ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 8

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ಹನೋಯ್ ನಲ್ಲಿ ಎರಡನೆಯ ದಿನ..

16 ಸೆಪ್ಟೆಂಬರ್ 2024 ರಂದು ಹನೋಯ್ ನಲ್ಲಿ ನಮ್ಮ ಎರಡನೆಯ ದಿನ.  ಭಾರತೀಯ ಕಾಲಮಾನ ಮುಂಜಾನೆ 04 ಗಂಟೆಗೆ ಅಲ್ಲಿ ಚೆನ್ನಾಗಿ ಬೆಳಕಾಗಿತ್ತು.  ಹೋಟೆಲ್ ಬೆಬಿಲೋನ್ ನಲ್ಲಿ ನಮಗೆ ಬೆಳಗಿನ  ಉಪಾಹಾರದ ವ್ಯವಸ್ಥೆಯಿತ್ತು.    ನಾವು ಉಪಾಹಾರ ಮುಗಿಸಿ 0800 ಗಂಟೆಗೆ ಸಿದ್ದವಿರಬೇಕೆಂಬ ಸಂದೇಶ ‘ಹಲೋ ಏಷಿಯಾ ಟ್ರಾವೆಲ್ಸ್’ ಸಂಸ್ಥೆಯಿಂದ ಅದಾಗಲೇ ಬಂದಿತ್ತು.  ಸ್ನಾನಾದಿಗಳನ್ನು ಮುಗಿಸಿ,  ರೆಸ್ಟಾರೆಂಟ್ ಗೆ ಹೋದೆವು. ಅಲ್ಲಿದ್ದ  ಹೋಟೆಲ್ ಸಿಬ್ಬಂದಿ ನಗುಮೊಗದಿಂದ ಸ್ವಾಗತಿಸಿದರು.    

ಸಾಮಾನ್ಯವಾಗಿ ಅಂತರಾಷ್ಟ್ರೀಯ  ಪ್ರವಾಸಿಗರು  ಉಳಕೊಳ್ಳುವ  ಹೋಟೆಲ್ ಗಳಲ್ಲಿ  ಇರುವಂತಹ ಬಫೆಟ್ ಉಪಾಹಾರ ವ್ಯವಸ್ಥೆಯಿತ್ತು.  ಸಸ್ಯಹಾರದ ವಿಭಾಗದಲ್ಲಿ   2-3  ವಿಧಧ ಹಣ್ಣಿನ  ರಸಗಳು,  ಚಹಾ, ಕಾಫಿ,  ಬ್ರೆಡ್ – ಬೆಣ್ಣೆ-ಜಾಮ್ ಗಳು, ಕಾರ್ನ್ ಫ್ಲೇಕ್ಸ್ , ವಿವಿಧ ಹಸಿ ಹಾಗೂ  ಬೇಯಿಸಿದ ತರಕಾರಿಗಳು,  ಕಲ್ಲಂಗಡಿ, ಅನಾನಸ್, ಕರಬೂಜ ಮೊದಲಾದ ಹಣ್ಣುಗಳು, ನೂಡಲ್ಸ್ , ಫ಼್ರೈಡ್ ರೈಸ್  ಇತ್ಯಾದಿ  ಇದ್ದುವು.  ಒಟ್ಟಿನಲ್ಲಿ ರುಚಿ ಸಪ್ಪೆ ಎನಿಸಿದರೂ ಆರೋಗ್ಯಕರವಾದ  ಪುಷ್ಕಳವಾದ ಉಪಾಹಾರ ಲಭಿಸಿತು.  ಆದಿನದ ಪ್ರಯಾಣಕ್ಕೆ  ಸಿದ್ಧರಾಗಿ ಕುಳಿತೆವು.  ಹೊರಗಡೆ ಸಣ್ಣದಾಗಿ ಮಳೆ ಸುರಿಯುತ್ತಿತ್ತು. ಹಲವಾರು ಮಂದಿ ಸ್ಕೂಟರ್ ನಲ್ಲಿ ಹೋಗುತ್ತಿದ್ದರು. ಹನೋಯ್ ನಗರದಲ್ಲಿ ಜನದಟ್ಟಣೆ ಹೆಚ್ಚು. ಜನರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಸ್ಕೂಟರ್ ಗಳಿವೆ ಎಂದಿದ್ದ ಮಾರ್ಗದರ್ಶಿ. 

