ಕಾದಂಬರಿ: ನೆರಳು…ಕಿರಣ 23

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
“ಪೂಜೆಪುನಸ್ಕಾರಗಳು, ಜ್ಯೋತಿಷ್ಯ, ಇವುಗಳು ನಿಮ್ಮ ಕುಲಕಸುಬು. ತಲೆತಲಾಂತರದಿಂದ ನಡೆದುಕೊಂಡು ಬಂದಿವೆ. ಅದನ್ನು ನಾನೂ ಸ್ವೀಕರಿಸುತ್ತೇನೆ. ಆದರೆ ಅವುಗಳ ಬಗ್ಗೆ ನಿಮ್ಮ ವೈಯಕ್ತಿಕ ನಿಲುವೇನು? ಮೊದಲಿನಿಂದ ಬಂದಿವೆಯೆಂದು ಮುಂದುವರೆಸುತ್ತಿದ್ದೀರಾ? ಅಥವಾ ಬೇರೆ ಯಾವ ವಿಭಾಗಕ್ಕೂ ಹೋಗಲು ಸಾಧ್ಯವಿಲ್ಲವೆಂದು ಇದನ್ನೇ ಒಪ್ಪಿಕೊಂಡಿದ್ದೀರಾ? ಅನ್ಯಥಾ ಭಾವಿಸಬೇಡಿ, ಕುತೂಹಲವಷ್ಟೇ” ಎಂದಳು ಬಾಗ್ಯ.

“ಅಯ್ಯೋ ಇದರಲ್ಲಿ ಭಾವಿಸುವುದೇನಿದೆ, ಕೇಳಿಲ್ಲಿ ಅಪ್ಪ ವಾಡಿಕೆಯಂತೆ ವೇದ, ಉಪನಿಷತ್ತು, ಮಂತ್ರ, ಪೂಜೆ, ಸಂಪ್ರದಾಯದ ನೀತಿನಿಯಮಗಳೆಲ್ಲವನ್ನೂ ನನಗೆ ಕಲಿಸಿಕೊಟ್ಟರು. “ನೋಡು ಮಗನೇ ಇವೆಲ್ಲಾ ಸನಾತನವಾಗಿ ಬಂದ ಶಾಸ್ತ್ರ, ಸಂಪ್ರದಾಯ, ಸಂಸ್ಕಾರಗಳನ್ನು ಮರೆಯಬಾರದು. ಆದರೆ ನಮ್ಮ ಕುಲಕಸುಬಿನ ಬಗ್ಗೆ ನಾನು ನಿನ್ನನ್ನು ಒತ್ತಾಯಿಸುವುದಿಲ್ಲ. ವಿದ್ಯಾಭ್ಯಾಸ ಮುಂದುವರೆಸಿ ಬೇರೆ ವೃತ್ತಿಯನ್ನು ಹಿಡಿಯಬಹುದು” ಎಂದಿದ್ದರು.

“ಆದರೆ ನಾನೇ ಒಪ್ಪಲಿಲ್ಲ. ನನಗಿದು ತುಂಬ ಆಪ್ತವಾದ ವಲಯ. ಅದಕ್ಕೇ ಶ್ರದ್ಧೆಯಿಟ್ಟು ಕಲಿತಿದ್ದೇನೆ. ಇನ್ನೂ ಕಲಿಯುವುದು ಬೇಕಾದಷ್ಟಿದೆ. ಇದರಲ್ಲೇ ಏನಾದರೂ ಸಾಧಿಸುತ್ತೇನೆಂಬ ನಂಬಿಕೆಯಿದೆಯೆಂದು ಹೇಳಿದೆ. ಅದರಂತೆಯೇ ಮಂಡಲಪೂಜೆ, ಹೋಮ ಹವನಗಳು, ಶಾಂತಿಪೂಜೆಗಳು, ಗ್ರಹಗಳ ಸಂಪ್ರೀತಿಗಾಗಿ ಪೂಜೆ, ಇವೆಲ್ಲವನ್ನೂ ಅಪ್ಪನಿಗಿಂತ ಚೆನ್ನಾಗಿ ಮಾಡುತ್ತೇನೆಂದು ಬಹಳ ಜನಗಳ ಬಾಯಿಂದ ಬಂದ ಅಭಿಪ್ರಾಯವಾಗಿದೆ. ಸಂಗೀತದಲ್ಲಿ ನಿನ್ನ ಹಾಗೆ ರ್‍ಯಾಂಕ್ ಬರದಿದ್ದರೂ ಫಸ್ಟ್‌ಕ್ಲಾಸಿನಲ್ಲಿ ಪಾಸಾಗಿದ್ದೇನೆ. ಜೊತೆಗೆ ವೀಣೆ, ಮೃದಂಗ ಮುಂತಾದ ನನ್ನ ಅಚ್ಚುಮೆಚ್ಚಿನ ವಾದ್ಯಗಳನ್ನೂ ನುಡಿಸುತ್ತೇನೆ. ನನಗೆ ಬಿಡುವಿದ್ದಾಗ ಯಾರಾದರೂ ಸಂಗೀತ ಕಾರ್ಯಕ್ರಮಗಳಲ್ಲಿ ಸಾಥ್ ಕೊಡಲು ಆಹ್ವಾನಿಸಿದರೆ ಹೋಗುತ್ತೇನೆ. ನನಗೆ ಅದರಲ್ಲಿ ತೃಪ್ತಿಯಿದೆ, ನಂಬಿಕೆ ವಿಶ್ವಾಸಗಳಿವೆ.” ಎಂದು ಹೇಳಿದ ಶ್ರೀನಿವಾಸ.

“ಈಗಿನ ಕಾಲದಲ್ಲಿ ಸಾಕಷ್ಟು ವಿಜ್ಞಾನದ ಆವಿಷ್ಕಾರಗಳಾಗಿವೆ, ಆದರೂ ಈ ಶಾಸ್ತ್ರ, ಸಂಪ್ರದಾಯ, ಜ್ಯೋತಿಷಗಳಲ್ಲಿ ನಂಬಿಕೆಯಿರುವ ಜನರಿದ್ದಾರಲ್ಲಾ” ಎಂದಳು ಭಾಗ್ಯ.

“ವಿಜ್ಞಾನ ಎಷ್ಟೇ ಬೆಳೆದಿದ್ದರೂ ಇವೆಲ್ಲಾ ಇದ್ದೇ ಇರುತ್ತವೆ. ಕ್ರಮಗಳಲ್ಲಿ ಬೇರೆಯಾಗಬಹುದು ಅಷ್ಟೇ ಭಾಗ್ಯ. ಇದನ್ನೆಲ್ಲ ಪಾಲಿಸುವವರಿಗೆ ಇದರಿಂದ ಎಷ್ಟುಮಟ್ಟಿನ ಅನುಕೂಲವಾಗುತ್ತದೋ ನನಗೆ ಗೊತ್ತಿಲ್ಲ. ಆದರೆ ಅವರ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ ಮಾಡಿಕೊಂಡು ಬಂದಿದ್ದೇನೆ.” ಎಂದನು ಶ್ರೀನಿವಾಸ.

ಅದೆಲ್ಲ ಕೇಳಿದ ಭಾಗ್ಯ ಗಂಡನ ಉದ್ದೇಶವು ಒಳ್ಳೆಯದೆ, ನಿಸ್ವಾರ್ಥ ಸೇವೆಯೂ ಸರಿಯೇ, ಆದರೆ ಇಷ್ಟೊಂದು ಮೂಢನಂಬಿಕೆಯ ಮಟ್ಟಕ್ಕೆ ನಂಬುವುದು ಒಳ್ಳೆಯದಲ್ಲ. ಎಂದು ಅವಳ ಒಳ ಮನಸ್ಸು ಹೇಳುತ್ತಿತ್ತು. ಬಹಿರಂಗವಾಗಿ “ನಮ್ಮಲ್ಲಿ ನಿಮ್ಮಷ್ಟು ತಿಳಿದವರು ಬಹಳ ಕಡಿಮೆ. ಅವರುಗಳೇಕೆ ನಾವುಗಳೇ ನಮ್ಮ ಮನೆಗಳಲ್ಲಿ ಅನೂಚಾನವಾಗಿ ಪೂಜೆ ಪುನಸ್ಕಾರ, ಸಂಪ್ರದಾಯ, ಆಚರಣೆಗಳನ್ನು ಪಾಲಿಸಿಕೊಂಡು ಬಂದಿದ್ದೇವೆ. ಆದರೆ ಪ್ರತಿಯೊಂದಕ್ಕೂ ರಾಹುಕಾಲ, ತಿಥಿ, ಘಳಿಗೆಗಳನ್ನು ನೋಡಿ ಮಾಡುವುದನ್ನು ನೋಡಿದ್ದೇನೆ. ಮದುವೆಯ ಸಮಯದಲ್ಲಿ ಜಾತಕವನ್ನು ಕೇಳಬಹುದೆಂದು ತಂದೆತಾಯಿಗಳು ಬರೆಸಿ ಇಟ್ಟಿರುತ್ತಾರೆ. ಇದು ಬಿಟ್ಟು ಬೇರೇನೂ ತಿಳಿದಿಲ್ಲ. ಬಿಡಿ ಆವಿಷಯ, ಮನೆಯಲ್ಲಿರುವ ವೀಣೆ, ಮೃದಂಗ, ಬಗ್ಗೆ ಭಾವನಾ ಕೇಳಿದ್ದಳು. ನನಗೆ ಕಾರಣ ಗೊತ್ತಿಲ್ಲವೆಂದು ಹೇಳಿದ್ದೆ. ಈಗ ತಿಳಿಯಿತು ನೀವು ಬಹಳಷ್ಟು ಕಲೆಗಳಲ್ಲಿ ಪರಿಣತರೆಂದು.” ಎಂದಳು ಭಾಗ್ಯ.

“ಪರಿಣತಿ, ಪಾಂಡಿತ್ಯ ಅವೆಲ್ಲ ಬಹುದೊಡ್ಡ ಮಾತುಗಳು. ಸಾಯುವವರೆಗೂ ಕಲಿಯುವುದಿದ್ದದ್ದೇ. ಆ ವಾದ್ಯಗಳು ನನ್ನ ಮುತ್ತಾತನವಂತೆ. ಅವರ ನೆನಪಿಗೆ ಯಾರಿಗೂ ಕೊಡದೆ ಇಟ್ಟುಕೊಂಡಿದ್ದರು ಅಪ್ಪ.  ಅವುಗಳಲ್ಲಿ ಆಸಕ್ತಿಯಿದೆ ಎಂದು ಗೊತ್ತಾದ ಮೇಲೆ ನನಗೆ ಕಲಿಸುವ ಏರ್ಪಾಡು ಮಾಡಿದರು. ಹಾ ಇನ್ನೊಂದು ವಿಷಯ. ನಾವುಗಳು ಹೆಚ್ಚಾಗಿ ಪೂಜಾಕಾರ್ಯಕ್ರಮಗಳಿಗೆ ಸುತ್ತಮುತ್ತಲಿನ ಊರಿಗೆ ಆಗಿಂದಾಗ್ಯೆ ಹೋಗುತ್ತಲೇ ಇರುತ್ತೇವೆ. ಅಲ್ಲಿಯೇ ಅನಿವಾಂiiವಾಗಿ ಕೆಲಕಾಲ ಇರಬೇಕಾಗುತ್ತದೆ. ನೀನು ಬೇಸರ ಪಟ್ಟುಕೊಳ್ಳಬಾರದು. ಅಲ್ಲೆಲ್ಲಾ ಪತ್ರವ್ಯವಹಾರಕ್ಕೂ ಅವಕಾಶವಿರುವುದಿಲ್ಲ. ಈ ಸಾರಿ ಹೋದಾಗ ನನ್ನನ್ನು ಅದು ಬಹಳವಾಗಿ ಕಾಡಿತ್ತು. ತಪ್ಪು ತಿಳಿಯಬೇಡ ಭಾಗ್ಯ” ಎಂದು ಹೇಳಿದ ಶ್ರೀನಿವಾಸ.

ತಾನು ಅಂದುಕೊಂಡಷ್ಟು ಕೈಹಿಡಿದವಳನ್ನು ಉದಾಸೀನ ಮಾಡುವಂತಹ ವ್ಯಕ್ತಿಯಲ್ಲ ತನ್ನ ಗಂಡ ಎಂದುಕೊಂಡಳು. ಆ ದಿನದ ಚರ್ಚೆಗೆ ಮುಕ್ತಾಯ ಹಾಕೋಣವೆಂದು ದೀಪವನ್ನು ನಂದಿಸಿದಳು.

ಭಾಗ್ಯ ತನ್ನ ಕುಟುಂಬದ ವ್ಯಕ್ತಿಗಳ ಆಚಾರವಿಚಾರ, ಉಟೋಪಚಾರ, ಕೆಲಸಕಾರ್ಯಗಳು, ಹೊರಗಿನ ಜನರೊಡನೆ ಅವರ ವ್ಯವಹಾರ ಎಲ್ಲವನ್ನು ನಿಧಾನವಾಗಿ ಗಮನಿಸುತ್ತಾ ಅರ್ಥಮಾಡಿಕೊಳ್ಳತೊಡಗಿದಳು.

