ಅಳಲು
ನಾನೀಗ ಮಾಸಿದ ಪಾತ್ರೆ ,
ನನ್ನ ಜಾಗ ಅಡುಗೆ ಮನೆಯ ಮೂಲೆ ,
ಅರೆಬರೆ ಮಿಕ್ಕಿದ, ಅರ್ಧ ತಿಂದು
ಇನ್ನರ್ಧ ಕಕ್ಕಿದ, ಹಳಸಿದ ತಿನಿಸು ಮಾತ್ರ ನನಗೆ
ನನಗೂ ಯೌವನವಿತ್ತು ,
ಮಿರಿ ಮಿರಿ ಮಿಂಚುವ ಬಣ್ಣವಿತ್ತು,
ನನ್ನ ಒಡಲಲ್ಲೂ ಕೆನೆ ಹಾಲು ತೇಲಿತ್ತು.
ಈ ಮನೆಯ ಗೃಹಪ್ರವೇಶವೂ ನನ್ನ
ಹೃದಯದಿಂದ ಉಕ್ಕಿದ ಸಿಹಿ ಹಾಲಿಂದಲೇ ಆಗಿತ್ತು.
ಆದರೆ ಕಿಲುಬು ಹಿಡಿದಿದೆ ನನಗೀಗ,
ಶುಭದ ಯಾವುದೇ ಕೆಲಸಕ್ಕೂ ಯೋಗ್ಯನಲ್ಲ ನಾ ,
“ಎಷ್ಟು ಚಂದವಿದೆ, ಈ ಪಾತ್ರೆ ” ಎಂದು
ಹೊಗಳಿದ್ದ ನನ್ನ ಮನೆಯವರೇ ,
ಈಗ “ಕಾಲು-ಕಾಲಿಗೆ ಸಿಗುತ್ತೆ ಹಾಳಾದ್ದು ” ಎಂದು ತೆಗಳುವರು
ಇಂದಲ್ಲ ನಾಳೆ ನಾ ಇಲ್ಲಿಂದ ಹೊರಡುವವ
“ಹಳೇ ಪೇಪರ್ -ಖಾಲಿ ಶೀಶೆ ” ಮಾರುವವನ
ಗುಜರಿ ಸೇರುವವ ,
ಹೋಗುವ ಮುನ್ನ ಒಂದೇ ಬಯಕೆ ,
ನನ್ನ ಅವನಿಗೆ ಕೊಡುವಾಗ , ಒಮ್ಮೆ ನೆನೆಯಿರಿ
ಕೊಟ್ಟ ಮೇಲೆ ನಾ ಮತ್ತೆ ಬರಲಾರೆನೆಂದು
– ಆದರ್ಶ ಬಿ ವಸಿಷ್ಠ , ಪುಣೆ
.
ಅಭಿನಂದನೆಗಳು. ಒಂದು ಹಾಲಿನ ಪಾತ್ರೆಯ ಅಳಲನ್ನು ಎಷ್ಟು ಸರಳವಾಗಿ ತಮ್ಮ ಕವನದಲ್ಲಿ ವಿವರಿಸಿದ್ದೀರಿ!
ಹಾಲಿನ ಪಾತ್ರೆ ಯಾವಾಗಲೂ ವಿಶಿಷ್ಟ 🙂
ಕವನ ಬಹಳ ಚೆನ್ನಾಗಿದೆ.
ವಾಹ್! ಹಾಲಿನ ಪಾತ್ರೆಯ ಮೇಲೆ ಎಂಥ ಚಂದದ ಕವನ! 🙂
ತುಂಬಾ ಚೆನ್ನಾಗಿದೆ ..ವೈ ಕಾಂತ್ ವೀ ಕಾಮೆಂಟ್ ಇನ್ ಇಂಗ್ಲಿಷ್
you can comment in english as well 😀
ನೀವು ಬರೆದಿರುವ ಎಲ್ಲಾ ಕವಿತೆಗಳನ್ನು ನಾನು ಒದಿದ್ದೇನೆ….. ಅದರಲ್ಲಿ ನನಗೆ ತುಂಬ ಎಷ್ಟವಾದ ಕವಿತೆ ಇದು…..