ಅಘೋರಿಗಳ ನಡುವೆ….ಪುಸ್ತಕ ನೋಟ
ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡುತ್ತಿರುವ ಪಕ್ಷಿಗಳು ತಮ್ಮ ಕಣ್ಣನೋಟದ ಪರಿಧಿಯೊಳಗೆ ಬಂದಾಗ ಅವು ಪ್ರಾಣಬಿಡುವಂತೆ ಮಾಡುವುದು, ಅಸಹಾಯಕ ಪ್ರಾಣಿಗಳ ಬಲಿ ಕೊಟ್ಟು ರಕ್ತ ಹೀರುವುದು, ಮುಗ್ಧ ಜನರ ಜೀವಕ್ಕೆ ತೊಂದರೆ ಕೊಟ್ಟು ತಾವು ಶಕ್ತಿ ಸಂಚಯನದ ವಿವಿಧ ಸಿದ್ಧಿಗಳನ್ನು ಪಡೆದಿದ್ದೇವೆಂದು ಬೀಗುವುದು, ಸಾಮಾನ್ಯ ಮನುಷ್ಯರಿಗೆ ಅಸಾಧ್ಯ ಎನಿಸುವ ಹಲವಾರು ವಿದ್ಯೆಗಳನ್ನು ಕಲಿತು ವಿಜೃಂಭಿಸುವುದು. ಇವೆಲ್ಲಾ ಅಘೋರ ಪಂಥದ ಆಚರಣೆಗಳು.
ಇನ್ನು ಈ ಅಘೋರಿಗಳ ಜೀವನ ಶೈಲಿಯನ್ನು ಓದುವಾಗ ಅಸಹ್ಯ, ಜಿಗುಪ್ಸೆ ಮತ್ತು ಭಯ ಏಕಕಾಲದಲ್ಲಿ ಹುಟ್ಟಿಸುತ್ತದೆ. ಅವರ ಅಹಾರವಿಧಾನ ಮನುಷ್ಯರು ಊಹಿಸಲೂ ಸಾಧ್ಯವಿಲ್ಲದಷ್ಟು ಅಸಹ್ಯ,ಭೀಭತ್ಸ. ಇವರು ಮಾಡುವ ಸ್ವಶರೀರ ದಂಡನೆ, ಶವಭಕ್ಷಣೆ, ವಾಮಾಚಾರ, ವಶೀಕರಣ, ತಾಂತ್ರಿಕ ಸಾಧನೆ, ವಿಚಿತ್ರ ಹಠಯೋಗಗಳು, ಮುಗ್ದ ಪ್ರಾಣಿ-ಪಕ್ಷಿ-ಮಾನವರ ಹತ್ಯೆ…ಇವೆಲ್ಲಕ್ಕೂ ಒಟ್ಟಾರೆ ಹೆಸರು ‘ಸಿದ್ಧಿ’. ಇಷ್ಟೆಲ್ಲಾ ‘ಸಾಧನೆ’ಗಳನ್ನು ಕಿಂಚಿತ್ತಾದರೂ ಲೋಕ ಕಲ್ಯಾಣಕ್ಕಾಗಿ ಉಪಯೋಗಿಸುವುದಾದರೆ ಅಘೋರಿಗಳನ್ನು ಗೌರವಿಸಬಹುದಿತ್ತೋ ಏನೋ.
ಉದಾಹರಣೆಗೆ ‘ತ್ರಾಟಕ ವಿದ್ಯೆ’ ಪ್ರಯೋಗಿಸಿ ಹಾರಾಡುವ ಹಕ್ಕಿಗಳನ್ನು ಬೀಳಿಸುವ ಬದಲು, ಮೋಡವನ್ನು ದೃಷ್ಟಿಸಿ ಮಳೆ ಸುರಿಸಿದರೆ , ಬರದ ತಾಪವಾದರೂ ತಗ್ಗೀತು. ‘ವಶೀಕರಣ’ ವಿದ್ಯೆ ಬಳಸಿ ಯಾರನ್ನೋ ಬಲಿ ಕೊಡುವ ಬದಲು, ಶತ್ರುಸೈನಿಕರ ಮನಸ್ಸಿನ ಮೇಲೆ ಹಿಡಿತ ಸಾಧಿಸಿದರೆ ದೇಶಗಳ ನಡುವೆ ಯುದ್ಧ ನಡೆಯುವುದನ್ನೇ ತಪ್ಪಿಸಬಹುದಾಗಿತ್ತೋ ಏನೋ? ಹಸಿದವರಿಗಾಗಿ ರಾಶಿರಾಶಿ ಅನ್ನ-ರೊಟ್ಟಿ ಸೃಷ್ಟಿಸಿ ಕೊಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ಯಾರಿಗೂ ಉಪಯೋಗಕ್ಕೆ ಬಾರದ ವಿಚಿತ್ರ ಸಾಧನೆಗಳಿಂದ ಏನು ಪ್ರಯೋಜನ?
ಇಂಥಹ ಆಚರಣೆಗಳಿಗೆ ಹೆಸರು ಏನೇ ಇರಲಿ, ಸಾಮಾಜಿಕ ಜೀವನದಲ್ಲಿ ಇವಕ್ಕೆಲ್ಲಾ ಮಾನ್ಯತೆಯಿಲ್ಲ ಹಾಗೂ ಕಾನೂನು ಬಾಹಿರ. ಹಾಗಿರುವಾಗ ಸಿದ್ಧಿಯ ಹೆಸರಿನಲ್ಲಿ ನಡೆಯುತ್ತಿದೆ ಎನ್ನಲಾದ ಈ ಅಘೋರ ಪಂಥದ ಆಚರಣೆಗಳು ಕಾನೂನಿನ ಪರಿಧಿಯ ಒಳಗೆ ಬರುವುದಿಲ್ಲವೇ? ಇವೆಲ್ಲಾ ಶಿಕ್ಷಾರ್ಹ ಅಪರಾಧಗಳಲ್ಲವೇ? 21 ನೆಯ ಶತಮಾನದಲ್ಲಿಯೂ ಇಂತಹ ಮೌಢ್ಯಗಳು, ಆಚರಣೆಗಳು ಉಂಟೇ?
ಹೀಗೆಲ್ಲಾ ಪ್ರಶ್ನೆಗಳು ಮೂಡಲಾರಂಭಿಸಿದ್ದು ‘ಅಘೋರಿಗಳ ನಡುವೆ’ ಎಂಬ ಪುಸ್ತಕವನ್ನು ಓದುತ್ತಿರುವಾಗ. ಈ ಪುಸ್ತಕದ ಮೂಲ ಬರಹಗಾರರು ಶ್ರೀ ಸುರೇಶ್ ಸೋಮಪುರ, ಗುಜರಾತಿ ಭಾಷೆಯಲ್ಲಿ ಬರೆದಿದ್ದರು. ಪುಸ್ತಕದ ಮುನ್ನುಡಿಯ ಪ್ರಕಾರ ಇದು ಕಥೆ ಅಲ್ಲ, ಲೇಖಕರು ಅಘೋರಿಗಳನ್ನು ಭೇಟಿಯಾಗಿ ಅವರ ಬದುಕನ್ನು ಕಣ್ಣಾರೆ ಕಂಡು, ಅವರ ಜೀವನಕ್ರಮವನ್ನು ದಾಖಲಿಸಿದ್ದಾರೆ. ಈ ಕೆಲಸಕ್ಕೆ ನಿಜಕ್ಕೂ ಎಂಟೆದೆಯ ಧೈರ್ಯ ಬೇಕು. ಈ ಕೃತಿಯನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದವರು ಶ್ರಿ ಎಂ.ವಿ.ನಾಗರಾಜರಾವ್ ಅವರು. ಮೂಲ ಲೇಖಕರೂ, ಅನುವಾದಕರೂ ನಿಜಕ್ಕೂ ಅಭಿನಂದನಾರ್ಹರು.
– ಹೇಮಮಾಲಾ.ಬಿ
ಇದು ಸುಧಾದಲ್ಲಿ ಧಾರವಾಹಿಯಾಗಿ ಬಂದಿತ್ತಲ್ಲ.
ಅಘೋರಿಗಳು ನಿವಂದುಕೊಂಡತೆ ಅಥವಾ ಕಥೆಗಳಲ್ಲಿ ಇರುವಂತೆ.. ವಿನಾಕಾರಣ ವಿನಾಶಕ್ಕೀಡಾಗುವವರಲ್ಲ.. ಇದು ನನ್ನ ಸತತ ಅವರೊಂದಿಗಿನ ಒಡನಾಟದ ಅನುಭವ.. ಅದರ ಮೇಲೆ ರಚಿತವಾದ ಕಾದಂಬರಿ ಇದು.. ಅದಕ್ಕೆಹೇಳಿದೆ..ನಾವು ಕೇವಲ ಅವರ ಶಕ್ತಿಯ ಋಣಾತ್ಮಕ ಗುಣಗಳನ್ನು ಮಾತ್ರ ನೋಡಿದ್ದು ಇದಕೆಕರಣ ಇರಬಹುದು.. ಆದರೆ ನನ್ನ ಅನುಭವ ಭಿನ್ನ
Mam gud said