ವಲಸೆ ಹಕ್ಕಿಗಳು
ಮೈಸೂರಿನ ರಂಗನತಿಟ್ಟು ಪಕ್ಷಿಧಾಮಕ್ಕೆ ನಿರ್ದಿಷ್ಟ ತಿಂಗಳುಗಳಲ್ಲಿ (ಸಾಮಾನ್ಯವಾಗಿ ಜನವರಿ- ಸೆಪ್ಟೆಂಬರ್) ಉಷ್ಣಪ್ರದೇಶಗಳಿಂದ ವಿವಿಧ ಹಕ್ಕಿಗಳು ಹಾರಿ ಬಂದಿಳಿಯುತ್ತವೆ, ಈ ತಂಪು ಪ್ರದೇಶದಲ್ಲಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಸಂತಾನೋತ್ಪತ್ತಿಯ ನಂತರ ಅವುಗಳು ಮರಳಿ ತಮ್ಮ ನಾಡಿಗೆ ಹಾರುತ್ತವೆ. ಹಕ್ಕಿಗಳಂತೆಯೇ ಸಕಲ ಜೀವಿ ಚರಾಚರಗಳು ಕೂಡ. ಡಾರ್ವಿನ್‌ನ ವಿಕಾಸವಾದದಂತೆ ಯಾರು ಬಲಶಾಲಿಯಾಗಿರುತ್ತಾರೋ, ಹೊಂದಾಣಿಕೆ ಮಾಡಿಕೊಳ್ಳುತ್ತಾರೋ ಅವರು ಮಾತ್ರ ಈ ಸ್ಪರ್ಧೆಯ ಜಗತ್ತಿನಲ್ಲಿ ಉಳಿಯಲು ಸಾಧ್ಯ.
ಈ ನಿಟ್ಟಿನಲ್ಲಿ ಹಳ್ಳಿಗಳಿಂದ ಸಿಟಿಗೆ ವಲಸೆ ಅತ್ಯಂತ ಕುತೂಹಲಕಾರಿಯೂ ಸ್ವಲ್ಪ ಮಟ್ಟಿಗೆ ಖಿನ್ನತೆ ಹುಟ್ಟಿಸುವಂತಹದ್ದೂ ಆಗಿದೆ. ಭಾರತದ ಜೀವ ಹಳ್ಳಿಗಳಲ್ಲಿದೆ ಎಂದೇನೇ ಹೇಳಲಿ. ಇದೀಗ ಹಳ್ಳಿಗಳಲ್ಲಿ ವಾಸಿಸುತ್ತಿರುವವರು ವೃದ್ಧರು ಅಥವಾ ಕಡಿಮೆ ವಿದ್ಯಾಭ್ಯಾಸ ಮಾಡಿ ಒಂದು ರೀತಿಯ ನಿರ್ಲಿಪ್ತ ಮನೋಭಾವನೆ ರೂಢಿಸಿಕೊಂಡವರು, ಶ್ರೀಮಂತರಿರಲಿ, ಬಡವರಿರಲಿ ಈಗಿನ ರೈತ ಸಮುದಾಯದ ಯುವ ತಲೆಮಾರಿನ ಏಕೈಕ ಗುರಿ ಹಳ್ಳಿಯನ್ನು ಬಿಡುವುದು. ಶ್ರೀಮಂತ ಭೂಮಾಲಿಕರನ್ನು ಹೊರತುಪಡಿಸಿದರೆ ಹಳ್ಳಿಗಳಲ್ಲಿ ನೆಲೆಸಿರುವವರನ್ನು ಅನುಕಂಪದಿಂದ ನೋಡುತ್ತಾರಲ್ಲದೆ ಗೌರವದಿಂದ ಅಲ್ಲ. (ಅಲ್ಲಿ ಉಳಿದವರು ಏನನ್ನೂ ಸಾಧಿಸಿಲ್ಲವೇನೋ ಎಂಬಂತೆ). ಇನ್ನು ಹಳ್ಳಿ ಮನೆಗೆ ಮದುವೆಯಾಗಿ ರೆಕ್ಕೆ ಕತ್ತರಿಸಲ್ಪಟ್ಟ ಹಕ್ಕಿಯಂತೆ ಮರುಗುವ ಯುವತಿಯರು ಅದೆಷ್ಟೋ ತಮ್ಮಷ್ಟೇ ಅಥವಾ ತಮಗಿಂತ ಕಡಿಮೆ ಬುದ್ಧಿವಂತ ಯುವತಿಯರು ಹೊರಪ್ರಪಂಚದ ಅವಕಾಶಗಳನ್ನು ದಕ್ಕಿಸಿಕೊಳ್ಳುತ್ತಿರುವಾಗ ತಮಗಿರುವ ಮಿತಿಗಳನ್ನು ಮೀರಲು ಅವರು ಹಂಬಲಿಸುವುದು ನ್ಯಾಯವೇ ಆಗಿದೆ.
ಕಾಲೇಜಿಗೆ ಹೋಗಿ ಬರುವಾಗ ಸೇಫ್ ಅಲ್ಲದ ಕಾಡು ಹಾದಿಯಲ್ಲಿ ಪಯಣಿಸಬೇಕಾದ ಅನಿವಾರ್ಯತೆ, ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳೊಂದಿಗೆ ಸ್ಫರ್ಧಿಸಲಾರದ ಕೀಳರಿಮೆ ಹಳ್ಳಿಯ ಯುವತಿಯರನ್ನು ಬಳಲಿಸಿದರೆ ಹಳ್ಳಿ ಮನೆಯ ಜವಾಬ್ದಾರಿ, ತಂದೆ ತಾಯಿಯರನ್ನು ಒಡ ಹುಟ್ಟಿದವರನ್ನು ಪೊರೆಯಬೇಕಾದ ಬಾಧ್ಯತೆಗಳು ಕೆಳ ಮಧ್ಯಮ ವರ್ಗದವರದ್ದು.ಇಂಥವರನ್ನೆಲ್ಲ ಕೈ ಬೀಸಿ ಕರೆಯುವುದು ನಗರ. ವಲಸೆಯ ಈ ವಿದ್ಯಮಾನವನ್ನು ಆಧುನಿಕತೆಯ ಪ್ರತೀಕವೆಂದೋ ಸಾಂಸ್ಕೃತಿಕ ಪಲ್ಲಟವೆಂದೋ ಅನೇಕ ವಿಧವಾಗಿ ನಿರ್ವಚಿಸಿದರೂ ಅದೊಂದು ಜ್ವಲಂತ ವಾಸ್ತವ.
ಕಾವ್ಯದಲ್ಲಿ ನಯನ ಮನೋಹರವಾಗಿರುವ ನಿಸರ್ಗಸಿರಿ ವಾಸ್ತವ ಜೀವನದಲ್ಲಿ ಕಟುವಾದ ಮಿತಿ. ಕುವೆಂಪು, ತೇಜಸ್ವಿಯವರ ಕಾದಂಬರಿಯಷ್ಟು ರಮ್ಯವೇನಲ್ಲ ಹಳ್ಳಿಯ ಬದುಕು ಬೆಳೆಗೆ ಸರಿಯಾದ ಧಾರಣೆ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುವವರು, ಕಾಡುದಾರಿಯಲ್ಲಿ ದುರ್ಜನರಿಗೆ ಬಲಿಯಾಗುವ ಎಳೆಯ ಹುಡುಗಿಯರು, ಸಕಾಲದಲ್ಲಿ ವೈದ್ಯಕೀಯ ನೆರವು ಸಿಗದೆ ಪ್ರಾಣ ತೆತ್ತವರು, ನೆರೆ,ಬರಗಾಲ ಎಂದೆಲ್ಲ ಆರ್ಥಿಕ ನಷ್ಟ ಅನುಭವಿಸುವವರು.. ಹೀಗೆ ಹಳ್ಳಿಯ ಬದುಕು ದುಸ್ತರ..
ಹೀಗಾಗಿಯೇ ಹಳ್ಳಿಯ ವಿಶಾಲವಾದ ಮನೆಗಳನ್ನು ಬಿಟ್ಟು ಇಕ್ಕಟ್ಟಿನ ಪಿಜಿಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಯುವ ತಲೆಮಾರು ತನ್ನದೇ ರೀತಿಯಲ್ಲಿ ಸಂಭ್ರಮ ಕಂಡುಕೊಳ್ಳುತ್ತದೆ. ಇನ್ನು ಕಡು ಬಡವರೂ ಕೂಡಾ ಹಳ್ಳಿಗಳಲ್ಲಿ ಕೂಲಿ ಮಾಡುವುದಕ್ಕಿಂತ ನಗರದ ಮಲ್ಟಿ ಸ್ಟೆಶಾಲಿಟಿ ಹಾಸ್ಪಿಟಲ್, ಫ್ಯಾಕ್ಟರಿಗಳು, ಬೇಕರಿಗಳು, ಫಾಸ್ಟ್‌ಫುಡ್ ಜಾಯಿಂಟ್‌ಗಳಲ್ಲಿ ಸಣ್ಣ ಪುಟ್ಟ ಕೆಲಸಗಳನ್ನಾದರೂ ಮಾಡಿ ಸ್ವಾಯತ್ತೆತೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಒಟ್ಟಿನ ಮೇಲೆ ‘ವಲಸೆ’ಎನ್ನುವುದು ಜಾಗತೀಕರಣಗೊಂಡ ಭಾರತದ ಸ್ಥಾಯಿ ಭಾವವಾಗಿದೆ.
ಜನರು ವಲಸೆಯನ್ನು ಯಾಕೆ ಹಂಬಲಿಸುತ್ತಾರೆಂದರೆ ಅದು ಅವರಿಗೆ ಅಪಾರ ಅನುಭವವನ್ನು, ಹೊಸದಾಗಿ ಬದುಕು ಆರಂಭಿಸುವ ಆಶಯವನ್ನು, ಗತವನ್ನು ಮೀರಿ ಬೆಳೆಯುವ ಪರಿಸರ, ಸಂಪರ್ಕಗಳನ್ನು ಒದಗಿಸುತ್ತದೆ. ಸಿಟಿಯಲ್ಲಿನ ಅನಾಮಿಕತನ, ತಮಗೆ ಬೇಕಾದಂತೆ ಬದುಕುವ ಸ್ವಾತಂತ್ರ್ಯ, ಅಲ್ಲಿನ ಉದ್ಯೋಗವಕಾಶಗಳು, ಮನರಂಜನೆಗೂ, ವ್ಯಕ್ತಿತ್ವ ವಿಕಾಸಕ್ಕೂ ಇರುವ ಸಾಧ್ಯತೆಗಳ ಜನರನ್ನು ಸೆಳೆಯುತ್ತದೆ.ವಲಸೆಯೆಂದೆ ಚಲನಶೀಲತೆ, ಸ್ವಾತಂತ್ರ್ಯ ಎಲ್ಲೆಗಳನ್ನು ಮೀರಿ ಹರಿವ ನದಿಯ ಜೀವನೋತ್ಸಾಹ.
– ಜಯಶ್ರೀ. ಬಿ. ಕದ್ರಿ
ತುಂಬಾ ಅರ್ಥಪೂರ್ಣವಾದ ಲೇಖನ