ರಸ್ತೆಯಲ್ಲಿ ‘ನಾನ್ ಲಾ’ ಎಂಬ ಶಂಕುವಿನಾಕಾರದ ಟೋಪಿ ಧರಿಸಿದ ಜನರು ಕಾಣಿಸುತ್ತಿದ್ದರು. ವಿಯೆಟ್ನಾಂನ ಸಾಂಪ್ರದಾಯಿಕ ‘ನಾನ್ ಲಾ’ ಟೋಪಿಯ ಬಗ್ಗೆ ಚೆಂದದ ದಂತಕಥೆಯೊಂದಿದೆ. ವಿಯೆಟ್ನಾಂನ ಪ್ರಮುಖ ಬೆಳೆ ಭತ್ತ. ಹಾಗಾಗಿ ಹೆಚ್ಚಿನವರು ಭತ್ತ ಬೆಳೆಯುವ ಕೃಷಿಕ ಸಮುದಾಯದವರು. ಹಲವಾರು ನದಿಗಳಿಂದ ಕೂಡಿದ ಪ್ರಾಂತ್ಯಗಳಲ್ಲಿ ಮಳೆಯೂ ಹೆಚ್ಚು. ಒಮ್ಮೆ ವಿಪರೀತ ಮಳೆ ಸುರಿಯುತ್ತಿದ್ದಾಗ, ಆಕಾಶದಿಂದ ಬಂದ ದೇವತೆಯೊಬ್ಬಳು ತನ್ನ ದೈತ್ಯಾಕಾರದ ಟೋಪಿಯ ಅಡಿಯಲ್ಲಿ ಮಾನವಕುಲವನ್ನು ರಕ್ಷಿಸಿದಳಂತೆ. ಅವಳು ನಾಲ್ಕು ಸುತ್ತಿನ ಎಲೆಗಳಿಂದ ಮಾಡಿದ ಟೋಪಿಯನ್ನು ಧರಿಸಿದ್ದಳಂತೆ. ದೇವಿಯು ಕಣ್ಮರೆಯಾದ ನಂತರ , ವಿಯೆಟ್ನಾಮೀಸ್ ಜನರು ಅವಳನ್ನು ಮಳೆ-ರಕ್ಷಾಕವಚ ದೇವತೆಯಾಗಿ ಆರಾಧಿಸಿ ದೇವಾಲಯವನ್ನು ನಿರ್ಮಿಸಿದರು. ಬಿದಿರಿನ ಕಡ್ಡಿ ಮತ್ತು ಪಾಮ್ ಗಿಡದ ಎಲೆಗಳನ್ನು ಬಳಸಿ, ದೇವತೆ ಧರಿಸಿದಂತಹ ಟೋಪಿಯನ್ನು ತಯಾರಿಸಲಾರಂಭಿಸಿದರಂತೆ. ಡೆಲ್ಟಾ ಪ್ರದೇಶದ ರೈತ ಸಮುದಾಯದವರು ವಿನ್ಯಾಸ ಮಾಡಿದ ನಾನ್ ಲಾ ಟೋಪಿಗೆ ‘Rice Farmer’s Hat ‘ ಎಂಬ ಹೆಸರಿದೆ.

ಕೆಲವು ವರ್ಷಗಳ ಹಿಂದೆ, ಕರಾವಳಿ ಪ್ರದೇಶದಲ್ಲಿ, ಕೃಷಿಕಾರ್ಮಿಕರು ಅಡಿಕೆ ಹಾಳೆಯನ್ನು ಉಪಯೋಗಿಸಿ ತಯಾರಿಸಲಾಗುವ ‘ ಮುಟ್ಟಾಳೆ’ ಎಂಬ ಟೋಪಿಯನ್ನು ಧಾರಾಳವಾಗಿ ಧರಿಸುತ್ತಿದ್ದರು. ತಲೆಗೆ ಬಿಸಿಲು-ಮಳೆಯಿಂದ ರಕ್ಷಣೆ, ತಲೆಹೊರೆ ಹೊರುವಾಗ ಆಧಾರವಾಗಿ, ಏನಾದರೂ ವಸ್ತುಗಳನ್ನು ಇಡಲು ಪಾತ್ರೆಯಂತೆ……ಹೀಗೆ ಮುಟ್ಟಾಳೆ ಬಹೂಪಯೋಗಿಯಾಗಿತ್ತು. ಇದು ಹಳೆಯದಾದರೆ, ಹರಿದರೆ, ಒಲೆಗೆ ಹಾಕಿದರಾಯಿತು. ಉರಿದು ಬೂದಿಯಾಗುವ ಸಾವಯವ ಟೋಪಿ. ಪ್ಲಾಸ್ಟಿಕ್ /ರಬ್ಬರ್ ಟೋಪಿಯಂತೆ ಪರಿಸರಕ್ಕೆ ಹಾನಿ ಮಾಡುವುದಿಲ್ಲ. ಈಗಲೂ ಗ್ರಾಮೀಣ ಭಾಗದಲ್ಲಿ ಕೆಲವರು ಮುಟ್ಟಾಳೆಯನ್ನು ಉಪಯೋಗಿಸುತ್ತಿರಬಹುದಾದರೂ, ನವನವೀನ ಆಧುನಿಕ ಟೋಪಿಗಳ ಆಗಮನದಿಂದ, ‘ಮುಟ್ಟಾಳೆ’ ತಯಾರಿಸುವ ಗ್ರಾಮೀಣ ಕರಕುಶಲ ಕಲೆ ನೇಪಥ್ಯಕ್ಕೆ ಸರಿದಿದೆ. ಬಹುಶ: ಈಗಿನ ತಲೆಮಾರಿಗೆ ‘ಮುಟ್ಟಾಳೆ’ಯ ಬಗ್ಗೆ ಗೊತ್ತಿಲ್ಲದೆಯೂ ಇರಬಹುದು. ಆದರೆ ವಿಯೆಟ್ನಾಂ ಜನರು , ಮುಟ್ಟಾಳೆಯ ಇನ್ನೊಂದು ರೂಪದಂತಿರುವ, ಪಾಮ್ ಗಿಡದ ಎಲೆ ಹಾಗೂ ಬಿದಿರನ್ನು ಸೇರಿಸಿ ತಯಾರಿಸುವ ತಮ್ಮ ಜಾನಪದ ಟೋಪಿ ‘ನಾನ್ ಲಾ’ ವನ್ನು ಆರಾಮವಾಗಿ ಧರಿಸಿ ಎಗ್ಗಿಲ್ಲದೆ ಎಲ್ಲೆಡೆಯೂ ಓಡಾಡುತ್ತಿರುವುದು ನೋಡಿ ಖುಷಿ ಆಯಿತು. ನಾನು ಗಮನಿಸಿದಂತೆ, ಪ್ರವಾಸಿತಾಣಗಳಲ್ಲಿ ವ್ಯಾಪಾರಕ್ಕೆ ಇರಿಸಲಾದ ಕೈಚೀಲ, ಕೀ ಬಂಚ್, ಛತ್ರಿ, ಅಲಂಕಾರಿಕ ವಸ್ತು ಮೊದಲಾದುವುಗಳಲ್ಲಿ ‘ನಾನ್ ಲಾ’ ಚಿತ್ರರೂಪವಾಗಿ ಕಂಗೊಳಿಸುತ್ತದೆ. ಸೈಕಲ್ ಸವಾರರು, ಬೀದಿಬದಿಯ ಮಾರಾಟಗಾರರು, ಹೋಟೆಲ್ ನ ಸ್ವಾಗತಕಾರಿಣಿಯರು …… ‘ನಾನ್ ಲಾ’ ಧರಿಸಿರುತ್ತಾರೆ. ಇವರನ್ನು ಕಂಡು, ನಮ್ಮಂತಹ ಪ್ರವಾಸಿಗರು ವಿಯೆಟ್ನಾಂನಲ್ಲಿ ‘ನಾನ್ ಲಾ’ ಕೊಂಡು ತಲೆಗೇರಿಸಿ, ಹೆದ್ದಾರಿಯಲ್ಲಿ ನಡೆಯುತ್ತಾ, ಹೆಮ್ಮೆಯಿಂದ ಫೊಟೊ ತೆಗೆಸಿಕೊಳ್ಳುತ್ತೇವೆ! ಆದರೆ ‘ಮುಟ್ಟಾಳೆ’ ಧರಿಸಿಕೊಂಡು ಏರ್ ಪೋರ್ಟ್ ಬಿಡಿ, ಪಕ್ಕದ ರಸ್ತೆಗೂ ಹೋಗಲಾರೆವು. ನಮ್ಮ ಊರಿನಲ್ಲಿಯೂ ಸ್ಥಳೀಯ ವಸ್ತುಗಳನ್ನು ನಾವು ಸಂಕೋಚವಿಲ್ಲದೆ ಬಳಸುವ ವಾತಾವರಣ ಇದ್ದರೆ ಚೆನ್ನ, ಆಗ ಸ್ಥಳೀಯ ಕಲೆಗೆ ಉತ್ತೇಜನ ಹಾಗೂ ತಯಾರಿಸುವವರಿಗೆ ಆದಾಯ ಸಿಗಬಹುದಲ್ಲವೇ ಎನಿಸಿತು.

ನಿಗದಿತ ಸಮಯಕ್ಕೆ ಸರಿಯಾಗಿ  ನಮ್ಮ ಆ ದಿನದ ಮಾರ್ಗದರ್ಶಿ   ‘ಟೋನಿ’ ಬಂದರು. ತಮ್ಮ ಪರಿಚಯ ತಿಳಿಸಿ,  ಬಸ್ಸು ಹೋಟೆಲ್ ನ ವರೆಗೆ ಬರಲು ಆಗದ ಕಾರಣ, ತನ್ನನ್ನು ಅನುಸರಿಸಿ ಬನ್ನಿ ಅಂದರು. ಪಕ್ಕದ  ಮುಖ್ಯರಸ್ತೆಯಲ್ಲಿ ಸಣ್ಣ ಬಸ್ ನಿಂತಿತ್ತು. ಅದರಲ್ಲಿ ಆಗಲೇ 12 ಜನ ಅಪರಿಚಿತ ಪ್ರವಾಸಿಗರಿದ್ದರು.  ಉತ್ತರ ಪ್ರದೇಶ, ಅಹ್ಮದಾಬಾದ್ ಹಾಗೂ ಕೆನಡಾದಿಂದ ಬಂದವರೊಬ್ಬರಿದ್ದರು.   ಟೋನಿ, ನಮ್ಮೆಲ್ಲರನ್ನೂ ಉದ್ದೇಶಿಸಿ  ನಮ್ಮನ್ನು ವಿಯೆಟ್ನಾಂನ ಪುರಾತನ ರಾಜಧಾನಿಯಾಗಿದ್ದ  ‘ ಹೊವಾ ಲು’ Hoa Lu  ಎಂಬಲ್ಲಿಗೆ ಕರೆದೊಯ್ಯುತ್ತೇವೆ ಎಂದರು. ಇದು ಹನೋಯ್ ನಗರದಿಂದ 120 ಕಿಮೀ ದೂರದಲ್ಲಿರುವ  ನಿನ್ಹ್ ಬಿನ್ಹ್  (Ninh Binh)  ಪ್ರಾಂತ್ಯದಲ್ಲಿದೆ.  ಇಲ್ಲಿ ಸುಮಾರು ಆರು ಎಕರೆ ಪ್ರದೇಶದಲ್ಲಿ ಹಬ್ಬಿರುವ  ಟ್ರಾಂಗ್ ಆನ್   ಸಂಕೀರ್ಣದಲ್ಲಿ (Trang An Complex)  ಪುರಾತನ ಪಗೋಡಗಳು, ಅಂದಿನ ರಾಜರಿಗಾಗಿ ನಿರ್ಮಿಸಿದ್ದ ದೇವಾಲಯಗಳು ಇವೆ ಒಂದೆಡೆ  ಸುಣ್ಣದ ಕಲ್ಲಿನ  ಪರ್ವತಗಳು,  ಇನ್ನೊಂದೆಡೆ ಕಣ್ಣು ಹಾಯಿಸಿದಷ್ಟೂ ದೂರದಲ್ಲಿ ಬೆಳೆದು ನಿಂತ ಭತ್ತದ ಪೈರುಗಳು, ಇವೆರಡರ ಮಧ್ಯೆ ವಿಶಾಲವಾಗಿ ಹರಿಯುವ ‘ರೆಡ್ ರಿವರ್’  ಕೂಡಿದ್ದು ಪ್ರಕೃತಿ ಸೌಂದರ್ಯ ಅದ್ಭುತವಾಗಿದೆ. ಇದು ವಿಯೆಟ್ನಾಂನ  ಸಾಂಸ್ಕೃತಿಕ ಹಾಗೂ ಪಾರಂಪರಿಕ ತಾಣವೆಂದು ಯುನೆಸ್ಕೋದಿಂದ ಗುರುತಿಸಲ್ಪಟ್ಟಿದೆ ಎಂದರು.  ‘ನಿನ್ಹ್ ಬಿನ್ಹ್’ನಗರದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು  ಸೈಕಲ್ ನಲ್ಲಿ ಸುತ್ತು ಹಾಕುವುದು ಉತ್ತಮ. ಆಸಕ್ತರಿಗೆ ಅಲ್ಲಿ ಪ್ರವಾಸಿಗರಿಗೆ   ಉಚಿತವಾಗಿ ಸೈಕಲ್ ದೊರೆಯುತ್ತದೆ.   ದಾರಿ ಮಧ್ಯದಲ್ಲಿ ಒಂದೆಡೆ ಕಾಫಿ/ಚಹಾಕ್ಕಾಗಿ ನಿಲ್ಲಿಸುತ್ತೇವೆ, ಅಲ್ಲಿ  ಬಿದಿರಿನ ಉತ್ಪನ್ನಗಳ ಮಳಿಗೆಯೂ ಇದೆ. ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಸ್ಠಳೀಯ ಮಾರಾಟಗಾರರನ್ನು ಬೆಂಬಲಿಸಿ ಎಂದೂ ವಿನಂತಿಸಿದರು.

PC: Internet

ಹನೋಯ್ ನಗರದಿಂದ ಹೊರಟ  ಬಸ್ಸು , ನಗರದ ಹೊರವಲಯದಲ್ಲಿ ಚಲಿಸಲಾರಂಭಿಸಿತು. ಎಲ್ಲೆಲ್ಲೂ ಹಸಿರು  ಗದ್ದೆಗಳು, ಮರಗಿಡಗಳು ಕಾಣಿಸುತ್ತಿದ್ದುವು. ಗದ್ದೆಗಳ ಪಕ್ಕದಲ್ಲಿ  ಅಲ್ಲಲ್ಲಿ ಕಾಣಿಸುತಿದ್ದ ಗ್ರಾಮೀಣ ಮನೆಗಳು.  ಕಸ ನಿರ್ವಹಣೆ ಚೆನ್ನಾಗಿಯೇ ಇತ್ತು. ಪ್ಲಾಸ್ಟಿಕ್ ತ್ಯಾಜ್ಯ ಬಹಳ ಕಡಿಮೆಯಿದ್ದು, ಹೆಚ್ಚಿನ  ರಸ್ತೆಗಳು  ಅಗಲವಾಗಿ ಚೆನ್ನಾಗಿದ್ದುವು.  ವಾಹನ ದಟ್ಟಣೆಯೂ ಕಡಿಮೆ.  ಹೆಚ್ಚು ಕಡಿಮೆ, ಮಂಡ್ಯ-ಮದ್ದೂರಿನ ನಡುವೆ  ಹಸಿರು ಗದ್ದೆಗಳ ನಡುವೆ  ಪ್ರಯಾಣಿಸಿದ ಹಾಗೆ  ಹಿತಕಾರಿ ಪ್ರಯಾಣವೆನಿಸಿತು. 

ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=41504

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು

9 Responses

  1. ಪದ್ಮಾ ಆನಂದ್ says:

    ಸ್ಥಳದ ಬಗ್ಗೆ ಪೂರ್ತಿಯಾದ ಮಾಹಿತಿಗಳನ್ನು ನೀಡುತ್ತಾ ಸುಲಲಿತವಾಗಿ ಓದಿಸಿಕೊಳ್ಳತ್ತಿದೆ, ವಿಯೆಟ್ನಾಂ ಪ್ರವಾಸ ಕಥನ.

  2. ಅಭ್ಭಾ…ಪ್ರವಾಸ ಕಥನ ಸೊಗಸಾದ ನಿರೂಪಣೆಯ ಮೂಲಕ ಅನಾವರಣ ಸಾಗುತ್ತ ಇರುವುದು.. ಪೂರಕ ಚಿತ್ರ.. ದಂತ ಕಥೆ..ಎಲ್ಲವೂ ಮುದ ಕೊಡುತ್ತಾ ಹೋಗುತ್ತಿದೆ…ಗೆಳತಿ..

  3. ನಯನ ಬಜಕೂಡ್ಲು says:

    ನಗರದ ಇತಿಹಾಸ ಚೆನ್ನಾಗಿದೆ.

  4. ವೆಂಕಟಾಚಲ says:

    ಸುಂದರ ಪ್ರಸ್ತುತಿ….

  5. ಶಂಕರಿ ಶರ್ಮ says:

    ಚಂದದ ನಾನ್ ಲಾ ಟೋಪಿಯ ಪೌರಾಣಿಕ ಹಿನ್ನೆಲೆಯೊಂದಿಗೆ, ನಮ್ಮೂರ ಮುಟ್ಟಾಳೆಯನ್ನು ನೆನಪಿಸುತ್ತಾ ಸಾಗಿದ ವಿಯೆಟ್ನಾಂ ಪ್ರವಾಸದ ಲೇಖನವು ಸರಳ ಸುಂದರವಾಗಿ, ಸುಲಲಿತವಾಗಿ ಓದಿಸಿಕೊಂಡು ಸಾಗುತ್ತಿದೆ… ಧನ್ಯವಾದಗಳು ಹೇಮಾ ಅವರಿಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: