ಭೋಜನ ಕಾಲೇ ನಮ: ಪಾರ್ವತೀಪತೇ ಹರ ಹರಾ…ಮಾದೇವ!
“ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೆ……………………ಶಾಲ್ಯಾನ್ನ ಷಡ್ರಸ ತಿಂದು ತೃಪ್ತನಾಗಿ ಕೃಷ್ಣಾ ಎನಬಾರದೆ…...” ಎಂದು ಶ್ರೀ ಪುರಂದರದಾಸರು ಹಾಡಿದ್ದಾರೆ.
ಸಮಾರಂಭಗಳಿಗೆ ಅಹ್ವಾನ ಬಂದಿರುತ್ತದೆ. ಆಹ್ವಾನ ಪತ್ರಿಕೆಯಲ್ಲಿ ಮುಂಚಿತವಾಗಿ ಬನ್ನಿ ಎಂದು ಬರೆದಿದ್ದರೂ ಈಗಿನ ಧಾವಂತದ ಯುಗದಲ್ಲಿ , ಮುಹೂರ್ತದ ಸಮಯಕ್ಕೆ ಸರಿಯಾಗಿ ತಲಪಿದೆವಾದರೆ ಅಹ್ವಾನಕ್ಕೆ ಧಾರಾಳವಾಗಿ ಮನ್ನಣೆ ಕೊಟ್ಟಂತಾಗುತ್ತದೆ. ಯಾಕೆಂದರೆ, ಅಫೀಸಿನ ಊಟದ ವಿರಾಮದ ವೇಳೆಯಲ್ಲಿ ಒಮ್ಮೆ ದೌಡಾಯಿಸಿ, ಸಮಾರಂಭದ ಬಫೆಯಲ್ಲಿ ಕಂಡಿದ್ದನ್ನು ಉಂಡು, ಒಮ್ಮೆ ಅತಿಥೇಯರಿಗೆ ಮುಖತೋರಿಸಿದರೂ ಸಾಕು ಎಂಬಂಥ ಪರಿಸ್ಥಿತಿ ಹೆಚ್ಚಿನವರಿಗೂ ಇರುತ್ತದೆ. ಇದು ಕಾಲದ ಮಹಿಮೆ. ಹೀಗಿರುವಾಗ, ನಿಧಾನವಾಗಿ ಎಲೆಯಲ್ಲಿ ವ್ಯವಸ್ಥಿತವಾಗಿ ಬಡಿಸಿದ್ದನ್ನು ಉಂಡು, ಮಧ್ಯೆ ‘ಕೃಷ್ಣಾ ಎನಲು’ ಎಷ್ಟು ಮಂದಿಗೆ ವ್ಯವಧಾನವಿದೆ?
ಆದರೆ ಈಗಲೂ ಕೆಲವು ಸಮಾರಂಭಗಳಲ್ಲಿ ಧಾವಂತದವರಿಗಾಗಿ ಬಫೆ ವ್ಯವಸ್ಥೆ ಇರುವುದರ ಜತೆಗೆ, ಸಾಂಪ್ರದಾಯಿಕವಾಗಿ ಬಾಳೆ ಎಲೆಯಲ್ಲಿ ಊಟ ಬಡಿಸುವ ಪದ್ಧತಿಯನ್ನು ಪಾಲಿಸಿಕೊಂಡು ಬರುತ್ತಾರೆ. ಅಡುಗೆ ಮಾಡುವುದು ಒಂದು ಕಲೆಯಾದರೆ, ನೆಲದಲ್ಲಿ ಕುಳಿತು ಬಾಳೆಲೆಯಲ್ಲಿ ಬಡಿಸಿದ ಊಟವನ್ನು ಸಹಭೋಜನ ಮಾಡುವುದು ಒಂದು ಸಂಸ್ಕೃತಿ. ನನ್ನ ಅನುಭವದ ವ್ಯಾಪ್ತಿಯಲ್ಲಿ ಗಮನಿಸಿದಂತೆ, ಎಲೆತುದಿಯಲ್ಲಿನ ಪಾಯಸ, ತರಾವರಿ ಪಲ್ಯಗಳು, ಅನ್ನ, ಸಾರು, ಹಪ್ಪಳ, ಸಾಂಬಾರು, ಕಾಯಿರಸ, ಇತ್ಯಾದಿಗಳಲ್ಲಿ ಉಂಡಾದ ಮೇಲೆ ಸಿಹಿಭಕ್ಷ್ಯಗಳು ಮತ್ತು ಪಾಯಸವನ್ನು ಬಡಿಸುತ್ತಾರೆ. ಆ ಸಂದರ್ಭದಲ್ಲಿ, ಉಣ್ಣುವವರು ಯಾರಾದರೂ ದೇವರನ್ನು ನೆನಪಿಸುವ ಶ್ಲೋಕ ಗಳನ್ನು ಹಾಡುವ ಸಂಪ್ರದಾಯವಿದೆ. ಇದಕ್ಕೆ ‘ಚೂರ್ಣಿಕೆ’ ಎಂಬ ಹೆಸರು. ಇದರ ಮುಂದುವರಿದ ಭಾಗವಾಗಿ ದೇವರನಾಮ/ಕೀರ್ತನೆಗಳನ್ನು ಹಾಡುವವರೂ ಇದ್ದಾರೆ.
ಹಾಡು ಮುಗಿದ ತಕ್ಷಣ ” ಭೋಜನ ಕಾಲೇ ನಮ: ಪಾರ್ವತೀಪತೇ ಹರ ಹರಾ” ಎಂದು ಯಾರಾದರೂ ದೊಡ್ಡದಾಗಿ ಉಚ್ಛರಿಸುತ್ತಾರೆ. ಇತರರು ಇದಕ್ಕೆ ಮಾರ್ದನಿಯಾಗಿ ” ಮಾದೇವ” ಎಂದು ಜೈಕಾರ ಹಾಕುತ್ತಾರೆ. ಅನ್ನ-ಮಜ್ಜಿಗೆ ಉಂಡು ಊಟ ಕೊನೆಗೊಳ್ಳುವಷ್ಟರಲ್ಲಿ, ಇನ್ನೂ ಒಂದಿಬ್ಬರು ಚೂರ್ಣಿಕೆ ಹಾಡಿರುತ್ತಾರೆ. ಕೋರಸ್ ನಲ್ಲಿ ” ಭೋಜನ ಕಾಲೇ ನಮ: ಪಾರ್ವತೀಪತೇ ಹರ ಹರಾ” ಮತ್ತು ” ಮಾದೇವ” ನ ನೆನಪು ಪುನರಾವರ್ತಿತವಾಗಿರುತ್ತದೆ.
ಅಂತೂ ಪುರಂದರದಾಸರ ಹಾಡಿನ ಒಂದು ಸಾಲನ್ನಾದರೂ ಗೌರವಿಸಿದಂತಾಯಿತು, ಅಲ್ಲವೇ ?
– ಹೇಮಮಾಲಾ.ಬಿ
ನಾವುಣ್ಣುವ ಅನ್ನ ದೇವರಿತ್ತ ಕೊಡುಗೆ. ಈ ಪವಿತ್ರ ಕೊಡುಗೆಯನ್ನು ಸ್ವೀಕರಿಸುವ ವೇಳೆಯಲ್ಲಾದರೂ ಅವನನ್ನು ನೆನೆಯಬೇಕೆಂಬ ವ್ಯವಸ್ಥೆಯಿದು. ಚೂರ್ಣಿಕೆಗಳಲ್ಲಿ ಸುಭಾಷಿತಗಳು, ದೇವಸ್ತುತಿಗಳು, ಕೆಲವೇ ಸಾಲುಗಳಲ್ಲಿ ಮಹಾಭಾರತ, ರಾಮಾಯಣ, ಭಾಗವತಗಳ ಕಥಾನಕಗಳನ್ನು ವಿವರಿಸುವ ಶ್ಲೋಕಗಳು ಕೇಳುಗರಿಗೆ ಇಂಪನ್ನು, ಮನಕೆ ಸೊಂಪನ್ನು ನೀಡುತ್ತಿದ್ದವು. ಊಟಕ್ಕೂ ವೇಳೆಯಿರದ ಈ ಕಾಲದಲ್ಲಿ ಇದೆಲ್ಲವು ಇನ್ನು ನೆನಪು ಮಾತ್ರ. ಲೇಖನ ಚಿಕ್ಕದಾಗಿ ಚೊಕ್ಕವಾಗಿ ಮೂಡಿ ಬಂದಿದೆ.
ಈ ಚೂರ್ಣಿಕೆ ಆಚರಣೆ ಈಗ ಕೆಲವು ಗ್ರಾಮಾಂತರ ಪ್ರದೇಶದಲ್ಲಿ ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತೆ, ಆದರೆ ನಗರಗಳಲ್ಲಿ ಮರೆಯಾಗಿದೆ, ಕೆಲವು ಮನೆಗಳಲ್ಲಿ ಸಣ್ಣ ಪುಟ್ಟ ಸಮಾರಂಭಗಳಲ್ಲಿ ನಾನು ಕಂಡಂತೆ ಕೆಲ ಹಿರಿಯರಿಂದ ಧ್ವನಿ ಕೇಳಿ ಬರುತ್ತೆ!
ತುಂಬ ಚೆನ್ನಾದ ಲೇಖನವಿದು. ಇದರ ಜೊತೆಯಲ್ಲಿ ಸುರೇಖಾ ಭೀಮಗುಳಿ ಯವರ “ಭೂರಿ ಭೋಜನ” ಓದಿದರೆ ಒಳ್ಳೆಯ ಜುಗಲಬಂದಿ ಆಗುತ್ತದೆ.
ಕೂತ ಕೂಡಿಬಾಳೆ ಎಲೆಯಲ್ಲಿ ಊಟ ಮಾಡುವದು ನಮ್ಮ ದೇಶದ ಸಂಸ್ಖೃತಿ, ಇದನ್ನ ಇವತ್ತು ಕಾಣುವದು ಕೇವಲ ಕೆಲವು ದೇವಸ್ಥನ ಕ್ಷೇಛ್ರಗಳಲ್ಲಿ ಮಾತ್ರ, ,
ನಾನು ಕೆಲವು ಚೂರ್ಣಿಕೆ ಗಳನ್ನು ಕಲಿಯಬೇಕು. ಸಾಹಿತ್ಯ ಎಲ್ಲಿ ಸಿಗುತ್ತದೆ? ಯಾರಾದರೂ ಸಹಾಯ ಮಾಡುತ್ತೀರಾ?
ನನಗೆ ಗೊತ್ತಿರುವ ಕೆಲವು ಚೂರ್ಣಿಕೆಗಳಿವು ( ಭೋಜನಕಾಲೇ ಹಾಕಲು ಒಂದು ಪ್ಯಾರಾ ಚೂರ್ಣಿಕೆ ಹಾಡಿದರೆ ಸಾಕಾಗುತ್ತದೆ):
ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀ
ನಿರ್ಧೂತಾಖಿಲ ಘೋರ ಪಾವನಕರೀ ಪ್ರತ್ಯಕ್ಷ ಮಾಹೇಶ್ವರೀ |
ಪ್ರಾಲೇಯಾಚಲ ವಂಶ ಪಾವನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 1 ||
ನಾನಾ ರತ್ನ ವಿಚಿತ್ರ ಭೂಷಣಕರಿ ಹೇಮಾಂಬರಾಡಂಬರೀ
ಮುಕ್ತಾಹಾರ ವಿಲಂಬಮಾನ ವಿಲಸತ್-ವಕ್ಷೋಜ ಕುಂಭಾಂತರೀ |
ಕಾಶ್ಮೀರಾಗರು ವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 2 ||
ಯೋಗಾನಂದಕರೀ ರಿಪುಕ್ಷಯಕರೀ ಧರ್ಮೈಕ್ಯ ನಿಷ್ಠಾಕರೀ
ಚಂದ್ರಾರ್ಕಾನಲ ಭಾಸಮಾನ ಲಹರೀ ತ್ರೈಲೋಕ್ಯ ರಕ್ಷಾಕರೀ |
ಸರ್ವೈಶ್ವರ್ಯಕರೀ ತಪಃ ಫಲಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 3 ||
ವಂದೇ ಶಂಭು ಉಮಾಪತಿಂ ಸುರಗುರುಂ
ವಂದೇ ಜಗತ್ ಕಾರಣಂ
ವಂದೇ ಪನ್ನಗ ಭೂಷಣಂ ಮೃಗಧರಂ
ವಂದೇ ಪಶುನಾಂಪತಿಂ
ವಂದೇ ಸೂರ್ಯ ಶಶಾಂಕವಹ್ನಿ ನಯನಂ
ವಂದೇ ಮುಕುಂದಪ್ರಿಯಂ
ವಂದೇ ಭಕ್ತಜನಾಶ್ರಯಂ ಚ ವರದಂ
ವಂದೇ ಶಿವಂ ಶಂಕರಂ
ಕಸ್ತೂರೀ ತಿಲಕಂ ಲಲಾಟ ಪಟಲೆ ವಕ್ಷಸ್ಥಲೇ ಕೌಸ್ತುಭಂ
ನಾಸಾಗ್ರೇ ವರಮೌಕ್ತಿಕಂ ಕರತಲೇ ವೇಣು: ಕರೇ ಕಂಕಣಂ
ಸರ್ವಾಂಗೇ ಹರಿ ಚಂದನಂ ಕಲಯಯನ್ಕಂಠೇ ಚ ಮುಕ್ತಾವಲೀ
ಗೋಪಸ್ತ್ರೀಪರಿವೇಷ್ಠಿತೋ ವಿಜಯತೇ ಗೋಪಾಲ ಚೂಡಾಮಣಿ:
ಪುಸ್ತಕದ ಅಂಗಡಿಗಳಲ್ಲಿ ‘ಮಕ್ಕಳ ಬಾಯಿಪಾಠದ ಶ್ಲೋಕ ಪುಸ್ತಕಗಳು’ ಇದ್ದರೆ ಕೊಂಡುಕೊಳ್ಳಿ. ಏಕ ಶ್ಲೋಕದಲ್ಲಿ ಮಹಾಭಾರತ, ರಾಮಾಯಣ, ಭಾಗವತ ಇತ್ಯಾದಿ ಇರುತ್ತವೆ. ಅವುಗಳನ್ನೂ ಚೂರ್ಣಿಕೆಗೆ ಹೇಳುತ್ತಿದ್ದರು. ಉದಾ:
ಆದೌ ದೇವಕಿ ದೇವಿ ಗರ್ಭ ಜನನಂ ಗೋಪೀ ಗೃಹೇ ವರ್ಧನ೦
ಮಾಯಾ ಪೂತನಿ ಜೀವಿತಾಪಹಾರಣಂ ಗೋವರ್ಧನೋದ್ಧಾರಣಂ
ಕಂಸ ಛೇದನ ಕೌರವಾದಿ ಮಥನ೦ ಕುಂತೀ ಸುತ: ಪಾಲನಂ
ಏತದ್ಭಾಗವತ ಪುರಾಣ ಪುಣ್ಯ ಕಥಿತಂ ಶ್ರೀಕೃಷ್ಣ ಲೀಲಾಮೃತಂ