ಹಿರಿಯರೂ ನೆಮ್ಮದಿಯಿಂದ ಬಾಳಲಿ ಅಲ್ಲವೇ?

Share Button
Sahan Pundikai1

ಸಹನಾ ಪುಂಡಿಕಾಯಿ

ಮನುಸ್ಮೃತಿಯಲ್ಲಿ ಹೇಳುವಂತೆ, ” ಯಂ ಮಾತಾಪಿತರೌ ಕ್ಲೇಶಂ ಸಹತೇ ಸಂಭವೇ ನೃಣಾಂ| ನ ತಸ್ಯ ನಿಷ್ಖ್ರತಿ: ಶಕ್ಯಾ ಕರ್ತುಂ ವರ್ಷಶತೈರಪಿ|”  ಅಂದರೆ(ಅನು: ಶೇಷನವರತ್ನ) ‘ಮಕ್ಕಳ ಜನನ ಹಾಗು ಜೀವನದ ವಿಷಯದಲ್ಲಿ ತಂದೆ ತಾಯಿಗಳು ಅನುಭವಿಸುವ ನಾನಾ ವಿಧದ ಕಷ್ಟಗಳ ಋಣ ತೀರಿಸಲು ನೂರು ವರುಷಗಳಾದರೂ ಸಾಲದು.’

ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತ ನಡೆಯುತ್ತಿರುವುದೇ ಬೇರೆ. ಹೆತ್ತಮಕ್ಕಳೆಂದರೆ ತನ್ನ ಕಣ್ಣುಗಳೆಂದೇ ತಿಳಿದು, ಕಣ್ಣುರೆಪ್ಪೆಯಾಗಿ ಕಣ್ಣನ್ನು ಕಾಪಾಡಿದ ತಂದೆತಾಯಿ, ವಯಸ್ಸಾದಂತೆಲ್ಲಾ ತಮ್ಮ ಶಕ್ತಿ ಕಳೆದುಕೊಂಡಾಗ ಕಣ್ಣುಗಳನ್ನು ಕಾಪಾಡಿದ ಕಣ್ಣುರೆಪ್ಪೆಯು ಕಸವೆಂದು ಹೆಸರನ್ನೇ ಬದಲಿಸಿಕೊಳ್ಳುತ್ತದೆ ಕೆಲವು ಕುಲೋದ್ಧಾರಕರೆನಿಸಿಕೊಂಡವರಿಗೆ. ಆತ್ಮ ಚೈತನ್ಯವನ್ನು ಇಟ್ಟುಕೊಂಡು, ದೈಹಿಕ ಚೈತನ್ಯ ಕಳೆದುಕೊಂಡಾಗ ಹೆತ್ತಮಕ್ಕಳೇ ಅವರ ಚೈತನ್ಯವಾಗಿರಬೇಕು. ಆದರೆ ಕೆಲವರು ಇರುವ ಅಲ್ಪಸ್ವಲ್ಪ ಚೈತನ್ಯವನ್ನೂ ಹೀರುವ ಮಕ್ಕಳ ಕಪಿಮುಷ್ಟಿಯಲ್ಲಿ ಸಿಲುಕಿ ಕಬ್ಬಿನ ಜಲ್ಲೆಯಂತಾಗುತ್ತರೆ. ಇದಕ್ಕೆಲ್ಲಾ ಸಾಕ್ಷಿ, ಅಣಬೆಯಂತೆ ಹುಟ್ಟಿಕೊಳ್ಳುತ್ತಿರುವ ವೃದ್ಧಾಶ್ರಮಗಳು.

ಆ ಹಿರಿಜೀವಿಗಳಿಗೆ ತಮ್ಮ ಮಕ್ಕಳೊಂದಿಗೆ,ಮೊಮ್ಮಕ್ಕಳೊಂದಿಗೆ, ಇನ್ನೂ ಕೆಲವು ಮಂದಿ ಮರಿಮೊಮ್ಮಕ್ಕಳೊಂದಿಗೆ, ತಾನೇ ಕಟ್ಟಿಸಿದ, ಇಲ್ಲವೇ ತಾನು ಬದುಕಿ ಬಾಳಿದ ಮನೆಯಲ್ಲಿ ತಮ್ಮ ಕೊನೇಗಾಲವನ್ನು ಕಳೆಯಬೇಕೆಂದು ಹಂಬಲಿಸುತ್ತಿರುವ ಸಂಧರ್ಭದಲ್ಲಿ ತನ್ನಂತೇ ಇರುವ ಇತರ ವೃದ್ಧರೊಂದಿಗೆ , ವೃದ್ಧಾಶ್ರಮದಲ್ಲಿ ಯಾಂತ್ರಿಕವಾಗಿ ದಿನದೂಡಬೇಕಾದ ಪರಿಸ್ಥಿತಿ ಬಂದೊದಗುತ್ತದೆ.

ತನ್ನ ಕರುಳಕುಡಿಗೆ ಜನ್ಮ ನೀಡುವ ಸಂದರ್ಭದಲ್ಲಿ ತಾಯಿಯ ಆ ವೇದನೆ ಆಕೆಗೆ ಸಿಹಿಯನ್ನೇ ಉಣಬಡಿಸಿರುತ್ತದೆ.ಅದೇ ಕರುಳಕುಡಿ ಎಂದೆನಿಸಿಕೊಂಡವನು(ಳು) ದೊಡ್ಡವರಾದಂತೆ ಕಹಿಯನ್ನೇ ಉಣಬಡಿಸುವುದು ದುರಂತ. ಅಂದು ಆ ತಾಯಿ ತನ್ನ ಮಗುವಿನ ಹೇಸಿಗೆಯನ್ನು ತೆಗೆದು ಸ್ವಚ್ಛಗೊಳಿಸಲು ಹೇಸಲಿಲ್ಲ, ಅದೇ ಮಗು ಎಂದೆನಿಸಿಕೊಂಡವನಿಗೆ(ಳಿಗೆ) ಅದೇ ವೃದ್ಧೆ ತಾಯಿ ಕೆಮ್ಮಿದರೆ, ಸೀನಿದರೆ ವಾಕರಿಕೆ. ಅಂದು” ಅಮ್ಮಾ, ಅಮ್ಮಾ” ಎಂದು ಅಮ್ಮನ ಸೆರಗನ್ನೇ ಹಿಡಿದು ಅಮ್ಮನ ಹಿಂದೆಯೇ ಓಡಾಡುತ್ತಿದ್ದವನಲ್ಲಿ ಇಂದು ಆ ಸೊರಗಿದ ಅಮ್ಮ ಸೆರಗನೊಡ್ಡಿ ಆಸರೆ ಕೊಡು ಎಂದು ಬೇಡುವಂತಹ ದು:ಸ್ಥಿತಿ.ಇವೆಲ್ಲದರ ಇನ್ನೊಂದು ಕ್ರೂರಮುಖವೆಂದರೆ,  ತೀರ್ಥಯಾತ್ರೆ  ಮಾಡಿಸುತ್ತೇನೆ ಎಂದು ದೇವಾಲಯಗಳಿಗೆ ಕರೆದುಕೊಂಡುಹೋಗಿ ,ಅಲ್ಲೇ ಹೆತ್ತ ಅಪ್ಪ ಅಮ್ಮನನ್ನು ಬಿಟ್ಟುಬರುವುದು.ಅಲ್ಲಿ ಅವರು ಅನ್ನಕ್ಕಾಗಿ, ವಸತಿಗಾಗಿ ನಡೆಸುವ ಹೋರಾಟ(ಪರದಾಟ) ಎಂಥಹವರ ಮನಸ್ಸನ್ನೂ ಕರಗಿಸಿಬಿಡುತ್ತದೆ. ಎಲ್ಲೋ ಒಂದು ಕಡೆ ಮನುಷ್ಯನೇ ಮನುಷ್ಯತ್ವವನ್ನು ಮರೆತು ಬಿಟ್ಟಿದ್ದಾನೆಯೋ ಎಂದು ಅನಿಸದೇ ಇರದು ಅಲ್ಲವೇ?

ಹಿರಿಯರ ಮನದಲ್ಲಿ ಹೊಸ ಹೊಸ ಬಯಕೆಗಳೇನೂ ಹುಟ್ಟಲಾರವು. ಅವರು ಬಯಸುವುದು ತುಸು ಪ್ರೀತಿ, ಒಂದೆರಡು ಸಾಂತ್ವನದ ಮಾತುಗಳು, ಅವರ ಇರುವಿಕೆಯ ಅರಿವು ಅಷ್ಟೆ.ಆದರೆ ,ಇದನ್ನು ಅರಿತವರು ಕೆಲವೇ ಮಕ್ಕಳು.ಇಂದಿನ ಯಾಂತ್ರಿಕ ಬದುಕಿನಲ್ಲಿ ಹಾಸುಹೊಕ್ಕಿರುವ ಸ್ಟೇಟಸ್, ಕೆರಿಯರ್, ಬ್ಯುಸಿ ಶೆಡ್ಯೂಲ್ ಮುಂತಾದ ಪದಗಳ ಮುಂದೆ ಈ ಪ್ರೀತಿ,ಗೌರವ,ಜೀವನಾನುಭವ ಮುಂತಾದುವೆಲ್ಲಾ ಮಂಕಾಗಿ ಹೋಗಿವೆ. ಹಾಗೆಂದ ಮಾತ್ರಕ್ಕೆ ಪ್ರೀತಿ ಇಲ್ಲ ಎಂದಲ್ಲ..ಪ್ರೀತಿಯಿದೆ,ಅದು ಕೇವಲ ತಾನು, ತನ್ನ ಗಂಡ, ತನ್ನ ಹೆಂಡತಿ, ತನ್ನ ಮಕ್ಕಳ ಕಡೆಗೆ ಮಾತ್ರ.

caring hands

ಇಂದು ಅಜ್ಜ ಅಜ್ಜಿಯ ಜೊತೆ ಕತೆ ಹೇಳಿಸಿಕೊಳ್ಳುತ್ತಾ ದೊಡ್ದವರಾಗುವ ಮಕ್ಕಳು ಬೆರಳೆಣಿಕೆಯಷ್ಟೇ.ಟಾಬ್, ಮೊಬೈಲ್, ಕಂಪ್ಯೂಟರ್ ಜೊತೆ ಕಾಲ ಕಳೆಯುತ್ತಾ ದೊಡ್ದವರಾಗುವವರೇ ಹೆಚ್ಚು ಎಂದು ನಿಮಗನಿಸದೇ?ಇಂದು ಹಿರಿಯರ ಅನುಭವಗಳು,ಸಲಹೆ ಸೂಚನೆಗಳೆಲ್ಲಾ ವೃದ್ಧಾಶ್ರಮದ ನಾಲ್ಕು ಗೋಡೆಗಳಿಗಷ್ಟೇ ಸೀಮಿತವಾಗಿವೆ.

ಈ ವ್ರದ್ಧಾಶ್ರಮಗಳೆಂದು ಹೇಳಿಕೊಳ್ಳುತ್ತಿರುವ ಕೆಲವು ಆಶ್ರಮಗಳು ವೃದ್ಧರನ್ನು ಕೂಡಿಡುವ ಜೈಲಿನಂತೆಯೇ ಕಾರ್ಯನಿರ್ವಹಿಸುತ್ತಿವೆ. ಸೇವೆಯೆಂದು ತಿಳಿದು ಕಾರ್ಯನಿರ್ವಹಿಸುವ ವೃದ್ಧಾಶ್ರಮಗಳು ಕೆಲವು.ಶುದ್ಧ ಆಹಾರ, ಶುದ್ಧ ಪರಿಸರ, ಔಷಧಿಗಳು ಕಾಲಕಾಲಕ್ಕೆ ದೊರಕದೆ, ಹಿರಿಯರು ನರಕವನ್ನು ಭೂಮಿಯ ಮೇಲೆಯೇ ಅನುಭವಿಸುತ್ತಿದ್ದಾರೆ.

ಇಂದು ಕೇವಲ ವೃದ್ಧಾಶ್ರಮವೆಂದು ಹಣೆಪಟ್ಟಿಕಟ್ಟಿಕೊಂಡ ಸಂಸ್ಥೆಗಳು ಮಾತ್ರವೇ ವೃದ್ಧಾಶ್ರಮವಾಗಿಲ್ಲ.ಬದಲಾಗಿ ಹಳ್ಳಿಗಳಲ್ಲಿ, ಪೇಟೆ ಪಟ್ಟಣಗಳಲ್ಲಿನ ಮಕ್ಕಳು ಉದ್ಯೋಗ ನಿಮಿತ್ತ ದೂರದ ಊರುಗಳಲ್ಲಿ ವಾಸಿಸುತ್ತಿದ್ದು, ಅವರ so called hometown ಗಳಲ್ಲಿನ ಅವರವರ ಮನೆಗಳೂ ಒಂದು ರೀತಿಯ ವೃದ್ಧಾಶ್ರಮದಂತೆಯೇ ಇರುತ್ತವೆ. ಅಲ್ಲಿ ಹೆತ್ತವರು, ರಜಾದಿನಗಳು ಯಾವಾಗ ಬರುತ್ತದೋ,ತಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು ಯಾವಾಗ ನೋಡುತ್ತೇವೆಯೋ ಎಂದು ಜಾತಕ ಪಕ್ಷಿಯಂತೆ ಕಾದುಕುಳಿತಿರುತ್ತಾರೆ.ಆದರೆ ,ರಜೆ ಸಿಕ್ಕಿದ ತಕ್ಷಣ ಹಿಲ್ ಸ್ಟೇಷನ್, ಫಾರಿನ್ ಟೂರ್ ಎಂದು ದಿನಗಟ್ಟಲೆ ಸುತ್ತಾಡುವ ಹಲವು ಮಂದಿಗೆ,ಊರು ಎಂದರೆ ಬೋರು,ಹಾಗೆಯೇ ಊರಿಗೆ ಹೋಗಲು ರಜೆಯ ಅಭಾವ.ಇವೆಲ್ಲದರ ಮಧ್ಯೆ“ಎಲ್ಲೇ ಇರಲಿ ,ಸುಖವಾಗಿ, ಸಂತೋಷವಾಗಿರಲಿ” ಎನ್ನುವ ಬಯಕೆ ಹೆತ್ತವರದ್ದು. ಊರಲ್ಲಿರುವ ಅಪ್ಪನೋ, ಅಮ್ಮನೋ ಒಬ್ಬಂಟಿಯಾದರೆ ಅವರ ಪರಿಸ್ಥಿಯನ್ನು ಸ್ವಲ್ಪ ಯೋಚಿಸಬೇಕು. ಜೊತೆಯಾಗಿ ಇದ್ದಾಗ ಒಬ್ಬರಿಗೊಬ್ಬರು ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದರು,ಸಾಂತ್ವನವನ್ನು ಮಾಡಿಕೊಳ್ಳುತ್ತಿದ್ದರು. ಇಷ್ಟೇ ಯಾಕೆ ಆರೈಕೆಯನ್ನೂ ಮಾಡಿಕೊಳ್ಳುತ್ತಿದ್ದರು. ಕಷ್ಟವೋ, ಸುಖವೋ ಒಟ್ಟಿನಲ್ಲಿ ಜೊತೆಯಾಗಿರುತ್ತಿದ್ದರು.ಆದರೆ, ಒಬ್ಬಂಟಿಯಾದಾಗ ಅವರಿಗೆ ಎಲ್ಲವೂ ಶೂನ್ಯವಾದಂತೆ ಅನಿಸದೇ ಇರದು.ಹೌದು ಹೇಳಬಹುದು, “ನೋಡಿಕೊಳ್ಳಲು ನರ್ಸ್, ಇಲ್ಲವೇ ನೋಡಿಕೊಳ್ಳೋದಿಕ್ಕೆ ಜನ ಗೊತ್ತುಮಾಡಿದ್ದೇನೆ, ತಿಂಗಳು, ತಿಂಗಳೂ ಹಣ ಕಳುಹಿಸುತ್ತಿದ್ದೇನೆ” ಎಂದೆಲ್ಲಾ.ಆದರೆ ಇವೆಲ್ಲವೂ ಅವರ ಒಬ್ಬಂಟಿತನತವನ್ನು ಹೋಗಲಾಡಿಸದು, ಹಾಗೆಯೇ ಇವೆಲ್ಲವೂ ಪ್ರೀತಿಯನ್ನು ತೋರಲಾರವು..ಅದು ಜವಾಬ್ದಾರಿಯನ್ನು ನಿರ್ವಹಿಸುವುದು ಅಷ್ಟೆ.ಜವಾಬ್ದಾರಿಯ ಜೊತೆಗೆ ಪ್ರೀತಿಯು ಸೇರಿದಾಗ ಮಾತ್ರವೇ ಆ ಜವಾಬ್ದಾರಿಗೆ ಒಂದು ಅರ್ಥ ದೊರೆಯುತ್ತದೆ.ಆದರೆ ಅದನ್ನು ಅರಿತುಕೊಳ್ಳುವವರು ಕೆಲವೇ ಮಂದಿ ಎನ್ನುವುದು ವಾಸ್ತವತೆ. ಹೀಗೆಲ್ಲಾ ಅಂದ ಮಾತ್ರಕ್ಕೆ ಎಲ್ಲರೂ ಹೀಗೆಂದು ಹೇಳಲಾಗದು. ಯಾಕೆಂದರೆ ಅನೇಕ ಮಂದಿ ತಮ್ಮ ಹೆತ್ತವರನ್ನು ಅಂಗೈಯಲ್ಲಿ ಇಟ್ಟು ಆರೈಕೆ ಮಾಡುತ್ತಾರೆ.

old age

 

 

ಹಿರಿಯರ ಗೋಳಾಟ, ಪರದಾಟ ಇಂದು ಚಲನಚಿತ್ರಗಳ ಕಥಾವಸ್ತುಗಳಾಗಿದೆ, ವಾಟ್ಸ್ ಆಪ್ ಗಳಲ್ಲಿ, ಫೇಸ್ ಬುಕ್ ಗಳಲ್ಲಿ ಹರಿದಾಡುವ ವೀಡಿಯೋ ತುಣುಕುಗಳಾಗಿದೆ.ನೊಂದ ವೃದ್ಧ ತಂದೆ ತಾಯಿಯ ಪಾತ್ರಗಳು ಕಥೆ, ಕಾದಂಬರಿಗಳಲ್ಲಿ ಹೊಕ್ಕು ಓದುಗನ ಕಣ್ಣನ್ನು ತೇವಗೊಳಿಸುತ್ತದೆ. ಇವೆಲ್ಲದರ ಪ್ರಭಾವದಿಂದಲಾದರೂ ಕೊಂಚ ಬದಲಾವಣೆಯಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ತಮ್ಮಲ್ಲಿ ಬದಲಾವಣೆಯನ್ನು ತಂದುಕೊಂಡವರೇ ಹೇಳಬೇಕು.

ಹಿರಿಯರ ಬದುಕಿನಲ್ಲಿನ ಶಿಸ್ತು, ಸಂಸ್ಕಾರಗಳನ್ನು, ಇಂದಿನ ಪೀಳಿಗೆಯೆಂದು ನಾವು ಏನು ಬಡಬಡಿಸುತ್ತಿದ್ದೇವೆಯೋ,ಆ ಇಂದಿನ ಪೀಳಿಗೆಯವರು ಕೊಂಚಮಟ್ಟಿಗಾದರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಒಳ್ಳೆಯದು.ಭವಿಷ್ಯದ ಚಿಂತನೆಯೆಂದರೆ ಕೇವಲ ಹಣವನ್ನು ಕೂಡಿಡುವುದು, ಮನೆ ಕಟ್ಟುವುದು, ಇನ್ಶೂರೆನ್ಸ್ ಗಳನ್ನು ಪಾವತಿಸುವುದು ಮಾತ್ರವೇ ಅಲ್ಲ. ಬದಲಾಗಿ ನಮ್ಮ ಹೊಂದಿಕೊಳ್ಳುವ ಗುಣ, ನಮ್ಮ ನಡೆನುಡಿ, ನಮ್ಮ ಸಂಸ್ಕಾರಗಳೆಲ್ಲವನ್ನೂ ನಮ್ಮ ಮಕ್ಕಳು ಅನುಕರಿಸುತ್ತಾರೆ, ಮುಂದೆ ನಮಗೂ ವಯಸ್ಸಾದಂತೆ ನಮ್ಮ ಮಕ್ಕಳೂ ನಮಗೆ ಇಂತಹುದ್ದೇ ಪರಿಸ್ಥಿತಿ ತಂದರೆ?ಎನ್ನುವ ವಿರಳವಾದ ಯೋಚನೆಯನ್ನು ಮಾಡಬೇಕು.

ಒಂದು ಚೂರು ಹೊಂದಾಣಿಕೆ, ಮನಸುಗಳನ್ನು ಅರಿಯುವ ಮನಸು, ಮಾನವೀಯತೆ,ತುಸು ನಿರ್ಮಲಪ್ರೀತಿ,ಇವೆಲ್ಲವನ್ನೂ ಅಳವಡಿಸಿಕೊಂಡರೆ ಮನೆ, ಮನಗಳು ನೆಮ್ಮದಿಯಾಗಿ, ಸುಂದರವಾಗಿ ಬದುಕಿ ಬಾಳಬಹುದು.

ಸೊರಗಿದ ದೇಹದೊಳಗೊಂದು ಜೀವವಿದೆ

ಸೊರಗದಿರಲಿ ಪ್ರೀತಿಯು ಆ ಜೀವದೆಡೆಗೆ.

ನರಳದಿರಲಿ , ಆ ಚೇತನವು

ಕರಿಕತ್ತಲ ಗೋಡೆಯೊಳಗೆ

ಪ್ರೀತಿಯ ಆಸ್ತಿಯಲಿ ಅವರದ್ದೂ ಪಾಲಿದೆ,

ಬೊಗಸೆಯಷ್ಟಾದರೂ ಸರಿ.

ನೆಮ್ಮದಿಯ ಬದುಕನ್ನು ಕಾಣಲಿ,

ಕೊನೆಗಾಲದಲ್ಲಾದರೂ ಸರಿ.’

 

 

– ಸಹನಾ ಪುಂಡಿಕಾಯಿ

7 Responses

  1. Niharika says:

    ಭಾವಪೂರ್ಣ ಬರಹ, ತುಂಬಾ ಇಷ್ಟವಾಯಿತು, ಮೇಡಮ್.

  2. suresh gore says:

    Really touching imprint !

  3. ಹುಲಿವಾನಶಿವರಾಮು says:

    ಅದ್ಭುತವಾದ ನಿರೂಪಣೆ. ಬದಲಾದ ಈಕಾಲದಲ್ಲಿ ಇಂತಹ ವೈಚರ ಲೇಖನಗಳು ಅನಿವಾರೆ್ಯ. ವಂದನಗಳು “ಸುರಹೊನ್ನೆ”.

  4. ವಿಚಾರ ಪೂರ್ಣವಾದ ಬರಹ . ಪ್ರತಿಯೊಬ್ಬರೂ ತಾವೆಲ್ಲಿ ಎಡವಿದ್ದೇವೆ ಎಂದು ಅವಲೋಕಿಸುವ ಹಾಗಿದೆ ಬರಹದ ಪ್ರಭಾವ .

  5. ಸಹನಾ ಅವರೇ
    ತುಂಬಾ ಸಕಾಲಿಕ ಬರಹ

    ತಂದೆ ಹೇಳಿದ್ದು ನಿಜ ಅಂತ ಗೊತ್ತಾಗುವಾಗ
    ಅವನಿಗೊಬ್ಬ ಮಗನಿದ್ದು
    ತಂದೆ ತಪ್ಪು ಅನ್ನುತ್ತಿರುತ್ತಾನಂತೆ

    ಚಿನ್ನದಂತಾ ಮಾತು, ಆದರೆ ಈಗಿನ ಸಮಾಜದ ಬಹಳಷ್ಟು ಸಂಸಾರದಲ್ಲಿ ಇಂತದ್ದೆಲ್ಲಾ ವಿಷಯಗಳ
    ಆಲೋಚನೆ ಬರುತ್ತಿರುವುದು ತಂದೆ ತಾಯಿಗಳಿಗೆ ಮಾತ್ರ….
    ಆದರೆ ದುರದೃಷ್ಟವೆಂದರೆ……
    ಈಗ ಒಳ್ಳೆಯ ವೃದ್ಧಾಶ್ರಮಗಳೇ ಬರಲಿ ಅಂತ ….ಆಶಿಸೋ ಹಾಗಾಗಿರೋದು….

  6. ಮಾನ್ಯರೇ, ದಿನಪತ್ರಿಕೆಗಳಲ್ಲಿ ಬರುತ್ತಿರುವ ವರದಿಗಳು ಮತ್ತು ಅಕ್ಕಪಕ್ಕದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡುತ್ತಿದ್ದರೆ. ವಯಸ್ಸಾದಮೇಲೆ, ನಿಸ್ಸಹಾಯಕರಾದ ಮೇಲೆ, ನಿಷ್ಯಕ್ತರಾದಮೇಲೆ. ಬದುಕಿರಬಾರದು ಎನಿಸುತ್ತದೆ. ಹೆತ್ತ ಹೊತ್ತ ಮಕ್ಕಳಿಗೆ ನಾವು ಬೇಡವಾದಮೇಲೆ, ಪ್ರಾಣಿಗಳಿಗಿಂತ ಕೀಳಾಗಿ ಕಾಣುವ ನಮಗೆ ಇನ್ನು ವ್ರುದ್ದಾಶ್ರಮದ ಹಂಗೇಕೆ. ಅವರೇನು ನಮ್ಮ ಅಣ್ಣತಮ್ಮಂದಿರೆ? ಅವರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ. ಇಚ್ಚಾಮರಣಿಯಾಗುವುದೆ ಲೇಸು.

  7. sahana pundikai says:

    ಲೇಖನವನ್ನು ಮೆಚ್ಚಿದ ಹಾಗೂ ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: