ದುಃಖೋಪನಿಷತ್ತು !

Share Button

ದುಃಖ ಯಾರಿಗಿಲ್ಲ? ಯಾರಿಗೆ ಗೊತ್ತಿಲ್ಲ? ಸುಖದ ಮಹತ್ವ ಗೊತ್ತಾಗುವುದೇ ದುಃಖದಲ್ಲಿ! ನಾನಾ ಕಾರಣಗಳಿಂದ ದುಃಖಿಗಳಾದವರೇ ಲೋಕದಲ್ಲಿ ಹೆಚ್ಚು. ಕೆಲವೊಮ್ಮೆ ವಿನಾ ಕಾರಣ! ಇದೇ ನನ್ನ ಸಬ್ಜೆಕ್ಟು. ‘ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ’ ಎಂದಿದ್ದಾರೆ ಅಲ್ಲಮಪ್ರಭು. ಹಾಗೆಯೇ ‘ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ಸಿದ್ಧತೆ ನೋಡಾ’ ಎಂದೂ ಬದಲಿಸಿಕೊಳ್ಳಬಹುದು! ಈ ಸಿದ್ಧತೆಯಲ್ಲೇ ಬಹುತೇಕ ದುಃಖ ಅಡಗಿರುತ್ತದೆ. ನೋವು, ಯಾತನೆ, ಅಸಹನೆ, ವ್ಯಗ್ರತೆ, ದುಗುಡ, ಸಂಕಟ, ಹಿಂಸೆ, ಕ್ರೌರ್ಯ, ಅಸೂಯೆ, ಹತಾಶೆ, ಖಿನ್ನತೆ, ಅಸಹಾಯಕತೆ ಇವೆಲ್ಲವೂ ದುಃಖ ತರುವ ಸಂಗತಿಗಳು. ಬರೀ ಸಂಗತಿಗಳಲ್ಲ; ನಕಾರಾತ್ಮಕ ದುರಂತಗಳು. ದುಃಖಿತರಾಗುವುದಕ್ಕೆ ಇವೇ ಮೂಲ ಕಾರಣಗಳು. ಇವಲ್ಲದೇ ಇನ್ನೂ ಹಲವು ತೆರನಾದ ವಿಚಾರಗಳಿಂದ ನಾವು ದುಃಖ ಪಡುತ್ತೇವೆ. ಅಜ್ಞಾನ ಮತ್ತು ಅವಿವೇಕಗಳೂ ನಮ್ಮನ್ನು ದುಃಖಕ್ಕೆ ನೂಕುತ್ತವೆ. ನಮ್ಮ ನಿರೀಕ್ಷೆ ತರುವ ನಿರಾಶೆ ಮತ್ತು ಕೈಯಳತೆಯಲ್ಲಿ ಇಲ್ಲದ ಪ್ರಸಂಗಗಳು ಸಹ ದುಃಖಿತರನ್ನಾಗಿಸುತ್ತವೆ. ಪ್ರಪಂಚದ ವಿದ್ಯಮಾನಗಳನ್ನು ಗಮನಿಸಿದಾಗ ದುಃಖವುಂಟಾಗುವುದೇ ಹೆಚ್ಚು. ಅದಕ್ಕೇ ಅಲ್ಲಮಪ್ರಭುದೇವರು ದುಃಖವನ್ನು ಸಾಗರಕ್ಕೆ ಹೋಲಿಸಿದರು.

ನಾವು ಮಾಡುವ ತಪ್ಪೆಂದರೆ ದುಃಖವನ್ನು ಅನುಭವಿಸಿ ಮುಗಿಸದೇ ನಿವಾರಿಸಿಕೊಳ್ಳಲು ಯತ್ನಿಸಿ ಸೋಲುತ್ತೇವೆ. ಸಂತೋಷದ ಹಾಗೆಯೇ ದುಃಖವೂ! ಇವೆರಡೂ ಆಳದಲ್ಲಿ ಬೇರೆ ಬೇರೆಯಲ್ಲ. ಮನದ ಮಗ್ಗಲುಗಳಿವು. ಬದುಕಿನ ಮಜಲುಗಳಿವು. ಸಂಚಾರಿ ಭಾವಗಳು. ಸ್ಥಿರವಲ್ಲ! ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಂದ ಸಂಭವಿಸುವಂಥವು. ತುಂಬ ನಕ್ಕಾಗಲೂ ತುಂಬ ಅತ್ತಾಗಲೂ ಕಣ್ಣು ಮೂಗುಗಳಲ್ಲಿ ನೀರು ಬರುವುದು ಸ್ವಾಭಾವಿಕ. ಆನಂದಬಾಷ್ಪವೂ ಕಣ್ಣೀರೇ; ನೋವನ್ನು ಅನುಭವಿಸುವಾಗಲೂ ಕಣ್ಣೀರೇ! ಪರಿಣಾಮ ಬೇರೆ!! ಮಿದುಳಿನಲ್ಲಿ ಇವೆರಡರ ಕೇಂದ್ರ ಒಂದೇ! ಆದರೆ ಮನಸ್ಥಿತಿ ಮಾತ್ರ ಅಜಗಜಾಂತರ. ಹಾರ್ಮೋನು ಸ್ರವಿಸುವಿಕೆಯಲ್ಲೂ ವ್ಯತ್ಯಾಸ. ಒಂದರದು ಪಾಸಿಟಿವ್ ತರಂಗಗಳ ಹರಡುವಿಕೆ; ಇನ್ನೊಂದರದು ನೆಗಟೀವ್ ನರಳಿಕೆ.

ಅತಿಯಾದ ಸಂತಸವು ಅತಿಯಾದ ದುಃಖವನ್ನೂ ತರಬಹುದು. ಅದಕ್ಕೇ ತಿಳಿದವರು ಎಚ್ಚರ ಮತ್ತು ಎಚ್ಚರಿಕೆಯಿಂದ ಬದುಕಬೇಕು ಎಂದು ಬೋಧಿಸಿದರು. ‘ಮೈ ಮರೆತು ನಗಬೇಡ; ಆಮೇಲೆ ಅಳಬೇಕಾಗುವುದು’ ಎಂದು ಹಿರಿಯರು ಮಕ್ಕಳಿಗೆ ನೆನಪಿಸುತ್ತಿದ್ದರು.  ಸಂತಸವೆಂಬುದು ಅಗಲಕ್ಕೆ ಹರಡಿಕೊಳ್ಳುವ ಸ್ವಭಾವದ್ದು, ಸಾಗರದ ಅಲೆಗಳಂತೆ. ದುಃಖವು ಅತಿಯಾದ ಆಳದ್ದು, ಸಮುದ್ರದ ಪಾತಾಳದಂತೆ! ಶರಧಿಯ ನಿಧಿ ಅಡಗಿರುವುದೇ ಆಳದಲ್ಲಿ! ಗೌತಮರು ಬುದ್ಧರಾಗುವುದಕ್ಕೆ ಈ ಆಳದ ದುಃಖವೇ ಕಾರಣ. ಸಂತಸಕ್ಕೆ ಕಾರಣ ಬೇಕಿಲ್ಲ. ಸುಮ್ಮನೆ ನಗಬಹುದು. ಕೃತಕವಾಗಿ ಹಲ್ಲು ಗಿಂಜಬಹುದು. ಆದರೆ ದುಃಖ ಹಾಗಲ್ಲ. ಅಳುವಿನ ನಾಟಕ ಕಷ್ಟ. ಗ್ಲಿಸರಿನ್ ಹಚ್ಚಿಕೊಂಡು ಸಿನಿಮಾದಲ್ಲಿ ಅಳುವುದು ಬೇರೆ. ನಿಜ ಕಲಾವಿದರಿಗೆ ಗ್ಲಿಸರಿನ್ ಸಹ ಬೇಡ. ಆ ಪಾತ್ರದ ಆ ಸಂದರ್ಭದ ದುಗುಡವನ್ನು ಆವಾಹಿಸಿಕೊಂಡು ಸಹಜವಾಗಿ ನಟಿಸುವಂಥವರು. ನಟಿಸುವಷ್ಟು ಹೊತ್ತೂ ಅವರು ನಿಜವಾದ ದುಃಖವನ್ನೇ ಅನುಭವಿಸಿರುತ್ತಾರೆ. ಅವರ ಮನಸ್ಸಿಗೆ ಗೊತ್ತಿರಬಹುದು, ಇದು ನಟನೆ ಎಂದು; ಆದರೆ ಅವರ ಜೀವಕೋಶಗಳಿಗೆ ಮತ್ತು ಸ್ರವಿಸುವ ರಸದೂತಗಳಿಗೆ ಗೊತ್ತಿರುವುದಿಲ್ಲ. ಇದನ್ನೇ ಆವಾಹನೆ; ಪರಕಾಯ ಪ್ರವೇಶ ಎನ್ನುವುದು. 

ಮಾನವರನ್ನು ಕಾಡುತ್ತಿರುವುದೇ ದುಃಖ. ಇದರಿಂದ ಬಿಡುಗಡೆ ಬೇಕಾದರೆ ಲೋಕದಲ್ಲಲ್ಲ; ಲೋಕೋತ್ತರದಲ್ಲಿ ಹುಡುಕಬೇಕು. ಮತಧರ್ಮಗಳಾಚೆಗೆ ವ್ಯಾಪಿಸಿರುವ ಆಧ್ಯಾತ್ಮಿಕತೆಗೆ ಪ್ರವೇಶಿಸಬೇಕು. ಅಜ್ಞಾನದ ಅಂಧಕಾರದಿಂದಾಚೆ ಬರಲು ಜ್ಞಾನದೀವಿಗೆ ಬೇಕು. ಎದೆಯ ಬೆಳಕೊಂದು ಸಾಕು. ಮಿದುಳಲ್ಲಿ ಹೃದಯವನ್ನು ಧರಿಸಬೇಕು. ಕರುಳಲ್ಲಿ ಕರುಣೆ ಸಂಚರಿಸಬೇಕು. ಆಗಷ್ಟೇ ನಾವು ದುಃಖದಾವರಣದಿಂದ ಈಚೆ ಬರುತ್ತೇವೆ. ದುಃಖವನ್ನು ಮೀರುವುದು ಎಂದರೆ ಸಮರ್ಪಕವಾಗಿ ಅರಿಯುವುದು ಎಂದರ್ಥ! ಇದು ವಿಚಿತ್ರವಾದರೂ ಸತ್ಯ. ನಮಗಿರುವ ದುಃಖ ದುಗುಡ ದುಮ್ಮಾನಗಳ ಪದರಗಳನ್ನು ಬಿಡಿಸಿ, ಎಳೆ ಎಳೆಯಾಗಿ ಹರಡಿ, ವಿಶ್ಲೇಷಿಸಿ, ವ್ಯಾಖ್ಯಾನಿಸಿಕೊಳ್ಳುತ್ತಾ ಹೋದರೆ ಎದೆಯ ಭಾರ ಕಡಮೆಯಾಗುತ್ತದೆ. ಉರಿದುರಿದು ಬರಿದಾದ ಕರ್ಪೂರದಂತೆ. ಎಲ್ಲವೂ ಖಾಲಿ! ನಮ್ಮ ದುಃಖಕ್ಕೆ ಅರ್ಥವೇ ಇಲ್ಲ ಎಂಬ ತಿಳಿವಳಿಕೆ. ನಮ್ಮ ಅವಿವೇಕ ಮತ್ತು ವಿಸ್ಮೃತಿಗಳಿಂದಾಗಿ ದುಃಖಿತರಾಗಿದ್ದೆವು ಎಂಬ ಮನವರಿಕೆ. ಅತಿಯಾದರೆ ಅಮೃತವೂ ವಿಷವಾಗುವುದೆಂಬ ಮಾತಿನಂತೆ, ಅತಿಚಿಂತನೆ, ಅತಿಭಾವನೆ, ಅತಿತರ್ಕ, ತತ್ತ್ವಗಳು ನಮ್ಮನ್ನು ತೀಕ್ಷ್ಣವಾಗಿಸುತ್ತವೆ, ಆಳದಲ್ಲಿ ಮಡುಗಟ್ಟಿದ ವಿಷಾದ ಮೇಲೆದ್ದು, ತಿಳಿನೀರನ್ನು ಕಲಕಿ ರಾಡಿ ಎಬ್ಬಿಸುತ್ತದೆ. ಚಿತ್ತದ ಸಮಸ್ಥಿತಿಯನ್ನು ಕಳೆದುಕೊಂಡು ಅತಿ ಭಾವುಕತೆಯಿಂದಲೋ ಅತಿ ವಿಚಾರವಾದದಿಂದಲೋ ಬಳಲುತ್ತೇವೆ. ಏಕೆಂದರೆ ಮಾನಸಿಕ ಆರೋಗ್ಯವನ್ನು ಹಾಳು ಮಾಡುವುದೇ ಈ ಅತಿಗಳೆಂಬ ಮತಿ! (over thinking) ಪ್ರಾಕ್ಟಿಕಾಲಿಟಿಯನ್ನು ಪಕ್ಕಕಿಟ್ಟು, ಸಿದ್ಧಾಂತಗಳಲ್ಲಿ ಮೈ ಮರೆತು ತಾನು ಮಾತ್ರವಲ್ಲ ತನ್ನ ಕುಟುಂಬದವರನ್ನೂ ಸುತ್ತಮುತ್ತಲಿನವರನ್ನೂ ದುಃಖಿತರನ್ನಾಗಿಸುವುದೆಂದರೆ ಇದೇ. ಮುಗ್ಧ ಮನಗಳ ದಾರಿ ತಪ್ಪಿಸಿ, ‘ನೀವು ದುಃಖದಲ್ಲಿದ್ದೀರಾ!’ ಎಂದು ಹತ್ತು ಸಲ ಹೇಳಿ ನಂಬಿಸಿ, ಅವರೊಳಗೆ ಗಿಲ್ಟು ತುಂಬುವುದು. ಆತಂಕಿತರನ್ನಾಗಿಸುವುದು ಸುಲಭ; ನಿರಾತಂಕಗೊಳಿಸುವುದು ಕಷ್ಟ. 

ದುಃಖಿತರನ್ನು ಗುರುತಿಸಿ, ಅವರ ದುಃಖಕ್ಕೆ ಕಾರಣವಾದುದರ ಅಂಶಗಳತ್ತ ಗಮನವಿಟ್ಟು, ಭ್ರಮೆಗಳನ್ನು ಕಳಚಿ, ಮುಕ್ತರನ್ನಾಗಿಸುವುದು ನಿಜ ಸಮಾಜಸೇವೆ. ಅವರ ವೀಕ್‌ನೆಸ್‌ಗಳನ್ನು ಮನದಟ್ಟು ಮಾಡಿಸಿ, ಅವರಲ್ಲೇ ಇರುವ ಸ್ಟ್ರೆಂಥ್‌ಗಳಿಂದ ಅವನ್ನು ಹೇಗೆ ಗೆಲ್ಲಬಹುದೆಂಬ ದಾರಿ ತೋರುವುದು. ಅವರು ಪಡುತ್ತಿರುವ ದುಃಖವೂ ಪ್ರಾಮಾಣಿಕವೇ; ದುಃಖಿತರೂ ಪ್ರಾಮಾಣಿಕರೇ! ಆದರೆ ಆ ದುಃಖಕ್ಕೆ ಕಾರಣವಾದ ಅಂಶಗಳು ಮಾತ್ರ ಭ್ರಮಾತ್ಮಕ ಅಷ್ಟೇ. ಇದಕ್ಕೆ ದುಃಖಿತರ ಸಹಕಾರವಿರಬೇಕು, ದುಗುಡದ ಮಡುವಿನಿಂದ ಈಚೆ ಬರಲು ಪ್ರಯತ್ನಿಸಬೇಕು. ಬಹಳಷ್ಟು ಸಂದರ್ಭದಲ್ಲಿ ದುಃಖದಿಂದ ಬಿಡುಗಡೆಗೊಳ್ಳಲು ಸ್ವತಃ ದುಃಖಿತರಿಗೇ ಇಷ್ಟವಿರುವುದಿಲ್ಲ; ಅಂಥವರ ಮನೋಧರ್ಮವೇ ಹಾಗೇ. ಗೊಳೋ ಎಂಬುದೇ ಅವರ ಮನೆದೇವರು. ