ಗುಜರಾತ್ ಮೆ ಗುಜಾರಿಯೇ…ಹೆಜ್ಜೆ 6: ‘ಮಾತಾ ನೊ ಮಧ್’ ಮಂದಿರ

Share Button

17/01/2017 ರಂದು, ಬೆಳಗ್ಗೆ ಬೇಗನೇ  ಭುಜ್ ನಿಂದ ಹೊರಟು,  ಸುಮಾರು 120 ಕಿ.ಮೀ ಪ್ರಯಾಣಿಸಿ, ಕಛ್ ನ ಅಧಿದೇವತೆಯಾದ  ಅಶಾಪುರ ಮಾತಾ ನೆಲೆಸಿರುವ ‘ಮಾತಾ ನೋ ಮಧ್ ‘ ಎಂಬಲ್ಲಿಗೆ ಬಂದೆವು. ಇಲ್ಲಿ 14 ನೇ ಶತಮಾನದಲ್ಲಿ, ಲಕೋ ಫುಲಾನಿ ಎಂಬ ರಾಜನ  ಸಚಿವರಾಗಿದ್ದ ಅನಾಗರ್ ಮತ್ತು ಅಜೋ ಎಂಬವರು ಈ ದೇವಾಲಯವನ್ನು ಕಟ್ಟಿಸಿದರು. ಎರಡು ಭೂಕಂಪಗಳಲ್ಲಿ   ದೇವಾಲಯವು ಭಾಗಶ: ನಾಶವಾಯಿತು. ಈಗಿರುವ ದೇವಾಲಯವನ್ನು 2001 ರ ಭೂಕಂಪದ ನಂತರ  ಪುನ: ನವೀಕರಿಸಲಾಗಿದೆ.

 ‘ಮಾತಾ ನೊ ಮಧ್’ ಶಕ್ತಿದೇವತೆಯ ಆವಾಸಸ್ಥಾನ ಎಂದು ಭಕ್ತರು ನಂಬುತ್ತಾರೆ. ಸ್ಥಳ ಪುರಾಣದ ಪ್ರಕಾರ, ಬನಿಯಾ ಸಮುದಾಯಕ್ಕೆ ಸೇರಿದ ದೇವ್ ಚಂದ್ ಎಂಬ ದೈವಭಕ್ತ ವರ್ತಕನು, ನವರಾತ್ರಿಯ ಸಮಯದಲ್ಲಿ  ತನ್ನ ಮಾರಾಟದ ವಸ್ತುಗಳನ್ನು ಹೇರಿಕೊಂಡು ಈ ಸ್ಥಳಕ್ಕೆ ಬಂದು ವಿಶ್ರಾಂತಿ ಪಡೆಯುತ್ತಿದ್ದಾಗ, ಆತನ ಕನಸಿನಲ್ಲಿ ದೇವಿಯು ಕಾಣಿಸಿಕೊಂಡು ಅವನಿದ್ದ ಜಾಗದಲ್ಲಿ ಮರುದಿನ  ಒಂದು  ತೆಂಗಿನಕಾಯಿ ಮತ್ತು ಕೆಂಬಣ್ಣದ ಚಿಕ್ಕ ಶಾಲು ( ಚುನರಿ) ಕಾಣಿಸಿಕೊಳ್ಳುವುದೆಂದೂ, ಅಲ್ಲಿ ಆತನು ದೇವಾಲಯವನ್ನುನಿರ್ಮಿಸಬೇಕೆಂದೂ  ಆದೇಶಿಸಿದಳಂತೆ. ಜೊತೆಗೆ ಒಂದು ಷರತ್ತನ್ನೂ ವಿಧಿಸಿದ್ದಳು. ಅದೇನೆಂದರೆ, ಮಂದಿರವು ನಿರ್ಮಾಣವಾದ ಮೇಲೆ, ಗರ್ಭಗುಡಿಯ ಬಾಗಿಲನ್ನು  ಆರು ತಿಂಗಳ ವರೆಗೆ ಹಾಕಿಯೇ ಇರಬೇಕೆಂದೂ, ಯಾರಿಗೂ ಪ್ರವೇಶವಿಲ್ಲವೆಂದೂ ತಿಳಿಸಿದ್ದಳು.

ಮಾತಾ ನೊ ಮಧ್’ ಮಂದಿರ, ಭುಜ್

ಆತ ನಿದ್ದೆಯಿಂದ ಎದ್ದಾಗ ತೆಂಗಿನಕಾಯಿ ಮತ್ತು ಕೆಂಬಣ್ಣದ ಚಿಕ್ಕ ಶಾಲು ( ಚುನರಿ) ಕಾಣಿಸಿತ್ತು. ಅಲ್ಲಿ ಮಂದಿರವನ್ನು ಕಟ್ಟಿಸಿದರು.  ದೇವಿಯ ಆಣತಿಯಂತೆ, ಗರ್ಭಗುಡಿಯ ಬಾಗಿಲನ್ನು ಹಾಕಿದ್ದರು. ಒಳಗಡೆಯಿಂದ ಆಗಾಗ  ಅಲೌಕಿಕವಾದ ಸದ್ದು ಹಾಗೂ ಸಂಗೀತ ಕೇಳಿ ಬರುತ್ತಿತ್ತಂತೆ. ಹೀಗಾಗಿ,  ದೇವ್ ಚಂದ್  ಕುತೂಹಲವನ್ನು ತಾಳಲಾರದೆ ಆರು ತಿಂಗಳಾಗುವ ಮೊದಲೇ ಗರ್ಭಗುಡಿಯ ಬಾಗಿಲನ್ನು ತೆರೆದರು. ಆಗ, ಆತನಿಗೆ ಎದ್ದು ನಿಲ್ಲಲು ಪ್ರಯತ್ನಿಸುತ್ತಿರುವ ಭಂಗಿಯಲ್ಲಿರುವ ದೇವಿಯ ಕಲ್ಲಿನ ಪ್ರತಿಮೆ ಕಾಣಿಸಿತು. ಈಗಲೂ ಪ್ರತಿಮೆಯು ಹಾಗೆಯೇ ಇದೆ. ಇದುವೇ ಇಲ್ಲಿ ಅರ್ಚನೆಗೊಳ್ಳುತ್ತಿರುವ ವಿಗ್ರಹವಾಗಿದೆ.  ಈ ಕತೆಯು ಸುಮಾರಾಗಿ, ಪುರಿ** ಜಗನ್ನಾಥ ಮಂದಿರದ ಸ್ಥಳಪುರಾಣವನ್ನು ಹೋಲುತ್ತದೆ.

 

ಮಾ ಆಶಾಪುರ

ಮೈಸೂರಿನ ರಾಜರು ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಪೂಜಿಸಿದಂತೆ, ಕಛ್ ರಾಜವಂಶದವರಿಗೆ ‘ಮಾತಾ ನೊ ಮಧ್’ ನಾಡದೇವಿಯಾಗಿದ್ದಾಳೆ. ಕಛ್ ರಾಜರ ಕುಲದೇವಿಯಾದ ಈ  ದೇವಿಯನ್ನು ‘ಮಾ ಆಶಾಪುರ’ ಎಂದೂ ಕರೆಯುತ್ತಾರೆ.

(**ಪುರಿ ಜಗನ್ನಾಥ ಮಂದಿರದ ಸ್ಥಳಪುರಾಣ ಹೀಗಿದೆ: ಸತ್ಯಯುಗದ ಕಾಲದಲ್ಲಿ, ಅವಂತಿ ರಾಜ್ಯದಲ್ಲಿ ಚಂದ್ರವಂಶದ ದೊರೆಯಾದ ಇಂದ್ರದ್ಯುಮ್ನನು ರಾಜ್ಯವಾಳುತ್ತಿದ್ದನು. ಒಬ್ಬ ಯಾತ್ರಾರ್ಥಿಯು ಆತನನ್ನು ಭೇಟಿಯಾಗಿ, ಒಡ್ಡರ ದೇಶದಲ್ಲಿ ಬುಡಕಟ್ಟು ಅರಸನಾದ ವಿಶ್ವವಸುವು, ನೀಲಿ ಬಣ್ಣದಿಂದ ಶೋಭಿಸುವ ‘ನೀಲಮಾಧವ’ ನನ್ನು ಪೂಜಿಸುತ್ತಾನೆಂದು ತಿಳಿಸಿದನು. ವಿಷ್ಣುವಿನ ಭಕ್ತನಾಗಿದ್ದ ಇಂದ್ರದ್ಯುಮ್ನನು ತಾನೂ ಆ ನೀಲಮಾಧವನನ್ನು ಅರ್ಚಿಸಬೇಕೆಂದು ಸಂಕಲ್ಪ ತೊಟ್ಟನು. ಅವನ ಪ್ರಯತ್ನದ ಮೇರೆಗೆ, ದೇವಶಿಲ್ಪಿ ವಿಶ್ವಕರ್ಮನು ಬಡಗಿಯ ರೂಪದಲ್ಲಿ ಬಂದು ತಾನೇ ಆ ವಿಗ್ರಹಗಳನ್ನು ನಿರ್ಮಾಣ ಮಾಡಲು ಆರಂಭಿಸಿದನು. ವಿಶ್ವಕರ್ಮನು ವಿಗ್ರಹಗಳ ನಿರ್ಮಾಣ ಕಾರ್ಯ ಸಂಪೂರ್ಣವಾದ ಮೇಲೆ ತಾನೇ ಕೊಠಡಿಯಿಂದ ಹೊರಬರುವೆ, ಅಲ್ಲಿಯ ವರೆಗೆ ತನ್ನ ಕೆಲಸವನ್ನು ಯಾರೂ ಗಮನಿಸಬಾರದು ಎಂದು ಮೊದಲಾಗಿಯೇ ಸೂಚಿಸಿದ್ದನು. ಇದಾಗಿ ಕೆಲವು ದಿನಗಳಾದರೂ ಕೆತ್ತನೆಯ ಕೆಲಸದ ಸದ್ದು ಕೇಳಿಸದ ಕಾರಣ ಆತಂಕಗೊಂಡ ಇಂದ್ರದ್ಯುಮ್ನ ಮತ್ತು ರಾಣಿ ಗುಂಡಿಚಾ ವಿಶ್ವಕರ್ಮನು ಕೆಲಸ ಮಾಡುತ್ತಿದ್ದ ಕೊಠಡಿಯ ಬಾಗಿಲನ್ನು ತೆರೆಸಿದರು. ಕೊಟ್ಟ ಮಾತಿಗೆ ತಪ್ಪಿದ ರಾಜನ ನಡೆಯಿಂದ ಕುಪಿತನಾದ ವಿಶ್ವಕರ್ಮನು ಅಪೂರ್ಣಗೊಂಡಿದ್ದ ವಿಗ್ರಹಗಳನ್ನು ಅಲ್ಲಿಯೇ ಬಿಟ್ಟು ಅದೃಶ್ಯನಾದನು. ಆ ಅಪೂರ್ಣ ವಿಗ್ರಹಗಳನ್ನೇ ಪ್ರತಿಷ್ಠೆ ಮಾಡುವಂತೆ ರಾಜನಿಗೆ ದೈವದ ಅಪ್ಪಣೆಯಾಯಿತು, ಹಾಗಾಗಿ ಅಪೂರ್ಣ ವಿಗ್ರಹಗಳನ್ನೇ ಪೂಜಿಸುವ ಪದ್ಧತಿ ಜಾರಿಗೆ ಬಂತು. ಅಂದಿನಿಂದ ಇಂದಿನವರೆಗೂ ಜಗನ್ನಾಥ, ಬಲಭದ್ರ, ಸುಭದ್ರೆಯರು ಪೂರ್ಣವಾದ ಕೈಗಳಿಲ್ಲದ ವಿಗ್ರ್ಗಹಗಳಾಗಿ ಆರಾಧಿಸಲ್ಪಡುತ್ತಾರೆ)

ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ :  http://surahonne.com/?p=30746

ಹೇಮಮಾಲಾ.ಬಿ.
(ಮುಂದುವರಿಯುವುದು)

4 Responses

  1. ಬಿ.ಆರ್.ನಾಗರತ್ನ says:

    ಪ್ರವಾಸ ಕಥನ ದೊಡನೆ ಅಲ್ಲಿನ ಸ್ಥಳೀಯ ಅಂಶಗಳನ್ನು ಗಮನಿಸಿ ವಿವರಣೆ ನೀಡಿರುವ ರೀತಿ ಚೆನ್ನಾಗಿ ಮೂಡಿ ಬಂದಿದೆ ಹೇಮಾ ಅಭಿನಂದನೆಗಳು.

  2. ನಯನ ಬಜಕೂಡ್ಲು says:

    ಎಷ್ಟು ವಿಚಾರಗಳನ್ನು ಸಂಗ್ರಹಿಸಿದ್ದೀರಿ ಅಕ್ಕ, ಗ್ರೇಟ್, ಇತಿಹಾಸ ಸಂಬಂಧಿ ವಿಚಾರಗಳು ಈ ಪ್ರವಾಸ ಕಥನದ ಮೆರುಗನ್ನು ಇನ್ನಷ್ಟು ಹೆಚ್ಚಿಸಿವೆ.

  3. ಶಂಕರಿ ಶರ್ಮ, ಪುತ್ತೂರು says:

    ಕಛ್ ನ ನಾಡದೇವತೆ, ಅಲ್ಲಿಯ ದೇಗುಲದ ಸ್ಥಳ ಪುರಾಣ, ಅದೇ ರೀತಿಯ ಪುರಿ ಜಗನ್ನಾಥ ದೇಗುಲದ ಸ್ಥಳ ಪುರಾಣದ ಹಿನ್ನೆಲೆ, ಸೊಗಸಾದ ಚಿತ್ರಗಳೊಂದಿಗಿನ ಪ್ರವಾಸ ಲೇಖನ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ… ಧನ್ಯವಾದಗಳು ಮಾಲಾ ಅವರಿಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: