ಕಾದಂಬರಿ: ನೆರಳು…ಕಿರಣ 12
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
ಇದೇನು ಮಕ್ಕಳ ಸದ್ದೇ ಇಲ್ಲವಲ್ಲ, ಏನು ಮಾಡುತ್ತಿದ್ದಾರೆಂದು ಹಾಗೇ ಅವರ ಕೋಣೆಯ ಕಡೆಗೆ ಕಣ್ಣು ಹಾಯಿಸಿದಳು . ಚಿಕ್ಕವರಿಬ್ಬರೂ ಒಂದೊಂದು ತುಂಡು ಬಟ್ಟೆಯನ್ನು ಕೈಯಲ್ಲಿ ಹಿಡಿದು ತದೇಕ ಚಿತ್ತದಿಂದ ಏನನ್ನೋ ಹೊಲಿಯುವುದರಲ್ಲಿ ಮಗ್ನರಾಗಿದ್ದರು. ದೊಡ್ಡವರಿಬ್ಬರೂ ಕೈಯಲ್ಲಿ ಪುಸ್ತಕ ಹಿಡಿದು ಓದುತ್ತಿದ್ದರು. ಸದ್ಯ ಅಪ್ಪನಂತೆ ಹಗಲಿನಲ್ಲಿ ಮಲಗುವ ಅಭ್ಯಾಸ ಇವರಿಗೆ ಬಂದಿಲ್ಲ ಎಂದುಕೊಂಡು ಒಳ ನಡೆದಳು. ಸಂಜೆಗೆ ಮಕ್ಕಳಿಗಾಗಿ ಏನಾದರೂ ಬಾಯಾಡಿಸಲು ಕೊಡೋಣವೆಂದು ಲಕ್ಷ್ಮಿ ಹಿಂದಿನ ದಿನ ತಂದಿದ್ದ ಹಣ್ಣುಗಳಿಂದ ಸ್ವಲ್ಪ ರಸಾಯನವನ್ನು ಮಾಡಲು ಆಲೋಚಿಸಿ ಊಟದ ಮನೆಯಲ್ಲಿಟ್ಟಿದ್ದ ಹಣ್ಣಿನ ಬುಟ್ಟಿಯನ್ನು ತೆಗೆದುಕೊಳ್ಳಲು ಒಳಹೋದಳು. ಅಲ್ಲಿ ಬುಟ್ಟಿ ಮಾತ್ರವಿತ್ತು. ಅದರಲ್ಲಿದ್ದ ಹಣ್ಣುಗಳು ಮಾಯ. ಎಲ್ಲಿಯಾದರೂ ಬೇರೆಕಡೆ ಇಟ್ಟಿದ್ದೆನಾ? ಅಥವಾ ಮಕ್ಕಳೇನಾದರೂ.. ಊಹುಂ, ಅವರು ನನ್ನನ್ನು ಕೇಳದೇ ಹಾಗೆಲ್ಲಾ ಮಾಡುವುದಿಲ್ಲ, ಹೀಗೆ ಯೋಚಿಸುತ್ತಿರುವಾಗ ಭಾಗ್ಯ ಅಲ್ಲಿಗೆ ಬಂದಳು.
“ಏನಮ್ಮಾ ಎನನ್ನೋ ಹುಡುಕಾಡುವಂತಿದೆ?” ಎಂದು ಕೇಳಿದಳು.
“ಭಾಗ್ಯಾನಾ, ಇಲ್ಲಿ ನೆನ್ನೆ ಹಣ್ಣುಗಳನ್ನಿಟ್ಟಿದ್ದೆ. ಕಾಣಿಸುತ್ತಿಲ್ಲ, ಬುಟ್ಟಿ ಮಾತ್ರವಿದೆ. ಎಲ್ಲಿಯಾದರೂ ತೆಗೆದಿಟ್ಟೆನಾ, ನೀನೇನಾದರೂ ನೋಡಿದೆಯಾ? ಅವನ್ನೆಲ್ಲ ಹಾಕಿ ಸ್ವಲ್ಪ ರಸಾಯನ ಮಾಡಿದರೆ ಒಳ್ಳೆಯದು ಎಂದುಕೊಂಡೆ. ಏಕೆಂದರೆ ನಿಮ್ಮಪ್ಪ ಕೇಶವಯ್ಯನವರ ಮನೆಯಿಂದ ನೇರವಾಗಿ ಮನೆಗೆ ಬಂದರೆ ಸರಿ, ಇಲ್ಲದಿದ್ದರೆ ತಡವಾಗುತ್ತೆ. ಸ್ನಾನ, ಸಂಧ್ಯಾವಂದನೆ, ಊಟ ಎಲ್ಲ ತಡವಾಗುತ್ತೆ. ಅದಕ್ಕೆ ಏನಾದರೂ ಸ್ವಲ್ಪ ಮಾಡಿಕೊಡೋಣವೆಂದು ಯೋಚಿಸಿದೆ. ಹಣ್ಣುಗಳು ನೆನಪಾದವು, ಆದರೆ ಇಲ್ಲಿ” ಎಂದಳು ಲಕ್ಷ್ಮಿ.
“ಅದಾ ಹೆದರಬೇಡಿ, ಅಲ್ಲಿದ್ದ ಹಣ್ಣುಗಳ ಜೊತೆ ನಮ್ಮ ಹಿತ್ತಲಿನಲ್ಲಿ ಬಿಟ್ಟಿದ್ದ ಪಪಾಯಿಹಣ್ಣು ಹಣ್ಣಾಗಿತ್ತು. ಒಂದೆರಡು ಸಪೋಟಗಳೂ ಬಿಟ್ಟಿದ್ದವು. ಎಲ್ಲದರ ಸಿಪ್ಪೆ ತೆಗೆದು ಸಣ್ಣಗೆ ಹಚ್ಚಿ ಅದಕ್ಕೆ ಸ್ವಲ್ಪ ಮೆಣಸು, ತುಸು ಉಪ್ಪು, ಸ್ವಲ್ಪ ಬೆಲ್ಲ ಎಲ್ಲವನ್ನೂ ಹಾಕಿ ಹೊಂದಿಕೊಳ್ಳುವಂತೆ ಕಲಸಿ ಇಟ್ಟಿದ್ದೇನೆ. ಹಣ್ಣುಗಳು ರಸಬಿಟ್ಟುಕೊಂಡು ಒಳ್ಳೆಯ ರುಚಿ ಬರುತ್ತದೆ. ನನ್ನ ಗೆಳತಿ ಲತಾಳ ಮನೆಯಲ್ಲಿ ಹೀಗೆ ಮಾಡುತ್ತಾರೆ. ನನಗೂ ಒಂದು ಸಾರಿ ಕೊಟ್ಟಿದ್ದಳು. ಅವರಮ್ಮನಿಂದ ಅದನ್ನು ಹೇಗೆ ಮಾಡುವುದೆಂದು ಕೇಳಿಕೊಂಡಿದ್ದೆ. ಇವತ್ತು ಅದರ ಪ್ರಯೋಗ ಮಾಡಿದ್ದೇನೆ”. ಎಂದು ಪಾತ್ರೆಯನ್ನು ಅಮ್ಮನ ಕೈಗೆ ಕೊಟ್ಟಳು. ಬಾಳೆ, ಪಪಾಯಿ, ಕಿತ್ತಳೆ, ಸಪೋಟ, ಎಲ್ಲ ಚೂರುಗಳು ಕಾಣಿಸುತ್ತಿದ್ದವು. ಸ್ವಲ್ಪ ರುಚಿನೋಡಿದಳು ಲಕ್ಷ್ಮಿ. ಇದೊಂದು ರೀತಿಯ ಹೊಸ ರುಚಿಯ ಸ್ವಾದ. ನಾಲಿಗೆಗೆ ಹಿತವಾಗಿತ್ತು. ಮಗಳ ಜಾಣ್ಮೆ ಬಗ್ಗೆ ಹೆಮ್ಮೆಯೆನ್ನಿಸಿತು. ಪ್ರಮಾಣ ಎಲ್ಲರಿಗೂ ಸಾಕಾಗುವಷ್ಟಿತ್ತು. “ಹೋಗಲಿ ಬಿಡು, ನಾನು ಮಾಡುವ ರಸಾಯನಕ್ಕಿಂತ ಬೇರೆ ತೆರನಾಗಿದೆ. ಬುದ್ಧಿ ಉಪಯೋಗಿಸಿ ಬುಟ್ಟಿಯಲ್ಲಿದ್ದವಕ್ಕೆ ಬೇರೆ ಹಣ್ಣುಗಳನ್ನೂ ಸೇರಿಸಿದ್ದೀ. ಸಂಜೆಯ ಉಪಯೋಗಕ್ಕೆ ದಾರಿಯಾಯಿತು. ಸಂಜೆಯ ಕಸಗುಡಿಸಿ ಕೈಕಾಲುಮುಖ ತೊಳೆದು ದೇವರ ದೀಪಕ್ಕೆ ಎಣ್ಣೆಹಾಕಿ, ಅಪ್ಪನ ಸಂಧ್ಯಾವಂದನೆಗೆ ಸಿದ್ಧಪಡಿಸು. ಆನಂತರ ನಿನ್ನ ತಂಗಿಯರನ್ನು ಕರೆದು ರಸಾಯನವನ್ನು ಹಂಚಿಕೊಟ್ಟು, ನೀನೂ ತಿನ್ನು ಮಗಳೇ. ಅಷ್ಟುಹೊತ್ತಿಗೆ ಅಪ್ಪ ಬಂದರೆ ಸರಿ, ಇಲ್ಲವಾದರೆ ಅವರಿಗೆ ಸ್ವಲ್ಪ ಎತ್ತಿಟ್ಟುಬಿಡು. ಊಟದ ಜೊತೆಯಲ್ಲಿ ತಿನ್ನುತ್ತಾರೆ ನೀನು ತಯಾರಿಸಿದ ಹೊಸರುಚಿಯನ್ನು.” ಎಂದು ಅವಳ ತಲೆ ಸವರಿ ರಾತ್ರಿಯ ಅಡುಗೆಯನ್ನು ತಯಾರಿಸಲು ಅಡುಗೆ ಕೋಣೆಯತ್ತ ಹೋದಳು ಲಕ್ಷ್ಮಿ.
ಅಮ್ಮನ ಆಣತಿಯಂತೆ ಭಾಗ್ಯ ಎಲ್ಲ ಕೆಲಸ ಮುಗಿಸಿ ತಂಗಿಯರನ್ನು ಕರೆದಳು. ಅಷ್ಟರಲ್ಲಿ ಭಟ್ಟರೂ ಬಂದರು. ಅದನ್ನು ಕಂಡು ಭಾಗ್ಯಳಿಗೆ ಸಂತಸವಾಯಿತು. ಹಿಗ್ಗಿನಿಂದ ಅಮ್ಮನಿಗೆ ಸುದ್ಧಿ ಮುಟ್ಟಿಸಿದಳು.
“ಒಳ್ಳೆಯದಾಯಿತು. ಅವರೂ ಕೈಕಾಲು ತೊಳೆದು ಬರುವಷ್ಟರಲ್ಲಿ ನೀನು ಮಾಡಿದ್ದನ್ನು ಎಲ್ಲರಿಗೂ ಸಮನಾಗಿ ಹಂಚಿಟ್ಟು ನೀನೂ ತೆಗೆದುಕೋ. ನಾನು ಹೇಳಿದ್ದಕ್ಕಿಂತಲೂ ನಿನ್ನಪ್ಪನ ಬಾಯಿಯಿಂದ ಗುಣಗಾನ ಕೇಳುವಿಯಂತೆ” ಎಂದಳು ಲಕ್ಷ್ಮಿ.
“ಅಮ್ಮಾ ನೀವೂ ನಮ್ಮ ಜೋಡಿ ಬನ್ನಿ, ಸ್ವಲ್ಪ ತಿನ್ನಿ” ಎಂದು ಒತ್ತಾಯಿಸಿದಳು ಭಾಗ್ಯ.
“ಬೇಡ, ನಾನು ಊಟ ಮುಗಿಸಿದಾಗಲೇ ಒಂದು ಬಾಳೆಹಣ್ಣನ್ನು ತಿಂದಿದ್ದೆ ಸಾಕು, ಈಗ ಅದರ ರುಚಿ ನೋಡಿದೆನಲ್ಲ,” ಎಂದು ಭಟ್ಟರನ್ನು ಕೇಶವಯ್ಯನವರು ಏನು ಹೇಳಿದರೆಂದು ಕೇಳಲು ಅವರ ಕೋಣೆಗೆ ಹೋದಳು.
ಬಟ್ಟೆ ಬದಲಾಯಿಸುತ್ತಿದ್ದ ಭಟ್ಟರು ಹೆಂಡತಿ ಬಂದದ್ದು ನೋಡಿ “ಲಕ್ಷ್ಮಿ, ನಾನು ಹೋದ ಸಮಯ ಸರಿಯಾಗಿತ್ತು. ಜೋಯಿಸರು ಪೂಜೆಮಾಡುವ ದೇವಸ್ಥಾನದ ಮತ್ತೊಬ್ಬ ಅರ್ಚಕರು ಅನಾರೋಗ್ಯದ ನಿಮಿತ್ತ ಬರಲಾಗದ್ದರಿಂದ ಕೇಶವಯ್ಯನವರಿಗೇ ಬರಲು ಹೇಳಿಕಳುಹಿಸಿದ್ದರಂತೆ. ಹೀಗಾಗಿ ಬೆಳಗ್ಗೆಯೇ ಹೋಗಿಬಂದರಂತೆ. ಈಗ ಸಂಜೆಗೂ ವಿಶೇಷ ಪೂಜೆಯಿದೆಯೆಂದು ಅದಕ್ಕೆ ಹೊರಡಲು ತಯಾರಾಗುತ್ತಿದ್ದರು. ನಾನು ಹೋಗಿದ್ದು ನೋಡಿ “ಭಟ್ಟರೇ ನಾನೇ ಸುಬ್ಬುವಿನ ಹತ್ತಿರ ಹೇಳಿಕಳುಹಿಸಬೇಕೆಂದಿದ್ದೆ., ಬನ್ನಿ ಮಗು ಭಾಗ್ಯಳನ್ನು ವಿಚಾರಿಸಿ ದಿನಾಂಕಗಳನ್ನು ಗುರುತು ಹಾಕಿಸಿದಿರಾ? ಹೇಗೆ”ಎಂದು ಕೇಳಿದರು. ನಾನು ಅವರಿಗೆ ಗುರುತು ಹಾಕಿದ್ದ ಚೀಟಿಯನ್ನು ಕೊಟ್ಟು “ಇದನ್ನು ನಿಮಗೆ ಕೊಡೋಣವೆಂದೇ ಬಂದೆ” ಎಂದೆ.
“ಸರಿ,ಎಂದು ಚೀಟಿಯನ್ನು ತೆಗೆದುಕೊಂಡು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಂಡರು. ಪೂಜೆ ಮುಗಿದಮೇಲೆ ನಾನು ಅವರನ್ನು ಮನೆಗೆ ಬಿಟ್ಟೇ ಹಿಂದಿರುಗುವುದು. ಆಗ ಇದನ್ನು ಅವರಿಗೆ ಕೊಟ್ಟು ಮಾತನಾಡಿಕೊಂಡು ಬರುತ್ತೇನೆ.” ಎಂದು ಹೇಳಿದರು. ಅಷ್ಟರಲ್ಲಿ ಜೋಯಿಸರ ಶಿಷ್ಯ ನಂಜುಂಡನ ಆಗಮನವಾಯಿತು. ಅವರು ಅತ್ತ ಹೋದರು. ನಾನು ರಾಧಮ್ಮನವರ ಹತ್ತಿರ ಒಂದೆರಡು ಮಾತನಾಡಿ ಇತ್ತ ಬಂದೆ” ಎಂದರು.
“ಒಳ್ಳೆಯದಾಯಿತು. ಕೈಕಾಲು ತೊಳೆದು ಬನ್ನಿ, ನಿಮ್ಮ ಮಗಳು ಹೊಸರುಚಿಯೊಂದನ್ನು ತಯಾರಿಸಿದ್ದಾಳೆ. ತಿಂದು ಸುಧಾರಿಸಿಕೊಂಡು ಆನಂತರ ಪೂಜೆ ಮಾಡುವಿರಂತೆ” ಎಂದು ಹೇಳಿದಳು ಲಕ್ಷ್ಮಿ.
“ಹೊಸಾ ರುಚೀನಾ? ಅದೇನು ಲಕ್ಷ್ಮೀ” ಎಂದು ಕೇಳಿದ ಭಟ್ಟರಿಗೆ “ನೀವೇ ತಿಂದು ಹೇಳುವಿರಂತೆ ಬನ್ನಿ” ಎಂದು ಕೋಣೆಯಿಂದ ಹೊರಬಂದಳು. ಲಕ್ಷ್ಮಿ. ಭಟ್ಟರಿಗೂ ಏನಾದರೂ ಸ್ವಲ್ಪ ಬೇಕೆನ್ನಿಸಿತ್ತು. ಹೀಗಾಗಿ ಹೆಚ್ಚು ಹೇಳಿಸಿಕೊಳ್ಳದೆ ಕೈಕಾಲು ತೊಳೆದು ಹಿತ್ತಲಲ್ಲಿದ್ದ ಪಡಸಾಲೆಯಲ್ಲಿ ಭಾಗ್ಯಳ ಸುತ್ತ ಕುಳಿತ ಮಕ್ಕಳೊಂದಿಗೆ ತಾವೂ ಸೇರಿಕೊಂಡರು. ಅಪ್ಪ ಬಂದು ಕುಳಿತಿದ್ದುದನ್ನು ನೋಡಿ ಭಾವನಾ “ಹಿಡಿಯಿರಿ ಅಪ್ಪಾ,” ಎಂದು ಒಂದು ದೊನ್ನೆಯನ್ನು ಅವರ ಕೈಗಿತ್ತಳು. “ತಿಂದು ನೋಡಿ” ಎಂದಳು. ಅವಳು ಕೊಟ್ಟ ದೊನ್ನೆಯನ್ನು ಕೈಯಲ್ಲಿ ಹಿಡಿದು ಅದರೊಳಗೆ ಏನಿದೆಯೆಂದು ಕಣ್ಣಾಡಿಸಿದರು. “ ಏ ! ಇದು ರಸಾಯನ. ಏನೋ ಹೊಸದೆನ್ನುವಂತೆ ಹೇಳಿದಳಲ್ಲಾ ಲಕ್ಷ್ಮಿ ಎಂದುಕೊಂಡೇ ಬಾಯಿಗೆ ಹಾಕಿಕೊಂಡು ರುಚಿ ನೋಡಿದರು. ಅದು ಎಂದಿನಂತಿರದೆ ಬೇರೆಯೇ ಇತ್ತು. ಕರಿಮೆಣಸಿನ ಘಾಟು, ಉಪ್ಪಿನ ರುಚಿ, ಬೆಲ್ಲದ ಪರಿಮಳ, ಏಲಕ್ಕಿಯ ಘಮ, ಹಿತವಾಗಿ ಮಿಳಿತವಾಗಿ ಹೊಸ ಬಗೆಯ ರುಚಿ ನಾಲಿಗೆಗೆ ಹತ್ತಿತು. “ಇದನ್ನು ಹೇಗೆ ಮಾಡಿದೆ ಮಗಳೇ?” ಎಂದು ಕೇಳಿದರು.
“ಅಪ್ಪ ಕೇಳುವುದನ್ನೇ ಕಾಯುತ್ತಿದ್ದಳೇನೋ ಎಂಬಂತೆ ಭಾಗ್ಯ ಉತ್ಸಾಹದಿಂದ ತಾನು ಸ್ನೇಹಿತೆಯ ತಾಯಿಯಿಂದ ಕೇಳಿದ್ದು, ಅದನ್ನು ಇಲ್ಲಿ ಪ್ರಯೋಗ ಮಾಡಿದ್ದು ಎಲ್ಲವನ್ನೂ ವಿವರಿಸಿ “ನಿಮಗೆ ಇಷ್ಟವಾಯಿತೇ?” ಎಂದು ಕೇಳಿದಳು.
“ಇಷ್ಟವಾಗದೇ ಏನು, ಮಾಮೂಲಿನಂತಿರದೆ ಬಹಳ ರುಚಿಯಾಗಿದೆ.” ಎಂದು ಬಾಯಿತುಂಬಾ ಹೊಗಳಿ ಖಾಲಿಯಾದ ದೊನ್ನೆಯನ್ನು ಅಲ್ಲಿಟ್ಟು ಕೈತೊಳೆದು ಅಲ್ಲಿಂದ ಹೊರಡುವುದಕ್ಕೂ ಮೊದಲೇ ಹೊರಗಡೆ ಬಸವ ಬಂದಿದ್ದಾನೆಂಬ ಸುದ್ಧಿ ಕೊಟ್ಟಳು ಲಕ್ಷ್ಮಿ .
“ಅರೆ ಬೆಳಗ್ಗೆ ಬರುತ್ತೇನೆಂದವ ಈಗ ಮತ್ತೆ ಈಗ, ಇನ್ಯಾರನ್ನಾದರೂ ಕರೆತಂದಿದ್ದಾನೇನೋ ಎಂದುಕೊಂಡು ಅಂಗಡಿಯ ಬೀಗದಕೈಯನ್ನು ಕೈಯಲ್ಲಿ ಹಿಡಿದೇ ಹೊರಬಂದರು ಭಟ್ಟರು. ಬಸವ ಮತ್ತವನ ಜೊತೆಯಲ್ಲಿ ಅವನಿಗೆ ಯಾವಾಗಲೂ ನೆರವಾಗುವ ದೋಸ್ತಿಗಳಿದ್ದರು. ಇವರ್‍ಯಾಕೆ ಎಂದು ಕೇಳುವ ಮೊದಲೇ ಬಸವ ಬಾಯಿಬಿಟ್ಟ.
“ಭಟ್ಟರೇ, ಬೆಳಗ್ಗೆ ಬರುತ್ತೇನೆಂದವ ಈಗಲೇ ಇವರನ್ನೂ ಕರೆದುಕೊಂಡು ಬಂದಿದ್ದಾನಲ್ಲಾ ಅಂದುಕೊಳ್ಳಬೇಡಿ. ಇವರಿಬ್ಬರಿಗೂ ನಾಳೆ ಬೇರೆಕಡೆ ಕೆಲಸವಿದೆಯಂತೆ. ಅದಕ್ಕೆ ಈವತ್ತೇ ಸಾಮಾನುಗಳನ್ನು ಅವರ ಮನೆಗೆ ತಲುಪಿಸಿ, ಶಾಮಿಯಾನಾ ಹಾಕಿಬಿಡೋಣಾಂತ. ಹಸಿರು ಚಪ್ಪರ ಅವರು ಹೇಳಿದಾಗಲೇ ಬೇರೆ ಇನ್ನೊಂದಿಬ್ಬರನ್ನು ಕರೆದುಕೊಂಡು ಹಾಕುವೆಯಂತೆ ಎಂದರು. ಅದನ್ನು ಅವರ ಮನೆಗೆ ಹೋಗಿ ಹೇಳಿದೆವು. ಅವರು ಆಯಿತು ಹಾಕಿಕೊಡಿ ಎಂದರು. ಅದಕ್ಕೇ ಈಗಲೇ ಬಂದುಬಿಟ್ಟೆವು”. ಎಂದನು. “ಅವರು ಕೊಟ್ಟಿದ್ದ ಸಾಮಾನುಗಳನ್ನು ತೆಗೆದಿಟ್ಟಿದ್ದೀರಾ? ಇಲ್ಲದಿದ್ದರೆ ನೀವು ಓದಿಹೇಳಿ ನಾವೇ ಜೋಡಿಸಿಡುತ್ತೇವೆ” ಎಂದು ಹೇಳಿದ ಬಸವ.
ಅವನ ಮಾತುಗಳನ್ನು ಕೇಳಿದ ಭಟ್ಟರಿಗೆ ಮನದಲ್ಲಿ ಬೆಳಗ್ಗೆ ನನ್ನ ಬೆನ್ನುಹತ್ತಿ ಎಲ್ಲವನ್ನೂ ಜೋಡಿಸಿ ಇಡಿಸಿದ್ದ ಹೆಂಡತಿಯ ಮುಂದಾಲೋಚನೆಗೆ ಭೇಷ್ ಎಂದುಕೊಂಡರು. ಹಾಗೇ ಬಸವನಿಗೆ “ಬಾ ನಾವೆಲ್ಲವನ್ನೂ ತೆಗೆದಿರಿಸಿದ್ದೇವೆ” ಎಂದು ಅಂಗಡಿಯ ಬಾಗಿಲು ತೆರೆದು ತೋರಿದರು.
“ವ್ಹಾ..ವೈನಾಯಿತು ಬಿಡಿ” ಎಂದು ಅವೆಲ್ಲವನ್ನೂ ತಾನು ತಂದಿದ್ದ ಗಾಡಿಗೆ ಗೆಳೆಯರ ಸಹಾಯದಿಂದ ಜೋಡಿಸಿಕೊಂಡು ಅವರಿಬ್ಬರಿಗೂ ಕೊಡುವ ಹಣವನ್ನು ಭಟ್ಟರಿಂದ ಕೇಳಿಪಡೆದು ಹೊರಡಲನುವಾದ. ಕೊಟ್ಟ ಸಾಮಾನುಗಳ ಇನ್ನೊಂದು ಪಟ್ಟಿಯನ್ನು ಕೈಲಿ ಹಿಡಿದು ಅಂಗಡಿಗೆ ಬೀಗಹಾಕಿ ಅಲ್ಲಿಂದ ಒಳಬಂದ ಭಟ್ಟರಿಗೆ ಲಕ್ಷ್ಮಿ ಎದುರಾದಳು. “ಈಗೇನು ಹೇಳ್ತೀರಾ ಭಟ್ಟರೇ? ಎಲ್ಲದಕ್ಕೂ ಅವಸರ ಮಾಡ್ತೀ ಅಂತೀರಲ್ಲಾ. ಬೆಳಗ್ಗೇನೆ ಅವನ್ನೆಲ್ಲ ಜೋಡಿಸಿ ಇಟ್ಟಿದ್ದಕ್ಕೆ ಜಟಪಟ್ ಕೆಲಸ ಮುಗಿಯಿತು.” ಎಂದಳು.
“ಆಯ್ತು ಮಾರಾಯ್ತೀ, ನಿನ್ನಷ್ಟು ಬುದ್ಧಿಮತ್ತೆ ನನಗೆ ಭಗವಂತ ಕೊಟ್ಟಿಲ್ಲ. ತಗೋ ಈಚೀಟಿ, ಅವರಿಗೆ ಕೊಟ್ಟು ಕಳುಹಿಸಿದ ಸಾಮಾನುಗಳ ಪಟ್ಟಿ. ಒಳಗಿಡು.” ಎಂದು ಅವಳ ಉತ್ತರಕ್ಕೂ ಕಾಯದೇ ಒಳನಡೆದರು ಭಟ್ಟರು. ಗಂಡನ ಮಾತಿಗೆ ಲಕ್ಷ್ಮಿಯೂ ಮತ್ತೆ ಕೆದಕದೆ ಅವರನ್ನು ಹಿಂಬಾಲಿಸಿದಳು.
ಮಾರನೆಯ ದಿನ ಭಟ್ಟರು ಸ್ನಾನಮುಗಿಸಿ ಪೂಜೆ ಮಾಡುತ್ತಿರುವಾಗಲೇ ಹೊರಗೆ “ಭಟ್ಟರೇ” ಎಂಬ ಕೂಗಿನೊಂದಿಗೆ ಬಸವ ಹಾಜರಾದ. ಸದ್ದು ಕೇಳಿದ ಲಕ್ಷ್ಮಿ ತಾನೇ ಬಾಗಿಲು ತೆರೆದು “ಏನಪ್ಪಾ ಎಲ್ಲಾ ಕೆಲಸ ಮುಗಿಸಿದೆಯಾ? “ಹೂನಮ್ಮಾ, ರಾತ್ರಿಯೇ ಶಾಮಿಯಾನ ಹಾಕಿಸಿದೆ. ಈಗ ಬೆಳಗ್ಗೆ ಚಪ್ಪರ ಕಟ್ಟಿಸಿ ಹೂವಿನ ಅಲಂಕಾರ ಮಾಡಿಮುಗಿಸಿ ಅದನ್ನು ಹೇಳಿಹೋಗುವಾಂತ ಬಂದೆ ಭಟ್ಟರು ಪೂಜೆ ಮಾಡ್ತಿದ್ದಾರಾ?” ಎಂದ ಬಸವ.
“ಹೂ ಇನ್ನೇನು ಮುಗಿಯುತ್ತಾ ಬಂತು. ನಿನಗೆ ಕಾಫಿ ಕೊಡಲಾ ಅಥವಾ ಕಷಾಯ ಕೊಡಲಾ” ಎಂದು ಕೇಳಿದಳು ಲಕ್ಷ್ಮಿ.
“ಏನೂ ಬೇಡ್ರಮ್ಮಾ, ಆ ಫಂಕ್ಷನ್ ಮಾಡ್ತಾವ್ರಲ್ಲಾ ಅವರ ಮನೆಯವರೇ ಬೇಡಾ ಅಂದ್ರೂ ಕಾಫಿ, ನಾಷ್ಟಾ ಎರಡೂ ಕೊಟ್ಟರು. ಇಕಾ ತಕ್ಕೊಳ್ಳಿ ಕಾಗದಾ, ನಿಮ್ಮ ಮನೇಗೆ ಬರುತ್ತಾ ಇದ್ದಾಗ ದಾರಿಯಲ್ಲಿ ಕೇಶವಯ್ಯಾವ್ರ ಮಗ ಸುಬ್ಬಣ್ಣ ಇದನ್ನು ನಿಮಗೆ ತಲುಪಿಸಲು ಹೇಳಿದರು.” ಎಂದು ಒಂದು ಪತ್ರವನ್ನು ಕೊಟ್ಟನು. “ಅವ್ವಾ ನಾನಿನ್ನು ಸಂಜೇಗೆ ಬಂದು ಕಾಣ್ತೀನಿ ಅಂತ ಭಟ್ಟರಿಗೆ ಹೇಳಿಬಿಡಿ” ಎಮದು ಬಸವ ಹೊರಟುಹೋದನು.
ಅವನನ್ನು ಕಳುಹಿಸಿ ಒಳಬರುವಷ್ಟರಲ್ಲಿ ಪೂಜೆಮಗಿಸಿ ಹೊರಬಂದ ಭಟ್ಟರು “ಬಸವ ಹೊರಟುಹೋದನಾ” ಎಂದು ಕೇಳಿದರು.
“ಹೂಂ, ನೀವು ಹೇಳಿದ್ದ ಕೆಲಸಗಳೆಲ್ಲವನ್ನೂ ಮುಗಿಸಿ ಕೊಟ್ಟಿದ್ದಾನಂತೆ. ಸಂಜೆಗೆ ಬಂದು ಕಾಣ್ತಾನಂತೆ” ಎಂದಳು ಲಕ್ಷ್ಮಿ.
“ಅದೇನು ಕೈಯಲ್ಲಿ ಕಾಗದ? ಬಸವ ಮತ್ತೇನಾದರೂ ಪಟ್ಟಿ ತಂದನಾ?” ಎಂದು ಕೇಳಿದರು ಭಟ್ಟರು.
ಇದನ್ನು ಸುಬ್ಬಣ್ಣ ಬಸವನ ಕೈಯಲ್ಲಿ ಕೊಟ್ಟು ಕಳುಹಿಸಿದನಂತೆ ಎಂದು ಹೇಳಿದರೆ ಇವರು ತಮ್ಮ ಪ್ರತಿಷ್ಠೆಗೆ ಕುಂದೆಂದುಕೊಳ್ಳುವ ಆಸಾಮಿ. ಇಲ್ಲದ ಉಪದ್ರವ ಏಕೆ ಎಂದುಕೊಂಡು “ಕೇಶವಣ್ಣ ಕಳುಹಿಸಿದ್ದಾರೆ. ನಾವಿಬ್ಬರೂ ಊಟವಾದನಂತರ ಅವರ ಮನೆಗೆ ಬರಬೇಕೆಂದು ಬರೆದಿದ್ದಾರೆ. ಬನ್ನಿ ಅಡುಗೆ ರೆಡಿಯಾಗಿದೆ. ಊಟವಾದಮೇಲೆ ಹೋಗಿ ಬಂದುಬಿಡೊಣ.” ಎಂದಳು ಲಕ್ಷ್ಮಿ.
“ಆಯಿತು, ಜೋಯಿಸರು ಏನು ಹೇಳಿದ್ದಾರೆ, ಯಾವಾಗ ಬರುತ್ತಾರೆ, ಹಾಗೇ ನಾವಂದುಕೊಂಡಿದ್ದನ್ನು ಅವರಿಗೆ ಹೇಳಿ ಬಂದುಬಿಡೋಣ ನಡಿ” ಎಂದು ಮುಂಭಾಗಿಲನ್ನು ಮುಚ್ಚಿ ಒಳಬಂದರು. ನಂತರ ದಂಪತಿಗಳು ಕಾಲಹರಣ ಮಾಡದೆ ಊಟಮುಗಿಸಿ ತಯಾರಾದರು. ಎಂದಿನಂತೆ ಮಕ್ಕಳಿಗೆ ಎಚ್ಚರಿಕೆ ಹೇಳಿ ಕೇಶವಯ್ಯನವರ ಮನೆಗೆ ಹೊರಟರು. ದಾರಿಯಲ್ಲಿ ಯಾರೊಬ್ಬರಿಗೂ ಮಾತಾಡುವ ಉಮೇದಿರಲಿಲ್ಲ. ಅವರ ಮನೆ ತಲುಪಿ ಕಾಲು ತೊಳೆದುಕೊಂಡು ಲಕ್ಷ್ಮಿಯೇ ಬಾಗಿಲು ತಟ್ಟಿದಳು. ಕಿಟಕಿಯಿಂದ ಗಮನಿಸಿ ಸುಬ್ಬು ಬಾಗಿಲು ತೆರೆದು “ಓ ಬಂದಿರಾ, ನಾನು ದಾರಿಯಲ್ಲಿ ಸಿಕ್ಕಿದನೆಂದು ಬಸವನ ಕೈಯಲ್ಲಿ ಪತ್ರ ಕೊಟ್ಟು ನಿಮಗೆ ತಲುಪಿಸಲು ಹೇಳಿದ್ದಕ್ಕೆ ಅಪ್ಪಯ್ಯನಿಂದ ಬೈಸಿಕೊಂಡೆ. ಸಾರೀ ಲಕ್ಷ್ಮಮ್ಮ.” ಎಂದು ಪಿಸುಗುಟ್ಟಿದ್ದನ್ನು ಕೇಳಿ ಲಕ್ಷ್ಮೀ ಮತ್ತೆ ವಿಷಯವನ್ನು ಭಟ್ಟರ ಮುಂದೆ ಹೇಳಬೇಡವೆಂದು ತಾನೂ ಪಿಸುದನಿಯಲ್ಲೇ ಹೇಳಿದಳು., ಅರಿತುಕೊಂಡ ಸುಬ್ಬು “ಬನ್ನಿ ಭಟ್ಟರೇ, ಅಪ್ಪಯ್ಯ ನಿಮಗಾಗಿ ಕಾಯುತ್ತಿದ್ದರು.” ಎಂದು ಅವರನ್ನು ಆಹ್ವಾನಿಸಿದ.
“ಬನ್ನಿ ಭಟ್ಟರೇ, ಲಕ್ಷ್ಮಮ್ಮ,” ಎಂದು ಅಲ್ಲಿಯೇ ಹಾಲಿನಲ್ಲಿ ಹಾಸಿದ್ದ ಜಮಖಾನೆಯ ಮೇಲೆ ಗೋಡೆಗೊಂದು ದಿಂಬನ್ನಿರಿಕೊಂಡು ಅರ್ಧಶಯನಾವಸ್ಥೆಯಲ್ಲಿ ಕುಳಿತಿದ್ದ ಕೇಶವಯ್ಯನವರು ತಮ್ಮ ಭಂಗಿಯನ್ನು ಸರಿಪಡಿಸಿಕೊಂಡು ಕುಳಿತರು. “ನೀವು ಬರೆದುಕೊಟ್ಟಿದ್ದ ದಿನಾಂಕಗಳನ್ನು ಪರಿಶೀಲಿಸಿದ ಜೋಯಿಸರು ತುಂಬ ಸಂತೋಷಪಟ್ಟರು. ಅವರಿಗೂ ಆ ದಿನಾಂಕಗಳು ತುಂಬ ಪ್ರಶಸ್ತವಾಗಿವೆ ಎಂದುಕೊಂಡಿದ್ದರಂತೆ. ಅವುಗಳಲ್ಲಿ ಒಂದನ್ನು ಖಚಿತಪಡಿಸಿದ್ದಾರೆ, ಈ ಭಾನುವಾರ ಬಹಳ ಒಳ್ಳೆಯದಿನ ನಮ್ಮ ಕಡೆಯಿಂದ ಹತ್ತುಜನ ಬರುತ್ತೇವೆಂದು ತಿಳಿಸಿಬಿಡಿ. ಇನ್ನು ಅವರ ಕಡೆಯ ಕೆಲವರು ಹಿರಿಯರು, ಆಪ್ತೇಷ್ಟರನ್ನು ಕರೆದುಬಿಟ್ಟರೆ ಲಗ್ನಪತ್ರಿಕೆಯನ್ನು ಬರೆಸೇಬಿಡೋಣ. ಮತ್ಯಾತಕ್ಕೆ ಮನೆಗೊಂದು ಸಾರಿ ಬಂದು ಹೋಗುವುದು. ಇವತ್ತಿನ್ನೂ ಮಂಗಳವಾರ ಸಿದ್ಧತೆ ಮಾಡಿಕೊಳ್ಳಲಿ. ಜೈ ಅನ್ನಿಸಿಬಿಡೊಣ. ಎಂದು ಹೇಳಿದರು. ಇದೇನು ದಂಪತಿಗಳು ಬೊಂಬೆಗಳ ಹಾಗೆ ಕುಳಿತುಬಿಟ್ಟಿದ್ದೀರಲ್ಲ. ಹೇಳಿ ನಿಮಗೆ ಈ ವ್ಯವಸ್ಥೆ ಒಪ್ಪಿಗೆಯೇ?” ಎಂದು ಪ್ರಶ್ನಿಸಿದರು.
ಲಕ್ಷ್ಮಿ ಮತ್ತು ಭಟ್ಟರ ಮುಖಗಳು ಆನಂದದಿಂದ ಅರಳಿದವು. “ಕೇಶವಣ್ಣಾ, ದೇವರು ದೊಡ್ಡವನು, ಜೋಯಿಸರ ಮನೆಯವರು ನಮ್ಮ ಮನೆಗೆ ಬಂದಾಗ ನಾವೇ ಒಂದುದಿನ ಗೊತ್ತುಮಾಡಿ ಹೀಗೆ ಮಾಡೋಣವೆಂದು ಅವರನ್ನು ಕೇಳಿಕೊಳ್ಳೋಣವೆಂದು ಆಲೋಚಿಸಿದ್ದೆವು. ಸಮಸ್ಯೆ ಮೊದಲೇ ನಿವಾರಣೆಯಾಗಿಬಿಟ್ಟಿತು. ಆದರೆ ಅವರು ನಮ್ಮ ಮನೆಯನ್ನು ಬಂದು ನೋಡಿದ ಹಾಗೆ ಆಗಲಿಲ್ಲವಲ್ಲಾ ಅಂತ ಬೇಸರವಷ್ಟೇ.” ಎಂದರು.
“ಅವರೇ ಮುದ್ದಾಂ ಹೇಳಿಕಳುಹಿಸಿರುವಾಗ ಇಲ್ಲದ ಚಿಂತೆ ನಿಮಗ್ಯಾಕೆ. ಮುಂದಿನ ತಯಾರಿಗಳ ಕಡೆಗೆ ಆಲೋಚಿಸಿ” ಎಂದರು ಕೇಶವಯ್ಯ.
ನಮ್ಮ ಮಾವನವರ ಮನೆಯವರು, ಇವರ ಚಿಕ್ಕಪ್ಪಂದಿರ ಮನೆಯವರು ಅಷ್ಟೇ. ಅಕ್ಕಪಕ್ಕದವರು. ಇವತ್ತೇ ಹೇಳಿ ಕಳುಹಿಸುತ್ತೇವೆ. ನಮ್ಮ ಮನೆಯಲ್ಲೇ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಊಟತಿಂಡಿಯದು ಚಿಂತೆಯಿಲ್ಲ. ನಮ್ಮ ಮಾವನವರಿಗೆ ಹೇಳಿಬಿಟ್ಟರಾಯಿತು. ಅವರ ಸಿಬ್ಬಂದಿವರ್ಗದ ಸಹಾಯದಿಂದ ಏರ್ಪಾಡು ಮಾಡಿಕೊಡುತ್ತಾರೆ. ಇನ್ನು ಪೂಜೆ, ಆಚರಣೆಗಳಿಗೆ ಮಾರ್ಗದರ್ಶನ ನೀಡಲು ನೀವಿದ್ದೀರಿ. ಎಲ್ಲದ್ದಕ್ಕೂ ನಿಮ್ಮನ್ನು ಎಳೆಯುತ್ತೇವೆಂದು ದಯವಿಟ್ಟು ಬೇಸರ ಪಟ್ಟುಕೊಳ್ಳಬೇಡಿ. ನಿಮಗೆ ಜೋಯಿಸರ ಮನೆಯವರ ರೀತಿ ರಿವಾಜು, ಸಂಪ್ರದಾಯಗಳ ಪರಿಚಯವಿದೆ.” ಎಂದು ದಂಪತಿಗಳಿಬ್ಬರೂ ಕೈಜೋಡಿಸಿ ನಮಸ್ಕರಿಸಿದರು.
“ಆಯಿತು ಅಷ್ಟೊಂದು ಅಂಜಲೀಬದ್ಧರಾಗಿ ಬೇಡಿಕೊಳ್ಳಬೇಕಿಲ್ಲ. ಮಾಡಿಕೊಟ್ಟರಾಯಿತು. ಅತಿಯಾಗಿ ಜನಜಂಗುಳಿ ಮಾಡಿಕೊಳ್ಳಲು ಹೋಗಬೇಡಿ” ಎಂದು ತಾಕೀತು ಮಾಡಿದರು ಕೇಶವಯ್ಯ.
“ಅಣ್ಣಾ, ಇನ್ನೊಂದು ವಿಷಯ, ಈಗಲೇ ಹೇಳಿದರೆ ಒಳ್ಳೆಯದೆಂದು ನನ್ನ ಭಾವನೆ” ಎಂದಳು ಲಕ್ಷ್ಮಿ.
ಏನೆಂದು ಭಟ್ಟರು ಕೇಳಿದರು. “ಅದೇರೀ ಕಲ್ಯಾಣ ಮಂಟಪದ ವ್ಯವಸ್ಥೆಯ ಬಗ್ಗೆ ನಾವು ನಮ್ಮಲ್ಲಿ ಮಾತಾಡಿಕೊಂಡೆವಲ್ಲಾ ಅದು” ಎಂದಳು.
“ಹೌದಲ್ಲವಾ? ಕೇಶವಣ್ಣನವರೇ ಆದಿನ ಜೋಯಿಸರ ಮುತ್ತಾತನವರು ಕಟ್ಟಿಸಿದ ಕಲ್ಯಾಣ ಮಂಟಪದ ಬಗ್ಗೆ ಹೇಳಿದ್ದು. ನೀವೂ ಸಹಿತ ಅದರ ವಿಚಾರ ತಿಳಿಸಿದಿರಿ. ಯೋಚನೆಮಾಡಿದ ನಂತರ ನಮಗನ್ನಿಸಿದ್ದು ಮದುವೆಯ ದಿನದ ಎಲ್ಲಾ ವ್ಯವಸ್ಥೆಯನ್ನೂ ಮಂಟಪದವರಿಗೇ ವಹಿಸಿಕೊಟ್ಟರೆ ಹೇಗೆ, ನಮಗೆ ಧಾವಂತ, ಆತಂಕ ತಪ್ಪುತ್ತದೆ ಎನ್ನಿಸಿತು, ಆದರೆ ನಮಗೆ ಬೇಕಾದ ದಿನದಂದು ಕಲ್ಯಾಣ ಮಂಟಪವು ಖಾಲಿಯಿರಬೇಕಲ್ಲಾ ಎಂಬ ಚಿಂತೆಯೂ ಮೂಡಿತು.” ಎಂದರು ಭಟ್ಟರು.
“ಲಗ್ನ ನಿಶ್ಚಿತಾರ್ಥವಾದಮೇಲೆ ಜೋಯಿಸರನ್ನೇ ಮುಂದಿಟ್ಟುಕೊಂಡು ಹೋಗಿ ಬರೋಣ.” ಎಂದರು ಕೇಶವಯ್ಯ.
“ಸರಿ, ನಾವಿನ್ನು ಬರುತ್ತೇವೆ” ಎಂದು ಎದ್ದರು ಭಟ್ಟರು, ಲಕ್ಷ್ಮಿ
“ಏನಾದರೂ ಬೇಕಿದ್ದರೆ ಕೇಳಿ” ಎಂದು ಹೇಳುತ್ತಾ ರಾಧಮ್ಮ ಲಕ್ಷ್ಮಿಗೆ ಕುಂಕುಮವಿತ್ತು ಬೀಳ್ಕೊಟ್ಟರು.
ಕೇಶವಯ್ಯನವರ ಮನೆಯಿಂದ ಹೊರಟ ದಂಪತಿಗಳ ಮನಸ್ಸು ಮುದಗೊಂಡಿತ್ತು. ಭಾನುವಾರದ ಕಾರ್ಯಕ್ರಮಕ್ಕೆ ಹೇಗೆ ತಯಾರಿ ಮಾಡಿಕೊಳ್ಳಬೇಕೆಂದು ಲೆಕ್ಕಾಚಾರ ಹಾಕತೊಡಗಿದರು.
ಮೊದಲಿಗೆ ಭಟ್ಟರು “ಲಕ್ಷ್ಮೀ ಮನೆಗೆಹೋಗಿ ಮಕ್ಕಳಿಗೆ ವಿಷಯ ತಿಳಿಸಿದ ನಂತರ ಈಗಲೇ ನಿಮ್ಮ ಸೋದರಮಾವನ ಮನೆ, ನಮ್ಮ ಚಿಕ್ಕಪ್ಪಂದಿರ ಮನೆಗಳಿಗೆ ವಿಷಯ ತಿಳಿಸಿ ಅವರನ್ನು ಆ ದಿನದಂದು ಬರುವಂತೆ ಆಹ್ವಾನಿಸಿ ಬಂದುಬಿಡೋಣ. ಏನಂತೀಯೆ?” ಎಂದರು.
“ಹ್ಹ..ಹ್ಹ.. ಈ ಉರಿಬಿಸಿಲಿನಲ್ಲಿ ಅವರು ಊಟಮಾಡಿ ಮಲಗಿರುತ್ತಾರೆ. ನಾಲಕ್ಕು ಗಂಟೆಮೇಲೆ ಹೋಗೋಣ. ಮೊದಲು ನಿಮ್ಮ ಚಿಕ್ಕಪ್ಪಂದಿರಿಗೆ ಹೇಳೋಣ, ನಂತರ ನಮ್ಮ ಮಾವನವರಿಗೆ ತಿಳಿಸೋಣ. ನಮ್ಮ ಮಾವನ ಮನೆಗೆ ಹೋದಾಗ ಅವರಿಂದೇನೇನು ಏರ್ಪಾಡುಗಳು ಮಾಡಿಕೊಡಲು ಸಾಧ್ಯ ಎಂಬುದನ್ನು ಕೇಳೋಣ. ಸಂಜೆ ಬಸವ ಬರುತ್ತೇನೆಂದು ಹೇಳಿದ್ದಾನೆ ಅವನೇನಿದ್ದರೂ ಎಂಟರ ನಂತರವೇ ಬರುವುದು. ಅವನಿಗೆ ಒಂದಿಬ್ಬರು ಸಹಾಯಕರನ್ನು ತೆಗೆದುಕೊಂಡು ನಮ್ಮ ಮನೆಯ ಧೂಳುದುಂಬು ತೆಗೆದು, ಹಿತ್ತಲ ಗಿಡಗಳನ್ನು ಸವರಿಕೊಟ್ಟರೆ ಸಾಕು. ನಂತರ ಬಣ್ಣಸುಣ್ಣ ನೋಡಿಕೊಂಡರಾಯಿತು. ಆಗದೇ” ಎಂದು ಕೇಳಿದಳು ಲಕ್ಷ್ಮಿ.
“ಆಯಿತು ಲಕ್ಷ್ಮಿ ಹಾಗೇ ಮಾಡೋಣ, ಕೇಶವಯ್ಯನವರಿಂದ ಪುಜಾಕಾರ್ಯಗಳಿಗೆ ಏನೇನು ಬೇಕೋ ಕೇಳಿಕೊಂಡು ನಾವೇ ತಂದುಕೊಡುವುದೋ, ಅಥವಾ ಅವರೇ ತರುತ್ತಾರೋ ಕೇಳಿ ನೋಡಬೇಕು. ಕೊನೇ ಗಳಿಗೆಯವರೆಗೆ ಪರದಾಡುವುದು ಬೇಡ. ಅದೆಲ್ಲಾ ಸರಿ ಲಕ್ಷ್ಮಿ, ನಾವು ಹುಡುಗನಿಗೆ ಈಗ ಉಂಗುರ ಕೊಡಬೇಕಲ್ಲಾ, ಎರಡುಮೂರು ದಿನದೊಳಗೆ ಹೇಗೆ ಮಾಡಿಸುವುದು. ಹಾ ! ನನ್ನದೇ ಒಂದು ಹೊಸ ಉಂಗುರವಿದೆಯಲ್ಲ, ಅಪ್ಪ ತೀರಿಹೋಗುವ ಮುನ್ನ ಇದ್ದಕ್ಕಿದ್ದಂತೆ ನನಗೆ ತಿಳಿಸದೇ ಮಾಡಿಸಿಕೊಂಡು ಬಂದಿದ್ದರು. ಒಳ್ಳೆಯ ದಿನ ಹಾಕಿಕೋ ಈಗ ಬೇಡವೆಂದು ಎತ್ತಿಟ್ಟಿದ್ದರು. ಅವರೇ ಕೆಲವೇ ದಿನದಲ್ಲಿ ಹೋಗಿಬಿಟ್ಟರು. ನಾನದನ್ನು ಹಾಕಿಕೊಳ್ಳಲೇ ಇಲ್ಲ. ಅದೇಕೋ ಅದನ್ನು ತೊಡಲು ಮನಸ್ಸೇ ಬರಲಿಲ್ಲ. ಹಾಗೇ ಇದೆ “ ಎಂದರು.
“ಹೌದು ಅದು ನನಗೂ ಗೊತ್ತು. ಮನಸ್ಸಿಗೂ ಬಂತು. ಅದು ನಿಮ್ಮದಲ್ಲವಾ, ಮಾವನವರು ಇಷ್ಟಪಟ್ಟು ಮಾಡಿಸಿದ್ದರು. ಬಿಡಿ ಅದರ ಬಗ್ಗೆ ಭಾವುಕರಾಗುವುದು ಬೇಡ. ಆ ಉಂಗುರ ಹಾಗೇ ಇರಲಿ. ಮಾವನವರದ್ದು, ಅತ್ತೆಯವರದ್ದು, ಅಜ್ಜಿ ತಾತ ಎಲ್ಲರದ್ದೂ ಹಳೆಯ ಉಂಗುರಗಳಿವೆ. ಅವುಗಳಲ್ಲಿ ಯಾವುದಾದರೊಂದನ್ನು ತೂಕ ಹಾಕಿಸಿ ಕೊಟ್ಟು ರೆಡಿಮೇಡ್ ಉಂಗುರವೊಂದನ್ನು ತಂದರಾಯಿತು.” ಎಂದಳು ಲಕ್ಷ್ಮಿ.
“ಬೇಡ ಲಕ್ಷ್ಮಿ, ಹೊಸ ಉಂಗುರವನ್ನೇ ಕೊಟ್ಟುಬಿಡೋಣ. ನನಗೆ ಅದರ ಆವಶ್ಯಕತೆಯಿಲ್ಲ. ಜೊತೆಗೆ ಹರಳಿಲ್ಲದೆ ಬರೀ ಚಿನ್ನದಲ್ಲಿ ಸುತ್ತಿಸಿರುವುದು. ಯಾವ ಬಣ್ಣದ ಹರಳು ಯಾರ ಹೆಸರಿಗೆ ಆಗಿಬರುತ್ತದೆಯೋ ಎಂಬ ಜಂಝಾಟವಿಲ್ಲ.” ಎಂದರು ಭಟ್ಟರು.
ಹಿರಿಯರಿಲ್ಲದ ಮನೆ ಎಂದು ತಿಳಿದು ನೀನೇ ನಮ್ಮ ಬೆನ್ನಹಿಂದೆ ನಿಂತು ಸಹಕರಿಸುತ್ತಿದ್ದೀಯಲ್ಲ ದೇವರೇ, ನಿನಗೆ ಕೋಟಿಕೋಟಿ ನಮಸ್ಕಾರಗಳು. ಎಂದು ಮನಸ್ಸಿನಲ್ಲೇ ಆ ಅಂತರ್ಯಾಮಿಗೆ ವಂದಿಸಿದ ಲಕ್ಷ್ಮಿ “ಸರಿ, ಹಾಗೆ ಮಾಡೋಣ ಬಿಡಿ” ಎಂದಳು. ಮನೆ ತಲುಪಿದ ದಂಪತಿಗಳು ಮಕ್ಕಳನ್ನು ಕೂಗಿ ಬಾಗಿಲು ತೆರೆಸಿಕೊಂಡು ಒಳಹೊಕ್ಕರು. ಕೈಕಾಲು ತೊಳೆದು ಬಂದ ಭಟ್ಟರು ‘ಲಕ್ಷ್ಮಿ, ಈಗಿನ್ನೂ ಹನ್ನೆರಡೂವರೆ, ಸ್ವಲ್ಪ ಹೊತ್ತು ಮಲಗಬಹುದೇ?” ಎಂದು ಕೇಳಿದರು.
‘ಆಹಾ ಪ್ರತಿದಿನ ನನ್ನನ್ನು ಕೇಳಿಯೇ ಮಲಗುತ್ತೀರಾ ಭಟ್ಟರೇ?” ಎಂದು ಛೇಡಿಸಿದಳು ಲಕ್ಷ್ಮಿ.
“ಹಾಗೇನಿಲ್ಲ, ಇವತ್ತು ಬೇರೆ ಕಾರ್ಯಕ್ರಮ ಹಾಕಿಕೊಂಡಿದ್ದೇವಲ್ಲ, ಎಚ್ಚರತಪ್ಪಿ ಮಲಗಿಬಿಟ್ಟೇನೆಂಬ ಅಂಜಿಕೆ. ಮೊದಲೇ ಹೇಳಿದ್ದರೆ ನೆನಪಿನಿಂದ ಎಬ್ಬಿಸುತ್ತೀಯೆಂಬ ನಂಬಿಕೆ ನನ್ನ ಜಾಣ ಅರ್ಧಾಂಗಿ” ಎಂದು ನಗುತ್ತಾ ತಮ್ಮ ಕೊಣೆ ಹೊಕ್ಕರು ಭಟ್ಟರು. ಗಂಡ ಹೇಳಿದ್ದನ್ನು ಕೇಳಿಸಿಕೊಂಡ ಲಕ್ಷ್ಮಿ ಈಗ ಸ್ವಲ್ಪ ಹೊತ್ತಿನ ಮೊದಲು ಅತ್ಯಂತ ಭಾವುಕರಾಗಿ ಮಾತನಾಡಿದ ಮನುಷ್ಯನೇ ಇವರು ! ಆ ತಕ್ಷಣಕ್ಕೆ ಮುಗಿಸಿಬಿಡುತ್ತಾರೆ. ಇನ್ನು ಇವರ ನಿದ್ರಾ ದಿನಚರಿ, ಅಬ್ಬಾ ! ಆ ಕುಂಭಕರ್ಣ ಇವರಿಗೆ ಚೆನ್ನಾಗಿ ಆಶೀರ್ವಾದ ಮಾಡಿ ಕಳಿಸಿದ್ದಾನೆ. ಕೆಟ್ಟವರೇನಲ್ಲ ಹೇಗೋ ಹೆಗಲೆಣೆಯಾಗಿ ನಿಲ್ಲುತ್ತಿದ್ದಾರಲ್ಲ , ಅಷ್ಟು ಸಾಕು. ಎಂದುಕೊಂಡು ತಾನೂ ಕೈಕಾಲು ತೊಳೆದುಕೊಂಡು ಮಕ್ಕಳಿದ್ದ ಕೋಣೆಗೆ ಬಂದಳು ಲಕ್ಷ್ಮಿ. ಅಮ್ಮನನ್ನು ನೋಡಿ ಭಾಗ್ಯ “ಏನಮ್ಮಾ ಸಮಾಚಾರ?” ಎಂದು ತಾನೇ ಮುಂದಾಗಿ ತಾಯಿಯನ್ನು ಪ್ರಶ್ನಿಸಿದಳು.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35113
(ಮುಂದುವರಿಯುವುದು)
–ಬಿ.ಆರ್,ನಾಗರತ್ನ, ಮೈಸೂರು
ನಿಮ್ಮಬರವಣಿಗೆ ಯಲ್ಲಿ ನೈಜತೆ ವಾಸ್ತವಿಕತೆ ನನಗೆ ಮೆಚ್ಚಿಗೆ. ಲೇಖನಗಳು ಮನಸ್ಸಿಗೆ ಮುಟ್ಟುವಂತಿದ್ದಾಗಲೇ ಓದಲು ಚೆನ್ನ. ನಿಮ್ಮ ಸಾಹಿತ್ಯಿಕ ಚಟುವಟಿಕೆಗಳು ಹೀಗೇ ನಿರಂತರವಾಗಿ ಸಾಗಲಿ. ಶು ಭವೀಗಲಿ
ಶುಭವಾಗಲಿ
ಧನ್ಯವಾದಗಳು ಪೂರ್ಣಿಮಾ ಮೇಡಂ
ಆಪ್ತ ಅನ್ನಿಸುವ ರೀತಿ ಸಾಗುತ್ತಿರುವ ಕಥೆ
ಧನ್ಯವಾದಗಳು ನಯನ ಮೇಡಂ
ಬಾಯಲ್ಲಿ ನೀರೂರಿಸುವ ರಸಾಯನದಂತೆಯೇ ರಸಭರಿತವಾಗಿ ಮುದನೀಡುತ್ತಾ ಓದಿಸಿಕೊಳ್ಳುತ್ತಿದೆ ‘ನೆರಳು’ ಕಾದಂಬರಿ.
ಧನ್ಯವಾದಗಳು ಪದ್ಮಾ ಮೇಡಂ
ಭಾಗ್ಯ ಮಾಡಿದ ಹೊಸ ಬಗೆಯ ರಸಾಯನ ಬಹಳ ಸ್ವಾದಿಷ್ಟವಾಗಿದೆ ಅನ್ನಿಸಿದೆ..ನಾನೂ ಪ್ರಯೋಗ ಮಾಡ್ತೇನೆ! ಚಂದದ ಧಾರಾವಾಹಿ… ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