ಕೊಪ್ಪಳದ ಸಮ್ಮೇಳನ ನಿಜಕ್ಕೂ ಅವಿಸ್ಮರಣೀಯ..!

Share Button
K.B Veeralinganagoudar

ವೀರಲಿಂಗನಗೌಡ್ರ, ಬಾದಾಮಿ.

ಕನ್ನಡ ಭಾಷೆ ಮತ್ತು ಸಮಾನತೆಯ ಉಳುವಿಗಾಗಿ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸಬೇಕು, ಅದರಲ್ಲೂ ಸರಕಾರಿ ಶಾಲೆಗಳಲ್ಲಿಯೇ ಓದಿಸಬೇಕೆಂದು ಕೆಲವರು ವಾದಿಸುತ್ತಿದ್ದಾರೆ. ಈ ಕುರಿತು ನಾವು ವಾಸ್ತವಿಕವಾಗಿ ಆಲೋಚಿಸಿದಾಗ ಇಂದಿನ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳ ಅರ್ಭಟಕ್ಕೆ ನಲುಗಿ ಹೋಗಿವೆ. ದುರಂತದ ಸಂಗತಿ ಏನೆಂದರೆ, ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಹಾಕಿದ್ದಾರೆ. ಈ ಮೂಲಕ ಸರಕಾರಿ ಶಾಲೆಗಳ ಗುಣಮಟ್ಟ ಸಂಪೂರ್ಣ ಕುಸಿದಿದೆ ಅನ್ನೊ ಸತ್ಯವನ್ನು ಸರಕಾರಿ ಶಾಲೆಗಳ ಶಿಕ್ಷಕರೆ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಇನ್ನು ಸಮಾಜವಾದಿ ವ್ಯಕ್ತಿಯೊರ್ವ ತನ್ನ ಮಗುವನ್ನು ಸರಕಾರಿ ಶಾಲೆಯಲ್ಲಿ ಓದಿಸಲು ಇಚ್ಚಿಸಿದರೆ, ಆತನ ಪತ್ನಿ ಖಾಸಗಿ ಶಾಲೆಯಲ್ಲಿಯೇ ಓದಿಸಬೇಕೆಂದು ಹಠ ಹಿಡಿಯುತ್ತಾಳೆ.

school2ಒಟ್ಟಾರೆ ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆ ಹಾಗೂ ಸರಕಾರಿ ಬಸ್ಸುಗಳ ಸ್ಥಿತಿ-ಗತಿ ಗೊಂದಲದ ಗೂಡಾಗಿದೆ. ಇಂದು ಹೆಚ್ಚುಕಮ್ಮಿ ಎಲ್ಲರೂ ಖಾಸಗಿಕರಣವನ್ನೆ ಅವಂಬಿಸಿದ್ದಾರೆ, ಆದರೆ ಸರಕಾರಿ ನೌಕರಿ ಅಂದ್ರೆ ಮಾತ್ರ ಎಲ್ಲರೂ ಜೊಲ್ಲು ಸುರಿಸುತ್ತಾರೆ. ಇದರರ್ಥ ಸರಕಾರದ ವ್ಯವಸ್ಥೆ ಅದೇಷ್ಟು ಹದಗೆಟ್ಟಿದೆ ಅನ್ನೊದನ್ನು ಈ ಮೂಲಕ ನಾವು ಉಹಿಸಬಹುದು. ಸರಕಾರ ಮತ್ತು ಶಿಕ್ಷಣ ಇಲಾಖೆಯವರ ನಿರ್ಲಕ್ಷ್ಯವನ್ನು ಅರಿತುಕೊಂಡೆ ಸಣ್ಣಪುಟ್ಟ/ಬೀದಿಬದಿಯ ವ್ಯಾಪಾರಸ್ಥರು ಖಾಸಗಿ ಶಾಲೆಗಳನ್ನು ತೆರೆದುಕೊಂಡು ತಮ್ಮ ಕುಲಕಸಬಗಿಂತ ಈ ‘ಕಾನ್ವೆಂಟ್ ಸ್ಕೂಲ್ ಕಸಬೆ’ ಚನ್ನಾಗಿದೆ ಎಂದು ಮನದಟ್ಟು ಮಾಡಿಕೊಂಡಿದ್ದಾರೆ.

ಇಂದು ಓಣಿಗೊಂದೊಂದು ಶಾಲೆ ತೆರೆದುಕೊಂಡು ಗರಿಗರಿಯಾದ ಬಟ್ಟೆತೊಟ್ಟು, ಚಹಾಪುಡಿ ಮಾರುವವರು ಕೂಡಾ ದುಬಾರಿ ಕಾರಿನಲ್ಲಿ ಅಲೆದಾಡುತ್ತಾ ಶಾಲೆಯ ಚೇರ್‍ಮನ್ನರಾಗಿದ್ದಾರೆ. ಇಂತಹವರ ಸಂಸ್ಥೆಯಲ್ಲಿ ಪದವಿ, ಪಿ.ಹೆಚ್.ಡಿ ಓದಿಕೊಂಡವರು ಚೇ(ಚೊ)ರ್‍ಮನ್ನನ ವಿಚಿತ್ರ ಚಿತ್ರಹಿಂಸೆಯನ್ನು ಎಲ್ಲೂ ಚಿತ್ರಿಸಲಾಗದೆ ಚಿಂತೆ ಎಂಬ ಚಿತೆಯಲ್ಲಿ ನಿತ್ಯ ಬೇಯುತ್ತಿದ್ದಾರೆ. ‘ಶಿಕ್ಷಣದ ಗಂಧ-ಗಾಳಿ ಗೊತ್ತಿರದವರ ಕೈಯಲ್ಲಿ ಸುಶಿಕ್ಷಿತರ ಗೋಳಾಟ’ ಈ ಕುರಿತು ಒಂದು ಅಧ್ಯಯನ ನಡೆಯಬೇಕಿದೆ. ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಬರುವ ಸಂಶೋಧನಾ ಪ್ರಬಂಧಗಳ ವಿಷಯವೇ ತುಂಬಾ ವಿಚಿತ್ರವಾಗಿವೆ. ಜ್ವಲಂತ ಸಮಸ್ಯೆಗಳನ್ನು ಮುಚ್ಚಿಟ್ಟು ಕಾಟಾಚಾರದ ವಿಷಯಗಳನ್ನೆ ಮುಂದಿಟ್ಟುಕೊಂಡು ಡಾಕ್ಟರೇಟ್ ಪದವಿ ಪ(ಹೊ)ಡೆದುಕೊಳ್ಳುವವರ ಸಂಖ್ಯೆಯೂ ಕೂಡಾ ಅತೀಯಾಗುತ್ತಿರುವುದು ಶೋಚನೀಯ.

Koppalaಇತ್ತೀಚಿಗೆ ಕೊಪ್ಪಳ ಜಿಲ್ಲಾ ೨ನೇ ವಾರ್ಷಿಕ ಲೇಖಕರ ಸಮಾವೇಶವನ್ನು ‘ಕೊಪ್ಪಳ ಸಾಹಿತ್ಯ ಸೌರಭ’ ಶಿರ್ಷಿಕೆಯಡಿಯಲ್ಲಿ ಗೆಳೆಯರು ನಡೆಸಿದ ಒಂದು ಚಿಂತನಾ ಗೋಷ್ಠಿಯಲಿ ನಾನೂ ಪಾಲ್ಗೊಂಡಿದ್ದೆ, ತನ್ನಿಮಿತ್ಯ ಸರಕಾರಿ ಶಾಲೆ/ಸರಕಾರ ಮತ್ತು ಪ್ರಸಕ್ತ ವ್ಯವಸ್ಥೆಯ ಕುರಿತು, ಶಿವಮೊಗ್ಗದಿಂದ ಪ್ರಕಟವಾಗುವ ‘ಹೊಸ ಮನುಷ್ಯ’ ಸಮಾಜವಾದಿ ಪತ್ರಿಕೆಯ ಸಂಪಾದಕರಾದ ಡಿ.ಎಸ್.ನಾಗಭೂಷಣರು ಮಾತನಾಡುತ್ತಾ ಗೆಳೆಯರೆ, ‘ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿಯೇ ಓದಿಸಿರಿ, ಓದಿಸಲು ಸಾಧ್ಯವಾಗದಿದ್ದರೆ ಕೊನೆಯ ಪಕ್ಷ ಒರ್ವ ದಲಿತ ಅಥವಾ ಹಿಂದುಳಿದ ಮಗುವನ್ನು ನೀವೇ ಮನೆಯಲ್ಲಿಟ್ಟುಕೊಂಡು ನಿಮ್ಮ ಮಗುವಿನೊಡನೆ ಓದಿಸಿರಿ. ಹೀಗೆ ಮಾಡುವುದರ ಮೂಲಕವಾದರೂ ಸಮಾಜವಾದದ ಆಶಯವನ್ನು ಸಾಕಾರಗೊಳಿಸಬೆಕೆಂದು ಕರೆ ನೀಡಿದರು. ಸಾಹಿತ್ಯ ಸೌರಭದಲ್ಲಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಹೇಮಾ ಪಟ್ಟಣಶೆಟ್ಟಿ, ಅಬ್ಬಾಸ ಮೇಲಿನಮನಿ, ವಿಜಯಕಾಂತ ಪಾಟೀಲ ಹಾಗೂ ಅಲ್ಲಾ ಗಿರಿರಾಜ್ ಮುಂತಾದ ಹಿರಿಕಿರಿ ಸಾಹಿತಿಗಳು ಸಕ್ರೀಯವಾಗಿ ಪಾಲ್ಗೊಂಡಿದ್ದರು. ಒಟ್ಟಾರೆ ಸಾಮಾಜಿಕ ಕಳಕಳಿಯುಳ್ಳ ಕೊಪ್ಪಳದ ಅಕ್ಬರ್ ಕಾಲಿಮಿರ್ಚಿ, ಡಿ.ಎಂ.ಬಡಿಗೇರ, ಶಿ.ಕಾ.ಬಡಿಗೇರ ಈ ಎಲ್ಲ ಗೆಳೆಯರು ಸರಕಾರದ ಧನಸಹಾಯವಿಲ್ಲದೆ ಸಾಹಿತ್ಯ ಮತ್ತು ಸಾಮಾಜಿಕ ತಲ್ಲಣಗಳ ಕುರಿತು ಅರ್ಥಪೂರ್ಣವಾದ ಗೋಷ್ಠಿಗಳನ್ನು ನಡೆಸಿದ್ದು ನಿಜಕ್ಕೂ ಸ್ಮರಣೀಯ.

-ವೀರಲಿಂಗನಗೌಡ್ರ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: