ಭೂಮಿಯ ಮೇಲಿನ ಸ್ವರ್ಗ ಭೂತಾನ್
ಪುಟ – ಎರಡು
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಭೂತಾನಿನ ರಾಜಧಾನಿ ತಿಂಪು ತಲುಪಿದಾಗ ರಾತ್ರಿ ಹತ್ತಾಗಿತ್ತು. ಚಳಿ ಚಳಿ ಎನ್ನುತ್ತಾ ಬಿಸಿ ಬಿಸಿ ಊಟಮಾಡಿ ಹೀಟರ್ ಇದ್ದ ರೂಮಿನಲ್ಲಿ ಬೆಚ್ಚಗೆ ಮಲಗಿದೆವು. ಬೆಳಿಗ್ಗೆ ಎಚ್ಚರವಾದಾಗ ಕೊಠಡಿಯ ತುಂಬಾ ಸೂರ್ಯನ ಬೆಳಕು ತುಂಬಿತ್ತು. ಗಂಟೆ ಏಳಾಗಿರಬಹುದು ಎಂದೆನಿಸಿತ್ತು, ಕಿಡಕಿಯ ಪರದೆ ಸರಿಸಿ ನೋಡಿದರೆ ಭಾಸ್ಕರನು ನಮ್ಮನ್ನು ಕಂಡು ನಸುನಗುತ್ತಿದ್ದ. ಅವನ ಹೊಂಬೆಳಕಿನಲ್ಲಿ ತಿಂಪುವಿನ ಸುತ್ತಮುತ್ತಲಿದ್ದ ಗಿರಿಶಿಖರಗಳು ಹೊಳೆಯುತ್ತಿದ್ದವು. ಚಲಿಸುವ ಮೋಡಗಳು ಗಿರಿಶಿಖರಗಳ ನೆತ್ತಿಗೆ ಮುತ್ತಿಡುತ್ತಿದ್ದವು. ಮೊಬೈಲ್‌ನಲ್ಲಿ ಸಮಯ ನೋಡಿದರೆ ಇನ್ನೂ ನಾಲ್ಕೂವರೆ ಗಂಟೆ. ಅಚ್ಚರಿಯಾಗಿತ್ತು, ಗೂಗಲ್ ಮಹಾಶಯನನ್ನು ಸಂಪರ್ಕಿಸಿದಾಗ – ಭೂತಾನಿನಲ್ಲಿ ಸಮಯ ಭಾರತಕ್ಕಿಂತ ಅರ್ಧ ಗಂಟೆ ಮುಂದಿದೆ, ಇಲ್ಲಿನ ಚೆಲುವು ಕಂಡ ರವಿಯು ತುಸು ಬೇಗನೇ ತನ್ನ ರಥವನ್ನೇರಿ ಬರುವನು. ಈಶಾನ್ಯ ರಾಜ್ಯಗಳಲ್ಲಿ ಸೂರ್ಯೋದಯ ಬಲು ಬೇಗನೇ ಆಗುತ್ತದೆ. ಬೆಳಗಿನ ಉಪಹಾರವನ್ನು ಮುಗಿಸಿ, ಎಂಟು ಗಂಟೆಗೆ ಸಿದ್ಧರಾಗಿ ಅತ್ಯಂತ ಪುರಾತನವಾದ ಕೋಟೆಯನ್ನು ನೋಡಲು ಹೊರಟೆವು. ನಾವು ಸಾಗಿದ ಹಾದಿಯುದ್ಧಕ್ಕೂ ಪ್ರಕೃತಿ ತನ್ನ ಚೆಲುವನ್ನು ಪ್ರದರ್ಶಿಸುತ್ತಿದ್ದಳು. ಮುಗಿಲು ಮುಟ್ಟುವ ಹಿಮಾಲಯದ ಪರ್ವತದ ಸಾಲುಗಳು, ಹಸಿರುಕ್ಕಿಸುತ್ತಿದ್ದ ಕಾನನಗಳು, ಪಚ್ಚೆಯಂತೆ ಹೊಳೆಯುತ್ತಾ ಕುಣಿದು ಕುಪ್ಪಳಿಸುತ್ತಾ ಹರಿಯುತ್ತಿದ್ದ ನದಿಗಳು, ಓಕ್, ಸಿಡಾರ್, ದೇವದಾರು, ವಿಲ್ಲೋ ಇನ್ನಿತರ ಮರ ಗಿಡಗಳನ್ನೊಳಗೊಂಡ ವೃಕ್ಷ ಸಂಪತ್ತು, ಹಲವು ಬಗೆಯ ಪಶು ಪಕ್ಷಿಗಳು ಎಲ್ಲರ ಮನ ಸೆಳೆದಿದ್ದವು.
ನಮ್ಮ ಜೊತೆ ಬಂದ ಗೈಡ್ ಹೆಸರು ಕರ್ಮ, ನಾವೆಲ್ಲಾ ಧರ್ಮ ಎಂದೇ ಕರೆಯುತ್ತಿದ್ದೆವು. ನಾವು ಧರ್ಮ ಎಂದಾಗಲೆಲ್ಲಾ ಅವನು ಕರ್ಮ ಎಂದು ನಮ್ಮನ್ನು ತಿದ್ದುತ್ತಿದ್ದ. ಕರ್ಮ ಎಂದರೆ ನಮ್ಮ ಆಡುಭಾಷೆಯಲ್ಲಿ ಒಬ್ಬರನ್ನು ಹೀಗಳೆಯುವ ಪದ, ಎಂದು ನಾನು ಸಮಜಾಯಿಷಿ ಹೇಳಿದ ಮೇಲೆಯೇ ಅವನು ಸುಮ್ಮನಾದದ್ದು. ಧರ್ಮ ಭೂತಾನಿನ ಹತ್ತು ಹಲವು ವಿಶೇಷಗಳನ್ನು ಲವಲವಿಕೆಯಿಂದ ವರ್ಣಿಸುತ್ತಿದ್ದ. ಭೂತಾನ್ ಭಾರತ ಹಾಗೂ ಚೀನಾದಿಂದ ಸುತ್ತುವರೆಯಲ್ಪಟ್ಟಿದೆ. ಆಗಾಗ್ಗೆ ಗಡಿ ಪ್ರದೇಶದಲ್ಲಿ ಖ್ಯಾತೆ ತೆಗೆಯುವ ಚೀನಾದ ಉಪಟಳವನ್ನು ತಡೆಯಲು ಭೂತಾನ್ ಭಾರತವನ್ನು ಆಶ್ರಯಿಸಿದೆ. ಹಿಂದೆ ರಾಜರು ಆಳುತ್ತಿದ್ದ ನಾಡಿದು. ಆದರೆ ನಾಲ್ಕನೇ ನಾಂಗ್ಯೆಲ್ ರಾಜನು ಪ್ರಜಾಪ್ರಭುತ್ವವನ್ನು ಜಾರಿಗೆ ತಂದನು, ಹಾಗಾಗಿ ಇಲ್ಲಿ ರಾಜನ ಆಳ್ವಿಕೆಯ ಜೊತೆ ಜೊತೆಗೇ ಸಾಂವಿಧಾತ್ಮಕ ಸರ್ಕಾರವೂ ಆಡಳಿತವನ್ನು ನಡೆಸುವುದು. ಈಗಿರುವ ರಾಜನ ಹೆಸರು ಜಿಗ್ಮೆ ಕೆಸರ್ ನಾಂಗ್ಯೆಲ್ (Jigme Kesar Nangyal) ಹಾಗೂ ಪ್ರಧಾನ ಮಂತ್ರಿಯ ಹೆಸರು ಲೊಟಾಲ್ ಶೆರಿಂಗ್ (Lotal Tshering). ನಮ್ಮ ರಾಷ್ಟ್ರಧ್ವಜ ಹಳದಿ ಮತ್ತು ಕೆಂಪು ಬಣ್ಣದ್ದಾಗಿದೆ, ಮೇಲೊಂದು ಗುಡುಗುವ ಡ್ರಾಗನ್ ಚಿತ್ರ ಇದೆ. ನಮ್ಮ ರಾಷ್ಟ್ರಭಾಷೆ ಝೋಂಕಾ (Dzonka). ಸ್ಥಳೀಯರು ಆಡುವ ಭಾಷೆಗಳು ಸುಮಾರು 25 ಇದ್ದರೂ ಅವುಗಳಿಗೆ ಲಿಪಿಯೇ ಇಲ್ಲ. ಝೋಂಕಾ ಭಾಷೆಗೆ ಮಾತ್ರ ಲಿಪಿಯಿದೆ. ಇಲ್ಲಿ ಬಳಸುವ ಕರೆನ್ಸಿ ನ್ಯುಲ್‌ಟ್ರಮ್ (Ngultrum). ಭಾರತೀಯ ರೂಪಾಯಿಯೂ ಚಲಾವಣೆಯಲ್ಲಿದೆ. ಇಲ್ಲಿನ ರಸ್ತೆಗಳಲ್ಲಿ ಒಂದೆಡೆಯೂ ಸಿಗ್ನಲ್ ಲೈಟ್ ಇಲ್ಲ, ವಾಹನ ಚಾಲಕರು ಕೇವಲ 30 ರಿಂದ 50 ಕಿ.ಮೀ. ವೇಗದಲ್ಲಿ ವಾಹನಗಳನ್ನು ಚಲಾಯಿಸುವರು ಎಂದು ಹೇಳಿದ. ಸರ್ಕಾರವು ನಾಗರೀಕರ ಹಿತದೃಷ್ಟಿಯಿಂದ ತಂಬಾಕನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಟಿ.ವಿ. ಹಾಗೂ ಇಂಟರ್‌ನೆಟ್ ಸೌಲಭ್ಯವನ್ನು ಕೇವಲ ಒಂದು ದಶಕದಿಂದ ನೀಡಲಾಗಿದೆ. ಭೂತಾನಿನ ಪ್ರಜೆಗಳು ಪಾರಂಪರಿಕ ಉಡುಗೆಗಳನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗುವುದು ಕಡ್ಡಾಯ, ಪುರುಷರು ಧರಿಸುವ ಉಡುಗೆಗೆ ‘ಗೋ’ ಎಂದೂ ಮಹಿಳೆಯರು ಧರಿಸುವ ಉಡುಪಿಗೆ ‘ಕೆರಾ’ ಎನ್ನುವರು. ನನ್ನ ಉಡುಪಿನಲ್ಲಿ ಎಷ್ಟು ದೊಡ್ಡ ಜೇಬಿದೆ ಅಂದರೆ ನನ್ನ ಹೆಂಡತಿಯನ್ನು ಇದರಲ್ಲಿ ಅಡಗಿಸಿಡಬಹುದು ಎನ್ನುತ್ತಾ ಧರ್ಮ ಗಹಗಹಿಸಿ ನಕ್ಕ. ನಾವು ಅವನ ಜೊತೆಗೂಡಿ ನಕ್ಕು ನಲಿದೆವು.
ಇತ್ತೀಚೆಗೆ ನಮ್ಮ ರಾಜನು 1,08,000 ಸಸಿಗಳನ್ನು ನೆಟ್ಟು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಎಂದು ಧರ್ಮ ಹೇಳಿದಾಗ ನಮಗೆ ಅಚ್ಚರಿಯಾಯಿತು. ನಮ್ಮ ನಾಡು ಔಷಧೀಯ ಸಸ್ಯಗಳ ತವರೂರು, ಶ್ರೀಗಂಧದ ಮರಗಳ ಬೀಡು ಎಂದು ಹೆಮ್ಮೆಯಿಂದ ಹೇಳಿದ ಧರ್ಮ. ಭೂತಾನಿನಲ್ಲಿ ಎಪ್ಪತ್ತು ಪ್ರತಿಶತ ಕಾಡಿದೆ ಎಂದರೆ ನಂಬಲು ಅಸಾಧ್ಯವಲ್ಲವೇ? ಇವರ ಸರ್ಕಾರ ನಾಲ್ಕು ಸ್ತಂಭಗಳ ಮೇಲೆ ನಿಂತಿದೆ – ಪರಂಪರೆ ಮತ್ತು ಸಂಸ್ಕೃತಿಯ ಸಂರಕ್ಷಣೆ, ಪ್ರಕೃತಿ ಸಂರಕ್ಷಣೆ, ಪರಿಸರವನ್ನು ಉಳಿಸಿಕೊಳ್ಳುತ್ತಾ ಪ್ರಗತಿಯತ್ತ ಹೆಜ್ಜೆ ಹಾಗೂ ನಾಗರಿಕರ ಸ್ವಾಸ್ಥ್ಯ. ಆರ್ಥಿಕ ಪ್ರಗತಿಯೊಂದೇ ರಾಷ್ಟ್ರದ ಪ್ರಗತಿಯ ಅಳತೆಗೋಲು ಎಂಬ ಸಿದ್ಧಾಂತವನ್ನು ಇವರು ಒಪ್ಪುವುದಿಲ್ಲ. ಪರಿಸರ ಸಂರಕ್ಷಣೆಯಿಂದ ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವುದರಿಂದಲೇ ಬದುಕು ಹಸನಾಗುವುದು ಎಂಬುದು ಇವರ ಸಿದ್ಧಾಂತ.
ಬನ್ನಿ ಭೂತಾನಿನ ಅತ್ಯಂತ ಪುರಾತನವಾದ ದೇಗುಲಕ್ಕೆ ಭೇಟಿ ನೋಡೋಣ – ಝೋಂಕಾ ಚಾಂಗಾಂಗ್ ಖಾ ಲಖಾಂಗ್ (Dzongkha Changangkha Lhakhang) – ಈ ಹೆಸರನ್ನು ಓದಲು ಸಾಧ್ಯವೇ? ನಮ್ಮ ಗೈಡ್ ಹತ್ತಿರ ಎರಡೆರೆಡು ಬಾರಿ ಹೇಳಿಸಿ ಕನ್ನಡದಲ್ಲಿ ಬರೆದುಕೊಂಡೆ. ಇವರ ಎಲ್ಲಾ ಹೆಸರುಗಳೂ ನಮ್ಮ ಉಚ್ಛಾರಕ್ಕೆ ಸವಾಲೆಸೆಯುವಂತೆ ತೋರುವುದು. ಪುರಾತನ ಕಾಲದಲ್ಲಿ ನಿರ್ಮಿಸಿದ ದೇಗುಲಗಳೆಲ್ಲಾ ಗಿರಿಶಿಖರಗಳ ನೆತ್ತಿಯ ಮೇಲೆಯೇ ಇರುವುದಲ್ಲವೇ? ಆ ದೇವನು – ಬಾ ಮಗು, ನನ್ನ ಎತ್ತರಕ್ಕೆ ಏರು ಬಾ. ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ನೀನು ಮೇಲೇರ ಬಲ್ಲೆಯಾದರೆ ಸ್ವರ್ಗದ ಬಾಗಿಲು ನಿನಗಾಗಿ ತೆರೆದಿಡುವೆ ಎಂದು ಹೇಳುವಂತೆ ತೋರುವುದು. ಆದರಿಂದು, ನಾವು ಬೆಟ್ಟ ಕಡಿದು, ರಸ್ತೆ ಮಾಡಿ ವಾಹನಗಳ ಮೂಲಕ, ದೈಹಿಕ ಶ್ರಮವಿಲ್ಲದೆ, ಈ ದೇಗುಲಗಳನ್ನು ಸರಾಗವಾಗಿ ತಲುಪಬಲ್ಲೆವು. ಆದರೆ ಮಾನಸಿಕವಾಗಿ ಆಧ್ಯಾತ್ಮಿಕವಾಗಿ ಮೇಲೇರುವುದನ್ನು ಇನ್ನೂ ಕಲಿಯಬೇಕಲ್ಲವೆ?
12 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಈ ಬೌದ್ಧ ದೇಗುಲದ ಸುತ್ತಲೂ ಕಂಗೊಳಿಸುವ ವನಸಿರಿ, ಹಾರಾಡುವ ಪ್ರಾರ್ಥನಾ ಪತಾಕೆಗಳು, ಹಾಗೂ ಕೆಂಪು ನಿಲುವಂಗಿ ಧರಿಸಿದ್ದ ಬೌದ್ಧ ಬಿಕ್ಷುಗಳನ್ನು ಗಮನಿಸುತ್ತಾ ದೇಗುಲದ ಒಳಹೊಕ್ಕೆ. ಗರ್ಭಗುಡಿಯಲ್ಲಿರುವ ದೇವರು ಬುದ್ಧನ ಅವತಾರವಾದ ಅವಲೋಕಿತೇಶ್ವರ – ವಿಷ್ಣುವಿನ ದಶಾವತಾರವನ್ನು ಹೋಲುತ್ತಿದ್ದ, ಆದರೆ ಒಂದೆರೆಡು ವ್ಯತ್ಯಾಸಗಳಿದ್ದವು, ಇವನಿಗೆ ಹನ್ನೊಂದು ಶಿರಗಳಿದ್ದು ಹಲವಾರು ಕೈಗಳಿದ್ದವು. ಅವನ ಒಂದು ಕೈಯಲ್ಲಿ ಸುದರ್ಶನ ಚಕ್ರವನ್ನು ಹೋಲುವಂತಹ ಆಯುಧವನ್ನು ಹಿಡಿದಿದ್ದ. ದೇವರ ಮೂರ್ತಿಯ ಸುತ್ತಲೂ ಕೆಲವು ಅನುಯಾಯಿಗಳ ಮೂರ್ತಿಗಳಿದ್ದವು. ಗರ್ಭಗುಡಿಯ ಹೊರಗೆ ಕಮಲ ಪುಷ್ಪದ ಮೇಲೆ ಪ್ರಶಾಂತವಾದ ಚಿನ್ನದ ಲೇಪನ ಹೊತ್ತ ಬುದ್ಧನ ವಿಗ್ರಹವನ್ನು ಧ್ಯಾನಮುದ್ರೆಯಲ್ಲಿ ಕೆತ್ತಲಾಗಿತ್ತು. ಅಲ್ಲಿ ಧ್ಯಾನ ಮಾಡುವವರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ತುಪ್ಪದ ದೀಪ ಬೆಳಗಿ, ಕ್ಷಣ ಹೊತ್ತು ನಾವೂ ಧ್ಯಾನ ಮಾಡಿದೆವು. ಆ ಹಾಲಿನ ಮೂಲೆಯೊಂದರಲ್ಲಿ ಬೌದ್ಧ ಸನ್ಯಾಸಿಯೊಬ್ಬ ಪುಟ್ಟ ಮಗುವಿನ ಬಳಿ ಪೂಜೆ ಸಲ್ಲಿಸುತ್ತಿದ್ದ. ನಾವು ಕುತೂಹಲದಿಂದ ಆ ಮಗುವಿನ ತಂದೆ ತಾಯಿಯ ಬಳಿ ಆ ಸಂಸ್ಕಾರದ ಬಗ್ಗೆ ವಿಚಾರಿಸಿದಾಗ – ಅದು ಮಗುವಿಗೆ ನಾಮಕರಣ ಮಾಡುವ ವಿಧಾನವೆಂದು ತಿಳಿಸಿದರು. ಇಲ್ಲಿರುವ ದೈವ – ಟಾಮ್‌ಡ್ರಿನ್ ಮಗುವನ್ನು ಕಾಯುವ ದೈವವೆಂದು ಅವರ ನಂಬಿಕೆ. ನಂಬಿಕೆ ಏನೇ ಇರಲಿ, ಆ ಪ್ರಕೃತಿ ಸೌಂದರ್ಯದ ಮಧ್ಯೆಯಿರುವ ಗುಡಿಯಲ್ಲಿ ಮಗುವಿಗೆ ಹೆಸರಿಟ್ಟರೆ ನೂರು ಕಾಲ ಬದುಕುವುದು ಖಚಿತ.
(ಮುಂದುವರಿಯುವುದು)
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ: https://www.surahonne.com/?p=40911
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ನೈಸ್
ಭೂತಾನ್ ಪ್ರವಾಸ ಕಥನ ಓದಿಸಿಕೊಂಡು…ಹೋಗುತ್ತಿದೆ ಮೇಡಂ
ಭೂತಾನ್ ರಾಜಧಾನಿ ತಿಂಪುವಿನ ಹಸಿರುಸಿರಿಯ ನಡುವೆ ಪಯಣಿಸುತ್ತಾ, ಧರ್ಮ…ಅಲ್ಲಲ್ಲ…ಕರ್ಮನ ಮಾತಿಗೆ ನಗುತ್ತಾ ನಿಮ್ಮೊಂದಿಗೆ ನಡೆದುದೇ ತಿಳಿಯಲಿಲ್ಲ ನೋಡಿ..ಧನ್ಯವಾದಗಳು ಮೇಡಂ.
ನನಗೂ ಹೋಗುವ ಆಸೆ ಇದೆ. ಒಳ್ಳೆಯ ವಿವರಣೆ. ಆಸಕ್ತಿಯಿಂದ ಓದುವ ವಿಷಯಗಳು.