ಸೈಕಲ್ ಪ್ರಪಂಚ

Share Button

ಸೈಕಲ್ ಅನಾದಿ ಕಾಲದಿಂದಲು ಇರುವ ಒಂದು ಸಾಧನ. ಇದು ಬಡವರ ಬಂಧು, ಮಧ್ಯಮ ವರ್ಗದವರಿಗೆ ಸಾರಿಗೆ ಮಾಧ್ಯಮ ಹಾಗೂ ಶ್ರೀಮಂತರಿಗೆ ಹವ್ಯಾಸ. ಸೈಕಲ್‌ನ್ನು ಯಾಕೆ ಮತ್ತೆ ವಿಶ್ವದಾದ್ಯಂತ ಪುನಃ ಕೋಟಿಗಟ್ಟಲೆ ಜನ ಉಪಯೋಗಿಸಲು ಪ್ರಾರಂಭಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ, ಇದು ಪರಿಸರ ಸ್ನೇಹಿ, ಸರ್ವರಿಗೂ ಸಿಲುಕುವ ಅಂಥಹ ದುಬಾರಿಯಲ್ಲದ ಸಾಧನ.

ದೇಶವಿದೇಶಗಳಲ್ಲಿ ಸೈಕಲ್‌ನ ಬಳಕೆ ಸಮರೋಪಾದಿಯಲ್ಲಿ ಹಬ್ಬಿದೆ. ನೆದರ್‌ಲ್ಯಾಂಡ್, ಜರ್ಮನಿ, ಡೆನ್ಮಾರ್ಕ್, ಅಮೇರಿಕ ಇದರಲ್ಲಿ ಉತ್ತುಂಗದಲ್ಲಿದೆ. ನೆದರ್‌ಲ್ಯಾಂಡನ್ನು “ಸೈಕಲ್ ದೇಶ’ ಎಂದೇ ಕರೆಯುತ್ತಾರೆ. ಅಲ್ಲಿ ದೇಶದ ಜನಸಂಖ್ಯೆಗಿಂತ ಸೈಕಲ್‌ಗಳ ಸಂಖ್ಯೆಯೇ ಹೆಚ್ಚು. ಅಲ್ಲಿಯ ಪರಿಸರವನ್ನು ನೋಡಿಯೇ ಅರಿಯಬೇಕು. ಸರಕಾರ ಸೈಕಲ್ ಉಪಯೋಗಿಸುವ ಕಾರ್ಮಿಕ, ಅಧಿಕಾರಿಗಳಿಗೆ ವಿಶೇಷ ಸವಲತ್ತು ನೀಡುತ್ತದೆ. ಸೈಕಲ್ ಖರೀದಿಸಲು ಸಾಲದ ವ್ಯವಸ್ಥೆ ಇದೆ. ಕೆಲವು ಕಡೆ ಉಚಿತವಾಗಿ ನೀಡುತ್ತಾರೆ. ಸೈಕಲ್‌ನಿಂದ ಬರುವವರಿಗೆ ಅಲ್ಲಿನ ಸರಕಾರ ಪ್ರತಿ ಕಿಲೋಮೀಟರ್‌ಗೆ 0.22 ಡಾಲರ್ ಹಣವನ್ನು ಉತ್ತೇಜಕ ಭತ್ಯೆ ನೀಡುತ್ತಾರೆ. ಶೇಕಡ 70 ರಷ್ಟು ಮಂದಿ ಸೈಕಲ್‌ನಲ್ಲಿ ಪ್ರಯಾಣಿಸುತ್ತಾರೆ. ಅಷ್ಟೇಕೆ ನೆದರ್‌ಲ್ಯಾಂಡಿನ ಪ್ರಧಾನಿ ಕೂಡ ಸೈಕಲ್‌ನಲ್ಲಿ ಕಛೇರಿಗೆ ಹೋಗುತ್ತಾರೆಂದರೆ ಅದರ ಪ್ರಾಮುಖ್ಯತೆ ಅರಿವಾದೀತು.

ಸೈಕಲ್ ಕೇವಲ 3000 ಸಾವಿರ ರೂಪಾಯಿಯಿಂದ ಹಿಡಿದು ಅಡಿ, ಲ್ಯಾಂಬರ್ಗಿನಿ ಕಂಪೆನಿಯ 140 ಕೋಟಿ ರೂಪಾಯಿಯ ಸೈಕಲ್ ಕೂಡ ಲಭ್ಯ. ಆದರೆ ಈ ಸೈಕಲ್ ಏಳು ಕಿಲೋಕ್ಕಿಂತ ಕಮ್ಮಿ ತೂಕದ್ದು. ಮೊದಲಿನ ಸೈಕಲ್‌ಗಳು 30 ಕಿಲೋ ಇತ್ತು. ಈ ಸೈಕಲ್ ಅಪ್ಪಟ ಬಂಗಾರದ್ದು. ಅದನ್ನು ಬರೋಬ್ಬರಿ 600 ವಜ್ರದ ಹರಳುಗಳಿಂದ ಅಲಂಕರಿಸಿದ್ದಾರೆ. ಇಂದಿನ ಬಹುತೇಕ ಸೈಕಲ್‌ಗಳನ್ನು ಮಡಚಿ ಕಾರಿನ ಡಿಕ್ಕಿಯಲ್ಲಿ ಇಡಬಹುದು.

ವಾಯುಮಾಲಿನ್ಯ, ಶಬ್ದಮಾಲಿನ್ಯ ಯಾವುದಕ್ಕೂ ಸೈಕಲ್ ತನ್ನ ಕೊಡುಗೆ ನೀಡದು. ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿಯಾದರೂ ಸೈಕಲ್ ಸವಾರರಿಗೆ ತಲೆಬಿಸಿ ಇಲ್ಲ. ಒಮ್ಮೆ ಬಾಲ್ಯದಲ್ಲಿ ಸೈಕಲ್ ಸವಾರಿ ಕಲಿತರೆ ಮುಪ್ಪಿನವರೆಗೂ ಅದು ನಿಮ್ಮನ್ನು ಬಿಡುವುದಿಲ್ಲ. ಬೇರೆ ವಾಹನಗಳಾದ ಕಾರು, ಬೈಕ್‌ಗಳಿಗೆ ಹೋಲಿಸಿದರೆ ಇದರ ಬೆಲೆ ಏನೂ ಇಲ್ಲ. ಆದರೆ ಇದರ ಸವಾರಿ ಮಾತ್ರ ಅವರ್ಣನೀಯ. ವಿಶೇಷವೆಂದರೆ ಪಾಶ್ಚಾತ್ಯ ದೇಶಗಳಲ್ಲಿ ಸೈಕಲ್‌ನ್ನು ಮೆಟ್ರೋ ಇನ್ನಿತರ ಸಾರ್ವಜನಿಕ ವಾಹನಗಳಲ್ಲಿ ಕೊಂಡೊಯ್ಯಬಹುದು. ನಿಲ್ದಾಣಗಳಲ್ಲಿ ಇದರ ತಾತ್ಕಾಲಿಕ ನಿಲುಗಡೆಗೆ ವ್ಯವಸ್ಥೆ ಎಲ್ಲ ಕಡೆ ಇದೆ.

ಕೆಲವು ವೃತ್ತಿಗಳಲ್ಲಿ ಇವತ್ತಿಗೂ ಸೈಕಲ್‌ನದೇ ಪ್ರಾಧಾನ್ಯ. ಹಳೇಪೇಪರ್ ಕೇಳುವವರು, ಐಸ್‌ಕ್ಯಾಂಡಿ, ಐಸ್‌ಕ್ರೀಂ ಮಾರಾಟಗಾರರು ಪೇಪರ್ ಹಾಕುವ ಹುಡುಗರು, ತರಕಾರಿ ಮಾರುವವರು, ಹೂ ಮಾರುವವರು, ಅಂಚೆಪೇಟೆ, ಸೊಪ್ಪು ಮಾರುವವರು, ಕಾರ್ಮಿಕರು, ಹಾಲು ವಿತರಕರು, ವಿದ್ಯಾರ್ಥಿಗಳು ಶಾಲೆಗೆ ಈಗಲೂ ಕೂಡ ನೋಡುವ ದೃಶ್ಯ. ನಿಜಕ್ಕೂ ವಿಸ್ಮಯಕರ. ಆದರೂ ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಸೈಕಲ್ ಬಳಕೆ ಬಹಳ ನಿರಾಶಾದಾಯಕ ಎಂದೇ ಹೇಳಬೇಕು.

ಭಾರತದಲ್ಲಿ ಈಗ ಸೈಕಲ್‌ನ ಉಪಯೋಗ ಸ್ವಲ್ಪ ಏರು ಗತಿಯಲ್ಲಿ ಸಾಗುತ್ತಿದೆ. ದೊಡ್ಡ ನಗರಗಳಲ್ಲಿ ಹಲವಾರು ಕಡೆ ಸೈಕಲ್‌ಗಳನ್ನು ನಿಲ್ಲಿಸಿ ಅದರ ಉಪಯೋಗ ಪಡೆಯಲು ಉತ್ತೇಜಿಸಿದೆ. ಮೈಸೂರಲ್ಲೂ ಕೂಡ ‘ಟ್ರಿನ್‌ಟ್ರಿನ್’ ಎಂಬ ವ್ಯವಸ್ಥೆ ನಗರದ ಹಲವಾರು ಕಡೆ ಸೈಕಲ್‌ನ್ನು ನಿಲ್ಲಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಂದಾಗಿದೆ.

ಸರಕಾರ ಈ ನಿಟ್ಟಿನಲ್ಲಿ ಅಭೂತಪೂರ್ವ ಸಾಧನೆಗೆ ಕೈಹಾಕಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೈ ಜೋಡಿಸಿದರೆ ಇದು ಕಷ್ಟ ಸಾಧ್ಯವಲ್ಲ. ಸೈಕಲ್ ಬಳಕೆದಾರರಿಗೆ ಉಚಿತ ಅಥವಾ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸಬಹುದು. ಸೈಕಲ್‌ನಿಂದ ಬರುವವರಿಗೆ ಸರಕಾರದ ಜೊತೆ ಉತ್ತೇಜಕ ಭತ್ಯೆ ನೀಡಬಹುದು. ಸೈಕಲ್ ಸವಾರರಿಗೆ ನಗರಗಳಲ್ಲಿ ಪ್ರತ್ಯೇಕ ಹಾದಿ ನೀಡಿದರೆ ಉತ್ತಮ. ಹಲವಾರು ನಗರಗಳಲ್ಲಿ ಈ ವ್ಯವಸ್ಥೆ ಇದೆ. ಇನ್ನು ಸೈಕಲ್ ಸವಾರರಿಗೆ ಪ್ರತ್ಯೇಕ ನಿಲ್ದಾಣವನ್ನು ಪ್ರತಿ ಜಾಗದಲ್ಲಿ ಸ್ಥಾಪಿಸಿದರೆ ಉತ್ತೇಜನಕ್ಕೆ ಇಂಬು ಕೊಡುತ್ತದೆ. ಸರಕಾರಿ ಹಾಗೂ ಖಾಸಗಿ ಅಧಿಕಾರಿಗಳು ಸೈಕಲ್‌ನ್ನು ಕಛೇರಿಗೆ ಬಳಸಿದರೆ ಮೇಲ್ಪಂಕ್ತಿ ಹಾಕಿದಂತಾಗುತ್ತದೆ.

ಹಿಂದೆ ಸೈಕಲ್‌ನಲ್ಲಿ ಹಲವಾರು ಪ್ರೇಮ ಪ್ರಕರಣಗಳು ವಿವಾಹಕ್ಕೆ ನಾಂದಿ ಹಾಡಿವೆ. ಈಗಲೂ ಗ್ರಾಮಗಳಲ್ಲಿ ಪತಿಪತ್ನಿಯರು, ಪ್ರೇಮಿಗಳು ಸೈಕಲ್‌ನಲ್ಲಿ ಹೋಗುವುದನ್ನು ಅಲ್ಲಲ್ಲಿ ಕಾಣಬಹುದು. ಹಿಂದಿನ ಹಳೆಯ ಹಿಂದಿ ಸಿನಿಮಾಗಳಲ್ಲಿ ಈ ದೃಶ್ಯಗಳು ಬಹಳ ಸಾಮಾನ್ಯವಾಗಿದ್ದವು. ಅದರ ಪುನರಾವರ್ತನೆ ಶೀಘ್ರದಲ್ಲೇ ಆಗಲಿ ಎಂಬ ಆಶಯವಿದೆ.

ಇನ್ನು ನೆದರ್‌ಲ್ಯಾಂಡ್ ದೇಶದಲ್ಲಿ ಸೈಕಲ್‌ನ ಜನಪ್ರಿಯತೆಗೆ ಸರಕಾರದ ಕೊಡುಗೆ ಅಪರಿಮಿತ. ಇಲ್ಲಿನ ಒಂದು ‘ಸುಸ್ವಾಗತ’ ಎಂಬ ಫಲಕಕ್ಕೆ ಬರೇ ಸೈಕಲ್‌ನಿಂದ ಬರೆದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಒಂದು ಫಲಕ ”There is something wrong with the society that drives a car to workout in a Gym’ ಬಹಳ ಅರ್ಥಪೂರ್ಣವಾಗಿದೆ ಹಾಗೂ ವ್ಯಂಗ್ಯದ ಜೊತೆ ಒಂದು ಸಂದೇಶ ನೀಡುತ್ತಿದೆ.

ಹೀಗೆ ಸೈಕಲ್ ಪರಿಸರ ಸ್ನೇಹಿ, ಅಗ್ಗ, ಆರೋಗ್ಯ ವೃದ್ಧಿಸುವ ಯಾವ ಪುನರಾವರ್ತನೆ ಖರ್ಚು ಇಲ್ಲದ ಸಾಧನವನ್ನು ನಾವೆಲ್ಲಾ ಬಳಸಿ ನಮ್ಮ ಕೈಲಾದ ಸಣ್ಣ ಪರಿಸರ ಪ್ರೇಮವನ್ನು ತೋರಿಸಿದರೆ ಒಳಿತಲ್ಲವೇ? ನೀವೇನಂತೀರಿ?


ಕೆ.ರಮೇಶ್

6 Responses

  1. ಪರಿಸರ ಸ್ನೇಹಿ ಸೈಕಲ್ ಸವಾರಿ ಲೇಖನ… ಚೆನ್ನಾಗಿ ಮೂಡಿಬಂದಿದೆ ಸಾರ್…ನಮ್ಮ ಬಾಲ್ಯದ ನೆನಪು.ಕಣ್ಮುಂದೆ ಬಂದು ನಿಂತಂತಾಯಿತು..ನಮ್ಮ ತಂದೆ ಶಾಲಾ ಮಾಸ್ತರ್ ಅವರು ಕೆಲಸ ಮುಗಿಸಿ ಶಾಲೆಯಿಂದ ಬರುತ್ತಿದ್ದಂತೆ.. ಅದನ್ನು ಹೊರಗೆತ್ತಿಕೊಂಡುಹೋಗಲು ಒಡಹುಟ್ಟಿದವರಲ್ಲಿ ಪೈಪೋಟಿ…ನೆಡೆಯುತ್ತಿದ್ದುದು…ಧನ್ಯವಾದಗಳು…

  2. ನಯನ ಬಜಕೂಡ್ಲು says:

    Beautiful. ಅದೆಷ್ಟೊಂದು ಮಾಹಿತಿ ಸಂಗ್ರಹಿಸಿದ್ದೀರಿ. ಸೈಕಲ್ ಸವಾರಿ ಮಜಾನೇ ಬೇರೆ

  3. ಶಂಕರಿ ಶರ್ಮ says:

    ಒಳ್ಳೆಯ ವ್ಯಾಯಾಮದ ಜೊತೆಗೆ ಪರಿಸರ ಸ್ನೇಹಿಯಾದ ಸೈಕಲ್ ಬಳಕೆಗೆ ನೆದರ್ಲ್ಯಾಂಡ್ ನಂತೆ ನಮ್ಮಲ್ಲೂ ಉತ್ತೇಜನ ನೀಡಿದರೆ ಪ್ರಕೃತಿದೇವಿ ತೃಪ್ತಿಯಿಂದ ನಗಬಹುದು… ಲೇಖನ ಸೊಗಸಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: