ಗೃಹಿಣಿಯೆಂದು ಮರುಗದಿರಿ
ನ ಗೃಹಂ ಗೃಹಮಿತ್ಯಾಹುಃ, ಗೃಹಿಣೀ ಗೃಹಮುಚ್ಯತೇ|
ಗೃಹಂ ತು ಗೃಹಿಣೀ ಹೀನಃ ಕಾಂತಾರಾತ್ ಅತಿರಿಚ್ಯತೇ||
ಅಂದರೆ, ‘ಮನೆ ಮನೆಯಲ್ಲ, ಗೃಹಿಣಿಯೇ ಮನೆ. ಗೃಹಿಣಿ ಇಲ್ಲದ ಮನೆ ಅಡವಿಗಿಂತಲೂ ಕಡೆ’. ಆದರೆ ಇಂದು ಹಲವರಿಗೆ ಗೃಹಿಣಿಯೆಂದರೆ ಉದ್ಯೋಗವಿಲ್ಲದವಳೂ, ಏನನ್ನೂ ಸಾಧಿಸಲಾರದವಳು ಎಂಬಂತಿದೆ, ಇಂದು ನಮ್ಮ ಸಮಾಜದಲ್ಲಿ ಮಹಿಳೆಯು ಆರ್ಥಿಕವಾಗಿ ದುಡಿಯುತ್ತಿದ್ದರೆ ಮಾತ್ರವೇ ಆಕೆಗೆ ಪ್ರಾಶಸ್ತ್ಯ. ಅದೇ ಆಕೆ ಗೃಹಿಣಿಯಾಗಿ ಎತ್ತಿನಂತೆ ದಿನವಿಡೀ ದುಡಿಯುತ್ತಿದ್ದರೂ ಆಕೆಗೆ ಯಾವುದೇ ಬೆಲೆಯಿರುವುದಿಲ್ಲ. ಕಾರಣ, ಆಕೆಯದು ಸಂಪಾದನೆಯಿಲ್ಲದ ದುಡಿಮೆ.ಸಾಮನ್ಯವಾಗಿ ಗೃಹಿಣಿಯರ ಬಗ್ಗೆ ಕೇಳಿಬರುವ ಮಾತುಗಳೆಂದರೆ,” ಹೋ ನೀವು ಹೌಸ್ ವೈಫಾ?”, “ನಿಮಗೆ ಬಿಡಿ ತುಂಬಾ ಟೈಮ್ ಇರುತ್ತೆ”, “ಇಡೀ ದಿವಸ ಮನೇನಲ್ಲಿ ಏನು ಮಾಡುತ್ತೀರಿ?”, “ನಿಮಗೆ ಬಿಡಿ ಆರಾಮ“ ಎಂದೆಲ್ಲಾ.ಇಂತಹ ಮಾತುಗಳನ್ನಾಡುವ ಮಹಾನುಭಾವರೇ ಒಂದು ಬಾರಿ ಇತ್ತ ಕೇಳಿ. ಗೃಹಿಣಿಯರೆಂದರೆ , ಆಕೆಯದು ಸೂರ್ಯೋದಯದಿಂದ ಮುಂಚಿತವಾಗಿ ಎದ್ದು,ಮನೆ ಕೆಲಸಗಳಲ್ಲಿ, ಅತ್ತೆ ಮಾವಂದಿರ ಸೇವೆಯಲ್ಲಿ, ಗಂಡ-ಮಕ್ಕಳ ಉಪಚಾರದಲ್ಲಿ ತೊಡಗಿದಳೆಂದರೆ, ಸೂರ್ಯಾಸ್ತವಾದ ಮೇಲೂ ಕೆಲವು ಸಮಯದವೆರೆಗೂ ಆಕೆಯದು ವಿಶ್ರಾಂತಿ ಇಲ್ಲದೆ ದುಡಿಯುವ ದಿನಚರಿ.
ಕೆಲವು ಹೆಣ್ಣುಮಕ್ಕಳ ಹೆತ್ತವರು,’ ಹೆಣ್ಣುಮಕ್ಕಳೆಂದರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ‘ ಎಂಬ ಮಾತಿನಲ್ಲಿ ನಂಬಿಕೆಯನ್ನು ಇಟ್ಟುಕೊಂಡು, ತಮ್ಮ ಮಗಳಿಗೆ ತಕ್ಕಮಟ್ಟಿನ ವಿದ್ಯಾಭ್ಯಾಸ ಕೊಡಿಸಿ, ತಕ್ಕಮಟ್ಟಿಗೆ ಅನುರೂಪನಾದ( ಎಲ್ಲ ವಿಚಾರದಲ್ಲೂ, ಆಸ್ತಿ, ಉದ್ಯೋಗ, ಬಂಧುಬಳಗ ಇವೇ ಮುಂತಾದುವು) ವರನಿಗೆ ಧಾರೆಯೆರೆದು ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುತ್ತಾರೆ. ಎಷ್ಟೋ ಬಾರಿ ಆ ಹೆಣ್ಣುಮಗಳಲ್ಲಿ ಅಪ್ರತಿಮ ಪ್ರತಿಭೆ ಇರುತ್ತದೆ. ಆದರೆ ಅದನ್ನು ಗುರುತಿಸುವ ಪ್ರಯತ್ನವನ್ನು ಅವಳ ಹೆತ್ತವರು ಮಾಡಿರುವುದಿಲ್ಲ. ಆಕೆಯಲ್ಲೂ ಅದೆಷ್ಟೋ ಕನಸುಗಳು, ಸಾಧಿಸಬೇಕೆಂಬ ತುಡಿತವಿರುತ್ತದೆ. ಆದರೆ ವಿವಾಹಬಂಧನದಲ್ಲಿ ಸಿಲುಕಿ ಅದೆಲ್ಲವೂ ಆಕೆಗೆ ಮರೀಚಿಕೆಯಾಗಿ ಬಿಡುತ್ತದೆ. ಸರಿ ವಿವಾಹವಾದನಂತರವಾದರೂ ತನ್ನ ಕನಸುಗಳನ್ನು ನನಸಾಗಿಸೋಣವೆಂದರೆ, ಮನೆಯವರ ಪ್ರೋತ್ಸಾಹ, ಸಹಕಾರವಿಲ್ಲದೆ ಅಲ್ಲೂ ಸೋತಿರುತ್ತಾಳೆ. ಕೊನೆಗೆ ಇವೆಲ್ಲದಕ್ಕೂ ಎಳ್ಳು ನೀರು ಬಿಟ್ಟು ಬಿಡುತ್ತಾಳೆ.
ಅದೆಷ್ಟೋ ಹೆಣ್ಣುಮಕ್ಕಳು(ಗೃಹಿಣಿ) ತಮಗಾಗಿ ಬದುಕುವುದನ್ನೇ ಕಲಿತಿರುವುದಿಲ್ಲ. ತನ್ನ ಗಂಡ, ಮಕ್ಕಳಿಗಾಗಿ ಜೀವನವನ್ನು ಸಾಗಿಸುತ್ತಿರುತ್ತಾಳೆ.ನಮ್ಮ ಸುತ್ತಲೂ ಅದೆಷ್ಟೋ ಮನೆಗಳಲ್ಲಿ ಗೃಹಿಣಿಯರೆಂದರೆ, ಕೆಲಸ ಮಾಡುವ ಯಂತ್ರದಂತೆ. ಆಕೆಯ ಭಾವನೆ, ಗುರಿ, ಕನಸು, ನೆಮ್ಮದಿ ಎಲ್ಲವೂ ಮೂಲೆಗುಂಪಾಗಿರುತ್ತದೆ. ಮೂಕರೋದನೆಯೊಂದೇ ಆಕೆಯ ಪಾಲಿಗಿರುತ್ತದೆ. ಇವೆಲ್ಲದರ ಮಧ್ಯೆಯೂ ಆಕೆ ನಿಸ್ವಾರ್ಥ ಮನೋಭಾವದಿಂದ ಬದುಕುತ್ತಾಳೆ. ಪರರ ಸಂತೋಷ ತನ್ನ ಸಂತೋಷವೆಂದು ತಿಳಿದಿರುತ್ತಾಳೆ.ಮನೆಯಲ್ಲಿ ನೆಮ್ಮದಿಯ ವಾತಾವರಣವನ್ನು ಕಲ್ಪಿಸುವ ಪ್ರಯತ್ನ ಮಾಡುತ್ತಾಳೆ.ಅಲ್ಲೋ, ಇಲ್ಲೋ ಇದಕ್ಕೆ ಅಪವಾದವೆಂಬಂತೆ ಇರುವ ಗೃಹಿಣಿಯರೂ ಇಲ್ಲದಿಲ್ಲ.
ಇಂದು ಮಹಿಳಾ ಶೋಷಣೆಯ ವಿರುದ್ಧ ಅನೇಕರು ಬೀದಿಗಿಳಿದು ಸಮಾಜದಲ್ಲಿ ನಡೆಯುತ್ತಿರುವ ,ಅತ್ಯಾಚಾರ,ಹಿಂಸೆ, ಕಿರುಕುಳಗಳನ್ನು ತಡೆಯುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಹಲವು ಮನೆಗಳಲ್ಲಿಯೇ ಮಹಿಳೆಯರು ದಿನನಿತ್ಯವೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಶೋಷಣೆಯೆಂದರೆ ಕೇವಲ ದೈಹಿಕವಾದ ಶೋಷಣೆ ಮಾತ್ರವಲ್ಲ, ಮಾನಸಿಕ ಶೋಷಣೆಯೂ ಆಕೆಯನ್ನು ದಿನನಿತ್ಯವೂ ಹಿಂಡಿಹಿಪ್ಪೆ ಮಾಡುತ್ತಿದೆ.
ಹೀಗೆಂದ ಮಾತ್ರಕ್ಕೆ ಆಕೆ ಅಸಮರ್ಥಳು, ದುರ್ಬಲಳು ಎಂದಲ್ಲ. ಆಕೆ ಒಬ್ಬರ ಬಳಿ ತನ್ನ ನೋವುಗಳನ್ನು ಹೇಳಿಕೊಂಡಳೆಂದರೆ ಆಕೆಯೇನು ಅಬಲೆಯಲ್ಲ. ಗೃಹಿಣಿಯಲ್ಲಿ ತಾಳ್ಮೆ, ಪ್ರೋತ್ಸಾಹಿಸುವ ಗುಣ, ಅರ್ಥಮಾಡಿಕೊಳ್ಳುವ ಶಕ್ತಿ, ಪ್ರೀತಿ, ಮಮತೆ, ಕರುಣೆ, ಜೀವನವನ್ನು ಸುಂದರವಾಗಿಸುವ ಕಲೆ, ಧನಾತ್ಮಕವಾಗಿ ಚಿಂತಿಸುವ ಸಾಮರ್ಥ್ಯ ಹಾಸುಹೊಕ್ಕಿರುತ್ತದೆ. ಆದರೆ ಅವೆಲ್ಲವನ್ನೂ ಅರ್ಥೈಸಿಕೊಳ್ಳುವವರು ಕೆಲವೇ ಮಂದಿ.ಕೇವಲ ತನ್ನ ಮನೆ, ಗಂಡ , ಮಕ್ಕಳು ಎಂದು ಮಾತ್ರ ಯೋಚಿಸದೆ, ಸಮಾಜಕ್ಕೆ ತನ್ನಿಂದ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎನ್ನುವ ಮನೋಭವಾನೆಗಳುಳ್ಳ ಗೃಹಿಣಿಯರೂ ನಮ್ಮ ನಡುವೆ ಇದ್ದಾರೆ. ಇವರಿಗೆ ಮಾರ್ಗದರ್ಶನ ನೀಡುವವರು ಬೇಕಾಗಿದ್ದಾರೆ ಅಷ್ಟೇ. ತನ್ನ ಮನೆಕೆಲಸಗಳನ್ನು ತಾನೇ ಮಾಡುವುದನ್ನು ಆಕೆಯ ಸ್ವಾತಂತ್ರ್ಯ ಹರಣವೆಂದು ಅವಳು ತಿಳಿದಿಲ್ಲ. ಬದಲಾಗಿ ತನಗಾಗಿ, ತನ್ನ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಆಕೆಗೆ ಸ್ವಾತಂತ್ರ್ಯ ಬೇಕಾಗಿದೆ. ಹಾಗೆಂದ ಮಾತ್ರಕ್ಕೆ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು. .ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಸಾಮರ್ಥ್ಯ ಹೆಣ್ಣಿಗಿದೆ.
ಇಂದು ಕಲ್ಪನಾ ಚಾವ್ಲ, ಸುನಿತಾ ವಿಲಿಯಮ್ಸ್, ಮೇರಿ ಕೋಮ್ ಅಧ್ಬುತ ಸಾಧನೆ ಮಾಡಿರುವ ಉದಾಹರಣೆಗಳು ನಮ್ಮ ನಡುವೆ ಇವೆ. ಅನೇಕ ಹೆಣ್ಣುಮಕ್ಕಳಲ್ಲಿ ಸಾಧಿಸುವ ಸಾಮರ್ಥ್ಯವಿದ್ದರೂ, ಪ್ರೋತ್ಸಾಹದ ಕೊರತೆಯಿಂದ, ಸಾಧಿಸಲಾಗದೆ ಸುಮ್ಮನಿದ್ದಾರೆ. ಎಲ್ಲರೂ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಆಗಲು ಸಾದ್ಯವಿಲ್ಲ. ಆದರೂ ಅವರವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಬೆಳೆಸುವ ಪ್ರಯತ್ನವಾಗದೆ, ಅದೆಷ್ಟೋ ಪ್ರತಿಭೆಗಳು ಮಾಯವಾಗಿವೆ, ಇನ್ನೂ ಕೆಲವರು ಎಲೆಮರೆಯ ಕಾಯಿಯಂತೆ ಇದ್ದಾರೆ.ಹೌದು ಹೇಳಬಹುದು, ಸಾಧಿಸಬೇಕೆಂಬ ಛಲವಿದ್ದರೆ, ತ್ಯಾಗ ಮಾಡಬೇಕು, ಅದರತ್ತ ಮುನ್ನಡೆಯುವ ಪ್ರಯತ್ನವಿರಬೇಕು ಎಂದೆಲ್ಲಾ. ಆದರೆ, ಗೃಹಿಣಿಗೆ ಅದಷ್ಟು ಸುಲಭದ ವಿಚಾರವಲ್ಲ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ ಮತ್ತು ಅವಳನ್ನು ಅರಿತು ಹುರಿದುಂಬಿಸುವ ಮನಸುಗಳು ಬೇಕಾಗುತ್ತವೆ.
ಮನುಸ್ಮ್ರುತಿಯಲ್ಲಿ ಹೇಳುವಂತೆ, ‘ ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ|
ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ|’ ಅಂದರೆ, ಎಲ್ಲಿ ಸ್ತ್ರೀಯರಿಗೆ ಗೌರವ ಸ್ಥಾನಗಳು ದೊರೆಯುತ್ತವೋ, ಅಲ್ಲಿ ದೇವತೆಗಳೂ ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲಾ ಪೂಜೆಗಳು ನಿಷ್ಫಲವಾಗುತ್ತವೆ. ಆದರೆ, ಎಲ್ಲಾ ಕಡೆಗಳಲ್ಲಿಯೂ ಈ ರೀತಿಯಿರುವುದಿಲ್ಲ. ಎಲ್ಲಾ ಪುರುಷರು ಒಂದೇ ಮನಃಸ್ಥಿತಿ ಹೊಂದಿಲ್ಲ. ಹಲವು ಮಂದಿ ತಮ್ಮ ಪತ್ನಿಯ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿ, ಆಕೆಯ ಕನಸನ್ನು ನನಸಾಗಿಸಲು, ಆಕೆಯ ಗುರಿಯನ್ನು ತಲುಪಲು ಸಹಕಾರ ನೀಡುತ್ತಾರೆ.
ಗೃಹಿಣಿಯೂ ತನ್ನ ಸಾಮರ್ಥ್ಯವನ್ನು ಅರಿತು, “ಸಾಧಿಸಿದರೆ ಸಬಳ ನುಂಗಬಹುದು” ಎಂಬ ಮಾತನ್ನು ಅರ್ಥೈಸಿಕೊಂಡು, ಚಿಕ್ಕಪುಟ್ಟ ಕಲಹಗಳನ್ನು, ಮನಸ್ತಾಪಗಳನ್ನು ಮರೆತು, ತನ್ನ ಗುರಿಯತ್ತ ಚಲಿಸಬೇಕು. ಅವಲಂಬನೆಯ ಬದುಕನ್ನು ಸ್ವಾವಲಂಬನೆಯ ಬದುಕನ್ನಾಗಿಸುವ ಛಲ ಹೊಂದಬೇಕು.ಇವೆಲ್ಲಕ್ಕಿಂತಲೂ ಮಿಗಿಲಾಗಿ ಆಕೆಯನ್ನು ಅರ್ಥೈಸಿಕೊಂಡು, ಆಕೆಗೂ ಒಂದು ಬದುಕಿದೆ, ಆಕೆಯಲ್ಲೂ ಭಾವನೆಗಳಿವೆ ಎಂಬುದನ್ನು ಮನೆಯವರು ಅರಿತು ನಡೆಯಬೇಕು.ಆಕೆಯೊಳಗೆ ಸುಪ್ತವಾದ ಚೇತನವನ್ನು ಎಚ್ಚರಗೊಳಿಸಬೇಕು. ಸ್ತ್ರೀಯ ಸಾಮರ್ಥ್ಯ, ಶಕ್ತಿಯ ಬಗ್ಗೆ Eleanor Roosevelt ಹೀಗೆ ಹೇಳುತ್ತಾರೆ.“A woman is like a tea bag. You can’t tell how strong she is until you put her in a hot water.”
ಗೃಹಿಣಿಯ ತಾಳ್ಮೆಯು ಆಕೆಗೆ ಫಲಪ್ರದವಾಗಬೇಕು. ಆಕೆಯ ಬದುಕಿನ ಪುಟಗಳಲ್ಲಿ ಅವಳ ನಗುವಿನ ಚಿತ್ರವಿರಬೇಕು ಮತ್ತು ಆಕೆಯ ಸಾಧನೆಯ ಕುರುಹು ಮೂಡಬೇಕು. ಗೃಹಿಣಿಯು ಮುಖವಾಡದಲ್ಲಿ ನಗುವ, ಸ್ವಗತದಲ್ಲಿ ಅಳುವ ನೊಂದ ಗೃಹಿಣಿಯಾಗದೆ, ಹೃದಯಪೂರ್ವಕವಾಗಿ ನಗುವ ಹೆಣ್ಣುಮಗಳಾಗಬೇಕು…….
– ಸಹನಾ, ಪುಂಡಿಕಾಯಿ
harassment begins at home, ಎನ್ನುವ ಮಾತು ಎಷ್ಟು ಸತ್ಯ ಅಲ್ಲವೇ!! .. ಸ್ತ್ರೀ ಶೋಷಣೆಯ ಮೊದಲ ಹೆಜ್ಜೆ ಮನೆಯಲ್ಲೇ. ದಿನವಿಡೀ ನಮಗಾಗಿ ದುಡಿಯುವವರನ್ನು ನಾವು taken for granted ರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದು ಅಮಾನವೀಯ. ಈ ನಿಟ್ಟಿನಲ್ಲಿ ಬಹಳ ಅರ್ಥವತ್ತಾಗಿದೆ ಲೇಖನ
ಗೃಹಿಣಿ ಗೃಹಿಣಿಯೆಂದು ಬೀಳುಗಳೆಯದಿರು ಮೂಡಾ ಗೃಹಿಣಿಯಿಲ್ಲದಾ ಮನೆಗೆ ಗ್ರಹ ಬಡಿಯುವುದು ನೋಡಾ
ಗೃಹಿಣಿ ……ಹೋಮ್ ಮೆಕರ್….ಮನೆ ಮಕ್ಕಳು…..ಒಳ್ಳೆ ಪ್ರಜೆಗಳು …..ದೊಡ್ಡ ಕೊಡುಗೆ ಅಲ್ವ
ಖಂಡಿತ ಒಳ್ಳೆಯ ವಿಚಾರ..ಉತ್ತಮ ಬರಹ..
ಶ್ರೀಮತಿ ಸಹನಾ ಅವರೇ, ನಿಮ್ಮ ಲೇಖನಕ್ಕೆ ನನ್ನದೊಂದು ‘ದೊಡ್ಡ ಸಲಾಮ್’ ಹಾಗೂ ಚಪ್ಪಾಳೆ. ಇಂತಹ ಮಾತು ನಾನು ಕೇಳಿದ್ದೇನೆ. ನಾನು ಒಬ್ಬ ಗೃಹಿಣಿ ಎಂದು ಸಮಜಾಯಿಷಿ ಕೊಡುತ್ತ್ತಿಲ್ಲ,. ನಾನು ಎಂ.ಎ. ಓದಿ ಮನೆಯಲ್ಲಿ ಇದ್ದೇನೆ ಎಂದು ಗೇಲಿ ಮಾಡಿದವರಿದ್ದಾರೆ. ಅಯ್ಯೋ ಪಾಪ ಮನೆಯಲ್ಲಿ ಇರುವವರಿಗೆ ಏನು ಗೊತ್ತು? ಎಂದವರೂ ಇದ್ದಾರೆ.ಕೊನೆಗೆ ತರಕಾರಿಯವರೂ ಸಹ ಬೆಲೆ ಇಂಗ್ಲೀಷ್ ನಲ್ಲಿ ಹೇಳಿದರೆ ತಿಳಿಯಲ್ಲ ಅಂದು ಕೊಂಡಿದ್ದಾರೆ. ‘ಫಿಫ್ಟೀ ,ಸೆವೆಂಟೀ’, ಎಂದವರು ಕನ್ನಡ ದಲ್ಲಿ ಅದನ್ನು ಹೇಳುತ್ತಾರೆ. ಇತ್ತೀಚೆ ಗೆ ನನ್ನ ಸಹಪಾಟಿ ಯೊಬ್ಬಳು ಫೋನ್ ಮಾಡಿದ್ದಳು .ಅವಳು ಕಾಲೇಜ್ ಒಂದರಲ್ಲಿ ಲೆಕ್ಚರರ್, ತನ್ನ ಬಗ್ಗೆ,ತನ್ನ ಕೆಲಸ ಸಂಬಳ ಎಲ್ಲ ವರದಿ ಒಪ್ಪಿಸಿ ‘ ನಿನಗೆ ರಾಯನ್ಕ್ ಚಿನ್ನದ ಪದಕ ಬಂದದ್ದು ದಂಡ ನಾನು ನೋಡು ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗಿ ಎಷ್ಟ್ತು ಸಂಪಾದಿಸುತ್ತೇನೆ, ಎಂದು ಮರುಕ ತೋರಿಸಿದಳು. ದಿನಾ ಬೆಳಗಾದರೆ ‘ಹೋಮ್ ಮೇಕರ್, ಹೌಸ್ ವೈಫ್’ ಎಂದು ಜರಿಯುವಮಂದಿಯೆ ಜಾಸ್ತಿ.
ಬರಹವನ್ನು ಮೆಚ್ಚಿದ, ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.