ನಾ ಕಂಡ ಆದಿ ಯೋಗಿ: ಹೆಜ್ಜೆ 3
-ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು…
ಅತ್ಯಂತ ರಮಣೀಯವಾದ ವೆಲ್ಲಿಯಂಗಿರಿ ಪರ್ವತ ಸಾಲಿನ ತಪ್ಪಲಿನಲ್ಲಿ ಸುಮಾರು ನೂರೈವತ್ತು ಎಕರೆ ಪ್ರದೇಶದಲ್ಲಿ ನೆಲೆಸಿತ್ತು ಈಶ ಯೋಗ ಕೇಂದ್ರ. ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಝುಳು ಝುಳು ಹರಿಯುವ ನದಿಗಳು, ಕೋಡುಗಲ್ಲುಗಳ ಮೇಲಿನಿಂದ ಧುಮ್ಮಿಕ್ಕುವ ಜಲಪಾತಗಳು ಯಾತ್ರಿಗಳ ಮನ ಸೆಳೆಯುವುವು. ಈಶ ಕೇಂದ್ರದ ಪಕ್ಕದಲ್ಲಿ ಅಭಯಾರಣ್ಯ ಇದ್ದು, ಕೆಲವು ಬಾರಿ ಕಾಡಾನೆಗಳು ಹಿಂಡು ಹಿಂಡಾಗಿ ಬರುತ್ತವೆ ಎಂದು ಮಾತಾಡಿಕೊಳ್ಳುತ್ತಿದ್ದರು. ಅದಕ್ಕಾಗಿಯೇ, ಬಲವಾದ ಎಲೆಕ್ಟ್ರಿಕ್ ತಂತಿ ಬೇಲಿ ಹಾಕಿದ್ದಾರೆ. ಈಶ ಕೇಂದ್ದದ ಪ್ರಮುಖ ಆಕರ್ಷಣೆ ‘ಧ್ಯಾನಲಿಂಗ’. ಇಲ್ಲಿನ ಪ್ರಶಾಂತ ವಾತಾವರಣ, ಸ್ವಚ್ಛತೆ, ಶಿಸ್ತು ಯಾತ್ರಿಗಳ ಮನಸ್ಸಿಗೆ ಮುದ ನೀಡುತ್ತದೆ.
ದಕ್ಷಿಣ ಭಾರತದ ಕೈಲಾಸ ಎಂದೇ ಹೆಸರು ಪಡೆದಿರುವ, ಈ ಸ್ಥಳಕ್ಕೆ ಹಿಮಾಲಯದಿಂದ ಶಿವನು ಬಂದದ್ದಾದರೂ ಏಕೆ? ಇಲ್ಲಿನ ಸ್ಥಳ ಪುರಾಣ ಕೇಳೋಣ ಬನ್ನಿ. ದಕ್ಷಿಣ ಭಾರತದ ತುತ್ತ ತುದಿಯಲ್ಲಿ ಪದ್ಮಾಕ್ಷಿ ಎನ್ನುವ ಕನ್ಯೆ ವಾಸವಾಗಿರುತ್ತಾಳೆ. ಅವಳಿಗೆ ದಿವ್ಯದೃಷ್ಟಿ ಇದ್ದು, ಗ್ರಾಮದ ಜನರ ಹಿತಕ್ಕಾಗಿ ತನ್ನ ಸರ್ವಸ್ವವನ್ನೂ ಮುಡಿಪಾಗಿಟ್ಟುರುತ್ತಾಳೆ. ಅವಳು ಮಹಾಶಿವಭಕ್ತೆ. ಹಗಲೂ ರಾತ್ರಿ ಶಿವನನ್ನೇ ಆರಾಧಿಸುತ್ತಾ, ಅವನನ್ನೇ ವರಿಸುವ ಸಂಕಲ್ಪ ಮಾಡಿರುತ್ತಾಳೆ. ಪದ್ಮಾಕ್ಷಿಯ ಪ್ರೀತಿಗೆ ಒಲಿದ ಶಿವನೂ, ಅವಳಲ್ಲಿ ಅನುರಕ್ತನಾಗಿ, ಅವಳನ್ನು ವರಿಸಲು ಸಿದ್ಧನಾಗುತ್ತಾನೆ. ಆದರೆ, ಪದ್ಮಾಕ್ಷಿಯು ಶಿವನನ್ನು ವರಿಸಿ ಹಿಮಾಲಯಕ್ಕೆ ತೆರಳಿದರೆ, ತಮ್ಮ ಊರಿನ ಅದೃಷ್ಟದೇವತೆಯೇ ಹೊರಟು ಹೋಗುವಳಲ್ಲಾ ಎಂಬ ಚಿಂತೆಯಿಂದ ಗ್ರಾಮಸ್ಥರು, ಅವರ ಮದುವೆಯನ್ನು ತಡೆಯಲು, ಶಿವನಿಗೆ ಹಲವು ಸವಾಲುಗಳನ್ನು ಒಡ್ಡುತ್ತಾರೆ. ಎಲ್ಲಾ ಸವಾಲುಗಳನ್ನು ಜಯಿಸಿದ ಶಿವನಿಗೆ, ಗ್ರಾಮದವರು ಕೊನೆಯ ಷರತ್ತನ್ನು ವಿಧಿಸುತ್ತಾರೆ. ಕೈಲಾಸದಿಂದ ಹೊರಟ ಮದುಮಗ ಶಿವನ ದಿಬ್ಬಣವು, ಒಂದೇ ದಿನದಲ್ಲಿ ದಕ್ಷಿಣ ಭಾರತದ ತುತ್ತ ತುದಿಯಲ್ಲಿದ್ದ ಗ್ರಾಮವನ್ನು ತಲುಪಬೇಕೆಂದೂ, ಬೆಳಗಾಗುವುದರೊಳಗೆ ಶಿವನು ಪದ್ಮಾಕ್ಷಿಯನ್ನು ವರಿಸಬೇಕೆಂದೂ ಹೇಳುತ್ತಾರೆ. ಶಿವನು, ತನ್ನ ಗಣಂಗಳೊಂದಿಗೆ ಪದ್ಮಾಕ್ಷಿಯನ್ನು ವರಿಸಲು ಧಾವಿಸುತ್ತಾನೆ. ಇನ್ನೇನು ಶಿವನು ಹತ್ತಿರದಲ್ಲಿಯೇ ಇದ್ದಾನೆ, ಎಂದು ತಿಳಿದಾಗ ಹಳ್ಳಿಯವರು ಒಂದು ಬೃಹದಾಕಾರದ ಕರ್ಪೂರದ ಗುಡ್ಡೆಯನ್ನು ಜೋಡಿಸಿ, ಅಗ್ನಿ ಸ್ಪರ್ಶ ಮಾಡುತ್ತಾರೆ. ಅದು ಧಗಧಗನೆ ಉರಿಯತೊಡಗಿದಾಗ, ದೂರದಲ್ಲಿದ್ದ, ಶಿವನಿಗೆ ಬೆಳಗಾದ ಹಾಗೆ ಭಾಸವಾಗಿ, ಪದ್ಮಾಕ್ಷಿಯೊಂದಿಗೆ ತನ್ನ ಮದುವೆ ನಡೆಯಲಾರದು ಎಂಬ ಬೇಸರದಿಂದ ಅಲ್ಲಿಯೇ ನಿಲ್ಲುತ್ತಾನೆ. ಮದುವೆಗೆ ಸಿದ್ಧವಾಗಿ ಕಾಯುತ್ತಿದ್ದ ವಧು, ಶೋಕತಪ್ತಳಾಗಿ ದೇಹ ತ್ಯಾಗ ಮಾಡುತ್ತಾಳೆ. ಇವಳೇ ಕನ್ಯಾಕುಮಾರಿ ಎಂದು ಪ್ರಖ್ಯಾತಳಾಗುತ್ತಾಳೆ. ಶಿವನು ವೆಲ್ಲಿಯಂಗಿರಿ ಬೆಟ್ಟಗಳ ಮೇಲೆ ಧ್ಯಾನಸ್ಥನಾಗಿ ಕುಳಿತುಬಿಡುತ್ತಾನೆ. ಕೆಲವು ಕಾಲ ಶಿವನು ಇಲ್ಲಿ ತಂಗಿದ್ದರಿಂದ, ವೆಲ್ಲಿಯಂಗಿರಿ ಪರ್ವತ ಸಾಲುಗಳು ಪವಿತ್ರ ಸ್ಥಳವಾಗಿದೆ.
ಧ್ಯಾನಲಿಂಗದ ಮುಂಭಾಗದಲ್ಲಿ ಶಿವನ ಅನುಯಾಯಿಯಾದ ನಂದಿ ಕುಳಿತಿದ್ದಾನೆ. ನಂದಿಯ ಆಕೃತಿಯೂ ವಿಭಿನ್ನವಾಗಿದೆ. ಇದು ಲೋಹದಿಂದ ಮಾಡಲ್ಪಟ್ಟ, ಎತ್ತರವಾದ ಆಕೃತಿಯಾಗಿದ್ದು, ಇದರ ಒಡಲಲ್ಲಿ – ವಿಭೂತಿ, ಅರಿಶಿಣ, ಚಂದನ, ಮರಳು, ಎಣ್ಣೆ ಹಾಗೂ ಗಿಡಮೂಲಿಕೆಗಳ ಸಾರವನ್ನು ತುಂಬಿದ್ದಾರೆ. ಈ ವಿಶಿಷ್ಟವಾದ ಮಿಶ್ರಣದಿಂದ, ನಂದಿಯ ಮೈ ಫಳಫಳನೆ ಹೊಳೆಯುತ್ತಿದೆ. ಸದ್ಗುರುಗಳ ಮಾತಿನಲ್ಲಿ ಹೇಳುವುದಾದರೆ – ನಂದಿ ಎಚ್ಚರದಿಂದ, ತಾಳ್ಮೆಯಿಂದ ಕಾಯುವಿಕೆಯ ಸಂಕೇತವಾಗಿ ನಿಲ್ಲುವನು. ಶಿವನ ವಾಹನವಾದ ನಂದಿ ಹೇಳುವ ಕಿವಿಮಾತು ಏನು ಗೊತ್ತೆ? ‘ನನ್ನ ಹಾಗೆ ಶಿವನಿಗೆ ಸಂಪೂರ್ಣ ಶರಣಾಗಿ, ಜಾಗೃತ ಸ್ಥಿತಿಯಲ್ಲಿ ಮೌನವಾಗಿ ಕುಳಿತುಕೋ’. ನಂದಿಯ ಕೊಂಬುಗಳ ಮಧ್ಯೆ ಧ್ಯಾನಲಿಂಗದ ಜ್ಯೋತಿ ಗೋಚರಿಸುತ್ತದೆ.
ನಂದಿಗೆ ವಂದಿಸಿ ಮುಂದೆ ಸಾಗಿದರೆ, ಕಂಡುಬರುವುದು – ಸರ್ವಧರ್ಮ ಸ್ತಂಭ. ಬೇರೆ ದೇಗುಲಗಳಲ್ಲಿ ಗರುಡಗಂಬ ಇರುವಂತೆ, ಇಲ್ಲಿ ಈ ಸ್ತಂಭವನ್ನು ನಿಲ್ಲಿಸಲಾಗಿದೆ. ಇದು ಒಂದು ವಿಶೇಷವಾದ ಸ್ತಂಭ, ಮುಂಭಾಗದಲ್ಲಿ, ಏಳು ಚಕ್ರ್ರಗಳ ಕೆತ್ತನೆ ಇದ್ದರೆ, ಉಳಿದ ಮೂರು ಭಾಗದಲ್ಲಿ ಸರ್ವಧರ್ಮಗಳ ಚಿಹ್ನೆಯನ್ನು ರಚಿಸಿದ್ದಾರೆ. ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಜೈನ, ಬೌದ್ಧ, ತಾವೋಯಿಸಂ, ಜೊರಾಸ್ಟ್ರಿಯಾನಿಸಂ, ಜುಡಾಯಿಸಂ ಮತ್ತು ಶಿಂಟೋ ಧರ್ಮದ ಗುರುತು ಮೂಡಿಸಿದ್ದಾರೆ. ಇಲ್ಲಿ ಜಾತಿ, ಮತ, ಪಂಥಗಳ ಬೇಧಭಾವವಿಲ್ಲ, ಯಾವುದೇ ಪೂಜೆ, ಅರ್ಚನೆ, ಧರ್ಮದ ವಿಧಿ ವಿಧಾನಗಳು ಇಲ್ಲಿ ನಡೆಯುವುದಿಲ್ಲ. ಇದು ‘ಸರ್ವ ಜನಾಂಗದ ಶಾಂತಿಯ ತೋಟದ’ ರೂಪಕವಾಗಿ ನಿಂತಿದೆ.
ಸ್ತಂಭದ ಮುಂಭಾಗದಲ್ಲಿ ಏಳುಚಕ್ರಗಳೂ, ಅವುಗಳ ಬೀಜಾಕ್ಷರಗಳೂ, ಕಮಲದ ಪುಷ್ಪಗಳೂ ಅರಳಿ ನಿಂತಿದೆ. ಸ್ತಂಭದ ಕೆಳಭಾಗದಲ್ಲಿರುವ ಮೂಲಾಧಾರ ಚಕ್ರದಲ್ಲಿ ಲಂ ಬೀಜಾಕ್ಷರದೊಂದಿಗೆ ನಾಲ್ಕು ದಳದ ಕಮಲವು ಮೇಲ್ಮುಖವಾಗಿ ಆರಳಿದ್ದರೆ, ಸ್ವಾಧಿಷ್ಠಾನ ಚಕ್ರದಲ್ಲಿ ವಂ ಅಕ್ಷರದೊಂದಿಗೆ ಆರುದಳದ ಕಮಲವೂ, ಮಣಿಪೂರಕ ಚಕ್ರದಲ್ಲಿ ರಂ ಅಕ್ಷರದೊಂದಿಗೆ ಹತ್ತುದಳದ ಕಮಲವೂ, ಅನಾಹತ ಚಕ್ರದಲ್ಲಿ ಯಂ ಅಕ್ಷರದೊಂದಿಗೆ ಹನ್ನೆರಡು ದಳದ ಕಮಲವೂ, ವಿಶುದ್ದಿ ಚಕ್ರದಲ್ಲಿ ಹಂ ಅಕ್ಷರದೊಂದಿಗೆ ಹದಿನಾರು ದಳದ ಚಕ್ರವೂ, ಆಜ್ಞಾ ಚಕ್ರದಲ್ಲಿ ಓಂ ಬೀಜಾಕ್ಷರದೊಂದಿಗೆ ಎರಡು ದಳದ ಕಮಲವೂ, ಸಹಸ್ರಾರದಲ್ಲಿ, ಸಹಸ್ರ ದಳದ ಕಮಲವೂ ಅರಳಿ ನಿಂತಿವೆ. ಈ ಚಕ್ರಗಳ ಎರಡೂ ಬದಿಯಲ್ಲಿ ಜಾಗೃತವಾದ ಕುಂಡಲಿನೀ ಶಕ್ತಿಯು ಸರ್ಪದ ರೂಪದಲ್ಲಿ ಮೇಲೇರುತ್ತಿರುವುದನ್ನು ಕಾಣಬಹುದು.
ಇನ್ನು ದೇಗುಲದ ಒಳಗೆ ಹೋಗೋಣ ಬನ್ನಿ, ಎಡಬದಿಯಲ್ಲಿ ಪತಂಜಲಿ ಮಹರ್ಷಿಗಳ ಮೂರ್ತಿಯಿದ್ದರೆ, ಬಲಬದಿಯಲ್ಲಿ ವನಶ್ರೀ ಆಕೃತಿಯಿದೆ. ವನಶ್ರೀಯು ಒಂದು ದೊಡ್ಡ ಅರಳೀ ಮರದ ಆಕೃತಿಯಲ್ಲಿದೆ. ಮಧ್ಯೆ ಚಿನ್ನದ ಎಲೆಯಂತೆ ಹೊಳೆಯುವ ಅರಳಿ ಎಲೆಯಿದೆ. ಬುದ್ಧನಿಗೆ ಜ್ಞಾನೋದಯವಾಗಿದ್ದು, ಈ ಅರಳಿ ಮರದಡಿಯಲ್ಲಿಯೇ ಅಲ್ಲವೇ? ಹಿಂದೂಗಳಿಗೆ ಅರಳಿ ಮರ ಒಂದು ಪವಿತ್ರವಾದ ವೃಕ್ಷ.
ಪತಂಜಲಿಯವರ ಶರೀರ ಅರ್ಧ ಸರ್ಪ, ಅರ್ಧ ಮಾನವಾಕೃತಿಯಲ್ಲಿದೆ. ಗಿರಿಜಕ್ಕನಿಗೆ ಇದರ ವಿವರವನ್ನು ತಿಳಿಯುವ ಕುತೂಹಲ. ಆದರೆ ದೇಗುಲದಲ್ಲಿ ಮಾತಾಡುವ ಹಾಗಿಲ್ಲ. ಹೊರಗೆ ಬಂದ ಮೇಲೆ ನಾನು ಪತಂಜಲಿಯವರ ಹುಟ್ಟು, ಸಾಧನೆಗಳ ಬಗ್ಗೆ ಹೇಳಿದೆ. ಗೋಣಿಕಾ ಎಂಬ ಯೋಗಿನಿಯು, ತನ್ನ ಜ್ಞಾನವನ್ನು ಧಾರೆಯೆರೆಯಲು, ಒಂದು ಮಗುವನ್ನು ಕರುಣಿಸೆಂದು, ಶಿವನನ್ನು ಬೇಡುತ್ತಾಳೆ. ಅವಳ ಅಂಗೈಯಲ್ಲಿ, ಒಂದು ಹಾವಿನ ಮರಿ ಬೀಳುತ್ತದೆ. ಅದು ಕುಂಡಲಿನೀ ಶಕ್ತಿಯ ಸಂಕೇತ. ಪತ ಎಂದರೆ ಬೀಳು, ಅಂಜಲಿ ಎಂದರೆ ಅಂಗೈ. ಹೀಗೆ ಗೋಣಿಕಾ ಪುತ್ರನಾದ, ಪತಂಜಲಿಯ ಜನನವಾಗುವುದು. ತನ್ನ ಮಾತೆಯಿಂದ ಯೋಗಶಾಸ್ತ್ರದ ಜ್ಞಾನವನ್ನು ಪಡೆದ ಪತಂಜಲಿಯು, ಯೋಗಶಾಸ್ತ್ರಕ್ಕೆ – ಚಿತ್ತ ವೃತ್ತಿ ನಿರೋಧಃ ಎಂಬ ಸರಳ ವ್ಯಾಖ್ಯಾನ ನೀಡಿದನು. ಹತ್ತು ಹಲವು ಶಾಖೆಗಳಾಗಿ ಹರಿದು ಹಂಚಿ ಹೋಗಿದ್ದ ಯೋಗ ಶಾಸ್ತ್ರವನ್ನು ಒಂದು ಗೂಡಿಸಿ, ನಾಲ್ಕು ಪಾದಗಳನ್ನು ರಚಿಸಿದರು. ಇವರನ್ನು ಅಷ್ಟಾಂಗ ಯೋಗದ ಪಿತಾಮಹ ಎಂದೇ ಕರೆಯಲಾಗುತ್ತದೆ. ಮೊದಲನೆಯದು ಸಾರ್ವತ್ರಿಕ ನಿಯಮಗಳನ್ನೊಳಗೊಂಡ ಯಮ – ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ. ಎರಡನೆಯದು ವೈಯುಕ್ತಿಕ ಮೌಲ್ಯವನ್ನು ಬೋಧಿಸುವ ನಿಯಮಗಳು – ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿದಾನ. ಮೂರನೆಯದು ಆಸನಗಳು – ಇವುಗಳಿಂದ ಶಾರೀರಿಕ ಸಧೃಢತೆ ಲಭಿಸುವುದು. ನಾಲ್ಕನೆಯದು ಪ್ರಾಣಾಯಾಮ – ಇದರಿಂದ ಧೃಢ ಮನಸ್ಸು, ಅರ್ಪಣಾ ಮನೋಭಾವ ದೊರೆಯುವುದು. ಐದನೆಯದು ಪ್ರತ್ಯಾಹಾರ – ಪಂಚೇದ್ರ್ರಿಯಗಳನ್ನು ನಿಗ್ರಹಿಸುವ ಸಾಧನ. ಆರನೆಯದು ಧಾರಣ – ಏಕಾಗ್ರತೆಯನ್ನು ಪಡೆಯುವುದು. ಏಳನೆಯದು ಧ್ಯಾನ – ತಾನು ಪರಮಾತ್ಮನ ಒಂದು ಅಂಶವೆಂದು ಅರಿಯುವ ಕ್ರಿಯೆ. ಎಂಟನೆಯದು ಸಮಾಧಿ – ಮಾನವನು ಪರಿಪೂರ್ಣತೆಯನ್ನು ಪಡೆಯುವ ಕ್ಷಣ. ಪತಂಜಲಿ ಮಹರ್ಷಿಗಳು, 196 ಸೂತ್ರಗಳನ್ನು ರಚಿಸಿ, ಯೋಗಶಾಸ್ತ್ರಕ್ಕೆ ಒಂದು ವೈಜ್ಞಾನಿಕ ತಳಹದಿಯನ್ನು ಹಾಕಿದರು. ಇನ್ನೂ ಹಲವು ಉತ್ತಮ ಗ್ರಂಥಗಳನ್ನು ರಚಿಸಿದ ಕೀರ್ತಿ ಇವರಿಗೆ ಸಲ್ಲುವುದು. ಕೆಲವರು, ಪತಂಜಲಿಯವರನ್ನು ಆದಿಶೇಷನ ಅವತಾರವೆಂದೂ ಭಾವಿಸುವರು.
ನಾಲ್ಕು ಹೆಜ್ಜೆ ಮುಂದೆ ನಡೆದರೆ – ಆರು ಜನ ಮಹಾ ಮಹಿಮರ ಚಿತ್ರಣಗಳನ್ನು ಎಡ ಮತ್ತು ಬಲಬದಿಯ ಗೋಡೆಗಳ ಮೇಲೆ ಕೆತ್ತಲಾಗಿದೆ. ಕೌಶಿಕ ದೊರೆಯ ಪತ್ನಿ, ಮಹಾದೇವಿ ತನ್ನ ಉಡುಪನ್ನೆಲ್ಲಾ ಕಿತ್ತೆಸೆದು, ಚನ್ನಮಲ್ಲಿಕಾರ್ಜುನನ್ನು ಅರಸುತ್ತಾ, ಅರಮನೆಯಿಂದ ಹೊರನಡೆದ ಅಕ್ಕ ಮಹಾದೇವಿಯ ಚಿತ್ರಣ. ತನ್ನ ಕಣ್ಣುಗಳನ್ನೇ ಕಿತ್ತು ಶಿವನಿಗೆ ನೀಡುತ್ತಿರುವ ಮಹಾ ಶಿವಭಕ್ತ ಬೇಡರ ಕಣ್ಣಪ್ಪ. ಒಂದು ಕಣ್ಣನ್ನು ಈಗಾಗಲೇ ಶಿವನಿಗೆ ನೀಡಿದ್ದಾನೆ, ಮತ್ತೊಂದು ಕಣ್ಣನ್ನೂ ಕಿತ್ತಾಗ, ಕುರುಡನಾಗುವ ತಾನು, ಕಣ್ಣನ್ನು ಜೋಡಿಸಲು ಅನುಕೂಲವಾಗುವಂತೆ, ಒಂದು ಪಾದವನ್ನು ಶಿವಲಿಂಗದ ಮೇಲೆ ಇಟ್ಟಿದ್ದಾನೆ. ಅಬ್ಬಾ ಎಂತಹ ಭಕ್ತಿಭಾವ. ಮೈಪೋರೆಲ್ ನಾಯನಾರ್ ಎಂಬ ಶಿವಭಕ್ತನ ಭಕ್ತಿಗೆ ಮೆಚ್ಚಿ, ಅವನನ್ನು ಶಿವನು ಆಶೀರ್ವದಿಸುತ್ತಿರುವ ಚಿತ್ರ. ಸದಾಶಿವ ಬ್ರಹ್ಮೇಂದ್ರ ಎಂಬ ಯೋಗಿಯು, ತನ್ನ ಶರೀರದ ಹಂಗನ್ನೇ ತೊರೆದು, ಬೆತ್ತಲೆಯಾಗಿ ತಿರುಗಾಡುತ್ತಿರುತ್ತಾನೆ. ಒಮ್ಮೆ, ರಾಜನ ಉದ್ಯಾನವನ್ನು ಪ್ರವೇಶಿಸುತ್ತಾನೆ. ಸಿಟ್ಟಿಗೆದ್ದ ಸೈನಿಕರು, ಕತ್ತಿಯಿಂದ ಅವನ ಕೈಯನ್ನೆ ತುಂಡರಿಸುತ್ತಾರೆ. ಆದರೆ ಆ ಯೋಗಿಯು, ಯಾವುದೇ ಪರಿವೆಯಿಲ್ಲದೆ, ಮುನ್ನಡೆಯುತ್ತಾನೆ. ಇದನ್ನು ಕಂಡ ರಾಜನು, ಅವನಿಗೆ ಶರಣಾಗಿ ತಲೆಬಾಗುವನು. ಪುಸಲಾರ್ ಎಂಬ ತಪಸ್ವಿಯು, ಊರ ಹೊರಗಿನ ಮರದಡಿಯಲ್ಲಿ ಧ್ಯಾಮಗ್ನನಾಗಿರುವನು. ಆ ಊರಿನ ಅರಸನು, ಒಂದು ಭವ್ಯವಾದ ದೇಗುಲವನ್ನು ನಿರ್ಮಿಸಿ, ಪ್ರಾಣ ಪ್ರತಿಷ್ಟೆ ಮಾಡುವ ಸಮಯ ಬಂದಾಗ, ಶಿವನು ಅವನ ಕನಸಿನಲ್ಲಿ ಬಂದು, ತಾನು ಪುಸಲಾರ್‌ನ ದೇಗುಲದಲ್ಲಿ ನೆಲಸುವುದಾಗಿ ತಿಳಿಸುವನು. ಅಚ್ಚರಿಯಿಂದ ರಾಜನು, ಆ ತಪಸ್ವಿಯನ್ನು ಹುಡುಕಿ, ಅವನು ಕಟ್ಟಸಿರುವ ದೇಗುಲವೆಲ್ಲಿ ಎಂದು ಕೇಳಿದಾಗ, ಪುಸಲಾರ್ ನಸುನಕ್ಕು, ತನ್ನ ಮನಸ್ಸೇ ದೇಗುಲವೆಂದು ತಿಳಿಸುವನು. ಧ್ಯಾನಸ್ಥರಾದ ಸದ್ಗುರುವನ್ನು ಶಿವನು ಆಶೀರ್ವದಿಸುತ್ತಿರುವುದು, ಕೊನೆಯ ಚಿತ್ರ. ಇದು ಅವರ ಮೂರನೆಯ ಜನ್ಮವೆಂದು ಬಿಂಬಿಸಲಾಗಿದೆ.
ದೇಗುಲದ ಹಿಂಬದಿಯಲ್ಲಿ, ಒಂದು ತ್ರಿಮೂರ್ತಿಯ ವಿಗ್ರಹವಿದೆ. ಇದು, ನಾವು ಭಾವಿಸುವಂತೆ – ಬ್ರಹ್ಮ, ವಿಷ್ಣು, ಮಹೇಶ್ವರರ ಮೂರ್ತಿಯಲ್ಲ. ಬದಲಿಗೆ ಇದು ಮಾನವನಲ್ಲಿ ಅಡಕವಾಗಿರುವ ಮೂರು ಗುಣಗಳಾದ ತಮಸ್ಸು, ರಜಸ್ಸು ಹಾಗೂ ಸತ್ವದ ಸಂಕೇತವಾಗಿ ನಿಂತಿದೆ. ಇವು ಮೂರೂ ಶಿವನದೇ ಮೂರು ಅವತಾರಗಳು – ಧ್ಯಾನಮಗ್ನನಾದ ಹರ, ತಾಂಡವ ನೃತ್ಯವನ್ನಾಡುವ ರುದ್ರ ಹಾಗೂ ಮಂಗಳಕರನಾದ ಸದಾಶಿವ.
ಈ ಲೇಖನದ ಹಿಂದಿನ ಭಾಗ ಇಲ್ಲಿದೆ : http://surahonne.com/?p=35412
(ಮುಂದುವರಿಯುವುದು)
-ಡಾ.ಗಾಯತ್ರಿದೇವಿ ಸಜ್ಜನ್
ಸೂಪರ್
ನಾ ಕಂಡ ಆದಿ ಯೋಗಿ…ಲೇಖನ ಸೊಗಸಾದ ನಿರೂಪಣೆ ಯೊಂದಿಗೆ ಬರುತ್ತಿದೆ…ಮತ್ತೊಂದು ಸಾರಿ ಅಲ್ಲಿಗೆ ಹೋಗ ಬೇಕೆಂದು..ಮನ ಬಯಸುವಂತಿದೆ…ಧನ್ಯವಾದಗಳು ಮೇಡಂ.
ನೈಸ್
ನಿಮ್ಮ ಅಭಿಮಾನಪೂರ್ವಕ ನುಡಿಗಳಿಗೆ ವಂದನೆಗಳು
ದೇಗುಲ ದರ್ಶನದ ಸೊಗಸಾದ ವರ್ಣನೆಯು ಬಹಳಷ್ಟು ವಿವರಗಳಿಂದ ಕೂಡಿದ್ದು ಕುತೂಹಲಕಾರಿಯಾಗಿದೆ.
ಕೂಲಂಕುಷವಾದ ವಿವರಣೆಯೊಂದಿಗೆ ಭಕ್ತಿಭಾವದಿಂದ ಕೂಡಿದ ನಿರೂಪಣೆಗಾಗಿ ಅಭಿನಂದನೆಗಳು.
ನಲ್ಮೆಯ ಓದುಗರಿಗೆ ವಂದನೆಗಳು