ಗವಿರಾಯಸ್ವಾಮಿ ಬೆಟ್ಟವೂ, ಚುಕ್ಕಿ ಜಲಪಾತಗಳೂ..

Share Button

ಕನ್ನಡ ನಾಡಿನ ಜೀವನದಿ ತನ್ನ ಉಗಮ ಸ್ಥಾನದಿಂದ ಸಾಗರ ಸೇರುವ ವರೆಗೆ ಅನೇಕಾನೇಕ ಪುಣ್ಯ ಕ್ಷೇತ್ರಗಳನ್ನು ಸೃಷ್ಟಿಸಿರುವ ಹಿರಿಮೆಗೆ ಪಾತ್ರಳಾಗಿದ್ದಾಳೆ. ಕರ್ನಾಟಕದ ಅಷ್ಟೇಕೆ ದಕ್ಷಿಣ ಭಾರತದ ಹತ್ತು ಹಲವಾರು ದೈವ ಸನ್ನಿಧಿಯ ಪುಣ್ಯ ಸ್ಥಳಗಳು ಕಾವೇರಿ ನದಿಯ ದಂಡೆಯಲ್ಲೇ ಇವೆ. ಇಂತಹ ಹಲವಾರು ಪುಣ್ಯ ಕ್ಷೇತ್ರಗಳಲ್ಲಿ ಇಂದಿನ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ಯಗಾಲದ ಬಳಿ ಇರುವ ಶಿವನಸಮುದ್ರವೂ ಒಂದು. ಇಲ್ಲಿ ಕಾವೇರಿ ನದಿ ಸೃಷ್ಟಿಸಿರುವ ಮನಮೋಹಕ ದ್ವೀಪವೇ ಶಿವನಸಮುದ್ರ. ಮಧ್ಯರಂಗವೆಂದು ಖ್ಯಾತಿಯಾಗಿರುವ ಜಗನ್ಮೋಹನ ರಂಗನಾಥನ ಸಾನ್ನಿಧ್ಯವೇ ಶಿವನ ಸಮುದ್ರ. ಇಲ್ಲಿ ಸುತ್ತಲೂ ಕಾಣುವ ಹಲವು ಪರ್ವತ ಶ್ರೇಣಿಗಳಲ್ಲಿ ಶ್ರೀ ಗವಿರಾಯಸ್ವಾಮಿ ಪರ್ವತವೂ ಒಂದಾಗಿದೆ.

ಚಾಮುಂಡಿಬೆಟ್ಟದಷ್ಟೇ ಎತ್ತರವಾದ ಶ್ರೀ ಗವಿರಾಯಸ್ವಾಮಿ ಪರ್ವತದಲ್ಲಿ ಶ್ರೀರಾಮನು ಗದಾಧರನೆಂಬ ಹೆಸರಿನಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ಪ್ರಕೃತಿ ಸಹಜವಾದ ಕಲ್ಲು ಬಂಡೆಗಳ ಹಾದಿಯಲ್ಲಿ ಪರ್ವತವನ್ನು ಏರುವುದಂತೂ ಒಂದು ದೊಡ್ಡ ಸವಾಲೇ ಆಗುತ್ತದೆ. ಪೌರಾಣಿಕ ಹಿನ್ನೆಲೆಯಿಂದ ಹೇಳುವುದಾದರೆ ನಮ್ಮ ಹಿಂದೂ ಸಂಸ್ಕೃತಿಯ ಜನಜನಿತ ಪುರಾಣಗಳಲ್ಲೊಂದಾದ ಶ್ರೀಮದ್ರಾಮಾಯಣದ ಕಥೆಯೇ ಶ್ರೀ ಗದಾಧರನ ಹಿನ್ನೆಲೆಯಾಗಿದೆ.

ರಾವಣನಿಂದ ಅಪಹರಿಸಲ್ಪಟ್ಟ ತನ್ನ ಪತ್ನಿ ಸೀತೆಯನ್ನು ಅನ್ವೇಷಣೆ ಮಾಡಿ ರಾವಣ ಸಂಹಾರಕ್ಕಾಗಿ ದಂಡಕಾರಣ್ಯ ಭಾಗದಲ್ಲಿ ಬರುತ್ತಾ ಶಿಲಾತಲ ಕ್ಷೇತ್ರವನ್ನು( ಇಂದಿನ ಶಿವನಸಮುದ್ರ) ತಲುಪಿ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿ ಅನಂದಿತನಾದವನು ಶ್ರೀರಾಮ. ವಸಿಷ್ಠರೇ ಮೊದಲಾದ ಮಹಾಋಷಿಗಳ ಮುಖೇನ ಈ ಕ್ಷೇತ್ರಗಳ ಮಹಾತ್ಮೆಯನ್ನು ತಿಳಿದುಕೊಂಡು ನಿತ್ಯ ನೈಮಿತ್ತಿಕ ಕರ್ಮಗಳನ್ನು ನೆರವೇರಿಸುತ್ತ ಅರಣ್ಯದಲ್ಲೇ ಸಂವಾರ ಮುಂದುವರಿಸುತ್ತಿರಲಾಗಿ ಮಾರ್ಗಮಧ್ಯೆ ನಯನಮನೋಹರವಾದ ಪರ್ವತವೊಂದು ಶ್ರೀರಾಮನಿಗೆ ಕಾಣಿಸಿತು. ಅದೇ ಶಂಭು ಪರ್ವತವನ್ನು ವೀಕ್ಷಿಸುತ್ತಿದ್ದ ರಾಮ ಲಕ್ಷ್ಮಣರನ್ನು ಆ ಪರ್ವತದ ವಾಸಿ ಶಂಭುಕನೆಂಬ ರಾಕ್ಷಸನು ಇವರ ಮೇಲೆ ಧಾಳಿ ಮಾಡಲು ಪ್ರಯತ್ನಿಸದ. ಕೋಪಾವಿಷ್ಟನಾದ ಲಕ್ಷ್ಮಣನು ಬಾಣಪ್ರಯೋಗ ಮಾಡಲು, ಹೆದರಿದ ಶಂಭುಕನು ಪರ್ವತದಲ್ಲಿದ್ದ ತನ್ನ ಗುಹೆಯನ್ನು ಸೇರಿಕೊಂಡನು.

ದುಷ್ಟ ಶಿಕ್ಷಣ ಶಿಷ್ಟ ರಕ್ಷಣಕ್ಕಾಗಿಯೇ ಅವತಾರವೆತ್ತಿದ್ದ ಶ್ರೀರಾಮನು ಶಂಭುಕನ ಸಂಹಾರಕ್ಕಾಗಿಯೇ ಮೋಹಿನಿ ರೂಪವನ್ನು ಧರಿಸಿ ಗುಹೆಯ ಬಳಿ ಸಂಚರಿಸುತ್ತಿದ್ದನು. ಆ ಸಂದರ್ಭದಲ್ಲಿ ಮೋಹಿನಿ ರೂಪಕ್ಕೆ ಮರುಳಾಗಿ ಹೊರ ಬಂದ ಶಂಭುಕನನ್ನು ಲಕ್ಷ್ಮಣನು ಒಂದೇ ಬಾಣದಿಂದ ಕೊಂದನು. ಮರಣ ಕಾಲದಲ್ಲಿ ಪೂರ್ವಜನ್ಮ ಸ್ಮರಣೆಯಿಂದ ಶರಣಾಗತನಾದ ಶಂಭುಕನು ತನ್ನ ಗವಿಯ ಬಾಗಿಲಲ್ಲಿ ನೆಲೆಸಿ ಭಕ್ತರನ್ನು ಅನುಗ್ರಹಿಸಬೇಕೆಂದು ಬೇಡಿಕೊಳ್ಳಲು ಶ್ರೀರಾಮನು ಅನುಗ್ರಹಿಸಿದನು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಬ್ರಹ್ಮನು ವಿಶ್ವಕರ್ಮನ ನೆರವಿನಿಂದ ಶಂಖ-ಚಕ್ರ-ಧನುರ್ಧಾರಿಯಾದ ಶ್ರೀರಾಮನ ವಿಗ್ರಹವನ್ನು ಪ್ರತಿಸ್ಠಾಪನೆ ಮಾಡಿ ಪಾಂಚರಾತ್ರಾಗಮ ವಿಧಿಯಿಂದ ಅರ್ಚಿಸಿದನು. ವರುಣನ ಅನುಗ್ರಹದಿಂದ ಉದ್ಭವಿಸಿದ ಜಲಪೂರ್ಣವಾದ ಪುಷ್ಕರಿಣಿಯು ಚಕ್ರತೀರ್ಥವೆಂದು ಪ್ರಸಿದ್ಧಿಯಾಗಿ ಇಂದಿಗೂ ಸಹ ದೇವಾಲಯದ ಬಳಿ ಇದೆ.

Kaveriಬ್ರಹ್ಮನ ಪ್ರಾರ್ಥನೆಯಂತೆ ಗದಾಧರನೆಂಬ ಹೆಸರಿನಿಂದ ಪ್ರಖ್ಯಾತನಾದ ಶ್ರೀರಾಮನು ಭಕ್ತರ ಕೋರಿಕೆಗಳನ್ನು ನೆರವೇರಿಸುತ್ತ ಗವಿರಾಯಸ್ವಾಮಿ ಪರ್ವತದಲ್ಲಿ ನೆಲೆಸಿದ್ದಾನೆ. ಶಂಭುಕನ ಮರಣ ಸಮಯದಲ್ಲಿ ಶ್ರೀರಾಮ ದರ್ಶನ ಕೊಟ್ಟ ಜಾಗದಲ್ಲಿ ಇಂದಿಗೂ ವಿಷ್ಣುಪಾದವನ್ನು ಕಾಣಬಹುದು. ಹೀಗಾಗಿ ಇದು ದಕ್ಷಿಣ ಗಯಾ ಕ್ಷೇತ್ರವೆಂದೇ ಪ್ರಸಿದ್ಧಿಯಾಗಿದೆ. ಪ್ರತಿವರ್ಷ ಚಾಂದ್ರಮಾನ ಫಾಲ್ಗುಣ ಮಾಸದಲ್ಲಿ ಇಲ್ಲಿ ರಥೋತ್ಸವ ನೆರವೇರುತ್ತದೆ.

ಈ ಪೌರಾಣಿಕ ಹಿನ್ನೆಲೆಯಿರುವ ಗವಿರಾಯಸ್ವಾಮಿ ಬೆಟ್ಟಕ್ಕೆ ಮೈಸೂರು ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಗಂಗೋತ್ರಿ ಘಟಕದಿಂದ ನಾವು ಒಟ್ಟು 22 ಮಂದಿ ಚಾರಣಿಗರು 17.08.2014 ರಂದು ತೆರಳಿ ಯಶಸ್ವಿಯಾಗಿ ಪೂರೈಸಿದೆವು. ಮೈಸೂರಿನಿಂದ ಮಿನಿ-ಬಸ್ ನಲ್ಲಿ ಹೊರಟ ನಮ್ಮ ತಂಡ ಬನ್ನೂರು-ಮಳವಳ್ಳಿ ರಸ್ತೆಯಲ್ಲಿ ಸಾಗಿ ಮಾರ್ಗಮಧ್ಯೆ ಕೊಳ್ಳೇಗಾಲದಲ್ಲಿ ಇಡ್ಲಿ-ವಡೆ ಉಪಾಹಾರ ಸೇವಿಸಿ, ಸತ್ಯಗಾಲ ಹ್ಯಾಂಡ್ ಪೋಸ್ಟ್ ಮೂಲಕ ಬೆಳಿಗ್ಗೆ ಸುಮಾರು 0930 ಗಂಟೆಗೆ ಬೆಟ್ಟದ ಪಾದವನ್ನು ತಲಪಿದೆವು. ಎಂದಿನಂತೆ ಸದಸ್ಯರ ಸ್ವಯಂಪರಿಚಯದ ನಂತರ ಎಲ್ಲ ಚಾರಣಿಗರು ಉತ್ಸಾಹದಿಂದ ಚಾರಣ ಆರಂಭಿಸಿದರು. ಎಲ್ಲರೂ ಸುಮಾರು 11 ಗಂಟೆಗೆ ಬೆಟ್ಟದ ಮೇಲಿನ ಗವಿರಾಯಸ್ವಾಮಿಯ ಸನ್ನಿಧಿಯನ್ನು ತಲುಪಿದೆವು. ಕಬ್ಬಿಣದ ಬಾಗಿಲಿನ ಕಿಂಡಿಯಿಂದ ಗದಾಧರನ ದರ್ಶನ ಎಲ್ಲರಿಗೂ ಆಯಿತು. ಬೆಟ್ಟದ ಮೇಲಿನಿಂದ ಕೆಳಗೆ ಕಾಣುವ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಾ ನೋಡಿ, ಕ್ಯಾಮೆರಾದಲ್ಲೂ ಸೆರೆ ಹಿಡಿದು ಕೆಳಗಿಳಿಯಲಾರಂಭಿಸಿದೆವು. ಕಾವೇರಿ ನದಿಗೆ ಕಟ್ಟಿರುವ ಎರಡೂ ಭವ್ಯ ಸೇತುವೆಗಳು ಮತ್ತು ಎರಡು ಕವಲುಗಳಾಗಿ ಒಂದು ಗಗನಚುಕ್ಕಿಯ ಕಡೆಗೂ ಇನ್ನೊಂದು ಭರಚುಕ್ಕಿಯ ಕಡೆಗೂ ಹರಿಯುವ ಕಾವೇರಿ ನದಿಯನ್ನು ಇಲ್ಲಿಂದ ಕಾಣಬಹುದು.

ಚಾರಣದ ಹಾದಿಯಲ್ಲಿ ನಡೆಯುವಾಗ ಒಂದು ನೀರಿನ ಝರಿಯ ಬಳಿ ಸ್ವಲ್ಪ ಸಮಯ ಕುಳಿತು ನಾವು ತಂದಿದ್ದ ಸಿಹಿ-ತಿಂಡಿ, ಕುರುಕಲು, ಹಣ್ಣು ಇತ್ಯಾದಿ ಸೇವನೆ ಮಾಡಿದೆವು. ಕಾರ್ಯಕ್ರಮದ ಇನ್ನೊಬ್ಬ ಅಯೋಜಕರಾಗಿದ್ದ ಶ್ರೀ ನಾಗೇಂದ್ರ ಪ್ರಸಾದ್ ಅವರು ಹಿರಣ್ಯಕಶಿಪುವಿನ ಪಾತ್ರದ ಸಂಭಾಷಣೆಯನ್ನು, ತಮ್ಮ ಕಂಚಿನ ಕಂಠದಲ್ಲಿ ಸೊಗಸಾಗಿ ನಿರೂಪಿಸಿದರು . ಭಾಗವಹಿಸಿದವರಲ್ಲಿ ಒಬ್ಬರಾದ ಶ್ರೀ ದೊರೆಸ್ವಾಮಿ ಅವರು ತಮ್ಮ ಅಣಕು ಕವಿತೆಗಳು ಮತ್ತು ಯೋಗ ಪ್ರಾತ್ಯಕ್ಷಿಕೆಯಿಂದ ರಂಜಿಸಿದರು. ಈ ಪುಟ್ಟ ಬ್ರೇಕ್ ನಂತರ ಪುನ: ನಡೆಯಲಾರಂಭಿಸಿದೆವು.

Bharacukkiಬೆಟ್ಟವನ್ನು ಇಳಿದಾದ ಮೇಲೆ ಅಲ್ಲಿಂದ ಸುಮಾರು 3 ಕಿ.ಮಿ ದೂರದಲ್ಲಿ ಕಾವೇರಿ ನದಿ ತೀರದಲ್ಲಿರುವ ಶ್ರೀವರದರಾಜ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟೆವು. ಬಹಳ ಸೂಂದರವಾದ ದೇವಸ್ಥಾನವಿದು. ಅಲ್ಲಿನ ಅರ್ಚಕರು ಸ್ಥಳ ಪುರಾಣವನ್ನು ವಿವರಿಸಿದ್ದಲ್ಲದೆ ನಮಗೆ ಉಟದ ವ್ಯವಸ್ಥೆಯನ್ನೂ ಮಾಡಿದ್ದರು. ಬಿಸಿಬೇಳೆಭಾತ್, ಮೊಸರನ್ನ ಮತ್ತು ಸಿಹಿಪೊಂಗಲ್ ನ ಊಟವಿತ್ತು. ಕೆಲವರು ನೆಲದ ಮೇಲೆ, ಇನ್ನು ಕೆಲವರು ಕುರ್ಚಿಯ ಮೇಲೆ ಊಟಕ್ಕೆ ಕುಳಿತೆವು. ತಂಡದ ಸದಸ್ಯರೇ ಅಚ್ಚುಕಟ್ಟಾಗಿ ಊಟ ಬಡಿಸಿದರು. ರುಚಿಯಾದ ಊಟ ಮುಗಿಸಿ, ಪ್ರಯಾಣ ಮುಂದುವರಿಸಿ ಶಿವನಸಮುದ್ರ ತಲಪಿ ಅಲ್ಲಿ ಭರಚುಕ್ಕಿ ಜಲಪಾತದ ನೀರಿನ ವೈಭವವನ್ನು ನೋಡಿದೆವು. ಕೋಟಿ ಕೋಟಿ ಮಾನವರು ಎದೆಯೊಡ್ಡಿ ಸವಾಲಾಗಿ ನಿಂತರೂ ತಡೆಯಲಾಗದಂಥ ಭೋರ್ಗರೆಯುತ್ತ ಧುಮ್ಮಿಕ್ಕ್ಕುವ ಭರಚುಕ್ಕಿಯ ಜಲಧಾರೆಗಳನ್ನು ನೋಡುತ್ತಿದ್ದಂತೆ ಬೆಟ್ಟ ಹತ್ತಿ ಇಳಿದ ಆಯಾಸ ಪರಿಹಾರವಾಯಿತು. ಆಲಿಂದ ಹಿಂತಿರುಗಿ ಮುಸಲ್ಮಾನ ಪವಿತ್ರಸ್ಥಳ ದರ್ಗಾದ ಬಳಿ ಮತ್ತೊಂದು ಜಲಪಾತ ಗಗನಚುಕ್ಕಿಯ ಪಾರ್ಶ್ವ ನೋಟವನ್ನು ನೋಡಿದೆವು.

ಆಮೇಲೆ ಮಧ್ಯರಂಗವೇಂದೇ ಪ್ರಸಿದ್ಧಿ ಹೊಂದಿದ ರಂಗನಾಥನ ದರ್ಶನ ಮಾಡಿದೆವು. ಆದಿಶೇಷನ ಮೇಲೆ ಮಲಗಿರುವ ಜಗನ್ಮೋಹನ ರಂಗನಾಥನ ದರ್ಶನ ಎಲ್ಲರಿಗೂ ಲಭಿಸಿತು. ಅಲ್ಲಿಂದ ಹಿಂತಿರುಗಿ ಮತ್ತೆ ಶಿವನಸಮುದ್ರಕ್ಕೆ ಬಂದು ಶ್ರೀ ಪ್ರಸನ್ನ ಮೀನಾಕ್ಷಿ ಸಮೇತ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡಿದೆವು.

teamಮೈಸೂರಿನಿಂದ ಸತ್ಯಗಾಲ ಹ್ಯಾಂಡ್ ಪೋಸ್ಟ್ ಸುಮಾರು 70 ಕಿ. ಮಿ ದೂರದಲ್ಲಿದೆ. ಸತ್ಯಗಾಲ ಹ್ಯಾಂಡ್ ಪೋಸ್ಟ್ ನಿಂದ ಗವಿರಾಯಸ್ವಾಮಿ ಬೆಟ್ಟವು ಸುಮಾರು ಎರಡು ಕಿ.ಮೀ ದೂರದಲ್ಲಿದೆ. ಇದನ್ನು ಗ್ರಾಮೀಣ ರಸ್ತೆಯ ಮೂಲಕ ಕ್ರಮಿಸಿದಲ್ಲಿ ಬೆಟ್ಟ ಏರುವ ಚಾರಣದ ಹಾದಿ ಸಿಗುತ್ತದೆ. ಸುಮಾರು 2000 ಅಡಿ ಎತ್ತರವನ್ನು ಮೂರು ಕಿ.ಮೀ ಅಂತರದಲ್ಲಿ ಕಲ್ಲು ಬಂಡೆಗಳ ಮಾರ್ಗದ ಮೂಲಕ ಏರಿದಲ್ಲಿ ಗದಾಧರನ ಸನ್ನಿಧಿ ತಲಪಬಹುದು. ಈ ಮಾರ್ಗದಲ್ಲಿ ಗವಿರಾಯನ ಬೆಟ್ಟಕ್ಕೆ ಹೋಗಿ, ಚಾರಣ ಮಾಡಿ, ಆಮೇಲೆ ಟಿ.ನರಸೀಪುರ ಮೂಲಕ ಪ್ರಯಾಣಿಸಿ ಮೈಸೂರನ್ನು ತಲಪಿದಾಗ ರಾತ್ರಿ 0800 ಗಂಟೆಯಾಗಿತ್ತು.

ಇಂತಹ ಒಂದು ಚಾರಣ ಕಾರ್ಯಕ್ರಮವನ್ನು ಅಯೋಜಿಸಲು ಅವಕಾಶವನ್ನು ಒದಗಿಸಿಕೊಟ್ಟಿದ್ದಕ್ಕೆ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ್ಕಕ್ಕೂ, ಭಾಗವಹಿಸಿದ ಎಲ್ಲರಿಗೂ ವಂದನೆಗಳು.

 

 

 

-ವೈದ್ಯನಾಥನ್, ಮೈಸೂರು

5 Responses

  1. Dinesh Naik says:

    FINE

  2. Shruthi Sharma says:

    ಶ್ರೀ ರಾಮ ಧನುರ್ಧಾರಿ ಎಂದೇ ತಿಳಿದಿದ್ದ ನನಗೆ ನಿಮ್ಮ ಲೇಖನದ ಮೂಲಕ ಗದಾಧಾರಿಯಾದ ರಾಮನ ಬಗ್ಗೆ ಕೂಡಾ ಉತ್ತಮ ಮಾಹಿತಿ ಲಭಿಸಿತು. 🙂
    ತುಂಬಾ ಅಪರೂಪ ಹಾಗೂ ಮಾಹಿತಿಪೂರ್ಣ ಲೇಖನ. ವೈದ್ಯನಾಥನ್ ರವರೇ ಇನ್ನೂ ಬರೆಯುತ್ತಿರಿ.
    ಪ್ರಕಟಿಸಿದ ಹೇಮ ಮಾಲಾ ಅವರಿಗೂ ವಂದನೆಗಳು.. 🙂

  3. savithrisbhat says:

    ಚಾರಣ ದ ವಿವರವನ್ನು ಬಹಳ ಚೆನ್ನಾಗಿ ಬರೆದಿದ್ದೀರಿ . ಉತ್ತಮ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು.

  4. ಗೋವಿಂದರಾಜು says:

    ಶ್ರೀ ವೈದ್ಯನಾಥನ್ ರವರೆ

    ಗವಿರಾಯಸ್ವಾಮಿ ಬೆಟ್ಟವೂ, ಚುಕ್ಕಿ ಜಲಪಾತಗಳೂ ನಾವೆ ನೋಡಿದ ಹಾಗೆ ವಿವರಿಸಿದ್ದಿರ.
    ನಿಮ್ಮ ವಿವರಣೆಗೆ ಧನ್ಯವಾದಗಳು.

    ಗೋವಿಂದರಾಜು

    • ಶ್ರೀಧರ್ says:

      ನಿತ್ಯವೂ ಗವಿರಾಯಸ್ವಾಮಿ ಪೂಜಿಸುವ ನಮಗೆ ಇತಿಹಾಸ ತಿಳೀಸಿಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: