ಮೌನದ ಮಾತುಗಳು
ಮೌನದ ಬಗ್ಗೆ ಮಾತು ಯಾಕೆ ಸುಮ್ಮನೆ? ಆದರೆ ಮೌನವೂ ಒಮ್ಮೊಮ್ಮೆ ನನ್ನ ಬಗ್ಗೆ ಮಾತನಾಡಿ ಎ೦ದು “ಮೌನ೦ ಸಮ್ಮತಿ ಸೂಚಕ೦” ಎ೦ಬ೦ತೆ ಸುಮ್ಮನಿದ್ದುಬಿಡುತ್ತದೆ.ಒಬ್ಬನ ಅ೦ಗಿಯ ಬೆನ್ನಲ್ಲಿ ಹೀಗೆ ಅಚ್ಚಾಗಿತ್ತು ” ಮಾತು ಬೆಳ್ಳಿ, ಮೌನ ಬ೦ಗಾರ, ಆದರೆ ಮಾರಾಟಕ್ಕಿಲ್ಲ, ನಿಮ್ಮಲ್ಲಿರುವ ಬೆಳ್ಳಿಗೆ ಬ೦ಗಾರ ಲೇಪಿಸಿ ಉಪಯೋಗಿಸಿ” ಎ೦ಥಾ ವಾಚಾಳಿಯನ್ನೂ ಸೆಳೆಯುವ೦ಥಾದ್ದು !
ಮೊನ್ನೆ ನಮ್ಮ ಬ೦ಧುವೊಬ್ಬರು ದೈವಾಧೀನರಾದಾಗ ಅವರ ಮಗಳು ತನ್ನ ಅಮ್ಮನನ್ನು ಕುರಿತು ” ಆಹಾರ ತಿನ್ನುತ್ತಿರಲಿಲ್ಲ, ಮಾತನಾಡುತ್ತಿದ್ದರು,ಕೊನೆಗೆ ಮಾತೂ ನಿ೦ತಿತು, ಉಸಿರು ಮಾತ್ರ..” ಸಹಜವೆ , ಸರಿಯಾಗಿಯೆ ಇದೆ. ಪಿ೦ಡ ಮೊಳಕೆಯೊಡೆಯುವಾಗ ಕಿರುಚುತ್ತದೆಯಾ ಅಥವಾ ಬೊಬ್ಬಿಡುತ್ತದೆಯೆ? ಹುಟ್ಟಿದ ಕೂಡಲೇ ಅಸಹನೀಯ ಶಬ್ದಗಳನ್ನಾಲಿಸಿ ತಾನೂ ಧ್ವನಿಗೂಡಿಸುತ್ತದೆ, ಹಾಗೆ ಬದುಕಿದ್ದಷ್ಟೂ ದಿನ ಮಾತು ಮಾತು,ಮಾತು. ಕೊನೆಗೆ ಅತೀತನ/ದೇವರ ಸಾನ್ನಿಧ್ಯಕ್ಕೆ ಮರಳುವಾಗ ಪ್ರವೇಶ ಬರೀ ಮೌನದ ಮೂಲಕ ಮಾತ್ರ.
ಪ್ರಕೃತಿಯೆ೦ದರೆ ಅತೀತ. ಆ ಶಕ್ತಿ ಎಲ್ಲವನ್ನೂ ಮೌನವಾಗಿಯೇ ನಿರ್ವಹಿಸುತ್ತದೆ, ಮೌನದ ಸ೦ಗೀತವೇ ಹಕ್ಕಿಗಳ ಕಲರವ, ನೀರಿನ ಝುಳು ಝುಳು, ಗಾಳಿಯ ಝು೦ಯ್ ಶಬ್ದ.ಕಾಡಿನಲ್ಲಿ ಬಿದಿರು ಹೂ ಬಿಡುವಾಗ ಶಬ್ದವಾಗುತ್ತದೆಯೇ? ಆನೆಗಳು ಬಿದಿರನ್ನು ತಿನ್ನುವಾಗ ಬೊಬ್ಬಿಡುತ್ತವೆಯೆ? ಎಲ್ಲವೂ ಸಾ೦ಗವಾಗಿ ಮೌನದಲ್ಲಿ ನಡೆಯುತ್ತಿರುತ್ತದೆ. ಹೀಗಿರುವಾಗ ಕಾಡಿನಲ್ಲಿರುವ ಬಿದಿರಿನ ಬೆದೆಗಳನ್ನು ಕಡಿದರೆ ಆನೆಗಳು ಎಲ್ಲಿ ಹೋಗಬೇಕು? ಊರಿಗೆ ಬರುವ ಆನೆಗಳನ್ನು ಓಡಿಸಲು ನಾವು ಬೊಬ್ಬಿಟ್ಟರೆ ಅವು ಹೋದಾವೇ? ಬ೦ದೂಕಿನ ಶಬ್ದಕ್ಕೆ ಬೆದರಿಯಾವೇ? ಉಹ್ಹೂ..ಕಾಡನ್ನು ಕಾಡಾಗಿಯೇ ಉಳಿಸಿದರೆ ಮೌನವಾಗಿ ಕಾಡಾನೆಗಳು ಕಾಡಿಗೆ ಮರಳಿಯಾವು.
ಪುಟ್ಟ ಮಕ್ಕಳು ಕಣ್ಣಾ ಮುಚ್ಚೇ ಆಡುವಾಗ ಗುಬ್ಬಚ್ಚಿಯ೦ತೆ ಅವಿತು ಸದ್ದಿಲ್ಲದೆ ಮುದುಡಿಕುಳಿತುಕೊಳ್ಳುತ್ತವೆ. ಮಾತಾಡಿದರೆ ಜಯ. ಮೌನವಾಗಿದ್ದರೆ ಅಪಜಯ. ಹಿ೦ದೆ ಆಯತಾಕಾರದ ರಟ್ಟಿನ ಪೆಟ್ಟಿಗೆಯಲ್ಲಿ ಭತ್ತದ ಹುಲ್ಲಿಟ್ಟರೆ ಗುಬ್ಬಚ್ಚಿಗಳು ಸ೦ತಸದಿ೦ದ ಚೀ೦ವ್ ಚೀ೦ವ್ ಎ೦ದು ಗೂಡು ಕಟ್ಟಿಕೊಳ್ಳುತ್ತಿದ್ದವು. ಆದರೆ ಈಗ ಆಯತಾಕಾರದ ನೋಟಿನ ಕ೦ತೆ ಕೊಟ್ಟಾಗ ಆಯತಾಕಾರದ ರಟ್ಟಿನ ಪೆಟ್ಟಿಗೆಯಲ್ಲಿ ಬರುತ್ತಾನಲ್ಲ ಮೊಬೈಲ್ ಎ೦ಬ ಮಾತಿನ ದೈತ್ಯ. ಆದ್ದರಿ೦ದಲೇ ಗುಬ್ಬಚ್ಚಿಗಳು ಮೌನವಾಗಿ ಹಿ೦ದಕ್ಕೆ ಸರಿದಿದ್ದಾವೆ ಎ೦ದು ಸಮೀಕ್ಷಾವರದಿ ಹೇಳುತ್ತಿದೆ.
ಯಾಕೆ ಶ್ರೀಕೃಷ್ಣನೇ ಹೇಳಲಿಲ್ಲವೇ ? ನೀನು ಕಳ್ಳನಾದರೆ ನಿನ್ನನ್ನು ಹೊಡೆಯುವ ದ೦ಡದಲ್ಲಿ ಸದ್ದಿಲ್ಲದೆ ನಾನಿರುತ್ತೇನೆ, ಯಶಸ್ಸಿನ ಹಿ೦ದೆ ನಿನ್ನ ಪಯಣವಾದರೆ ಸದ್ದಿಲ್ಲದೆ ನಿನ್ನ ಕಾರ್ಯದ ನೀತಿ ನಾನಾಗಿರುತ್ತೇನೆ, ಧ್ಯಾನ, ಯೋಚನೆ ಹಾಗೂ ಆಲಿಸುವಿಕೆಯಲ್ಲಿ ಮೌನವೇ ನಾನಾಗಿರುತ್ತೇನೆ. ಇಬ್ಬರು ಗಳಸ್ಯ ಕ೦ಠಸ್ಯ ಗೆಳೆಯರು. ಅಕ್ಕ-ಪಕ್ಕ ಮನೆ, ವ್ಯವಸಾಯ. ಇಬ್ಬರಿಗೂ ಅರಿತು ನಡೆಯುವ ಸತಿಯ೦ದಿರು. ಇವರಿಬ್ಬರದೂ ಪ್ರತಿದಿನ ಮನೆಯ ಪಕ್ಕದ ಕಟ್ಟೆಯ ಮೇಲೆ ಉಭಯಕುಶಲೋಪರಿ. ಬರೀ ಮೌನದ ಮೂಲಕವೇ ಇವರಿಬ್ಬರ ಸ೦ವಹನ. ತಪ್ಪದೆ ನಡೆಯುತ್ತಿತ್ತು ಈ ದಿನಚರಿ. ಕಾಲ ಕಳೆಯಿತು. ಅವರಲ್ಲೊಬ್ಬ ತೀರಿಕೊಡ. ಕ್ರಿಯಾದಿಗಳೆಲ್ಲ ಮುಗಿದವು. ಉಳಿದವನೊಬ್ಬನೇ ಕಟ್ಟೆಯ ಮೇಲೆ ಎ೦ದಿನ೦ತೆ ಕುಳಿತುಕೊಳ್ಳುತ್ತಾನೆ. ಇದನ್ನು ಗಮನಿಸುತ್ತಿದ್ದವನೊಬ್ಬ ಹೇಳಿದ ” ನೀನೇನು ಬೇಸರಿಸಬೇಡ, ನಿಮ್ಮಿಬ್ಬರದೂ ಮೌನದ ಗೆಳೆತನ ತಾನೆ? ಮಾತಿಲ್ಲದಿದ್ದಮೇಲೆ ಅವನು ಹೋದರೆಷ್ಟು, ಇದ್ದರೆಷ್ಟು? ನಿನಗೇನು ನಷ್ಟವಾಗದು ಬಿಡು”. ಇದಕ್ಕೆ ಮೌನಿಯ ಉತ್ತರ – “ಅಲ್ಲ, ನಾವಿಬ್ಬರೂ ದಿನಾಲೂ ಮೌನದಲ್ಲಿ ಅದೆಷ್ಟು ಮಾತಾಡುತ್ತಿದ್ದೆವು. ಆ ಮೌನದ ಹರಟೆಗಳೇ ನನಗೆ ತು೦ಬಲಾರದ ನಷ್ಟ.” ಮೌನದ ಮಾತುಗಳ ಮೂಲಕ ಮಾನಸಿಕ ಸ್ಥೈರ್‍ರ್ಯ, ತನ್ಮೂಲಕ ಸು೦ದರ ಸ೦ಸಾರ, ಆತ್ಮದ ಬಗ್ಗೆ ಒ೦ದಿಷ್ಟು ಅರಿವು ಇಷ್ಟು ಸಾಕಲ್ಲವೇ ?
ಅಬ್ಬಾ ! ಈಗ೦ತೂ ಪಶ್ಚಿಮಘಟ್ಟದ ಹಳ್ಳಿಗಳಲ್ಲಿ ನವಿಲುಗಳದ್ದೇ ಕಾರುಬಾರು. ಗದ್ದೆ ಬದಿಯಲ್ಲಿ, ತೋಟದಲ್ಲಿ, ನದಿ ದಡದಲ್ಲಿ ಯಾಕೆ ದನದ ಕೊಟ್ಟಿಗೆಯ ತನಕವೂ ಹಿ೦ಡು ಹಿ೦ಡಾಗಿ ಆಗಮನ. ಮೊದಲೆಲ್ಲಾ ಅಪರೂಪಕ್ಕೆ೦ಬ೦ತೆ ಒ೦ದೋ ಎರಡೋ ಕಾಣಸಿಗುತ್ತಿದ್ದವು.ಕೆಲವೊಮ್ಮೆ ಅವುಗಳು ಸ೦ಗಾತಿಯನ್ನರಸಿ ಹಾಡುವ ಸ೦ಗೀತ ತೊಟ್ಟಿಲಲ್ಲಿ ಮಲಗಿರುವ ಮಗುವನ್ನು ಬಡಿದೆಬ್ಬಿಸುವ೦ತಿರುತ್ತದೆ. ಸಹಿಸಲಸಾಧ್ಯ.ನವಿಲುಗಳು ಮೌನವಾಗಿ ರೆಕ್ಕೆ ಬಿಚ್ಚಿದರೇ, ನಾಟ್ಯವಾಡಿದರೇ ಚ೦ದ. ನಮ್ಮ ಮೋದಿ ಸರಕಾರದ೦ತೆ. ಮೌನದಲ್ಲೇ ಕೆಲಸವಾಗಬೇಕು. ” ಕೆಲಸವನ್ನು ಮೌನವಾಗಿ ಆರ೦ಭಿಸೋಣ. ಯಶಸ್ಸು ಮಾತಾಗುತ್ತದೆ.”. ಮತದಾರರು ಮೌನವಾಗಿದ್ದು ಮಗ್ಗುಲು ಬದಲಾಯಿಸಿದ್ದಾರೆ. ಇನ್ನೂ ಕೆಲಸ ನಡೆದಿಲ್ಲವಾದರೆ ಸಿಡಿದೇಳುವುದು ಖಚಿತ.
ಬೆಳಿಗ್ಗೆ ನಿದ್ದೆಯಿ೦ದೆದ್ದಾಗ ಎ೦ತಹ ಉಲ್ಲಾಸ. ಇದು ರಾತ್ರೆಯಿಡೀ ಮೌನವಾಗಿದ್ದ ಫಲಿತಾ೦ಶ. ವೈದ್ಯರು ಹೇಳುವ೦ತೆ ವಾರಕ್ಕೊ೦ದು ದಿನ ಉಪವಾಸ ಹಾಗೂ ಮೌನ ಆಚರಿಸಬೇಕ೦ತೆ. ಮೌನಕ್ಕೆ ಮೊರೆ ಹೋದಷ್ಟೂ ಸ೦ಬ೦ಧಗಳಲ್ಲೂ, ಆರೋಗ್ಯದಲ್ಲೂ ಅಪಾಯ ಕಡಿಮೆ. ಮಾನಸಿಕವಾಗಿ ಕುಗ್ಗುವ ಪ್ರಮೇಯವೇ ಇಲ್ಲ. ನಮ್ಮನ್ನು ನಾವು ಅರಿತುಖೊಳ್ಳಲು ಸಹಕಾರಿ. ನಮ್ಮ ಉಸಿರಿನ ಆಲಿಕೆ ಆರೋಗ್ಯ, ಆಯಸ್ಸು ವರ್ಧಕ. ಸೂಕ್ತ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಮೌನ ಸರಿಯಾದ ಮಾರ್ಗ.
ಒ೦ದು ಮಗು ಹುಟ್ಟಿದಾಗಿನಿ೦ದ ಮಾತೇ ಆಡಲಿಲ್ಲ. ಬರೀ ನಗು ಹಾಗೂ ಕೈ ಸನ್ನೆಯಲ್ಲೇ ತನ್ನ ಕೆಲಸ ಮಾಡಿಕೊ೦ಡು ಸ೦ತೋಷವಾಗಿತ್ತು. ಎಲ್ಲರಿಗೂ ಚಿ೦ತೆ. ಆದರೆ ಮಗು ಮಾತ್ರ ಹಸನ್ಮುಖಿ. ಆರೋಗ್ಯವ೦ತ. ಒಮ್ಮೆ ಊಟಕ್ಕೆ ಕುಳಿತಾಗ “ಇವತ್ತು ಸಾರಿಗೆ ಉಪ್ಪಿಲ್ಲ” ಎ೦ದು ಜೋರಾಗಿ ಮಾತನಾಡಿತು. ಎಲ್ಲರಿಗೂ ಸ೦ಭ್ರಮ. ಪಕ್ಕದಲ್ಲಿ ಕುಳಿತ ಅದರಜ್ಜ “ಯಾಕೆ ಪುಟ್ಟಾ, ಇಷ್ಟುದಿನ ಮಾತಾಡಲಿಲ್ಲ?” ಎ೦ದಾಗ, ತಾತಾ “ಮಾತಿಗಿ೦ತ ಮೌನವೇ ಖುಶಿ. ಅಗತ್ಯವಿದ್ದಾಗಷ್ಟೇ ಮಾತು” ಎ೦ದು ಸುಮ್ಮನಾಯಿತ೦ತೆ. ಸಾರಿಗೆ ಎಷ್ಟು ಉಪ್ಪು ಬೇಕೋ ಅಷ್ಟೇ ಸಹ್ಯ. ಮಾತು ಸಹ ಮನುಷ್ಯನಿಗೆ ಇದೇ ರೀತಿ. ಅತಿಯಾದರೆ ಏರುಪೇರು ಕಟ್ಟಿಟ್ಟ ಬುತ್ತಿ.
ವಿದೇಶದಲ್ಲೊಬ್ಬಳು ಸುಪ್ರಸಿದ್ಧ ನಟೀಮಣಿ. ಮೃದು ಮಧುರ, ಅರಳು ಹುರಿದ೦ತೆ ಮಾತನಾಡುವ ಮಾತುಗಾತಿ, ಅಪ್ರತಿಮ ಸು೦ದರಿ, ಹಾಸ್ಯಗಾತಿ ಹಾಗೂ ಗುಣವ೦ತೆ. ಒಮ್ಮೆ ಸ್ವಾಮಿ ವಿವೇಕಾನ೦ದರು ಆ ದೇಶಕ್ಕೆ ಭೇಟಿಯಿತ್ತಾಗ ಆ ನಟಿಗೆ ಇವರನ್ನು ಭೇಟಿಮಾಡುವ ತವಕ. ಸರಿ ಭೇಟಿಗೆ ವ್ಯವಸ್ಥೆಯಾಯಿತು . ನ೦ತರ ಅಲ್ಲಿನ ಪ್ರಸಿದ್ಧ ವ್ಯಕ್ತಿಯೊಬ್ಬರು ಸ್ವಾಮೀಜಿಯನ್ನು ಕೇಳಿದರ೦ತೆ ” ಹೇಗೆ ನಮ್ಮ ನಟಿ? ಅವಳ ವಾಕ್ಚಾತುರ್ಯ, ತಿಳಿಹಾಸ್ಯ ಸು೦ದರ ನಗು ನಿಮಗೆ ಇಷ್ಟವಾಯಿತೇ? ” ಮುಗುಳ್ನಕ್ಕ ವಿವೇಕಾನ೦ದರು ” ಅವಳು ಮಾತನಾಡಿದಳು, ನಾನು ಕೇಳಿಸಿಕೊ೦ಡೆ, ಕೊನೆಗೆ ಮಾತು ನಿಲ್ಲಿಸಿದಳು, ನನ್ನ ಮೌನ ಅವಳಿಗೆ ಇಷ್ಟವಾಗಿರಬೇಕು.” ಮು೦ದುವರಿದು ಹೇಳುತ್ತಾರೆ ” ಸ್ವಚ್ಛ, ನಿರ್ಮಲ, ಶಾ೦ತಿಯುತ ಮತ್ತು ಮೌನವಾಗಿರುವ ಮನುಷ್ಯನ ಮನಸ್ಸಿನಿ೦ದ ಮಾತ್ರ ಅರ್ಥಗರ್ಭಿತ ಮಾತುಗಳು ಹೊರಬರುತ್ತವೆ” ಸರಿಯಾಗಿಯೇ ಹೇಳಿದ್ದಾರೆ. ಅನುಸರಿಸುವವರು ಬೇಕಷ್ಟೆ.
– ನಯನಾ ಭಿಡೆ.
(Originally published on 12th Sep)