ಚಾರಣದ ಮೊದಲ ಹೆಜ್ಜೆ

Share Button

ಮೈಸೂರು ಹಾಗೂ ಸುತ್ತಮುತ್ತ ತೆರೆದಿಟ್ಟ ಸುಂದರ ಪ್ರಕೃತಿಯಲ್ಲಿ ಚಾರಣವೇ ಒಂದು ಅದ್ಭುತ ಅನುಭವ. ಇತ್ತೀಚೆಗೆ ಮೈಸೂರಿಗೆ ಬಂದ ನನಗೆ ಒಕ್ಟೋಬರ್ 12, 2014 ರ ಚಾರಣವು ಯೂಥ್ ಹಾಸ್ಟೆಲ್ ಮೂಲಕ ಮೊದಲ ಚಾರಣ.

ಮೈಸೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಸೋಮನಾಥಪುರ, ಉಕ್ಕಲಗೆರೆ ಮಲ್ಲಿಕಾರ್ಜುನ ಬೆಟ್ಟ, ವಡಗಲ್ಲು ರಂಗನಾಥಸ್ವಾಮಿ ಬೆಟ್ಟಗಳ ಚಾರಣಕ್ಕೆ 22  ಮಂದಿಯ ನಮ್ಮ ತಂಡವು ಮಿನಿ ಬಸ್ ಒಂದರಲ್ಲಿ, ಮೈಸೂರಿನಿಂದ ಬೆಳಗ್ಗೆ  06.45 ರ ಸುಮಾರಿಗೆ ಹೊರಟಿತ್ತು. ಸುಮಾರು 8.30 ರ ಹೊತ್ತಿಗೆ ಸೋಮನಾಥಪುರ ತಲುಪಿದೆವು. ಅಲ್ಲಿ ಇಡ್ಲಿ-ಚಟ್ನಿ-ಸಾಂಬಾರುಗಳ ರುಚಿಕಟ್ಟಾದ ಉಪಾಹಾರ ಮುಗಿಸಿ ಪಕ್ಕದ ಟೀ ಸ್ಟಾಲ್ ನಲ್ಲಿ ಚಹಾ ಸೇವನೆಯಾಗುತ್ತಿದ್ದಂತೆಯೇ ದೇವಸ್ಥಾನದ ಗೇಟು ತೆರೆದಿತ್ತು. ಸೋಮನಾಥಪುರವು ಹೊಯ್ಸಳರ ಕಾಲದ ಅತ್ಯಂತ ಸುಂದರವಾದ ದೇವಾಲಯ. ಪ್ರತಿಯೊಂದು ಕಂಬ, ಮಂಟಪ, ವಿಗ್ರಹಗಳ ಇಂಚಿಂಚೂ ವೈಶಿಷ್ಟ್ಯತೆಯಿಂದ ಕೂಡಿದ್ದು ಅಲ್ಲಲ್ಲಿ ಅವನ್ನು ಕೆತ್ತಿದ ಶಿಲ್ಪಿಗಳ ಹೆಸರನ್ನು ಹಳೆಗನ್ನಡ ಲಿಪಿಯಲ್ಲಿ ಕೆತ್ತಲಾಗಿದೆ. ಮೈಸೂರಿಗರು ಎಷ್ಟು ಬಾರಿ ಬಂದರೂ ಮತ್ತೆ ಮತ್ತೆ ಭೇಟಿ ನೀಡುವ ಸುಂದರ ಸ್ಥಳಗಳಲ್ಲೊಂದು.

ಅಲ್ಲಿಂದ ಮುಂದೆ ಉಕ್ಕಲಗೆರೆಯಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದತ್ತ ನಮ್ಮ ಬಸ್ಸು ಹೊರಟಿತು. ಕಿಟಿಕಿಯಿಂದಾಚೆ ಎತ್ತ ಕಣ್ಣು ಹಾಯಿಸಿದರೂ ಹಸಿರಿನ ಬೇರೆ ಬೇರೆ ಗದ್ದೆ, ತೋಟಗಳು. ನಿಜಕ್ಕೂ ಕಣ್ಮನ ತಂಪಾಗಿಸುವ ಯಾತ್ರೆಯಾಗಿತ್ತು ಅದು. ಮಲ್ಲಿಕಾರ್ಜುನ ಬೆಟ್ಟದ ತಪ್ಪಲಿಗೆ ಬಂದಿಳಿದು ಅಲ್ಲಿಂದ ಮೆಟ್ಟಿಲುಗಳ ಮೂಲಕ ಬೆಟ್ಟವನ್ನು ಹತ್ತಬೇಕಾಗಿತ್ತು. ಸುಮಾರು 650 ಮೆಟ್ಟಿಲುಗಳನ್ನು ಹತ್ತಿದರೆ ಅಲ್ಲಿ ಮಲ್ಲಿಕಾರ್ಜುನ ಸ್ವಾಮಿ ಕ್ಶೇತ್ರವು ಕಾಣಸಿಗುತ್ತದೆ. ಮೆಟ್ಟಿಲುಗಳಲ್ಲಿ ಅಲ್ಲಲ್ಲಿ ನೆರಳಿಗಾಗಿ ಶೀಟ್ ಗಳ ಮಾಡನ್ನು ಹೊದಿಸಲಾಗಿದ್ದು ಅಲ್ಲಿ ನಿಂತು ಕೆಳಕ್ಕೆ ದಿಟ್ಟಿಸಿದಾಗ ಹಸಿರು ಹಾಸಿದ ಸುಂದರ ಪ್ರಪಂಚವೇ ಕಾನಸಿಗುತ್ತದೆ. ಅಲ್ಲಲ್ಲಿ ಸ್ಥಬ್ಧವಾಗಿ ಕೆಳಗಿನ ಹಳ್ಳಿ, ಹೊಳೆ, ಕೆರೆಗಳ ಚಿತ್ರವನ್ನು ನೋಡುತ್ತಾ ಸಾಗಿದೆವು. ಮಳೆರಾಯನ ಆಗಮನವನ್ನು ನಿರೀಕ್ಶಿಸಿದ್ದ ನಮಗೆ ರೈನ್ ಕೋಟುಗಳನ್ನು ಹೊರತೆಗೆಯಬೇಕಾಗೇ ಬರಲಿಲ್ಲ, ಕೊನೆಗೆ ಬೆಟ್ಟದ ತುದಿ, ಅಂದರೆ ದೇವಸ್ಥಾನದ ಬುಡಕ್ಕೆ ತಲುಪಿ ಅಲ್ಲಿಯ ನಲ್ಲಿಯಲ್ಲಿ ಬರುತ್ತಿದ್ದ ಸಿಹಿ ನೀರನ್ನು ಕುಡಿದು, ಮುಖಕ್ಕೆ ಎರಚಿಕೊಂಡಾಗ ಆಯಾಸದ ಕುರುಹೇ ಇಲ್ಲವಾಗಿತ್ತು. ದೇವರ ದರ್ಶನ ಮಾಡಿ ಅಲ್ಲೇ ಗಾಳಿಗೆ ಕುಳಿತೆವು,

ಆಯೋಜಕರು ತಿಳಿಸಿದಂತೆ ಮುಂದೆ ಎದುರಿಗೇ ಕಾಣುತ್ತಿದ್ದ ದೊಡ್ದ ಬೆಟ್ಟದ ತಪ್ಪಲಿನತ್ತ ಇಳಿಯತೊಡಗಿದೆವು. ಅಷ್ಟರಲ್ಲಾಗಲೇ ಬಿಸಿಲಿನ ಝಳವಿಳಿದು ಹವೆ ತಂಪಾಗತೊಡಗಿತ್ತು, ತಂಪು ಗಾಳಿಯನ್ನು ಸವಿಯುತ್ತಾ ಮತ್ತಷ್ಟು ಉತ್ಸ್ಸಾಹ ತುಂಬಿಕೊಂಡು ನಡೆಯತೊಡಗಿದ್ದರು ಎಲ್ಲರೂ. ಬೆಟ್ಟದ ತಪ್ಪಲಿಗೆ ತಲಪಿದಾಗ ಎಲ್ಲರೂ ತಮ್ಮ ತಮ್ಮ ಸಂಕ್ಷಿಪ್ತ ಪರಿಚಯ ಮಾಡಿಕೊಂಡೆವು. ತಂಡದಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರೂ ಇದ್ದರು, ಉತ್ಸುಕತೆ, ಸರಳತೆಗಳಲ್ಲಿ ಎಲ್ಲರೂ ಸಮಾನವಾಗಿದ್ದು ವರ್ಷಗಳಿಂದ ಪರಿಚಿತರೇನೋ ಎಂಬಂತೆ ಮಾತನಾಡುತ್ತಾ ಹೆಜ್ಜೆ ಹಾಕುತ್ತಿದ್ದುದು ವಿಶೇಷ!

ದಾರಿ ಮಧ್ಯದಲ್ಲಿ ಮರವೊಂದರಲ್ಲಿ ಹತ್ತಾರು ಗೀಜಗನ ಹಕ್ಕಿಯ ಗೂಡುಗಳನ್ನು ಕಂಡೆವು. ಗೂಡು ಕಟ್ಟುವ ಕಾಯಕದಲ್ಲಿದ್ದ ಹಕ್ಕಿಗಳ ಏಕಾಗ್ರತೆಗೆ ಧಕ್ಕೆ ಬರದಂತೆ ನಿಶ್ಶಬ್ಧತೆಯಿಂದ ವೀಕ್ಷಿಸಿದೆವು. ನಂತರ ತಂದಿದ್ದ ತಿಂಡಿಗಳನ್ನು ಖಾಲಿ ಮಾಡಿ ಮುಂದೆ ನಡೆದೆವು. ಆಯೋಜಕರು ನೀಡಿದ ಮಾಹಿತಿಯಂತೆ ಇದೇ ಬೆಟ್ಟದಲ್ಲಿ ಹಿಂದೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವು ಪ್ರತಿಷ್ಟಾಪನೆಯಾಗಿದ್ದು ಮುಂದೆ ಕಾರಣಾಂತರಗಳಿಂದ ಸ್ಥಳಾಂತರವಾಯಿತಂತೆ. ನಿಜವೆಂಬಂತೆ, ಬೆಟ್ಟವೇರುತ್ತಾ ಹೋದಂತೆ ಕಲ್ಲ ಹಾಸಿನ ಮೆಟ್ಟಿಲುಗಳು ದೊರೆಯುತ್ತವೆ. ಏರಿದಂತೆ ಪ್ರಕೃತಿಯ ಅದ್ಭುತ ಸೃಷ್ಟಿಯೆಂಬಂತೆ ಕಾಣಸಿಗುವ ಹತ್ತಾರು ಹೂ, ಗಿಡ, ಕಾಯಿಗಳ ಪರಿಚಯವಾಗುತ್ತಿತ್ತು, ಹೆಚ್ಚೂಕಡಿಮೆ ಮುಕ್ಕಾಲು ಘಂಟೆಯಲ್ಲ್ಲಿ ಬೆಟ್ಟ ಪೂರ್ತಿ ಏರಿ ತುದಿ ತಲುಪಿದೆವು, ಅಲ್ಲಿ ಪುಟ್ಟದೊಂದು ದೇವಾಲಯದ ಚಿಹ್ನೆಗಳಿದ್ದುವು. ನೆಲದೆತ್ತರಕ್ಕೆ ಕಲ್ಲಿನ ಹಾಸುಗೆಗಳು, ಅದರ ಸಂದಿಯೊಂದರಲ್ಲಿ ಬಗ್ಗಿ ನೋಡಿದಾಗ ಅರಶಿನ ಕುಂಕುಮಗಳನ್ನು ಚೆಲ್ಲಿ ಪೂಜಿಸಿದಂತಹ ಕುರುಹುಗಳು ಕಾಣ ಸಿಕ್ಕಿದುವು. ಕಲ್ಲಿನ ಹಾಸುಗೆಗಳ ಮತ್ತ್ತೊಂದು ಬದಿಗೆ ಬಂದಾಗ ಅಲ್ಲಿ ಒಳಕ್ಕೆ ಹೋಗಲು ಪುಟ್ಟದೊಂದು ದ್ವಾರ ಕಾಣಸಿಕ್ಕಿತು. ಒಳ ಹೊಕ್ಕು ನೋಡಿದಾಗ ಅಲ್ಲೂ ಕೂಡಾ ಪುಟ್ಟ ಕಂಬಗಳು, ಮುಂದೊಂದು ಗರ್ಭಗುಡಿಯಂತಹ ರಚನೆ ಕಂಡು ಬಂತು, ಅಲ್ಲೇ ಬದಿಗೆ ಕುಳಿತು ವಿಶ್ರಮಿಸಿದೆವು.

ಮಳೆರಾಯನಾಗಲೀ ಬಿಸಿಲುರಾಯನಾಗಲೀ ಸ್ವಲ್ಪವೂ ತೊಂದರೆ ಕೊಡದಿದ್ದುದರಿಂದ ಸ್ವಲ್ಪ ಹೆಚ್ಚೇ ಹೊತ್ತು ಅಲ್ಲಿಯ ಪ್ರಶಾಂತತೆಯಲ್ಲಿ ಪ್ರಕೃತಿಯ ಸಂಗೀತವನ್ನು ಆಸ್ವದಿಸುತ್ತಾ ವಿಶ್ರಮಿಸಿದೆವು. ಮುಂದೆ ತಂಡದಲ್ಲಿದ್ದ ಎಲ್ಲರಿಗೂ ಹೊಟ್ಟೆ ತಾಳ ಹಾಕತೊಡಗಿತಾದ್ದರಿಂದ ಬೆಟ್ಟವನ್ನು ಇಳಿದೆವು. ಮಧ್ಯ ದಾರಿಯಲ್ಲಿ ಒಂದೆಡೆ ವಿಶ್ರಾಂತಿ ಮಾಡಿ ಹಾಡು, ಹರಟೆಗಳಾದುವು. ಮುಂದೆ ಬಹಳ ಬೇಗನೆ ಬಸ್ಸಿದ್ದೆಡೆಗೆ ತಲುಪಿ ತಂದಿದ್ದ ಮೊಸರನ್ನ, ರೈಸ್ ಭಾತ್,  ಲಾಡು, ಮಸಾಲೆ ವಡೆಗಳ ಊಟವಾಯಿತು, ಈ ಮಧ್ಯೆ ಮಳೆಯ ಸಣ್ಣ ಹನಿಗಳುದುರಿ ಬೆಟ್ಟಗಳನ್ನೇರಿ ಇಳಿದ ಆಯಾಸವು ಹೇಳ ಹೆಸರಿಲ್ಲದಂತೆ ಮಾಯವಾಯಿತು.

ಮುಂದಿನ ಗುರಿಯಾದ ವಡಗಲ್ಲು ರಂಗನಾಥಸ್ವಾಮಿ ಬೆಟ್ಟದತ್ತ ಬಸ್ಸು ಹೊರಟಿತು, ಅಲ್ಲಿಂದ ಅರ್ಧ ಗಂಟೆಯಲ್ಲಿ ದೇವಸ್ಥಾನದ ಮುಂದೆ ನಮ್ಮ ಬಸ್ಸು ನಿಂತಿತು. ವಡಗಲ್ಲು ರಂಗನಾಥ ಸ್ವಾಮಿ ದೇವಾಲಯದ ಪ್ರವೇಶ ದ್ವಾರದಿಂದ ಹಿಡಿದು ಹಿಂದಿರುಗುವಾಗಿನ ಮೆಟ್ಟಿಲುಗಳ ತನಕ ಎಲ್ಲವೂ ವಿಶೇಷ ಹಾಗೂ ಸುಂದರವಾಗಿತ್ತು. ದೇವಸ್ಥಾನದ ಒಳಾಂಗಣದ ಗೋಡೆಗಳನ್ನು ಮುಟ್ಟಿ ನೋಡಿದಾಗ ಅದು ಪೂರ್ತಿ ಒಂದು ಕಲ್ಲನ್ನು ಕೊರೆದು ನಿರ್ಮಿಸಿದುದೆಂದು ತಿಳಿಯಿತು. ಆದುದರಿಂದಲೇ ಏನೋ ಒಳಗೆ ತುಂಬಾ ತಂಪಾಗಿ ಹಿತವಾಗಿತ್ತು. ಅಲ್ಲಿನ ಅರ್ಚಕರೇ ತಿಳಿಸಿದಂತೆ ಏನೋ ಹೆಸರು ಬರಲು ಒಂದು ದಂತಕಥೆಯಿದೆ. ಹಿಂದೆ ರಾಜಕುಮಾರಿಯೊಬ್ಬಳು ಕಲ್ಲಾಟವಾಡುವಾಗ ಬಿದ್ದ ಐದು ಕಲ್ಲುಗಳಿಂದಲೇ ದೇವಸ್ಥಾನ ನಿರ್ಮಿತವಾಯಿತೆನ್ನುತ್ತಾರೆ. ಮಧ್ಯದ ಕಲ್ಲನ್ನು ಕೊರೆದು ದೇವಾಲಯದ ಗರ್ಭಗುಡಿ ನಿರ್ಮಿಸಲಾಯಿತಂತೆ, ದೇವಸ್ಥಾನದ ಬದಿಯಲ್ಲಿರುವ ಮೆಟ್ಟಿಲುಗಳನ್ನು ಹತ್ತಿ ಮೇಲ್ಭಾಗಕ್ಕೆ ಹೋದರೆ ಮತ್ತೆ ಪೂರ್ತಿಯಾಗಿ ಸುತ್ತಲಿನ ಪ್ರದೇಶದ ಸುಂದರ ದೃಶ್ಯವು ಕಾಣಸಿಗುವುದು. ಸುತ್ತಲೂ ಬೃಹದ್ ಬಂಡೆಗಳು ಕಾಣಸಿಗುವುದು. ಅಲ್ಲಿನ ಪ್ರಶಾಂತತೆಯು ಅಪೂರ್ವವಾಗಿತ್ತು.

ಅಲ್ಲಿಂದ ಮುಂದೆ ಹಿಂದಿರುಗಲು ಮನಸ್ಸಿಲ್ಲದ ಮನಸ್ಸಿನಿಂದ ಮೆಟ್ಟಿಲುಗಳನ್ನಿಳಿದು ಬರುತ್ತಿದ್ದಂತೆ ಸುತ್ತಲೂ ಪೂರ್ತಿ ಹಚ್ಚ ಹಸಿರಿನ ಹೊದಿಕೆಯಿರುವ ಭೂಮಿ ಕಾಣಿಸಿತ್ತು. ಒಂದಿಂಚೂ ಬಿಡದೆ ವೀಕ್ಷಿಸುತ್ತಾ ನಡೆದ ನಮಗೆ ಬಸ್ಸು ತಲುಪಿದ್ದೇ ತಿಳಿಯಲಿಲ್ಲ, ಅಂದಿನ ಚಾರಣಕ್ಕೆ  ವಿದಾಯ ಹೇಳುವ ಸಮಯವಾಗಿತ್ತು.

ತಂಡವನ್ನು ಉತ್ತಮ ರೀತಿಯಿಂದ ಮುನ್ನಡೆಸಿ ಯಶಸ್ವಿಗೊಳಿಸಿದ ಡಾ| ಫ಼ತೇಹ್ ಖಾನ್ ಹಾಗೂ ಡಾ| ರಮಾರವರ ಅಪಾರ ತಾಳ್ಮೆ ಹಾಗೂ ಕಾಳಜಿ ಮೆಚ್ಚತಕ್ಕದ್ದು! ಆರಂಭದಿಂದ ಕೊನೆಯವರೆಗೂ ಎಲ್ಲಾ ವಯೋಮಾನದವರೂ ಪೂರ್ಣ ಹುರುಪಿನಿಂದ ಜೊತೆಗೂಡಿದ್ದ ತಂಡದ ಅಂದಿನ ಯಾನವು ಮತ್ತೆ ಮೈಸೂರು ತಲುಪುವುದರೊಂದಿಗೆ ಸಂಪನ್ನವಾಯಿತು.

 

– ಶ್ರುತಿ ಶರ್ಮಾ, ಕಾಸರಗೋಡು

14 Responses

  1. jayashree b kadri says:

    Nice narration Shruti.

  2. Pushpalatha Mudalamane says:

    ತುಂಬಾ ಚೆನ್ನಾಗಿದೆ ,ಚಾರಣ ಕಥನ !

  3. Pralhadrao Deshpande says:

    Very good trekking story

  4. Ramaprasad Natarajaiah says:

    thumbhu chennagide charaana vivara

  5. Dr.MV Rama says:

    ಶ್ರುತಿ, ತುಂಬ ಚೆನ್ನಾಗಿದೆ …. ಫೋಟೋಗಳು ಚೆನ್ನಾಗಿವೆ … ನಮ್ಮೊಡನೆ ಬಂದಿದ್ದಕ್ಕ ವಂದನೆಗಳು…

    • Shruthi Sharma says:

      ಧನ್ಯವಾದಗಳು ಡಾ|| ರಮಾ ಅವರೇ! ತುಂಬಾ ಚೆನ್ನಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದೀರಿ 🙂

  6. ಲೇಖನ ತುಂಬಾ ಚೆನ್ನಾಗಿದೇ… ನಿರಂತರವಾಗಿ ಬರೆಯುತ್ತಿರೀ

  7. Srividya says:

    ಸಮರ್ಪಕವಾದ ವಿವರಣೆ,ಒಳ್ಳೆ ಬರಹ. ಓದುಗರ ಪ್ರತಿಕ್ರಿಯೆಗಳೂ ಕನ್ನಡದಲ್ಲೇ ಇದ್ದಾರೆ ಇನ್ನೂ ಚೆನ್ನ!

  8. Shruthi Sharma says:

    ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.. 🙂

  9. savithrisbhat says:

    ಚಾರಣ ಕಥನ ಚೆನ್ನಾಗಿ ಬರೆದಿದ್ದೀರಿ .ಓ ದಿನ ಮಧ್ಯೆ ಯೂ ಕನ್ನಡದ ಕ೦ಪನ್ನುಸೂಸಿದ ನಿಮಗೆ ಶುಭವಾಗಲಿ

  10. Aman says:

    ಚಾರಣದ ಸವಿ ಅನುಭವಗಳನ್ನು ನಮ್ಮೊಂದಿಗೆ ಹಂಚಿ ಕೊಂಡಿದ್ದಕ್ಕೆ ಧನ್ಯವಾದಗಳು…
    ಇದೇ ರೀತಿ ಇನ್ನು ಅನೇಕ ರಸವಥಾದ ಸನ್ನಿವೇಶ ಅವಕಾಶಗಳು ಒದಗಿ ಬಂದು ನಮಗೆ ಸಾಹಿತ್ಯ ರೂಪದಲ್ಲಿ ಉಣಬಡಿಸುವಿರಿ ಎಂದು ಆಶಿಶುತ್ತೇನೆ .

    ಅಮಾನ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: