‘ನೆಮ್ಮದಿಯ ನೆಲೆ’-ಎಸಳು 3
(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಬಾಲ್ಯ, ತೌರುಮನೆ ಹೀಗೆ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಮದುವೆಯ ಪ್ರಸ್ತಾಪ, ವಧೂಪರೀಕ್ಷೆಯ ಸಮಯ… ಇನ್ನು ಮುಂದಕ್ಕೆ ಓದಿ)
ವೆರಾಂಡಾದಲ್ಲಿದ್ದ ರೂಮಿನಲ್ಲಿ ನಮ್ಮಿಬ್ಬರ ಪ್ರಥಮ ಭೇಟಿ. ತಲೆ ತಗ್ಗಿಸಿಕೊಂಡು ಕುಳಿತಿದ್ದ ನನಗೆ ಅವರು ನೀವು ನನಗೆ ಒಪ್ಪಿಗೆಯಾಗಿದ್ದೀರಿ, ನಾನು ನಿಮಗೆ ಒಪ್ಪಿಗೆಯಾಗಿದ್ದೇನೆಯೇ? ಸಂಕೋಚವಿಲ್ಲದೆ ಹೇಳಿ ಎಂದರು. ನಾನು ನನ್ನ ಕಡೆಯಿಂದಲೂ ಒಪ್ಪಿಗೆ ಸೂಚಿಸುವಂತೆ ತಲೆ ಅಲ್ಲಾಡಿಸಿದೆ. ಆಗ ರೀ, ದಯವಿಟ್ಟು ಅದನ್ನೇ ಬಾಯಿಬಿಟ್ಟು ಹೇಳಿ. ಅಂದ ಹಾಗೆ ನನ್ನ ಮಾತಿಗೆ ನೀವು ಬೆಲೆಕೊಟ್ಟು ಒಪ್ಪಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು. ನಾನು ಹಿಂದೆಮುಂದೆ ಅರ್ಥವಾಗದೇ ಯಾವ ಮಾತು? ಎಂದೆ. ಅದ್ಯಾಕ್ರೀ ಅಷ್ಟೊಂದು ಗಾಭರಿ, ನಂಜನಗೂಡಿನಲ್ಲೇ ನನ್ನ ತಂದೆತಾಯಿಗಳೊಡನೆ ಇರಲು ಸಮ್ಮತಿಯಿದೆಯೆಂದು ಒಪ್ಪಿಗೆ ಸೂಚಿಸಿದ್ದಕ್ಕೆ ಎಂದರು. ಓ.ಅದಾ ನನಗೇನೂ ಅದರಿಂದ ಕಷ್ಟವಿಲ್ಲ. ಎಂದೆ. ಹಾ ! ಇದು ಪರ್ಸನಲ್ ಬೇಡಿಕೆ, ಈ ವಿಚಾರವನ್ನು ನಾನು ಪ್ರಸ್ತಾಪ ಮಾಡಿದೆನೆಂದು ನನ್ನ ಹಿರಿಯರಿಗೆ ಗೊತ್ತಾಗಬಾರದು. ಏಕೆಂದರೆ ಇದು ಅವರು ಹಾಕಿದ ಕರಾರಲ್ಲ. ಸಂಪೂರ್ಣವಾಗಿ ನನ್ನದೇ. ನನ್ನ ಅಣ್ಣಂದಿರು, ಅಕ್ಕಂದಿರು ಎಲ್ಲರೂ ದೂರವಿದ್ದಾರೆ. ನಾನು ಹೇಗೂ ನಿಮ್ಮ ಜೊತೆಗೆ ಇರುತ್ತೇನಲ್ಲಾ. ಮೈಸೂರೇನೂ ನಂಜನಗೂಡಿಗೆ ದೂರವಿಲ್ಲ. ಎಷ್ಟೋ ಜನ ಪ್ರತಿದಿನ ಓಡಾಡುತ್ತಾರೆ. ನಾನೂ ದಿನವೂ ಹೋಗಿಬಂದು ಮಾಡುತ್ತೇನೆ. ಇದು ಸರಿಯೇ? ಎಂದರು. ಸರಿ ಎಂದೆ. ಈ ಶುಭ ಸಮಾಚಾರವನ್ನು ಹಿರಿಯರಿಗೆ ತಿಳಿಸೋಣ ಬನ್ನಿ ಎಂದು ಮುನ್ನಡೆದರು. ನಾನೂ ಸದ್ದಿಲ್ಲದೆ ಅಲ್ಲಿಂದ ನನ್ನ ರೂಮಿಗೆ ಹೆಜ್ಜೆ ಹಾಕಿದೆ. ಅನಂತರದ ಮಾತುಕತೆ ನಾನೆಣಿಸಿದ್ದಕ್ಕಿಂತ ಸರಾಗವಾಗಿ ನಡೆದೇ ಹೋಯಿತು.
