ಇತ್ತ ಮಳೆ ಸುರಿಯುತಿದೆ– ಮತ್ತೆ ನೆನಪಾಗುತಿದೆ.
ಇಂಥದೇ ಒಂದು ಮಳೆಗಾಲ. ಹನಿ ಕಡಿಯದ ಮಳೆ ಮೂರು ನಾಲ್ಕು ದಿನಗಳಿಂದ. ಪತ್ರಿಕೆ ಬಿಡಿಸಿದರೆ ತೋಡಿನಲ್ಲಿ ಜಾರಿ ಬಿದ್ದು ಕೊಚ್ಚಿಹೋದವರ, ಕೆರೆಗೆ ಬಲಿಯಾದವರ, ಪ್ರವಾಹದಲ್ಲಿ ತೇಲಿ ಹೋದವರ, ಶಾಲೆಗೆ ಹೊರಟು ಕಾಲುವೆಯಲ್ಲಿ ಕೊಚ್ಚಿಹೋದ ಮಕ್ಕಳ ಬಗ್ಗೆ ನಿತ್ಯದ ವರದಿ. ಓದಿ ಎದೆ ಝಲ್ಲೆನ್ನುತ್ತಿತ್ತು. ಅಂಥ ಒಂದು ಕಾರ್ಗಾಲದ ದಿನ ನಡೆದ ಮರೆಯಲಾಗದ ಘಟನೆ.
.
ಬೆಳಗ್ಗಿನ ತಿಂಡಿಗೆ ಬಲು ಅಪರೂಪದಲ್ಲಿ ಎಂಟು ಘಂಟೆಗೆ ಹಾಜರಿದ್ದರು ಮಾವನವರು. ರಣ ಸೆಖೆಗಾಲದಲ್ಲಿ ಕೂಡಾ ಸ್ವೆಟರು, ಉಲ್ಲನ್ ಟೋಪಿ, ಫುಲ್ ಕೈ ಶರಟು ಅವರ ನಿತ್ಯದ ಉಡುಗೆ. ವಯಸ್ಸು ಎಂಭತ್ತು. ಆರೋಗ್ಯವಾಗಿದ್ದು ನಿತ್ಯಾ ಇಪ್ಪತ್ತರಷ್ಟು ಸೂರ್ಯ ನಮಸ್ಕಾರ ಬೆಳ್ಳಬೆಳಗ್ಗೆ ಮಾಡುತ್ತಿದ್ದ ತುಂಬು ಚಟುವಟಿಕೆಯ ಹಿರಿಯ ಜೀವ. ನಾನು ತಿಂಡಿ ಮುಗಿಸಿ ಹೊರಗೆ ಬಂದಾಗ ಅವರ ಖಾಯಂ ನ ಕುರ್ಚಿಯಲ್ಲಿ ಕಾಣಲಿಲ್ಲ ಅವರನ್ನು. ಇಲ್ಲೇ ಎಲ್ಲೋ ಇರಬಹುದು ಎಂದುಕೊಂಡಿದ್ದೆ. ಮಳೆ ಭೀಕರವಾಗಿತ್ತು. ಘಂಟೆ ಹತ್ತಾದರೂ ಅವರ ಸುಳಿವಿಲ್ಲ. ಹೆದರಿಕೆ ಶುರುವಾಗಿತ್ತು. ಪತಿಗೆ ಫೋನ್ ಮೂಲಕ ತಿಳಿಸಿದೆ. ವಿಶ್ರಾಂತಿ ಪಡೆಯುವ ಜೀವ ಅವರದಲ್ಲ. ಹಾಗಾಗಿ ಅವರೇನೂ ಗಾಬರಿ ಆಗಲಿಲ್ಲ. ಹನ್ನೆರಡು ಘಂಟೆಯಾದರೂ ಕಾಣದಾಗ ಮನೆಯ ಸುತ್ತ ಹುಡುಕಲು ಹೊರಟೆ. ಸಾಕಷ್ಟು ಜಲಮೂಲಗಳು ಕಟ್ಟೆಯೇ ಇಲ್ಲದೆ ಇರುವ ತೋಟದಲ್ಲಿ ಪೂರಾ ಸುತ್ತಿ ಸುತ್ತಿ ಕರೆದು ನೋಡಿದರೂ ಇಲ್ಲ. ತೋಡು, ಕೆರೆಯ ನೀರೆಲ್ಲ ಕೆಂಬಣ್ಣದಲ್ಲಿ ಭೋರ್ಗರೆಯುತ್ತಿತ್ತು. ಹೆದರಿ ಎದೆ ಢವಢವಗುಡುತ್ತಿತ್ತು. ಎಲ್ಲೆಲ್ಲಿ ಅಲೆದು ಅರಸಿದರೂ ನಾಪತ್ತೆ. ಸಾಮಾನ್ಯವಾಗಿ ಅವರು ಹೋಗುವ ಜಾಗಗಳಿಗೆ ಫೋನಾಯಿಸಿದ್ದೆ. ಊಹೂಂ. ಮನೆಗೆ ಬಂದು ಊಟಕ್ಕೆ ಕೂತರೆ ಅದೂ ಬೇಡ. ಮಳೆ ಹನಿ ಕಡಿಯದೆ ಸುರಿಯುತ್ತಾ ಎಲ್ಲೆಲ್ಲೂ ಪ್ರವಾಹ. ನಿಜ ಹೇಳಬೇಕಾದರೆ ಅಳು ಗಂಟಲಲ್ಲಿ ಕೂತಿತ್ತು. ಶಾಲೆ ಕಾಲೇಜುಗಳಿಗೆ ರಜೆ ಕೊಟ್ಟಿದ್ದರು ಮಳೆಗೆ ಹೆದರಿ. ಹೊರಗೆ ಕುಳಿತು ರಸ್ತೆಗೇ ನೋಟ ನೆಟ್ಟು ನೋಡಿ ನೋಡಿ ಕುತ್ತಿಗೆ ಉಳುಕುವ ಸ್ತಿತಿ. ಸಂಜೆ ನಾಲ್ಕು ಘಂಟೆಗೇ ಕತ್ತಲಾವರಿಸತೊಡಗಿತ್ತು. ಭೀತಿಯ ಚಳಿ ಹಿಡಿದಿತ್ತು ನನಗೆ. ನಾಲ್ಕಾರು ಬಾರಿ ಕಾಸರಗೋಡಿನ ಆಫೀಸ್ ನಿಂದ ಪತಿಯ ಕರೆ- ಅಪ್ಪ ಬಂದಿದ್ದಾರಾ?- ಇಲ್ಲವೆನ್ನುವ ಕ್ಷೀಣದನಿಯ ಉತ್ತರ ನನ್ನದು. ಯಾವಾಗಲೂ ಎಂಟು ಘಂಟೆಗೆ ಮನೆ ಸೇರುವ ಅವರು ಆರು ಘಂಟೆಗೇ ಬಂದು ಯಥಾ ಶಕ್ತಿ ತೋಡು, ಕೆರೆ, ಕಾಲುವೆ ಎಂದು ಅರಸಿ ವಾಪಸ್ ಬಂದರು. ರಣಗುಡುವ ಮಳೆಯ ರಭಸ ದುಪ್ಪಟ್ಟಾಗಿತ್ತು. ಹೆದರಿ ಕೈಕಾಲು ಬಿಡುವ ಸ್ಥಿತಿ ನಮ್ಮದು.
.
ರಾತ್ರೆಯ ಊಟ ತಯಾರು ಮಾಡಲೂ ಏಳದೆ ಕೂತಿದ್ದೆ. ಪರಿಸ್ಥಿತಿ ಗಂಭೀರವಾಗಿತ್ತು. ರಾತ್ರೆಯ ಎಂಟು ಘಂಟೆ. ನೀರವ ಮೌನ ಮನೆಯೊಳಗೆ; ಹೊರಗಡೆ ಹನಿ ಕಡಿಯದೆ ಸುರಿವ ಮಳೆ. ಹೊರಗಿನ ಮೆಟ್ಟಲ ಬಳಿ ಸಣ್ಣಗೆ ಸದ್ದು , ಅದರ ಹಿಂದೆಯೇ ಉತ್ಸಾಹದ ನಗೆ ನಗುತ್ತ ಒಳಗೆ ಕಾಲಿಟ್ಟರು ಮಾವನವರು. ಜೋರಾಗಿ ನಗುತ್ತ ಬಂದು ಅವರ ಖಾಯಂ ನ ಕುರ್ಚಿಯಲ್ಲಿ ಕೂತರು. ನಮ್ಮೆಲ್ಲರ ಪೆಚ್ಚು ಪೆಚ್ಚು ಮುಖ ಕಂಡರೂ ಅದು ಅವರಿಗಾಗಿ ಅನ್ನುವ ಅರ್ಥ ಆಗಿರಲಿಲ್ಲ.
.
” ನೋಡಿದೆಯಾ ಹೊರಗೆ ಇಟ್ಟ ಸಸಿ. ಭರ್ತಿ ನೂರೈವತ್ತು ರೂಪಾಯಿ ಹೇಳಿದ. ಏನಾಯ್ತು? ಬೇಕು ಅಂತಲೇ ಹೋಗಿದ್ದು. ಕೊಟ್ಟು ತಂದಿದ್ದೇ. ಮೂರು ವರ್ಷದಲ್ಲಿ ಫಲ ಬಿಡುತ್ತದೆ ಅಂದ. ನಾಲ್ಕು ವರ್ಷದ ಮೊದಲು ತಳಿಪ್ಪರಂಬದಲ್ಲಿತ್ತು. ಆದರೆ ಅದು ಸಸಿ ಲಾಚಾರು. ಇದು ಚೆನ್ನಾಗಿದೆ. ನಾಳೆ ರಾಮ ಕೆಲಸಕ್ಕೆ ಬಂದ ಕೂಡಲೇ ಗುಂಡಿ ತೋಡಿಸಿ ನೆಡಿಸಬೇಕು. ಪ್ಯೂರ್ ಗಮ್ ಲೆಸ್. ಹಣ್ಣಾಗುವಾಗ ತೊಳೆಗಳ ಬಣ್ಣ ಕೂಡಾ ಶುದ್ಧ ಬಿಳಿ. ಹೆಚ್ಚಿದ ಮೇಲೆ ಕೈ ತೊಳೆಯದೆ ಇದ್ದರೂ ಆಗ್ತದೆ. ಮೇಣ ಹನಿಯಷ್ಟು ಕೂಡಾ ಇಲ್ಲವೆಂದ ನರ್ಸರಿಯವ . ಮತ್ತೆ ಹಣ್ಣಾದ ಮೇಲೆ ಕೊಯ್ಯುವ ಕೆಲಸ ಇಲ್ಲ ಅದಾಗೇ ಬೀಳುತ್ತದೆ. ಫಸ್ಟ್ ಕ್ಲಾಸ್ ಜಾತಿ” .
.
.
