ತೇಜಸ್ವಿಯವರ ‘ಜುಗಾರಿ ಕ್ರಾಸ್’…

Spread the love
Share Button
Hema 11 apr2015

ಹೇಮಮಾಲಾ.ಬಿ

 

ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರ ‘ಜುಗಾರಿ ಕ್ರಾಸ್’ ಪುಸ್ತಕವನ್ನು ಒಂದು ಬಾರಿ ಓದಿ ಮುಗಿಸಿದೆ. ಖಂಡಿತವಾಗಿಯೂ ಇದು ನನ್ನ ಬುದ್ಧಿಗೆ ನಿಲುಕದಷ್ಟು ಎತ್ತರದಲ್ಲಿರುವ ಕಥಾವಸ್ತು ಮತ್ತು ನಿರೂಪಣೆ. ಆದರೆ ತೇಜಸ್ವಿಯವರ  ಅದ್ಭುತ ಕೃತಿಯನ್ನು ಓದಿದೆ ಎಂಬ  ಕಾರಣಕ್ಕೇ ಸಡಗರವಾಗುತ್ತಿದೆ.

‘ಜುಗಾರಿ ಕ್ರಾಸ್’ ಮಲೆನಾಡಿನ ಕೃಷಿಕ ದಂಪತಿ, ಸುರೇಶ್ ಮತ್ತು ಗೌರಿಯವರ ಸ್ವಾರಸ್ಯಕರ ಕಥೆಯಾಗಿದೆ. ಓದುತ್ತಿದ್ದಂತೆ , ಕೃತಿಯು ನಮ್ಮನ್ನು ಮಲೆನಾಡಿನ ಕಾಡುದಾರಿಯಲ್ಲಿ ನಡೆಸುತ್ತದೆ.  ಬಸ್ಸಿನ ಕಿರಿಕಿರಿ, ರಸ್ತೆಯ ಜಗಳ, ಪರಸ್ಪರ ಕಿಚಾಯಿಸುವಿಕೆ, ತಮಾಷೆ ಪ್ರಸಂಗಗಳು,  ಏಲಕ್ಕಿ ವ್ಯಾಪಾರ, ಕಾಳಸಂತೆ ದಂಧೆ, ಅಲ್ಲಿ ಎದುರಾಗುವ ಆಕಸ್ಮಿಕಗಳು, ಕತ್ತಲೆಯ ಕಾಡುದಾರಿಯಲ್ಲಿ ತೆವಳುವ ರೈಲು, ಸುರಂಗ ಮಾರ್ಗ, ಭಯ, ಕುತೂಹಲ, ಕೃಷಿ, ಆಕಸ್ಮಿಕವಾಗಿ ದೊರೆತ ಹೆಚ್ಚುವರಿ ದುಡ್ಡು, ಅದರಿಂದಾಗಿ ಉಂಟಾದ ತಳಮಳಗಳು  ಅಯಾಚಿತಯಾಗಿ  ಲಭಿಸಿದ ಸಾಹಿತ್ಯ ಕೃತಿ, ಅದರಲ್ಲಿ ಹುದುಗಿದ  ದ್ವಂದ್ವಾರ್ಥ ಮತ್ತು ಕೆಂಪುಕಲ್ಲಿನ ರಹಸ್ಯ….ಹೀಗೆ ಕಥಾನಾಯಕ-ನಾಯಕಿಯರ ಜತೆಗೆ ನಾವೂ  ‘ಇದು  ಕಥೆಯೇ, ನಿಜವೇ’ ಎಂಬಷ್ಟು ತಬ್ಬಿಬ್ಬಾಗುತ್ತೇವೆ.Jugari Cross - Poornachandra Tejaswi

ಮಲೆನಾಡಿನಲ್ಲಿ  ನಿರಾಳವಾಗಿ ಬದುಕುತ್ತಿದ್ದ ಜನರ ಜೀವನದಲ್ಲಿ ಅಧುನಿಕ ಜಗತ್ತಿನ ಆಮಿಷಗಳು ಮತ್ತು ಅದರಿಂದಾಗುವ ಅನಾಹುತಗಳನ್ನು, ಈ ಕೃತಿಯಲ್ಲಿ ಬಹಳ ಸೊಗಸಾಗಿ  ಚಿತ್ರಿಸಲಾಗಿದೆ. ತೇಜಸ್ವಿಯವರ ಅಪ್ಪಟ ಪರಿಸರಪ್ರೇಮ ಮತ್ತು  ಅರಣ್ಯನಾಶದ ಬಗ್ಗೆ ಆತಂಕ ಅಲ್ಲಲ್ಲಿ ವ್ಯಕ್ತವಾಗಿದೆ.

ಕೇವಲ 24  ಗಂಟೆಗಳ ಅವಧಿಯಲ್ಲಿ ನಡೆಯುವ ಘಟನಾವಳಿಗಳ ಸುತ್ತ ಹೆಣೆಯಲಾದ ಈ ಪತ್ತೇದಾರಿ ಕಾದಂಬರಿಯಲ್ಲಿ ಜುಗಾರಿ ಕ್ರಾಸ್ ಮತ್ತು ದೇವಪುರಗಳಲ್ಲಿ ನಡೆಯುವ ಅಪರಾಧ ಪ್ರಕರಣಗಳು, ಅವುಗಳನ್ನು ಬಯಲಿಗೆಳೆಯುವ ಪ್ರಯತ್ನಗಳು, ಒಂದೊಂದಾಗಿ ಅನಾವರಣಗೊಳ್ಳುವ ಭಯಾನಕ ಸತ್ಯಗಳು …. ಓದುಗರ ಮೈ ನವಿರೇಳಿಸುತ್ತವೆ.  ಇದು ಯಾವುದೂ ಗೊತ್ತಿಲ್ಲದೆ, ಯಾಲಕ್ಕಿ ವ್ಯಾಪಾರ ಮಾಡಿ ಬರುವ ಉದ್ದೇಶದಿಂದ ಬಸ್ಸು ಹತ್ತಿದ್ದ ಸುರೇಶ, ‘ತುರಿಯುವ ಮಣೆ’ ಕೊಳ್ಳಬೇಕೆಂಬ ಸರಳ ಆಸೆ ಹೊತ್ತ  ಗೌರಿ, ತಮಗೆ ಅರಿವಿಲ್ಲದೆಯೇ  ಭೂಗತ ಜಗತ್ತಿನ ಚಕ್ರವ್ಯೂಹದಲ್ಲಿ ಸಿಲುಕಿ, ಕತ್ತಲಿನಲ್ಲಿ ಚಲಿಸುತ್ತಿರುವ ರೈಲಿನಿಂದ ಹಾರಿ, ಸುರಂಗ ಮಾರ್ಗದಲ್ಲಿ ನಡೆದು ಜೀವ ಉಳಿಸಿಕೊಳ್ಳಲು,  ಪ್ರಯತ್ನಿಸುವ  ಪರಿ….ಆಬ್ಬಾಬ್ಬಾ ವೈರುಧ್ಯಗಳ ಸರಮಾಲೆಯೇ… ಅನಿಸುತ್ತವೆ.

ಒಟ್ಟಾರೆಯಾಗಿ ‘ಜುಗಾರಿ ಕ್ರಾಸ್’ ಮನೋರಂಜನೆ ನೀಡುತ್ತಾ, ಪ್ರಕೃತಿಯ ಮಧ್ಯೆ ನಮ್ಮನ್ನು ಒಯ್ಯುವ ಸಸ್ಪೆನ್ಸ್ ..ಥ್ರಿಲ್ಲರ್ ಕಾದಂಬರಿ.

 

– ಹೇಮಮಾಲಾ.ಬಿ

8 Responses

 1. nayanabhide says:

  ಜುಗಾರಿ ಕ್ರಾಸ್ ಓದಿದಾಗ ನಮ್ಮ ಜೀವನ, ಪ್ರಕೃತಿ, ಮಲೆನಾಡು ಎಲ್ಲದರ ನಡುವೆ ನಮ್ಮನ್ನು ಜುಗಾರಿಯ೦ತೆ ಆಡಿಸುತ್ತಿದೆಯೇನೋ ಅನಿಸುತ್ತದೆ ಅಲ್ವೇ?

  • Hema says:

   ಹೌದು… ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಇನ್ನೂ ಹಲವಾರು ಬಾರಿ ಓದಬೇಕು. 🙂

 2. Balasubramanya Hosoor says:

  ತೇಜಸ್ವಿಯರ ಎಲ್ಲಾ ಕೃತಿಗಳೂ ಒಂದಕ್ಕಿಂತ ಒಂದು ಅದ್ಧುತ.

 3. Adarsh Bhaskara Vasista says:

  ಪೂ. ಚಂ. ತೇ ಒಬ್ಬ ಅದ್ಭುತ ಕಥೆಗಾರ. ಕಥೆಯನ್ನು ಹೇಳುವ ಪರಿ ಎಷ್ಟು ಸ್ವಾಭಾವಿಕವಾಗಿದೆ ಎಂದರೆ, ಮತ್ತೊಮ್ಮೆ ನಾವು ನಮ್ಮ ಅಜ್ಜಿಯ ಮಡಿಲ ಸೇರಿ ಅವಳ ಸ್ವರದಲ್ಲೇ ಕಥೆ ಕೇಳುತ್ತಿದ್ದೆವೇನೋ ಎನ್ನುವಂತೆ ಭಾಸವಾಗುತ್ತೆ. ಅವರ ಎಲ್ಲ ಕಾದಂಬರಿಗಳು .. ಜುಗಾರಿ ಕ್ರಾಸ್, ಕರ್ವಾಲೋ, ಚಿದಂಬರ ರಹಸ್ಯ , ಸ್ವರೂಪ, ನಿಗೂಢ ಮನುಷ್ಯರು … ಒಂದು ರೀತಿಯ ಜೀವನದ ಪಾರದರ್ಶಕ ಕ್ರಿಯೆಗಳಂತೆ ಕಾಣುತ್ತವೆ. ಹೇಳುವುದನ್ನು ಬಹಳ ಸ್ಪಷ್ಟವಾಗಿ ಮತ್ತು ನೇರವಾಗಿ ಹೇಳುವ ಆ ರೀತಿ ತೇಜಸ್ವಿಗೆ ಸ್ವಂತ. ಕಾಲಕ್ಕೆ ತಕ್ಕಂತೆ ಮಾರ್ಪಾಡಾಗುವ ಅವರ ಕಥನ ಶೈಲಿ ಕೂಡ ಬಹು ಸೊಗಸು. ಅವರ ಸಣ್ಣ ಕಥೆಗಳದ್ದೇ ಬೇರೊಂದು ಪ್ರಪಂಚ. ಗುಡುಗು ಹೇಳಿದ್ದೇನು, ಪಂಜ್ರೋಳ್ಳಿ ಪಿಶಾಚಿಯ ಸವಾಲು, ಲಿಂಗ ಬಂದ, ತಬರನ ಕಥೆ, ಅಬಚೂರಿನ ಪೋಸ್ಟಾಫೀಸು … ಎಲ್ಲವೂ ನವ್ಯ ಸಾಹಿತ್ಯ ಉಗಮವಾಗುತ್ತಿರುವ ಕಾಲಘಟ್ಟದಲ್ಲೇ ಅವರ ಸಮಕಾಲೀನ ಸಾಹಿತ್ಯಕ್ಕೆ ಇನ್ನೊಂದು ” ಕಟ್ ರೂಟ್ ” ತಕ್ಕೊಂಡು ಬರೆದ ಕಥೆಗಳು. ಸಮಕಾಲೀನರಾದ ಲಂಕೇಶ್, ಅನಂತಮೂರ್ತಿ ಇವರುಗಳದ್ದು ಒಂದು ಭಾವಯಾನವಾದರೆ, ತೇಜಸ್ವಿ ಒಂಟಿ ಸಲಗ ( ಜಿ ಎಸ್ ಎಸ್ ರ ಮಾತು ಎಷ್ಟು ಸತ್ಯ ಅಲ್ಲವೇ .. ). ತೇಜಸ್ವಿ ಹೆಚ್ಚು ದಿನ ನಮ್ಮೊಂದಿಗೆ ಇರಲಿಲ್ಲ ಎಂಬುದು ನಮ್ಮ ದುರಾದೃಷ್ಟ ಅಷ್ಟೇ..

 4. Nagendra Bhat says:

  ತೇಜಸ್ವಿ ಕಥೆಗಳು ನಿಜ ಜೀವನಕ್ಕೆ ಹತ್ತಿರದ್ದಾಗಿರುತ್ತವೆ..ಸುತ್ತಮುತ್ತಲಿನ ದೈನಂದಿನ ಚಟುವಟಿಕೆ ಗಲಾಟೆ ಮುಂತಾದವನ್ನೆ ಇಟ್ಟುಕೊಂಡು ಕಥೆ ಹೆಣೆವ ಪರಿ ಬಲು ಸೊಗಸು..

 5. Sneha Prasanna says:

  ಮಾಂ:) ಸೊಗಸಾದ ನಿರೂಪಣೆ…:)

 6. ಹೀಗೆ ವಿಶಿಷ್ಟವಾದ ಕೃತಿಗಳ ಪರಿಚಯ ಮಾಡುತ್ತಲಿದ್ದರೆ ಚೆನ್ನಾಗಿರುತ್ತದೆ . ಬರಹ ಚೆನ್ನಾಗಿತ್ತು.

 7. ನಿಜ ಬರೆಯುವ ರೀತಿಯಲ್ಲೇ ಅಡಗಿದೆ ಸತ್ಯ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: