ಮಾಲಿನ್ಯ – ಒಂದು ವಿವೇಚನೆ

Share Button


ಮಾಲಿನ್ಯ – ಇದನ್ನು ಆಂಗ್ಲಭಾಷೆಯಲ್ಲಿ ‘Pollution’ ಎಂದು ಹೆಸರಿಸಿದ್ದಾರೆ. ಇದೊಂದು ಅತ್ಯಂತಮಲಿನ ಪದ. ಇದು ಎಷ್ಟು ಪ್ರಖ್ಯಾತಿ ಪಡೆದಿದೆಯೆಂದರೆ ಪ್ರತಿವರ್ಷ ಜೂನ್ 5 ರಂದು ವಿಶ್ವಪರಿಸರ ದಿನ ಎಂದು ಆಚರಿಸುತ್ತಾರೆ. ವಿಪರ‍್ಯಾಸವೆಂದರೆ ಪರಿಸರದ ಬಗ್ಗೆ ಕಾಳಜಿ ತೋರಿಸಲೋಸ್ಕರ ಕೇವಲ ಒಂದು ಗಿಡನೆಟ್ಟು ತಮ್ಮ ಸೇವೆ ಸಾರ್ಥಕವಾಯಿತೆಂದು ಕೈ ತೊಳೆದುಕೊಳ್ಳುತ್ತಾರೆ. ಈ ವಿಶ್ವಪರಿಸರ ದಿನ ವರ್ಷದ ಒಂದು ದಿನವಷ್ಟೇ ತನ್ನ ಇರುವಿಕೆಯನ್ನು ತೋರ್ಪಡಿಸುವಂತಿದೆ. ಮಾಲಿನ್ಯದ ಬಗ್ಗೆ ಮಾತನಾಡುವಾಗ ಸುಮಾರು ಹದಿನೈದು ತರಹದ ಮಾಲಿನ್ಯಗಳು ನಮ್ಮ ಪರಿಸರವನ್ನು ಹರಡಿ ರಾಡಿ ಮಾಡುತ್ತಿವೆ. ಅವುಗಳ ಸ್ಥೂಲ ಪರಿಚಯವೇ ಈ ಲೇಖನದ ಉದ್ದಿಶ್ಯ.

ಮೊದಲಿಗೆ ನಮ್ಮನ್ನೆಲ್ಲ ಕಾಡುತ್ತಿರುವುದು ವಾಯುಮಾಲಿನ್ಯ. ಇದು ಪ್ರಪಂಚದ ಎಲ್ಲಾ ರಾಷ್ಟçಗಳನ್ನು ಕಾಡುತ್ತಿರುವ ಒಂದು ಪೀಡೆ. ವಾಯು ಮಾಲಿನ್ಯದ ಮೂಲ ಸಿಮೆಂಟ್, ಉಕ್ಕು, ಕಲ್ನಾರು, ಗಣಿ, ರಾಸಾಯನಿಕ, ಕಾಗದ, ಸಕ್ಕರೆ, ಉಷ್ಣವಿದ್ಯುತ್ ಸ್ಥಾವರ, ಜವಳಿ, ರಸಗೊಬ್ಬರ, ಟೈರ್ ಮುಂತಾದ ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳು, ರಾಸಾಯನಿಕ ಅನಿಲಗಳು ವಾತಾವರಣವನ್ನು ಕಲುಷಿತಗೊಳಿಸುತ್ತವೆ. MINAS ಎಂಬ ರಾಷ್ಟ್ರೀಯ ಮಾನದಂಡ (Minimunum National Standards) ಎಲ್ಲಾ ವಿಷಕಾರಿ ಹೊರಹೊಮ್ಮುವಿಕೆಗೆ ಒಂದು ಕನಿಷ್ಟ ಮಾನದಂಡ ನಿಗದಿಮಾಡಿದೆ. ವಿಪರ‍್ಯಾಸ ಎಂದರೆ ಯಾವ ಕಾರ್ಖಾನೆಗಳೂ ಈ ಮಾನದಂಡವನ್ನು ಪಾಲಿಸದಿರುವುದು. ಇದರಿಂದ ವಾಯುಮಾಲಿನ್ಯ ಹತೋಟಿ ಮೀರಿ ಜನರ ನಿತ್ಯದ ಕೆಲಸಕಾರ್ಯಗಳನ್ನು ಅಸ್ತವ್ಯಸ್ಥಗೊಳಿಸುವುದು. ಉದಾಹರಣೆಗೆ ಧೂಳಿನ ಪ್ರಮಾಣ ಕೇವಲ 150 ಮಿ.ಗ್ರಾಂ. ಒಂದು ಘನಮೀಟರ್‌ಗೆ ಇರಬೇಕು. ಆದರೆ ಇದು ಡೆಲ್ಲಿಯಂಥ ನಗರದಲ್ಲಿ 4000 ಕ್ಕೂ ಮಿಕ್ಕಿ ಪೂರ್ತಿ ನಗರ ಕತ್ತಲೆಮಯವಾಗಿರುವ ದಿನಗಳಿವೆ. ಇದರಿಂದ ವಾಹನಸವಾರರಿಗೆ, ನಾಗರಿಕರಿಗೆ ಅತ್ಯಂತ ಕಷ್ಟ. ಉಸಿರಾಟದ ತೊಂದರೆ ದೆಹಲಿಯಲ್ಲಿ ಅತ್ಯಂತ ಕಾಡುತ್ತಿರುವ ಸಮಸ್ಯೆ. ಇದೊಂದು ಉದಾಹರಣೆಯಷ್ಟೆ. ಈ ಸಮಸ್ಯೆಗೆ ಸಾಕಷ್ಟು ಪರಿಹಾರಗಳಿವೆ. ಕಾರ್ಖಾನೆಗಳು ಮಾಲಿನ್ಯ ಕಡಿಮೆ ಗಳಿಸಲು ಹಲವಾರು ಯಂತ್ರೋಪಕರಣಗಳು ಲಭ್ಯ ಅದನ್ನು ಅಳವಡಿಸಿದರೆ ಶೇಕಡ 99 ರಷ್ಟು ಸಮಸ್ಯೆ ಪರಿಹಾರವಾದೀತು. ಆದರೆ ಅದರ ಅನುಷ್ಠಾನ ಮಾತ್ರ ಮಾಡುವ ಮನಸ್ಥೆöರ‍್ಯ ಅವರಲ್ಲಿಲ್ಲ.

ಜಲಮಾಲಿನ್ಯ ಪ್ರಪಂಚದಾದ್ಯಂತ ಕಾಡುತ್ತಿರುವ ಒಂದು ಸಮಸ್ಯೆ. ಭಾರತದಲ್ಲಂತೂ ಈ ಸಮಸ್ಯೆ ಭೀಕರ. ಮಿನಾಸ್ ಮಾನದಂಡಕ್ಕಿಂತ 500 ರಿಂದ 1000 ದಷ್ಟು ಹೆಚ್ಚಿನ ವಿಷಕಾರಿ ಹಾಗೂ ಇತರೇ ಕಲುಷಿತ ವಸ್ತುಗಳು ನದಿ, ಕೆರೆ ನೀರಿನಲ್ಲಿವೆ. ಉದಾಹರಣೆಗೆ ಹಿಮಾಲಯದಿಂದ ಬರುವ ಗಂಗಾನದಿ ಪರಿಶುದ್ಧವಾಗಿದ್ದು, ಅದು ಹರಿದ್ವಾರ, ವಾರಾಣಸಿ ಸೇರುವ ಹೊತ್ತಿಗೆ ಮಾನದಂಡಕ್ಕಿಂತ ಸಾವಿರಾರು ಪಾಲು ಅಧಿಕ ಕಲುಷಿತವಾಗಿದೆ. ಇನ್ನು ಅಂತರ್ಜಲವನ್ನಂತೂ ಉಪಯೋಗಿಸುವ ಮಟ್ಟದಲ್ಲಿಲ್ಲ. ಇವುಗಳ ಗಡಸುತನ, ಫ್ಲೋರೈಡ್‌ನ ಮಟ್ಟ ಯಾವುದೇ ಉಪಯೋಗಕ್ಕೆ ಬಾರದ ಮಟ್ಟದಲ್ಲಿರುತ್ತದೆ. ಹಲವಾರು ಸಾಮಾಜಿಕ, ಸಂಘ-ಸಂಸ್ಥೆಗಳು, ಕೆರೆ, ನದಿ, ಸರೋವರಗಳ ದುರಸ್ತಿಗಳನ್ನು ಆಗಾಗ ಮಾಡುತ್ತಿದ್ದರೂ ಸಾರ್ವಜನಿಕ ನಿರಾಸಕ್ತಿ, ಉಡಾಫೆ, ನಿರ್ಲಕ್ಷತೆಯಿಂದಾಗಿ ಈ ಕಾರ್ಯಗಳು ಅಷ್ಟು ಸಫಲವಾಗುತ್ತಿಲ್ಲ. ಉದಾಹರಣೆಗೆ ಗಂಗಾನದಿಯನ್ನು ಸಾವಿರಾರು ಕೋಟಿ ಖರ್ಚು ಮಾಡಿ ಶುದ್ಧೀಕರಿಸಿದರೆ ಈಗ ಪುನಃ ಪ್ಲಾಸ್ಟಿಕ್, ಹೆಣ, ಕಸ, ಗಟಾರದನೀರುಗಳು ನದಿ ಸೇರಿ ಕಲುಷಿತವಾಗುತ್ತಿದೆ. ಸಾರ್ವಜನಿಕರ ಬೆಂಬಲ, ಒಗ್ಗಟ್ಟು, ಸಹಕಾರವಿಲ್ಲದಿದ್ದರೆ ಈ ಕಾರ್ಯಗಳು ಅಸಾಧ್ಯ. ವಿದೇಶಗಳಲ್ಲಿ ಇದರ ಬಗ್ಗೆ ಭಾರಿ ಕಾಳಜಿ ಇದ್ದು ಅಲ್ಲಿಯ ನದಿ, ಕೆರೆಗಳು ಯಾವಾಗಲೂ ಪರಿಶುದ್ಧವಾಗಿರುವುದು ವಿಶೇಷ.

ಶಬ್ದಮಾಲಿನ್ಯ ನಿಜಕ್ಕೂ ಆತಂಕಕಾರಿ ಹಂತ ತಲುಪುತ್ತಿದೆ ಎನ್ನಬಹುದು. ವಿದೇಶಗಳಲ್ಲಿ ಇದನ್ನು ಬಹಳ ಹಿಂದೆಯೇ ಯೋಚಿಸಿ ಅದಕ್ಕೆ ಅನುಗುಣವಾಗಿ ಕಾನೂನು ಕಾಯಿದೆಗಳನ್ನು ರೂಪಿಸಿದ್ದಾರೆ. ಆದರೆ ಭಾರತದಲ್ಲಿ ಇನ್ನು ದಾರಿ ಬಲು ದೂರ ಸಾಗಬೇಕಿದೆ. ಶಬ್ದವನ್ನು ಮೂರು ತರಹ ವಿಭಾಗಿಸಬಹುದು. ಮಾತು, ಸಂಗೀತ ಮತ್ತು ಬೊಬ್ಬೆ. ಕಿವಿ ಸಾಮಾನ್ಯವಾಗಿ20 ರಿಂದ 20,000 ಹರ್ಟ್ಸ್ (HERTZ) ವರೆಗೆ ಕೇಳಿಸಬಲ್ಲುದು. ಆದರೆ 500 ರಿಂದ 600 ರವರೆಗೆ ಅದು ಬಹಳ ಸೂಕ್ಷ್ಮವಾಗಿರುತ್ತದೆ. ಇದಕ್ಕಿಂತ ಹೆಚ್ಚಾದರೆ ಮನುಷ್ಯರಲ್ಲಿ ಕಿವಿ ಕಿವುಡಾಗುವ, ಮಾನಸಿಕ ಸಮಸ್ಯೆ ಇತ್ಯಾದಿ ಉಂಟಾಗಬಹುದು.

ಈ ಗಟ್ಟಿಯಾದ ಸದ್ದಿನ ಮೂಲಗಳು ಹಲವಾರು, ಜಲಪಾತದ ಸದ್ದು, ಭೂಕಂಪ, ಗುಡುಗುಸಿಡಿಲು ಇವು ಪ್ರಾಕೃತಿಕ ಹಾಗೂ ಇದರ ಮೇಲೆ ನಮಗೆ ಯಾವ ಹತೋಟಿಯೂ ಇಲ್ಲ. ಇನ್ನೂ ಪಕ್ಷಿಗಳ ಕಲರವ, ಸಂಗೀತ, ಇವುಗಳು ಕಿವಿಗೆ ಇಂಪು. ಟೆಲಿಫೋನ್, ರೈಲು, ಮನೆಯಲ್ಲಿರುವ ವಿದ್ಯುತ್ ಉಪಕರಣಗಳು, ಪಂಪ್, ಮೋಟಾರ್, ಟರ್‌ಬೈನ್‌ಗಳು ಅಲ್ಲದೆ ಜಾತ್ರೆ, ಜನಸಮೂಹ ಇವುಗಳಲ್ಲಿ ಶಬ್ದ ಮಾಲಿನ್ಯದ ಮಿತಿ ಬಹಳ ಅಧಿಕವಾಗಿರುತ್ತದೆ.

ಶಬ್ದಮಾಲಿನ್ಯದಿಂದ ಕಿವುಡಾಗುವಷ್ಟೇ ಅಲ್ಲದೆ ಮಾನವರಲ್ಲಿ ಸಾಕಷ್ಟು ಒತ್ತಡ, ಚಿಂತೆಯನ್ನು ತರುತ್ತದೆ. ಶಬ್ದಮಾಲಿನ್ಯದಿಂದ ಹೃದಯ ಸಂಬಂಧಿ ಕಾಯಿಲೆಗಳು, ಮಾನಸಿಕ, ಜೈವಿಕಕ್ರಿಯೆ, ಸಂತಾನೋತ್ಪತ್ತಿ, ಶಾಶ್ವತ ಕಿವುಡು, ಚರ್ಮವ್ಯಾಧಿ, ಇವುಗಳು ಸಾಮಾನ್ಯವಾಗಿ ಕಂಡುಬರುವ ಇತರ ಸಮಸ್ಯೆಗಳು.

ಮೇಲಿನ ಸಮಸ್ಯೆಗಳಿಗೆ ಪರಿಹಾರ ನಮ್ಮ ಕೈಯಲ್ಲೇ ಇದೆ. ಈ ಶಬ್ದ ಮಾಲಿನ್ಯದ ಮೂಲದಲ್ಲೇ ಅದರ ತೀವ್ರತೆಯನ್ನು ಕಡಿಮೆ ಮಾಡುವುದು, ಶಬ್ದಪ್ರಸರಣದ ಹಾದಿಯನ್ನು ಶಬ್ದರಹಿತ ಮಾಡುವುದು, ಕಿವಿಗೆ ಬಿರಟೆ ಹಾಕುವುದು, ಸ್ವಲ್ಪ ಮಟ್ಟಿಗೆ ಅದನ್ನು ಕಡಿಮೆ ಮಾಡಬಹುದು. ಸರ್ಕಾರದ ವತಿಯಿಂದ ಶಬ್ದಮಾಲಿನ್ಯಕ್ಕೆ ತಕ್ಕದಾದ ಕಾಯಿದೆಗಳು ಬಂದಲ್ಲಿ ಇದರ ತೀವ್ರತೆಯನ್ನು ನಿಜಕ್ಕೂ ಕಡಿಮೆ ಮಾಡಬಹುದು.

ದುರ್ವಾಸನೆ ಮಾಲಿನ್ಯ ಸಾಮಾನ್ಯವಾಗಿ ಕಾರ್ಖಾನೆಗಳಿಂದ ಹೊರ ಹೊಮ್ಮುವ ತ್ಯಾಜ್ಯ ಅನಿಲಗಳು, ವಾಹನಗಳು, ನಗರ ತ್ಯಾಜ್ಯವಿಂಗಡನೆ ಕೇಂದ್ರಗಳಿಂದ ಬರುವ ಜೈವಿಕ ಅನಿಲಗಳು, ಇವುಗಳಿಂದ ಉತ್ಪತ್ತಿಯಾಗುತ್ತದೆ. ಇವುಗಳ ನಿವಾರಣೆಗೆ ಹಲವಾರು ವಿಧಾನಗಳು ಲಭ್ಯ. ವಾಸನೆಗಳನ್ನು ನಿವಾರಿಸಲು ಹಲವಾರು ರಾಸಾಯನಿಕ ಮಿಶ್ರಣಗಳು ಲಭ್ಯ. ಇವುಗಳ ಸಿಂಪಡಿಕೆಯಿಂದ ಅಥವಾ ಸೇರಿಸುವುದರಿಂದ ವಾಸನೆಗಳನ್ನು ಬಹಳಷ್ಟು ನಿವಾರಿಸಬಹುದು.

ಅಣುವಿಕಿರಣ ಮಾಲಿನ್ಯ ಬಹಳ ಅಪಾಯದ ಒಂದು ಸನ್ನಿವೇಶ. ಇವು ಸಾಮಾನ್ಯವಾಗಿ ಅಣುವಿದ್ಯುತ್ ಕೇಂದ್ರಗಳು, ಅಣುಬಾಂಬ್ ತಯಾರಿಕೆ, ವೈದ್ಯಕೀಯ, ಕೃಷಿ ಹಾಗೂ ಇನ್ನಿತರ ಉದ್ಯಮಗಳಲ್ಲಿ ಬರುವಂಥಹುದು. ಅಣುವಿಕಿರಣದ ತ್ಯಾಜ್ಯ ನಿರ್ವಹಣೆ ಬಹಳ ಕಷ್ಟಸಾಧ್ಯ. ಕಾರಣ ಇಂದು ಎಲ್ಲಿದ್ದರೂ ಅವುಗಳ ವಿಕಿರಣಗಳು ಪಸರಿಸಬಲ್ಲುದು. ಈ ವಿಕಿರಣಗಳಿಂದ ಹಲವಾರು ಪರಿಣಾಮ ಮಾನವರಲ್ಲಿ ಉಂಟಾಗಬಹುದು. ಚರ್ಮದ ರೋಗ, ಕ್ಯಾನ್ಸರ್, ವಿಕಲಚೇತನ ಮಕ್ಕಳ ಹುಟ್ಟು ಇತ್ಯಾದಿ. ಇವುಗಳ ತ್ಯಾಜ್ಯ ನಿರ್ವಹಣೆ ಅತ್ಯಂತ ಕಷ್ಟಸಾಧ್ಯ ಹಾಗೂ ಅವಶ್ಯಕ. ಹತ್ತಕ್ಕಿಂತ ಅಧಿಕ ವಿಧಾನಗಳು ಈಗ ಲಭ್ಯ. ಸಾಸಿವೆ ಅಥವಾ ಮಸ್ಟರ್ಡ್ ಎಂಬ ಸಸ್ಯ ವಿಕಿರಣವನ್ನು ಬೇರಿನಲ್ಲಿ ಪರಿಣಾಮಕಾರಿಯಾಗಿ ಹೀರಿ ಹಿಡಿದಿಟ್ಟುಕೊಳ್ಳಬಹುದು. ರಷ್ಯಾದ ಚರ್ನೋಬಿಲ್ ಅಣು ರಿಯಾಕ್ಟರ್‌ನಲ್ಲಿ ಅದ ಅವಘಡದಲ್ಲಿ ಈ ಗಿಡಗಳನ್ನು ಬೆಳೆಸಿ ವಿಕಿರಣವನ್ನು ಹತೋಟಿಗೆ ತಂದರೆAಬುದನ್ನು ಇಲ್ಲಿ ಸ್ಮರಿಸಬಹುದು.

ಸಾಗರ ಮಾಲಿನ್ಯ ಒಂದು ಅತೀ ತೀವ್ರತರವಾದ ಸಮಸ್ಯೆ. ಸಾಗರದಂಚಿನಲ್ಲಿರುವ ನಗರ ಪ್ರದೇಶದ ಬಚ್ಚಲ ಕೊಳಕುನೀರು ಅವುಗಳನ್ನು ಸಂಸ್ಕರಿಸದೆ ಸಾಗರಕ್ಕೆ ಬಿಡುವುದು, ಕಾರ್ಖಾನೆಗಳ ರಾಸಾಯನಿಕಯುಕ್ತ ಹೊರಹರಿವನ್ನು ಬಿಡುವುದು, ಉಷ್ಣಸ್ಥಾವರಗಳ ಹಾರುಬೂದಿಗಳನ್ನು ಸಮುದ್ರಕ್ಕೆ ಚೆಲ್ಲುವುದು. ಇವುಗಳಿಂದ ಸಾಗರದಲ್ಲಿ ವಿಷಪೂರಿತ ಲೋಹಗಳು, ರಾಸಾಯನಿಕಗಳು ಸೇರಿ ಅಲ್ಲಿಯ ನೀರಿನ ಗುಣಮಟ್ಟವನ್ನು ಸಾಕಷ್ಟು ಹಾಳು ಮಾಡುತ್ತವೆ. ಇದರಿಂದ ಜಲಚರಗಳು ನೀರಿನ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪುತ್ತದೆ. ಹವಳ ದ್ವೀಪಗಳು ನಾಶವಾಗುತ್ತವೆ. ಸಾಗರದಲ್ಲಿ ತೈಲದ ಹಡಗುಗಳು ಅಪಘಾತಕ್ಕೀಡಾಗಿ ಮುಳುಗಿದಾಗ ಲಕ್ಷಾಂತರ ಲೀಟರ್‌ಗಳಷ್ಟು ತೈಲ ನೀರು ಪಾಲಾಗಿ ಸಾಗರ ಕಲುಷಿತವಾಗುತ್ತದೆ. ಇನ್ನು ವಿದ್ಯುತ್ ಶಾಖೋತ್ಪನ್ನ ಸ್ಥಾವರಗಳು ಬಿಸಿನೀರನ್ನು ಸಾಗರಕ್ಕೆ ಬಿಟ್ಟಾಗ ಉಷ್ಣತೆಯ ಏರುಪೇರಾಗಿ ಜಲಚರಗಳು ನಾಶವಾಗುತ್ತವೆ. ಅಲ್ಲದೆ ಸಾಗರದಲ್ಲಿ ಅಣುವಿಕಿರಣ, ಕ್ರಿಮಿನಾಶಕಗಳು, ಸಾವಯವ ರಾಸಾಯನಿಕ ವಸ್ತುಗಳು, ಪ್ಲಾಸ್ಟಿಕ್ ಹಾಗೂ ಹಲವಾರು ಘನಲೋಹಗಳು ಇರುವುದರಿಂದ ಸಾಗರದ ಜೀವರಾಶಿಗಳಿಗೆ ಸದಾ ವಿಪತ್ತು ಕಾದಿರುತ್ತದೆ. ಇವುಗಳನ್ನು ಸಾಗರಕ್ಕೆ ಬಿಡುವುದನ್ನು ತಡೆಯುವುದೊಂದೇ ಮಾರ್ಗ. ಇದಕ್ಕೆ ಸೂಕ್ತ ಕಾನೂನುಗಳಿದ್ದರೂ ಅವುಗಳ ಪಾಲನೆಗೆ ತಕ್ಕ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಸಾಗರದ ಜಲದ ಗುಣಮಟ್ಟ ಕ್ಷೀಣಿಸುವುದರಲ್ಲಿ ಯಾವ ಸಂದೇಹವೂ ಇಲ್ಲ.

ಮಣ್ಣಿನ ಮಾಲಿನ್ಯ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ಒಂದು ಗಂಭೀರ ಸಮಸ್ಯೆ. ರಾಸಾಯನಿಕ ಗೊಬ್ಬರಗಳ ಅನಿಯಂತ್ರಿತ ಉಪಯೋಗ, ಹಾನಿಕಾರಕ ಕ್ರಿಮಿನಾಶಕಗಳ ಅವಿರತವಾದ ಬಳಕೆ, ಮಣ್ಣಿಗೆ ಸಾಧುವಲ್ಲದ ಕೆಲವು ವಾಣಿಜ್ಯ ಬೆಳೆಗಳು. ಇವುಗಳಿಂದ ಮಣ್ಣು ತನ್ನ ಸಾರವನ್ನು ಕಳೆದುಕೊಂಡು ನಿಷ್ಪçಯೋಜಕವಾಗುತ್ತದೆ. ಸಾವಯವ ಗೊಬ್ಬರಗಳ ಬಳಕೆ, ಕ್ರಿಮಿನಾಶಕಗಳ ನಿಷೇಧ, ಸರಿಯಾದ ವಾಣಿಜ್ಯ ಬೆಳೆಗಳ ಆಯ್ಕೆ ಮಣ್ಣಿನ ಗುಣಮಟ್ಟವನ್ನು ಕಾಪಾಡಬಲ್ಲುದು. ಹಲವಾರು ಸಸ್ಯ ಪ್ರಭೇದಗಳನ್ನು ಮಣ್ಣಿನಲ್ಲಿ ಆಗಾಗ್ಗೆ ನೆಡುವುದರಿಂದ ಮಣ್ಣಿನಲ್ಲಿರುವ ಬೇಡದ ಲೋಹ, ಅಲೋಹ, ವಿಷಕಾರಿ ರಾಸಾಯನಿಕ ವಸ್ತುಗಳನ್ನು ಯಶಸ್ವಿಯಾಗಿ ಬೇರ್ಪಡಿಸಬಹುದು.

ಪ್ಲಾಸ್ಟಿಕ್‌ನ ಮಾಲಿನ್ಯ ಬೃಹದಾಕಾರವಾಗಿ ಬೆಳೆದು ನಿಂತಿದೆ. ಸಾಗರದಿಂದ ಹಿಮಾಲಯದವರೆಗೂ ಇದು ಹಬ್ಬಿ ಇದರ ನಿರ್ಮೂಲನೆ ಜಗತ್ತಿಗೇ ಸವಾಲಾಗಿದೆ. ಪ್ಲಾಸ್ಟಿಕ್ ವಿಭಜನೆ ಹೊಂದದಿರುವುದರಿಂದ ಇವು ನೂರಾರು ವರ್ಷ ಕಳೆದರೂ ಅದೇ ರೂಪದಲ್ಲಿರುವುದು ವಿಶೇಷ. ಇದು ಕೆರೆ, ಸರೋವರ, ಸಮುದ್ರ ಸೇರಿ, ಉಳಿದ ತ್ಯಾಜ್ಯಗಳ ಜೊತೆ ಸೇರಿ ಮಲಿನವಾಗುತ್ತದೆ. ಇದರ ನಿರ್ಮೂಲನೆಗೆ ಹಲವಾರು ಮಾರ್ಗಗಳಿವೆ. ಪ್ಲಾಸ್ಟಿಕ್‌ನ ಪೂರ್ಣ ನಿಷೇಧಕ್ಕೆ ಕಾನೂನೇ ಇದೆ. ಪ್ಲಾಸ್ಟಿಕನ್ನು ಡಾಮರಿನ ಜೊತೆ ಮಿಶ್ರ ಮಾಡಿ ರಸ್ತೆಯ ತಯಾರಿಕೆಗೆ ಬಳಸುತ್ತಾರೆ. ಇದರಿಂದ ತೈಲದ ತಯಾರಿಕೆಯ ಪ್ರಯೋಗವೂ ನಡೆದಿದೆ. ಒಟ್ಟಿನಲ್ಲಿ ಇದರ ನಿರ್ಮೂಲನೆ ಅತ್ಯಗತ್ಯ.

ದೃಷ್ಟಿ ಹಾಗೂ ಪ್ರಕಾಶ ಮಾಲಿನ್ಯ (Visual & Light Pollution) ಒಂದು ಹೊಸ ಪೀಳಿಗೆಯ ಮಾಲಿನ್ಯಗಳಿಗೆ ಸೇರ್ಪಡೆಯಾಗಿದೆ. ಇದು ಸಾಮಾನ್ಯವಾಗಿ ನಗರಗಳಲ್ಲಿ ಹೆಚ್ಚು ಕಾಣುವುದು. ಎತ್ತ ನೋಡಿದರೂ ಬರೇ ಬಹು ಅಂತಸ್ತಿನ ಕಟ್ಟಡಗಳು, ರಸ್ತೆಗಳು, ಬೃಹದಾಕಾರದ ಜಾಹೀರಾತಿನ ಫಲಕಗಳು, ರಾಜಕೀಯ ಧುರೀಣರ ನಕಲುಗಳು, ಸಿನಿಮಾದ ಪ್ರಕಟಣೆ
ಭಿತ್ತಿಗಳು ಇತ್ಯಾದಿ. ಇವುಗಳು ಸಾಲದೆಂಬಂತೆ ಇವುಗಳಿಗೆ ಜಗಮಗಿಸುವ ದೀಪಾಲಂಕಾರ ಮಾಡಿ ಇನ್ನೂ ಮಾಲಿನ್ಯದ ಪ್ರಮಾಣ ಹೆಚ್ಚಿಸುತ್ತಾರೆ. ಇವುಗಳೆಲ್ಲ ಮತ್ತೆ ಪ್ಲಾಸ್ಟಿಕ್‌ನಿಂದಲೇ ತಯಾರಾಗುವುದು ವಿಪರ್ಯಾಸ. ಇವುಗಳಿಂದ ವಾಹನ ಚಾಲಕರ ಗಮನ ವಿಚಲಿತವಾಗುವ ಸಾಧ್ಯತೆಗಳಿವೆ. ತೀಕ್ಷ್ಣ ಬೆಳಕಿನಿಂದಾಗಿ ಅವರ ದೃಷ್ಟಿಯಲ್ಲಿ ಏರುಪೇರಾಗಿ ಅಪಘಾತ
ಸಂಭವಿಸುವ ಸಾಧ್ಯತೆ ಅಧಿಕ. ಇದಕ್ಕೆ ಸಾಕಷ್ಟು ಕಾನೂನು ಕಟ್ಟಳೆಗಳಿದ್ದರೂ ನಗರಪಾಲಿಕೆಯವರ ವರಮಾನದ ದೃಷ್ಟಿ ಹಾಗೂ ದುರಾಸೆಯಿಂದಾಗಿ ಇದು ಅಷ್ಟು ಫಲಕಾರಿಯಾಗಿಲ್ಲ. ಇದಲ್ಲದೆ ನಗರಪಾಲಿಕೆಯ ಪರವಾನಗಿ ಪಡೆಯದೇ ಹಲವಾರು ಅನಧಿಕೃತ ಘಟಕಗಳು ಎಲ್ಲೆಡೆ ರಾರಾಜಿಸುತ್ತವೆ. ಇವು ನಗರಗಳ ಸೌಂದರ್ಯವನ್ನು ಹಾಳುಗೆಡುಹುವುದಲ್ಲದೆ ನಗರವನ್ನು
ದೃಷ್ಟಿ ಹಾಗೂ ಪ್ರಕಾಶಮಾಲಿನ್ಯಗಳ ಕೂಪಗಳಾಗಿ ಪರಿವರ್ತಿಸುತ್ತಿವೆ. ಈ ದೀಪದ ಶಾಖದಿಂದ ನಗರದ ತಾಪಮಾನ ಕೂಡ ಏರಿಕೆಯಾಗು ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಎಲ್ಲದಕ್ಕಿಂತ ಬಹಳ ಗಂಭೀರ ಹಾಗೂ ಅಪಾಯಕಾರಿ ಮಾಲಿನ್ಯವೆಂದರೆ ಜಾಗತಿಕ ತಾಪಮಾನದ ವ್ಯತ್ಯಯ. ಕಳೆದ ಒಂದು ಶತಮಾನದಲ್ಲಿ ಜಾಗತಿಕ ತಾಪಮಾನವು 0.3 ಸೆಲ್ಸಿಯಸ್‌ನಿಂದ 0.6 ಸೆಲ್ಸಿಯಸ್‌ವರೆಗೆ ಏರಿತ್ತು. ಒಂದು ಸಮೀಕ್ಷೆಯ ಪ್ರಕಾರ ಇದು ಮುಂದಿನ ಅರ್ಧ ಶತಮಾನದೊಳಗೆ 1.50 ಸೆಲ್ಸಿಯಸ್ ನಿಂದ 4.0 ಸೆಲ್ಸಿಯಸ್‌ರವರೆಗೆ ಏರುವ ಸಾಧ್ಯತೆಗಳಿವೆ. ಇದು ನಿಜಕ್ಕೂ ಅಪಾಯಕಾರಿಯಾದ ಬೆಳವಣಿಗೆ. ಇದಕ್ಕೆ ಕಾರಣಗಳು ಹಲವಾರು. ಸೂರ್ಯನ ಪೂರ್ತಿ ಶಾಖ ನೆಲವನ್ನು ಸೋಕದಿರುವುದು, ಗ್ರೀನ್‌ಹೌಸ್ ಪರಿಣಾಮ, ಮಿಥೇನ್, ಓಜೋನ್, ನೈಟ್ರಸ್ ಆಕ್ಸೈಡ್ , ವಾಹನಗಳ ಹೊಗೆ ಇತ್ಯಾದಿ. ಇವುಗಳ ತಡೆಗೆ ಜಾಗತಿಕ ಮಟ್ಟದಲ್ಲಿ ಶೃಂಗ ಸಭೆ ನಡೆದು ಜಾಗತಿಕ ತಾಪಮಾನದ ಹೆಚ್ಚಳಕ್ಕೆ ತಡೆ ಒಡ್ಡಲು ಹಲವಾರು ನಿರ್ಬಂಧಗಳನ್ನು ಪ್ರಕಟಿಸಿದ್ದಾರೆ. ಇದರ ಹತೋಟಿಗೆ ಎಲ್ಲರೂ ಪ್ರಯತ್ನಿಸದಿದ್ದರೆ ಜಗತ್ತು ಒಂದು ಬಿಸಿ ಭಟ್ಟಿಯಾಗಿ ಮಾನವ ಜೀವನ ಅಸಹನೀಯವಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

ಆಧುನಿಕ ಜೀವನದಲ್ಲಿ ಅತೀ ತೀವ್ರತರವಾದ ಸಮಸ್ಯೆ ಎಂದರೆ ‘ವಿದ್ಯುನ್ಮಾನ ಮಾಲಿನ್ಯ’. ಜಗತ್ತಿನ ಎಲ್ಲ ಕಡೆ ಅವಶ್ಯಕತೆಗೂ ಸಂಗ್ರಹಕ್ಕೂ ಸಂಬಂಧವಿಲ್ಲದಂತೆ ವಿದ್ಯುನ್ಮಾನ ಸಲಕರಣೆಗಳನ್ನು ಎಲ್ಲರೂ ಪಡೆದುಕೊಳ್ಳುವುದು ಸಾಮಾನ್ಯ. ಒಂದು ಸಮೀಕ್ಷೆಯಂತೆ ಅಮೆರಿಕೆಯಲ್ಲಿ 50,000 ಕ್ಕೂ ಮಿಕ್ಕಿ ಬಾಡಿಗೆಗೆ ತೆಗೆದುಕೊಂಡಿರುವ ಸ್ವಂತ ಗೋದಾಮುಗಳಿವೆಯಂತೆ. ಇವುಗಳಲ್ಲಿ ಖರೀದಿಸಿದ ವಿದ್ಯುನ್ಮಾನ ಉಪಕರಣಗಳನ್ನು ಶೇಖರಿಸಿ ಇಡುತ್ತಾರಂತೆ. ಇವುಗಳ ಪರಿಮಾಣವೇ ಲಕ್ಷಾಂತರ ಕಿಲೋಗ್ರಾಂನಷ್ಟಾಗಬಹುದು. ಇವುಗಳ ವಿಲೇವಾರಿ ನಿಜಕ್ಕೂ ಒಂದು ಸವಾಲು. ಭಾರತವೂ ಇದಕ್ಕೆ ಹೊರತಲ್ಲ. ಈ ಉಪಕರಣಗಳಲ್ಲಿ ವಿಷಕಾರಿ ಲೋಹಗಳಾದ ಪಾದರಸ, ಅಂಟಿಮನಿ, ಕ್ಯಾಡ್‌ಮಿಯಂ ಮೊದಲಾದುವು ಇರುವುದು ಅಪಾಯಕಾರಿ. ಇವುಗಳ ಮಾಲಿನ್ಯ ತಡೆಗೆ ಸೂಕ್ತ ವ್ಯವಸ್ಥೆ ಮಾಡುವುದು ಅವಶ್ಯಕ.

ಮಾಲಿನ್ಯ ಎಂಬುದು ಕೇವಲ ಒಂದೆರಡು ವಿಷಯಗಳಿಗೆ ಸಂಬಂಧಪಟ್ಟದಲ್ಲ ಎಂಬುದು ಮೇಲಿನ ಬರಹದಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ಮಾನವರೆಲ್ಲರೂ ಕೈ ಜೋಡಿಸಬೇಕಾದ್ದು ಅನಿವಾರ್ಯ ಹಾಗೂ ಕರ್ತವ್ಯ. ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಯ ಜೀವನ ದುಸ್ತರವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ನೀವೇನಂತೀರಿ ?

ಕೆ.ರಮೇಶ್

7 Responses

  1. ನಿಮ್ಮ ಲೇಖನ ಯಾವಾಗಲೂ ಸರಳವಾಗಿದ್ದರೂ ಮಾಹಿತಿ ಪೂರ್ಣವಾಗಿರುತ್ತದೆ..ಸಾರ್

  2. ಕೆ.ರಮೇಶ್ says:

    ಧನ್ಯವಾದಗಳು ಮೇಡಂ

  3. ನಯನ ಬಜಕೂಡ್ಲು says:

    ಪ್ರಸ್ತುತ ಗಂಭೀರ ಸಮಸ್ಯೆ ಗಳ ಮೇಲೆ ಬೆಳಕು ಚೆಲ್ಲುವ ಲೇಖನ

  4. ಶಂಕರಿ ಶರ್ಮ says:

    ಜಗತ್ತಿಗೆ ಹಾಗೂ ಅದರಲ್ಲಿ ವಾಸಿಸುವ ಜೀವಿಗಳಿಗೆ ಅಪಾಯವನ್ನು ತಂದೊಡ್ಡಬಲ್ಲ ಮುಖ್ಯವಾದ ಮಾಲಿನ್ಯಗಳ ಬಗ್ಗೆ ಮೂಡಿಬಂದ ವಿವರವಾದ ಲೇಖನವು ಮಾನವ ಜನಾಂಗಕ್ಕೆ ಎಚ್ಚೆತ್ತುಕೊಳ್ಳಲು ನೀಡಿದ ಕರೆಗಂಟೆಯಂತಿದೆ!

  5. ಹಲವಾರು ಮಾಲಿನ್ಯಗಳ ಬಗ್ಗೆ ಬೆಳಕು ಚೆಲ್ಲಿದ್ದೀರಿ ಹಾಗೂ ಅದರ ಪರಿಹಾರ ಮಾರ್ಗವನ್ನು ಸೂಚಿಸಿದ್ದೀರಿ ವಂದನೆಗಳು

  6. ಪದ್ಮಾ ಆನಂದ್ says:

    ಇಂದಿನ ಜಲ್ವಂತ ಸಮಸ್ಯೆಯನ್ನು ನಿವಾರಣೋಪಾಯಗಳೊಂದಿಗೆ ವಿವರಿಸಿರುವ ಗಂಭೀರ ಲೇಖನ ಚಿಂತನೆಗೆ ಹಚ್ಚುವಂತಿದೆ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: