ಕಾದಂಬರಿ : ತಾಯಿ – ಪುಟ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)

ರಾಜಲಕ್ಷ್ಮಿ ನಾಲ್ಕು ಗಂಟೆಗೆ ಎದ್ದು ಮುಖ ತೊಳೆದರು. ಆಗ ಗುಂಡುಗುಂಡಾಗಿದ್ದ ಮುತ್ತೈದೆಯೊಬ್ಬರು ಕಾಫಿ, ಚೂಡವಲಕ್ಕಿ ತಂದರು.
“ನೀವು ಗೌರಮ್ಮ ತಾನೆ?”
“ಹೌದಮ್ಮ. ನೀವು ಕಾಫಿ ಕುಡಿಯಿರಿ. ನಾನು ಅರ್ಧಗಂಟೆಯಲ್ಲಿ ಬರ್ತೀನಿ. ವಾಕಿಂಗ್ ಹೋಗೋಣ.”
“ವಾಕಿಂಗ್‌ಗೆ ಹೋಗಕ್ಕೆ ಪರ‍್ಮಿಶನ್ ಕೊಡ್ತಾರಾ?”
“ಕೊಡದೆ ಏನ್ಮಾಡ್ತಾರೆ? ನೀವೇನು ೧೮ ವರ್ಷದ ಹುಡುಗೀನಾ ಪರ‍್ಮಿಶನ್ ತೆಗೆದುಕೊಳ್ಳಕ್ಕೆ? ಇದು ಶ್ರೀಮಂತರ ಆಶ್ರಮ. ಯಾರೂ ಏನೂ ಅನ್ನಲ್ಲ. ನಮ್ಮ ಜೊತೆ ಇನ್ನೂ ಇಬ್ಬರು ಇರ್ತಾರೆ.”
ರಾಜಲಕ್ಷ್ಮಿಗೆ ಖುಷಿಯಾಯಿತು. ವಾಕಿಂಗ್ ಹೋದಾಗ ಅದೇ ಆಶ್ರಮದಲ್ಲಿದ್ದ ಮಣಿಯಮ್ಮ, ರತ್ನಮ್ಮ, ರಮಣಿರಾವ್, ಪರಿಚಯವಾದರೂ ಮಣಿಯಮ್ಮ ರತ್ನಮ್ಮನಿಗೆ ಗಂಡು ಮಕ್ಕಳಿರಲಿಲ್ಲ. ಹೆಣ್ಣು ಮಕ್ಕಳು ಕೆಲಸದಲ್ಲಿದ್ದರು. ಅವರೇ ಆಶ್ರಮಕ್ಕೆ ಸೇರಿಸಿದ್ದರು. ರಮಣಿರಾವ್‌ಗೆ ೭೫-೭೬ ವರ್ಷಗಳಿರಬಹುದು. ಅವರ ಮಗ-ಸೊಸೆ ಇಬ್ಬರೂ ಪ್ರೊಫೆಸರ್ಸ್ ಆಗಿ ರಿಟೈರ್ ಆಗಿದ್ದರು. ರಮಣಿಯವರ ಮಗ-ಸೊಸೆ ಅಮೇರಿಕಾದಲ್ಲಿದ್ದರು. ಅವರಿಗೆ ಅವಳಿ ಗಂಡು ಮಕ್ಕಳಿದ್ದವು. ಆ ಮಕ್ಕಳನ್ನು ನೋಡಿಕೊಳ್ಳಲು ಮಗ-ಸೊಸೆ ಹೋಗಿದ್ದರು. ರಮಣಿರಾವ್‌ಗೆ ವೃದ್ಧಾಶ್ರಮ ಸೇರುವುದು ಅನಿವಾರ್ಯವಾಗಿತ್ತು.

ಪರಸ್ಪರ ಪರಿಚಯವಾದ ಮೇಲೆ ರಾಜಲಕ್ಷ್ಮಿ ತಮ್ಮ ಬಗ್ಗೆ ಹೇಳಿದರು.
ಒಂದು ವಾರ ಕಳೆಯುವಷ್ಟರಲ್ಲಿ ರಾಜಲಕ್ಷ್ಮಿಗೆ ಎಲ್ಲಾರ ಪರಿಚಯವಾಯಿತು. ಒಬ್ಬೊಬ್ಬರದು ಒಂದೊಂದು ಕಥೆ. ಬಹಳಷ್ಟು ಜನ ಗಂಡುಮಕ್ಕಳಿಗೆ ತಾಯಿ ಬೇಕಿರಲಿಲ್ಲ. ತಾಯಿಯನ್ನು ಜೊತೆಯಲ್ಲಿಟ್ಟುಕೊಳ್ಳುವುದಕ್ಕಿಂತ ತಿಂಗಳಿಗೆ ೩೦,೦೦೦ ರೂ. ಕೊಟ್ಟು ವೃದ್ಧಾಶ್ರಮಲ್ಲಿಡುವುದು ಒಳ್ಳೆಯದು ಅನ್ನಿಸಿತ್ತು.

ಅದೇ ಆಶ್ರಮದಲ್ಲಿದ್ದ ಚಂದ್ರಮ್ಮ ಒಂದು ದಿನ ಬೇಸರದಲ್ಲಿ ಹೇಳಿದರು. “ಯಾಕೋ ಬದುಕು ಯಾಂತ್ರಿಕ ಅನ್ನಿಸಿಬಿಟ್ಟಿದೆ. ಹಿಂದೆ ಕೂಡು ಕುಟುಂಬಗಳಿದ್ದಾಗಲೇ ಚೆನ್ನಾಗಿತ್ತು. ಇಷ್ಟವೋ-ಕಷ್ಟವೋ ಮಗ-ಸೊಸೆ ನೋಡಿಕೊಳ್ತಿದ್ರು. ಆದರೆ ಈಗ ಮಕ್ಕಳಿದ್ದರೂ ಪ್ರಯೋಜನವಿಲ್ಲ.”
“ಹೆಣ್ಣು ಮಕ್ಕಳಿದ್ದಿದ್ದರೆ ನಮಗೆ ಇಂತಹ ಕಷ್ಟ ಬರುತ್ತಿರಲಿಲ್ಲ” ಭವಾನಮ್ಮ ಹೇಳಿದರು.
“ಈಗಿನ ಕಾಲದಲ್ಲಿ ಗಂಡು ಮಕ್ಕಳು, ಹೆಣ್ಣು ಮಕ್ಕಳು ಎಲ್ಲರೂ ಒಂದೇ. ನನಗೆ ಒಬ್ಬ ಮಗ, ಒಬ್ಬ ಮಗಳು ಇದ್ದಾರೆ. ಮಗ ದೇವರಾಜ ಅರಸು ರಸ್ತೆಯಲ್ಲಿ ದಿನಸಿ ಅಂಗಡಿ ಇಟ್ಟಿದ್ದಾನೆ. ಅವನ ಹೆಂಡತಿ ತಂದೆ-ತಾಯಿ ಅವನ ಜೊತೆ ಇದ್ದಾರೆ. ಅವರೇ ಅಂಗಡಿ ಇಟ್ಟುಕೊಟ್ಟಿರುವುದು. ಆದ್ದರಿಂದ ಅವನು ಹೆಂಡತಿ ಹಾಕಿದ ಗೆರೆ ದಾಟಲ್ಲ. ಮಗಳು-ಅಳಿಯ ಕಾಲೇಜು ಲೆಕ್ಚರರ‍್ಸ್. ಅವಳ ಮಕ್ಕಳು ಚಿಕ್ಕವರಿದ್ದಾಗ ನನ್ನನ್ನೂ, ನಮ್ಮನೆಯವರನ್ನೂ ಜೊತೆಯಲ್ಲಿ ಇಟ್ಟುಕೊಂಡಿದ್ದಳು. ಮಕ್ಕಳಿಬ್ಬರೂ ಹೈಸ್ಕೂಲಿಗೆ ಬರುವ ವೇಳೆಗೆ ನಮ್ಮನೆಯವರು ಹೋಗಿಬಿಟ್ರು. ಮಗಳು ನನ್ನನ್ನು ಇಲ್ಲಿಗೆ ಸೇರಿಸಿದಳು” ಭವಾನಿ ಕಣ್ಣೀರು ತುಂಬಿಕೊಂಡು ಹೇಳಿದರು.

“ನೋಡಿ ನಾವು ಮಕ್ಕಳೀಗೆ ಬೇಡವಾಗಿದ್ದೀವಿ ನಿಜ. ಕೆಲವು ಸಂದರ್ಭಗಳಲ್ಲಿ ಆ ದೇವರೇ ನಮ್ಮನ್ನು ಮಕ್ಕಳಿಂದ ದೂರ ಮಾಡಿಬಿಡ್ತಾನೆ. ನನ್ನ ವಿಚಾರದಲ್ಲಿ ದೇವರೇ ನನ್ನವರನ್ನು, ನನ್ನ ಮಗನನ್ನು ನನ್ನಿಂದ ದೂರ ಮಾಡಿದ……..” ಭುವನೇಶ್ವರಿ ಹೇಳಿದರು.
“ನಿಮ್ಮಗ, ನಿಮ್ಮನೆಯವರು ನಿಮ್ಮನ್ನು ಮನೆಯಿಂದ ಹೊರಗೆ ಹಾಕಿದ್ರಾ?”
“ಛೆ ಛೆ ನಮ್ಮ ಯಜಮಾನರು ಟ್ರೆಷರಿಯಲ್ಲಿ ಗುಮಾಸ್ತರಾಗಿದ್ರು. ತುಂಬಾ ಪ್ರಾಮಾಣಿಕ ವ್ಯಕ್ತಿ. ಸ್ವಂತ ಮನೆ ಇತ್ತು. ನಮ್ಮ ಒಬ್ಬನೇ ಮಗ ಸಂತೋಷ್‌ನ ಕಷ್ಟಪಟ್ಟು ಇಂಜಿನಿಯರ್ ಮಾಡಿದೆವು. ಬೆಂಗಳೂರಿನಲ್ಲಿ ಒಳ್ಳೆಯ ಕಂಪನಿಯಲ್ಲಿ ಕೆಲಸವಿತ್ತು. ಮಗನಿಗೆ ಮದುವೆಮಾಡಬೇಕೂಂತಿದ್ದೆವು. ಆದರೆ ಆಗಿದ್ದೇ ಬೇರೆ……….”
“ಏನಾಯ್ತು?” ಭವಾನಿ ಕೇಳಿದರು.

“ಮಗ ಆಫೀಸ್‌ನಿಂದ ವಾಪಸ್ಸಾಗುವಾಗ ಬೈಕ್ ಆಕ್ಸಿಡೆಂಟ್‌ನಲ್ಲಿ ಹೋಗಿಬಿಟ್ಟ. ನಮ್ಮನೆಯವರು ಮಗನ ಕೊರಗಿನಲ್ಲಿ ಹಾಸಿಗೆ ಹಿಡಿದರು. ನಂತರ ತುಂಬಾ ಮಂಕಾದರು. ಮಾತು ಕಡಿಮೆ ಮಾಡಿದರು. ತುಂಬಾ ವೀಕ್ ಆದರು. ಕೈಯಲ್ಲಿ ಒಂದು ಚಮಚ ಹಿಡಿಯುವುದಕ್ಕೂ ಆಗ್ತಿರಲಿಲ್ಲ. ದೇವರನ್ನು ನಾನೇ ಪ್ರಾರ್ಥಿಸ್ತಿದ್ದೆ.
“ನನಗಿಂತ ಮೊದಲು ನಮ್ಮನೆಯವರನ್ನೇ ಮೊದಲು ನಿನ್ನ ಹತ್ತಿರ ಕರೆದುಕೊಳ್ಳಪ್ಪಾಂತ.”
“ಯಾಕೆ?” ಚಂದ್ರಮ್ಮ ಪ್ರಶ್ನಿಸಿದರು.
“ಒಂದು ವೇಳೆ ಅವರು ಬದುಕಿ, ನಾನು ಹೋಗಿದ್ದಿದ್ರೆ ಅವರನ್ನು ಯಾರು ನೋಡಿಕೊಳ್ತಿದ್ರು ನೀವೇ ಹೇಳಿ. ನಾವು ಹೆಂಗಸರು ಒಂದು ತುತ್ತು ಅನ್ನ ಬೇಯಿಸಿಕೊಂಡು ಹೇಗೋ ಬದುಕ್ತೀವಿ. ಆದರೆ ಇಳಿ ವಯಸ್ಸಿನಲ್ಲಿ ಗಂಡಸರು ಹೆಂಡತಿಯನ್ನು ಕಳೆದುಕೊಂಡು ಒಂಟಿಯಾದ್ರೆ ಅತಂತ್ರರಾಗಿ ಬಿಡ್ತಾರೆ.”

“ನಿಮ್ಮನೆಯವರು ಹೋದ ಮೇಲೆ ಇಲ್ಲಿಗೆ ಬಂದ್ರಾ?” ರಾಜಲಕ್ಷ್ಮಿ ಪ್ರಶ್ನಿಸಿದರು.
“ನಮ್ಮನೆಯವರಿಗೆ ಒಬ್ಬ ತಮ್ಮ ಇದ್ದಾನೆ. ಅವನ ಇಬ್ಬರು ಹೆಣ್ಣು ಮಕ್ಕಳೂ ಮದುವೆಯಾಗಿ ಆರಾಮವಾಗಿದ್ದಾರೆ. ಅವನು ನನ್ನನ್ನು ಅವರ ಮನೆಗೆ ರ‍್ಕೊಂಡು ಹೋದ. ನಾನೂ ಫ್ಯಾಮಿಲಿ ಪೆನ್ಷನ್‌ನಲ್ಲಿ ಆರಾಮವಾಗಿದ್ದೆ. ಮನೆಗೆ ಬೇಕಾದ ಹಣ್ಣು, ಹಂಪಲು, ತರಕಾರಿ, ಕಾಫಿಪುಡಿ, ಹಾಲು ನಾನೇ ತರ್ತಿದ್ದೆ. ೩ ತಿಂಗಳ ನಂತರ ಅವನ ಬುದ್ಧಿ ಗೊತ್ತಾಯ್ತು.”
“ಏನಾಯ್ತು? ಅವರೇನು ಮಾಡಿದ್ರು?”
“ಸರಸ್ವತಿಪುರಂನಲ್ಲಿ ನಮ್ಮದೊಂದು ಮನೆಯಿತ್ತು. ಅದನ್ನು ಬರೆದುಕೊಡಿ ಅತ್ತಿಗೇಂತ ಕೇಳಕ್ಕೆ ಶುರುಮಾಡಿದ…..”
“ಅದು ಪಿತ್ರಾರ್ಜಿತ ಆಸ್ತೀನಾ?”
“ನಮ್ಮ ಸ್ವಯಾರ್ಜಿತ ಆಸ್ತಿ. ಅದನ್ನು ಕೇಳಿದ್ರೆ ಸಿಟ್ಟುಬರಲ್ವಾ? ಆಗಲಪ್ಪ ಬರೆದುಕೊಡ್ತೀನಿ” ಅಂತ ಹೇಳಿ ಮೈಸೂರಿಗೆ ವಾಪಸ್ಸು ಬಂದೆ. ನಮ್ಮನೆಯನ್ನು ೮೦ ಲಕ್ಷಕ್ಕೆ ಮಾರಿ ಈ ಆಶ್ರಮ ಸೇರಿಕೊಂಡೆ.”
“ಒಳ್ಳೆಯ ಕೆಲಸ ಮಾಡಿದ್ರಿ.”

“ದೇವರು ನಮ್ಮ ಹಣೆಯಲ್ಲಿ ‘ಒಂಟಿಯಾಗಿರಬೇಕು’ ಅಂತ ಬರೆದಿದ್ದಾನೆ.
ಒಂಟಿಯಾಗಿರಕ್ಕಾಗಲ್ಲಾಂತ ಆತ್ಮಹತ್ಯೆ ಮಾಡಿಕೊಳ್ಳಕ್ಕಾಗತ್ತಾ? ಹಣ ಇದೆ. ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿಲ್ಲ. ನಮ್ಮ ಉಳಿದ ಜೀವನವನ್ನು ನಾವು ಸಂತೋಷವಾಗಿ ಕಳೆಯೋಣ.”
“ಸಂತೋಷವಾಗೀಂದ್ರೆ ಹೇಗೆ? ನಾವು ಒಂಟಿ ಅನ್ನುವ ಯೋಚನೆ ನಮ್ಮನ್ನು ಕಾಡದೆ ಇರುತ್ತದಾ?”
“ಯೋಚನೆ ಇದ್ದೇ ಇರತ್ತೆ. ಸಂತೋಷವಾಗಿರೋದು ಅಂದ್ರೆ ಸಿನಿಮಾ, ನಾಟಕಗಳಿಗೆ ಹೋಗೋದು, ಹೋಟೆಲ್‌ಗೆ ಹೋಗೋದು, ಪಾನಿಪೂರಿ ತಿನ್ನುವುದಲ್ಲ. ನಮ್ಮ ವಯಸ್ಸಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ಹಾಕಿಕೊಂಡು ನೆಮ್ಮದಿ ತಂದುಕೊಳ್ಳಲು ಪ್ರಯತ್ನಿಸೋಣ.”
“ನೀವು ಹೇಳ್ತಿರೋದು ನಿಜ. ನಾವೇನು ಮಾಡಬಹುದು ಹೇಳಿ.”
“ನಾಳೆ ಬೆಳಿಗ್ಗೆ ಎಲ್ಲರೂ ಒಟ್ಟಿಗೆ ಡೈನಿಂಗ್ ಹಾಲ್‌ನಲ್ಲಿ ತಿಂಡಿ ತಿನ್ನೋಣ. ಆಗ ಎಲ್ಲಾ ಸೇರಿ ಒಂದು ನಿರ್ಧಾರಕ್ಕೆ ಬರಬಹುದು.”
ಎಲ್ಲರಿಗೂ ಭುವನೇಶ್ವರಿಯವರ ಮಾತುಗಳು ಒಪ್ಪಿಗೆಯಾದವು.

ಮರುದಿನ ತಿಂಡಿಯ ವೇಳೆಗೆ ಎಲ್ಲರನ್ನೂ ಗೌರಮ್ಮ ಊಟದ ಟೇಬಲ್ ಬಳಿ ಸೇರಿಸಿದರು.
“ಯಾವತ್ತೂ ಇಲ್ಲದ ವಿಶೇಷ ಇವತ್ತೇನು?” ಗೋದಾಮಣಿ ಕೇಳಿದರು. ಆಕೆ ಯಾರ ಜೊತೆಯೂ ಸೇರುತ್ತಿರಲಿಲ್ಲ. ಯಾವಾಗಲೂ ಇಂಗ್ಲೀಷ್ ಪೇಪರ್ ಓದುತ್ತಾ, ತಮ್ಮ ರೂಮ್‌ನಲ್ಲಿದ್ದ ಟಿ.ವಿ. ನೋಡುತ್ತಾ ಕಾಲ ಕಳೆಯುತ್ತಿದ್ದರು. ಅವರು ಮಾತನಾಡುತ್ತಿದ್ದುದೇ ಇಬ್ಬರ ಜೊತೆ: ಪಕ್ಕದ ರೂಮ್‌ನಲ್ಲಿದ್ದ ನಿವೃತ್ತ ವೈದ್ಯೆ ಮಧುಮತಿ, ಎದುರು ರೂಮ್‌ನಲ್ಲಿದ್ದ ನಿವೃತ್ತ ಪ್ರೊಫೆಸರ್ ನಾಗಮಣಿ-ಇವರಿಬ್ಬರೂ ತಮ್ಮ ಸ್ಟೇಟಸ್‌ಗೆ ತಕ್ಕವರೆಂದು ಅವರು ಭಾವಿಸಿದ್ದರು.
ಗೋದಾಮಣಿಯ ಗಂಡ ಬಿಸಿನೆಸ್‌ಮ್ಯಾನ್. ಅವರ ಇಬ್ಬರು ಗಂಡು ಮಕ್ಕಳೂ ವಿದೇಶಗಳಲ್ಲಿದ್ದರು. ಅಲ್ಲಿಯ ಹುಡುಗಿಯರನ್ನೇ ಪ್ರೀತಿಸಿ ಮದುವೆಯಾಗಿದ್ದರು. ಗೋದಾಮಣಿಯ ಗಂಡ ತಮ್ಮ ೬೫ನೇ ವಯಸ್ಸಿನಲ್ಲಿ ಹೆಂಡತಿಯನ್ನು ಡೈವೋರ್ಸ್ ಮಾಡಿ ಕೋಮಲಾಶೆಟ್ಟಿ ಎನ್ನುವ ಇಂಡಸ್ಟ್ರಿಯಲಿಸ್ಟ್ ಕೈಹಿಡಿದಿದ್ದರು. ಗೋದಾಮಣಿಗೆ ಮಕ್ಕಳ ಮನೆ ಸರಿಹೋಗಿರಲಿಲ್ಲ. ಗಂಡನಿಂದ ಜೀವನಾಂಶ ಬರುತ್ತಿತ್ತು. ಮಕ್ಕಳೂ ಹಣ ಕಳಿಸುತ್ತಿದ್ದುದರಿಂದ ಹಣಕ್ಕೆ ಕೊರತೆಯಿರಲಿಲ್ಲ. ತಮ್ಮ ಅರವತ್ತೆಯ ವಯಸ್ಸಿನಲ್ಲಿಯೂ ಸೌಂದರ್ಯ ಕಾಪಾಡಿಕೊಂಡಿದ್ದ ಗೋದಾಮಣಿ ತಮ್ಮನ್ನು ಹೊಗಳುವವರನ್ನು ಮಾತ್ರ ಮಾತನಾಡಿಸುತ್ತಿದ್ದರು.

“ಮೇಡಂ ಇನ್ಮೇಲೆ ನಾನು ಪ್ರತಿ ರೂಂಗೂ ಊಟ,ತಿಂಡಿ ಸಪ್ಲೈ ಮಾಡಕ್ಕಾಗಲ್ಲ. ಇನ್ನುಮುಂದೆ ಇದೇ ಸಿಸ್ಟಮ್…..”
“ನಾನು ಮ್ಯಾನೇಜರ್ ಹತ್ರ ಮಾತಾಡ್ತೀನಿ.”
“ಹಾಗೇ ಮಾಡಿ. ಮ್ಯಾನೇಜರ್ ಎಲ್ಲ ರೂಂಗೂ ಸಪ್ಲೈ ಮಾಡಿ ಅಂತ ಹೇಳಿದ್ರೆ ಕೆಲಸ ಬಿಟ್ಟು ಹೋಗ್ತೀನಿ.”
“ಗೌರಮ್ಮ ಸುಮ್ಮನಿರಿ. ನಾನು ಮಾತಾಡ್ತೀನಿ. ಭುವನೇಶ್ವರಿಯವರೇ ನಾವು ಇಲ್ಲಿರುವವರು ೧೨ ಜನರಾದರೂ ಒಬ್ಬರಿಗೊಬ್ಬರು ಸೇರಿ ಮಾತಾಡೋದೇ ಅಪರೂಪವಾಗಿದೆ. ಉಳಿದ ದಿನಗಳನ್ನು ಕಳೆಯಲು ನಾವು ಏನಾದ್ರೂ ಮಾಡಬಹುದಲ್ವಾ?” ಮಾಧವಿ ಕೇಳಿದರು.

“ಏನು ಹಾಗಂದ್ರೆ?”
“ನೀವು ತುಂಬಾ ಚೆನ್ನಾಗಿ ಚಿತ್ರ ಬರೀತೀರಂತೆ. ಅದರ ಪ್ರದರ್ಶನ ಏರ್ಪಡಿಸಬಹುದು. ಆಸಕ್ತಿ ಇರುವವರು ಸೇರಿ ವಾರದಲ್ಲಿ ಎರಡು ದಿನ ಭಜನೆ ಮಾಡಬಹುದು. ಸಂಗೀತದಲ್ಲಿ ಆಸಕ್ತಿ ಇರುವ ಭವಾನಿ, ಚಂದ್ರಮ್ಮ ದೇವರನಾಮಗಳನ್ನು ಹಾಡಬಹುದು.”
“ನಿಮ್ಮ ಐಡಿಯಾ ಚೆನ್ನಾಗಿದೆ.”
“ಮಧುಮತಿಯವರೇ ನೀವು ಡಾಕ್ಟರ್. ನಮ್ಮ ಆಶ್ರಮಕ್ಕೆ ಬರುವ ಡಾಕ್ಟರ್ ಜೊತೆ ಸೇರಿ ಒಂದು ಆರೋಗ್ಯ ಶಿಬಿರ ನಡೆಸಬಹುದಲ್ಲವಾ?”
“ನಾವು ಇದೆಲ್ಲಾ ಮಾಡಿದರೆ ಯಾರು ಬರ್ತಾರೆ?” ಕೆಲವರು ಕೊಂಕು ತೆಗೆದರು.
“ಪ್ರಯತ್ನ ಮಾಡುವುದರಲ್ಲಿ ತಪ್ಪೇನಿದೆ?” ನಾಗಮಣಿ ಪ್ರಶ್ನಿಸಿದರು.
ಯಾರೂ ಉತ್ತರಿಸಲಿಲ್ಲ.

“ಗೋದಾಮಣಿ ಈ ಆಶ್ರಮದ ಓನರ್ ನಾನೊಮಲ್ – ಅವರಿಗೆ ನೀವೆಂದರೆ ತುಂಬಾ ಗೌರವವಿದೆ. ನೀವು ಅವರಿಗೆ ಫೋನ್ ಮಾಡಿ ಅವರ ಪರ‍್ಮಿಶನ್ ತೆಗೆದುಕೊಳ್ಳಿ. ಅವರಿಗೆ ಸದ್ಯಕ್ಕೆ ಭಜನೆ ಮಾಡುವ ದೇವರನಾಮಗಳನ್ನು ಹಾಡುವ ವಿಚಾರ ಹೇಳಿ. ಅವರು ಖಂಡಿತ ಬೇಡ ಅನ್ನಲ್ಲ.”
“ಓ.ಕೆ. ಇವತ್ತೇ ಮಾತಾಡುತ್ತೇನೆ.”
“ಗೋದಾಮಣಿ ಮೇಡಂ ನಮ್ಮ ವೃದ್ಧಾಶ್ರಮಕ್ಕೆ ಶಂಕರ ವೃದ್ಧಾಶ್ರಮಂತ ಹೆಸರಿಟ್ಟಿದ್ದಾರೆ. ಆದರೆ ಇಲ್ಲಿರೋದು ಪಾರ್ವತಿಯರು ನಮ್ಮ ಓನರ್‌ಗೆ ಸಾಯಿಬಾಬಾಂದ್ರೆ ತುಂಬಾ ಇಷ್ಟ. ಶ್ರೀ ಸಾಯಿರಾಂ ವೃದ್ಧಾಶ್ರಮ ಅಂತ ಹೆಸರಿಡೀಂತ ಹೇಳಿ.”
“ಆಗಲಿ ಆಗಲಿ” ಎಂದರು ಗೋದಾಮಣಿ.

