ಲಹರಿ

ಅಂಬಿಗ ನಾ ನಿನ್ನ ನಂಬಿದೆ…

Share Button
Divakara Dongre
ದಿವಾಕರ ಡೋಂಗ್ರೆ ಎಂ.

 

‘ರಾಮಾಯಣ’ ಭಾರತೀಯ ಜನಮಾನಸದಲ್ಲಿ ನೆಲೆ ನಿಂತ ಮಹಾಕಾವ್ಯ. ಸಂಸ್ಕೃತವೂ ಸೇರಿದಂತೆ ಭಾರತದ ವಿವಿಧ ಭಾಷೆಯ ಕವಿಗಳು ಶ್ರೀರಾಮ ಚರಿತೆಯನ್ನು ಹಾಡಿ ಹೊಗಳಿದ್ದಾರೆ. ಪ್ರವಚನ, ಸಂರ್ಕೀತನ, ಕಾವ್ಯ, ನೃತ್ಯ, ನಾಟಕ, ಶಿಲ್ಪ, ಚಿತ್ರ ಮುಂತಾದ ಕಲಾಪ್ರಕಾರಗಳಿಗೆ ರಾಮಾಯಣವೇ ಸ್ಪೂರ್ತಿ. ಭಾರತವೇ ಮಾತ್ರವಲ್ಲದೆ ಶ್ರೀಲಂಕಾ, ಇಂಡೊನೇಸಿಯಾ, ಥೈಲ್ಯಾಂಡ್, ಜಾವಾ, ಬಾಲಿ, ಸುಮಾತ್ರಾ ಮೊದಲಾದ ದೇಶಗಳಲ್ಲಿಯೂ ರಾಮಾಯಣ ವಿಶೇಷವಾಗಿ ನೃತ್ಯ-ನಾಟಕ ರೂಪಗಳಲ್ಲಿ ಪ್ರದರ್ಶಿತವಾಗುತ್ತಿದೆ. ಯುಗಾಂತರವನ್ನು ಮೀರಿ ಒಬ್ಬ ವ್ಯಕ್ತಿಯ ಬದುಕು ಜೀವನಾದರ್ಶವಾಗಿ ಪರಿಗಣಿಸಲ್ಪಡಬೇಕಾದರೆ ಅಂತಹ ಒಂದು ವ್ಯಕ್ತಿತ್ವ, ವ್ಯಕ್ತಿತ್ವನ್ನು ಮೀರಿ ನಿಂತು ದೈವತ್ವವನ್ನು ಸಾದರಪಡಿಸುವ ಒಂದು ಚೇತನ ‘ಮರ್ಯಾದಾ ಪುರುಷೋತ್ತಮ ಶ್ರೀರಾಮ’.

ಶ್ರೀರಾಮನನ್ನು ಧರ್ಮರಕ್ಷಣೆಗಾಗಿ ಧರೆಗವತರಿಸಿದ ಮಹಾವಿ‍ಷ್ಣುವಿನ ಒಂದು ಅವತಾರವೆಂಬ ಪರಿಕಲ್ಪನೆಯಲ್ಲಿ ಕಂಡಾಗ ಕವಿ ವಾಲ್ಮೀಕಿಯಿಂದ ತೊಡಗಿ ಅನೇಕ ಕವಿಗಳು ಶ್ರೀರಾಮನನ್ನು ಹಾಡಿ ಹೊಗಳಿದ ರೀತಿ ಅನನ್ಯ. ‘ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ ಆರುಹ್ಯ ಕವಿತಾಶ್ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ’ ಶ್ರೀರಾಮ ಜನನವೇ ವಸಂತ ಋತುವಿನ ಚೈತ್ರ ಮಾಸದ ಶುಕ್ಲ ನವಮಿಯಂದು. ಇಂತಹ ವಸಂತ ಮಾಸದಲ್ಲಿ ಕಾವ್ಯದ (ರಾಮಾಯಣವೆಂಬ ಮಹಾಕಾವ್ಯ) ಗೆಲ್ಲನ್ನೇರಿ ‘ವಾಲ್ಮೀಕಿ’ ಯೆಂಬ ಕೋಗಿಲೆ ಮಧುರಾತಿ ಮಧುರ ಅಕ್ಷರಗಳಿಂದೊಡಗೂಡಿದ ರಾಮನಾಮವನ್ನು ಕೂಜನಗೈಯ್ಯುತ್ತದೆ. ಎಂತಹ ಸುಂದರ ಉಪಮೆ. ಸಂತ ಕವಿ ತುಲಸಿ ದಾಸರಂತು ‘ನವಕಂಜ ಲೋಚನ ಕಂಜಮುಖ ಕರಕಂಜ ಪದಕಂಜಾರುಣಂ| ಶಿರ ಕಿರೀಟ ಕುಂಡಲ ತಿಲಕ ಚಾರು ಉದಾರ ಅಂಗ ವಿಭೂಷಣಂ | ಆಜಾನುಬಾಹು ಭುಜಶರ ಚಾಪಧರ ಸಂಗ್ರಾಮ ಜಿತ ಖರದೂಷಣಂ’ ಎಂದು ಶ್ರೀರಾಮನ ದಿವ್ಯ ಮೂರ್ತಿಯನ್ನು ಹಾಡಿ ಹೊಗಳಿದ್ದಾರೆ.

ರಾಮಾಯಣ ಕಥಾನಕದಲ್ಲಿ ಭಕ್ತಿಯ ಪರಾಕಾಷ್ಟತೆಯನ್ನು ಮೆರೆದು ಜಗತ್ತಿಗೆ ‘ಭಕ್ತಿ’ಯ ಮಹತ್ವನ್ನು ಸಾರಿದ ಪಾತ್ರಗಳು ಅನೇಕ .ಆಂಜನೇಯನಂತೂ ಶ್ರೀರಾಮ ಚರಣ ಸೇವೆಯಲ್ಲೇ ನಿರತನಾದವನು. ಸೋದರ ಭರತ ‘ಶ್ರೀರಾಮ ಪಾದುಕೆಗಳಲ್ಲೇ ಶ್ರೀರಾಮ ಚರಣ ಸಾನ್ನಿಧ್ಯವನ್ನು ಕಂಡವನು. ಗೌತಮರ ಶಾಪಕ್ಕೆ ತುತ್ತಾಗಿ ಶಿಲೆಯಾದ ಅಹಲ್ಯೆ ರಾಮಚರಣ ಸ್ಪರ್ಶಕ್ಕಾಗಿ ಹಾತೊರೆದವಳು. ಇನ್ನು ಮಾತಂಗ ಕನ್ಯೆಯಾದ ಶಬರಿ’ ರಾಮದರ್ಶನ’ಕ್ಕಾಗಿ ಚಾತಕ ಪಕ್ಷಿಯಂತೆ ಕಾದು ನಿಂತವಳು. ರಾಮನಿಗೆ ಅರ್ಪಿಸಲಿರುವ ಹಣ್ಣನ್ನು ಅದು ಸವಿಯಿದೆಯೇ, ಇಲ್ಲವೇ ಎಂದು ತಿಳಿಯಲು ತಾನೇ ಮೊದಲು ಕಚ್ಚಿ ಅದು ಸವಿಯಿದೆಯೆಂದು ತಿಳಿದ ಮೇಲೆ ಅದನ್ನು ಶ್ರೀರಾಮನಿಗರ್ಪಿಸಿ ಭಕ್ತಿಯ ಪರಾಕಾಷ್ಟೆಯನ್ನು ಮೆರೆದವಳು. ಹೀಗೆ ರಾಮಾಯಣವೆಂಬ ಮಹಾಕಾವ್ಯದಲ್ಲಿ ಶ್ರೀರಾಮ ಚರಣ ಸಾನ್ನಿಧ್ಯಕ್ಕಾಗಿ ಹಾತೊರೆದ ಪಾತ್ರಗಳು ಅದೆಷ್ಟೊ.

ಶ್ರೀರಾಮ ಚರಣಗಳ ಕುರಿತು ರಾಮಾಯಣದ ಪಾತ್ರವೊಂದು ಭಕ್ತಿಯ ಉತ್ಕಟತೆಯನ್ನು ಪ್ರದರ್ಶಿಸುತ್ತದೆ. ಅಂತಹ ಒಂದು ಪಾತ್ರ ರಾಮಾಯಣದಲ್ಲಿ ನಾವು ಕಾಣುವ ‘ಗುಹ’ನೆಂಬ ಅಂಬಿಗನದು. ಅಂಬಿಗರ ಸಮೂಹಕ್ಕೆ ಆತ ಒಡೆಯ. ತಮಸಾ ನದಿಯ ತೀರದಲ್ಲಿ ಅವನ ವಾಸ. ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಜನರನ್ನು ಸಾಗಿಸಿ ಅದಕ್ಕೆ ಶುಲ್ಕವನ್ನು ಪಡೆಯುವ ಕಾಯಕ ಆತನದು. ವನವಾಸ ದೀಕ್ಷೆಯನ್ನು ಕೈಗೊಂಡು ಅಯೋಧ್ಯೆಯಿಂದ ಹೊರಟ ಸೀತಾ-ರಾಮ-ಲಕ್ಷಣರನ್ನು ಬೀಳ್ಕೊಡಲು ಅಯೋಧ್ಯೆಯ ಪ್ರಜಾಸಮೂಹವೇ ಅವರೊಂದಿಗೆ ಬರುತ್ತದೆ. ತಮಸಾ ನದಿಯ ದಡವನ್ನು ತಲುಪುವಾಗ ಮುಸ್ಸಂಜೆಯಾಗುತ್ತದೆ. ಗುಹನಿಂದ ಯಥೋಚಿತ ಸತ್ಕಾರವನ್ನು ಪಡೆದ ಶ್ರೀರಾಮ ಮರುದಿನ ನಸುಕಿನಲ್ಲಿ ತನ್ನನ್ನು ಹಿಂಬಾಲಿಸಿ ಬಂದ ಅಯೋಧ್ಯೆಯ ಪ್ರಜಾ ಸಮೂಹ ಎಚ್ಚರಗೊಳ್ಳುವ ಮುನ್ನ ತನ್ನನ್ನು ಚಿತ್ರಕೂಟಕ್ಕೆ ಅಭಿಮುಖವಾಗಿರುವ ಗಂಗಾ ನದಿಯನ್ನು ದಾಟಿಸಬೇಕೆಂದು ಗುಹನಲ್ಲಿ ವಿನಂತಿ ಮಾಡಿಕೊಳ್ಳುತ್ತಾನೆ.

 

guha 1
ಮರುದಿನ ನಸುಕಿನಲ್ಲೆದ್ದು ಸೀತಾ-ರಾಮ-ಲಕ್ಷ್ಮಣರು ನದಿಯ ದಡದಲ್ಲಿದ್ದ ದೋಣಿಯ ಬಳಿಗೆ ಬರುತ್ತಾರೆ. ಗುಹ ಆಗಲೇ ಸಿದ್ಧನಾಗಿದ್ದಾನೆ. ಇನ್ನೇನು ಶ್ರೀರಾಮ ಮೊದಲಿಗನಾಗಿ ದೋಣಿಯಲ್ಲಿ ಕಾಲಿರಿಸಬೇಕು ಎನ್ನುವಷ್ಟರಲ್ಲಿ ಗುಹ ಅವನನ್ನು ತಡೆದು ವಿನಯಪೂರ್ವಕವಾಗಿ ಆಕ್ಷೇಪಿಸುತ್ತಾನೆ. ‘ಪ್ರಭು, ದೋಣಿಯಲ್ಲಿ ಕಾಲಿರಿಸುವ ಮೊದಲು ನನ್ನಲ್ಲಿ ನಿನ್ನ ಕುರಿತಾಗಿ ಮೂಡಿದ ಕೆಲ ಸಂದೇಹಗಳಿಗೆ ನೀನು ಉತ್ತರವನ್ನು ನೀಡಬೇಕು. ದೊರೆಯೇ , ನನಗೆ ಅಚ್ಚರಿಯೆನಿಸುತ್ತದೆ, ಯಾರ ಪಾದಕಮಲದಿಂದ ಗಂಗೆ ಉದ್ಭವಿಸಿದಳೋ, ಅಂತಹ ನೀನು ‘ಗಂಗೆಯನ್ನು ದಾಟಿಸು ಎಂದು ನನ್ನಲ್ಲಿ ವಿನಂತಿ ಮಾಡಿಕೊಂಡಿದ್ದೀಯೇ, ನನ್ನನ್ನು ನೀನು ಅಪಹಾಸ್ಯಗೈಯ್ಯುತ್ತಿಲ್ಲ ತಾನೇ? ಪ್ರಭು, ಅವರಿವರು ಹೇಳಿದ್ದನ್ನು ಕೇಳಿದ್ದೇನೆ. ನಿನ್ನ ಚರಣ ಸ್ಪರ್ಶದಿಂದ ಕಲ್ಲು ಹೆಣ್ಣಾಯಿತಂತೆ! ದೊರೆಯೆ ಹೊಟ್ಟೆಪಾಡಿಗಾಗಿ ನನಗಿರುವುದು ಇದೊಂದೇ ದೋಣಿ. ಒಂದು ವೇಳೆ ನಿನ್ನ ಪಾದಸ್ಪರ್ಶದಿಂದ ನನ್ನ ದೋಣಿಯೂ ಹೆಣ್ಣಾಗಿ ಪರಿವರ್ತನೆಗೊಂಡಲ್ಲಿ ಹೊಟ್ಟೆಪಾಡಿಗಾಗಿ ನಾನೇನು ಮಾಡಲಿ? ಪ್ರಭು ರಾಮಚಂದ್ರ, ಇನ್ನು ನಿಮ್ಮನ್ನು ಮೂವರನ್ನು ಏಕಕಾಲದಲ್ಲಿ ನನ್ನ ದೋಣಿಯಲ್ಲಿ ನದಿ ದಾಟಿಸುವ ವಿಚಾರದಲ್ಲಿ ನಾನೊಂದಿಷ್ಟು ಗಂಭೀರವಾಗಿಯೇ ಯೋಚನೆ ಮಾಡಬೇಕಾಗುತ್ತದೆ. ಪ್ರಭು, ನನ್ನ ಈ ಪುಟ್ಟ ದೋಣಿ ಹೊರಬಹುದಾದ ಭಾರದ ಅರಿವು ನಿನಗಿರಬಹುದು ಅಂದುಕೊಂಡಿದ್ದೇನೆ. ನೀನಾದರೋ ಹದಿನಾಲ್ಕು ಲೋಕಗಳನ್ನು, ಸಪ್ತಸಾಗರಗಳನ್ನು, ಗ್ರಹತಾರೆಗಳನ್ನು ನಿನ್ನಲ್ಲಿರಿಸಿಕೊಂಡ ಮಹಾನುಭಾವ. ಈ ನಿನ್ನ ತಮ್ಮ ಲಕ್ಷ್ಮಣನಾದರೋ ಭೂಮಿಯನ್ನೇ ತನ್ನ ಶಿರದ ಮೇಲೆ ಹೊತ್ತುಕೊಂಡವನು ಮಾತ್ರವಲ್ಲ ನಿನ್ನನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡ ಆದಿಶೇಷ. ಇನ್ನು ನಿನ್ನ ಮಡದಿ ಸೀತಾಮಾತೆಯಾದರೋ ಧನಧಾನ್ಯವೇ ಮೊದಲಾದ ಅಷ್ಟೈಶ್ವರ್ಯಗಳನ್ನು ತನ್ನಲ್ಲಿ ಹೊಂದಿರುವ ಲಕ್ಷ್ಮೀ ಸ್ವರೂಪಳು.

ನಿಮ್ಮ ಮೂವರ ಈ ಪರಿಯ ‘ಭಾರ’ದ ಕಲ್ಪನೆಯನ್ನು ಮಾಡಿಕೊಂಡ ನನಗೆ ನಿಮ್ಮನ್ನು ನನ್ನ ಈ ಪುಟ್ಟ ದೋಣಿಯಲ್ಲಿ ಹತ್ತಿಸಿಕೊಂಡಲ್ಲಿ ನಿಮ್ಮೊಂದಿಗೆ ನಾನೂ ಮುಳುಗುವುದಂತೂ ಖಚಿತವೆಂದೆನಿಸುತ್ತಿದೆ! ಪ್ರಭೂ, ಹಾಗಾಗಲಾರದೆಂಬ ವಚನವನ್ನು ನೀನು ನನಗೆ ನೀಡಿದಲ್ಲಿ ನಾನು ನಿಮ್ಮ ಮೂವರನ್ನು ನದಿ ದಾಟಿಸಬಲ್ಲೆ. ಗುಹನ ಈ ಭಕ್ತಿಪೂರ್ವಕ, ನಿಷ್ಕಾಮಪೂರ್ವಕ ಬೇಡಿಕೆಯ ಹಿಂದಿನ ‘ಭಾವ’ವನ್ನು ಗುರುತಿಸಿದ ಶ್ರೀರಾಮ ಗುಹನಂತಹ ಸಾಮಾನ್ಯ ಅಂಬಿಗನೊಬ್ಬ ತನ್ನ ಕಾಯಕದ ಜತೆಯಲ್ಲಿ ಭಗವಂತನ ಸ್ವರೂಪವನ್ನು ಕಂಡ ಪರಿಗೆ ಬೆರಗಾದ! ಗುಹನಿಗೆ ಅಭಯವನ್ನಿತ್ತು ಗಂಗಾ ನದಿಯನ್ನು ದಾಟಿದ.

ಮುಂದೆ ಸೀತಾರಾಮ ಲಕ್ಷ್ಮಣರು ದೋಣಿಯಿಳಿಯುವ ಮುನ್ನ ನಡೆದ ಘಟನೆ ಇನ್ನಷ್ಟು ರೋಚಕ. ಶ್ರೀರಾಮ ತಮ್ಮನ್ನು ಮೂವರನ್ನು ನದಿದಾಟಿಸಿದ್ದಕ್ಕಾಗಿ ಒಂದಷ್ಟು ಶುಲ್ಕವನ್ನು ಗುಹನಿಗೆ ನೀಡಲು ಮುಂದಾಗುತ್ತಾನೆ. ಆದರೆ ಗುಹ ಅದನ್ನು ವಿನಯಪೂರ್ವಕವಾಗಿ ನಿರಾಕರಿಸುತ್ತಾನೆ. ನದಿ ದಾಟುವ ಎಲ್ಲರಿಂದಲೂ ಶುಲ್ಕವನ್ನು ಪಡೆದ ಹಾಗೆಯೇ ತನ್ನಿಂದಲೂ ‘ನದಿ ದಾಟಿಸಿದ ಸೇವೆಗಾಗಿ’ ಶುಲ್ಕವನ್ನು ಗುಹ ಪಡೆಯಬೇಕೆಂಬುದು ಶ್ರೀರಾಮನ ಅಭಿಮತ. ತಾನು ನದಿ ದಾಟಿಸುವ ಸೇವೆಗಾಗಿ ಎಲ್ಲರಿಂದಲೂ ಶುಲ್ಕವನ್ನು ಪಡೆಯುವುದು ನಿಜವಾದರೂ ಶ್ರೀರಾಮನಿಂದ ತಾನು ಶುಲ್ಕವನ್ನು ಪಡೆಯಲು ಸಾಧ್ಯವಿಲ್ಲ! ಈ ವಿಚಾರದಲ್ಲಿ ಗುಹ ತನ್ನ ವಾದವನ್ನು ಬಹಳಷ್ಟು ಸಮಂಜಸವಾಗಿ, ತಾರ್ಕಿಕವಾಗಿ ಮಂಡಿಸುತ್ತಾನೆ. ದೊರೆಯೆ, ಸಮಾನವೃತ್ತಿಯವರು ತಾವು ಗೈದ ಸೇವೆಗಾಗಿ ಪರಸ್ಪರರಿಂದ ಶುಲ್ಕವನ್ನು ಪಡೆಯಬಾರದೆಂಬ ವೃತ್ತಿನಿಯಮವಿದೆ. ವಾಸ್ತವದಲ್ಲಿ ನನ್ನದು ಮತ್ತು ನಿನ್ನದು ಒಂದೇ ಕಾಯಕ. ನಾವಿಬ್ಬರೂ ಅಂಬಿಗರೇ! ನಾನು ನನ್ನ ಈ ಪುಟ್ಟ ದೋಣಿಯಲ್ಲಿ ಜನರನ್ನು ನದಿ ದಾಟಿಸುವವನು. ನೀನಾದರೋ, ಅರಿಷಡ್ವರ್ಗಗಳೆಂಬ ಸುಳಿಗಳೊಳಗೆ ಭವಸಾಗರದಲ್ಲಿ ಸಿಲುಕಿ ಮುಳುಗಲಿರುವ ಜನರನ್ನು ನಿನ್ನ ‘ಕೃಪೆ’ಯೆಂಬ ದೋಣಿಯಲ್ಲಿಟ್ಟು ದಾಟಿಸುವವನು. ಈಗ ಹೇಳು ದೊರೆಯೆ, ನನ್ನ ಮತ್ತು ನಿನ್ನ ಕಾಯಕ ಒಂದೇ ಆಗಿರುವಾಗ ನಿನ್ನಿಂದ ನಾನು ಶುಲ್ಕವನ್ನು ಪಡೆಯುವುದು ನ್ಯಾಯವೇ? ಎಂಬಲ್ಲಿಗೆ ಶ್ರೀರಾಮ ಮುಗುಳ್ನಗುತ್ತಾನೆ. ನಿಷ್ಕಾಮ ಭಕ್ತಿಗೆ ಅಂಬಿಗ ‘ಗುಹ’ ಒಂದು ಸುಂದರ ಉದಾಹರಣೆ.

 – ದಿವಾಕರ ಡೋಂಗ್ರೆ ಎಂ. (ಮಾಳವ)

  

7 Comments on “ಅಂಬಿಗ ನಾ ನಿನ್ನ ನಂಬಿದೆ…

  1. “ವಾಸ್ತವದಲ್ಲಿ ನನ್ನದು ಮತ್ತು ನಿನ್ನದು ಒಂದೇ ಕಾಯಕ. ನಾವಿಬ್ಬರೂ ಅಂಬಿಗರೇ”… ಎಂಥಹಾ ಅದ್ಭುತ ಪರಿಕಲ್ಪನೆ..! ಬರಹ ಇಷ್ಟವಾಯಿತು.

    1. ಬರಹವನ್ನು ಓದಿ ಮೆಚ್ಚುಗೆ ಸೂಚಿಸಿದ್ದಕ್ಕಾಗಿ ಧನ್ಯವಾದಗಳು.

  2. ರಾಮಾಯಣದ ಕೆಲವು ಸನ್ನಿವೇಶ ಗಳನ್ನು ಸು೦ದರವಾಗಿ ನಿರೋಪಿಸಿದ್ರಿ .ಧನ್ಯವಾದಗಳು

  3. ತನ್ನ ಕಾರ್ಯದ ಪರಿಧಿಯಲ್ಲಿದ್ದುಕೊಂಡೇ ರಾಮ ಲಕ್ಷ್ಮಣ ಸೀತೆಯರ ಅವತಾರಗಳನ್ನು ವಿಶ್ಲೇಷಿಸಿದ ಗುಹನ ಚಾತುರ್ಯ ಹಾಗೂ ಭಕ್ತಿ ಮೆಚ್ಚುವಂಥದ್ದು. ಲೇಖನ ತುಂಬಾ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *