ಇಂದು – ಅಂದು
ಮಾರ್ಚ್ ತಿಂಗಳು ಬಂದಿತೆಂದರೆ ಎಲ್ಲೆಲ್ಲೂ ಪರೀಕ್ಷೆಗಳ ವಿಚಾರಗಳೇ ಹರಿದಾಡುತ್ತಿರುತ್ತವೆ. ಮೊನ್ನೆ ನಮ್ಮವರು ಬೆಳಗಿನ ವಾಯು ವಿಹಾರ ಮುಗಿಸಿ ಬಂದಾಗ, ಜೊತೆಗೊಬ್ಬ ವ್ಯಕ್ತಿಯನ್ನೂ ಕರೆತಂದು, ತಾವು ಬಾಲ್ಯದಲ್ಲಿ ವಾಸಿಸುತ್ತಿದ್ದಾಗ ನೆರೆಮನೆಯವರಾಗಿದ್ದ ನಾರಾಯಣ್ ಅಂಕಲ್ ಅವರ ಮಗ, ನರಹರಿ ಎಂದೂ, ಈಗ ಈ ಊರಿನಲ್ಲೇ ಇದ್ದಾರೆಂದೂ, ಸಿಟಿಯಲ್ಲಿರುವ ಬ್ಯಾಂಕಿನ ಶಾಖೆಯಲ್ಲಿ ಮ್ಯಾನೇಜರ್ ಆಗ ಕೆಲಸ ನಿರ್ವಹಿಸುತ್ತಿದ್ದಾರೆಂದು ಪರಿಚಯಿಸಿದರು. ಒಂದೆರಡು ನಿಮಿಷ ಮಾತುಕತೆಯಾದ ನಂತರ, ನಾನು ಕಾಫಿ ಮಾಡಿ ತರಲು ಒಳ ಹೋದೆ. ಇಬ್ಬರೂ ಲೋಕಾಭಿರಾಮ ಮಾತನಾಡುತ್ತಲೇ ಪರೀಕ್ಷೆಗಳ ವಿಚಾರಕ್ಕೆ ಬಂದು ನಿಂತರು. ಬಿಸಿ ಬಿಸಿ ಕಾಫಿ, ಬಿಸ್ಕತ್ತುಗಳೊಂದಿಗೆ ನಾನೂ ಹೋಗಿ ಅವರನ್ನು ಸೇರಿದೆ.
ಪರೀಕ್ಷೆಯ ವಿಷಯ ಬಂದೊಡನೆಯೇ ನರಹರಿಯವರು ಹೇಳಿದರು – ಸಾಕಾಗಿ ಹೋಗಿದೆ ಅಂಕಲ್, ನಮ್ಮ ಕಾಲದಲ್ಲಿ ಪರೀಕ್ಷೆ ಬಂದದ್ದೂ, ಹೋದದ್ದೂ ನಮ್ಮ ತಂದೆ ತಾಯಿಯವರಿಗೆ ಒಂದು ಚಿಂತೆ ಅಥವಾ ಒತ್ತಡ ತರುವಂಥಹ ವಿಷಯವೇ ಆಗಿರುತ್ತಿರಲಿಲ್ಲ. ರಿಸಲ್ಟ್ ಬಂದಾಗ, ಪಾಸೋ, ಫೇಲೋ ಎಂದು ಕೇಳುತ್ತಿದ್ದರು. ಪಾಸು ಎಂದೊಡನೆಯೇ ಖುಷಿಯಾಗಿ ಬಿಡುತ್ತಿದ್ದರು. ಮನೆ ತುಂಬಾ ಮಕ್ಕಳಿರುತ್ತಿದ್ದೆವು. ಮನೆಗೆ ಯಾರಾದರೂ ಪರಿಚಯದವರು ಬಂದಿದ್ದಾಗ, ನಿಮ್ಮ ಮಗ ಎಷ್ಟನೇ ಕ್ಲಾಸು? ಎಂದು ಕೇಳಿದರೆ, ಅಪ್ಪ, ʼಏ ನರಹರೀ, ನಿಂದು ಎಷ್ಟನೇ ಕ್ಲಾಸೋ? ಎಂದು ಕೇಳುತ್ತಿದ್ದರು. ನಾವು ಹೇಳಿದ್ದನ್ನೇ ಅವರಿಗೆ ಹೇಳುತ್ತಿದ್ದರು. ಅಮ್ಮ ಮಾತ್ರ, ಏನೂ ತೋಚದಿದ್ದಾಗ, “ಏ, ಹೋಗಿ ಓದಿಕೊಳ್ಳಿರೋ” ಎಂದು ಗದರುತ್ತಿದ್ದರು. ಆದರೀಗ ನಮ್ಮ ಮನೆಯಲ್ಲಿ ಇರುವ ಇಬ್ಬರು ಮಕ್ಕಳಿಗೇ ಎಷ್ಟು ಟೆನ್ಷನ್ ಅಂದ್ರೆ ಹೇಳುವುದಕ್ಕಾಗುವುದಿಲ್ಲ, ನೆನೆಸಿಕೊಂಡರೆ ಭಯವಾಗುತ್ತೆ – ಅಂದರು.
ನಮ್ಮ ಮಕ್ಕಳಿಬ್ಬರೂ ದೊಡ್ಡವರಾಗಿ, ಅವರವರ ಕಾಲುಗಳ ಮೇಲೆ ಅವರು ನಿಂತಿರುವುದರಿಂದ ಅದರ ಕಾವು ಅಷ್ಟೊಂದು ತಟ್ಟಿರಲಿಲ್ಲ. ನಮ್ಮವರು ಕೇಳಿದರು –
ಯಾಕೆ ನರಹರಿ, ಈಗೇನು ಒಳ್ಳೊಳ್ಳೆಯ ಸ್ಕೂಲಿಗೆ ಕಳುಹಿಸುತ್ತೀರಿ, ಅಗತ್ಯ ಬಿದ್ದರೆ ಟ್ಯೂಷನ್ನಿಗೂ ಕಳುಹಿಸುತ್ತೀರಿ, ಮತ್ತೆ ಏನು ಪ್ರಾಬ್ಲಂ?
ಹುಂ ಅಂಕಲ್, ನನ್ನ ಮಗಳು ತುಂಬಾ ಚೆನ್ನಾಗಿ ಓದುತ್ತಾಳೆ, ಈಗ ಎಂಜಿನಿಯರಿಂಗ್ ಮೊದಲ ವರ್ಷದಲ್ಲಿದ್ದಾಳೆ. ಅವಳಿಗೆ ಎಷ್ಟು ಅಂಕಗಳು ಬಂದರೂ ತೃಪ್ತಿಯೇ ಇಲ್ಲ. ಅವಳು 10 ನೇ ತರಗತಿ ಪರೀಕ್ಷೆ ಬರೆದಿದ್ದಾಗ, ಆನ್ ಲೈನಿನಲ್ಲಿ ಫಲಿತಾಂಶ ನೋಡಿ ಬೋರೆಂದು ಅಳಲು ಪ್ರಾರಂಭಿಸಿದಳು. ನಾವುಗಳು ಗಾಭರಿಯಾಗಿ ಎಲ್ಲೋ ಫೇಲ್ ಆಗಿಬಿಟ್ಟಳೇನೋ ಎಂದುಕೊಂಡು – ಏನಾಯಿತಮ್ಮ, – ಎಂದರೆ, ನಾನು 98 % ಕ್ಕಿಂತ ಕಮ್ಮಿ ಬರುವುದೇ ಇಲ್ಲ ಎಂದುಕೊಂಡಿದ್ದೆ, ಆದರೆ 96 % ಬಂದು ಬಿಟ್ಟಿದೆ, ನನಗೆ ಯಾರಿಗೂ ಮುಖ ತೋರಿಸಲು, ರಿಸಲ್ಟ್ ಹೇಳಲು ನಾಚಿಕೆಯಾಗುತ್ತದೆ ಎಂದು ಅಳುತ್ತಾಳೆ, ಏನು ಮಾಡುವುದು ಅಂಕಲ್ ಎಂದರು.
ನಮಗೂ ಹೇಳಲು ಏನೂ ತೋಚಲಿಲ್ಲ. – ಕೊನೆಗೆ ಹೇಗೆ ಸಮಾಧಾನ ಮಾಡಿದಿರಿ – ಎಂದರೆ, ಎಲ್ಲಿ ಸಮಾಧಾನ ಮಾಡುವುದು ಅಂಕಲ್. ಕೊನೆಗೆ ಜೋರಾಗಿ ಬೈದು, ರೇಗಬೇಕಾಯಿತು, ನಮ್ಮ ಹಣೆಯಬರಹ – ಎಂದರು, ನರಹರಿ.
ಹೋಗಲಿ, ಮಗನಾದರೂ ಒತ್ತಡಗಳಿಲ್ಲದೆ ಇದ್ದಾನಲ್ಲವೆ? – ನಮ್ಮವರು ಕೇಳಿದರು.
ಅಯ್ಯೋ, ಮಗಳು ಇಷ್ಟು ಚೆನ್ನಾಗಿ ಓದಿದರೆ, ಮಗನಿಗೆ ಓದಿನಲ್ಲಿ ಆಸಕ್ತಿಯೇ ಇಲ್ಲ. ಬರೀ ಪಠ್ಯೇತರ ಚಟುವಟಿಕೆಗಳಲ್ಲಿಯೇ ಮುಳುಗಿರುತ್ತಾನೆ. ಆದರೂ ಒಂದು ಬೇಸಿಕ್ ಎಜುಕೇಶನ್ ಆದ್ರೂ ಬೇಕಲ್ವಾ ಅಂಕಲ್, ಅದೂ ಅಲ್ಲದೆ ಇವನ ಕುರಿತಾಗಿ ನನ್ನ ಹೆಂಡತಿ ತುಂಬಾ ಟೆನ್ಷನ್ ಮಾಡಿಕೊಂಡು ಬಿಪಿ, ಶುಗರ್ ಎಲ್ಲಾ ಬರಿಸಿಕೊಂಡು ಬಿಟ್ಟಿದ್ದಾಳೆ. ನಿಮಗೇ ತಿಳಿದಿರುವ ಹಾಗೆ ಅವಳೂ ಸರ್ಕಾರಿ ಕೆಲಸದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇರುವುದರಿಂದ ಅಲ್ಲಿಯ ಒತ್ತಡಗಳೂ ಇದ್ದೇ ಇರುತ್ತವೆ. ಅಂಕಲ್, ಹೇಳಿಕೊಳ್ಳೋಕೆ ನಾಚಿಕೆ ಆಗುತ್ತೆ, ದಿನಾ ಬೆಳಗ್ಗೆ 9 ಗಂಟೆಗೆ ನಮ್ಮ ಮನೆಗೆ ಬಂದು ನೋಡಿ, ಹನ್ನೆರಡು ವರ್ಷದ ನನ್ನ ಮಗನಿಗೆ ನನ್ನ ಹೆಂಡತಿ ತಿಂಡಿ ತಿನ್ನಿಸುತ್ತಿರುತ್ತಾಳೆ, ನಾನು ಶೂಸ್ ಹಾಕುತ್ತಿರುತ್ತೇನೆ, ಇಷ್ಟೆಲ್ಲಾ ರೆಡಿ ಮಾಡಿ ಕಳುಹಿಸಿದರೂ ದಿನಾ ಒಂದಲ್ಲಾ ಒಂದು ದೂರು ಶಾಲೆಯಿಂದ ತರುತ್ತಾನೆ, ಸಾಕಾಗಿ ಹೋಗಿದೆ – ಎಂದು ಪೇಚಾಡಿಕೊಂಡರು ನರಹರಿ.
ಅಂದಿನ ದಿನವೆಲ್ಲಾ ನಮಗೆ ಇಂದಿನ ಪೀಳಿಗೆ ಎಲ್ಲಿ ತಪ್ಪುತ್ತಿದೆ ಎಂದೇ ಅರ್ಥೈಸಲು ಆಗಲಿಲ್ಲ. ಯೋಚಿಸಿ, ಯೋಚಿಸಿ, ನಾವೀಗ ಅಪ್ರಸ್ತುತ ಆಗಿಬಿಟ್ಟಿದ್ದೀವಿ, ನಮ್ಮ ವಿವೇಚನೆಗೆ ನಿಲುಕುವಂತಹುದಲ್ಲ ಎಂದು ಸುಮ್ಮನಾಗಿಬಿಟ್ಟೆವು.
ಹಾಗೇ ರಾತ್ರಿ ಊಟದ ನಂತರ ಮನೆ ಮುಂದಿನ ಉಯ್ಯಾಲೆಯಲ್ಲಿ ಕುಳಿತು ತೂಗಿಕೊಳ್ಳುತ್ತಿದ್ದಾಗ, ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನಡೆದ ಘಟನೆಯ ನೆನಪುಗಳ ಮಾಲೆ ಬಿಚ್ಚಿಕೊಳ್ಳತೊಡಗಿತು.
ನಾನಾಗ 9 ನೇ ತರಗತಿಯಲ್ಲಿ ಓದುತ್ತಿದ್ದೆ. ಪ್ರಿಪರೇಟರಿ ಪರೀಕ್ಷೆಗಳು ನಡೆಯುತಿತ್ತು. ಅಂದು ಗಣಿತದ ಪರೀಕ್ಷೆ. ನನ್ನ ಹಿಂದೆ ಗೆಳತಿ ರಾಧಾ, “ನಂಗೊಂಚೂರು ತೋರ್ಸೆ, ತೋರ್ಸೆ” ಎಂದಳು. ನಾನು ಹೋಗಲಿ ಪಾಪ ಎಂದು ಅವಳಿಗೆ ಕಾಣುವಂತೆ ಉತ್ತರ ಪತ್ರಿಕೆಯನ್ನು ಇಟ್ಟು ಏನೋ ಪ್ರಶ್ನ ಪತ್ರಿಕೆಯನ್ನು ನೋಡುವಂತೆ ನಟಿಸುತ್ತಿದ್ದೆ. ಇದ್ದಕ್ಕಿದ್ದಂತೆ ಹಿಂದಿನಿಂದ ಬೆನ್ನ ಮೇಲೆ ಒಂದು ದಬ್ ಅಂತ ಗುದ್ದು ಬಿತ್ತು. ಬೆಚ್ಚಿ ನೋಡಿದರೆ, ನನ್ನ ಹಿಂದೆ ನಮ್ಮ ಉಮಾ ಮೇಡಂ ನಿಂತಿದ್ದರು.
“ನೀವೆಲ್ಲಾ ಫ್ರೆಂಡ್ಸ್‌ಗಳಿಗೆ ಸಹಾಯ ಮಾಡುವುದಿಲ್ಲ, ಅವರುಗಳನ್ನು ಹಾಳು ಮಾಡುತ್ತೀರಿ, ಕಾಪಿ ಮಾಡುವುದಕ್ಕಿಂತ, ಕಾಪಿ ಮಾಡಲು ಅವಕಾಶ ಮಾಡಿಕೊಡುವವರಿಗೆ ಹೆಚ್ಚಿನ ಶಿಕ್ಷೆ ಕೊಡಬೇಕು. ಒಮ್ಮೆ ಅವರಿಗೆ ಬರೆಯಲು ಕಷ್ಟವಾದರೆ, ಮುಂದಿನ ಸಲ ಓದಿಕೊಂಡು ಬಂದು ಬರೆಯುತ್ತಾರೆ. ನಿಮ್ಮಂಥವರಿಂದ ಹಾಳಾಗುತ್ತಾರೆ” – ಎಂದು ಚೆನ್ನಾಗಿ ಬೈಯ್ದರು. ನಂತರ ರಾಧಾಳ ಉತ್ತರ ಪತ್ರಿಕೆಯನ್ನು ತೆಗೆದುಕೊಂಡು ಮನೆಯವರನ್ನು ಕರೆತರಲು ಹೇಳಿದರು. ನನಗಂತೂ ಆಶ್ಚರ್ಯವೋ ಆಶ್ಚರ್ಯ! ಕಾಪಿ ಮಾಡಿದ್ದು ರಾಧಾ, ಅವಳಿಗೆ ಬೈಗುಳವೇ ಇಲ್ಲ, ಗುದ್ದು ಬಿದ್ದದ್ದು ನನಗೆ ಎಂದು. ಆದರೂ ಅವರು ಗೆಳತಿಯನ್ನು ಹಾಳು ಮಾಡುತ್ತೀರಿ ಎಂಬ ಮಾತು ಎಷ್ಟು ಗಾಢವಾಗಿ ನನ್ನ ಮೇಲೆ ಪರಿಣಾಮ ಬೀರಿತು ಎಂದರೆ, ಎರಡು ತಿಂಗಳ ನಂತರ ಮುಖ್ಯ ಪರೀಕ್ಷೆ ಬಂತು. ಈ ಸಲ ನನ್ನ ಹಿಂದೆ ಕುಳಿತದ್ದು, ಪದ್ಮಳ ನಂತರ ಪಾರ್ವತಿ. ಒಂದು ಅರ್ಧ ಮುಕ್ಕಾಲು ಗಂಟೆಯ ನಂತರ ಇವಳದ್ದೂ ಒತ್ತಾಯ ಪ್ರಾರಂಭವಾಯಿತು. “ತೋರ್ಸೆ, ತೋರ್ಸೆ”. ಮೇಡಂ ಆ ಕಡೆ ಹೋದಾಗ ಮೆಲ್ಲಗೆ ಹೇಳಿದೆ – ಬೇಡ ಕಣೆ, ಉಮಾ ಮೇಡಂ ಹೇಳಿದ್ದಾರೆ, ಕಾಪಿ ಮಾಡುವುದಕ್ಕಿಂತ ಮಾಡಲು ಅವಕಾಶ ಮಾಡಿಕೊಡುವುದು ಕೆಟ್ಟದ್ದು ಅಂತ, ಪ್ಲೀಸ್ ಕೇಳಬೇಡ, ನಾನು ತೋರ್ಸಲ್ಲ”
ಪಾರ್ವತಿ ಬಿಡಲೇ ಇಲ್ಲ. ಕಾಲಿನ ಬೆರಳುಗಳಿಂದ ನನ್ನ ಲಂಗದ ತುದಿಯನ್ನು ಜಗ್ಗಿ ಜಗ್ಗಿ ಎಳೆಯುತ್ತಾ “ತೋರ್ಸೆ, . . .” ಹೇಳುತ್ತಲೇ ಇದ್ದಳು. ಬೇಡ ಬೇಡವೆಂದರೂ ಕೇಳಲಿಲ್ಲ. ಅವಳ ಒರಾತ ತೀರಾ ಹೆಚ್ಚಾಯಿತು. ಅಷ್ಟರ ವೇಳೆಗೆ ಪರೀಕ್ಷೆ ಪ್ರಾರಂಭವಾಗಿ 50-55 ನಿಮಿಷಗಳಾಗಿದ್ದವು. ಲೆಕ್ಕ ಹಾಕಿದೆ, ಆ ವೇಳೆಗಾಗಲೇ ಸುಮಾರು46-48 ಅಂಕಗಳಿಗೆ ಉತ್ತರ ಬರೆದಿದ್ದಾಗಿತ್ತು. ಮೇಡಂಗೆ ಹೇಳಿದರೆ ಅವಳನ್ನು ಬೈಯ್ಯುತ್ತಾರೆ, ಡಿಬಾರ್ ಸಹ ಮಾಡಬಹುದು (ಆಗೆಲ್ಲಾ ಡಿಬಾರ್ ಬಗ್ಗೆ ತುಂಬಾ ಹೆದರಿಸಿಬಿಟ್ಟಿದ್ದರು), ಸರಿ ಯೋಚಿಸಿದೆ, 48 ಅಂಕಗಳಿಗೆ ಹೇಗೂ ಉತ್ತರ ಬರೆದಿದ್ದೀನಿ, ಕೊನೇ ಪಕ್ಷ 40 ಅಂಕಗಳು ಬಂದೇ ಬರುತ್ತೆ, 35 ಅಂಕಗಳು ಬಂದರೇ ಸಾಕು, ಪಾಸಾಗಬಹುದು. ನಾನು ಮೇಡಂಗೆ ಹೇಳಿ ಅವಳನ್ನು ಬಯ್ಯಿಸುವುದೂ ಬೇಡ, ಅವಳಿಗೆ ನಾನು ಬರೆದಿರುವುದನ್ನು ತೋರಿಸಿ, ಉಮಾ ಮೇಡಂ ಹೇಳಿದಂತೆ ಅವಳನ್ನು ಹಾಳು ಮಾಡುವುದೂ ಬೇಡ ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದೇ ಬಿಟ್ಟೆ. ಉತ್ತರ ಪತ್ರಿಕೆಯನ್ನು ಮಡಚಿ ʼಮೇಡಂʼ ಎಂದೆ. ʼಏನುʼ ಎಂಬಂತೆ ನೋಡಿದರು. ʼಆಯ್ತು ಮೇಡಂ, ಪೇಪರ್ ತೊಗೊಳ್ಳಿʼ ಎಂದೆ. ಗಂಟೆ ನೋಡಿಕೊಂಡು, ಮುಖದ ತುಂಬಾ ಆಶ್ಚರ್ಯ ತುಂಬಿಕೊಂಡು, – ಇನ್ನು ಎರಡು ಗಂಟೆಗಳಷ್ಟು ಸಮಯವಿದೆ – ಎಂದರು. ʼಇಲ್ಲಾ ಮೇಡಂ, ನನ್ನದು ಆಯಿತುʼ – ಎಂದು ಹೇಳಿ ಉತ್ತರ ಪತ್ರಿಕೆಯನ್ನು ಕೊಟ್ಟು ಹೊರಟು ಬಂದೇ ಬಿಟ್ಟೆ. ಮನೆಗೆ ಬಂದರೆ, ಎಂಜಿನಿಯರಿಂಗ್ ಓದುತ್ತಿದ್ದ ನಮ್ಮ ಅಣ್ಣನಿಗೆ ತೀರಾ ಆಶ್ಚರ್ಯ! ಕೇಳಿದ – ಯಾಕೇ ಇಷ್ಟು ಬೇಗ ಬಂದು ಬಿಟ್ಟೆ? ಈಸಲ ಫೇಲಾ?
ನಡೆದ ವಿಷಯ ಹೇಳಿದೆ. ಮನೆಯವರೆಲ್ಲಾ ತಲೆಯ ಮೇಲೆ ಕೈ ಹೊತ್ತು ಕುಳಿತರು. ನನಗಂತೂ ಯಾಕೆಂದು ಅರ್ಥವೇ ಆಗಲಿಲ್ಲ, ಇವರಿಗ್ಯಾಕೆ ಬೇಜಾರು ಎಂದು. ಹೇಳಿದೆ – ನಾನ್ಯಾಕೆ ಫೇಲ್ ಆಗುತ್ತೀನಿ, 48 ಅಂಕಗಳಿಗೆ ಉತ್ತರ ಬರೆದಿದ್ದೀನಿ, ಕೊನೇ ಪಕ್ಷ 40 ರಿಂದ 42 ಅಂಕಗಳು ಬರತ್ತೆ, 35 ಬಂದರೇ ಪಾಸು . .
ಈಗಲೂ ನನ್ನಣ್ಣನಿಂದ ಬೆನ್ನ ಮೇಲೆ ಗುದ್ದು ಬಿತ್ತು, ನಂತರ ಹೇಳಿದ – 35 ಬಂದ್ರೆ ಪಾಸೇನೋ ನಿಜ, ಆದರೆ ಅವರ್ಯಾಕೆ 100 ಅಂಕಗಳಿಗೆ ಪರೀಕ್ಷೆ ಇಟ್ಟಿದ್ದಾರೆ, ಎಲ್ಲಾ ಬರೆಯಲಿ ಎಂದು ತಾನೆ – ಎಂದು ಕೋಪದಿಂದ ಕೇಳಿದ.
ಅಂದು ನನಗರ್ಥವೇ ಆಗಲಿಲ್ಲ, ಯಾಕೆ ನನಗೆ ಅಲ್ಲೂ ಗುದ್ದು, ಇಲ್ಲೂ ಗುದ್ದು ಎಂದು.
ಆದರೂ ಫಲಿತಾಂಶ ಬಂದಾಗ ನನಗೆ ಆ ವಿಷಯದಲ್ಲಿ 44 ಅಂಕಗಳು ಬಂದಿದ್ದವು . ನಾನು ನನ್ನಣ್ಣನನ್ನು ನೋಡಿ ವಿಜಯದ ನಗು ನಕ್ಕೆ. ಆದರೆ ಅವನು ಹಣೆ ಹಣೆ ಚಚ್ಚಿಕೊಂಡ.
ಅಂದಿನ ಪರೀಕ್ಷೆಯ ಬಗ್ಗೆ ಇದ್ದ ಭಾವನೆಗಳಿಗೂ, ಇಂದಿನ ಒತ್ತಡಕ್ಕೂ ಇರುವ ವ್ಯತ್ಯಾಸ ತಿಳಿಯದಾಗದೆ, ಏನೋ ಜನರೇಷನ್ ಗ್ಯಾಪ್ ಎಂದುಕೊಳ್ಳುತ್ತಾ ಮಲಗಲು ಹೊರಟೆ.
-ಪದ್ಮಾ ಆನಂದ್ , ಮೈಸೂರು
ಚೆನ್ನಾಗಿದೆ ಬರಹ. ಅಂದಿನ ಓದಿಗೂ ಇಂದಿನ ಓದಿಗೂ ಅಜಗಜಾಂತರ ವ್ಯತ್ಯಾಸ ಮೂಡಿ ಬಂದಿದ್ದಲ್ಲದೆ ಹಲವಾರು ವಿಷಯ ವೈವಿದ್ಯಗಳು ತಿಳಿಯಿತು.
ಮೆಚ್ಚುಗೆಗೆ ಧನ್ಯವಾದಗಳು.
ಲೇಖನವನ್ನು ಪ್ರಕಟಿಸಿದ್ದಕ್ಕಾಗಿ ಸಂಪಾದಕಿ ಶ್ರೀಮತಿ. ಹೇಮಮಾಲಾ ಅವರಿಗೆ ಧನ್ಯವಾದಗಳು.
ಅಂದು ಇಂದು ಪರೀಕ್ಷಾ ಲೇಖನ ಚೆನ್ನಾಗಿದೆ… ಗುರುಗಳ ಮಾತಿಗೂ ಬೆಲೆ ಗೆಳತಿಯನ್ನು ಇಕ್ಕಟ್ಟಿಗೆ ಸಿಕ್ಕಿಸುವುದು..ತೋರಿಸಲಿಲ್ಲವೆಂಬ ಆಕ್ಷೇಪಣೆ ಬೇಡವೆಂಬ ನಿರ್ಧಾರಸರಿ ಅದೃಷ್ಟಕ್ಕೆ ಪಾಸಾದಿರಿ ..ಪೇಪರ್ ಮಿಸ್ಸಾಗಿದ್ದರೆ..ಏನೇ ಆಗಲಿ ಈಗಿನ ಒತ್ತಡದಲ್ಲಿರುವ ಮಕ್ಕಳಿಗೆ ಪೋಷಕರಿಗೆ ಒಂದು ಸವಾಲ್ ಅಂತೂ ಖಂಡಿತ.. ಪದ್ಮಾಮೇಡಂ..
ನಿಮ್ಮ ಸದಭಿಪ್ರಾಯಕ್ಕೆ ವಂದನೆಗಳು.
ವಾಸ್ತವ. ಇಂದಿನ ಶಿಕ್ಷಣ ನೀತಿಯಲ್ಲೇ ಹಲವಾರು ಬದಲಾವಣೆಗಳಾಗಿವೆ, ಅವೇನು ಉತ್ತಮ ಬದಲಾವಣೆಗಳಲ್ಲ, ಮಕ್ಕಳ ಭವಿಷ್ಯಕ್ಕೆ ಮಾರಕವಾಗುವಂತಾವುಗಳೇ.
ಇಂದು ಪರೀಕ್ಷೆಯ ಸಮಯದಲ್ಲಿ ಮನೆಯವರೆಲ್ಲರೀಗೂ ಉಂಟಾಗುವ ಒತ್ತಡ ನೋಡಿದರರ ನಿಜಕ್ಕೂ ಗಾಭರಿಯಾಗುತ್ತದೆ.
ಲೇಖನ ಓದಿ ಪ್ರತಿಕ್ರಿಯಿದ್ದಕ್ಕಾಗಿ ಧನ್ಯವಾದಗಳು.
ಸುಂದರ ನೆನಪಿನ ಸತ್ಯ ದ ಲೇಖನ
ಮೆಚ್ಚುಗೆಗಾಗಿ ಧನ್ಯವಾದಗಳು.
ಬಹಳ ಪ್ರಾಮಾಣಿಕವಾದ ನಿರೂಪಣೆಯ ಸೊಗಸಾದ ಬರಹ. ೪೮ ಅಂಕಗಳಿಗೆ ಉತ್ತರ ಬರೆದು, ಪಾಸಾಗುವೆನೆಂಬ ಧೈರ್ಯದಿಂದ ನಿಯಮಪಾಲನೆಗೆ ಧಕ್ಕೆಯಾಗದಂತೆ ಹಾಲ್ ನಿಂದ ಹೊರನಡೆದ ನಿಮ್ಮ ಮನೋಭಾವ ಬಹಳ ಮೆಚ್ಚುಗೆಯಾಯಿತು.
ಅಂದು ಎರಡೆರಡು ಕಡೆ ಗುದ್ದು ಬಿದ್ದರೂ ಇಂದು ನೀವು ಬೆನ್ನು ತಟ್ಟಿದ್ದು ಖುಷಿಯಾಯಿತು. ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಹಳೇ ನೆನಪುಗಳ ಮೆಲುಕು ಚೆನ್ನಾಗಿ ಮೂಡಿಬಂದಿದೆ.
ಮೆಚ್ಚುಗೆಗಾಗಿ ಧನ್ಯವಾದಗಳು.
ಕತೆ ತುಂಬಾನೇ ಇಷ್ಟ ಆಯ್ತು.
ಇಂದಿನ ಓದು, ಪರಿಕ್ಷಾ ವ್ಯವಸ್ಥೆ ಹಾಗೂ
ತುಮುಲ ಮತ್ತು ತಾಯಿತಂದೆಯವರ ಪರದಾಟಗಳ ಬಗ್ಗೆ ನೈಜ ಚಿತ್ರಣ ನೀಡಿದ್ದೀರಾ.
*ಅಭಿನಂದನೆಗಳು*
ತಮ್ಮ ಸದಭಿಪ್ರಾಯಕ್ಕಾಗಿ ವಂದನೆಗಳು.
ಗುದ್ದು ಬೀಳುವುದೆಂಬ ಭಯದಿಂದ ಪಾಸಾಗುವಷ್ಟು ಬರೆದು ಹೊರನಡೆದ ನಿರ್ಧಾರ ನಿಜಕ್ಕೂ ಮೆಚ್ಚುವಂತಹುದು…ಒಳ್ಳೆ ಕೆಲಸ ಮಾಡಿದ್ರಿ ಮೇಡಂ..ನನ್ನ ಓಟು ನಿಮಗೆ! ಸೊಗಸಾದ ಬರೆಹ.
ತುಂಬಾ ಉತ್ತಮ ಬರಹ… ಫಲಿತಾಂಶದ ಬಗ್ಗೆ ಯೋಚನೆಗಳೇ ಇಲ್ಲದೆ ನಿರಾಳವಾಗಿದ್ದ ಆ ಕಾಲ ಅದೆಷ್ಟು ಚೆನ್ನಾಗಿತ್ತು!..ಈಗಲೂ ಕೆಲವು ಮಕ್ಕಳು ಭವಿಷ್ಯದ ಬಗೆಗೆ ಯೋಚನೆ ಮಾಡದೆ ಇರುತ್ತಾರೆ. ಆದರೆ ಅವರಿಗಿಂತಲೂ ಅವರ ಹೆತ್ತವರಿಗೆ ಜಾಸ್ತಿ ದಿಗಿಲು ಇರುವುದಂತೂ ಸತ್ಯ