ಅಮ್ಮಗಳಿರಾ.. ಅಪ್ಪಗಳಿರಾ..
ಮಕ್ಕಳು ತೊದಲು ನುಡಿಯಲು ಶುರುಮಾಡಿದ್ದೊಂದೇ ಗೊತ್ತು. ಹೆತ್ತವರಿಗೋ ಮಕ್ಕಳಿಗೆ ಎಷ್ಟು ಸಾಧ್ಯವೋ ಅಷ್ಟನ್ನು ಒಮ್ಮೆಗೇ ಅವರ ಬಾಯಿಂದ ಹೇಳಿಸಿ, ನಕ್ಕು ನಲಿದು, ಮತ್ತಷ್ಟು ಪದಗಳನ್ನು, ಪದ್ಯಗಳನ್ನು ಬಾಯಿಪಾಠ ಮಾಡಿಸಿದರಷ್ಟೇ ಅವರಿಗೆ ತೃಪ್ತಿ.ಇನ್ನು ಮಕ್ಕಳು ಶಾಲೆಗೆ ಎಡತಾಕಿದ್ದೊಂದೇ ಗೊತ್ತು. ನೀನು ದೊಡ್ಡವನಾದ್ಮೇಲೆ ಏನಾಗ್ತೀಯಾ ಹೇಳು ನೋಡಣಾ ಪುಟ್ಟು ಅಂತ ಪಶ್ನೆ ಮೇಲೆ ಪ್ರಶ್ನೆ ಎಸೆದು, ಮೊದಲೇ ಉರು ಹೊಡೆಸಿದ ಸಿದ್ಧ ಮಾದರಿಯ ದೊಡ್ಡ ಉತ್ತರವನ್ನು ಪುನ; ಪುನ; ಅವರುಗಳು ತಮ್ಮ ಪುಟ್ಟು ಬಾಯಿಯಿಂದಲೇ ಡಾಕ್ಟರ್ ಆಗ್ತೀನಿ,ಪೈಲೆಟ್ ಆಗ್ತೀನಿ ಅಂತ ಕಣ್ಣಗಲ ಮಾಡಿಕೊಂಡು ಹೇಳುವಾಗ, ಸ್ಟೆತೊಸ್ ಕೋಪ್ ಹಿಡಿದ ಮಗಳು , ಆಕಾಶದೆತ್ತರ ಬಾನಗಲ ಹಾರುವ ಮಗನನ್ನು ಕಲ್ಪಿಸಿಕೊಂಡದ್ದೇ ಕೊಂಡದ್ದು.ಇಂತಹ ಸಂಭ್ರಮದ ರಸ ಸ್ವಾದನೆಗೆ ಯಾವ ಹೆತ್ತವರೂ ಕೂಡ ಹೊರತಾಗಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.
ಆದರೆ ನಾವೆಲ್ಲ ಸಣ್ಣವರಿರುವಾಗ,ಈ ರೀತಿಯಾದ ದೊಡ್ಡ ದೊಡ್ಡದಾದ ಹುದ್ದೆಗಳನ್ನು ಹೇಳಿಕೊಡಲು ಅಮ್ಮಂದಿರಿಗೆ ಗೊತ್ತಿರಲಿಲ್ಲವೋ ಅಥವಾ ಅದಾಗಲೇ ಆಡಿ ನಲಿಯುವ ಪ್ರಾಯದಲ್ಲಿ ಗುರಿಗಳನ್ನು ಹೇರಿ ಒತ್ತಡ ಕೊಟ್ಟು ನಮ್ಮನ್ನು ನಿತ್ರಾಣಗೊಳಿಸಲು ಇಷ್ಟವಿರಲಿಲ್ಲವೋ ಏನೋ. ಅಂತೂ ಇಂತೂ ಎಳವೆಯಲ್ಲಿ ನಮ್ಮ ಗುರಿಗಳು,ಆದರ್ಶಗಳೇನಿದ್ದರೂ ಅದು ಅಮ್ಮನಂತಾಗುವುದು, ಅಪ್ಪನಂತಾಗುವುದು, ಇಲ್ಲವೇ ಹೆಚ್ಚೆಂದರೆ ಕಣ್ಣಿಗೆ ಕಟ್ಟುವಂತೆ ಕತೆ ಹೇಳುತ್ತಾ ಪಾಠ ಮಾಡುವ ಕನ್ನಡ ಟೀಚರ್ ನಂತಾಗುವುದು.