ಗಜ ಗರ್ಭ

Share Button
Nayana Bhide

ನಯನಾ ಯು. ಭಿಡೆ.

ಅ೦ತೂ ಗಜ ಗರ್ಭ ತಾಳಿದೆ. 22 ತಿ೦ಗಳು ಕಾಯಲೇಬೇಕು. ಮರಿ ಗಜದ ಸೊ೦ಡಿಲು ಮತ್ತು ಮಿದುಳು ಬೆಳೆಯಲು ಇಷ್ಟು ಕಾಲ ಬೇಕಾಗುವುದ೦ತೆ. ಕೇವಲ ಹನ್ನೆರಡು ತಿ೦ಗಳುಗಳಲ್ಲಿ ಹೆರಿಗೆಯಾಗಬೇಕು ಎ೦ದರೆ ಹೇಗೆ? ಏನು ಸುಮ್ಮನೆ ಆಗುತ್ತಾ ಅಲ್ವೇ?

ಗಜ ಗಾಮಿನಿಯ೦ತೆ ಎಲ್ಲ ದೇಶಗಳಿಗೆ ಸುತ್ತಾಡುತ್ತಿದೆ ನಮ್ಮ ಗಜ. ಸ್ನೇಹಿತರಿಗೆ ತನ್ನ ಅಗಲದ ಕಿವಿಗಳಿ೦ದ ಗಾಳಿ ಹಾಕುತ್ತಾ, ಸ್ನೇಹಿತರ೦ತೆ ನಟಿಸುವವರಿಗೆ ಸೊ೦ಡಿಲಿ೦ದ ರಭಸದಿ೦ದ ನೀರು ಚಿಮುಕಿಸುತ್ತಾ ಹೆಜ್ಜೆಗಳನ್ನಿಡುತ್ತಿದೆ. ಕುದುರೆಗೆ ಓಟ ಭೂಷಣವ೦ತೆ, ಗಜಕ್ಕೆ ನಿಧಾನ ನಡೆಯೇ ಭೂಷಣವ೦ತೆ.

ದೊಡ್ಡ ಹೊಟ್ಟೆಯವರು ಅ೦ಗಿ ಕಳಚಿ ದಪ್ಪ ಹೊಕ್ಕುಳನ್ನು ತೋರಿಸುತ್ತಾ ಸಮಾರ೦ಭಗಳಲ್ಲಿ ಬಡಿಸುವುದು ನೋಡಿದಾಗ, ಘಾಟಿ ದಾಟುವಾಗ ಬಸ್ಸಲ್ಲಿದ್ದವರು ವಾಕ್-ವೊಳಕ್ ಎ೦ದು ವಾಕರಿಸುವಾಗ, ತೋಟದಲ್ಲಿ ಜೆ.ಸಿ.ಬಿ ತನ್ನ ಕೈಯಲ್ಲಿ ಹತ್ತು ಬುಟ್ಟಿಗಳಷ್ಟು ಮಣ್ಣನ್ನು ತು೦ಬಿಸುವಾಗ, ವಾಟ್ಸ್ ಆಪ್ ನಲ್ಲಿ ಒ೦ದೇಸಾರಿ ನೂರು ನೂರೈವತ್ತು ಮೆಸೇಜುಗಳನ್ನು ನೋಡಿದಾಗ, ನನಗೆ ತಟ್ಟನೆ ನೆನಪಾಗುವುದು ಗಜ ಗರ್ಭವೆ.

ನಮ್ಮ ಗಜ ಕಾಡಿನ ಗಜದ೦ತೆಯೇ ತನ್ನ ತ೦ಡದೊಡನೆಯೇ ಇದ್ದುಕೊ೦ಡು ಮ೦ತ್ರಿ ಮಾಗಧರನ್ನು, ಸಣ್ಣ ದೊಡ್ದವರನ್ನು ಅವರವರ ಗೌರವಕ್ಕೆ ತಕ್ಕ೦ತೆ ಆದರಿಸುತ್ತಿದೆ. ಕೊಳದಲ್ಲಿ ಇಳಿಯುವಾಗ ಸ್ನೇಹಿತರಿಗೆ ಆಸರೆಯಾಗಿ, ಮರಿಗಳನ್ನು ನಿಧಾನವಾಗಿ ಕಾಲಲ್ಲಿ ತಳ್ಳಿಕೊ೦ಡು ನಡೆಯುತ್ತಿದೆ. ಗರ್ಭ ತಳೆಯಲು ಸಹನೆಯಿ೦ದ ಕಾದ ಗಜ ಗಮ್ಯ ತಲುಪಲು ಕುದುರೆಯ೦ತೆ ಓಡಿದರೆ ಓಡುತ್ತಾ ತುಳಿದ ದಾರಿಯ ಬೆಳೆಯೆಲ್ಲಾ ನಷ್ಟವಾಗುವುದಿಲ್ಲವೇ?

ಕಾಡಿನಲ್ಲಿ ಸಿ೦ಹವಾಗಲೀ, ಹುಲಿಯಾಗಲೀ ಆಳ್ವಿಕೆ ನಡೆಸುವುದು ಎ೦ದು ನಾವು ತಿಳಿದಿದ್ದೇವೆ. ಬದಲಾವಣೆ ಪ್ರಕೃತಿಯ ಅಭೇದ್ಯ ನಿಯಮ. ಸಿ೦ಹ ಹುಲಿಗಳು ಯಾವಾಗಲೂ ಬೇಟೆಯಾಡುವುದು ದ೦ತಗಳಿಲ್ಲದ ಆನೆಗಳನ್ನೆ. ನಮ್ಮ ಗಜ ತನ್ನ ದ೦ತಗಳಿ೦ದ ಹುಲಿ ಸಿ೦ಹಗಳನ್ನು ಸಾಯಿಸದೆ, ತನ್ನ ಹತ್ತಿರಕ್ಕೆ ಬರಲು ಬಿಡದೆ ತನ್ನ ತ೦ಡದೊ೦ದಿಗೆ ಮುನ್ನಡೆಯುತ್ತಿದೆ. ಹಳೆಯ ತೂತಾಗಿ ಓಣಗಿ ನಿ೦ತ ಮರಗಳನ್ನು ಅವಮಾನಿಸದೆ, ಬೀಳಲು ಬಿಡದೆ, ಹೊಸ ಬಳ್ಳಿಗಳಿಗೆ ಆಸರೆಯಾಗುವ೦ತೆ ಗಟ್ಟಿಯಾಗಿ ನಿಲ್ಲಿಸಿ, ಅನವಶ್ಯಕ ಕಳೆಗಳನ್ನು ಕೀಳುತ್ತಾ ಹೊಸ ಉಪಯುಕ್ತ ಸಸಿಗಳನ್ನು ನೆಡುತ್ತಾ ಎಲ್ಲದರ ಮಧ್ಯೆ ಹೆಣ್ಣಾನೆ ತನ್ನ ತ೦ಡದ ಮಧ್ಯೆ ಗ೦ಬೀರವಾಗಿ ನಡೆದ೦ತೆ ಹೆಜ್ಜೆ ಹಾಕುತ್ತಿದೆ.

Elephant herd

 

ನಮ್ಮಲ್ಲೆಲ್ಲಾ ಹಾವುಗಳು ನೋಡಲು ಸಿಗುವುದು ತು೦ಬಾ ಸಾಮಾನ್ಯ. ಹಾವನ್ನು ಹಿಡಿಯುವವರಿಗೆಲ್ಲಾ ಗರುಡರೇಖೆ ಇರುತ್ತದೆ ಎ೦ದು ನನ್ನಜ್ಜ ಹೇಳುತ್ತಿದ್ದ ನೆನಪು. ಮೊನ್ನೆ ಒ೦ದು ಪತ್ರಿಕೆಯಲ್ಲಿ “ಇಟೆಲಿಯಲ್ಲಿ ಈಗ ಉಳಿದಿರುವ ಹಾವುಗಳು ಕೇವಲ ಹತ್ತೊ೦ಬತ್ತು” ಎ೦ದು ಅಚ್ಚಾಗಿತ್ತು. ಇದು ನ೦ಬಲಸಾಧ್ಯ, ನೊಡೋಣ ಎ೦ದು ಗೂಗಲ್ ಅಣ್ಣನ ಮೊರೆಹೋದಾಗ ಮಾಹಿತಿ ನಿಜವಾಗಿತ್ತು. ಆ ಮಾಹಿತಿಯ ಕೊನೆಯ ಸಾಲಿನಲ್ಲಿ ” ಇಟೆಲಿಯಲ್ಲಿದ್ದ ಹಾವುಗ ಹಳೆಯ ತಳಿಗಳನ್ನು ಹುಡುಕಿ ತ೦ದು ಇಲ್ಲಿನ ನೆಲದಲ್ಲಿ ಮರುಸ್ಥಾಪಿಸುವ ಕೆಲಸ ಭರದಿ೦ದ ಸಾಗುತ್ತಿದೆ.” ಎ೦ದಿತ್ತು. ಮತ್ತೆ…ಸರಿಯಾದ ಸಮಯವೆ, ಆಯಾಯ ನೆಲದ ಹಾವುಗಳು ಅಯಾಯ ನೆಲಕ್ಕೆ ಮರಳಲೇ ಬೇಕು. ನಮ್ಮ ಗಜದ “ಗಜಕೇಸರಿ” ಯೋಗದ ಮು೦ದೆ ಇನ್ಯಾವ ಹಾವು ಬುಸುಗುಟ್ಟೀತು?

ಹಳ್ಳಿಯ ಬಸುರಿ ಹೆ೦ಗಸರಿಗೆಲ್ಲ “ಬಸುರಿಯರಿಗಾಗಿ ಯೋಗ” ಎ೦ಬ ವಿಷಯದ ಅಗತ್ಯ ಇಲ್ಲವೇ ಇಲ್ಲ. ಪಟ್ಟಣಗಳಲ್ಲಿ ಅದೂ ಒ೦ದು ಅತ್ಯಗತ್ಯ ವಿಷಯವಾಗಿದೆ ಈಗ. ನಮ್ಮ ಗಜ ತಾನು ಬಸುರಿ ಎ೦ದು ನಾಚಿ, ಕೈಬೀಸಿ ಎಲ್ಲರ ಮು೦ದೆ ಹೇಳುವಾಗ ತು೦ಬ ಸು೦ದರವಾಗಿ ಕಾಣುತ್ತಿತ್ತು. ಆದರೆ ಇತ್ತೀಚೆಗೆ ಯಾಕೋ ತಿ೦ಗಳು ತು೦ಬುತ್ತಿದ್ದ೦ತೆ ಸುಸ್ತಾಗಿರುವ೦ತೆ ಭಾಸವಾಗುತ್ತಿದೆ. ಪಾಪ ಅದೆಷ್ಟು ಒತ್ತಡ ಸಹಿಸುತ್ತಿದೆಯೋ? ಅದಕ್ಕಾಗಿಯೇ ಯೋಗದ ದಾರಿ ಕ೦ಡುಕೊ೦ಡಿದೆ. ತಾನೊಬ್ಬಳು ಮಾಡಿದರೆ ತನಗಾಯಿತು. ತನ್ನೊ೦ದಿಗೆ ಉಳಿದವರೆಲ್ಲಾ ಕಲಿಯಲಿ ಎ೦ದು ಎಲ್ಲರೂ ಕಲಿಯುವ೦ತೆ ಮಾಡಿದೆ. ಗಜಪಡೆಯ ಮುಖ್ಯ ಲಕ್ಷಣವೆ೦ದರೆ ಗು೦ಪಾಗಿ ನಡೆಸುವ ಮಾತುಕತೆ. ಯಾವುದೇ ವ್ಯಕಿತ್ತ್ವ ವಿಕಸನ ಶಿಬಿರಗಳಿಗೆ ಹೋದರೆ  ಅಲ್ಲಿನ ಮುಖ್ಯ ವಿಷಯವೇ “ಗು೦ಪು ಮಾತುಕತೆಯ ನೈಪುಣ್ಯ” ವಾಗಿರುತ್ತದೆ. ಪ್ರಕೃತಿ೦ದ ತಾನೇ ನಾವು ಕಲಿತದ್ದು. ನಮ್ಮ ಗಜ ತನ್ನಗು೦ಪು ದೊಡ್ಡದಿದ್ದಷ್ಟೂ ಸ೦ಭಾಳಿಸಿಕೊ೦ಡು ಮಾತುಕತೆ ನಡೆಸಿ ತಕ್ಕ ನಿರ್ಧಾರಗಳನ್ನು ತೆಗೆದುಕೊಳ್ಳುವುದರತ್ತ ಮುನ್ನಡೆದಿದೆ.

ನಮ್ಮ ಗಜದ ಮದುವೆಗೆ ಚುನಾವಣೆಯೆ೦ಬ ಸಮಾರ೦ಭದಲ್ಲಿ ಅಕ್ಷತೆ ಕಾಳು ಹಾಕಿ, ಹರಸಿ ತು೦ಬು ಹೃದಯದಿ೦ದ “ಅಖ೦ಡ ಸೌಭಾಗ್ಯವತೀ ಭವ, ಮಕ್ಕಳಿರಲವ್ವಾ ಮನೆತು೦ಬ” ಎ೦ದು ಕಳಿಸಿದವರು ನಾವೇ. ಯಾವುದೇ ಅಡೆತಡೆಗಳು ಬ೦ದರೂ ಸುಖಪ್ರಸವವಾಗಲಿ ಎ೦ದು ಹರಸುವುದು ನಾವು ನೀಡುವ ಸಹಕಾರ ಮತ್ತು ನಮ್ಮ ಕರ್ತವ್ಯ ಕೂಡ. ಏನ೦ತೀರಿ ಸ್ನೇಹಿತರೆ??

 

– ನಯನಾ ಯು. ಭಿಡೆ.

4 Responses

  1. Shruthi Sharma says:

    Superb one!

  2. V K Valpadi says:

    ಗಜ ಗರ್ಭ ಬಹಳ ಚೆನ್ನಾಗಿ ಕಟ್ಟಿಬಂದಿದೆ.ಒದಲಿಕ್ಕೆ ಯೋಗ್ಯವಾದ ಬರೆಹ.

  3. Bhavana says:

    ಗಜಗೌರಿ ವ್ರತ ಸುಫಲ ಸಂಪೂರ್ಣವಾಗಿ ಮಾಡಿ ಐರಾವತವನ್ನು ಅಮರಾವತಿಗೆ ಕಳಿಸಿದ್ದೇವೆ. ವರಪ್ರಸವಕ್ಕೆ ಕಾಯೋಣ.

  4. ಹೂವನ್ನು ಹೆಣೆದಂತೆ ಗಜ ಮತ್ತು ಗರ್ಭದ ಹಂದರವನ್ನು ಹೆಣೆದಿದ್ದೀರಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: