ಭೂಮಿಯ ಮೇಲಿನ ಸ್ವರ್ಗ ಭೂತಾನ್ ಪುಟ – ಆರು
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಭೂತಾನಿನ ಕೆಲವು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ಬನ್ನಿ. ಭೂತಾನೆಂಬ ಕಿನ್ನರ ಲೋಕಕ್ಕೆ ಪ್ರವೇಶಿಸಿದಾಕ್ಷಣ ಕಂಡು ಬರುವ ಸ್ವಚ್ಛತೆ, ಶುಭ್ರವಾದ ಪರಿಸರ, ಸುತ್ತಲೂ ಹಸಿರು ಹೊದ್ದು ಮಲಗಿರುವ ಗಿರಿ ಶಿಖರಗಳು, ನೀಲಮಣಿಯಂತೆ ಹೊಳೆಯುವ ಝರಿತೊರೆಗಳು ಮನಸ್ಸಿಗೆ ಮುದವನ್ನುಂಟು ಮಾಡುವುವು. ಎತ್ತ ಕಡೆ ತಿರುಗಿದರೂ ಕಂಡು ಬರುವ ಸುಂದರವಾದ ವಾಸ್ತು ಶಿಲ್ಪ – ಪುರಾತನವಾದ ಮನೆಗಳಿರಲಿ, ಬೆಟ್ಟದ ನೆತ್ತಿಯ ಮೇಲೆ ನಿರ್ಮಿಸಲಾಗಿರುವ ಬೌದ್ಧ ದೇಗುಲಗಳಿರಲಿ, ಶತ್ರುಗಳಿಂದ ರಕ್ಷಣೆ ಪಡೆಯಲು ಕಟ್ಟಿದ ಕೋಟೆ ಕೊತ್ತಲುಗಳಿರಲಿ – ಒಂದೇ ಬಗೆಯ ವಾಸ್ತುಶಿಲ್ಪ, ಬಣ್ಣ ಬಣ್ಣದ ಮರದ ಕಿಡಕಿಗಳು, ಇಳಿಜಾರಾದ ಮೇಲ್ಛಾವಣಿಗಳು ಪ್ರವಾಸಿಗರನ್ನು ಆಕರ್ಷಿಸುವುದು. ಇತ್ತೀಚೆಗೆ ಕಟ್ಟಿರುವ ಕಟ್ಟಡಗಳ ರಚನೆಯೂ ಭಿನ್ನವಾಗಿಲ್ಲ. ಕಟ್ಟಡಗಳನ್ನು ಸರ್ಕಾರದ ನಿಯಮಾನುಸಾರ ಕಟ್ಟುವುದು ಇಲ್ಲಿ ಕಡ್ಡಾಯ.
ಭೂತಾನೀಯರು ಸರ್ಕಾರಿ ಕೆಲಸದಲ್ಲಿರಲಿ ಅಥವಾ ಖಾಸಗಿ ಕೆಲಸದಲ್ಲಿರಲಿ, ಕರ್ತವ್ಯಕ್ಕೆ ಹಾಜರಾಗುವಾಗ ತಮ್ಮ ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಅಸ್ಮಿತೆಯಾದ ಪಾರಂಪರಿಕ ಉಡುಗೆಯನ್ನು ತೊಡುವುದು ಇಲ್ಲಿನ ಸಂಪ್ರದಾಯ. ಶಾಲಾಮಕ್ಕಳಿಗೂ ಇದೇ ಬಗೆಯ ಯೂನಿಫಾರ್ಮ್ ಕಡ್ಡಾಯ. ಶಾಸಕರು, ಸಂಸದರು, ಮಂತ್ರಿಗಳು ಎಲ್ಲರೂ ಇದೇ ಬಗೆಯ ಉಡುಪು ಧರಿಸುವರು. ಇನ್ನು ನಾಡಿನ ದೊರೆ, ರಾಣಿ, ರಾಜಕುವರರೂ ಇಂತಹದೇ ಸಾಂಪ್ರದಾಯಿಕ ಉಡುಪು ಧರಿಸುವರು. ಸಂಜೆ ಮಾರ್ಕೆಟ್‌ಗೆ ಹೋದರೂ, ಹೋಟೆಲ್‌ಗೆ ಹೋದರೂ ಗೋ ಅಥವಾ ಕಿರಾ ತೊಟ್ಟ ಭೂತಾನೀಯರೇ ಎಲ್ಲೆಡೆ ಕಾಣುವರು. ಆಧುನಿಕ ಯುಗದಲ್ಲಿ ನವನವೀನ ಉಡುಗೆ ಧರಿಸುವ ಯುವಜನತೆಯನ್ನು ಕಾಣುತ್ತೇವೆ, ಆದರಿಲ್ಲಿ ಪಾರಂಪರಿಕ ಉಡುಪಿನದೇ ಮೇಲುಗೈ.
ಪರಿಸರ ಸಂರಕ್ಷಣೆಯಲ್ಲಿ ಇವರು ಮೇಲ್ಪಂಕ್ತಿಯಲ್ಲಿರುವರು, ಕಾರ್ಬನ್ ನೆಗೆಟಿವ್ ದೇಶ, ಎಂಬ ಖ್ಯಾತಿ ಪಡೆದಿರುವ ಇವರ ನಾಡಿನಲ್ಲಿ ಶೇಕಡಾ ಎಪ್ಪತ್ತು ಬಾಗ ಅರಣ್ಯ ಸಂಪತ್ತಿದೆ. ಇಲ್ಲಿ ಪ್ರವಾಸೀತಾಣಗಳನ್ನು ಹುಡುಕಿ ಹೋಗಬೇಕಿಲ್ಲ, ನಾವು ಸಾಗುವ ಇಕ್ಕೆಲಗಳಲ್ಲಿಯೂ ಮನಸೂರೆಗೊಳ್ಳುವ ಪ್ರಕೃತಿಯ ಸೊಬಗಿದೆ. ಇಡೀ ಭೂತಾನ್ ಒಂದು ಪ್ರವಾಸಿ ತಾಣದಂತಿದೆ. ಚಾರಣಿಗರಿಗೆ ಭೂತಾನ್ ಸ್ವರ್ಗವಿದ್ದಂತೆ. ಹಸಿರು ಕಾನನದ ನಡುವೆ, ತಲೆ ಎತ್ತಿ ನಿಂತಿರುವ ಗಿರಿ ಶಿಖರಗಳು ಚಾರಣಿಗರನ್ನು ಕೈ ಬೀಸಿ ಕರೆಯುತ್ತವೆ. ಇಲ್ಲಿ ಹಲವು ರಾಷ್ಟ್ರೀಯ ಉದ್ಯಾನವನಗಳಿವೆ, ನಾವು ಭೇಟಿ ನೀಡಿದ್ದ ಪಾರ್ಕ್ನಲ್ಲಿ ಹಲವು ಬಗೆಯ ಅಪರೂಪದ ಔಷಧೀಯ ಸಸ್ಯಗಳಿದ್ದವು. ಆಯುರ್ವೇದ ಪಂಡಿತರು ಹಾಗೂ ಸಸ್ಯಶಾಸ್ತ್ರಜ್ಞರು ಸಂಭ್ರಮದಿಂದ ಸಸ್ಯಗಳ ಪ್ರಭೇಧಗಳನ್ನು ಅಭ್ಯಸಿಸುತ್ತಿರುವಾಗ, ಲತಾ ನೆಲದ ಮೇಲೆಲ್ಲಾ ಹಬ್ಬಿದ್ದ ಸ್ಟ್ರಾಬರ‍್ರಿಯ ಬಳ್ಳಿಯಿಂದ ಕೆಂಪಾದ ಸಿಹಿಯಾದ ಪುಟ್ಟ ಹಣ್ಣುಗಳನ್ನು ಆರಿಸುತ್ತಿದ್ದಳು. ನಾನು ಚಪ್ಪಟೆಯಾದ ಕಲ್ಲನ್ನು ಆರಿಸಿ, ಅಲ್ಲಿದ್ದ ಕೊಳದಲ್ಲಿ ಪುಟವೇಳುವಂತೆ ಬೀಸಿದೆ, ಆ ಕಲ್ಲು ಎರಡು ಬಾರಿ ಚಿಮ್ಮಿ ಬಂದಾಗ ಉತ್ಸಾಹದಿಂದ ಮತ್ತೊಂದು ಕಲ್ಲನ್ನು ಎಸೆಯಲು ಸಿದ್ಧಳಾದೆ, ಅಷ್ಟರಲ್ಲಿ ಅಲ್ಲಿದ್ದ ಕಾವಲುಗಾರನು ಓಡುತ್ತಾ ಬಂದು ನನ್ನನ್ನು ತಡೆದ. ಕೊಳದಲ್ಲಿ ಕಲ್ಲೆಸೆದರೆ, ನೀರಿನಲ್ಲಿರುವ ಜೀವಿಗಳಿಗೆ ನೋವಾಗುವುದು, ಹಾಗಾಗಿ ಇಲ್ಲಿ ನೀವು ಕಲ್ಲೆಸೆಯುವಂತಿಲ್ಲ ಎಂದು ಖಡಕ್ಕಾಗಿ ಹೇಳಿದ. ಅಬ್ಬಾ ಇವರಿಗೆ ಪರಿಸರ ಹಾಗೂ ಪ್ರಾಣಿ ಪಕ್ಷಿಗಳ ಬಗ್ಗೆ ಎಷ್ಟೊಂದು ಪ್ರೀತಿಯೆಂದು ಬೆರಗಾಗಿ ನಿಂತೆ. ನನಗರ್ಥವಾಗದ ಮತ್ತೊಂದು ಸಂಗತಿಯೆಂದರೆ – ಇವರೆಲ್ಲಾ ಮಾಂಸಾಹಾರಿಗಳೇ, ಹಾಗಿದ್ದಲ್ಲಿ, ಇವರ ಭೋಜನಕ್ಕೆ ಮಾಂಸ ಸರಬರಾಜಾಗುವುದಾದರೂ ಎಲ್ಲಿಂದ? ಇವರು ಹೊರದೇಶಗಳಿಂದ ಮಾಂಸವನ್ನು ಆಮದು ಮಾಡಿಕೊಳ್ಳುವರಂತೆ.
ನಮ್ಮ ಗೈಡ್ ಮತ್ತೊಂದು ಅಚ್ಚರಿಯ ಸಂಗತಿಯನ್ನು ಹೇಳಿದ. ಇವರೆಲ್ಲರೂ ಹುಟ್ಟುಹಬ್ಬವನ್ನು ಒಟ್ಟಿಗೇ ಆಚರಿಸಿಕೊಳ್ಳುತ್ತಾರಂತೆ. ಯಾಕೆ ಅಂತೀರಾ? ತಮ್ಮೆಲ್ಲರ ಹುಟ್ಟುಹಬ್ಬವನ್ನು ಹೊಸ ವರ್ಷದ ದಿನದಂದು ಆಚರಿಸಿಕೊಳ್ಳುವುದು ಇಲ್ಲಿನ ವಾಡಿಕೆ.
ಭೂತಾನಿನ ರಾಜಕೀಯ ಮುಖಂಡರ ಸರಳ ಸಜ್ಜನಿಕೆಯ ನಡವಳಿಕೆಯನ್ನು ಕಂಡು ದಿಗ್ಭ್ರಮೆಯಾಗುವ ಸರದಿ ನಮ್ಮದಾಗಿತ್ತು. ನಿಸರ್ಗ ಅಂಕುರ್ ಆಯುರ್ವೇದ ಸಂಘದ ಉದ್ಘಾಟನೆಯನ್ನು ನೆರವೇರಿಸಲು ನಮ್ಮ ಆಹ್ವಾನದ ಮೇರೆಗೆ ಸಂಸದರೊಬ್ಬರು ಆಗಮಿಸಿದ್ದರು. ಇವರು ಭಾರತದ ಖರಗ್‌ಪುರ್ ಐ.ಐ.ಟಿ. ಯಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು, ಇಲ್ಲಿನ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿದ್ದರು. ತಮ್ಮ ಸ್ವಂತ ಕಾರಿನಲ್ಲಿ, ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಬಂದಿದ್ದರು. ಸುತ್ತ ಮುತ್ತ ಪೈಲಟ್ ವಾಹನಗಳಿಲ್ಲ, ಹಿಂಬಾಲಕರ ಭರಾಟೆಯಿಲ್ಲ. ಪಾರಂಪರಿಕ ಉಡುಪಾದ ಗೋ ಧರಿಸಿ ಸರಿಯಾದ ಸಮಯಕ್ಕೆ ಬಂದು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಭೂತಾನಿನ ಔಷಧೀಯ ಸಸ್ಯಗಳ ಬಗ್ಗೆ ಒಂದು ಪಿ.ಪಿ.ಟಿ ಯನ್ನು ಪ್ರಸ್ತುತ ಪಡಿಸಿದರು. ತಮ್ಮ ಭಾಷಣ ಮುಗಿಸಿದವರೇ ತಮಗೆ ಹೊದಿಸಿದ್ದ ಶಾಲು, ಹಾರವನ್ನು ಕೈಲಿ ಹಿಡಿದು ಹೊರಟೇ ಬಿಟ್ಟರು, ನಾವು ಅವರನ್ನು ಹಿಂಬಾಲಿಸಿ, ಅವರ ಕೈಲಿದ್ದ ಹಾರ ಶಾಲು ತೆಗೆದುಕೊಳ್ಳಲು ಹೋದರೆ, ಅವರು ಕೊಡಲೇ ಇಲ್ಲ. ತಮ್ಮ ಕಾರಿನ ಡಿಕ್ಕಿ ತೆಗದು ಹಾರ, ಶಾಲನ್ನು ಇಟ್ಟು ತಮ್ಮ ಆಫೀಸಿಗೆ ಹೊರಟೇ ಬಿಟ್ಟರು. ನಾವು ಬೆಕ್ಕಸ ಬೆರಗಾಗಿ ಇವರ ಸೌಮ್ಯ ಸರಳತೆಯನ್ನು, ಸಜ್ಜನಿಕೆಯನ್ನು ನೋಡುತ್ತಲೇ ಇದ್ದೆವು. ನಮ್ಮ ರಾಜಕೀಯ ಮುಖಂಡರ ಆಟೋಟಾಪ ನೆನಪಿಗೆ ಬಂದು ಬೇಸರವಾಗಿತ್ತು.
ಈ ನಾಡಿನಲ್ಲಿ ಬೌದ್ಧ ಧರ್ಮ ಕೇವಲ ಮೋಕ್ಷ ಪಡೆಯುವ ಸಾಧನವಾಗಿ ಉಳಿದಿಲ್ಲ, ಬದಲಿಗೆ ಅವರ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅವರ ಜೀವನ ಶೈಲಿ, ಉಡುಗೆ ತೊಡುಗೆ, ಮದುವೆ ಸಮಾರಂಭ ಎಲ್ಲವೂ ಸರಳವಾಗಿದ್ದು, ನಿತ್ಯ ಜೀವನದಲ್ಲಿ ಸತ್ಯ, ಅಹಿಂಸೆ, ಕರುಣೆಯ ಪಥದಲ್ಲಿ ಸಾಗುವ ಸಾಧಕರು ಇವರು. ಸಮಾಜದಲ್ಲಿ ಬೌದ್ಧರ ಸಂಖ್ಯೆ ಹೆಚ್ಚಿದ್ದರೂ, ಉಳಿದ ಧರ್ಮೀಯರ ಜೊತೆ ಅಂದರೆ ಅಲ್ಪ ಸಂಖ್ಯಾತರಾದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರ ಜೊತೆ ಸೌಹಾರ್ದಯುತವಾಗಿ ಬಾಳುತ್ತಿದ್ದಾರೆ. ಇವರಲ್ಲಿ ವರ್ಗ ಬೇಧವಿಲ್ಲ, ಜಾತಿಬೇಧವಿಲ್ಲ, ಲಿಂಗ ಬೇಧವಂತೂ ಇಲ್ಲವೇ ಇಲ್ಲ. ಜಾತಿ ಪಂಥ ಮತಗಳೆಂಬ ಸಂಘರ್ಷಗಳಿಲ್ಲಿಲ್ಲ. ನಾಡಿನ ದೊರೆಯನ್ನು ಗೌರವಿಸುವ ಭೂತಾನೀಯರು ಸಾಂವಿಧಾತ್ಮಕ ನಿಯಮಗಳನ್ನೂ ನಿಷ್ಟೆಯಿಂದ ಪಾಲಿಸುವರು. ಕೌಟುಂಬಿಕ ಜವಾಬ್ದಾರಿಗಳನ್ನೂ ಪ್ರೀತಿಯಿಂದಲೇ ಪಾಲಿಸುವರು, ಕುಟುಂಬದ ಹಿರಿಯರನ್ನು ಗೌರವಿಸುವರು. ಇವರಲ್ಲಿ ಮದುವೆಯ ನಂತರ ಗಂಡು ಹೆಣ್ಣಿನ ಮನೆಗೆ ತೆರಳುವ ಸಂಪ್ರದಾಯ ಜಾರಿಯಲ್ಲಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಇವರು ಬೇರೆಯೇ ಮನೆ ಮಾಡಿ, ಸ್ವತಂತ್ರವಾಗಿ ಬಾಳಲು ಇಚ್ಛಿಸುತ್ತಾರೆ. ಬಹುಪತಿತ್ವ ಆಗಲಿ ಬಹುಪತ್ನಿತ್ವವಾಗಲಿ ಜಾರಿಯಲ್ಲಿಲ್ಲ. ಇವರು ಆಕಾಶ, ಭೂಮಿ, ಪಾತಾಳ ಹಾಗೂ ಮರಗಿಡಗಳನ್ನು ಆರಾಧಿಸುವರು. ಭೂತಾನಿನ ಸರ್ಕಾರದ ಪ್ರಮುಖ ಧ್ಯೇಯ – ಈ ನಾಡಿನ ಪ್ರಕೃತಿಯ ಜೊತೆ ಜೊತೆಗೇ ಸಂಸ್ಕೃತಿಯನ್ನೂ ಸಂರಕ್ಷಿಸುವುದು. ಹಾಗಾಗಿ ಪ್ರವಾಸೋದ್ಯಮದಲ್ಲಿ ಹೇರಳವಾಗಿ ಹಣ ಗಳಿಸಬಹುದಾದರೂ, ಒಂದು ಮಿತಿಯನ್ನು ಹಾಕಿಕೊಂಡಿದ್ದಾರೆ. ಪಾಶ್ಚಿಮಾತ್ಯರಿಗೆ ಅಧಿಕವಾದ ಪ್ರವಾಸಿಶುಲ್ಕ ವಿಧಿಸುವುದರ ಮೂಲಕ ಪ್ರವಾಸಿಗರ ಬಾಹುಳ್ಯವನ್ನು ನಿಯಂತ್ರಿಸಿದ್ದಾರೆ.
ಆಧುನಿಕ ಜಗತ್ತಿನಲ್ಲಿ ಕೇಳರಿಯದ ಒಂದು ವಿಶೇಷತೆ ಇಲ್ಲಿದೆ. ಈ ಕಿನ್ನರ ಲೋಕದಲ್ಲಿ ವಾಸಿಸುವ ಜನರು ಸದಾ ಹಸನ್ಮುಖಿಗಳು, ಸಂತೃಪ್ತರು, ನೆಮ್ಮದಿ, ಶಾಂತಿ, ಸಂತಸದಿಂದ ಬಾಳನ್ನು ಸಾಗಿಸುವವರು. Gross National Happiness ಅಂದರೆ ಸರಾಸರಿ ರಾಷ್ಟ್ರೀಯ ಸಂತಸದ ಪಟ್ಟಿಯಲ್ಲಿ ಭೂತಾನೀಯರು ಅಗ್ರಗಣ್ಯ ಸ್ಥಾನ ಪಡೆದಿರುವುದು ಅತ್ಯಂತ ಹೆಮ್ಮೆಯ ವಿಷಯ. ಆರ್ಥಿಕ ಪ್ರಗತಿಗಿಂತ ತನ್ನ ಪ್ರಜೆಗಳ ಭಾವನಾತ್ಮಕ ಸಮತೋಲನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವರು ಸಹಪ್ರಯಾಣಿಕನೊಬ್ಬ ಗುನುಗುನುಗುತ್ತಿದ್ದ – “ನಗು ನಗುತಾ ನಲೀ ನಲಿ / ಜಗವಿದು ಜಾಣ, ನಲಿವಿನ ತಾಣ..”.
(ಮುಗಿಯಿತು)
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ: https://www.surahonne.com/?p=41032
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ಎಂದಿನಂತೆ ಪ್ರವಾಸಕಥನ ಸೊಗಸಾಗಿ ಮೂಡಿ ಬಂತು.
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡುಹೋಯಿತು.. ಅದಕ್ಕೆ ಪೂರಕ ಚಿತ್ರವೂ ಚೆನ್ನಾಗಿ ಬಂದಿದೆ..ಮೇಡಂ
ಸೊಗಸಾದ ಪ್ರವಾಸ ಕಥನ, ಚೆನ್ನಾಗಿತ್ತು
ಪ್ರಕೃತಿಯನ್ನು ಆರಾಧಿಸುತ್ತಾ, ಪಾರಂಪರಿಕ ಸಂಸ್ಕೃತಿ, ಸಂಸ್ಕಾರಗಳನ್ನು ನಿಯತ್ತಾಗಿ ಪಾಲಿಸುತ್ತಾ, ಅತ್ಯಂತ ಸರಳ ಜೀವನದೊಂದಿಗೆ ಸಂತಸದಿಂದ ಬಾಳುವ ಭೂತಾನೀಯರ ಬಗ್ಗೆ ತಿಳಿದು ಬಹಳ ಹೆಮ್ಮೆ ಎನಿಸಿತು… ನಿಜಕ್ಕೂ ಭೂಲೋಕದ ಸ್ವರ್ಗ ಇದೇ! ಸುಂದರ ಪ್ರವಾಸ ಲೇಖನಮಾಲೆಯು ಬಹಳಷ್ಟು ಮಾಹಿತಿಗಳಿಂದ ಕೂಡಿ ಮನಕ್ಕೆ ಮುದನೀಡಿದೆ… ತುಂಬು ಮನದ ಧನ್ಯವಾದಗಳು…ಗಾಯತ್ರಿ ಮೇಡಂ.
ಸಹೃದಯ ಗೆಳತಿಯರೇ
ಎಲ್ಲರಿಗೂ ವಂದನೆಗಳು
ಬಹಳ ಸುಂದರವಾದ ಕಥನ. ಓದಿ ಸಂತೋಷವಾಯಿತು. ಅಭಿನಂದನೆಗಳು.
Very well written!