ದಾರಿಗುಂಟ ನೆನಪುಗಳು..
ಮಾನವನು ಸೇರಿದಂತೆ ಕೈ ಕಾಲು ಇರುವ ಎಲ್ಲಾ ಪ್ರಾಣಿಗಳು ಸಹಜವಾಗಿ ಚಲಿಸುತ್ತವೆ.ಚಲಿಸುವುದು ಸಜೀವಿಗಳ ಸಹಜ ಧರ್ಮ. ಹಾಗಾಗಿ ಅವುಗಳು ಚಲಿಸಲು,ಜೀವಿಸಲು ತಮ್ಮ ಗುಣ ಧರ್ಮ,ಸ್ವಭಾವಗಳಿಗನುಸಾರವಾಗಿ ತಮ್ಮದೇ ಆದ ದಾರಿ ಆಯ್ಕೆ ಮಾಡಿಕೊಳ್ಳುತ್ತವೆ.ಮನುಷ್ಯ ಗುಡ್ಡ,ಕಾಡು ಕಡಿದು ಸಮತಟ್ಟು ಮಾಡಿ ತಮಗೆ ನಡೆಯಲು ಅನುಕೂಲವಾಗುವಂತಹ ದಾರಿಯನ್ನು ಮಾಡಿ ಅದನ್ನು ಬಳಸಿಕೊಂಡ. ಪ್ರಾಣಿ ಪಕ್ಷಿಗಳೂ ಅಷ್ಟೆ,ತಮ್ಮ ದೈನಂದಿನ ಚಟುವಟಿಕೆಗಳಿಗೆ ನಿರ್ಧಿಷ್ಟವಾದ ಹಾದಿಯನ್ನು ಆಯ್ದುಕೊಂಡಿರುತ್ತವೆ.ಆದ ಕಾರಣ ಹಾದಿಯೆಂಬುದು ಜೀವಿಗಳ ಅನಿವಾರ್ಯ ಅಗತ್ಯತೆಗಳಲ್ಲಿ ಒಂದು. ಆದರೆ ಯಾವ ದಾರಿಯಲ್ಲಿ ನಾವು ಸಾಗುತ್ತಿದ್ದೇವೆ? ಯಾವ ಹಾದಿಯನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ ಎಂಬುದರ ಮುಖಾಂತರ ಅವರವರ ಬದುಕು ನಿರ್ಧರಿತಗೊಳ್ಳುತ್ತದೆ.ಹಾಗೆ ನೋಡಿದರೆ ,ದಾರಿಯೆಂಬುದು ಬರೇ ಚಲಿಸುವ ಮಾರ್ಗವಾಗಿ ಮಾತ್ರ ಉಳಿಯದೆ,ಒಟ್ಟಾರೆಯಾಗಿ ನಮ್ಮ ಬದುಕಿನ ಆಗು ಹೋಗುಗಳ ರೂಪಕದಂತೆ ತೋರಿ ಬರುವುದರಲ್ಲಿ ಸಂದೇಹವಿಲ್ಲ.
ಒಂದಷ್ಟು ವರುಷಗಳ ಹಿಂದೆ ತಲುಪಬೇಕಾದ ಸ್ಥಳಗಳನ್ನೆಲ್ಲಾ ನಡೆದೇ ಸಾಗುತ್ತಿದ್ದದ್ದು.ಈಗಿನಂತೆ ವಾಹನಗಳಲ್ಲಿ ಕುಳಿತು ಕ್ಷಣಾರ್ಧದಲ್ಲಿ ನಿಶ್ಚಿತ ಸ್ಥಳ ತಲುಪುತ್ತಿರಲಿಲ್ಲ.ಗಂಟೆಗಟ್ಟಲೆ ಬರೇ ಪಾದದಲ್ಲಿ ನಡೆದೇ ಸಾಗುತ್ತಿದ್ದ ಕಾರಣ ದಾರಿಯ ತುಂಬಾ ಹೆಜ್ಜೆ ಹೆಜ್ಜೆಗೂ ಕಥೆಗಳು,ಅನುಭವಗಳು,ಕುತೂಹಲಕಾರಿ ವಿಸ್ಮಯಗಳು ತೆರೆದುಕೊಳ್ಳುತ್ತಾ ಹೋಗುತ್ತಿದ್ದವು.ಇನ್ನು ಶಾಲೆಗೆ ಹೋಗುವ ಸಂದರ್ಭದಲ್ಲಿ ಮನೆಗೂ ಶಾಲೆಗೂ ನಡುವೆ ಅಗಾಧ ಅಂತರವಿದ್ದುದರಿಂದ ,ತಲುಪಲು ಅನೇಕ ಬಳಸು ದಾರಿಗಳಿದ್ದವು.ಇದೇ ದಾರಿಯಲ್ಲಿ ಹೋಗಿ ಬನ್ನಿ ಅಂತ ನಮ್ಮ ಹಿರಿಯರು ಕಿವಿ ತುಂಬಿಸಿ ಕಳುಹಿಸಿದ್ದರೂ,ನಾವು ಸಹಪಾಠಿಗಳೆಲ್ಲಾ ಆಡುತ್ತಾ ನಲಿಯುತ್ತಾ ಯಾವುದ್ಯಾವುದೋ ಹಾದಿ ಮೂಲಕ ಊರು ಕೇರಿ ಸುತ್ತಿ ಸುಳಿದು,ಪುಂಖಾನುಪುಂಖ ಕತೆಗಳನ್ನು ಬಗಲಲ್ಲಿ ಕಟ್ಟಿಕೊಂಡು ,ಯಾವುದೇ ಆಯಾಸವಿಲ್ಲದೆ ಮನೆ ಸೇರುತ್ತಿದ್ದೆವು.ಯಾರಾದರೂ ಒಬ್ಬೊಬ್ಬರೇ ಹೋಗುವ ಪ್ರಸಂಗ ಬಂದರೆ ಮಾತ್ರ ಅಚ್ಚುಕಟ್ಟಾಗಿ ಹಿರಿಯರ ಮಾತಿಗೆ ಮನ್ನಣೆ ನೀಡುತ್ತಿದ್ದೆವು.ಗುಂಪಿನಲ್ಲಿರುವಾಗ ಇರುತ್ತಿದ್ದ ಇದ್ದ ಬದ್ದ ಧೈರ್ಯಗಳೆಲ್ಲಾ ಪಲಾಯನಗೊಂಡು ಪುಕ್ಕಲುತನ ಆವರಿಸಿ ಪುಕು ಪುಕು ಅಂತ ಎದೆ ಬಡಿದುಕೊಳ್ಳಲು ಹತ್ತುತ್ತಿತ್ತು. ಬೆಳೆದು ದೊಡ್ಡವರಾದಂತೆ , ದಾರಿಯ ಮೇಲಿನ,ಒಳಗಿನ,ಅನೇಕ ಸಂಗತಿಗಳು,ಸಾಧ್ಯತೆಗಳು ಉದ್ದಾನುದ್ದ ಹಾದಿಯಂತೆ ನಡೆದಷ್ಟೂ ಮುಗಿಯದೆ ಬಿಚ್ಚಿಕೊಳ್ಳುತ್ತಾ ಹೋಗಿದ್ದು. ನಾವುಗಳು ಪಾಟಿ ಚೀಲ ಹೆಗಲಿಗೇರಿಸಿ ಹೋಗುವಾಗ ಗದ್ದೆ ದಾಟಿ,ಒಂದು ಸಣ್ಣ ತೋಡು ದಾಟಿ,ಒಂದು ಹೊಳೆ ದಾಟಿ ಮತ್ತೆ ಸಿಗುತ್ತಿದ್ದ ಕಾಫಿ ತೋಟದ ದಾರಿಯಲ್ಲಿ ಸಾಗಿ ,ಕೊನೆಗೆ ಮುಖ್ಯ ರಸ್ತೆಗೆ ಇಳಿದು,ಮತ್ತೂ ಒಂದಷ್ಟು ದೂರ ಪಟ್ಟಾಂಗ ಹೊಡೆಯುತ್ತಾ ಸಾಗುವಾಗ ಮಾವಿನ ಮರ ,ತೆಂಗಿನ ಮರಗಳ ನಡುವೆ ಇರುವ ನಮ್ಮ ಪುಟ್ಟ ಶಾಲೆ ಅನಾಯಾಸವಾಗಿ ಸಿಕ್ಕಿಬಿಡುತ್ತಿತ್ತು.
ಈ ನಡುವೆ ಕಾಫಿ ತೋಟದ ದಾರಿಯಲ್ಲಿ ಹಾದು ಬರುವಾಗ ಒಂದು ಖಾಲಿ ಬಿದ್ದ ಕಾಡು ಜಾಗವನ್ನು ದಾಟಿ ಬರುತ್ತಿದ್ದೆವು.ನನ್ನ ಒಡನಾಡಿಗಳು ಆ ಜಾಗದ ಐತಿಹ್ಯ,ಸ್ಥಳ ಪುರಾಣಗಳನ್ನು,ಒಂದಷ್ಟು ಕತೆಗಳನ್ನು ಎಲ್ಲಾ ಗೊತ್ತಿರುವ ರೀತಿಯಲ್ಲಿ ತುಂಬಾ ಧೈರ್ಯದಿಂದ ಹೇಳುತ್ತಾ ಸಾಗುತ್ತಿದ್ದರು.ಅವರಲ್ಲಿ ನಾನು ತೀರಾ ಚಿಕ್ಕವಳಾದ ಕಾರಣ ಅವರು ಹೇಳುತ್ತಿದ್ದ ಕೌತುಕ ಕತೆಗಳಿಗೆ ಕಿವಿಯಾಗುತ್ತಾ ,ಕುತೂಹಲದಿಂದ ಜೊತೆಗೆ ತುಸು ಭಯ ಮಿಶ್ರಿತ ದನಿಯಲ್ಲಿ ಹ್ಮೂಂ ಗುಟ್ಟುತ್ತಾ ಸಾಗುತ್ತಿದ್ದೆ.ಆ ಜಾಗ,ಅದೇ ತೋಟದ ಆಚೆಗೆ ಇರುವ ತೋಟದ ಮಾಲಿಕರ ಮನೆಯಲ್ಲಿ ಕಾಲವಾದ ಹಿರಿಯರ ಶವವನ್ನು ಸುಟ್ಟು ಹಾಕಿದ ಸ್ಮಶಾನ ಅಂತಲೂ,ಅಲ್ಲಿ ಕೆಲವೊಮ್ಮೆ ಕೊಲೆ ದೆವ್ವಗಳು ಸದ್ದು ಮಾಡುತ್ತಾ ಚಲಿಸುತ್ತಿರುತ್ತವೆಯೆಂದೂ, ಆ ಸಮಯದಲ್ಲಿ ನಾವೇನಾದರೂ ಅಡ್ಡ ಸಿಕ್ಕಿದರೆ ನಮ್ಮ ಕತೆ ಅಷ್ಟೆ ಅಂತಲೂ..ಇನ್ನು ಏನೇನೋ ಕಂಡು ಕೇಳರಿಯದ ಭಯಾನಕ ಸಂಗತಿಗಳನ್ನು ಹೇಳಿದ್ದನ್ನು ನಾನು ಕೇಳಿಸಿಕೊಂಡದ್ದು ಇನ್ನೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ.ನಮ್ಮ ಕಡೆ ಸ್ಮಶಾನಕ್ಕೆ ಸುರುಕುಳಿ ಅಂತ ಕರೆಯುತ್ತಿದ್ದದ್ದು. ಹಾಗಾಗಿ ನಾನು ಒಬ್ಬಳೇ ಹೋಗುವ ಸನ್ನಿವೇಶ ಬಂದಾಗಲೆಲ್ಲಾ ,ಸುರುಕುಳಿ ಬಂದು ತಲುಪಿತು ಅನ್ನುವಾಗ ಸರ ಸರನೆ ಉಸಿರು ಬಿಗಿ ಹಿಡಿದುಕೊಂಡು ಒಂದೇ ಸಮನೇ ಓಡುತ್ತಿದ್ದೆ.ಯಾಕೆಂದರೆ ಅಕಾಸ್ಮಾತ್ ಅದೃಶ್ಯವಾಗಿ ಎದುರಿಗೆ ಬರುವ ಕೊಲೆ ದೆವ್ವಗಳಿಗೆ ನಾನು ಹಾದು ಅನಾಹುತವಾಗಬಾರದಲ್ಲ ಅದಕ್ಕೆ.ಇನ್ನೊಮ್ಮೆ ಅದೇ ಮನೆಯಿಂದ ನಮ್ಮ ಶಾಲೆಗೆ ಬರುತ್ತಿದ್ದ ಎರಡು ಪುಟ್ಟ ಹುಡುಗಿಯರು,ಅವರ ಅಪ್ಪ ಅಮ್ಮ ,ನಮಗೆ ಇನ್ನೂ ತಿಳಿಯದ ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿ ತೀರಿಕೊಂಡ ಬಳಿಕ,ಅದೇ ಜಾಗದಲ್ಲಿ ಅವರ ದಹನ ಕ್ರೀಯೆಯನ್ನು ನಾನು ಕಣ್ಣಾರೆ ಕಂಡ ಮೇಲೆ ಮತ್ತೆಂದೂ ಆ ದಾರಿಯಲ್ಲಿ ನಾನೊಬ್ಬಳೇ ಹೋಗಲು ಸುತರಾಂ ಒಪ್ಪುತ್ತಿರಲಿಲ್ಲ.ಎಷ್ಟೇ ದೂರ ಆದರೂ ಸರಿಯೇ ದೂರದ ದಾರಿಯಲ್ಲೇ ಶಾಲೆಗೆ ಪಾದ ಬೆಳೆಸುತ್ತಿದ್ದೆ. ಆಗ ಹಾದಿಯುದ್ದಕ್ಕೂ ಆ ಪುಟ್ಟ ಮಕ್ಕಳ ಸಾವಿನ ಬಗೆಗಿನ ಮರುಕ,ದು:ಖ ವ್ಯಥೆ..ಹೀಗೆ ಹತ್ತು ಹಲವು ಪ್ರಶ್ನೆಗಳು, ಸಂಕಟಗಳು ನನ್ನನ್ನು ಹಾದಿಯುದ್ದಕ್ಕೂ ಸಾಲುಗಟ್ಟಿ ಮುತ್ತಿಕ್ಕಿಕೊಂಡು ಕಾಡುತ್ತಿದ್ದವು.ಇವಿಷ್ಟೇ ಅಲ್ಲ,ಕೆಲವೊಮ್ಮೆ ಮೂರು ದಾರಿ ಕೂಡುವಲ್ಲಿ ನಿಂಬೆ ಹಣ್ಣು, ಕುಂಕುಮ ಹೀಗೆ ತರಾವರಿ ವಸ್ತುಗಳು ಚೆಲ್ಲಾಡಿಸಿಕೊಂಡು ಬಿದ್ದಿರುತ್ತಿದ್ದವು.ಅದನ್ನು ಮುಟ್ಟಬಾರದು.ಮುಟ್ಟಿದರೆ ಆಪತ್ತು ಬಂದೆರಗುತ್ತೆ.ಇವೆಲ್ಲಾ ಮಾಟ ಮಂತ್ರ ಅಂತ ನಾವು ಈವರೆಗೂ ಕೇಳರಿಯದ ದಿಗಿಲು ಹುಟ್ಟಿಸುವ ಗುಸು ಗುಸು ವದಂತಿಗಳು ನಮ್ಮ ಕಿವಿಗೆ ಬಿದ್ದ ನಂತರ ಮುಗ್ದ ಮನಸ್ಸಿನಲ್ಲಿ ತತ್ತರಗೊಳಿಸುವಷ್ಟು ಯೋಚನೆಗಳು ನಮ್ಮ ಎಳೆ ಮನಸ್ಸನ್ನ ಹಿಂಡಿ ಹಿಪ್ಪೆಯಾಗಿಸುತ್ತಿದ್ದವು.
ನಾವು ಇನ್ನಷ್ಟು ದೊಡ್ಡವರಾಗಿ ಈ ಕಾಲು ಹಾದಿ, ಕಾಡು ಹಾದಿಗಳನ್ನೆಲ್ಲಾ ದಾಟಿ ಬಸ್ಸಿನಲ್ಲಿ ಹೋಗೋಕೆ ಶುರು ಮಾಡಿದ ಮೇಲೆ,ಬಸ್ಸಿಗೆ ಕೊಡುವ ಐವತ್ತು ಪೈಸೆ ಉಳಿಸಿ ಕ್ಯಾಂಪ್ಕೋ ಚಾಕೋಲೇಟ್ ತಿನ್ನಲೋಸುಗ ಅದೆಷ್ಟೋ ಮೈಲು ದೂರದ ಹಾದಿಯನ್ನು ನಡಿಗೆಯಲ್ಲೇ ಕ್ರಮಿಸಿ ಪೇಟೆಯ ನಡುವಿನಲ್ಲಿರುವ ಶಾಲೆ ತಲುಪುತ್ತಿದ್ದೆವು. ಹೋಗುವಾಗ ಅವಸರವಸರವಾಗಿ ಏದುಸಿರು ಬಿಡುತ್ತಾ ಓಡಿಕೊಂಡು ಸಾಗಿದರೆ,ಬರುವಾಗ ಹೊತ್ತಿನ ಪರಿವೆಯೇ ಇಲ್ಲದೆ ದಾರಿಗೇ ಸುಸ್ತಾಗುವಷ್ಟು ನಿಧಾನಕ್ಕೆ ಬರುತ್ತಿದ್ದೆವು. ದಾರಿಯ ಇಕ್ಕೆಲಗಳಲ್ಲಿ ಸಿಗುವ ಮನೆಗಳಿಗೆ ಬಾಯಾರಿಕೆ ಅನ್ನೋ ನೆವದಲ್ಲಿ ಸೀದಾ ಒಳನುಗ್ಗಿ ಬಿಡುತ್ತಿದ್ದೆವು.ಅವರ ಮನೆಯನ್ನೊಮ್ಮೆ ಕುತೂಹಲದಿಂದ ಕಣ್ಣಾಡಿಸಿ,ಹಾಲಿನ ಮೂಲೆಯ ಟೀಪಾಯಿಯ ಮೇಲಿರುವ ಕಪ್ಪು-ಬಿಳುಪಿನ ಟಿ.ವಿ.ಯಲ್ಲಿ ಬಿತ್ತರಗೊಳ್ಳುವ ಅದೆಂತದೋ ಸಿನೆಮಾ, ಹಾಡೋ, ನೃತ್ಯವೋ..ಏನೋ ಒಂದನ್ನು ಒಂದಷ್ಟು ಹೊತ್ತು ಕಣ್ಣರಳಿಸಿ ನೋಡಿ ಬರುತ್ತಿದ್ದೆವು.ಯಾಕೆಂದರೆ ಟಿ.ವಿ.ಗಳು ಆಗ ಇನ್ನೂ ನಮ್ಮ ಮನೆಯ ಪಡಸಾಲೆಯಲ್ಲಿ ವಿರಾಜಮಾನವಾಗದೆ ,ಅದೊಂದು ನಮಗೆ ಬೆರಗಿನ ಸಂಗತಿಯಾಗಿತ್ತು.ಮತ್ತೆ ಹಾದಿಯುದ್ದಕ್ಕೂ ಅವುಗಳ ಸುತ್ತಲೇ ನಮ್ಮ ಮಾತುಗಳು,ಚರ್ಚೆಗಳು,ಪ್ರಶ್ನೆಗಳು ಬೆಳೆಯುತ್ತಾ ಹೋಗುತ್ತಿದ್ದವು.ಒಮ್ಮೆ ನಾಲ್ಕನೇ ತರಗತಿಯಲ್ಲಿರುವಾಗ ನಮ್ಮ ಪ್ರೈಮರಿ ಶಾಲಾ ಮಕಳೆಲ್ಲಾ ಉದ್ದಾನೆ ಸಾಲುಗಟ್ಟಿ ನಾನೀಮ ಪಿಕ್ಚರ್ ನೋಡಲು ನಡೆದುಕೊಂಡೇ ಸಾಗಿದ್ದು ಒಂದು ರೋಚಕ ಅನುಭವ.
ಇಷ್ಟೆಲ್ಲಾ ಹಾದಿಯಲ್ಲಿ ನಾನು ಇಲ್ಲಿ ತನಕ ಆಟೋದಲ್ಲಿ,ಬಸ್ಸಿನಲ್ಲಿ,ಕಾರಿನಲ್ಲಿ,ಅಷ್ಟೇಕೆ ಕಾಲ್ನಡಿಗೆ ಜಾಥದಂತೆ ಪಾದಾಚಾರಿಯಾಗಿ ಸಾಗಿದರೂ ತಮಾಷೆಯ ಸಂಗತಿಯೇನೆಂದರೆ,ನನಗೆ ಒಂದೇ ಹಾದಿಯಲ್ಲಿ ಪದೇ ಪದೇ ಹೋದ ಬಳಿಕವಷ್ಟೇ ನನ್ನ ನೆನಪಿನಲ್ಲಿ ಉಳಿಯುವುದು.ಕೆಲವರಿಗೆ ಒಂದು ಸಲ ನೋಡಿದ್ರೆ, ಹೋದ್ರೆ,ಅಥವಾ ಬರೇ ಹೇಳಿದ್ರೂ ಕೂಡ ಸಾಕು ಎಷ್ಟೇ ದೂರದ ಕಂಡು ಕೇಳರಿಯದ ಪ್ರದೇಶಕ್ಕೆ ಕೂಡ ತಾವೇ ದಾರಿ ಗೊತ್ತು ಮಾಡಿಕೊಂಡು ಹೋಗಿ ಬಿಡುತ್ತಾರೆ.ನಾನಂತೂ ಒಬ್ಬಳೇ ದೂರದೂರಿಗೆ ಪಯಣಿಸಿದ್ದೇ ಇಲ್ಲ.ಒಮ್ಮೆಯಂತೂ ಬಸ್ಸಿನಲ್ಲಿ ಗತ್ತಿನಲ್ಲಿ ಕುಳಿತು ಇಳಿಯಬೇಕಾದ ಸ್ಟಾಪಿನಲ್ಲಿ ಇಳಿಯದೆ,ಮತ್ತೆಲ್ಲೋ ಇಳಿದು ಪಜೀತಿಗೀಡಾಗಿದ್ದೆ.ಇನ್ನೊಮ್ಮೆ ಹೊಸದಾಗಿ ಕಾಲೇಜಿಗೆ ಸೇರಿದ ಹೊಸತರಲ್ಲಿ,ಎಲ್ಲಿ ದಾರಿ ತಪ್ಪಿ ಹೋಗುತ್ತೆ ಅಂತ ಕಳವಳಗೊಂಡು,ಒಂದೇ ಪಿರಿಯೆಡ್ ಇದ್ದರೂ ಇಡೀ ದಿನ ಬೇರೆ ಕ್ಲಾಸಿನ ಹುಡುಗಿಯನ್ನು ಹಾಸ್ಟೇಲ್‌ಗೆ ಹೋಗಲು ಕಾಯುತ್ತಿದ್ದೆ.
ಇನ್ನು ಹಾದಿಯ ಬಗ್ಗೆ ಯೋಚಿಸುತ್ತಾ ಅದರ ಬೇರೇ ದಾರಿಯತ್ತ ಹೊರಳಿಕೊಂಡರೆ,ನಮ್ಮ ಕಡೆ ಕೆಲವು ಹುಡುಗರಿಗೆ ಹಿರಿಯರು ದಾರಿ ತಪ್ಪಿದ ಮಗ ಅಂತ ಹೇಳುತ್ತಿದ್ದದ್ದು ಸರೀ ನೆನಪಿದೆ.ಅಷ್ಟೂ ದೊಡ್ದ ಹುಡುಗರಾದರೂ ಅವರು ಹೇಗಪ್ಪಾ ಹಾದಿ ತಪ್ಪಿ ಹೋಗೋದು? ದಾರಿ ನೆನಪಿನಲ್ಲಿ ಉಳಿಯೋದಿಲ್ವಾ ಅಂತ ಸಾಕಷ್ಟು ಯೋಚಿಸುತ್ತಾ ಉತ್ತರ ಸಿಕ್ಕದೆ ಮತ್ತೆ ಅದನ್ನು ಮರೆತು ಬಿಡುತ್ತಿದ್ದೆವು.ಮತ್ತೆ ನಾವುಗಳು ಒಂದಷ್ಟು ದೊಡ್ಡವರಾಗಿ ಶಾಲಾ ಕಾಲೇಜುಗಳ ಮೆಟ್ಟಿಲು ಹತ್ತುವಾಗಲೆಲ್ಲಾ, ಮನೆಯಲ್ಲಿ ದೊಡ್ಡವರೆಲ್ಲಾ ಒಳ್ಳೆ ದಾರಿಯಲ್ಲಿ ಹೋಗಿ ಕೀರ್ತಿ ಶಾಲಿಯಾಗು ಅಂತಾನೋ ಅಥವ ಸರಿ ದಾರಿಯಲ್ಲಿ ಬದುಕು ಅಂತೆಲ್ಲಾ ಸಂದರ್ಭ ಸಿಕ್ಕಾಗಲೆಲ್ಲಾ ಉಪದೇಶ ಕೊಟ್ಟದ್ದನ್ನು ಕೇಳಿದ ಮೇಲೆ,ಆವತ್ತಿನ ಹಾದಿ ತಪ್ಪಿದ ಮಕ್ಕಳ ಮುಖಗಳೆಲ್ಲಾ ನೆನಪಿಗೆ ಬಂದು, ದಾರಿ ತಪ್ಪುವು ದು ಎಂಬ ಪದಕ್ಕೆ ಈಗ ಸರಿಯಾದ ವ್ಯಾಖ್ಯಾನ ಕೊಡುವಷ್ಟರ ಮಟ್ಟಿಗೆ ಆ ಪದದ ಅರ್ಥ ಗೊತ್ತಾಗಿ ಬಿಟ್ಟಿತ್ತು.ಮತ್ತೆ ಮನದ ತುಂಬಾ ಹೇಳ ತೀರದ ಭಯ ಆವರಿಸಿ,ನಾವು ಮಾತ್ರ ಎಂದೆಂದಿಗೂ ದಾರಿ ತಪ್ಪಬಾರದು ಅಂತ ಅದಾಗಲೇ ತೀರ್ಮಾನಕ್ಕೆ ಬದ್ಧರಾಗಿ ಬಿಡುತ್ತಿದ್ದೆವು.ಎಲ್ಲಾ ಹೆತ್ತವರಂತೂ ತಮ್ಮ ಮಕ್ಕಳಿಗೆ ಇಂತಹದೊಂದು ಉಪದೇಶವನ್ನು ಕಾಲ ಕಾಲಕ್ಕೆ ಕೊಡುತ್ತಾ ಬಂದಿರುತ್ತಾರೆ.ಮಕ್ಕಳೂ ಕೂಡ ಅಷ್ಟೆ,ಅದನ್ನು ಅಲ್ಲಗಳೆಯದೆ ಪಾಲಿಸಬೇಕೆಂದು ಶಪತವೇನೋ ತೊಟ್ಟಿರುತ್ತಾರೆ.ಆದರೆ ಯೌನದ ಹೊಸ್ತಿಲಲ್ಲಿ,ಅವಸರದ ಯುಗದಲ್ಲಿ ಕಣ್ಣ ಮುಂದೆ ಝಗಮಗಿಸುವ ದಾರಿಗಳು ಸಾಕಷ್ಟು ಗೋಚರಿಸುತ್ತಿರುವಾಗ,ಕೆಲವೊಮ್ಮೆ ಗೊಂದಲದ ಗೋಜಿಗೆ ಬಿದ್ದು ಅಡ್ಡ ದಾರಿ ಹಿಡಿದು ಬಿಟ್ಟರೆ..ಇದಕ್ಕೆ ಯಾರನ್ನು ಹೊಣೆಯಾಗಿಸುವುದು?ತಪ್ಪು ಯಾರದ್ದು?ನಿರ್ಧಾರ ತೆಗೆದುಕೊಂಡ ಮನಸ್ಸಿನದ್ದೋ? ಅಥವ ದಾರಿ ತಪ್ಪಿಸಿದ್ದ ಹಾದಿಯದ್ದಾ..?.
ಅಲ್ಲ,ಇದೆಲ್ಲಾ ಹಾದಿಯ ಮೇಲೆ ನಾವು ಕಟ್ಟಿಕೊಂಡ ಕತೆಗಳಾದರೆ,ಹಾದಿಗೆ ಅದರದೇ ಆದ ಕತೆಗಳು ಎಷ್ಟಿಲ್ಲ?ಸಧ್ಯ! ಹಾದಿಗೆ ಬಾಯಿ ಬರುವುದಿಲ್ಲ.ಬಂದಿದ್ದರೆ ಕತೆ ಬೇರೆಯೇ ತರಹ ಆಗುತ್ತಿತ್ತೇನೋ..?!.ಬಿಸಿಲಿರಲಿ, ಮಳೆ ಇರಲಿ,ಚಳಿ ಇರಲಿ ಹಾದಿಯ ಕತೆಯಲ್ಲಿ ವ್ಯತ್ಯಾಸವೇ ಇಲ್ಲ.ನಿರ್ಲಿಪ್ತವಾಗಿ ಎಲ್ಲದಕ್ಕೂ ಸೈ ಅನ್ನಿಸಿಕ್ಕೊಂಡು ಬಿದ್ದುಕೊಂಡೇ ಇರುತ್ತದೆ.ಎಲ್ಲರ ಪಿಸು ನುಡಿಗಳನ್ನು,ಗುಟ್ಟುಗಳನ್ನು,ಕತೆಗಳನ್ನು ಒಡಲೊಳಗೆ ಅದುಮಿಟ್ಟುಕೊಂಡು ಸದ್ದಿಲ್ಲದೆ ಮಲಗಿದೆ.ಎಷ್ಟೊಂದು ದಾರಿಗಳಿದ್ದರೂ, ಅನಂತವಾಗಿ ಚಲಿಸದೇ ಬಿದ್ದುಕೊಂಡಿದ್ದರೂ ಚಲಿಸುವವರಿಗೆ ಮಾತ್ರ ಯಾವೊತ್ತೂ ಅಡ್ಡಿ ಮಾಡಿಲ್ಲ.ಗಮ್ಯ ತಲುಪಬೇಕೆಂದವರಿಗೆ ನಿರಾಶೆ ಮಾಡದೆ,ನಡೆದಷ್ಟು ದೂರಕ್ಕೂ ಹಾದಿಯಂತು ಸಾಗುತ್ತದೆ.
ಹಾಗೆ ನೋಡಿದರೆ ,ತಮ್ಮ ವಯಸ್ಸಿಡೀ ಹಾದಿ ನೋಡುತ್ತಾ ಬದುಕು ಸವೆಸಿದವರು, ದಾರಿ ಕಾಯುತ್ತಾ ಅರ್ಧ ದಾರಿಯಲ್ಲೇ ಇಹ ಲೋಕ ತ್ಯಜಿಸಿ ಪರಲೋಕಕ್ಕೆ ನಡೆದವರ ಬಗ್ಗೆ ನಮಗೆ ಗೊತ್ತೇ ಇದೆ.ರಾಮಾಯಣದಲ್ಲಿ ಶಬರಿಯಂತೂ ರಾಮನ ಬರುವಿಕೆಗಾಗಿ ದಾರಿ ಕಾದೂ ಕಾದೂ ಚಡಪಡಿಸಿ ,ಕೊನೆಗೊಮ್ಮೆ ರಾಮ ಬಂದು ಅವಳು ಎಂಜಲು ಮಾಡಿಟ್ಟ ಹಣ್ಣನ್ನು ಸವಿಯುವ ಹೊತ್ತಿಗೆ ಹುಡುಗಿ ಶಬರಿ ಹಣ್ಣು ಮುದುಕಿಯಾಗಿರುತ್ತಾಳೆ.ಆದರೆ ದಾರಿ ಕಾದ ಅವಳ ನಿರೀಕ್ಷೆ ಹುಸಿಯಾಗದೆ ಅವಳ ಕಾಯುವಿಕೆಗೂ ಒಂದರ್ಥ ದೊರಕಿತ್ತು.ಇನ್ನು ಕಲ್ಲು ಹೃದಯ ಮಾಡಿಕೊಂಡು ಕುಳಿತ ಅಹಲ್ಯೆಯ ಶಾಪ ವಿಮೋಚನೆ ಅವಳು ಕಾದ ಹಾದಿಯಲ್ಲೇ ನೇರವೇರಿತ್ತು.ಹಾಗಾಗಿ ದಾರಿ ನಂಬಿದವರ ಭರವಸೆಗಳನ್ನು ಹುಸಿಗೊಳಿಸುವುದಿಲ್ಲವೆಂಬುದು ಮಾತ್ರ ದಿಟ.
ನಮ್ಮ ಜನಪದ ಮಹಿಳೆಯರಿಗಂತೂ ಹಾದಿಯ ಮೇಲೆ ಅಗಾಧ ಪ್ರೀತಿಮತ್ತು ಅಕ್ಕರೆ.ಕೊಟ್ಟ ಹೆಣ್ಣು ತವರು ಮನೆಯಿಂದ ಬರುವವರಿಗಾಗಿ,ಅಲ್ಲಿಂದ ಯಾರದೋ ಮೂಲಕ ಬರುವ ಸುದ್ದಿಗಳಿಗಾಗಿ ಆಗಾಗ್ಗೆ ದಾರಿ ಕಾಯುತ್ತಾ ಕಾತರಿಸುತ್ತಿದ್ದದ್ದು ಹೌದು.ತವರೂರ ಹಾದೀಲಿ ಕಲ್ಲಿಲ್ಲ ಮುಳ್ಳಿಲ್ಲ ಅನ್ನುತ್ತಲೇ ತವರಿಗೆ ಹೋಗುವಾಗ ಸಂಭ್ರಮಿಸುವ ಅವಳು,ವಾಪಾಸು ಬರುವಾಗ ದಾರಿಯುದ್ದಕ್ಕೂ ತಿಟ್ಟತ್ತಿ ತಿರುಗಿ ನೋಡುವುದುಂಟು.ಆಗೆಲ್ಲಾ ಅವಳಿಗೆ ದಾರಿಯಷ್ಟೇ ಅವಳನ್ನೂ, ತವರು ಮನೆಯವರನ್ನು ಒಂದು ಗೂಡಿಸುವ ಏಕೈಕ ಭಾವ ತಂತುವಾಗಿತ್ತು.ಆದ ಕಾರಣ ಅವಳು ತವರು ಮನೆಯಷ್ಟೇ ಆ ಹಾದಿಯನ್ನು ಕೂಡ ಉತ್ಕಟವಾಗಿ ಪ್ರೀತಿಸುತ್ತಾಳೆ.ಅದೆಲ್ಲಾ ಹಳೇ ಸಂಗತಿಯೆನ್ನಿಸಿದರೂ ನಾವುಗಳು ಇತ್ತೀಚಿನವರೆಗೆ ಅಂಚೆಯಣ್ಣನಿಗೆ,ಪ್ರೀತಿ ಪಾತ್ರರಿಗೆ ದಾರಿ ಕಾಯುತ್ತಾ ಆಗಾಗೆ ಕತ್ತು ಕೊಂಕಿಸಿ ನೋಡುತ್ತಿದ್ದದ್ದು ಕೂಡ ಇದೇ ಹಾದಿಯಲ್ಲಿ.
ಈಗ ಪ್ರಪಂಚ ಸಾಕಷ್ಟು ಬೆಳೆದಿದೆ. ಅದರ ಜೊತೆಗೆ ಹಾದಿಗಳೂ ಬೆಳೆಯುತ್ತಾ ಮಾರ್ಪಾಟು ಹೊಂದಿವೆ.ನಮ್ಮ ಸಂಪರ್ಕಗಳನ್ನೆಲ್ಲಾ ಸುಲಲಿತ ಮಾಡುತ್ತಿದೆ.ದಾರಿಯ ಮೇಲೆ ಈಗ ವಾಹನ ಸಂಚಾರವಷ್ಟೇ ಕಾಣುತ್ತಿರುವಾಗ,ಬೆಳಗ್ಗಿನ ವಾಕಿಂಗಿಗಷ್ಟೇ ದಾರಿಯ ಮೇಲೆ ಪಾದ ಬೆಳೆಸುವಂತಾಗಿದೆ.ಇಷ್ಟೆಲ್ಲಾ ದಾರಿಗಳಿದ್ದರೂ,ಮನೆಯ ಅಂಗಳದಂಚಿಗೂ ಹಾದಿ ಮುಟ್ಟುತ್ತಿದ್ದರೂ,ಈ ದಾರಿಗಾಗಿ ಎಷ್ಟೋ ಕಲಹಗಳು ಅಂದೂ ನಡೆಯುತ್ತಿತ್ತು.ಇಂದೂ ನಡೆಯುತ್ತಿವೆ.ಒಬ್ಬರ ದಾರಿ ಮೇಲೆ ಇನ್ನೊಬ್ಬರು ಹೋಗದಂತೆ ನಿರ್ಬಂಧನ ಹೇರಲಾಗುತ್ತಿದೆ.ಕೆಲವೊಮ್ಮೆ ಹಾದಿ ತುಂಬಾ ಹೊಂಡ ಗುಂಡಿಗಳಾಗಿ,ಹಾದಿಯನ್ನು ಉಪೇಕ್ಷೆ ಮಾಡಿ,ದಾರಿ ಮಾಡಿಕೊಟ್ಟ ಹಾದಿಯನ್ನೇ ಮರೆತು,ದಾರಿಯೇ ಬೇಡದೆ ಆಕಾಶದಲ್ಲಿ ಹಾರುವ ಕನಸು ಕಾಣುತ್ತಿದ್ದೇವೆ.ಅದೇನೆ ಇರಲಿ,ದಾರಿ ಮಾತ್ರ ಯಾವುದನ್ನೂ ಬಹಿರಂಗ ಪಡಿಸದೆ ದಾರಿ ಬೇಕಾದವರಿಗೆ ದಾರಿಯಾಗಿಯೇ ಇರಬೇಕೆಂದು ಬಿದ್ದುಕೊಂಡಿದೆ.ಹೀಗೆ ದಾರಿಯ ನೆನೆಯುತ್ತಾ ಸಾಗಿದರೆ ದಾರಿಗುಂಟ ನೆನಪುಗಳು ನಮಗಿಂತ ವೇಗವಾಗಿ ಚಲಿಸುತ್ತಾ ಸಾಗುತ್ತದೆ.ಚಲಿಸಿದಷ್ಟು ನೆನಪುಗಳ ಕನವರಿಕೆಗಳು.ಕಣ್ಣ ಮುಂದೆ ಹಾದಿ ಅನಂತವಾಗಿ ಮಲಗಿದ್ದರೂ ಕೆಲವೊಮ್ಮೆ ದಾರಿಯೇ ಕಾಣದೆ ಕಣ್ಣು ಮಂಜಾಗಿ ಕಣ್ಣಿಗೆ ಬಟ್ಟೆಕಟ್ಟಿ ಬಿಟ್ಟವರಂತೆ ದಿಕ್ಕು ತಪ್ಪಿದಂತಾಗುತ್ತದೆ.ಆಗೆಲ್ಲಾ ದಾರಿ ಕಾಣದಾಗಿದೆ ರಾಘವೇಂದ್ರನೇ ಬೆಳಕ ತೋರಿ ನಡೆಸುವ ಯೋಗಿವರ್ಯನೆ..ಅಂತ ಎಳವೆಯಲ್ಲಿ ಅರ್ಥ ಗೊತ್ತಿಲ್ಲದೇ ಉರು ಹೊಡೆದು ಹೇಳುತ್ತಿದ್ದ ಭಜನೆ ಈಗ ಯಥಾವತ್ತಾಗಿ ಅರ್ಥವತ್ತಾಗಿ ಅನುರುಣಿಸುತ್ತಿದೆ.
– ಸ್ಮಿತಾ ಅಮೃತರಾಜ್, ಸಂಪಾಜೆ
ನೆನಪುಗಳ ಕಾದಂಬರಿ superb.
ನೆನಪಿನ ಬುಟ್ಟಿ ಭಾವಿ ಜೀವನಕ್ಕೆ ನಾಂದಿ ಎಂಬುದು ಸುಳ್ಳಲ್ಲ.
ಬಾಲ್ಯದಲ್ಲಿ ಕಾಡಿನ ದಾರಿಯಲ್ಲಿ ಒಂಟಿಯಾಗಿ ಶಾಲೆಗೆ ನಡೆದು ಹೋದ ನೆನಪು ಮರುಕಳಿಸಿತು…. ಲೇಖನ ಸುಲಲಿತವಾಗಿ ಓದಿಸಿಕೊಂಡು ಹೋಯಿತು….
ಬಹಳ ಇಷ್ಟವಾಯಿತು !!!!!
ನೆನಪುಗಳ ಸುರುಳಿ ಮಧುರ .ಇನ್ನಷ್ಟು ನೆನಪುಗಳು ಹೊರ ಬರಲಿ
ನನ್ನ ಪಿ ಯು ಸಿ ಯನ್ನು ಎರಡೂ ವರ್ಷ ನಡೆದೇ ಕ್ರಮಿಸಿ ಮುಗಿಸಿದ್ದು
ಅದು ಹೋಗಿ ಬರೋ ಹತ್ತೊಂಬತ್ತು ಕಿಮೀ ಗಳು ನೀವು ಹೇಳಿದ ಹಾಗೇ ಕಳೆದಿದ್ದೆವು
ಈಗಲೂ ಅದು ಮನದಲ್ಲಿ ಹಚ್ಚ ಹಸಿರಾಯ್ತು
ಧನ್ಯವಾದಗಳು
ಲೇಖನ ತುಂಬಾ ಚೆನ್ನಾಗಿದೆ ; ಸ್ಮಿತಾ ಅವರೆ.
Fine…mam..:)