ಇವಿಷ್ಟೇ ನಮ್ಮ ಮನೋ ಮಂಡಲದ ಕಲ್ಪನೆಯ ಸಾಧ್ಯತೆಗಳು. ಸೂಜಿ ಚುಚ್ಚುವ ನರ್ಸಮ್ಮ, ಕಹಿ ಗುಳಿಗೆ ನುಂಗಲು ಕೊಡುವ ಡಾಕ್ಟರ್ ಗಳಂತೂ ನಮ್ಮ ಊಹೆಯ ಪರಿಧಿಯಾಚೆಗೂ ನಿಲುಕುತ್ತಿರಲಿಲ್ಲ. ಇನ್ನೂ ಪೈಲೆಟ್ ನಂತೆ ಆಕಾಶದೆತ್ತರ ಹಕ್ಕಿಯಂತೆ ಹಾರುವ ವಿಸ್ಮಯ ನಮ್ಮ ಕನಸಿಗೂ ಎಟುಕುತ್ತಿರಲಿಲ್ಲ.ಅವೆಲ್ಲ ನಮಗೆ ಅಚ್ಚರಿಯ ಬೆರಗುಗಳು. ನಮ್ಮದೇನಿದ್ದರೂ ಹಸಿ ಹಸಿ ನೆಲದ ಮಾರ್ಧವ ಕನಸುಗಳು.
ಒಮ್ಮೆ ಹೀಗೆ ತುಂಬಾ ಚಿಕ್ಕ ತರಗತಿಯಲ್ಲಿರುವಾಗ,ಪಾಠ ಮಾಡ್ತಾ ಮಾಡ್ತಾ ಟೀಚರ್ ಎಲ್ಲಾ ಮಕ್ಕಳ ಜೊತೆಗೂ ಮುಂದೆ ಓದಿ ನೀವೆಲ್ಲಾ ಏನಾಗಬೇಕೂಂತಿರುವಿರಿ ಹೇಳಿ ಒಬ್ಬರೊಬ್ಬರೆ ಅಂದಾಗ ಒಂದೊಂದು ಮಕ್ಕಳ ಮನಸ್ಸಿನಿಂದ ಹೊರಟ ನಿಷ್ಕಲ್ಮಶ ನುಡಿಗಳು ಈಗ ನೆನೆಸಿಕೊಂಡಾಗಲೆಲ್ಲಾ ಎದೆಯಾಳದಲ್ಲಿ ತಂಪು ತಂಪು ಅಲರು. ಒಬ್ಬನಿಗೆ ರಾಮ ಬಸ್ಸಿನ ಡ್ರೈವರ್ ಆಗಬೇಕಂತೆ.ಮತ್ತೊಬ್ಬನಿಗೆ ಭಗಂಡೇಶ್ವರ ಬಸ್ಸಿನ ಕಂಡಕ್ಟರ್‌ನಂತೆ ರಪ ರಪನೇ ದುಡ್ಡು ಎಣಿಸಿ ಟಿಕೇಟ್ ಹರಿದು ಕೊಡುವುದೇ ಇಷ್ಟವಂತೆ. ಮತ್ತೊಬ್ಬಳಿಗೆ ಟೀಚರ್ ಆಗಬೇಕಂತೆ.ಹೀಗೆ ಒಬ್ಬೊಬ್ಬರಂತೆ ನನ್ನ ಸರದಿಯೂ ಬಂದಾಗ ಚೆಂದ ಚೆಂದದ ಅಂಗಿ ಹೊಲಿಯುವ ನಮ್ಮೂರಿನ ಲಲಿತಕ್ಕನಂತೆ ನಾನೂ ಟೈಲರ್ ಆದ್ರೆ ಎಷ್ಟು ಚೆನ್ನ ಅಂತ ಆ ಕ್ಷಣಕ್ಕೆ ಅನ್ನಿಸಿ,ನಾನು ಮುಂದೆ ಓದಿ ಟೈಲರ್ ಆಗಿ ಬಟ್ಟೆ ಅಂಗಡಿ ಇಡುವೆ ಅಂತ ಅಂದುಬಿಟ್ಟೆ. ಸಂಜೆ ಮನೆಗೆ ಹೋಗಿ ಎಂದಿನಂತೆ ಶಾಲೆಯ ವಿವರಗಳನ್ನು ಅರುಹುವಾಗ ಈ ನನ್ನ ದೊಡ್ಡ ಗುರಿಯ ವಿಷಯವನ್ನೂ ಅರುಹಿಬಿಟ್ಟೆ.ಹಿರಿಯರು ಯಾರೂ ನಿನಗೆ ಇದೊಂದೇ ಗುರಿ ಸಿಕ್ಕಿದ್ದಾ..ಹೇಳೋಕೆ ಅಂತ ಗದರಲೇ ಇಲ್ಲ. ಬದಲಾಗಿ ಎಲ್ಲರೂ ನಕ್ಕಿದ್ದೇ ನಕ್ಕಿದ್ದು.ನೀ ನು ದೊಡ್ಡವನಾದ ಮೇಲೆ ಇಂತಹುದೇ ಆಗು ಅಂತ ಯಾರೂ ಹೇಳಿಕೊಡದೇ ಇದ್ದರೆ… ಮಕ್ಕಳು ಹೇಗೆ ತಮ್ಮದೇ ಲೋಕದಲ್ಲಿ ವಿಭಿನ್ನ ರೀತಿಂi ಕಲ್ಪನೆಗಳನ್ನು ಕಟ್ಟಿಕೊಳ್ಳುತ್ತವೆ ಅಂತ ಒಂದು ಕ್ಷಣ ಯೋಚಿಸಿದಾಗ ಅವರುಗಳ ಎಣೆಯಿಲ್ಲದ ಮುಗ್ಧತೆಯ ಅನಂತತೆಯ ಅರಿವಾಗುತ್ತದೆ. ನಾವು ಎಳೆಯರು… ನಾವು ಗೆಳೆಯರು… ಹೃದಯ ಹೂವಿನ ಹಂದರ…ಕವಿತೆ ಸಾಲೆಷ್ಟು ನೈಜ್ಯ?. ಕಲ್ಪನೆ ಕೊಡುವ ಸುಖಕ್ಕೆ ಯಾವುದಿದೆ ಸಾಟಿ?!.
ಅಂತಹ ಹೂವಿನ ಹಂದರದಂತಹ ಮಕ್ಕಳ ಹೃದಯವನ್ನು ಯಾಕೆ ನಾವಿವತ್ತು ಕಬ್ಬಿಣದ ಸಲಾಕೆಯಂತೆ ಬಿಗಿಯಾಗಿಸುತ್ತಿದ್ದೇವೆ? ನಿರ್ಭಾವುಕರನ್ನಾಗಿ ಮಾಡುತ್ತಿದ್ದೇವೆ?ಯೋಚಿಸಿದಷ್ಟು ಉತ್ತರ ನಮ್ಮ ಅರಿವಿಗೆ ದಕ್ಕುವುದಿಲ್ಲ.ನಮ್ಮ ಮಕ್ಕಳ ಸುತ್ತ ನಾವು ಅತಿಯಾದ ನಿರೀಕ್ಷೆಗಳನ್ನು ಕಟ್ಟಿಕೊಳ್ಳುತ್ತೇವೆ.ಬಹುಶ; ನಾವು ಅನುಭವಿಸಿದ ಸಂಕಟ ಯಾತನೆಗಳನ್ನು ನಮ್ಮ ಮಕ್ಕಳು ಅನುಭವಿಸದಿರಲಿ ಎಂಬುದು ಮುಖ್ಯ ಕಾರಣವಾದರೆ,ಉಳಿದಂತೆ ನಾನಾ ಕಾರಣಗಳು ಸಾಲುಗಟ್ಟಿ ನಿಲ್ಲುತ್ತವೆ. ಆದರೆ ಈ ಅತಿಯಾದ ನಿರೀಕ್ಷೆಗಳು ಹುಸಿಯಾದಾಗ ಸಿಗುವ ಮಾನಸಿಕ ಆಘಾತ ಎಲ್ಲಾ ನೋವುಗಳಿಂತ ದೊಡ್ಡದು ಅಂತ ತಿಳಿಯು ಹೊತ್ತಿಗೆ ಕಾಲ ಅದಾಗಲೇ ದಾಪುಗಾಲು ಹಾಕುತ್ತಾ ಓಡಿಯಾಗಿರುತ್ತದೆ.ಮತ್ತೆ ನಿಲ್ಲೂ..ಕಾಲವೇ ನಿಲ್ಲು ..ಅಂತ ಬಡ ಬಡಿಸಿದರೇನು ಬಂತು?.ಹೆತ್ತವರ ಮಾತು ಮೀರಲಾರದೆ,ಕೊನೆಗೆ ಬದುಕಿನಲ್ಲಿ ಏಗಲಾರದೆ,ಬದುಕು ಹತಾಶೆಯಲ್ಲಿ ಮುಗ್ಗರಿಸಿ ಬೀಳುವುದು,ಬದುಕಿನ ಎಲ್ಲಾ ಮಹತ್ತರ ಕಾಲಘಟ್ಟದಲ್ಲಿ ಕೂಡ ಅತಿಯಾದ ಹೇರಿಕೆಯಿಂದಾಗಿ ಬದುಕು ಪರ್‍ಯವಸನವಾಗುವುದು… ದಿನೇ ದಿನೇ ಇಂತಹುದೇ ಕಳವಳ ಹುಟ್ಟಿಸುವ ಆತಂಕಕಾರಿ ಘಟನೆಗಳು.ಎಷ್ಟು ಮುಗ್ಧ ಮನಸುಗಳ ಹೃದಯ ಇದರಿಂದ ಕನಲಿ ಹೋಗಿಲ್ಲ?ಹೆತ್ತವರ ಮಾರ್ಗದರ್ಶನ ಅವರುಗಳಿಗೆ ದಾರಿ ದೀಪವಾಗಬೇಕೇ ಹೊರತು ,ದಾರಿಯೇ ಗೋಚರಿಸದಂತೆ ಕುರುಡರಂತಾಗಿಸುವುದು ಎಷ್ಟು ವಿಪರ್‍ಯಾಸ?
ಅಮ್ಮಗಳಿರಾ… ಅಪ್ಪಗಳಿರಾ…ನನ್ನ ತಾಯೊಡ ಹುಟ್ಟುಗಳಿರಾ.. ಅಂತ ಮೂರನೇ ತರಗತಿಯ ಟೀಚರ್ ರಾಗವಾಗಿ ಲಯಬದ್ದವಾಗಿ ಹೇಳಿಕೊಡುವಾಗ ನಾವೆಲ್ಲಾ ಗದ್ಗದಿತರಾಗಿ ಒಳಗೆಲ್ಲೋ ಏನೋ ಒಂದು ರೀತಿಯ ಅವ್ಯಕ್ತ ತಳಮಳ. ಆ ಕ್ಷಣಕ್ಕೆ ನಾವುಗಳೆಲ್ಲಾ ತಬ್ಬಲಿ ಕರುಗಳಂತಾಗಿ,ಒಮ್ಮೆ ಸಂಜೆ ಆಗಿ ಮನೆ ತಲುಪಿ,ಯಾವೊತ್ತು ಅಮ್ಮನ ಮುಖ ನೋಡಿಬಿಡುವೆವೋ ಎನ್ನುವಷ್ಟರ ಮಟ್ಟಿಗೆ ತಾದ್ಮಾಯತೆ ನಮ್ಮನ್ನು ಆವರಿಸಿಕೊಂಡುಬಿಡುತ್ತಿತ್ತು.
ಅದೇ ಪದ್ಯವನ್ನು ಈಗ ಅದೇ ದಾಟಿಯಲ್ಲಿ ಹೇಳುತ್ತಾ ಮಕ್ಕಳ ಕಣ್ಣಲ್ಲಿ ನೀರಿನ ಪಸೆ ಜಿನುಗುತ್ತಾ ಅಂತ ಸೂಕ್ಶ್ಮವಾಗಿ ಇಣುಕಿ ನೋಡಿದರೂ ಹ್ಮೂಂ..ಹ್ಮೂಂ..! ಇನಿತು ತೆವವೂ ಒಸರುವುದಿಲ್ಲ. ಯಾಕೋ ಪುಟ್ಟಾ.. ಈ ಪದ್ಯ ಕೇಳಿ ನಿಂಗೆ ದು;ಖ ಆಗಲ್ವಾ ಅಂದ್ರೆ… ಅಯ್ಯೋ… ಅವೆಲ್ಲಾ ಕಟ್ಟುಕತೆಗಳಮ್ಮ…ಸುಮ್ಮ ಸುಮ್ಮನೆ ಯೋಚಿಸದೆ ,ವಿಚಾರ ಮಾಡದೆ ಎಲ್ಲವನ್ನೂ ಸತ್ಯ ಅಂತ ಒಪ್ಪಿಕೊಳ್ಳಲೇಬಾರದು ಅಂತ ಸೈನ್ಸ್ ಸರ್ ಹೇಳ್ತನೇ ಇರ್‍ತಾರೆ ಅಂದಾಗ ತಬ್ಬಿಬ್ಬಾಗಿಬಿಡುವ ಸರದಿ ನಮ್ಮದು.ಈಗಿನ ಮಕ್ಕಳ ವೈಚಾರಿಕ ದೃಷ್ಟಿಕೋನಕ್ಕೆ ಶಹಭಾಶ್ ಗಿರಿ ಕೊಟ್ಟು ಭೇಷ್ ಅನ್ನಬೇಕೋ? ಕಲ್ಪನೆ ಅನಾವರಣಗೊಳಿಸುವ ಅದ್ಭುತ ಸುಖದಿಂದ ವಂಚಿತರನ್ನಾಗಿಸಿದಕ್ಕೆ ಮುಲುಗಬೇಕೋ ಒಂದೂ ಗೊತ್ತಾಗದೆ ಮನಸ್ಸು ದ್ವಂದ್ವಕ್ಕೆ ಬೀಳುತ್ತೆ.ಕೊರಳ ಪಟ್ಟಿ ಕಟ್ಟಿ,ಸೊಂಟ ಪಟ್ಟಿ ಬಿಗಿದು,ಪುಟ್ಟ ಪುಟ್ಟ ಕೋಮಲ ಪಾದಗಳನ್ನು ಕರಿ ಬೂಟಿನೊಳಗೆ ತೂರಿ,ಶಿಸ್ತಿನ ಸಿಪಾಯಿಗಳಂತೆ ಗಾಂಭೀರ್‍ಯ ತುಂಬಿ ನಡೆಯುವಾಗ… ಬರಿಗಾಲಿನಲ್ಲಿ ಸಹಪಾಠಿಗಳೊಂದಿಗೆ ಹರಟುತ್ತಾ ಊರಕೇರಿಯ ಕತೆಗಳೆಲ್ಲಾ ಪುಂಖಾನುಪುಂಖವಾಗಿ ಉಸುರುತ್ತಾ ಹೋದದ್ದು ಮನದೊಳಗೆ ಈಗ ಸರತಿಯಲಿ ನಿಂತು ಗುಂಯಿಗುಡುತ್ತಿದೆ.
– ಸ್ಮಿತಾ ಅಮೃತರಾಜ್, ಸಂಪಾಜೆ.
(ಇದು 23/01/2014 ರಂದು ಪ್ರಕಟವಾದ ಲೇಖನ.ಶಾಲೆ ಕಾಲೇಜುಗಳು ಪುನರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ ಈಗ ಪುನ: ಪ್ರಕಟಿಸುತ್ತಿದ್ದೇವೆ)
ಸತ್ಯಕ್ಕೆ ತುಂಬಾ ಹತ್ತಿರವಾಗಿದೆ !
Good writting skill. Go ahead smitha..
Nice article
ಬರಹ ಚೆನ್ನಾಗಿದೆ
ಬರಹ ಸೂಪರ್ ಆಗಿದೆ! ನನ್ನನ್ನು ಬಾಲ್ಯಕ್ಕೆ ಕರೆದುಕೊಂಡು ಹೋದಿರಿ..
100% ನಿಜಮಾತು .
ತುಂಬಾ ಸಹಜಾಭಿಪ್ರಾಯಗಳಿಂದ ತುಂಬಿದ ಈ ಬರೆಹ ನಿಜವಾಗಿಯೂ ಓದುವಂಥದ್ದು. ಚೆನ್ನಾಗಿ ಬರೆದಿದ್ದೀರಾ.ಧನ್ಯವಾದಗಳು.
ಸುಂದರ ಬರಹ ,ಈ ಪೀಳಿಗೆಯ ಮಕ್ಕಳು ಬಾಲ್ಯದ ನಿಷ್ಕಲ್ಮಶತೆಯನೂ ,ನಿರಾಳತೆಯನೂ ಕಳೆದುಕೊಂಡು ವಯಸಿಗೆ ಮೀರಿದ ಗಾಂಭೀರ್ಯ ಹೊಂದಿ ಬಾಲ್ಯದ ಅತಿಶಯ ಸವಿಯಿಂದ ವಂಚಿತರಾಗಿದ್ದಾರೆ ಅನ್ನೋದು ಎಂಥಾ ಬೇಸರದ ವಿಚಾರ.
ಚೆಂದನೆ ಬರಹ .