PC: Internet

ಎಲ್ಲರೂ ತಿಂಡಿ ತಿಂದು, ತಮಗಿಷ್ಟವಾದ ಪಾನೀಯ ಕುಡಿದರು. ಮಲ್ಲಿ ಬಂದು ಟೇಬಲ್ ಕ್ಲೀನ್ ಮಾಡಿದಳು.
“ಒಂದೂವರೆ ಗಂಟೆಯ ಹೊತ್ತಿಗೆ ಊಟ ರೆಡಿ ಇರುತ್ತದೆ. ಎಲ್ಲರೂ ಸರಿಯಾದ ಸಮಯಕ್ಕೆ ಬಂದುಬಿಡಿ” ಗೌರಮ್ಮ ಹೇಳುವುದನ್ನು ಮರೆಯಲಿಲ್ಲ.
ಒಂದು ವಾರ ಕಳೆಯುವಷ್ಟರಲ್ಲಿ ನಾನೂಮಲ್ ಪರ‍್ಮಿಶನ್ ಕೊಟ್ಟರು. ಮ್ಯಾನೇಜರ್ ಹೊಸಬೋರ್ಡ್ ತಂದು ಹಾಕಿದರು.
ಗುರುವಾರ ಭಜನೆ ಶುರು ಮಾಡಿದರು. ಭಜನೆಯ ನಂತರ ದೇವರನಾಮ ಹಾಡುವವರು ಹಾಡಿದರು. ವೃದ್ಧಾಶ್ರಮದಿಂದ ಬರುತ್ತಿದ್ದ ಭಜನೆಗಳು, ಹಾಡುಗಳು ಅಕ್ಕ ಪಕ್ಕದ ಮನೆಯವರ ಗಮನ ಸೆಳಿದಿದ್ದವು. ಒಂದು ವಾರದ ನಂತರ ಗುರುವಾರದ ಭಜನೆಗೆ ಅಕ್ಕಪಕ್ಕದವರೂ ಬರಲಾರಂಭಿಸಿದರು. ಎರಡು ತಿಂಗಳು ಕಳೆಯುವಷ್ಟರಲ್ಲಿ ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಹೇಳುವವರು ಬಂದು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿದರು.

ಒಂದು ಬೆಳಿಗ್ಗೆ ತಿಂಡಿ ತಿನ್ನುವಾಗ ಭವಾನಿ ಹೇಳಿದರು. “ಭಜನಾ ಮಂಡಳಿಯಲ್ಲಿ ಸರಸ್ವತಿರಾವ್ ಅಂತ ಹೈಸ್ಕೂಲು ಮುಖ್ಯೋಪಾಧ್ಯಾಯಿನಿ ಇದ್ದಾರೆ. ಅವರ ಶಾಲೆ ಮುಂದಿನ ಬೀದಿಯಲ್ಲಿ ಇದೆಯಂತೆ. ಒಂದು ಭಾನುವಾರ ಗೋದಾಮಣಿ ಮೇಡಂದು ಚಿತ್ರ ಪ್ರದರ್ಶನ ಇಡೋಣ. ಅವತ್ತೇ ನಾವು ‘ಆರೋಗ್ಯ ಶಿಬಿರ’ ನಡೆಸಬಹುದು ಅಂದರು.”
“ಆರೋಗ್ಯ ಶಿಬಿರ’ ಅಂದ್ರೆ ಏನು ಮಾಡಬಹುದು?”
“ಡಾಕ್ಟರ್ ನೀವು ಹೇಳಿ.”
“ಬಂದವರಿಗೆ ಬಿ.ಪಿ. ಚೆಕ್ ಮಾಡಬಹುದು. ಜ್ವರ, ಕೆಮ್ಮು, ಗಂಟಲು ನೋವು ಇರುವವರು ಬಂದು ತೋರಿಸಿದರೆ ಔಷಧಿ ಕೊಡಬಹುದು. ನಮ್ಮ ಆಶ್ರಮಕ್ಕೆ ಬರುವ ಡಾ|| ಜೋಷಿಯವರನ್ನು ಕೇಳೋಣ. ಅವರು ಒಂದಿಬ್ಬರು ನರ್ಸ್ಗಳನ್ನು ಕಳಿಸಿದರೆ ಅನುಕೂಲವಾಗತ್ತೆ” ಡಾ|| ಮಧುಮತಿ ಹೇಳಿದರು.
“ಆ ದಿನ ಡಾಕ್ಟರ್‌ಗೆ ನರ್ಸ್ ಗಳಿಗೆ, ಸಹಾಯಕರಿಗೆ ನಾವು ಊಟದ ಏರ್ಪಾಡು ಮಾಡಬಹುದು” ರಾಜಲಕ್ಷ್ಮಿ ಹೇಳಿದರು.
“ಹಾಗೇ ಮಾಡೋಣ” ಎಂದರು ಮಧುಮತಿ.

ಗೋದಾಮಣಿಯ ಚಿತ್ರಗಳು ಎಲ್ಲರ ಮನಸ್ಸು ಗೆದ್ದವು. ಡಾ|| ಜೋಷಿ ತಾವೂ ಶಿಬಿರದಲ್ಲಿ ಪಾಲ್ಗೊಂಡು ಇಬ್ಬರು ನರ್ಸ್ ಗಳನ್ನೂ, ಇಬ್ಬರು ಆಯಾಗಳನ್ನೂ ಕರೆತಂದಿದ್ದರು. ಚಿತ್ರಪ್ರದರ್ಶನಕ್ಕೆ ಬಂದವರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಬಿ.ಪಿ. ಚೆಕ್ ಮಾಡುವುದಲ್ಲದೆ, ಅವರ ಸಮಸ್ಯೆಗಳನ್ನು ಕೇಳಿ ಸಲಹೆ ನೀಡಲಾಯಿತು. ಕೆಲವರಿಗೆ ಉಚಿತ ಔಷಧಿಗಳನ್ನು ಹಂಚಲಾಯಿತು.
ಗೋದಾಮಣಿ, ಡಾಕ್ಟರ್ ಕೆಲಸ ಕಾರ್ಯಗಳಲ್ಲೂ ನೆರವಾದರು.

ಆ ಬಡಾವಣೆಯ ನಾಗರೀಕರು ಸೇರಿ ಡಾ|| ಗೋದಾಮಣಿ, ಡಾ|| ಜೋಷಿ, ಡಾ|| ಮಧುಮತಿಯವರನ್ನು ಸನ್ಮಾನ ಮಾಡಿದರು. ಆಯಾಗಳಿಗೆ, ನರ್ಸ್ ಗಳಿಗೆ ಆಶ್ರಮದವರು ಸೇರಿ ತಲಾ ಸಾವಿರ ರೂಪಾಯಿಗಳನ್ನು ಕೊಟ್ಟರು. ಅಂದಿನ ಊಟದ ಖರ್ಚನ್ನು ರಾಜಲಕ್ಷ್ಮಿ ವಹಿಸಿಕೊಂಡರು. ಕಾಲಕಳೆದಂತೆ ಶ್ರೀ ಸಾಯಿರಾಂ ವೃದ್ಧಾಶ್ರಮದ ಚಟುವಟಿಕೆಗಳು ಜನರ ಗಮನ ಸೆಳೆದವು.
ಆಶ್ರಮದವರು ಪ್ರತಿ ಭಾನುವಾರ ತಮ್ಮ ಆಶ್ರಮಕ್ಕೆ ಹತ್ತಿರವಿದ್ದ ಪಾರ್ಕ್ ಸ್ವಚ್ಛ ಮಾಡುವ ಕಾರ್ಯಕ್ರಮ ಹಾಕಿಕೊಂಡಾಗ, ಆ ಬಡಾವಣೆಯ ಜನರೂ ಕೈಜೋಡಿಸಿದರು.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ :   https://www.surahonne.com/?p=41433

-ಸಿ.ಎನ್. ಮುಕ್ತಾ

5 Responses

  1. ಸೂಪರ್ ಹೊಸ ಆಲೋಚನೆ ಹೊಸ ಸಂಚಲನ…ಗುಡ್.. ಚೆನ್ನಾಗಿ ದೆ ಮೇಡಂ…

  2. ನಯನ ಬಜಕೂಡ್ಲು says:

    Nice

  3. ಶಂಕರಿ ಶರ್ಮ says:

    ವೃದ್ಧಾಶ್ರಮದಲ್ಲಿ ಹೊಸ ಹೊಸ ಯೋಜನೆಗಳನ್ನು ಯಾವ ರೀತಿ ಹಾಕಬಹುದು, ಅವುಗಳ ಪ್ರಯೋಜನಗಳೇನು ಎಂಬುದನ್ನು ಕಥಾ ಹಂದರದಲ್ಲಿ ಸೇರಿಸಿದ ರೀತಿ ಇಷ್ಟವಾಯ್ತು…ಧನ್ಯವಾದಗಳು ಮುಕ್ತಾ ಮೇಡಂ ಅವರಿಗೆ.

  4. ವೃದ್ಧಾಶ್ರಮದ ಬಗ್ಗೆ ಹೊಸ ಚಿಂತನೆಗಳು ಆಲೋಚನೆಗಳು ತುಂಬಾ ಚೆನ್ನಾಗಿದೆ

  5. ಪದ್ಮಾ ಆನಂದ್ says:

    ಜೀವನಾನುಭವ ಹೊಂದಿರುವ ಹಿರಿಯರು ಮಕ್ಕಳನ್ನು ದೂರುತ್ತಾ ಸುಮ್ಮನೆ ಕುಳಿತಿಕೊಳ್ಳದೆ ಕ್ರಿಯಾಶೀಲರಾಗುತ್ತಿರುವುದು ಸಮಕಾಲೀನ ಸಮಸ್ಯೆಗೆ ಸೂಚಿಸುತ್ತಿರುವ ಪರಿಹಾರದಂತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: