ನಾ ಕಂಡ ಆದಿ ಯೋಗಿ-ಹೆಜ್ಜೆ 1
ಸಂಜೆಯಾಗಿತ್ತು. ವಿಶಾಲವಾದ ಬಯಲು. ವೆಲ್ಲಂಗಿರಿ ಬೆಟ್ಟದ ತಪ್ಪಲಿನಲ್ಲಿ, ಮುಗಿಲೆತ್ತರಕ್ಕೆ ನಿಂತ ಭವ್ಯವಾದ ಮನೋಹರವಾದ ಆದಿಯೋಗಿ ಶಿವನ ವಿಗ್ರಹ. ನಕ್ಷತ್ರದಂತೆ ಹೊಳೆಯುತ್ತಿದ್ದ ಕಂಗಳು, ಜ್ಯೋತಿಯಂತೆ ಬೆಳಗುತ್ತಿದ್ದ ಹಣೆಗಣ್ಣು, ಅಲೆಅಲೆಯಾಗಿ ಬೆನ್ನಿನ ತುಂಬಾ ಹರಡಿದ್ದ ಜಟೆಗಳು, ಮುಡಿಯಲ್ಲಿ ಶೋಭಿಸುತ್ತಿದ್ದ ಅರ್ಧ ಚಂದ್ರ, ಅರೆ ನಿಮೀಲಿತ ನೇತ್ರಗಳು, ತುಟಿಗಳಲ್ಲಿ ಮಿನುಗುತ್ತಿದ್ದ ಮಂದಹಾಸ, ಕೊರಳಲ್ಲಿ ಹೆಡೆಯೆತ್ತಿ ನಿಂತ ಸರ್ಪ ಎಲ್ಲರ ಮನಸೆಳೆಯುತ್ತಿದ್ದವ್ತು. ಮೆಲ್ಲಮೆಲ್ಲನೆ ಕತ್ತಲೆ ಆವರಿಸುತ್ತಿದ್ದಂತೆ, ಮಧುರವಾಗಿ ತೇಲಿ ಬಂತು ಶಿವಸ್ತುತಿ.
ಇದ್ದಕ್ಕಿದ್ದಂತೆ ಶಿವನ ಹಣೆಗಣ್ಣಿನಿಂದ ಹೊರಟಿತ್ತು ಬೆಂಕಿಯ ಜ್ವಾಲೆ. ಇಡೀ ಭೂಮಂಡಲವೇ ಬೆಂಕಿಯ ಉಂಡೆಯಂತೆ ಧಗಧಗಿಸಿ ಉರಿಯತೊಡಗಿತ್ತು. ಯುಗಯುಗಗಳೆ ಉರುಳಿ ಹೋದವು. ನಿಧಾನವಾಗಿ ಬೆಂಕಿ ಆರಿ ಭೂಮಿ ತಣ್ಣಗಾಗುತ್ತಿದ್ದ ಹಾಗೆ, ಮೋಡಗಳು ಘರ್ಜಿಸಿದವು, ಚಿಟಿಲ್ ಚಿಟಿಲ್ ಎಂದು ಸಿಡಿಯಿತು ಸಿಡಿಲುಗಳು, ಧಾರಾಕಾರವಾಗಿ ಸುರಿಯಿತು ವರ್ಷಧಾರೆ. ಯುಗಯುಗಗಳು ಕಳೆದವು. ಕೊನೆಗೂ ನಿಂತಿತು ವರುಣನ ಆರ್ಭಟ. ಮೆಲ್ಲಮೆಲ್ಲನೆ ಜೀವಿಗಳ ಸೃಷ್ಟಿಯಾಗತೊಡಗಿತ್ತು, ಒಂದೆಡೆ ಪ್ರಾಣ ಪ್ರಪಂಚದ ವಿಕಾಸವಾದರೆ, ಮತ್ತೊಂದೆಡೆ ಗಿಡ ಮರಗಳ ಉಗಮ. ಎಲ್ಲಿಂದಲೋ ಧುತ್ತನೇ ಬಂದು ನಿಂತ, ತೇಜಸ್ವಿ ಪುರುಷನೊಬ್ಬ. ಹಿಮಾಲಯದ ಶಿಖರಗಳನ್ನೇರಿ ಧ್ಯಾನಮಗ್ನನಾದ. ಹಲವು ವರ್ಷಗಳು ಉರುಳಿದವು. ಅವನಿಂದ ಪುಂಖಾನುಪುಂಖವಾಗಿ ಹೊರಹೊಮ್ಮುತ್ತಿತ್ತು ಓಂಕಾರ ನಾದ. ಒಮ್ಮೊಮ್ಮೆ ಜ್ಞಾನಮಗ್ನನಾಗಿ ಕುಳಿತರೆ, ಮತ್ತೊಮ್ಮೆ ಆದಿಯೋಗಿಯು ಥಕಧಿಮಿ, ಥಕದಿಮಿ ಎಂದು ನರ್ತಿಸುತ್ತಾ, ಇಡೀ ವಿಶ್ವವನ್ನೇ ನಾದಮಯವನ್ನಾಗಿ ಮಾಡುತ್ತಿದ್ದ. ಅಲ್ಲಿ ಜನ ಸಮೂಹವೇ ನೆರೆದಿತ್ತು, ಭವಸಾಗರದಲ್ಲಿ ತೇಲುತ್ತಿರುವ ತಮಗೆ, ಈ ಮಹಾತಪಸ್ವಿಯಿಂದ, ಏನಾದರೂ ನೆರವಾದೀತೇನೋ ಎನ್ನುವ ಹಂಬಲದಿಂದ. ತನ್ನ ಸುತ್ತಲೂ ನೆರೆದಿದ್ದ ಜನ ಸಮೂಹವನ್ನು, ಒಮ್ಮೆ ಕಣ್ಣು ತೆರೆದು ನೋಡಿದ ಆದಿಯೋಗಿಯು ನಸುನಕ್ಕು, ಮತ್ತೆ ಕಣ್ಣುಮುಚ್ಚಿ ಧ್ಯಾನಮಗ್ನನಾದ. ನಿರಾಶರಾದ ಜನರು, ಅಲ್ಲಿಂದ ನಿರ್ಗಮಿಸಿದರು. ಕಾಲ ಸರಿದಿತ್ತು. ಮತ್ತೊಮ್ಮೆ ಕಣ್ತೆರೆದು ನೋಡಿದ ಶಿವ. ಕಂಡನು, ನಿದ್ರಾಹಾರಗಳನ್ನು ತೊರೆದು, ಆದಿಗುರುವಿನಿಂದ ಜ್ಞಾನವನ್ನು ಪಡೆಯಲು ಕಾತರಿಸುತ್ತಿದ್ದ ಸಪ್ತರ್ಷಿಗಳನ್ನು. ಹರಿಸಿದನು ಜ್ಞಾನಧಾರೆಯನ್ನು, ನೂರಾ ಹನ್ನೆರೆಡು ಜ್ಞಾನ ಶಾಖೆಗಳನ್ನು ಸಪ್ತರ್ಷಿಗಳಿಗೆ ಬೋಧಿಸಿದನು. ಅವರಲ್ಲಿ ಆರು ಮಹರ್ಷಿಗಳು ಮಧ್ಯ ಏಷ್ಯಾ, ಉತ್ತರ ಆಫ್ರಿಕ, ದಕ್ಷಿಣ ಅಮೆರಿಕ ಮುಂತಾದ ಪ್ರದೇಶಗಳಿಗೆ ಯೋಗಶಾಸ್ತ್ರ ಪ್ರಚಾರ ಮಾಡಲು ತೆರಳಿದರೆ, ಮಹರ್ಷಿ ಅಗಸ್ತ್ಯರು ಭಾರತದುದ್ದಕ್ಕೂ ಸಂಚರಿಸಿ ಯೋಗಶಾಸ್ತ್ರವನ್ನು ಬೋಧಿಸಿದರು. ಎಲ್ಲವನ್ನೂ ಗಮನಿಸುತ್ತಿದ್ದ ಪಾರ್ವತಿಯು, ತನಗೂ ಯೋಗಶಾಸ್ತ್ರವನ್ನು ಬೋಧಿಸಬೇಕೆಂದು, ಶಿವನ ಮುಂದೆ ತನ್ನ ಬೇಡಿಕೆಯನ್ನು ಮಂಡಿಸಿದಳು. ಆಗ ಆದಿಗುರುವಾದ ಶಿವನು, ತನ್ನ ಶರೀರದಲ್ಲಿಯೇ ಅರ್ಧಭಾಗವನ್ನು ಪಾರ್ವತಿಗೆ ನೀಡಿ, ಅರ್ಧ ನಾರೀಶ್ವರನಾದ. ಹೀಗೆ ಪರಿಪೂರ್ಣನಾದ ಯೋಗೇಶ್ವರ ಶಿವ. ಭೂಗರ್ಭದಿಂದ ಮೆಲ್ಲನೆ ಮೇಲೆ ಬಂತೊಂದು ಸರ್ಪ, ತನ್ನ ಒಡೆಯನಾದ ಆದಿಯೋಗಿಯ ದರ್ಶನ ಪಡೆಯಲು.
ಇದು ಆದಿಯೋಗಿ ಶಿವನ ಮೂರ್ತಿಯ ಮುಂದೆ ನಾ ಕಂಡ, ಬೆಳಕು ಮತ್ತು ಶಬ್ದದ ಚಿತ್ರಣ. ಅಂದು ನನ್ನ ಹಲವು ವರ್ಷಗಳ ಕನಸು ನನಸಾಗಿತ್ತು. ಮೇ ಒಂಭತ್ತು 2022 ರಂದು ಕುಟುಂಬದ ಸದಸ್ಯರೊಡನೆ ಈಶ ಯೋಗ ಕೇಂದ್ರಕ್ಕೆ ಭೇಟಿ ನೀಡುವ ಸದವಕಾಶ ನನ್ನದಾಗಿತ್ತು. ಒಂದೆಡೆ ಕರೋನ ನಾಲ್ಕನೆಯ ಅಲೆಯ ಭೀತಿ, ಇನ್ನೊಂದೆಡೆ ಬೇಸಿಗೆಯ ಬಿರು ಬಿಸಿಲಿನ ಝಳ, ಮತ್ತೊಂದೆಡೆ ವಾಯುಭಾರ ಕುಸಿತದಿಂದಾಗಿ ಸುರಿಯಲಿರುವ ಮಳೆಯ ಆತಂಕ. ಬಂದದ್ದೆಲ್ಲಾ ಬರಲಿ, ಆದಿಯೋಗಿಯ ದಯೆ ಇರಲಿ ಎನ್ನುತ್ತಾ, ಈಶ ಯೋಗ ಕೇಂದ್ರಕ್ಕೆ ಹೊರಟೇಬಿಟ್ಟೆವು. ಮುಂಜಾನೆ ಏಳು ಗಂಟೆಗೆ ಬೆಂಗಳೂರಿನಿಂದ ಹೊರಟಿವರು, ಕೊಯಮತ್ತೂರು ಸೇರಿದ್ದು, ಸಂಜೆ ನಾಲ್ಕು ಗಂಟೆಗೆ. ರೈಲಿನ ಪ್ರಯಾಣ ಹಿತಕರವೆನ್ನಿಸಿದರೂ, ಅನಿವಾರ್ಯ ಕಾರಣಗಳಿಂದ ಟೆಂಪೋ ಟ್ರಾವೆಲರ್ ಗೊತ್ತು ಮಾಡಿದ್ದೆವು. ಈಶ ಕೇಂದ್ರಕ್ಕೆ ತಲುಪಲು ಗೂಗಲ್ ಮ್ಯಾಪ್ ಮೊರೆ ಹೊಕ್ಕೆವು. ಅದು ಮೂರು ದಿಕ್ಕುಗಳನ್ನು ತೋರಿಸುತ್ತಿತ್ತು. ಮೊದಲನೆಯ ದಿಕ್ಕಿನಲ್ಲ್ಲಿ ಅರ್ಧ ದಾರಿ ಸಾಗಿದ್ದೆವು, ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸನು, ಇನ್ನೊಂದು ದಿಕ್ಕಿನಲ್ಲಿ ಹೋಗಲು ಸೂಚಿಸಿದ. ನಾವು, ಅವನು ಸೂಚಿಸಿದ ದಾರಿಯಲ್ಲೇ ಸಾಗಿದೆವು. ಅಲ್ಲಿ ಈಶ ಯೋಗ ಕೇಂದ್ರ ಎಂಬ ಫಲಕ ಹೊತ್ತ ಒಂದು ಪುಟ್ಟ ಮನೆ ಕಾಣ ಸಿತ್ತು. ಅದು ಕೇಂದ್ರದ ಮೂಲ ಸ್ಥಾನ. ಭಾಷೆಯ ತೊಡಕು ಒಂದೆಡೆಯಾದರೆ, ತಮಿಳಿನಲ್ಲಿದ್ದ ಫಲಕಗಳು ಮತ್ತೊಂದೆಡೆ – ನಮಗೆ ಗೊಂದಲವನ್ನುಂಟು ಮಾಡಿದ್ದವು. ಕೊನೆಗೂ, ಒಬ್ಬ ಮಹಾನುಭಾವ ಇಂಗ್ಲಿಷಿನಲ್ಲಿ, ಈಶ ಯೋಗ ಕೇಂದ್ರದ ಹಾದಿಯನ್ನು ತೋರಿಸಿದ. ಬೇರೆ ಬೇರೆ ರಾಜ್ಯಗಳ ಜನರು ಸಂವಾದ ನಡೆಸಲು ಸಾಧ್ಯವಾಗುವಂತಹ ಒಂದು ಭಾಷೆಯನ್ನು ಕಲಿಸಿದ ಬ್ರಿಟಿಷರಿಗೆ ಮನದಲ್ಲಿಯೇ ನಮಿಸಿದೆವು.
ಈಶ ಯೋಗ ಕೇಂದ್ರದ ಹೆಬ್ಬಾಗಿಲಿನಲ್ಲಿ ಒಂದು ಬೃಹದಾಕಾರದ ಸರ್ಪ, ನಮ್ಮನ್ನು ಸ್ವಾಗತಿಸಿತ್ತು. ಸುತ್ತಲೂ ಕಂಡ, ಹಸಿರು ಹೊದ್ದ ವೆಲ್ಲಂಗಿರಿ ಬೆಟ್ಟದ ಸಾಲುಗಳು ನಮ್ಮ ಮನಸ್ಸಿಗೆ ಚೈತನ್ಯವನ್ನು ತುಂಬಿದವು. ನಗುಮೊಗದಿಂದ ನಮಸ್ಕರಿಸಿ, ನಮ್ಮನ್ನು ಸ್ವಾಗತಿಸಿದ ಸ್ವಯಂಸೇವಕರನ್ನು ಕಂಡು ನಮ್ಮ ಪ್ರವಾಸದ ಪ್ರಯಾಸ ತುಸು ಕಡಿಮೆಯಾಯಿತು. ಗಿರಿಜಕ್ಕನ ಮಗ ವಾಗೀಶ, ಮೊದಲೇ ಕಾಟೇಜುಗಳನ್ನು ಕಾದಿರಿಸಿದ್ದರಿಂದ. ಮುಂದಿನ ಹಾದಿ ಸುಗಮವಾಗಿತ್ತು. ನಮ್ಮ ಆಧಾರ್ ಕಾರ್ಡ್ ಸ್ಕ್ಯಾನ್ ಮಾಡಿ, ನಮ್ಮದೊಂದು ಫೋಟೋ ಕ್ಲಿಕ್ಕಿಸಿ, ನಮ್ಮ ಎಡ ಕೈಗೊಂದು ಬ್ಯಾಂಡ್ ತೊಡಿಸಿದರು. ನಮಗೆ ನದಿ ಕಾಟೀಜ್ ತೋರಿಸಿ. ಅಲ್ಲಿದ್ದ ಭಾಗೀರತಿ ಗುಂಪಿನ ಐದು ಕೊಠಡಿಗಳನ್ನು ನೀಡಿದರು. ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶನ ಮಾಡುತ್ತಿದ್ದ ವಾಲೆಂಟಿಯರ್‍ಸ್, ಲಗೇಜ್ ಸಾಗಿಸಲು ತಳ್ಳು ಗಾಡಿಗಳು, ಮೆಲುದನಿಯಲ್ಲಿ ಮಾತಾಡುತ್ತಿದ್ದ ಸಿಬ್ಬಂದಿ ವರ್ಗ, ಹಿರಿಯ ನಾಗರೀಕರಿಗೆ ಮೀಸಲಾಗಿದ್ದ ಎಲೆಕ್ಟ್ರಿಕ್ ವಾಹನಗಳು, ಎಲ್ಲಕ್ಕಿಂತ ಮಿಗಿಲಾಗಿ ಕೇಂದ್ರದ ಮೂಲೆಮೂಲೆಗಳಿಂದ ಕೇಳಿ ಬರುತ್ತಿದ್ದ ಸದ್ಗುರುಗಳ ಅಮೃತವಾಣಿ ಸಂತಸವನ್ನುಂಟು ಮಾಡುತ್ತಿದ್ದವು. ಇಲ್ಲಿನ ಮತ್ತೊಂದು ವೈಶಿಷ್ಟ್ಯ, ಎಲ್ಲೆಡೆ ನಿಶ್ಯಬ್ದವಾಗಿರಿ ಎಂಬ ಫಲಕಗಳನ್ನು ಹಿಡಿದು ತಿರುಗಾಡುತ್ತಿದ್ದ ಸಿಬ್ಬಂದಿ. ಸುಸಜ್ಜಿತವಾದ ಕೊಠಡಿಗಳು ನಮ್ಮನ್ನು ಸ್ವಾಗತಿಸಿದ್ದವು. ದೂರದ ಪ್ರಯಾಣದಿಂದ ದಣಿದಿದ್ದ ನಮಗೆ ಬಿಸಿನೀರಿನ ಸ್ನಾನ ಹಿತಕರವಾಗಿತ್ತು.
ಭಿಕ್ಷಾ ಹಾಲ್ ಎಂಬ ಫಲಕ ಹೊತ್ತಿದ್ದ ಹಾಲ್‌ನಲ್ಲಿ ಅತಿಥಿಗಳಿಗೆ, ದಿನಕ್ಕೆ ಎರಡು ಬಾರಿ ಊಟದ ವ್ಯವಸ್ಥೆ, ಬೆಳಿಗ್ಗೆ ಹತ್ತರಿಂದ ಹಾಗೂ ಸಂಜೆ ಏಳೂವರೆಯಿಂದ. ನಿರ್ಮಲಕ್ಕನಿಗೆ ಭಿಕ್ಷೆ ಎಂಬ ಪದ ರುಚಿಸಲಿಲ್ಲ. ಬದಲಾಗಿ ಪ್ರಸಾದ ಎನ್ನಬಹುದಿತ್ತು ಎಂದು ಅವಳ ವಾದ. ಭಿಕ್ಷೆ ಎನ್ನುವ ಪದ ಮನುಜರಲ್ಲಿರುವ ಅಹಂಅನ್ನು ಅಳಿಸಬಹುದು ಎಂದು ನನ್ನ ವಾದವಾಗಿತ್ತು. ಅಂದು ಕಪಾಲವನ್ನು ಹಿಡಿದ ಶಿವನೇ ಭವತಿ ಭಿಕ್ಷಾಂದೇಹಿ ಎಂದು ಭಿಕ್ಷೆ ಬೇಡಲಿಲ್ಲವೆ? ಇರಲಿ, ಬನ್ನಿ ಊಟ ಮಾಡೋಣ. ಭೋಜನ ಪಂಕ್ತಿಯಲ್ಲಿ ಕುಳಿತವರು ಅನ್ನವನ್ನು ದೇವರೆಂದೇ ಭಾವಿಸಿ, ಸಹನಾಭವತು ಎಂಬ ಮಂತ್ರ ಪಠಣವಾದ ನಂತರವೇ, ಊಟ ಆರಂಭಿಸಬೇಕು. ಮೊದಲಿಗೆ ನಾಲಿಗೆಗೆ ಕಹಿಯಾದ, ಉದರಕ್ಕೆ ಹಿತವಾದ ಕಷಾಯ, ನಂತರದಲ್ಲಿ ಹಸಿ ತರಕಾರಿ, ಹಣ್ಣು, ಸಿರಿಧಾನ್ಯದಿಂದ ತಯಾರಿಸಿದ ಭಕ್ಷಗಳು, ಮಜ್ಜಿಗೆ. ಊಟ ಮಾಡುವಾಗಲೂ ಯಾರೂ ತುಟಿಪಿಟಿಕ್ ಎನ್ನುವಂತಿರಲಿಲ್ಲ. ಊಟ ಮುಗಿಸಿ, ತಟ್ಟೆಗಳನ್ನು ತೊಳೆದಿಟ್ಟು, ಮಾರನೆಯ ದಿನದ ಕಾರ್ಯಕ್ರಮವನ್ನು ಚರ್ಚಿಸಿದೆವು. ಮುಂಚಿತವಾಗಿಯೇ, ದಿನದ ಎಲ್ಲಾ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಿದ್ದರು. ಮುಂಜಾನೆ ಐದೂವರೆಗೆ ಗುರುಪೂಜೆ, ನಂತರ ಧ್ಯಾನಲಿಂಗದ ದರ್ಶನ, ಲಿಂಗ ಬೈರವಿಯ ಆರತಿ, ತೀರ್ಥಕುಂಡಗಳಲ್ಲಿನ ಸ್ನಾನ, ಧ್ಯಾನಲಿಂಗದ ನಾದಾರಾಧನೆ, ಆದಿಯೋಗಿ ಶಿವನ ದರ್ಶನ, ಸಂಜೆಗೆ ಆದಿಯೋಗಿಯ ಸನ್ನಿಧಿಯಲ್ಲಿ ಬೆಳಕು ಹಾಗು ಶಬ್ದದ ಚಿತ್ರಣ. ಈಶ ಯೋಗ ಕೇಂದ್ರದಲ್ಲಿ ಭಾರತೀಯ ಪುರಾತನ ಸಂಸ್ಕೃತಿಯ ಪುನರುತ್ಥಾನದ ಜೊತೆಜೊತೆಗೇ ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡು ಬರುವ ಸ್ವಚ್ಛತೆ, ಶಿಸ್ತಿನ ಅದ್ಭುತ ಮಿಲನವನ್ನು ಕಂಡು ಅಚ್ಚರಿಯಾಯಿತು.
(ಮುಂದುವರಿಯುವುದು)
-ಡಾ.ಗಾಯತ್ರಿದೇವಿ ಸಜ್ಜನ್
ನಾ ಕಂಡ ಆದಿ ಯೋಗಿ..ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ…ನಾವು ಆ ಸ್ಥಳ ಕ್ಕೆ ಭೇಟಿ ಕೊಟ್ಟಿದ್ದರಿಂದ..ಮತ್ತೆ ನೆನಪು..ತಂದಿತು..ಉತ್ತಮ ನಿರೂಪಣೆ. ಧನ್ಯವಾದಗಳು ಮೇಡಂ
Nice one
ಭಕ್ರಿಪೂರ್ವಕವಾಗಿ ಆದಿಯೋಗಿಯಲ್ಲಿನ ಪ್ರವಾಸ ಕಥನ ಮೂಡಿ ಬಂದಿರುವ ಪರಿಗಾಗಿ ನಿಮಗೆ ಧನ್ಯವಾದಗಳು.
ಆದಿ ಯೋಗಿ ಶಿವನ ಕುರಿತು ಬಹಳ ತಿಳಿದುಕೊಂಡಂತಾಯ್ತು. ಸೊಗಸಾದ ಪ್ರವಾಸ ಲೇಖನ ಮೇಡಂ