ಮರೆಯಾಗದಿರಲಿ ಮುಂಡಿಗಡ್ದೆ
“ಐನ್ ಏರ್ ತಿನ್ಪೇರ್? ಅವು ಬ್ರಹ್ಮಕಲಶೊಗು ಮಿನಿ ಆವು.”( ತುಳು ಭಾಷೆ)( ಅಂದರೆ: ಅದನ್ನ ಯಾರು ತಿನ್ನುತ್ತಾರೆ? ಬ್ರಹ್ಮಕಲಶೋತ್ಸವಕ್ಕೆ ಆಗ್ಬಹುದು) ಎನ್ನುವಷ್ಟರ ಮಟ್ಟಿಗೆ ಅಸಡ್ದೆಗೊಳಗಾದ ತರಕಾರಿ ಈ ಮುಂಡಿಗಡ್ಡೆ. ಹೌದು, ನೀವು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುವ ಯಾವುದೇ ದೇವಸ್ಥಾನಗಳ ಇಲ್ಲವೇ ದೈವಸ್ಥಾನಗಳ ಬ್ರಹ್ಮಕಲಶೋತ್ಸವಕ್ಕೆ ಹೋದಿರೆಂದರೆ( ಅಲ್ಲಿ ಎಲ್ಲ ಕಡೆಯೂ ಅನ್ನಸಂತರ್ಪಣೆ ಸರ್ವೇ ಸಾಮಾನ್ಯ), ಅಲ್ಲಿ ಭಕ್ತಾದಿಗಳಿಂದ ಹರಿದುಬರುವ ಹೊರೆಕಾಣಿಕೆಗಳನ್ನಿಡುವ ಉಗ್ರಾಣದಲ್ಲಿ, ಮೂಲೆಯಲ್ಲಿ ಆಳೆತ್ತರಕ್ಕೆ ನಿಲ್ಲಿಸಿರುವ ಈ ಮುಂಡಿಗಡ್ದೆಗಳನ್ನು ನೋಡಬಹುದು. ಸಾವಿರಾರುಗಟ್ಟಲೆ ಜನರಿಗೆ ತಯಾರಿಸುವ ಶಾಕಪಾಕಗಳಲ್ಲಿ ಇದರ ಉಪಯೋಗವನ್ನು ಕಾಣಬಹುದು.ಅಪರೂಪಕ್ಕೊಮ್ಮೆ ನಿತ್ಯದ ಅಡುಗೆಗಳಲ್ಲಿಯೂ ಇದರ ಹಾಜರಾತಿಯು ಕಾಣದಿಲ್ಲ.
ಮರೆಯಾಗುತ್ತಿರುವ ಅದೆಷ್ಟೋ ತರಕಾರಿ, ಗಡ್ಡೆಗಳ ಪಟ್ಟಿಗೆ ನಿಧಾನವಾಗಿ ‘ಮುಂಡಿಗಡ್ದೆ’ ಸೇರ್ಪಡೆಗೊಳ್ಳುತ್ತಿದೆ.
ತೆಂಗಿನ ಮರದ ಬುಡದಲ್ಲೋ, ತೋಟದ ಬದಿಯಲ್ಲೋ, ಅಂಗಳದ ತುದಿಯಲ್ಲೋ, ಯಾವುದೇ ಉಪಚಾರಗಳನ್ನು ಬಯಸದೇ ತನ್ನ ಪಾಡಿಗೆ ತಾನೇ ಹಾಯಾಗಿ, ವಿಶಾಲವಾಗಿ ಬೆಳೆಯುವ ಗಿಡ, ಈ ಮುಂಡಿಗಡ್ಡೆಯ ಗಿಡ.ಆದರೂ ಇದಕ್ಕೆ ಕಾಡು ಹಂದಿಗಳ, ಹೆಗ್ಗಣಗಳ ಕಾಟ ಇಲ್ಲದಿಲ್ಲ. ಹೆಸರೇ ಹೇಳುವಂತೆ, ಇದರ ಗಡ್ದೆಯನ್ನು ತರಕಾರಿಯ ರೂಪದಲ್ಲಿ ಬಳಸಲಾಗುತ್ತದೆ.ಇದರ ಎಲೆಯು, ಕೆಸುವಿನೆಲೆಯಂತೆ ಕಂಡರೂ ಗಾತ್ರದಲ್ಲಿ ಬಹಳ ಹಿರಿದು.ಇದೇ ಕಾರಣಕ್ಕೆ ಈ ಎಲೆಗಳನ್ನು ಸಂಡಿಗೆಗಳನ್ನು ಒಣಗಿಸಲು ಉಪಯೋಗಿಸುತ್ತಾರೆ. ಅದು ಹೇಗೆಂದರೆ, ಎಲೆಯ ಹಿಂದಿನ ಭಾಗವನ್ನು ಶುಚಿಗೊಳಿಸಿ, ಅದರ ಮೇಲೆ ಚೊಕ್ಕದಾಗಿ ಸಂಡಿಗೆಯನ್ನು( ಉದಾ: ಉದ್ದಿನ ಸಂಡಿಗೆ, ಸಬ್ಬಕ್ಕಿ ಸಂಡಿಗೆ) ಎರೆದು, ಬಿಸಿಲಿನಲ್ಲಿ ಒಣಗಿಸಲು ಇಡುವುದು.ಪ್ಲಾಸ್ಟಿಕ್ ಶೀಟುಗಳ ಹಂಗಿಲ್ಲ ಹಾಗೆಯೇ ಪ್ಲಾಸ್ಟಿಕ್ ಶೀಟುಗಳೂ ಬಿಸಿಲಲ್ಲಿ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆಂಬ ಚಿಂತೆಯಿಲ್ಲ.
ಈ ಚಿತ್ರದಲ್ಲಿ ನೀವು ಪನೀರ್ ತುಂಡುಗಳಂತೆ ಕಾಣುವ ಮುಂಡಿಗಡ್ದೆಗಳ ತುಂಡುಗಳು ಅಡುಗೆಗೆ ಸಿದ್ದವಾಗಿರುವುದನ್ನು ನೋಡಬಹುದು.ಉಳಿದ ಗಡ್ಡೆಗಳಂತೆ( ಸುವರ್ಣಗಡ್ಡೆ, ಸಿಹಿಗೆಣಸು)ಇದನ್ನು ಉಪಯೋಗಿಸಲಾಗದು, ಏಕೆಂದರೆ, ಇದರ ತುರಿಕೆಯ ಗುಣ ಕೊಂಚ ಕಿರಿಕಿರಿ,. ಹಾಗೆಂದ ಮಾತ್ರಕ್ಕೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಅದಕ್ಕೆಂದೇ ಸುಲಭ ವಿಧಾನವಿದೆ.ಅದೇನೆಂದರೆ, ಹೀಗೆ ಹೆಚ್ಚಿದ ಹೋಳುಗಳನ್ನು ಮೊದಲು ನೀರು ಹಾಕಿ ಕುದಿಸಿ ಆ ನೀರನ್ನು ಚೆಲ್ಲಿದರೆ, ಅಡುಗೆಗೆ ಮುಂಡಿಗಡ್ಡೆ ಸಿದ್ದವಾದಂತೆ.ಹೀಗೆ ಮಾಡುವುದರಿಂದ ಪೋಷಕಾಂಶಗಳು ನಾಶವಾಗುವುದೆಂಬ ಚಿಂತೆಯಿದ್ದರೆ, ಹುಣಸೇಹುಳಿಯನ್ನು ತುಸು ಜಾಸ್ತಿ ಹಾಕಿದರೆ ಮುಗಿಯಿತು.
ಅಂದಹಾಗೆ ಇದರಿಂದ ಏನೇನು ತಯಾರಿಸಬಹುದು ಅಂತೀರಾ? ಇದರಿಂದ ಗರಂ ಗರಂ ಸಾಂಬಾರ್, ಹಿತವಾದ ಮಜ್ಜಿಗೆ ಹುಳಿ, ಅದೂ ಕೂಡ ಕಡಲೇ ಕಾಳಿನ ಜೊತೆ, ಹಾಗೆಯೇ ರುಚಿ ರುಚಿ ಪಲ್ಯಗಳನ್ನೆಲ್ಲಾ ತಯಾರಿಸಬಹುದು.
ಮುಂಡಿಗಡ್ದೆ ಎಲ್ಲಾದರೂ ದೊರಕಿದರೆ ಏನಾದರೂ ಮಾಡಬಹುದಿತ್ತು ಎಂದು ನಿಮಗನಿಸಿದರೆ, ಇದೋ ಇಲ್ಲಿದೆ ಮುಂಡಿಗಡ್ಡೆಯ ಪಾಕವಿಧಾನಗಳು;
ಮೊದಲಿಗೆ ಮುಂಡಿಗಡ್ಡೆ ಸಾಂಬಾರ್ : ಕುದಿಸಿ ನೀರು ತೆಗೆದ ಮುಂಡಿಗಡ್ದೆಯ ಹೋಳುಗಳನ್ನು ಉಪ್ಪು, ನೀರು, ಒಣಮೆಣಸಿನ ಪುಡಿ ಹಾಕಿ ಕುಕ್ಕರಿನಲ್ಲಿ ಬೇಯಿಸಬೇಕು( ಕುಕ್ಕರಿನಲ್ಲಿ 2 ಸೀಟಿಯ ನಂತರ ಸಿಮ್ ನಲ್ಲಿ 10 ನಿಮಿಷಗಳ ಕಾಲ ಬೇಯಲು ಬಿಡಬೇಕು).ಬೇಯಲು ಕೊಂಚ ಜಾಸ್ತಿ ಸಮಯ ತೆಗೆದುಕೊಳ್ಳುವುದು. ಬೆಂದ ಹೋಳುಗಳಿಗೆ ನಂತರ ಬೆಲ್ಲ, ಹುಣಸೇ ಹುಳಿ(ಅಗತ್ಯವಾಗಿ ಹಾಕಲೇ ಬೇಕು)ಯನ್ನು ಹಾಕಿ ಸ್ವಲ್ಪ ಕುದಿಸಬೇಕು.ಹುಣಸೇ ಹುಳಿಯನ್ನು ಮೊದಲೇ ಹಾಕಿದರೆ ಹೋಳುಗಳು ಬೇಯಲಾರವು.
ಈಗ ಮಸಾಲೆಯನ್ನು ರುಬ್ಬುವ ಕೆಲಸ : ಕೊತ್ತಂಬರಿ( ಜಾಸ್ತಿ), ಜೀರಿಗೆ, ಇಂಗು, ಉದ್ದಿನಬೇಳೆ, ಮೆಂತ್ಯದ ಕಾಳು ಇವಿಷ್ಟನ್ನೂ ತುಸು ಎಣ್ಣೆ ಹಾಕಿ ಹುರಿದುಕೊಂಡು ಹಸಿ ತೆಂಗಿನತುರಿಯೊಂದಿಗೆ ರುಬ್ಬಬೇಕು.
ರುಬ್ಬಿದ ಮಸಾಲೆಯನ್ನು ಹೋಳುಗಳ ಮಿಶ್ರಣಕ್ಕೆ ಹಾಕಿ, ಹದವಾಗಿ ನೀರು ಬೆರೆಸಿ, ಚೆನ್ನಾಗಿ ಕುದಿಸಬೇಕು. ಬೇಕಿದ್ದರೆ, ಬೇಯಿಸಿದ ತೊಗರಿಬೇಳೆ, ಇಲ್ಲವೇ ಬೇಯಿಸಿದ ಕಡಲೇಕಾಳನ್ನೂ ಸೇರಿಸಬಹುದು.
ಒಗ್ಗರಣೆಗೆ : ಎಣ್ಣೆಗೆ, ಸಾಸಿವೆ, ಒಣಮೆಣಸನ್ನು ಕರಿಬೇವನ್ನೂ ಹಾಕಿ, ಚಟಪಟ ಸದ್ದಿನೊಂದಿಗೆ ಸಾಂಬಾರಿಗೆ ಹಾಕಿದರೆ,ಗರಂ ಗರಂ ಮುಂಡಿಗಡ್ಡೆ ಸಾಂಬಾರ್ ಬಿಸಿ ಬಿಸಿ ಹೊಗೆಯಾಡುತ್ತಿರುವ ಅನ್ನದೊಂದಿಗೆ ಬಡಿಸಲು ತಯಾರಾದಂತೆ.
ಮುಂಡಿಗಡ್ದೆಯ ಪಲ್ಯ : ಮೊದಲಿಗೆ ಮುಂಡಿಗಡ್ಡೆಯನ್ನು ಅತ್ಯಂತ ಚಿಕ್ಕ ಹೋಳುಗಳನ್ನಾಗಿ ಹೆಚ್ಚಿಕೊಳ್ಳಬೇಕು(ತರಕಾರಿ ಹೆಚ್ಚುವುದೂ ಒಂದು ಕಲೆ) ಮೊದಲೇ ತಿಳಿಸಿದಂತೆ, ಸಿದ್ದಗೊಳಿಸಬೇಕು.ತದನಂತರ ಉಪ್ಪು, ಅರಿಷಿನ ಪುಡಿ, ಖಾರದ ಪುಡಿ ಹಾಕಿ ಬೇಯಿಸಿ, ಬೆಂದ ನಂತರವೇ ಚೂರು ಹುಣಸೇಹುಳಿ, ಕೊಂಚ ಬೆಲ್ಲ ಹಾಕಿ ಮತ್ತೆ ಬೇಯಿಸಿ. ತೆಂಗಿನತುರಿಯಜೊತೆ ಕೊತ್ತಂಬರಿ ಬೀಜ, ಒಣಮೆಣಸನ್ನು, ಇಂಗುನ್ನು ಹುರಿದು ತರಿತರಿಯಾಗಿ ಪುಡಿ ಮಾಡಿ ಪಲ್ಯಕ್ಕೆ ಹಾಕಿ, ಹಾಗೆ ಸ್ವಲ್ಪ ಹೊತ್ತು ಹೊಂದಿಕೊಳ್ಳಲು ಬಿಟ್ಟು, ಸಾಸಿವೆ, ಉದ್ದಿನಬೇಳೆ,ಒಣಮೆಣಸು ಕರಿಬೇವಿನ ಒಗ್ಗರಣೆ ಹಾಕಿದರೆ ರುಚಿ ರುಚಿ ಪಲ್ಯ ಸಿದ್ದವಾದಂತೆ.
ಮರೆಯಾಗದಿರಲಿ ಮುಂಡಿಗಡ್ಡೆ…..
– ಸಹನಾ ಪುಂಡಿಕಾಯಿ
ಮುಂಡಿಗೆಡ್ಡೆ ನನಗೂ ತುಂಬಾ ಪ್ರಿಯವಾದ ತರಕಾರಿ. ಇದರ ಸಾಂಬಾರ್, ಮಜ್ಜಿಗೆ ಹುಳಿ(ಮೇಲಾರ) ಎಲ್ಲವೂ ಬಹು ರುಚಿ. ಊರ ದೇವಸ್ಥಾನದಲ್ಲಿ ಉತ್ಸವದ ಸಂದರ್ಭದಲ್ಲಿ ಇದರ ಉಪ್ಪಿನಕಾಯಿಯನ್ನೂ ತಯಾರಿಸುತ್ತಾರೆ. ನಿಮ್ಮ ಲೇಖನವೂ ಅದರಂತೆಯೇ ಸೂಪರ್! 🙂
ಪಲ್ಯ,ಮೇಲಾರ ಇತ್ಯಾದಿ ಇತ್ಯಾದಿ ಬಹಳ ರುಚಿಕರ.ಇದರ ಪಲ್ಯ ಮಾಡುವ ವಿಧಾನ ಸ್ವಲ್ಪ ಭಿನ್ನ ಅಂತ ನನ್ನ ಅಭಿಪ್ರಾಯ.ನಾವು ನೆಟ್ಟು ಬೆಳೆಸುದ ಮುಂಡಿ ಗಡ್ಡೆ ಹೆಗ್ಗಣಗಳ ಪಾಲಾಯ್ತು!
ಹಳೇ ಮೈಸೂರು,ಬೆಂಗಳೂರಿನ ಕಡೆ ಕೆಸವೇ ದಂಟೆಂದು ಕರೆಯಲ್ಪಡುವುದು ಬಹುಷಃ ಇದೇ ಇರಬೇಕು.
ಬರಹ ಬಹಳ ಚೆನ್ನಾಗಿದೆ. ಮುಂಡಿಗದ್ದೆಯ ವಿವಿಧ ಅಡಿಗೆಗಳನ್ನು ಸವಿದಿದ್ದೇನೆ. ನಾನು ಬಾಲ್ಯ ಕಳೆದ ಕೇರಳದ ಪುಟ್ಟ ಊರಿನಲ್ಲಿ, ದೇವಸ್ಥಾನದ ಉತ್ಸವಗಳಂದು ಮುಂಡಿಗಡ್ಡೆಯ ಘಮಘಮಿಸುವ ಉಪ್ಪಿನಕಾಯಿಯನ್ನು (ಹುರಿದ ಮಸಾಲೆ ಹಾಕಿದ, ದಕ್ಷಿಣ ಕನ್ನಡ ಜಿಲ್ಲೆಯ ಶೈಲಿಯ ಉಪ್ಪಿನಕಾಯಿ), ತೆಂಗಿನ ಗೆರಟೆಯಿಂದ ತಯಾರಿಸಿದ ಸೌಟಿನಲ್ಲಿ ಧಾರಾಳವಾಗಿ ಬಡಿಸಿಕೊಂಡು ಹೋಗುತ್ತಿದ್ದುದು ನೆನಪಿದೆ. ಅದರ ರುಚಿ ಉಂಡವರೇ ಬಲ್ಲರು!
Mmmmmm !ಚೆನ್ನಾಗಿದೆ ! ಮುಂಡಿ ಗೆಡ್ಡೆ ಸವಿ ರುಚಿ !
ಮುಂಡಿಯ ತುರಿಕೆಯ ಕಾರಣದಿಂದಾಗಿ ಅದು ದೂರವಾಗುತ್ತಿದೆ . ಕೆಲವಾರು ಕಡೆ ಹಳ್ಳಿಯ ತರಕಾರಿ ಎನ್ನುವ ತಾತ್ಸಾರ . ಏನಿದ್ದರೂ ಬರಹ ಮೊತ್ತೊಮ್ಮೆ ಮುಂಡಿಯ ಸವಿಯನ್ನು ನೆನಪಿಸಿತು.
ಮು೦ಡಿಗಡ್ಡೆಯ ಚಿಪ್ಸ್ ,ಕಟ್ಲೆಟ್ ,ಬೋ೦ಡ ವೂ ತು೦ಬಾ ರುಚಿಯಾಗಿರುತ್ತದೆ .ಬೇಯಿಸಿದ ಮು೦ಡಿಗಡ್ಡೆಯನ್ನು ಚೆನ್ನಾಗಿ ಪುಡಿಮಾಡಿ ಅದಕ್ಕೆ ನೀರುಳ್ಳಿ,ಕೊತ್ತೊಂಬರಿ ಸೊಪ್ಪು,ಬೇಕಾದ ಮಸಾಲೆ ಹಾಕಿ ವಡೆಯ೦ತೆ ತಟ್ಟಿ ಸಣ್ಣ ರವೆಯಲ್ಲಿ ಮುಳುಗಿಸಿ ಕದ ಕಾವಲಿಯಲ್ಲಿ ತಟ್ಟಿ ತುಪ್ಪಹಾಕಿ ಎರದೂಬಡಿ ಬೇಯಿಸಿ ಸವಿಯಲು ತು೦ಬಾರುಚಿ.
ಬಹಳ ಒಳ್ಳ್ಹೆಯ ಲೇಖನವಾಗಿದೆ .ತುಂಬಾ ರುಚಿಯಿದೆ .
ಲೇಖನವನ್ನು ಮೆಚ್ಚಿದ ಹಾಗೂ ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
Very nicely articulated