ಬೆಳಗಿನ ನಾಲ್ಕು ಗಂಟೆಗೆ ಪ್ರಾರಂಭವಾಗುತ್ತಿದ್ದ ಮನೆಯ ದಿನಚರಿ ರಾತ್ರಿ ಒಂಬತ್ತರವರೆಗೆ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ಮುಂದುವರೆಯುತ್ತಿತ್ತು. ಮನೆಯನ್ನು ನಿಭಾಯಿಸುವ ಕೆಲಸ ಸೀತಮ್ಮನವರದ್ದಾದರೆ, ಪೂಜೆಕೈಂಕರ್ಯ, ರಕ್ಷೆಯ ತಾಯಿತಗಳನ್ನು ತಯಾರಿಸುವುದು, ಕುಂಡಲಿ, ಜಾತಕಗಳನ್ನು ಬರೆಯುವುದು, ಜಮೀನಿನ ಉಸ್ತುವಾರಿಕೆ, ಇವೆಲ್ಲವುಗಳನ್ನು ಅಪ್ಪ ಮಗ ನಿಭಾಯಿಸುತ್ತಿದ್ದರು. ಭಾಗ್ಯಳಿಗೆ ಇಂತದ್ದೇ ಕೆಲಸ ಮಾಡಬೇಕೆಂದು ನಿರ್ಬಂಧ ಹೇರದಿದ್ದರೂ ತಾನೇ ಸಮಯ ಸಂದರ್ಭ ನೋಡಿಕೊಂಡು ಎಲ್ಲರ ಕೆಲಸಗಳಲ್ಲೂ ಸಹಾಯಕಳಾಗಿ ನಿಲ್ಲುವುದನ್ನು ಅಭ್ಯಾಸ ಮಾಡಿಕೊಳ್ಳತೊಡಗಿದಳು.

ಅವಳ ಗಮನಕ್ಕೆ ಬಂದ ಅಚ್ಚರಿಯ ಸಂಗತಿಯೆಂದರೆ ತಮ್ಮ ಮನೆಯ ಪಕ್ಕದಲ್ಲಿದ್ದ ಕುಟುಂಬ ಹಸುಗಳನ್ನು ಸಾಕಾಣಿಕೆ ಮಾಡಿಕೊಂಡು ತಮ್ಮ ಮನೆಯ ಕೆಲಸಗಳಿಗೂ ನೆರವಾಗುತ್ತಿದ್ದವರು ಬೆಳಗ್ಗೆ ಗಲಗಲ ಎನ್ನುತ್ತಿದ್ದರು. ನಂತರ ಸಂಜೆಯವರೆಗೆ ಯಾವುದೇ ಸದ್ದುಗದ್ದಲವೂ ಇರುತ್ತಿರಲಿಲ್ಲ. ಇದರ ಬಗ್ಗೆ ಅತ್ತೆ ಸೀತಮ್ಮನವರನ್ನು ಕೇಳಿದಳು ಭಾಗ್ಯ.

“ಓ ಅದಾ. ಅವರುಗಳು ಬರೀ ಹಸುಗಳ ಸಾಕಾಣಿಕೆ ಮಾತ್ರವಲ್ಲ, ಜಮೀನಿನ ಸಾಗುವಳಿ ಮಾಡುತ್ತಿರುವವರು ಅವರೇ. ಮೂರು ಕುಟುಂಬಗಳಿಂದ ಹತ್ತು ಜನರಿದ್ದಾರೆ. ಸುಗ್ಗಿಕಾಲದಲ್ಲಿ ಅವರ ಊರಿನಿಂದ ಹೆಚ್ಚುವರಿ ಆಳುಗಳನ್ನು ಕರೆಸಿಕೊಳ್ಳುತ್ತಾರೆ. ಅವರು ಒಕ್ಕಣೆ ಮಾಡಿ ಮಾರುಕಟ್ಟೆ ವ್ಯವಹಾರ ಮುಗಿಯುವವರೆಗೆ ಇಲ್ಲಿರುತ್ತಾರೆ. ಅನಂತರ ಊರಿಗೆ ಹಿಂತಿರುಗುತ್ತಾರೆ. ಇಲ್ಲಿಯೇ ಹತ್ತಿರದ ತಾವರೇಕೆರೆಯವರು. ಹೆಣ್ಣುಮಕ್ಕಳು ಕಳೆಕೀಳುವುದು, ನಾಟಿಹಾಕುವುದು, ತರಕಾರಿಗಳನ್ನು ಬಿಡಿಸಿ ಮಾರುಕಟ್ಟೆಗೆ ಕಳುಹಿಸುವುದು, ಮೆಣಸಿನಕಾಯಿ, ಹತ್ತಿ ಬಿಡಿಸುವುದು, ಅಷ್ಟೇ ಏಕೆ ಹಸುಗಳಿಗೆ ಹುಲ್ಲುಕೊಯ್ದು ತರುವುದು, ಎಲ್ಲದರಲ್ಲೂ ಗಂಡಸರಿಗೆ ಸರಿಸಮನಾಗಿ ದುಡಿಯುತ್ತಾರೆ. ಬೆಳಗ್ಗೆ ಮನೆಗೆಲಸವನ್ನು ಎಲ್ಲರು ಹಂಚಿಕೊಂಡು ಮುಗಿಸಿ ಮಧ್ಯಾನ್ಹದ ಬುತ್ತಿಯನ್ನೂ ಕಟ್ಟಿಕೊಂಡು ಹೊರಟರೆಂದರೆ ಹಿಂದಿರುಗುವುದು ಸಂಜೆಯೇ. ಕಷ್ಟಜೀವಿಗಳು, ನಂಬಿಕಸ್ಥರು. ಶೀನು ಏನಿದ್ದರೂ ಬರಿಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಾನೆ. ನಮಗೆ ದೇವಸ್ಥಾನಕ್ಕೆಂದು ಬಿಟ್ಟ ಉಂಬಳಿ ಜಮೀನಿನ ಜೊತೆಗೆ ತಾವೂ ಕೊಂಡಿರುವ ಜಮೀನನ್ನೂ ಸಾಗುವಳಿ ಮಾಡುತ್ತಾರೆ. ಅವರ ಬಲವಂತಕ್ಕೆ ನಿಮ್ಮ ಮಾವ ಇತ್ತೀಚೆಗೆ ತಾವೂ ಒಂದೆರೆಡು ಎಕರೆ ಜಮೀನನ್ನು ಖರೀದಿಸಿದ್ದಾರೆ. ಅದನ್ನು ಶೀನನ ಹೆಸರಿಗೆ ಮಾಡಿದ್ದಾರೆ. ಅವನು ತೋಟ ಮಾಡಬೇಕೆಂದು ತೆಂಗಿನ ಸಸಿಗಳನ್ನು, ಹಣ್ಣಿನ ಮರದ ಸಸಿಗಳನ್ನು ಹಾಕಿಸಿದ್ದಾನೆ. ನೀರಿಗಾಗಿ ಭಾವಿ ತೆಗೆಸಿ, ಪಂಪು ಹಾಕಿಸಿದ್ದಾನೆ. ಇದನ್ನು ಹೊರಗಿನವರಿಗೆ ಅಷ್ಟಾಗಿ ಹೇಳಿಲ್ಲ. ಇವೆಲ್ಲ ಆಸುಪಾಸಿನಲ್ಲೇ ಇರುವುದರಿಂದ ಎಲ್ಲವನ್ನೂ ಅವರೇ ನಿಭಾಯಿಸಿಕೊಂಡು ಬರುತ್ತಿದ್ದಾರೆ.” ಎಂದು ವಿವರಿಸಿದರು ಸೀತಮ್ಮ.

“ಅವರು ಮನೆಯಲ್ಲಿಯೇ ಇಲ್ಲವೆಂದರೆ ಇನ್ನೆಲ್ಲಿಂದ ಬರಲು ಸಾಧ್ಯ ಗದ್ದಲ. ಅದಿರಲಿ ಹಸುಗಳು ಏನಿಲ್ಲವೆಂದರೂ ಹದಿನಾರರ ಮೇಲಿವೆ. ಅಷ್ಟೂ ಹಸುಗಳ ದೇವಸ್ಥಾನದ ಬಳುವಳಿಯೇ?”

PC:Internet

“ಹೇ.ಹೆ ಹುಚ್ಚುಹುಡುಗಿ, ಅಷ್ಟೊಂದು ಹಸುಗಳನ್ನು ಯಾರು ಕೊಡುತ್ತಾರೆ. ಒಂದೆರಡನ್ನು ಕೊಟ್ಟಿದ್ದಾರೆ. ಅವುಗಳ ಸಂತತಿಯಿಂದ ನಾಲ್ಕಾರು ಆಗಿರಬಹುದು. ಮಿಕ್ಕವು ನಮ್ಮ ಮಾವನವರ ಕಾಲದಲ್ಲಿ ಖರೀದಿಸಿದ್ದವುಗಳ ಸಂತತಿಯಿಂದ ಬಂದವು. ಅವುಗಳಲ್ಲಿ ಕೆಲವು ಹಾಲು ಕೊಡುವ ಸಮಯ ಹೋಗಿದೆ. ಆದರೆ ಕೊನೆಯವರೆಗೆ ನಾವೇ ನೋಡಿಕೊಳ್ಳುತ್ತೇವೆ. ಹೊರಕ್ಕೆ ಕಳುಹಿಸುವುದಿಲ್ಲ. ಎಲ್ಲವೂ ದೇಸೀ ಹಸುಗಳೇ. ಆದರೂ ಪೊಷಣೆ ಚೆನ್ನಾಗಿರುವುದರಿಂದ ಹಾಲಿನ ಉತ್ಪನ್ನ ಚೆನ್ನಾಗಿ ಆಗುತ್ತದೆ. ಅದನ್ನು ನಾಲ್ಕು ಭಾಗ ಮಾಡಿದ್ದಾರೆ ನಿಮ್ಮ ಮಾವ. ಒಂದು ದೇವಸ್ಥಾನದ ಅಭಿಷೇಕಕ್ಕೆ, ಅಲ್ಲಿರುವ ಅರ್ಚಕರ ಮನೆಗಳಿಗೆ, ಮತ್ತೊಂದು ನಮ್ಮ ರೈತಾಪಿ ಕುಟುಂಬದವರಿಗೆ, ಮತ್ತೊಂದು ಇಲ್ಲಿಯೇ ಸಮೀಪದಲ್ಲಿರುವ ಅನಾಥಾಲಯಕ್ಕೆ, ಉಳಿದದ್ದು ಕೆಲವು ವರ್ತನೆ ಮನೆಗಳಿಗೆ ಕೊಡುತ್ತಾರೆ. ಅದರಲ್ಲಿ ಬಂದ ಹಣವನ್ನು ಹಸುಗಳ ಆಹಾರ, ವೈದ್ಯಕೀಯ ವೆಚ್ಚಗಳಿಗೆ ಉಪಯೋಗ ಮಾಡುತ್ತಾರೆ. ನಮ್ಮ ಅದೃಷ್ಟವೋ ಏನೋ, ಒಂದು ಸಾರಿಯೂ ನಮ್ಮ ಕೈಯಿಂದ ಯಾವ ಹಣವನ್ನೂ ಹಾಕುವ ಪ್ರಸಂಗ ಬಂದಿಲ್ಲ. ಅಲ್ಲಿಗಲ್ಲಿಗೆ ಸರಿಹೋಗುತ್ತದೆ. ಅಪರುಪಕ್ಕೆ ಖರ್ಚುಕಳೆದು ಉಳಿದದ್ದೂ ಉಂಟು.” ಎಂದರು ಸೀತಮ್ಮ.

“ಅತ್ತೇ, ನೀವು ತಪ್ಪು ತಿಳಿಯದಿದ್ದರೆ ಒಂದು ಮಾತು.” ಎಂದಳು ಭಾಗ್ಯ.

“ಏ..ಮನೆಮನೆಯವರಲ್ಲಿ ಅದೇನು ಮಾತು? ಹೇಳು” ಎಂದು ಕೇಳಿದರು ಸೀತಮ್ಮ.

“ಏನಿಲ್ಲ ಮನೆಯ ಮುಂದೆ ಇದ್ದಷ್ಟೇ ಜಾಗ ಮನೆಯ ಹಿತ್ತಲಲ್ಲೂ ಇದೆ. ಆದರೆ ಮುಂಭಾಗದಲ್ಲಿ ಇರುವಷ್ಟು ಸ್ವಚ್ಛತೆ ಹಿತ್ತಲಲ್ಲಿ ಇಲ್ಲ. ಬೇಕಾಬಿಟ್ಟಿ ಬೆಳೆದ ಗಿಡಗಳಿವೆ. ಬೇಡದ ಪದಾರ್ಥಗಳನ್ನು ಹಾಕುವ ಜಾಗವಾಗಿದೆ. ಸಮನಾಗಿಯೂ ಇಲ್ಲ. ಇದನ್ನು ಸ್ವಚ್ಛಮಾಡಿಸಿ ಸಮಮಾಡಿಸಿದರೆ ಇಲ್ಲಿ ಒಂದು ಪುಟ್ಟ ಕೈತೋಟ ಮಾಡಬಹುದು. ನನಗೆ ಚಿಕ್ಕಂದಿನಿಂದಲೂ ಹೂಗಿಡಗಳನ್ನು, ತರಕಾರಿ ಬೆಳೆಸುವುದೆಂದರೆ ಬಹಳ ಇಷ್ಟ.” ಎಂದಳು ಭಾಗ್ಯ.

“ಅಯ್ಯೋ ಇಷ್ಟೇನಾ ! ನಿನಗೆ ಹೇಗೆ ಬೇಕೋ ಹಾಗೆ ಹೇಳಿ ಮಾಡಿಸಿಕೋ. ಆಸಕ್ತಿಯಿದ್ದರೆ ಒಂದಿಬ್ಬರು ಇಲ್ಲೇ ಪಕ್ಕದಲ್ಲಿರುವ ಆಳುಗಳಿಗೆ ಹೇಳಿ ನೆಲವನ್ನು ಮಟ್ಟ ಮಾಡಿಸಿಕೊಡುತ್ತೇನೆ. ಗೊಬ್ಬರ ಹಾಕಿಸುವ ವ್ಯವಸ್ಥೆಯನ್ನೂ ಮಾಡಿಸುತ್ತೇನೆ. ನನ್ನದೇನೂ ಅಭ್ಯಂತರವಿಲ್ಲ. ನಾನಂತೂ ಕೆಲಸಗಳನ್ನು ಮೈಮೇಲೆ ಎಳೆದುಕೊಂಡು ಮಾಡುವುದಿಲ್ಲ. ಮೊದಲು ಮಾಡಬೇಕೆಂಬ ಹಂಬಲವಿದ್ದರೂ ನಾರಾಣಪ್ಪ ಹೇಳಿದ ಹಾಗೆ ಮನೆಯಲ್ಲಿನ ಹಿರಿಯರು ಯಾವುದಕ್ಕೂ ನನ್ನನ್ನು ಬಿಡುತ್ತಿರಲಿಲ್ಲ. ನಾನೇನಾದರೂ ಮಾಡಿದರೂ ಅವರು ಒಪ್ಪುತ್ತಿರಲಿಲ್ಲ. ಈಗ ನನಗೇ ಅವೆಲ್ಲ ಬೇಡವಾಗಿದೆ. ಹಾಗೆಂದು ನಾನೇನೂ ನಿನ್ನನ್ನು ಕಟ್ಟಿಹಾಕುವುದಿಲ್ಲ. ಭಾಗ್ಯಾ ನಿನಗೇನು ಮಾಡಬೇಕೆನ್ನಿಸುತ್ತದೆಯೋ, ಮಾಡು, ನಾನು ನಿನಗೆ ಬೆಂಬಲ ಕೊಡುತ್ತೇನೆ. ಸಂಕೋಚಬೇಡ” ಎಂದು ಸರಳವಾಗಿ ಹೇಳಿದರು ಸೀತಮ್ಮ.

ಮುಚ್ಚುಮರೆಯಿಲ್ಲದ ಅತ್ತೆ ಸೀತಮ್ಮನವರ ಮಾತುಗಳು ಭಾಗ್ಯಳಿಗೆ ಮುದಕೊಟ್ಟವು. “ಸರಿ ಅತ್ತೆ” ಎಂದಳು. ಹಾಗೇ “ಮತ್ತೊಂದು ಮಾತು ಅತ್ತೇ, ಇಲ್ಲಿ ಹಬ್ಬ ಹರಿದಿನಗಳು, ವ್ರತ, ಪೂಜೆಗಳ ಆಚರಣೆ ಹೇಗೆಂದು ಕೇಳಬಹುದೇ?” ಎಂದಳು.

“ವ್ರತಾಚರಣೆಗಳು ನಮ್ಮ ಮನೆತನದಲ್ಲಿ ರೂಢಿಯಲ್ಲಿ ಇಲ್ಲ ಬಾಗ್ಯ. ಹಬ್ಬಹರಿದಿನಗಳಲ್ಲಿ ಕೃಷ್ಣಜನ್ಮಾಷ್ಠಮಿ, ನಾಗರಪಂಚಮಿಗೆ ಹೆಚ್ಚಿನ ಪ್ರಾಶಸ್ತ್ಯ. ಮಿಕ್ಕವನ್ನೆಲ್ಲ ಶ್ರದ್ಧಾಭಕ್ತಿಗಳಿಂದ ಪೂಜೆ ಮಾಡುತ್ತೇವೆ. ವಿಶೇಷವೇನೂ ಇಲ್ಲ. ಆಚರಣೆಗಳು ಹಿಂದಿನಿಂದ ಮನೆಯಲ್ಲಿ ಬಂದಿರುವುವನ್ನು ಬಿಟ್ಟಿಲ್ಲ, ಹೊಸದಾಗಿ ಯಾವುದನ್ನೂ ಸೇರಿಸಿಲ್ಲ. ಸ್ವಲ್ಪ ನೇರವಾದ ನಡೆನುಡಿ ಅನುಸರಿಸುವುದರಿಂದ ಹೊರಗಿನವರು ತಮ್ಮದೇ ರೀತಿಯಲ್ಲಿ ನಮಗೆ ಇಲ್ಲಸಲ್ಲದ ಪಟ್ಟ ಕಟ್ಟಿದ್ದಾರೆ. ನಾವುಗಳು ಹೀಗಲ್ಲ ಹಾಗೆ ಎಂದು ಅವರಿಗೆಲ್ಲ ಅರ್ಥೈಸಲು ಹೋಗಿಲ್ಲ. ನಮಗೆ ತಿಳಿದ ರಿವಾಜುಗಳನ್ನಿಟ್ಟುಕೊಂಡು ಬದುಕು ನಡೆಸಿಕೊಂಡು ಬರುತ್ತಿದ್ದೇವೆ. ಆದರೆ ನಮ್ಮ ಶ್ರೀನಿವಾಸ ರೂಪಿನಲ್ಲಿ ನಮ್ಮನ್ನು ಹೋಲುವಂತಿದ್ದರೂ ಬಹುತೇಕ ನಡವಳಿಕೆ ನನ್ನವರ ಮುತ್ತಾತನ ರೀತಿಯಲ್ಲಿದೆ. ಕೆಟ್ಟವನಲ್ಲ. ಆದರೆ ತನ್ನ ಮಾತು ನಡೆಯಬೇಕೆಂಬ ಬಯಕೆಯಿದೆ. ಬಾಹ್ಯ ಪ್ರದರ್ಶನಗಳನ್ನು ಹೆಚ್ಚು ಇಷ್ಟಪಡುವುದಿಲ್ಲ. ಅವನನ್ನು ಕೇಳದೆ, ಅವನ ಸಮ್ಮತಿಯಿಲ್ಲದೆ ನೀನೇನೂ ಮಾಡಲು ಹೊಗಬೇಡ ತಾಯಿ. ಅದರ ಕಡೆಗೆ ನಿನ್ನ ಗಮನ ಯಾವಾಗಲೂ ಇರಲಿ. ಉಳಿದದ್ದೆಲ್ಲಾ ಸಾಮಾನ್ಯ. ನೀನು ಅಂಜದೆ, ಅಳುಕದೆ, ನಿನ್ನ ಆಸಕ್ತಿಯನ್ನು ಬೆಳೆಸಿಕೊಂಡು ನಿಧಾನವಾಗಿ ಸಾಧನೆ ಮಾಡಬಹುದು. ಆತುರಬೇಡ. ಇದು ನಿನ್ನತ್ತೆಯ ಕಳಕಳಿ ಎಂದುಕೋ ಮಗೂ” ಎಂದೆಚ್ಚರಿಕೆ ನೀಡಿದರು ಸೀತಮ್ಮ.

“ಇದರ ಸೂಕ್ಷ್ಮ ಎಳೆ ನನಗೆ ಆಗಲೆ ಅರ್ಥವಾಗಿದೆ ಅತ್ತೆ” ಎಂದು ಮನದಲ್ಲೇ ಅಂದುಕೊಂಡು ಬಾಹ್ಯದಲ್ಲಿ “ಖಂಡಿತಾ ನೀವು ಹೇಳಿದ ಹಾಗೇ ನಡೆದುಕೊಳ್ಳುತ್ತೇನೆ ಅತ್ತೆ, ಇದರಲ್ಲಿ ನನ್ನ ಬದುಕೂ ಅಡಗಿದೆಯಲ್ಲಾ”ಎಂದಳು ಭಾಗ್ಯ.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35628

ಬಿ.ಆರ್.ನಾಗರತ್ನ, ಮೈಸೂರು

6 Responses

  1. Poornimasuresh says:

    ನೇಮ ನಿಷ್ಟೆ ಆಚಾರ ವಿಚಾರ ಒಂದು ಸುಸಂಸ್ಕೃತ ಕುಟುಂಬದ ವಿವರಣೆ ಗ್ರಾಮೀಣ ಪರಿಸರದಲ್ಲಿ ಅರ್ಚಕರ ದೇವಸ್ಥಾನದ ನಿರ್ವಹಣೆಯೊಣದಿಗೆ ಸಾಮಾಜಿಕ ಬದುಕಿನಲ್ಲಿಯೂ ದಿನನಿತ್ಯದ ಆಗು ಹೋಗುಗಳಲ್ಲಿ ಹಾಸುಹೊಕ್ಕಾಗಿ ಸಾಗುವ ಕೌಟುಂಬಿಕ ಸಂಭಂದಗಳು ಮನಮುಟ್ಟುವಂತಿವೆ. ನಿಮ್ಮ ಸಾಹಿತ್ಯ ಹೀಗೇ ಮುಂದುವರಿಯಲಿ.

  2. ಧನ್ಯವಾದಗಳು ಪೂರ್ಣಿಮಾ ಮೇಡಂ

  3. ನಯನ ಬಜಕೂಡ್ಲು says:

    Beautiful. ಉತ್ತಮ ಸಂದೇಶವಿದೆ ಈ ಭಾಗದಲ್ಲಿ.

  4. Padma Anand says:

    ತಾಯಿ ಮಗಳಂತಿರುವ ಭಾಗ್ಯ ಸೀತಮ್ಮನವರ ಸಂಬಂಧ ಮನಕ್ಕೆ ಮುದ ನೀಡುವಂತೆ ಲೇಖಕಿ ಕಟ್ಟಿಕೊಟ್ಟಿದ್ದಾರೆ. ಅಭಿನಂದನೆಗಳು.

  5. . ಶಂಕರಿ ಶರ್ಮ says:

    ಅಮ್ಮನಂತಹ ಅತ್ತೆ ಸಿಕ್ಕಿದ ಭಾಗ್ಯಳೇ ಭಾಗ್ಯವಂತಳು! ಸೊಗಸಾದ ಕಥೆ…ಧನ್ಯವಾದಗಳು ಮೇಡಂ.

  6. ಧನ್ಯವಾದಗಳು ನಯನ ಮೇಡಂ, ಪದ್ಮಾ ಮೇಡಂ ಹಾಗೂ ಶಂಕರಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: