ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 7

Share Button

ಕೋಟೇಶ್ವರ ಮಹಾದೇವ ಮಂದಿರ

ಪ್ರಯಾಣ ಮುಂದುವರಿದು, ಅರಬೀ ಸಮುದ್ರದ ತೀರದಲ್ಲಿರುವ ಕೋಟೇಶ್ವರ ಮಂದಿರ ತಲಪಿದೆವು. ಹಳದಿ ಬಣ್ಣದ ಮರಳುಕಲ್ಲುಗಳಿಂದ ಕಟ್ಟಲಾದ, ಕಛ್ ವಾಸ್ತುವಿನ್ಯಾಸದ ಸೊಗಸಾದ ಮಂದಿರವಿದು. ಈಗ ಇರುವ ದೇವಾಲಯವನ್ನು ಸುಂದರ್ ಜಿ ಮತ್ತು ಜೇಠಾ ಶಿವ್ ಜಿ   ಎಂಬವರು 1820 ರಲ್ಲಿ ಕಟ್ಟಿಸಿದರಂತೆ. 7ನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ಕೊಟ್ಟ ಚೀನೀ ಬೌದ್ದ ಸನ್ಯಾಸಿಯಾದ ಹ್ಯೂವೆನ್ ತ್ಸಾಂಗ್ ನು,   ಈ ದೇವಾಲಯದ ಅಸ್ತಿತ್ವದ ಬಗ್ಗೆ ಬರೆದಿದ್ದಾನೆ.

ಕೋಟೇಶ್ವರ ಮಹಾದೇವ ಮಂದಿರ, ಗುಜರಾತ್

ಸ್ಥಳಪುರಾಣದ ಪ್ರಕಾರ,  ರಾವಣನು ಶಿವನನ್ನು ಕುರಿತು ತಪಸ್ಸು ಮಾಡಿ ‘ಆತ್ಮಲಿಂಗ’ವನ್ನು ಪಡೆಯುತ್ತಾನೆ. ಆದನ್ನು ಎಲ್ಲಿಯೂ ನೆಲಕ್ಕೆ ಸ್ಪರ್ಶಿಸಬಾರದು ಎಂದು ಶಿವನು  ಎಚ್ಚರಿಕೆ ಕೊಟ್ಟದ್ದನು.  ಲಂಕೆಗೆ ಆತ್ಮಲಿಂಗವನ್ನು ಒಯ್ಯುವಾಗ ರಾವಣನು ಅಜಾಗರೂಕತೆಯಿಂದ  ಆಕಸ್ಮಿಕವಾಗಿ ಆತ್ಮಲಿಂಗವನ್ನು ಈ ಸ್ಥಳದಲ್ಲಿ ಇರಿಸಿದ. ಕುಪಿತನಾದ ಶಿವನು, ಸಹಸ್ರಾರು ಶಿವಲಿಂಗಗಳನ್ನು ಸೃಷ್ಟಿಸಿದ.  ರಾವಣನಿಗೆ ಮೂಲ ಶಿವಲಿಂಗ ಯಾವುದೆಂದು ಗೊತ್ತಾಗದೆ, ಯಾವುದೋ ಒಂದು ಶಿವಲಿಂಗವನ್ನು ಎತ್ತಿಕೊಂಡು ಲಂಕೆಗೆ ಹೊರಡುತ್ತಾನೆ. ಮೂಲ ಆತ್ಮಲಿಂಗ ಇಲ್ಲಿಯೇ ಉಳಿದುಕೊಳ್ಳ್ಳುತ್ತದೆ. ಇದೇ ಜಾಗದಲ್ಲಿ ಪ್ರಸ್ತುತ  ಕೋಟೇಶ್ವರ ಮಹಾದೇವ ಮಂದಿರವಿದೆ.

ಕೋಟೇಶ್ವರ ಮಹಾದೇವ

ಕೋಟೇಶ್ವರ ದೇವಾಲಯದಿಂದ ಸ್ವಲ್ಪ ದೂರದಲ್ಲಿ ‘ನಾರಾಯಣ ಸರೋವರವಿದೆ’ .  ಈಗಿನ  ಕಛ್ ಜಿಲ್ಲೆಯ ‘ಕೋರಿ ಕ್ರೀಕ್ ‘ ನಲ್ಲಿರುವ ಈ ಸರೋವರದ ಬಗ್ಗೆ ಭಾಗವತದಲ್ಲಿ ಉಲ್ಲೇಖವಿದೆ. ಹಿಮಾಲಯದಲ್ಲಿರುವ ಮಾನಸ ಸರೋವರ, ಗುಜರಾತ್ ನ ಕಛ್ ನಲ್ಲಿರುವ ‘ನಾರಾಯಣ ಸರೋವರ’ ಮತ್ತು ಸಿಧುಪುರ್ ನಲ್ಲಿರುವ ‘ಬಿಂದು ಸರೋವರ’ , ರಾಜಸ್ಥಾನದಲ್ಲಿರುವ ‘ಪುಷ್ಕರ’ ಮತ್ತು ಕರ್ನಾಟಕದ  ಆನೆಗುಂಡಿಯಲ್ಲಿರುವ ‘ಪಂಪಾ’ ಸರೋವರ ಇವು ಭಾಗವತದಲ್ಲಿ ಹೆಸರಿಸಲಾದ ಪಂಚ ಸರೋವರಗಳು.

 

ನಾರಾಯಣ ಸರೋವರ, ಕಛ್

ಕ್ರಿಸ್ತಪೂರ್ವ 326 ನೇ ಇಸವಿಯಲ್ಲಿ ಭಾರತಕ್ಕೆ ದಂಡೆತ್ತಿಕೊಂಡು ಬಂದಿದ್ದ ಅಲೆಕ್ಸಾಂಡರ್ ನು ಕೂಡ ಈ ವಿಶಾಲವಾದ ಸರೋವರದ ಬಗ್ಗೆ ಹೇಳಿಕೊಂಡಿದ್ದನಂತೆ. ಆ ಕಾಲದಲ್ಲಿ ಸರೋವರದಲ್ಲಿ ತುಂಬಾ ನೀರಿತ್ತಂತೆ. ಕಾಲಾನಂತರ  ಸಿಂಧೂ ನದಿಯ ಹರಿವಿನಲ್ಲಾದ  ಬದಲಾದಣೆ ಮತ್ತು ಭೂಕಂಪಗಳಿಂದಾಗಿ  ಸರೋವರದಲ್ಲಿ ನೀರಿನ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ನಾವು ಹೋಗಿದ್ದ ಸಮಯದಲ್ಲಿ ಸರೋವರದ ತಳ ಅಲ್ಲಲ್ಲಿ ಕಾಣಿಸುತ್ತಿತ್ತು ಹಾಗೂ ಕೆಲವು ಆಳವಾದ ಜಾಗಗಳಲ್ಲಿ ಮಾತ್ರ ಸ್ವಲ್ಪ ನೀರಿತ್ತು. ಸರೋವರದ ಪಕ್ಕದಲ್ಲಿ ಆದಿನಾರಾಯಣನ ಮಂದಿರವಿದೆ.

ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=30881

-ಹೇಮಮಾಲಾ.ಬಿ
(ಮುಂದುವರಿಯುವುದು)

1 Response

  1. ನಯನ ಬಜಕೂಡ್ಲು says:

    ಸಾಕಷ್ಟು ಮಾಹಿತಿಗಳನ್ನೊಳಗೊಂಡ ಪ್ರವಾಸ ಕಥನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: