕಾಯಿತು. ಎಲ್ಲರೂ ಬಂಡೆ ಇಳಿಯಲು ಯಶ ಸಾಧಿಸಿದ ಮೇಲೆ ಅಲ್ಲಿಂದ ಹೊರಟು ಮಾವಿನ ತೋಪಿನ ಹಾದಿಯಾಗಿ ಸಾಗಿ, ಎಳೆ ಮಾವಿನಮಿಡಿ ಬಿದ್ದಿದ್ದನ್ನು ಬಾಯಿಗೆ ಹಾಕಿಕೊಂಡು ಹೊಲಗಳನ್ನು ದಾಟಿ ಅರ್ಧಕಿಮೀ ಸಾಗಿದಾಗ ಬಸ್ಸಿನ ಬಳಿ 2-30 ಗೆ ಬಂದೆವು. ಆ ಸುಸ್ತಿನಲ್ಲೂ ಅಬ್ಬ ಗುರಿ ಮುಟ್ಟಿದೆವು ಎಂಬ ಸಂತೋಷ ಆವರಿಸಿತು. ಕೈ ಕಾಲು ಮುಖ ತೊಳೆದು ಊಟ (ಬಿಸಿಬೇಳೆ ಭಾತ್, ಮೊಸರನ್ನ, ಸಿಹಿ ಬರ್ಫಿ) ಮಾಡಿ ವಿರಮಿಸಿದೆವು. ಆಗ ಅಲ್ಲಿ ಕುರಿಗಳ ಸಾಲು ಹಾದು ಹೋಯಿತು. ಅವುಗಳು ಸಾಲಾಗಿ ಸಾಗಿದ್ದು ಕಾಣುವಾಗ ಶಿಸ್ತಿನ ಸೈನಿಕರು ನಾವೆಲ್ಲ ಎನ್ನುವಂತೆ ಭಾಸವಾಯಿತು.
ಆರು ಕಿಮೀ ದೂರ ನಡೆಸಿ ಈ ಪೇಟೆ ಮಂದಿಗೆ ಸರಿಯಾಗಿ ಬುದ್ಧಿ ಕಲಿಸಿದ್ದರು ರಾಜ. ಒಂದು ಕಡೆಯಿಂದ ಬೆಟ್ಟ ಹತ್ತಿಸಿ, ಯಾರೂ ಓಡಾಡದ ಇನ್ನೊಂದು ಬದಿಯಿಂದ ಇಳಿಸಿದ್ದರು. ನಾವೋ ಕಾಲಿಗೆ ಬೆಲೆಬಾಳುವ ಚಪ್ಪಲಿ, ಶೂ ಧರಿಸಿ ತಲೆಗೆ ಟೊಪ್ಪಿಗೆ ಹಾಕಿ, ಚೀಲದಲ್ಲಿ ಹಣ್ಣು, ಸೌತೆಕಾಯಿ, ನೀರು ಒಯ್ದು ನಡೆದಿದ್ದೆವು. ರಾಜನ ಕಾಲಿನಲ್ಲಿ ಸವೆದ ಹವಾಯಿ ಚಪ್ಪಲಿ, ತಲೆಗೆ ಟೋಪಿ ಹೆಗಲಿಗೆ ಶಾಲು, ಕೈಯಲ್ಲಿ ಮಚ್ಚು ಇಟ್ಟುಕೊಂಡು, ಈ ನಡಿಗೆ ಯಾವ ಲೆಕ್ಕ ಎಂದು ನಡೆದಿದ್ದರು. ನಾವೋ ಕೂತು ನಿಂತು ಬಸವಳಿದು ಗಮ್ಯ ತಲಪಿದ್ದೆವು. ರಾಜನಿಗೆ ಧನ್ಯವಾದ ಅರ್ಪಿಸಿ ಬೀಳ್ಕೊಂಡೆವು. ವಾಡೆ ಮಲ್ಲೇಶ್ವರ ಬೆಟ್ಟಕ್ಕೆ ಹೋಗಲಿಚ್ಛಿಸುವವರು ರಾಜನನ್ನು 9945653753 ಈ ಸಂಖ್ಯೆಯಲ್ಲಿ ಸಂಪರ್ಕಿಸಿ.
ನಾಗೇಂದ್ರಪ್ರಸಾದರ ಟೊಪ್ಪಿಗೆ ಎಲ್ಲರ ಕಣ್ಣಿಗೆ ತಾಕಿದ್ದರಲ್ಲಿ ಅಂಥ ಟೊಪ್ಪಿ ತಮಗೂ ಬೇಕಿತ್ತು ಎಂದು ಅನಿಸಿದ್ದು ಸುಳ್ಳಲ್ಲ! ಅದರಲ್ಲಿ ಸೋಲಾರಿನಿಂದ ತಿರುಗುವ ಪುಟ್ಟ ಗಿರಗಟ್ಲೆ (ಪಂಕಕ್ಕೆ ಸಿದ್ದಮ್ಮ ಹೇಳುವ ಶಬ್ಧ ಗಿರಗಟ್ಲೆ) ಇದೆ. ಅದರಿಂದ ಗಾಳಿ ಬರುತ್ತದಂತೆ. ಗಾಳಿ ಬರುತ್ತದಾ ಎಂದು ಕೆಲವರು ತಲೆಗೆ ಹಾಕಿ ಖಾತ್ರಿ ಮಾಡಿಕೊಂಡರು! ಅವರು ಇ ಮಾರುಕಟ್ಟೆಯಿಂದ ಖರೀದಿಸಿದ್ದಂತೆ.
ಇಲ್ಲಿಯವರೆಗೆ ಬಂದು ಮುಖ್ಯಪಟ್ಟ ವಾಡೆ ಮಲ್ಲೇಶ್ವರ ದೇವಾಲಯ ನೋಡದೆ ಹಿಂದಿರುಗುವುದು ಶೋಭೆಯಲ್ಲ ಎಂದು ಉತ್ಸಾಹವಂದಿಗರು ಸುಮಾರು 13 ಮಂದಿ 3.20 ಗೆ ಮಟಮಟ ಬಿಸಿಲಿಗೆ ಹೊರಟೆವು. ಉಳಿದವರು ನಿದ್ರೆ ಹರಟೆಯಲ್ಲಿ ನಿರತರಾದರು. ಸುಮಾರು 960 ಮೆಟ್ಟಲುಗಳನ್ನೇರಿದರೆ ದೇಗುಲ ಕಾಣುತ್ತದೆ. ಮೆಟ್ಟಲುಗಳ ಅಂತರ ಬಲುಕಮ್ಮಿ. ಕಾಲು ನೆಟ್ಟಗೆ ನಿಲ್ಲದಷ್ಟು ಸಪೂರ. ಇತ್ತೀಚೆಗೆ ಕೆಲವಾರು ದಾನಿಗಳ ನೆರವಿನಿಂದ ಈ ಸೋಪಾನಗಳ ದುರಸ್ತಿ ಕಾರ್ಯ ನಡೆದಿದೆ. ದಾನಿಗಳ ಹೆಸರಿನ ಫಲಕ ಹಾಕಿದ್ದಾರೆ. ದಾರಿಯಲ್ಲಿ ಕೆಲವು ಪಕ್ಷಿಗಳು ದರ್ಶನ ಭಾಗ್ಯ ಕರುಣಿಸಿದುವು. 2 ಕಳ್ಳಿಪೀರ ಕ್ಯಾಮರಾಕ್ಕೆ ಫೋಸ್ ಕೊಟ್ಟುವು.
ಮೆಟ್ಟಲೇರಿದಂತೆ ಮಧ್ಯ ಭಾಗದಲ್ಲಿ ನಂದಿ ಹೋಲುವ ಬಂಡೆಗಲ್ಲಿದೆ. ಸುಮಾರು ಇಪ್ಪತ್ತು ನಿಮಿಷದಲ್ಲಿ ದೇವಾಲಯದ ಬಳಿ ತಲಪಿದೆವು. ಅಲ್ಲಿ ನಮ್ಮನ್ನು ಸ್ವಾಗತಿಸಲು ಪೂರ್ವಜರು ಸಾಲಾಗಿ ನಿಂತಿದ್ದರು! ನಮಗೇನು ತಂದಿರಿ? ಎಂದು ಚಾತಕವಾಗಿ ನಿರೀಕ್ಷೆ ಮಾಡಿದರು. ರಶೀದ್ ಅವರಿಗೆ ಸೌತೆಕಾಯಿ ಕೊಟ್ಟು ಉಪಚರಿಸಿದರು.
ದೇವಾಲಯದ ಬಾಗಿಲು ತೆರೆದೇ ಇರುತ್ತದೆ. ಬಂಡೆಯಡಿಯಲ್ಲಿ ಶಿವಲಿಂಗವಿದೆ. ಪ್ರತೀ ಸೋಮವಾರ ಮತ್ತು ಶುಕ್ರವಾರ ಪೂಜೆ ನಡೆಯುತ್ತದೆ. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು. ಸಹನ ಭಕ್ತಿಗೀತೆ ಹಾಡಿದಳು. ನಮ್ಮ ತಂಡದ ಚಿತ್ರ ಕ್ಲಿಕ್ಕಿಸಿಕೊಂಡು ಮೆಟ್ಟಲಿಳಿದು ಕೆಳಗೆ ಬಂದು 5/30 ಗೆ ಬಸ್ಸೇರಿದೆವು. ಬರುತ್ತ ದಾರಿಯಲ್ಲಿ ಚಹಾ, ಕಾಫಿಗೆ ನಿಲ್ಲಿಸಿದ್ದು ಬಿಟ್ಟರೆ ಮತ್ತೆ ಎಲ್ಲೂ ನಿಲ್ಲದೆ 9 ಗಂಟೆಗೆ ಮೈಸೂರು ತಲಪಿದೆವು. ನಾಗೇಂದ್ರಪ್ರಸಾದ್ ಹಾಗೂ ಗೋಪಿ ಅವರು ಈ ಕಾರ್ಯಕ್ರಮವನ್ನು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಆಯೋಜಿಸಿದ್ದರು. ಅವರಿಗೆ ಧನ್ಯವಾದಗಳು.
– ರುಕ್ಮಿಣಿಮಾಲಾ,ಮೈಸೂರು
ಪ್ರಯಾಸದ(?) ಪ್ರವಾಸ ಕಥನ ಚೆನ್ನಾಗಿದೆ…!!
ಧನ್ಯವಾದ ಶಂಕರಿ ಶರ್ಮಾ
ದಿನ ನಿತ್ಯದ ಧಾವಂತದ ಬದುಕಿಗೆ ಇಂತಹ ಚಾರಣಗಳು ಸ್ಪೂರ್ತಿ ತುಂಬುತ್ತವೆ..ಲೇಖನ ಓದಿ ಅಲ್ಲಿಗೆ ಹೋಗಬೇಕೆಂಬ ಆಸೆ ಮೂಡುವುದು ಸುಳ್ಳಲ್ಲ..
ಧನ್ಯವಾದಗಳು
ಧನ್ಯವಾದ
ದನ್ಯವಾದಗಳು.
ನಮ್ಮನ್ನು ಪ್ರವಾಸಕ್ಕೆ ಕರಕ್ಕೊಂಡು ಹೋದ ಅನುಭವ ಕೊಟ್ಟಿರಿ.. ಧನ್ಯವಾದಗಳು
dhanyavada