ಅವರ ನಗೆ, ಉಲ್ಲಾಸ, ಉತ್ಸಾಹ , ಹುಮ್ಮಸ್ಸಿನ ವರದಿ ಕೇಳುತ್ತ ಕೇಳುತ್ತ ಮಗ ನಗುತ್ತ ಒಳಸರಿದರು. ಅವರಿಗೆ ಅಪ್ಪನ ಅಭ್ಯಾಸ ಗೊತ್ತು. ಬೆಳಗ್ಗಿನ ಟ್ರೈನ್ ಗೆ ಹೋಗಿ ಹೆಚ್ಚು ಕಮ್ಮಿ ನಾಲ್ಕು ಘಂಟೆ ರೈಲು ಪ್ರಯಾಣ ಮಾಡಿ ಕೋಯಿಕ್ಕೋಡು ತಲಪಿ ರೈಲು ಇಳಿದು ನರ್ಸರಿ ಹುಡುಕಿ ಅಲ್ಲಿ ಗಮ್ ಲೆಸ್ ಹಲಸಿನ ಗಿಡ ಖರೀದಿಸಿದ್ದರು. ಅಲ್ಲೆಲ್ಲೋ ಊಟ ಮಾಡಿ ವಾಪಸ್ ರೈಲು ಹತ್ತಿ ಒಟ್ಟು ಎಂಟು ಘಂಟೆಯ ರೈಲು ಪ್ರಯಾಣ ಮುಗಿಸಿ ಮತ್ತೆ ಬಸ್ ನಲ್ಲಿ ಏಳು ಕಿ. ಮಿ. ಪ್ರಯಾಣಿಸಿ ಮನೆ ತಲಪಿದ್ದರು. ತಾಯಿ ಎಳೆ ಶಿಶುವನ್ನು ಬಗಲಿಗಪ್ಪಿಕೊಂಡ ಪರಿಯಲ್ಲಿ ಗಿಡವನ್ನೆತ್ತಿ ಜೋಪಾನವಾಗಿ ತಂದಿದ್ದರು. ಜಡಿಮಳೆ ಯನ್ನು ಲೆಕ್ಕಕ್ಕೇ ತೆಗೆದುಕೊಂಡಿರಲಿಲ್ಲ. ನನಗೆ ಬೆಳಗ್ಗಿಂದ ಪಟ್ಟ ಆತಂಕ, ಭೀತಿ, ಸಂಕಟ ಸಿಟ್ಟಿನ ರೂಪದಲ್ಲಿ ಹೊರಬಿತ್ತು. .
.
” ಎಲ್ಲ ಸರಿ. ಆದ್ರೆ ಮನೆಯಿಂದ ಹೊರಡುವಾಗ ಮನೆಯವರಲ್ಲಿ ಒಂದು ಮಾತು ಹೇಳಿ ಹೋಗುವುದಲ್ವಾ? ಈ ಕಪ್ಪರಕಟ್ಟುವ ಮಳೆಯಲ್ಲಿ ನಾವು ತೋಟ, ತೋಡು, ಕೆರೆ, ಬಾವಿ ಅಂತ ಹೆದರಿ ಕಂಗಾಲಾಗಿ ಹುಡುಕಿ ಸಿಗದೆ ಅರೆಜ್ಜೀವವಾದೆವು. ಇಂಥಹ ಕಡೆ ಹೋಗುತ್ತೇನೆ ಅನ್ನುವ ಒಂದೇ ಒಂದು ವಾಕ್ಯ ಹೇಳಿದ್ದರೆ ಹೀಗೆ ಕಂಗಾಲಾಗಬೇಕಿತ್ತಾ? ಅಷ್ಟು ದೂರ. ಇದು ಸರಿಯಾ?”
.
” ಬೆಳಗ್ಗೆ ಪತ್ರಿಕೆಯಲ್ಲಿ ಉತ್ತಮ ತಳಿಯ ಗಮ್ ಲೆಸ್ ಹಲಸಿನ ಗಿಡ ಮಾರಾಟಕ್ಕೆ ಇದೆ ಅನ್ನುವ ಜಾಹೀರಾತು ನೋಡಿದೆ . ಇವತ್ತೇ ಹೋಗುವಾ ಅಂತ ಹೊರಟೆ . ನಾನು ರೈಲು ಹತ್ತಿ ಕೂತದ್ದು ಮಾತ್ರ. ಅದೇ ನನ್ನ ಕರಕೊಂಡು ಹೋಯ್ತು. ಬರುವಾಗಲೂ ಅಷ್ಟೆ. ರಪ್ಪ ಹೋಗಿ ಬಂದೆ. ಮಳೆ ಇದ್ದದ್ದು ಹೊರಗಡೆ. ಇಷ್ಟೊಳ್ಳೆಯ ಜಾತಿಯ ಹಲಸಿನ ಗಿಡ ಬಿಟ್ಟವರುಂಟಾ? ಹೇಳ್ತಾ ಕೂತ್ರೆ ತಡವಾಗುತ್ತೆ. ಹಾಗೂ ಹೇಳದಿದ್ರೆ ಏನಂತೆ? ಪುನಹ ಬರುವುದಿಲ್ವಾ?
.
ಅದ್ಭುತ ಸಾಹಸ ಮಾಡಿ ರಣಮಳೆಗೆ ಹೋಗಿ ಬಂದರೂ ಮುಖದ ನಗೆ, ಹಾಸ್ಯ ಮಾಸಿರಲಿಲ್ಲ. ಆ ಪರಿಯ ಜೀವನೋತ್ಸಾಹ ಕಂಡು ದಂಗಾಗಿದ್ದು ನಾನು. ಗಿಡ ನೆಟ್ಟು ಬೆಳೆಸಿ ಕಾಯಿ ಮೂಡಿ ಹಣ್ಣೂ ಸಿಕ್ಕಿತು. ನರ್ಸರಿಯಾತ ಹೇಳಿದಂತೆ ಅಮೃತದ ಹಾಗಿನ ಸವಿ, ಹಾಲಿನ ಬಣ್ಣದ ತೊಳೆ, ಹನಿ ಮೇಣ ಕೂಡಾ ಇಲ್ಲ. ಹೆಚ್ಚಿದರೆ ಕೈ ತೊಳೆಯದೆ ಇದ್ದರೂ ಆಗುತ್ತದೆ. ಬಲು ಉತ್ಸಾಹದಿಂದ ತಾವು ನೆಟ್ಟ ಗಿಡದ ಫಲ ಸವಿದಿದ್ದರು ಅವರು. ಸತತ ಆರೇಳು ವರ್ಷ ಸವಿದು , ಮನೆಗೆ ಬಂದವರಿಗೆ ತಿನ್ನಿಸಿದ್ದರು.
.
.
ಆ ವಯಸ್ಸಿನಲ್ಲಿ ಏಳೆಂಟು ಘಂಟೆ ಪ್ರವಾಹದೋಪಾದಿಯಲ್ಲಿ ಸುರಿವ ಮಳೆಗೆ ಪ್ರಯಾಣಿಸಿ ಗಿಡ ತಂದು ನೆಟ್ಟಿದ್ದು ಅವರಿಗಾಗಿ ಅಲ್ಲ. ನಮ್ಮಲ್ಲಿ ಆ ತಳಿ ಬೇಕು . ಮನೆಯವರು ಸವಿದು ಇತರರಿಗೂ ಕೊಡಬೇಕು. ನಾನಳಿದರೂ ನಾ ನೆಟ್ಟ ಗಿಡ ಉಳಿದು ಬೆಳೆಯಲಿ ಎನ್ನುವ ಮನಸ್ಸು. ಈಗಲೂ ಆ ಮರ ಕಾಣುವಾಗ , ಅದರಲ್ಲಿ ತುಂಬಿದ ಕಾಯಿಗಳನ್ನು ಕಾಣುವಾಗ ನನಗೆ ನೆನಪಾಗುವುದು ಅದರ ಅಪರೂಪದ ರುಚಿ ಅಲ್ಲ. ಬದಲಿಗೆ ಅಲ್ಲಿ ಕಾಣುವುದು ಮಾವನವರ ಉತ್ಸಾಹದ ಮುಖ, ಆ ಹನಿಕಡಿಯದ ಮಳೆಯ ದಿನ ಅವರಿಗಾಗಿ ಕಂಡ ಕಂಡಲ್ಲಿ ಹುಡುಕಾಡಿದ್ದು. ಹೆದರಿ ಕಂಗಾಲಾಗಿದ್ದು.
.
– ಕೃಷ್ಣವೇಣಿ ಕಿದೂರ್
,
ನಿಮ್ಮ ಮಾವನವರ ಕೃಷಿಪ್ರೇಮ ಅದ್ಭುತ ಮತ್ತು ಬರಹದಲ್ಲಿ ಅದು ಮೂಡಿ ಬಂದ ಬಗೆ ಸುಪರ್..