ಹೀಗೊಂದು ಗುರುವಂದನೆ!
ಸುಮಾರು 10 ವರ್ಷಗಳ ಹಿಂದಿನ ಘಟನೆ. ಯಾವುದೋ ಒಂದು ಸಮಾರಂಭಕ್ಕೆ ನನ್ನ 6 ವಯಸ್ಸಿನ ಮಗನನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿ ಆವನ ಶಾಲೆಯ ಅಧ್ಯಾಪಿಕೆಯೊಬ್ಬರು ಸಿಕ್ಕಿದರು. ನನ್ನ ಮಗನಿಗೆ ಒಂದನೆಯ ತರಗತಿಯಲ್ಲಿ ಅವರು ಕ್ಲಾಸ್ ಟೀಚರ್ ಆಗಿದ್ದರು. ಪರಿಚಯವಿದ್ದುದರಿಂದ ಮಾತನಾಡಿಸಿದೆ. ನನ್ನ ಮಗ ತನ್ನ ಪಾಡಿಗೆ ಅಧ್ಯಾಪಿಕೆಯನ್ನು ಗಮನಿಸದವನಂತೆ ಇದ್ದ. ಕೊನೆಗೆ ಅವರಾಗಿಯೇ ‘ ಬೈ ಅವನೀಶ್’ ಅಂದಾಗ ಒಂದು ನಗೆ ಬೀರಿದ.
ಅವರು ಹೊರಟು ಹೋದ ನಂತರ ನಾನು ಮಗನಿಗೆ ನೀನು ಅವರಿಗೆ ವಿಶ್ ಮಾಡಬೇಕಿತ್ತಲ್ಲವೆ? ಅಂದೆ. ಕೂಡಲೆ ಮಗನ ಉತ್ತರ ಹೀಗಿತ್ತು “ಯಾಕೆ, ಇದು ಸ್ಕೂಲಾ?”. ನಾನು ಪುನ: ಹೇಳಿದೆ ಯಾಕೆ , ಸ್ಕೂಲ್ ಹೊರಗಡೆ ಮಿಸ್ಸ್ ಕಂಡರೆ ವಿಶ್ ಮಾಡಬಾರದಾ?”. ಅದಕ್ಕೆ ಅವನ ಪ್ರತ್ಯುತ್ತರ ಹೀಗಿತ್ತು “ಓಹೊ, ಅವರೇನು ಈ ವರ್ಷದ ಮಿಸ್ಸಾ?”
ಈಗ ನಿಜಕ್ಕೂ ನಾನು ತಬ್ಬಿಬ್ಬಾದೆ. ಪ್ರಸ್ತುತ ವರ್ಷದ ಮಿಸ್ ಗೆ ಮಾತ್ರ, ಅದೂ ಸ್ಕೂಲ್ ನಲ್ಲಿ ಮಾತ್ರ ವಿಶ್ ಮಾಡಬೇಕೆ? ಮಕ್ಕಳ ಆಲೋಚನೆ ಹೀಗಿದೆಯೆ?
ನನ್ನ ಬಾಲ್ಯದ ವಿದ್ಯಾಭ್ಯಾಸ ನಡೆದಿದ್ದು ಕೇರಳದ ಕಾಸರಗೋಡು ಜಿಲ್ಲೆಯ ಹಳ್ಳಿಯ ಶಾಲೆಯೊಂದರಲ್ಲಿ, ಕನ್ನಡ ಮಾಧ್ಯಮದಲ್ಲಿ. ಆಗಿನ ಮೇಷ್ಟ್ರುಗಳು, ಟೀಚರ್ ಗಳನ್ನು ಈಗಲೂ ಒಮ್ಮೊಮ್ಮೆ ಭೇಟಿಯಾಗುವ ಸಂದರ್ಭ ಸಿಗುತ್ತದೆ. ಕಂಡೊಡನೆ ಹೋಗಿ ಮಾತನಾಡಿಸಲು ನಮಗೇನೂ ಅಳುಕಿಲ್ಲ, ಅವರೂ ಅಭಿಮಾನ, ಪ್ರೀತಿಯಿಂದ ನಮ್ಮ ಈಗಿನ ಕುಶಲೋಪರಿ ವಿಚಾರಿಸುತ್ತಾರೆ. ‘ಇವರು ಯಾವ ವರ್ಷದ ಮಿಸ್ಸ್ ಅಥವಾ ಮೇಷ್ಟ್ರು’ ಎಂಬ ಪ್ರಶ್ನೆ ಎಂದೂ ಉದ್ಭವಿಸಿಯೇ ಇಲ್ಲ!
ಇದು ಈಗ ನೆನಪಾಗಲು ಕಾರಣವಿದೆ. 28 ವರ್ಷಗಳ ಹಿಂದೆ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಾನು ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿಯಾಗಿದ್ದೆ. ಆಗ ನನ್ನ ಕ್ಲಾಸಿಗೆ ಅಲ್ಪಕಾಲ ಕೆಲವು ಕನ್ನಡ ತರಗತಿಗಳನ್ನು ತೆಗೆದುಕೊಂಡವರು ಪ್ರೊ. ತಾಳ್ತಜೆ ವಸಂತಕುಮಾರ ಅವರು. ಅದೇ ವರ್ಷ ಅವರು ಮುಂಬೈ ಯೂನಿವರ್ಸಿಟಿಗೆ ಉನ್ನತ ಹುದ್ದೆಯ ಮೇಲೆ ಹೋದರೆಂದು ಇತರರ ಮೂಲಕ ತಿಳಿದಿದ್ದೆ. ನಾನು ಪದವಿ ಮುಗಿಸಿ, ವಿವಾಹ, ಉದ್ಯೋಗ ನಿಮಿತ್ತ ಮೈಸೂರಿನಲ್ಲಿ ನೆಲೆಸಿ ಎರಡು ದಶಕಗಳಾಗಿವೆ. ಕೈಗಾರಿಕಾ ವಲಯದಲ್ಲಿ ಉದ್ಯೋಗ ಮತ್ತು ಇತರ ಜವಾಬ್ದಾರಿಗಳ ಜತೆಗೆ ನನ್ನದೇ ವರ್ತುಲದಲ್ಲಿ ಸುತ್ತುತ್ತಿರುವ ನನಗೆ ಪ್ರೊಫ಼ೆಸರ್ ಜತೆಗೆ ಏನೂ ಸಂಪರ್ಕ ಇದ್ದಿರಲಿಲ್ಲ.
ಈಗ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನ ಛಾಪು ಮೂಡಿಸಿದ್ದಾರೆ. ಹಲವಾರು ಕಾರ್ಯಕ್ರಮ, ಸಮ್ಮೇಳನಗಳಲ್ಲಿ ಅವರಿಗೆ ವಿಶೇಷ ಗೌರವ ಸಲ್ಲುತ್ತಿದೆ. ಸಾಹಿತ್ಯಾಭ್ಯಾಸ ಮಾಡದ ನನಗೆ ಇದರಿಂದ ಹೆಚ್ಚು ಅರ್ಥವಾಗುವುದಿಲ್ಲ! ಇತ್ತೀಚೆಗೆ, ಪ್ರೊ. ತಾಳ್ತಜೆ ವಸಂತಕುಮಾರ ಅವರಿಗೆ ತಮ್ಮ ಹಿತೈಷಿಗಳು ಹಾಗೂ ಶಿಷ್ಯರು ಸೇರಿ ಅರ್ಪಿಸಿದ ಅಭಿನಂದನಾ ಗ್ರಂಥ ‘ಅಯನ’ವನ್ನು ಓದಿದೆ. ಆಗಲೇ ನನಗೆ ಅವರ ಪ್ರತಿಭೆ-ಪರಿಶ್ರಮದ ಕಿಂಚಿತ್ತು ಅರಿವು ಮೂಡಿದ್ದು.
ಅದೇನೊ ತತ್ಕ್ಷಣದ ಸ್ಫೂರ್ತಿಯಿಂದ ಅವರಿಗೆ ಫೊನಾಯಿಸಿದೆ, ಪರಿಚಯ ಹೇಳಿಕೊಂಡೆ, ನನ್ನ ಪ್ರವರ-ಹವ್ಯಾಸಗಳ ಬಗ್ಗೆಯೂ ಕೊಚ್ಚಿಕೊಂಡೆ. ತಾಳ್ಮೆಯಿಂದ ಕೇಳಿದರು. ಕನ್ನಡದಲ್ಲಿ ತೋಚಿದಂತೆ ಗೀಚುವ ನನ್ನ ಹವ್ಯಾಸಕ್ಕೆ, ಸಮಾನಾಸಕ್ತರನ್ನು ಸೇರಿಸಿ ಒಂದು ಜಾಲತಾಣವನ್ನು ನಿರ್ಮಿಸಿದರೆ ಹೇಗೆ ಎಂಬ ಐಡಿಯ ಬಂತು. ಇದಕ್ಕೂ ಅವರ ಸಲಹೆ ಕೇಳಿದೆ. ಆಮೇಲೆ ಹಲವು ಬಾರಿ ಅವರಿಗೆ ಬಿಡುವು ಇದೆಯೋ ಇಲ್ಲವೋ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳದೆ ಫೋನ್ ಮಾಡಿದ್ದೇನೆ. ನಕ್ಷತ್ರಿಕನ ಹಾಗೆ! ಯಾಕೆಂದರೆ, ಅವರು “ಯಾವ ವರ್ಷದ ಸರ್?” ಎಂಬ ಪ್ರಶ್ನೆ ನನ್ನನ್ನು ಕಾಡುವುದಿಲ್ಲ!
ನನ್ನ ಜಾಲತಾಣಕ್ಕೆ ಅವರು ಸೂಚಿಸಿದ ಹೆಸರು ‘ಸುರಗಿ, ಸುರಹೊನ್ನೆ’ ಬಹಳ ಇಷ್ಟವಾಯಿತು. ಹೀಗೆ www.surahonne.com ಎಂಬ ಕನ್ನಡ ಜಾಲತಾಣ ರೂಪುಗೊಂಡಿದೆ. ಇದು ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ ಮೀಸಲು. ಸದಭಿರುಚಿಯ ಬರಹಗಳಿಗೆ ಸದಾ ಸ್ವಾಗತ. ಕೇವಲ ಎರಡು ವಾರಗಳ ಹಿಂದೆ ರೂಪುಗೊಂಡ ಈ ಜಾಲತಾಣಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯೆಂಬುದು ಸಂತಸದ ವಿಚಾರ.
ಹಾಗಾಗಿ, ಈ ಲೇಖನವನ್ನು, ನನ್ನ ಕಲ್ಪನಾಲಹರಿಗೆ ಒಂದು ಸುಂದರವಾದ ಹೆಸರನ್ನಿಟ್ಟು ಶುಭ ಹಾರೈಸಿದ ಗುರುವಿಗೆ ಅರ್ಪಿಸುತ್ತಿದ್ದೇನೆ.
ಹೇಮಮಾಲಾ. ಬಿ. ಮೈಸೂರು
28 ಜನವರಿ 2014
Nice
Thanks
very good idea mala. Mathe aparoopada vishaya…
ಬಹಳ ಸಂತಸದ ವಿಚಾರ.ಶುಭ ಹಾರೈಕೆಗಳು.ಈ ತಾಣವು .ಸುರಗಿ ಮಾಲೆಯಂತೆ ಕಂಪು ಬೀರಿ ಹೊನ್ನ ಮಾಲೆಯಾಗಲಿ.
ನನ್ನ ಉಪಾದ್ಯಾಯರು ಒಂದೆರಡು ಜನ ಮಾತ್ರ ಬದುಕಿದ್ದಾರೆ .ಅವರೆಲ್ಲಾದರೂ ಸಿಕ್ಕಿದರೆ ದೊರಕುವ ಆನಂದವೇ ಬೇರೆ. ನಿಮ್ಮ ಲೇಖನ ಸೊಗಸಾಗಿದೆ. ಫೊಟೋ ಕಳಿಸಿದ್ದಕ್ಕೆ ಧನ್ಯವಾದಗಳು.
ಸೋಮಶೇಖರ್ ಏ.ಜಿ.
ನೈಸ್ ಆರ್ಟಿಕಲ್