ಆದರೆ ಎಲ್ಲಾ ಹವೆಯಲ್ಲೂ ನೀರಿಗಿಂತ ಹೆಚ್ಚು ಬೀರ್ ನ್ನೇ ಕುಡಿಯುತ್ತಾರೆ. ಒಕ್ಟೋಬರ್ ತಿಂಗಳಲ್ಲಿ ನಡೆಯುವ ಬೀರ್ ಫೆಸ್ಟಿವಲ್ ನಲ್ಲಿ, ಲೀಟರ್ ಗಟ್ಟಲೆ ಬೀರ್ ಕುಡಿದವರೇ ಜಾಣರಂತೆ. ಒಂದಿಷ್ಟು ಬಿಸಿಲು ಬಿದ್ದರೆ ಆರಾಮವಾಗಿ ಹೊರಾಂಗಣದಲ್ಲಿ ಕುಳಿತು ಬೀರ್ ಹೀರುವುದೆಂದರೆ ಅವರಿಗೆ ಪಂಚಪ್ರಾಣ. ಇದನ್ನು ‘ಬೀರೋತ್ಸವ’ ಎನ್ನೋಣವೇ?
ಮಾರ್ಗದ ಬದಿಯಲ್ಲಿ ಒಬ್ಬಾತ ಅದೇನೋ ತಬಲಾವನ್ನು ಹೋಲುವ ಡಬ್ಬಿಯೊಂದನ್ನು ಬಡಿಯುತ್ತಾ ಹಾಡುತ್ತಿದ್ದ. ಭಿಕ್ಷೆ ಬೇಡುವ ಇನ್ನೊಂದು ರೂಪ ಅಲ್ಲೂ ಇತ್ತು.
ಒಟ್ಟಿನ ಮೇಲೆ, ಗಣೇಶ ಚತುರ್ಥಿ ಹಬ್ಬದ ಮುನ್ನಾ ದಿನ ಮೈಸೂರಿನ ದೇವರಾಜ ಮಾರುಕಟ್ಟೆಗೆ ಹೋದರೆ ಕಾಣಸಿಗುವ ಹಬ್ಬದ ಕಳೆ ಹೊತ್ತ ವ್ಯಾಪಾರ.ಆದರೆ ಅಲ್ಲಿ ಎಲ್ಲವೂ ಸ್ವಚ್ಛ,ಅಚ್ಚುಕಟ್ಟು. ಗಲಾಟೆ ಗೊಂದಲವಿಲ್ಲ, ವಸ್ತುಗಳನ್ನು ಕೊಳ್ಳಿರೆಂದು ಕಿರುಚುವ ಮಾರಾಟಗಾರರಿಲ್ಲ, ದೊಡ್ಡದನಿಯಲ್ಲಿ ಚೌಕಾಸಿ ಮಾಡಿ ಕಿರಿಕಿರಿ ತರಿಸುವ ಗ್ರಾಹಕರೂ ಇಲ್ಲ.
ಸ್ವಲ್ಪ ಸುತ್ತಾಡಿ, ಹೋಟೆಲ್ ಒಂದರಲ್ಲಿ ಊಟ ಮಾಡಿ ಹಿಂತಿರುಗಿದೆವು. ಕೆಲವರು ಪರಸ್ಪರ ಶುಭರಾತ್ರಿ, ವಿದಾಯದ ಹಾರೈಕೆಗಳ ಜತೆಗೆ ‘ವೆದರ್ ವಾಸ್ ಸೊ ಗುಡ್, ವಿ ಎಂಜಾಯೆಡ್, ವ್ ಹಾಡ್ ಗ್ರೇಟ್ ಟೈಮ್, ಸ್ಕೈ ಇಸ್ ಕ್ಲೀಯರ್, ವಿ ಕಾನ್ ಈವನ್ ಸಿ ಸ್ಟಾರ್‍ಸ್‘ ಇತ್ಯಾದಿ ಅನ್ನುತಿದ್ದರು.
ಆಗ ಸುಮಾರು 8-10 ಡಿಗ್ರಿ ತಾಪಮಾನ ಇದ್ದಿರಬಹುದು. ನಿಜ ಹೇಳಬೇಕೆಂದರೆ, ಸ್ವೆಟರ್, ಕೋಟ್ , ಶೂ -ಹಾಕಿಕೊಂಡಿದ್ದರೂ ನನಗೆ ಚಳಿಯೆನಿಸಿತ್ತು. ಇದನ್ನು ಉತ್ತಮ ಹವೆ ಎನ್ನುವ ಪ್ರಶಂಸಿಸುವ ನೀವೆಲ್ಲಾ ನಮ್ಮ ಮೈಸೂರಿಗೆ ಬನ್ನಿ, ವರುಷವಿಡೀ ಅತ್ಯುತ್ತಮ ಹವೆಯಿರುತ್ತದೆ ಅನ್ನೋಣ ಎನಿಸಿತಾದರೂ ತೆಪ್ಪಗಿದ್ದೆ.
ಮೆಚ್ಚೆಬೇಕಾದ ವಿಷಯವೇನೆಂದರೆ, ಹವೆಯನ್ನು ಅನುಭವಿಸುವುದರಲ್ಲಿ ಅವರಿಗೆ ಅದೆಷ್ಟು ಸರಳ ಸಂತೃಪ್ತಿ! ನಮಗೆ ಧಾರಾಳವಾಗಿ ಹಾಗೂ ಉಚಿತವಾಗಿ ಸಿಗುವ ಉತ್ತಮ ಹವೆಯನ್ನು ಖಂಡಿತವಾಗಿಯೂ ಇಷ್ಟು ಸಂತೋಷದಿಂದ ಅನುಭವಿಸುವುದಿಲ್ಲ. ವಿ ಟೇಕ್ ವೆದರ್ ಫಾರ್ ಗ್ರಾಂಟೆಡ್!
ಹವೆಯನ್ನು ಎಂಜಾಯ್ ಮಾಡುವುದಿರಲಿ, ಮೈಸೂರಿನಲ್ಲಿ ದಿಸೆಂಬರ್ ನ 15-18 ಡಿಗ್ರಿ ತಾಪಮಾನ ನಮಗೆ ಅತಿ-ಚಳಿಯಾಗುತ್ತದೆ. 32 ಡಿಗ್ರಿ ತಾಪಮಾನ ಇರುವ ಈಗ, ಸೆಕೆಯನ್ನೂ, ಪದೇ ಪದೇ ವಿದ್ಯುತ್ ಕಡಿತಗೊಳಿಸುವ ವಿದ್ಯುತ್ ಮಂಡಳಿಯನ್ನೂ ಮನಸಾರೆ ಶಪಿಸುತ್ತೇವೆ. ಮಳೆಗಾಲದಲ್ಲಿ, ಹಳ್ಳ ದಿಣ್ಣೆಗಳಿಂದ ಕೂಡಿದ ರಸ್ತೆಯಲ್ಲಿ ನೀರೂ ತುಂಬಿ ವಾಹನ ಚಲಾಯಿಸಲು ಸಾಧ್ಯವಾಗದ ಸಂಕಟಕ್ಕೆ ಮಳೆಯ ಜತೆ ಸರಕಾರವನ್ನೂ, ಮಂತ್ರಿಗಳ ಕಾರ್ಯವೈಖರಿಯನ್ನೂ ಸೇರಿಸಿ ದೂರುತ್ತೇವೆ. ನಾವು ಹವೆಯನ್ನು ಅನುಭವಿಸುವ ಪರಿ ಇದು! .
ಇನ್ನು ಮುಂದಾದರೂ ಹವೆಯನ್ನು ಎಂಜಾಯ್ ಮಾಡಲು ಶುರುಮಾಡಬೇಕು ಎಂದು ನಿರ್ಧರಿಸಿದೆ.
– ಹೇಮಮಾಲಾ.ಬಿ
Very nicely written Hema! I feel like visiting this place.. Really loved the comparison with Mysore climate.. !!
ಸೊಗಸಾದ ಲೇಖನ ,ಚಿತ್ರಗಳು