ಸ್ವಾಮಿಯೇ ಶರಣಂ ಅಯ್ಯಪ್ಪಾ….
ಇನ್ನೇನು ಅಯ್ಯಪ್ಪ ಋತು ಶುರುವಾಗಲಿದೆ. ಹಾಗೇ ನನ್ನ ಮನಸ್ಸು ಅಯ್ಯಪ್ಪನನ್ನು ನೆನೆಯುತ್ತಿದೆ. ಇದು ತಮಾಷೆ ಮಾಡುವ ವಿಷಯ ಖಂಡಿತ ಅಲ್ಲ. ಆ ಉದ್ದೇಶವೂ ನನಗಿಲ್ಲ. ಸರಿಯೆನ್ನಿದರೆ ಒಪ್ಪಿಸಿಕೊಳ್ಳಿ – ಸರಿ ಎನ್ನಿಸದಿದ್ದರೆ ತಪ್ಪು ಎಂದು ಹೇಳಿ. ನನ್ನದಂತೂ ಇದ್ದದ್ದನ್ನು ಇದ್ದ ಹಾಗೇ ಹೇಳುವ ಪ್ರಯತ್ನ.
ಐದು ವರ್ಷದ ಹಿಂದೆ ನಮ್ಮ ಮನೆಯಲ್ಲು ಒಮ್ಮೆ “ಅಯ್ಯಪ್ಪ” ಗಾಳಿ ಬೀಸಿತ್ತು. ಎಂದೂ ಇಲ್ಲದ ಅಯ್ಯಪ್ಪ ಭಕ್ತಿ ಇಂದು ಎಲ್ಲಿಂದ ಬೀಸಿತು ? ಎಂದು ಮೂಗಿನ ಮೇಲೆ ( ಒಳಗಲ್ಲ ! ) ಬೆರಳಿಟ್ಟುಕೊಂಡವಳು ನಾನು. ಅವರವರ ಭಕ್ತಿ-ಭಾವ ಅವರವರ ಸ್ವತ್ತು. ನಾನೇನು ನಾಸ್ತಿಕಳಲ್ಲ. ಹಾಗೇ ಭಯಂಕರ ಭಕ್ತ ಸಮುದಾಯಕ್ಕೆ ಸೇರಿದವಳೂ ಅಲ್ಲ. ಊಟಕ್ಕೆ ಉಪ್ಪಿನ ಕಾಯಿಯಂತೆ- ಸ್ವಲ್ಪ ಸ್ವಲ್ಪವೇ ದೇವರನ್ನು ನಂಬುತ್ತಾ(ನೆಂಚಿಕೊಳ್ಳುತ್ತಾ) ಬದುಕೆಂಬ ಊಟದ ಸೊಬಗನ್ನು ಅಸ್ವಾದಿಸುವ ಪೈಕಿ !
ನನ್ನ ದೊಡ್ಡ ಬಾವನ ಅಳಿಯ ಅಯ್ಯಪ್ಪನ ಭಕ್ತ. ಈ ಬಾರಿ ಗುರುಸ್ವಾಮಿ ಪಟ್ಟಕ್ಕೆ ಭಡ್ತಿ ಹೊಂದಿದ್ದರು. ನೆಂಟರಿಷ್ಟರಲ್ಲಿ ಮದುವೆಯಾಗದ ಹುಡುಗರಿಗೆ “ಅಯ್ಯಪ್ಪನಿಗೆ ಹರಕೆ ಕಟ್ಟಿಕೋ. ವರ್ಷದೊಳಗೆ ಮದುವೆ ಅಗುತ್ತದೆ. ಮುಂದಿನ ವರ್ಷವೂ ಶಬರಿ ಮಲೈಗೆ ಬಾ” ಎಂಬದಾಗಿ ಬುದ್ಧಿಹೇಳಿ(!) ಶಬರಿಮಲೈಗೆ ಕರೆದುಕೊಂಡು ಹೋಗಿದ್ದೂ ಹೌದು. ಆ ಹುಡುಗರಿಗೆ ವಿವಾಹ ಯೋಗ ಕೂಡಿಬಂದದ್ದೂ ಹೌದು.
ಅವರೆಲ್ಲರ ಕತೆ ಕೇಳಿ ನಮ್ಮವರೂ ಹರಕೆ ಹೊತ್ತರು- ವಿವಾಹಯೋಗಕ್ಕಾಗಿ ಅಲ್ಲ (ನನ್ನ ಪುಣ್ಯ !). ತಮ್ಮ ” ವ್ಯವಹಾರಕ್ಕೆ ಸಂಬಂಧಿಸಿದಂತೆ ಇಷ್ಟಾರ್ಥ ಸಿದ್ಧಿಸಿದರೆ ಮುಂದಿನ ಬಾರಿಯೂ ಶಬರಿಮಲೈಗೆ ಬರುತ್ತೇನೆ” ಎಂಬುದಾಗಿ. ಇವರೆಲ್ಲರ ಉತ್ಸಾಹ ಕಂಡು ಇನ್ನೊಬ್ಬ ಬಾವನವರೂ ಇವರ ಜೊತೆಗೂಡಿದರು. ಇವರೆಲ್ಲ ಹೊರಟ ಮತ್ತೆ ನನ್ನ ಹತ್ತು ವರ್ಷದ ಮಗ ಸುಮ್ಮನಿರುತ್ತಾನೆಯೇ ? ಚಿಕ್ಕ ಮಗ ಮತ್ತು ನಾನು ಮನೆಯಲ್ಲಿಯೇ ಉಳಿಯುವುದೆಂದು ನಿರ್ಧಾರವಾಯಿತು.
ಅದು ಮೇ ತಿಂಗಳು. ಮೂರು ದಿನ ಮಾಲೆ ಹಾಕುವುದೆಂದು ನಿರ್ಧಾರವಾಯಿತು. ಹತ್ತಿರದ ಯಾವುದೋ ಅಯ್ಯಪ್ಪ ದೇವಸ್ಥಾನಕ್ಕೆ ಹೋಗಿ ಬಾವನವರು, ನಮ್ಮವರು ಮತ್ತು ಮಗ ಮಾಲೆ ಹಾಕಿಕೊಂಡು ಬಂದರು. ಕಪ್ಪು ಲುಂಗಿ – ಕಪ್ಪು ಶಲ್ಯ ಧರಿಸಿ, ಚಪ್ಪಲಿ ಹಾಕದೆ ಮೂರು ದಿನ ಕಳೆಯುವುದರಲ್ಲಿ ಹಲವಾರು ಅನುಭವಗಳು ನಮ್ಮ ಪಾಲಿಗೆ ಒದಗಿ ಬಂದವು. ಆ ಕಪ್ಪು ವಸ್ತ್ರಗಳೋ- ಅದರ ಬಣ್ಣವೋ ಆ ಅಯ್ಯಪ್ಪನಿಗೇ ಪ್ರೀತಿ ! ….. ಎಷ್ಟು ಉಜ್ಜಿ ತೊಳೆದರೂ ಮತ್ತೆ ಮತ್ತೆ ಬಿಡುವ ಬಣ್ಣ ! ಇನ್ನು ಹೆಚ್ಚು ಉಜ್ಜಿ ತೊಳೆದರೆ – ಒಂದೋ ಅದು ಮಾಸಲು ಬಣ್ಣದ ವಸ್ತ್ರವಾಗುತ್ತಿತ್ತು ! ಇಲ್ಲದಿದ್ದರೆ ವಸ್ತ್ರ ಪಿಸಿಯುತ್ತಿತ್ತು ! ಬೇಸಿಗೆಯ ದಿನಗಳ ಮೈ ಬೆವರು- ಕಪ್ಪು ಲುಂಗಿಯ ಬಣ್ಣ ಎರಡೂ ಸೇರಿ ಬೆಳ್ಳಗಿರುವ ಜನ ಕರಿ ಕರಿಯಾಗಿ ಕಾಣಿಸತೊಡಗಿದರು. ಹಾಕಿದ್ದ ಗಂಧದ ಬಣ್ಣದ ಅಯ್ಯಪ್ಪ ಮಾಲೆ ಕರಿಮಣಿ ಮಾಲೆಯಂತೆ ಶೋಭಿಸುತ್ತಿತ್ತು ! ಮೂರು ಜನರೂ ಚಾವಡಿಯಲ್ಲಿ ಚಾಪೆ ಹಾಸಿ ಮಲಗಿದರು. ಹಿಂದಿನ ದಿನದ್ದನ್ನು ತಿನ್ನುವಂತಿಲ್ಲ- ಎಂಬ ನಿಯಮವೊಂದು ಜಾರಿಯಾದ ಕಾರಣ, ಹಿಂದಿನ ದಿನದ ಉಳಿದ ಪದಾರ್ಥಗಳನ್ನು ನಾನೊಬ್ಬಳೇ ಖಾಲಿ ಮಾಡಬೇಕಾದ ಅನಿವಾರ್ಯತೆ ಬಂದೊದಗಿತು !
ಮೂರು ದಿನ ಕಳೆದು, ಶಬರಿ ಮಲೈಗೆ ಹೊರಡುವ ದಿನವೂ ಬಂದು ಬಿಟ್ಟಿತು. ಬೆಳಿಗ್ಗೆ ನಾಲ್ಕಕ್ಕೆಲ್ಲ ಟೆಂಪೋ ಟ್ರ್ಯಾವೆಲರ್ ನಲ್ಲಿ ನಮ್ಮ ಮನೆಯಲ್ಲಿ ಸೇರಿದ ಯುವ ಪಡೆ “ಸ್ವಾಮಿಯೇ ಶರಣಂ ಅಯ್ಯಪ್ಪ” ಘೋಷಣೆಯನ್ನು ಕೂಗತೊಡಗಿತು. ಗುರುಸ್ವಾಮಿಯ ನೇತೃತ್ವದಲ್ಲಿ “ಇರುಮುಡಿ” ಕಟ್ಟುವ ಪೂಜಾವಿಧಿಗಳು ಆರಂಭವಾದುವು. ಉಳಿದವರೂ ಅವರನ್ನು ಅನುಕರಿಸತೊಡಗಿದರು. ಮೊದಮೊದಲು ಇದ್ದ ಹಿಂಜರಿಕೆ ನಿಧಾನವಾಗಿ ಕರಗುತ್ತ, ಎಲ್ಲರು ಸ್ವಲ್ಪ ದ್ವನಿ ಏರಿಸಿಯೇ “ಸ್ವಾಮಿಯೇ ಶರಣಂ ಅಯ್ಯಪ್ಪ” ಘೋಷಣೆಯನ್ನು ಕೂಗತೊಡಗಿದರು. ಅವರೆಲ್ಲರಿಗೆ ಬೆಳಗಿನ ತಿಂಡಿಯ ವ್ಯವಸ್ಥೆಯಲ್ಲಿ ನಿರತಳಾಗಿದ್ದ ನಾನು ಅವರ ಘೋಷಣೆಯನ್ನು ಕೇಳಿ ವಿರೋಧಿಸಲೂ ಆಗದೆ – ಆನಂದಿಸಲೂ ಆಗದೆ ಚಡಪಡಿಸುತ್ತಿದ್ದೆ. ಮಕ್ಕಳು ಚಿಕ್ಕವರಿರುವಾಗಲೂ ಮನೆಯಿಂದ ಸ್ವಲ್ಪವೂ ಶಬ್ದ ಪಕ್ಕದ ಮನೆಗೆ ಕೇಳಿಸದಂತೆ ಜಾಗ್ರತೆವಹಿಸಿದ್ದ ನಾನು ಇಂದು ಅಸಹಾಯಕಳಾಗಿದ್ದೆ. ವಿರೋಧಿಸಿದರೆ “ಅಯ್ಯಪ್ಪ ಮುನಿಸಿಕೊಂಡರೆ ?” ಎಂಬ ಭಯ ನನಗಿದ್ದಿರಬಹುದೇ ? ಎಲ್ಲಾ ಮುಗಿಸಿ ಅವರೆಲ್ಲ ಭಯಂಕರ (!) ಘೋಷಣೆಗಳೊಂದಿಗೆ ವಾಹನವನ್ನೇರಿದರು. ನಾನು, ನನ್ನ ಚಿಕ್ಕ ಮಗನೊಂದಿಗೆ ಶಾಂತವಾಗಿ ಮನೆಯಲ್ಲುಳಿದೆ. ಮೂರು ದಿನದಿಂದ ಅವರುಗಳು ಉಪಯೋಗಿಸಿದ ಚಾಪೆಯನ್ನು ಉಜ್ಜಿ ಉಜ್ಜಿ ತೊಳೆಯುವ ಕೆಲಸ ನನ್ನ ಹೆಗಲೇರಿತು !
ಮೂರನೆಯ ದಿನ ಹಿಂತಿರುಗಿದ ಒಬ್ಬೊಬ್ಬರದೂ ಕಪ್ಪು-ಕಪ್ಪು ಮೈ ಬಣ್ಣ. ಒಟ್ಟು ಐದಾರು ದಿನ ಕಪ್ಪು ಬಟ್ಟೆ ಉಟ್ಟಿದ್ದ ಪರಿಣಾಮ ಮೈಬಣ್ಣ ಬದಲಾಗಿ ಹೋಗಿತ್ತು. ಒಬ್ಬೊಬ್ಬರೂ ತಲಾ ಅರ್ಧ ಗಂಟೆ ಸ್ನಾನ ಮಾಡಿದರು. ಹೋಗಲಿ… ಇವರುಗಳು ಇಚ್ಚಿಸಿದ್ದು ಫಲಿಸಿದ್ದೇ ಹೌದಾದರೆ ಇಷ್ಟೆಲ್ಲ ಅವಸ್ಥೆಪಟ್ಟದ್ದಕ್ಕೆ ಸಾರ್ಥಕ…. ನಾನೂ ಒಂದು ವರ್ಷ ಕಾದು ನೋಡಿದೆ. ಇವರೆಲ್ಲರ ಇಷ್ಟಾರ್ಥಗಳು ಈಡೇರಬಹುದೇನೋ ಎಂಬ ಆಸೆ ನನ್ನಲ್ಲಿಯೂ ಇತ್ತು. ಆದರೇ…. ಆದರೇ… ಯುವ ಪಡೆಯ ಎಲ್ಲರಿಗೂ ಮದುವೆ ಮಾಡಿಸಿದ, ಮದುವೆಯಾದವರಿಗೆ ಮಗುವನ್ನು ಕರುಣಿಸಿದ (!?) ಅಯ್ಯಪ್ಪ, ನಮ್ಮವರ ಬೇಡಿಕೆಯನ್ನು ಪುರಸ್ಕರಿಸಲೇ ಇಲ್ಲ. “ತನಗಂತೂ ಮದುವೆ ಇಲ್ಲ. ಈ ಹುಡುಗರಿಗಾದರೂ ಮದುವೆಯಾಗಲಿ” ಎಂಬ ಧಾರಳಿತನವನ್ನು ಮೆರೆದಿದ್ದ “ಅಯ್ಯಪ್ಪ”, ಅರ್ಥಿಕ ಬೇಡಿಕೆಗಳಿಗೂ ನನಗೂ ಸಂಬಂಧವಿಲ್ಲ ಎಂದು ನೇರವಾಗಿ ನಮ್ಮವರ ಬೇಡಿಕೆಯನ್ನು ತಿರಸ್ಕರಿಸಿದ್ದ. ಈ ಐದು ವರ್ಷ ಬಾಯಿ ಮುಚ್ಚಿಕೊಂಡಿದ್ದೆ. ಇಂದೇ ಅದು ಸ್ಪೋಟಗೊಂಡದ್ದು !
ಅಲ್ಲಿಗೂ ನನ್ನದೊಂದು ಅನುಮಾನ- ಅಸಮಧಾನ ಉಳಿದೇ ಹೋಯಿತು… ಆ ಬಟ್ಟೆ ತಯಾರಿಸುವವರು ಆ ಪಾಠಿ ಬಣ್ಣ ಬಿಡುವ ಬಟ್ಟೇಯನ್ನೇಕೆ ತಯಾರಿಸುತ್ತಾರೆ ? ಮಾಲೆ ಧರಿಸುವ ಯಾರೂ ಕಪ್ಪು ಬಟ್ಟೆಯ ಬೆಲೆಯ ಬಗ್ಗೆ ಯೋಚಿಸುವುದಿಲ್ಲ. ನೂರು ರುಪಾಯಿ ಹೆಚ್ಚು ಕೊಟ್ಟಾದರೂ ಕಪ್ಪು ಬಟ್ಟೆಯನ್ನು ಕೊಂಡುಕೊಳ್ಳುತ್ತಾರೆ. ಅಂದ ಮೇಲೆ ಗುಣಮಟ್ಟವನ್ನೇಕೆ ರಾಜಿ ಮಾಡಿಕೊಳ್ಳಬೇಕು ? ಅಯ್ಯಪ್ಪ ಸಿಕ್ಕರೆ ಅವನನ್ನೇ ಕೇಳಬೇಕು……….. ಇಷ್ಟೆಲ್ಲಾ ಬರೆದ ಮತ್ತೆ ನನಗವನು ಸಿಕ್ಕುವನೆಂಬ ಭರವಸೆ ಇಲ್ಲ. ನಿಮಗೊಮ್ಮೆ ಸಿಕ್ಕರೆ ನೀವೇ ನನ್ನ ಪರವಾಗಿ ಕೇಳಿಬಿಡಿ. ಬಹುಶಃ ಬಣ್ಣ ಬಿಡುವ ವಸ್ತ್ರಗಳೇ ಅವನಿಗೂ ಪ್ರೀತಿಯಿರಬಹುದು. ಮಾಲೆ ಧರಿಸಿದ ಮನುಷ್ಯ ಶಬರಿ ಮಲೈನಿಂದ ಹಿಂದುರಿಗಿದ ಕೂಡಲೆ ತನ್ನ ಹಳೆ ಚಾಳಿಗಳನ್ನು ಮುಂದುವರೆಸುತ್ತಾನೆ ತಾನೇ ? ಅದೂ ಒಂದು ರೀತಿಯಲ್ಲಿ ಅಯ್ಯಪ್ಪ ಭಕ್ತನ ಬಣ್ಣ ಬದಲಿಸುವಿಕೆಯಲ್ಲವೇ ? ನೀವೇನಂತೀರಿ ?
– ಸುರೇಖಾ ಭಟ್ ಭೀಮಗುಳಿ, ಬೆಂಗಳೂರು
nice madam. subtle sense of humour.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ….
ಹಹ್ಹಾ ಬರಹ ಸೂಪರ್ !