ಹುಡುಗನ ಕಡೆಯವರೆಲ್ಲ ಹೊರಟುಹೋದಮೇಲೆ ನಮ್ಮ ಮನೆಯಲ್ಲಿ ಹಬ್ಬದ ವಾತಾವರಣ. ಹೆತ್ತವರಿಗೆ ಸಂತಸವಾಗಿತ್ತು. ಅದಕ್ಕೆ ನಾನೂ ಹೊರತಾಗಲಿಲ್ಲ. ಅಮ್ಮ ಇದ್ದಕ್ಕಿದ್ದಂತೆ ಮಗಳೇ ನೀನು ಮೊದಲ ಸಾರಿ ನಂಜನಗೂಡಿಗೆ ಹೋಗಿಬಂದಿದ್ದು ನೆನಪಿದೆಯಾ? ಎಂದು ಕೇಳಿದರು. ಹ್ಹ ಹ್ಹ ನೆನಪಿಲ್ಲದೆ ಏನು, ಅಬ್ಬಾ ! ಆ ಪ್ರಸಂಗ ಮರೆಯಲಿಕ್ಕೆ ಸಾಧ್ಯವೇ. ನನಗಾಗ ಆರೇಳು ವರ್ಷವಿರಬೇಕಲ್ಲವೇ? ಅಲ್ಲಿ ಕಪಿಲಾ ನದಿಯಲ್ಲಿ ಭೇದಭಾವವಿಲ್ಲದೆ ಗಂಡಸರು, ಹೆಂಗಸರು ಮಕ್ಕಳು ಸ್ನಾನಮಾಡುತ್ತಿದ್ದರು. ಅದನ್ನು ನೋಡಿ ಷೇಮ್ ಷೇಮ್ ಎಂದ ನನ್ನ ಬಾಯಮೇಲೆ ನೀನು ಬೆರಳಿಟ್ಟು ಷ್.ಹಾಗೆಲ್ಲ ಹೇಳಬಾರದು. ಇದು ತಾತಯ್ಯನ ಗುಡಿ. ಎಂದು ಸುಮ್ಮನಿರಿಸಿದ್ದೆ. ಆನಂತರ ನಾನು ನದಿಯ ಕಡೆಗೆ ನೋಡುತ್ತಿದ್ದಾಗ ನನ್ನನ್ನು ನೀವು ಕೈಹಿಡಿದು ನದಿಯ ಮೆಟ್ಟಿಲಮೇಲೆ ನಿಲ್ಲಿಸಿದ್ದಿರಿ. ಏನು ಎತ್ತ ಎನ್ನುವಷ್ಟರಲ್ಲಿ ಅಪ್ಪ ತಂಬಿಗೆಯಿಂದ ನದಿಯ ನೀರು ತಂದು ತಲೆಯಮೇಲೆ ಸುರಿದರು. ಅದರಿಂದ ಸಿಟ್ಟುಗೊಂಡ ನಾನು ಯಾರು ಎಷ್ಟೇ ಹೇಳಿದರೂ ಬಟ್ಟೆ ಬದಲಾಯಿಸಲು ಒಪ್ಪದೆ ಹಠಮಾಡಿ ಅದೇ ಒದ್ದೆ ಬಟ್ಟೆಯಲ್ಲೇ ವ್ಯಾನಿನಲ್ಲಿ ಕುಳಿತು ಮೈಸೂರಿಗೆ ಹಿಂದಿರುಗಿದ್ದೆ. ಅದರಿಂದಾಗಿ ಒಂದುವಾರ ನೆಗಡಿ ಜ್ವರ ಬಂದು ಮಲಗಿದ್ದೆ. ಅದು ಬಿಡಿ ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಕೊನೆಯವರ್ಷ ಗೆಳತಿಯರೊಂದಿಗೆ ಅಲ್ಲಿಗೆ ಹೋಗಿದ್ದೆ. ಅದೂ ಆ ದೇವಸ್ಥಾನದ ಬಗ್ಗೆ ಓದಿ ತಿಳಿದುಕೊಂಡಮೇಲೆ ಅಲ್ಲವೇ ಸುಕನ್ಯಾ? ಎಂದು ಸೇರಿಸಿದರು ಅಮ್ಮ. ಹೌದಮ್ಮಾ ಎಂಥಹ ಭವ್ಯವಾದ ದೇವಸ್ಥಾನ ! ಅದರ ಮುಂಬಾಗಿಲು ದಾಟಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಕರಿಯ ಕಲ್ಲಿನಲ್ಲಿ ಕಡೆದಿರುವ ಬಸವನ ದರ್ಶನ. ಎಡಭಾಗದಲ್ಲಿ ಸಾಲಾಗಿ ಅರವತ್ತುಮೂರು ಶೈವ ಪುರಾತನರುಗಳ ಶಿಲ್ಪಗಳು. ದೇವಾಲಯದ ಮಧ್ಯಭಾಗದಲ್ಲಿ ಶ್ರೀಕಂಠೇಶ್ವರ, (ನಂಜುಂಡೇಶ್ವರ) ಬಲಪಕ್ಕದಲ್ಲೇ ಅಮ್ಮನವರ ಗುಡಿ, ಸುತ್ತಲೂ ಗಣಪತಿ, ಶಾರದೆ, ಸುಬ್ರಮಣ್ಯ, ನಾರಾಯಣಸ್ವಾಮಿ, ಚಂಡಿಕೇಶ್ವರ, ಟಿಪ್ಪುಸುಲ್ತಾನನು ಮಾಡಿಕೊಟ್ಟ ಪಚ್ಚೆಲಿಂಗ, ನವಗ್ರಹಗಳ ಗುಡಿ, ಪ್ರಾಕಾರದಲ್ಲಿ ಶಿವನ ವಿವಿಧ ರೂಪಗಳ ಶಿಲ್ಪಗಳು, ಒಂದೇ ಎರಡೇ ಹೆಜ್ಜಗೊಂದು ದೇವರ ದರ್ಶನ. ವಿಶಾಲವಾದ ಕಲ್ಲಿನ ಕಟ್ಟಡ, ಅದರ ವಿಸ್ತಾರಕ್ಕೇ ಮಾರುಹೋಗಿ ಮೂರು ಸುತ್ತು ಸುತ್ತಿ ಕೈಮುಗಿದು ಕುಳಿತಿದ್ದೆ. ಆಗ ನನ್ನ ಗೆಳತಿಯರು ನೋಡ್ರೇ ಸುಕನ್ಯಾಳ ಬೇಡಿಕೆ ಜೋರಾಗಿದೆ. ಇಲ್ಲೇ ಯಾರಾದರೂ ವರ ಕಣ್ಣಿಗೆ ಬಿದ್ದಿರಬಹುದು. ಅಥವಾ ಹುಡುಕಾಡಿ ಬಂದು ಕುಳಿತಿದ್ದಾಳೆ ಎಂದು ಛೇಡಿಸಿದ್ದರು ಎಂದೆ. ಅಮ್ಮ ನೋಡು ಆಗಿನ ನಗೆಚಾಟಿಕೆ ಈಗ ನಿಜವಾಗುತ್ತಿದೆ. ಯೋಗಾನುಯೋಗ ಅನ್ನಬಹುದು. ಸದ್ಯ ನಂಜುಂಡೇಶ್ವರ ಮೊದಲ ವಧುಪರೀಕ್ಷೆಯಲ್ಲೇ ಒಳ್ಳೆಯ ಫಲಿತಾಂಶ ಬರುವಂತೆ ಅನುಗ್ರಹಿಸಿದ್ದಾನೆ. ಮೊದಲು ಚಿಕ್ಕವಳಿದ್ದಾಗ ಆದ ಪ್ರಸಂಗ ನೆನೆಸಿಕೊಂಡು ಭಯವಾಗಿತ್ತು. ನಂತರ ನೀನೇ ಆತನ ಸನ್ನಿಧಾನಕ್ಕೆ ಕುತೂಹಲ ತಣಿಸಿಕೊಳ್ಳಲು ಹೋಗಿದ್ದೆ. ಈಗ ಆ ಊರಿಗೇ ಸೊಸೆಯಾಗಿ ಹೋಗಲು ಅನುವಾಗುತ್ತಿದ್ದೀಯೆ. ಇನ್ನು ಮುಂದಿನ ಕೆಲಸದಲ್ಲಿ ಯಾವ ಸಮಸ್ಯೆಯೂ ಎದುರಾಗದೆ ಎಲ್ಲವೂ ನಿರ್ವಿಘ್ನವಾಗಿ ನೆರವೇರಿಸಿಕೊಡುವಂತೆ ಬೇಡಿಕೊಳ್ಳೋಣ ಎಂದು ಮಧ್ಯಾನ್ಹದ ಅಡುಗೆ ತಯಾರಿಸಲು ಒಳನಡೆದರು. ನಾನೂ ಅವರಿಗೆ ಸಹಾಯ ಮಾಡಲು ಹೊರಟೆ.
ನಾನೂ ಅಮ್ಮ ಇಬ್ಬರೂ ಮಾತನಾಡುತ್ತಾ ಅಡುಗೆ ಮುಗಿಸಿ ಊಟಕ್ಕೆ ತಯಾರಿ ನಡೆಸುತ್ತಿದ್ದಾಗಲೇ ನಮ್ಮಪ್ಪನೂ ಅಲ್ಲಿಗೆ ಬಂದರು. ಎಲ್ಲವೂ ಅಂದುಕೊಂಡಂತೆಯೇ ಸಾಗುತ್ತಿದೆ. ಆದರೆ ನೀನು ಮದುವೆಯಾಗಿ ಹೊರಟುಹೋದ ಮೇಲೆ ಈ ದೊಡ್ಡ ಮನೆಯಲ್ಲಿ ನಾವಿಬ್ಬರೇ ಆಗಿಬಿಡುತ್ತೇವೆ. ಹೇಗಿರಬೇಕೆಂಬುದೇ ಯೋಚನೆಯಾಗಿದೆ. ಎಂದರು. ಅದಕ್ಕಮ್ಮನು ಈಗೇಕೆ ಆ ಮಾತು? ಮುಂದೆ ಆಲೋಚಿಸೋಣ. ಆಗಬೇಕಾದ ಕೆಲಸಗಳ ಕಡೆಗೆ ಗಮನ ಹರಿಸಿ. ನಾಳೆಯೇ ಶಾಸ್ತ್ರಿಗಳ ಮನೆಗೆ ಹೋಗಿ ಒಂದೆರಡು ಮೂರು ಒಳ್ಳೆಯ ದಿನಗಳನ್ನು ನಿಶ್ಚಿತಾರ್ಥಕ್ಕೆ ಗುರುತು ಹಾಕಿಸಿಕೊಂಡು ಬನ್ನಿ. ಅವರಿಗೂ ಅನುಕೂಲದಂತಿರುವ ದಿನ ನಿಶ್ಚಿತಾರ್ಥ ಮುಗಿಸಿಬಿಡೋಣ. ಅವ್ವಯ್ಯಾ ಒಂದು ಮುಖ್ಯ ವಿಷಯ ಮರತೇ ಬಿಟ್ಟಿದ್ದೆ ಎಂದರು. ಯಾವ ವಿಷಯ ಭಾಗೀರಥಿ? ಕೇಳಿದರು ಅಪ್ಪ. ಅದೇರಿ ನಮ್ಮ ಇಬ್ಬರು ಸುಪುತ್ರರು, ಅವರುಗಳನ್ನು ಮೊದಲು ವಿಚಾರಿಸಿ. ಇಲ್ಲದಿದ್ದರೆ ಇವತ್ತಿನಂತೆ ಆವತ್ತೂ ಬರಲಾಗದೆಂದು ತಲೆಯಲ್ಲಾಡಿಸಿಬಿಟ್ಟಾರು. ಬಂದವರ ಮುಂದೆ ಅವಲಕ್ಷಣವಾದೀತು. ಎಂದರು. ಹೌದೌದು ನೀನು ಹೇಳುವುದೂ ಸರಿ, ಶಾಸ್ತ್ರಿಗಳ ಮನೆಗೆ ಹೋಗುವುದಕ್ಕೆ ಮುಂಚೆಯೇ ಆ ಕೆಲಸ ಮಾಡುತ್ತೇನೆ. ಬೆಳಗ್ಗೆ ಹಾಲಿನ ರಾಮಕ್ಕ ಬಂದಾಗ ಮರೆಯದೇ ಅವಳೊಡನೆ ಪತ್ರವೊಂದನ್ನು ಇಬ್ಬರಿಗೂ ಕಳುಹಿಸುತ್ತೇನೆ. ಎಂದರು. ಅಲ್ಲಿಯೇ ಇದ್ದ ನಾನು ಅಪ್ಪಾ ಫೋನ್ ಇಲ್ಲವೇನಪ್ಪಾ? ಮಾಡಿದರಾಯ್ತು ಎಂದೆ. ಅಯ್ಯೋ ಮಗಳೇ ನನ್ನ ಮರೆವಿಗಿಷ್ಟು, ಹೊಸದಾಗಿ ಹಾಕಿಸಿಕೊಂಡದ್ದಾಗಿದೆಯಲ್ಲಾ ಇನ್ನು ಮೇಲೆ ಅದರ ಇರುವಿಕೆಯನ್ನು ರೂಢಿಸಿಕೊಳ್ಳಬೇಕು ಎಂದು ನಗಾಡಿದರು. ಆಗೆಲ್ಲ ಫೋನ್ ಬಳಕೆ ಈಗಿನಷ್ಟಿರಲಿಲ್ಲ. ಮನೆಗೆ ಫೋನ್ ಹಾಕಿಸಿಕೊಳ್ಳುವವರು ಅನುಕೂಲವಂತರೇ ಹೆಚ್ಚು. ನನ್ನಪ್ಪನ ಮುಂದಾಲೋಚನೆಯಿಂದ ನಮ್ಮ ಮನೆಯನ್ನೂ ಫೋನ್ ಅಲಂಕರಿಸಿತ್ತು. ಅದನ್ನು ನನ್ನಪ್ಪನಿಗೆ ಆಗಿಂದಾಗ್ಗೆ ನೆನಪಿಸುವುದೇ ನನ್ನ ಕೆಲಸವಾಗಿತ್ತು. ಭಾಗೀ..ಲಗ್ನ ನಿಶ್ಚಯದ ಕಾರ್ಯಕ್ರಮಕ್ಕೆ ಯಾರ್‍ಯಾರನ್ನು ಕರೆಯಬೇಕೆಂದು ಹೇಳಲೇ ಇಲ್ಲ ನೀನು. ಎಂದರು. ಆಗ ಅಮ್ಮ ಅಪ್ಪಪ್ಪಾ ರಾಮರಾಮಾ ಏನವಸರ? ಇವತ್ತಿನ್ನೂ ನಮ್ಮ ಕೂಸನ್ನು ನೋಡಿ ಪಸಂದು ಮಾಡಿ ಅಸ್ತು ಹೇಳಿ ಹೋಗಿದ್ದಾರೆ. ಯೋಚಿಸಿದರಾಯ್ತು ಬಿಡಿ. ಆದರೆ ಒಂದು ಮಾತೂರೀ, ನಮ್ಮ ಮಗಳು ಸುಕನ್ಯಾಳ ಲಗ್ನ ನಿಶ್ಚಯದ ಕಾರ್ಯವನ್ನು ಇಲ್ಲೇ ನಮ್ಮ ಮನೆಯಲ್ಲಿಯೇ ಮಾಡೋಣಾ. ಉಮೆಯ ಗಂಡನ ಮನೆಯವರು ಬಹಳ ಜನ ಬರ್‍ತಾರೆ ಅಂತ ಹೇಳಿದ್ದರಿಂದ ಲಗ್ನ ಕಟ್ಟಿಸುವುದು, ಮದುವೆಯ ಕಾರ್ಯ ಎಲ್ಲವನ್ನೂ ಛತ್ರದಲ್ಲೇ ಮಾಡಿದ್ದಾಯ್ತು. ಇನ್ನು ನಮ್ಮ ಗಂಡುಮಕ್ಕಳೋ ಇದು ಓಳ್ಡ್ ಮಾಡೆಲ್ ಮನೆ, ಅದು ಇದೂ ಅಂತ ನೆಪಹೇಳಿ ತಮ್ಮ ಮರ್ಜಿಯಂತೆ ಹೋಟೆಲ್ಲುಗಳಲ್ಲಿ ಪಾರ್ಟಿ ಕೊಟ್ಟು ಅವರ ಮದುವೆಗಳನ್ನು ಮುಗಿಸಿಕೊಂಡು ಬಿಟ್ಟರು. ಇದು ನಮ್ಮ ಹಿರಿಯರು ಬಾಳಿ ಬದುಕಿದ ಮನೆ. ನಾವು ಇಲ್ಲೇ ಬದುಕು ನಡೆಸಿಕೊಂಡು ಹೋಗುತ್ತಿದ್ದೇವೆ. ಶುಭಕಾರ್ಯ ಇಲ್ಲೇ ಆಗಲಿ. ಎಂದರು. ಅಮ್ಮನ ಮಾತಿನ ಹಿಂದಿದ್ದ ನೋವನ್ನು ಅರಿತ ಅಪ್ಪ ಲೇ..ಮಾರಾಯ್ತಿ, ಕಳೆದು ಹೋಗಿರುವುದನ್ನು ಪದೇಪದೇ ಯಾಕೆ ನೆನೆಸಿಕೊಳ್ಳುತ್ತೀ? ಕೇಳಿಲ್ಲಿ ಈಗ ಎಲ್ಲವೂ ನಮ್ಮಿಚ್ಛೆಯಂತೆ ನಡೆಸುವ ಮಗಳು, ಬೀಗರು ಸಿಕ್ಕಿರುವುದರಿಂದ ನಿನ್ನಿಚ್ಛೆಯಂತೇ ಆಗಲಿ. ಏಳು ಏಳು ಈಗ ಸದ್ಯಕ್ಕೆ ಹೊಟ್ಟೆ ತಾಳಹಾಕುತ್ತಿದೆ. ಏನಾದರೂ ಬಡಿಸಿ ಅದನ್ನು ಶಾಂತಗೊಳಿಸು. ಎಂದು ಹೇಳಿ ವಾತಾವರಣವನ್ನು ತಿಳಿಯಾಗಿಸಿದರು.
ಮಾರನೆಯ ಬೆಳಗ್ಗೆ ಅಪ್ಪ ಎಂದಿನಂತೆ ವಾಕಿಂಗ್ ಮುಗಿಸಿ ಬಂದರು. ಅಮ್ಮನು ಅವರಿಗೆ ಎರಡನೆಯ ಡೋಸ್ ಕಾಫಿ ಕೊಟ್ಟರು. ಅದನ್ನು ಗುಟುಕರಿಸುತ್ತಾ ಆಹಾ ! ನೀನು ಏನೇ ಹೇಳು ಭಾಗೀರಥಿ, ನಿನ್ನ ಕೈಯಿನ ಕಾಫಿ ಕುಡಿದು ರೂಢಿಯಾದ ನನಗೆ ಬೇರೆಲ್ಲೂ ಕಾಫಿ ಹಿಡಿಸುವುದೇ ಇಲ್ಲ. ಎಷ್ಟು ಹದವಾಗಿರುತ್ತೆ. ಅನ್ನುತ್ತಿದ್ದಂತೆ ಸಾಕು ಸಾಕು, ಸದ್ಯಕ್ಕೆ ಈ ಹೊಗಳಿಕೆ ಬಿಟ್ಟು ನೆನ್ನೆ ಹೇಳಿದ ವಿಚಾರದ ಬಗ್ಗೆ ಏನು ಮಾಡಬೇಕೆಂದು ಆಲೋಚಿಸಿ ಎಂದರು ಅಮ್ಮ. ಯಾವ ವಿಷಯ ಭಾಗೀ? ಎಂದು ಪ್ರಶ್ನಿಸಿದರು ಅಪ್ಪ. ಅಯ್ಯೋ ರಾಮ, ಕಾಗೆ ಕರ್ ಎನ್ನುವಾಗಲೇ ಹೊರಗೆ ಹೊರಟ ಮಕ್ಕಳು ಸಂಜೆ ಯಾವಯಾವ ಹೊತ್ತಿಗೆ ಮನೆಗಳಿಗೆ ಹಿಂತಿರುಗಿ ಬರುತ್ತಾರೋ. ಅವರುಗಳ ಮನಸ್ಥಿತಿ ಹೇಗಿರುತ್ತೋ? ಆವತ್ತು ಫೋನಿಗೆ ಸಿಕ್ಕಲೇ ಇಲ್ಲ ಎಂದು ಪೇಚಾಡಿಕೊಂಡಿರಿ. ಗಂಡಿನ ಕಡೆಯವರು ನಿಮ್ಮ ಅನುಕೂದಂತೆ ಮಾಡಿ ನಮ್ಮದೇನೂ ಅಭ್ಯಂತರ ಇಲ್ಲವೆಂದು ಹೇಳಿದ್ದಾಗಿದೆ. ಇನ್ನು ನಮ್ಮ ಗಂಡು ಮಕ್ಕಳದ್ದು, ಶಾಸ್ತ್ರಿಗಳು ಗುರುತು ಹಾಕಿಕೊಟ್ಟ ದಿನಗಳಲ್ಲಿ ಅವರಿಗೆ ಯಾವುದು ಅನುಕೂಲವಾಗುತ್ತದೆಂದು ಕೇಳಬೇಕಲ್ಲವೇ? ಎಂದರು.
ಓ ಅದೇ, ನಿನ್ನ ಗಂಡ ನಿನಗಿಂತ ಮುಂದು. ಆ ವಿಷಯವಾಗಲೇ ಅವರಿಗೆ ಮುಟ್ಟಿಸಿದ್ದಾಯಿತು. ಶಾಸ್ತ್ರಿಗಳು ನನಗೆ ದಾರಿಯಲ್ಲೇ ಸಿಕ್ಕಿದ್ದರು. ರಾಘವನ ಮನೆಯ ಹತ್ತಿರ ಯಾವುದೋ ಪೂಜಾಕಾರ್ಯಕ್ಕೆ ಹೋಗುತ್ತಿದ್ದೇನೆ ನೀವೇನು ಈಕಡೆ? ಎಂದು ಕೇಳಿದರು. ನಾನು ತಕ್ಷಣ ಬುದ್ಧಿ ಉಪಯೋಗಿಸಿ ಅವರ ಮೂಲಕವೇ ನಮ್ಮ ಮಕ್ಕಳಿಗೆ ನಮ್ಮ ಮನೆಯ ಹತ್ತಿರ ಬರಲು ಹೇಳಿ ಕಳಿಸಿದ್ದೇನೆ. ಮಂಡೆ ಸರಿಯಿದ್ದರೆ ಇವತ್ತೇ ಬರುತ್ತಾರೆ. ಸ್ನಾನಕ್ಕೆ ನೀರು ಕಾದಿದೆಯಲ್ಲವೇ? ಬೇಗ ಸ್ನಾನ, ಪೂಜೆ ಮುಗಿಸಿಬಿಡುತ್ತೇನೆ. ನೀನು ತಿಂಡಿ ತಯಾರಿ ಮಾಡಿಕೋ ಎಂದು ಕಾಫಿ ಕುಡಿದು ಖಾಲಿ ಲೋಟವನ್ನು ಕೆಳಗಿಟ್ಟು ಒಳನಡೆದರು.
ಅಪ್ಪನ ಮಾತುಗಳನ್ನು ಕೇಳಿದ ಅಮ್ಮ ಒಂದುಕ್ಷಣ ತಡಬಡಾಯಿಸಿದರು. ಹೇಗೂ ಸುದ್ಧಿ ಮುಟ್ಟಿಸಿದ್ದಾರಲ್ಲಾ ಎಂಬ ಸಮಾಧಾನದಿಂದ ಮುಂದಿನ ತಯಾರಿ ನಡೆಸಲು ಅಡುಗೆಮನೆ ಹೊಕ್ಕರು.
ಇವರಿಬ್ಬರ ಸಂಭಾಷಣೆಯನ್ನು ಕೇಳಿಸಿಕೊಂಡ ನಾನು ಮನಸ್ಸಿನಲ್ಲೇ ನಗುತ್ತಾ ಟೀಪಾಯಿ ಮೇಲಿದ್ದ ಪೇಪರನ್ನು ಕೈಗೆತ್ತಿಕೊಂಡೆ. ಹತ್ತು ಹದಿನೈದು ನಿಮಿಷ ಕಳೆದಿರಬಹುದು ಹೊರಗಡೆ ಯಾವುದೋ ವಾಹನ ನಿಂತ ಸದ್ದಾಯಿತು. ಪೇಪರನ್ನು ಕೈಯಲ್ಲಿ ಹಿಡಿದೇ ಹೊರಗಿನ ವೆರಾಂಡಾಕ್ಕೆ ಬಂದು ಕಿಟಕಿಯಲ್ಲಿ ಹಣಿಕಿದೆ. ನನ್ನ ಅಣ್ಣಂದಿರಿಬ್ಬರೂ ತಮ್ಮ ತಮ್ಮ ಬಾಳಸಂಗಾತಿಗಳೊಡನೆ ಬಂದಿಳಿಯುತ್ತಿದ್ದರು. ಲಗುಬಗೆಯಿಂದ ಬಾಗಿಲು ತೆರೆದೆ.
ಏನಮ್ಮಾ ಹಸೆಮಣೆ ಏರಲು ಸಿದ್ಧಳಾಗಿರುವ ಮದುಮಗಳೇ, ಒಂದೇ ಇಂಟರ್‌ವ್ಯೂಗೇ ಸಿಹಿಸುದ್ಧಿ ಸಿಕ್ಕಿದೆ? ಎಂದು ಅತ್ತಿಗೆಯರು ವ್ಯಂಗ್ಯ ಬೆರೆತ ಧ್ವನಿಯಲ್ಲಿ ಚುಡಾಯಿಸಿದರು. ಆಗದೇ ಏನು? ಸಿಟಿಯಲ್ಲಿ ಬೆಳೆದು ಓದಿದ ಹುಡುಗಿಯಾದರೂ ಅವರುಗಳು ಹೇಳಿದ ಕಡೆಯೇ ಇರುತ್ತೇನೆಂದು ಒಪ್ಪಿಕೊಂಡ ಇಂಥಹ ಬುದ್ಧು ಅವರುಗಳಿಗೆ ಇನ್ನೆಲ್ಲಿ ಸಿಕ್ಕಾಳು? ಎಂದು ದನಿಗೂಡಿಸಿದರು ಅಣ್ಣಂದಿರು. ಅವರ ಅಸಹನೆ ಎದ್ದು ಕಾಣುತ್ತಿತ್ತು. ನಾನು ಅವರುಗಳ ಮಾತಿಗೆ ಉತ್ತರ ಕೊಡುವ ಗೋಜಿಗೇ ಹೋಗದೆ ನಸುನಗುತ್ತಾ ಮನೆಯೊಳಕ್ಕೆ ಅವರನ್ನು ಆಹ್ವಾನಿಸಿದೆ.
ನಮ್ಮ ಮಾತುಗಳ ಶಬ್ಧಕೇಳಿದ ಅಮ್ಮನೂ ಅಲ್ಲಿಗೆ ಬಂದರು. ಅವರನ್ನು ನೋಡಿದ ಕೂಡಲೇ ಆಫೀಸಿಗೆ ಹೋಗುವ ಮೊದಲು ಇಲ್ಲಿಗೆ ಬಂದು ಹೋಗಲೇಬೇಕೆಂದು ಅಪ್ಪ ಶ್ಯಾಮರಾಯರ ಹತ್ತಿರ ಹೇಳಿ ಕಳಿಸಿದ್ದರು. ಅಪ್ಪ ಎಲ್ಲಿ? ಎಂದು ಪ್ರಶ್ನಿಸಿದರು. ಹೂಂ ಒಳಗಿದ್ದಾರೆ, ಸ್ನಾನ ಮುಗಿಸಿ ಇನ್ನೇನು ಬಂದುಬಿಡುತ್ತಾರೆ. ಅದು ಸರಿ, ಮಕ್ಕಳೆಲ್ಲಿ? ಎಂದರು ಅಮ್ಮ.
ನಮ್ಮಮ್ಮನ ಪ್ರಶ್ನೆಗೆ ಓ ಅವರುಗಳು ಇನ್ನೂ ಎದ್ದೇ ಇರಲಿಲ್ಲ. ಎಂದರು. ಏಕೆ ಇವತ್ತು ಸ್ಕೂಲ್ ಇಲ್ಲವೇ? ಎಂದದ್ದಕ್ಕೆ ಇಲ್ಲ ಅತ್ತೆ, ನೆನ್ನೆ ಮೊನ್ನೆ ಔಟಿಂಗ್ ಹೋಗಿದ್ರಲ್ಲಾ ಎನ್ನುತ್ತಿದ್ದಂತೆ ಇನ್ನೊಬ್ಬ ಅತ್ತಿಗೆ ಅಕ್ಕಾ ಏನು ಹೇಳ್ತಿದ್ದೀರಾ, ನಾವೆಲ್ಲೂ ಹೋಗಿರಲಿಲ್ಲ. ಸ್ಕೂಲಿನಿಂದ ಕರೆದುಕೊಂಡುಹೋಗಿದ್ರು ಮರೆತುಬಿಟ್ರಾ? ಎಂದು ಕಣ್ಸನ್ನೆ ಮಾಡಿದರು. ಅದು ನನಗೆ ಕಾಣಿಸಿತು. ಹಾಗಾದರೆ ಇವರುಗಳು ಇಷ್ಟೊಂದು ಸಣ್ಣಮನಸ್ಸಿನವರಾ?. ಅಪ್ಪ ಅಮ್ಮ ಇವರನ್ನು ಏನುತಾನೇ ಕೇಳಿದರು. ನಾನೇನು ಮಾಡಿದ್ದೆ? ಅವರುಗಳ ನಾಟಕ ಇನ್ನೂ ಎಷ್ಟು ಮುಂದುವರೆಯುತ್ತಿತ್ತೋ ಅಷ್ಟರಲ್ಲಿ ಅಪ್ಪ ಕಾಣಿಸಿಕೊಂಡು ರಾಘು, ಮಾಧು, ಸೀತಾ, ಗೀತಾ ಎಲ್ಲ ಬಂದಿರಾ? ಈಗ ಬಂದೆ ಎನ್ನುತ್ತಾ ಪೂಜಾಕೋಣೆ ಹೊಕ್ಕರು. ಅದನ್ನು ಕಂಡ ಅತ್ತಿಗೆಯರಿಬ್ಬರೂ ಮಾವಾ, ಬೇಗ ಬನ್ನಿ, ನಾವು ಕೆಲಸಕ್ಕೆ ಹೋಗಬೇಕು. ಎಂದು ಅವಸರಿಸಿದರು. ಅಲ್ಲಿದ್ದ ಕುರ್ಚಿಗಳ ಮೇಲೆ ಆಸೀನರಾದರು. ಅಣ್ಣಂದಿರೂ ಅವರನ್ನು ಅನುಸರಿಸಿದರು. ಅಮ್ಮ ಅವರೆಲ್ಲರಿಗೆ ಕಾಫಿ ಕೊಡಲು ಹೋದರು. ಅದೆಲ್ಲ ಆಗಿದೆಯಮ್ಮಾ, ತಿಂಡಿ ಏನು ಮಾಡಿದ್ದೀ? ಅಥವಾ ಇನ್ನೂ ಮಾಡಬೇಕಾ? ಎಂದು ಕೇಳಿದರು. ಇಡ್ಲಿ ಈಗತಾನೇ ಇಳಿಸಿದ್ದೇನೆ, ತೆಗೆಯಬೇಕಷ್ಟೇ. ಚಟ್ಣಿ, ಪಲ್ಯ ಆಗಿದೆ. ಈಗ ತರುತ್ತೇನೆಂದು ಒಳಹೋದರು. ಅವರುಗಳ ವರ್ತನೆಯಿಂದ ಬೇಸರಪಟ್ಟಿದ್ದ ನಾನು ಅಮ್ಮನಿಗೆ ಸಹಾಯ ಮಾಡುವ ನೆಪದಿಂದ ಅಮ್ಮನ ಹಿಂದೆ ನಡೆದೆ.
ತಿಂಡಿ ಸಮಾರಾಧನೆ ನಡೆಯುತ್ತಿದ್ದಂತೆ ಅಪ್ಪನೂ ಪೂಜೆ ಮುಗಿಸಿ ಹೊರಬಂದರು. ತಿಂಡಿ ತಿನ್ನುತ್ತಲೇ ಎಲ್ಲ ಸಂಗತಿಗಳನ್ನು ಮಕ್ಕಳು, ಸೊಸೆಯಂದಿರಿಗೆ ತಿಳಿಸಿದರು. ಶಾಸ್ತ್ರಿಗಳಿಂದ ಬರೆಸಿಕೊಂಡು ಬಂದಿದ್ದ ದಿನಾಂಕಗಳನ್ನು ಅವರಿಗೆ ತೋರಿಸಿದರು. ಎಲ್ಲವನ್ನೂ ಆಲಿಸಿದ ನಂತರ ಎಲ್ಲವೂ ಸರಿ, ಜಾಗ ಎಲ್ಲಿ? ಎಂದರು. ಅಮ್ಮ ಇಲ್ಲೇ, ಇದೇ ಮನೆಯಲ್ಲೇ ಎಂದು ಹೇಳಿದರು. ಅಣ್ಣಂದಿರು ಇಲ್ಲಿ ಬಂದವರಿಗೆ ಅನುಕೂಲವಾಗುವುದಿಲ್ಲಮ್ಮಾ ಎಂದರು. ಹೊರಗಿನವರ್‍ಯಾರೂ ಇಲ್ಲ, ಬರೀ ನಮ್ಮ ಅವರ ಕುಟುಂಬದವರು ಮಾತ್ರ ಬರುವುದು. ಅಮ್ಮಮ್ಮಾ ಎಂದರೆ ಒಂದೈವತ್ತು ಜನ ಆಗಬಹುದಷ್ಟೇ. ಅಷ್ಟಕ್ಕೆಲ್ಲ ಬೇರೆ ಕಡೆ ಏಕೆ ಹೋಗಬೇಕು? ಎಂದರು ಅಮ್ಮ. ಹಾಂ ಅತ್ತೆ, ಮಾವ ನೀವೇ ಎಲ್ಲ ತೀರ್ಮಾನ ತೆಗೆದುಕೊಂಡ ಮೇಲೆ ನಮ್ಮದಿನ್ನೇನಿದೆ? ಆಯ್ತು ನೀವು ಹೇಳಿದ ದಿನಗಳಲ್ಲಿ ನಮಗ್ಯಾವುದು ಅನುಕೂಲವಾಗುತ್ತದೆಂದು ಆಲೋಚಿಸಿ ಫೋನ್ಮಾಡಿ ತಿಳಿಸುತ್ತೇವೆ. ಈಗ ನಾವು ಹೊರಡುತ್ತೇವೆ, ಕೆಲಸಕ್ಕೆ ಲೇಟಾಗುತ್ತದೆಂದು ಮೇಲಕ್ಕೆದ್ದರು ಅತ್ತಿಗೆಯರು. ಅಪ್ಪಣೆಗಾಗಿ ಕಾಯುತ್ತಿದ್ದರೇನೋ ಎಂಬಂತೆ ಅಣ್ಣಂದಿರೂ ಎದ್ದು ಹೊರಟರು. ಅಪ್ಪ, ಅಮ್ಮ ಏನೊಂದೂ ಮಾತನಾಡದೆ ಮೌನವಾಗಿ ತಮ್ಮ ಒಪ್ಪಿಗೆಯನ್ನು ಸೂಚಿಸುವಂತೆ ತಲೆಯಾಡಿದರು.
ಮನೆಗೆ ಬಂದು ಅವರೆಲ್ಲಾ ಹೋದಮೇಲೆ ಅಪ್ಪ ಹೂ..ನೋಡಿದೆಯಲ್ಲಾ ಭಾಗೀ, ಇವರೇ ನಮ್ಮ ಮಕ್ಕಳು. ಮನೆಯಲ್ಲಿ ನಡೆಯುತ್ತಿರುವ ಶುಭಕಾರ್ಯವನ್ನು ತಾವೇ ನಿಂತು ನಡೆಸಬೇಕಾದವರನ್ನು ನೀವು ಬಂದರೆ ಸಾಕು ಎಂದು ಅಂಗಲಾಚುವ ಪರಿಸ್ಥಿತಿ ಒದಗಿದೆ. ಎಂದು ಪೇಚಾಡಿಕೊಂಡರು. ಅದನ್ನು ಕೇಳಿ ಅಮ್ಮ ಇದೇನು ನಮಗೆ ಹೊಸದೇ, ಅದಕ್ಯಾಕೆ ನೊಂದುಕೊಳ್ಳುತ್ತೀರಾ. ಅವರುಗಳಿಗೇನು ನಾವು ಮದುವೆ ಮಾಡುವುದಿಲ್ಲವೆಂದು ಅಂದಿದ್ದೆವೇ. ಅವರುಗಳೇ ತಮಗೆ ಬೇಕಾದವರನ್ನು ಆರಿಸಿಕೊಂಡು ತಮಗೆ ಹೇಗೆ ಬೇಕೋ ಹಾಗೆ ಮದುವೆ ಮಾಡಿಕೊಂಡರು. ಆಗಲೂ ನಾವು ಅವರಿಬ್ಬರ ಮದುವೆಗೆಂದು ಇಟ್ಟಿದ್ದನ್ನು ಇಡುಗಂಟಾಗಿ ಕೊಟ್ಟೆವಲ್ಲಾ. ಅದನ್ನು ಬೇಡವೆಂದು ಬಾಯಿಮಾತಿಗಾದರೂ ಹೇಳದೇ ತೆಗೆದುಕೊಂಡರು. ಇನ್ನೇನು ಅವರಿಂದ ಯಾವುದಕ್ಕೂ ಬಲವಂತ ಮಾಡದೆ ಅವರಷ್ಟಕ್ಕೆ ಬಾಳಲು ಅಡ್ಡಿಮಾಡಿಲ್ಲ. ಆದರೂ ಏನಾದರೂ ಕೊಂಕು ಆಡುವುದನ್ನು ಬಿಟ್ಟಿಲ್ಲ ನೋಡಿ. ಯಾವುದಕ್ಕೂ ಯೋಚಿಸಿ ಹೇಳುತ್ತೇವೆ ಅಂದಿದ್ದಾರಲ್ಲಾ. ಕಾಯೋಣ, ಮುಂದಿನ ಕೆಲಸಗಳ ಕಡೆ ಗಮನ ಕೊಡೋಣ. ಪಡೆದುಕೊಂಡು ಬಂದದ್ದೇ ಇಷ್ಟು ಅಂದುಕೊಂಡು ಸುಮ್ಮನಾಗಿಬಿಡೋಣ. ಸುಕನ್ಯಾ ಬಾಮ್ಮಾ, ನಾವೂ ತಿಂಡಿ ತಿನ್ನೋಣ ಎಂದು ವಿಷಯವನ್ನು ಬೆಳೆಸಲು ಇಷ್ಟವಿಲ್ಲವೆಂಬ ಸೂಚನೆಯಿತ್ತು ಒಳನಡೆದರು. ನನಗೂ ಅಷ್ಟೇ ಬೇಕಾಗಿತ್ತು, ಅವರನ್ನು ಹಿಂಬಾಲಿಸಿದೆ.
ತಿಂಡಿ ತಿಂದು ಮುಗಿಸಿ ತಟ್ಟೆಗಳನ್ನು ತೊಳೆಯಲು ಹಾಕಿದೆ. ಅಷ್ಟರಲ್ಲಿ ಸುಕನ್ಯಾ ಕೆಲಸದ ಸಾಕಮ್ಮ ನಿನ್ನ ಅಣ್ಣಂದಿರು, ಅತ್ತಿಗೆಯರು ಬಂದಾಗ ಹಿಂದಿನ ಸಾಲಿನ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದಾಳೆ. ಇನ್ನೇನು ಬರಬಹುದು. ಬಂದು ಕೆಲಸ ಮುಗಿಸಿದ ಮೇಲೆ ಅವಳಿಗೆ ತಿಂಡಿ ಕೊಡು. ಇನ್ನೂ ಸ್ವಲ್ಪ ಹೊತ್ತುಬಿಟ್ಟು ಅಡುಗೆಗೆ ಇಟ್ಟರಾಯ್ತು. ಎಂದರು. ನಾನು ಅಪ್ಪಣೆ ಮಾತಾ ಎಂದು ನಾಟಕೀಯವಾಗಿ ನುಡಿದಾಗ ನನ್ನ ತಲೆಗೊಂದು ಮೊಟಕಿ ಆಡು ಆಡು ಇನ್ನೆಷ್ಟು ದಿನ ಆಡುತ್ತೀಯೆ. ಎಂದು ನಗುತ್ತಿದ್ದಂತೆಯೇ ಹೊರಗಡೆ ಯಾರೋ ನರಸಿಂಹಯ್ಯನೋರೇ ಎಂದು ಕರೆಯ ಜೊತೆಗೆ ಬಾಗಿಲ ಚಿಲಕ ಕುಟ್ಟಿದ್ದು ಕೇಳಿಸಿತು. ಹಾಲಿನಲ್ಲಿ ಪೇಪರ್ ಓದುತ್ತಿದ್ದ ಅಪ್ಪ ಹೋಗಿ ಬಾಗಿಲು ತೆರೆದರು. ಓ ಶಾಸ್ತ್ರಿಗಳು ! ಅರೆ ನೀವು? ಪರಮಾಶ್ಚರ್ಯ. ಬನ್ನಿ ಬನ್ನಿ ಎಂದು ಅವರನ್ನು ಒಳಕ್ಕೆ ಕರೆದರು. ಆಗ ಅಮ್ಮ ಹಿದುಗಡೆ ನೋಡಿ ಶಾಸ್ತ್ರಿಗಳ ಜೊತೆಯಲ್ಲಿ ಮತ್ಯಾರೋ ಬಂದಹಾಗಿದೆ. ಎಂದರು. ಅಪ್ಪ ಬಂದವರೇ ತಗ್ಗಿದ ಧ್ವನಿಯಲ್ಲಿ ಭಾಗೀ, ಬೀಗರು ಬಂದಿದ್ದಾರೆ. ಏನೋ ಮಾತನಾಡಬೇಕಂತೆ. ನೀನೂ ಇರಬೇಕಂತೆ. ಇಲ್ಲಿಗೇ ಬಾ ಎಂದರು. ಅಮ್ಮ ಆಶ್ಚರ್ಯದಿಂದ ನೆನ್ನೆಯಷ್ಟೇ ಬಂದು ಹೋದರಲ್ಲಾ, ಏನಾದರೂ ಸಮ್ಮತಿಯಾಗಲಿಲ್ಲವೇ? ಅವರ ಮಾತನ್ನು ಅರ್ದದಲ್ಲೇ ತಡೆಯುತ್ತಾ ಅಪ್ಪ ಏ..ಏಕೆ ಇಲ್ಲದ್ದನ್ನು ಯೋಚಿಸುತ್ತೀ. ಹಾಗೇನೂ ಇರಲಾರದು ಬಾ ಎಂದು ಕರೆದರು. ಅಮ್ಮನು ಮೈತುಂಬ ಸೆರಗನ್ನು ಹೊದ್ದು ಅಪ್ಪನೊಡನೆ ಹಾಲಿಗೆ ಬಂದರು. ನಾನು ಕುತೂಹಲದಿಂದ ಅಡುಗೆ ಮನೆಯಿಂದ ಹೊರಗೆ ಬಂದು ನಡುಮನೆಯ ಗೋಡೆಗೆ ಆತುಕೊಂಡು ನಿಂತುಕೊಂಡೆ.
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=30942
(ಮುಂದುವರಿಯುವುದು)
-ಬಿ.ಆರ್ ನಾಗರತ್ನ, ಮೈಸೂರು
ಕಥೆ ಬಹಳ ಸ್ವಾರಸ್ಯಕರವಾಗಿ ಮುಂದೆ ಸಾಗುತ್ತಿದೆ
ಕಥೆ ಸಾಗುತ್ತಿರುವ ರೀತಿ ತುಂಬಾ ಚೆನ್ನಾಗಿದೆ. ಇವತ್ತಿನ ದಿನಗಳಲ್ಲೂ ಕುಟುಂಬ ಎಂದರೆ ಗಂಡ, ಹೆಂಡತಿ ಹಾಗೂ ಒಂದು ಮಗುವಷ್ಟೇ, ಬೇರೆ ಯಾವ ಸoಬಂಧಗಳನ್ನು ಬೆಸೆದುಕೊಳ್ಳಲು ಬಯಸದವರೇ ಹೆಚ್ಚು.
ಧನ್ಯವಾದಗಳು
ಈ ಸಲಯ ಕಥಾಭಾಗವು ಬಹಳ ಚೆನ್ನಾಗಿ ಮೂಡಿಬಂದಿದೆ. ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಬಗೆಗಿನ ಮಾಹಿತಿಯು ಕಥೆಯ ಸೊಬಗನ್ನು ಹೆಚ್ಚಿಸಿದೆ… ಕುತೂಹಲಕಾರಿಯಾಗಿ ಮುಂದುವರಿಯುತ್ತಿದೆ..ಧನ್ಯವಾದಗಳು ಮೇಡಂ.
ಧನ್ಯವಾದಗಳು ಸಹೃದಯರಿಗೆ.
ನಮ್ಮ ಮನೆಯಲ್ಲೇ ನಡೆಯುತ್ತಿರುವ ಹಾಗೆ ಭಾಸವಾಗುತ್ತಿದೆ
ಕಥೆ ಬಹಳ ಸ್ವಾರಸ್ಯಕರವಾಗಿ ಮೂಡಿ ಬರುತ್ತಿದೆ . ನಂಜನಗೂಡಿನ ದೇವಾಲಯ, ಇಂದಿನ ದಿನಮಾನಗಳ ಕುಟುಂಬಗಳಲ್ಲಿ ಕಾಣಬಹುದಾದ ಸಂಬಂಧಗಳ ಬಗೆಗಿನ ಮನಸ್ಥಿತಿ, ಮನೋಭಾವಗಳ ನಿರೂಪಣೆ ಕಣ್ಣಿಗೆ ಕಟ್ಟುವಂತೆ ಸೊಗಸಾಗಿ ಅಕ್ಷರಗಳಲ್ಲಿ ಮೂಡಿಬಂದಿದೆ .
ಮುಂದಿನ ಭಾಗವನ್ನು ಕಾತರದಿಂದ ಕಾಯುವಂತೆ ಮಾಡಿದೆ ……
ಧನ್ಯವಾದಗಳು ಗೆಳತಿ ನಂದಿನಿ.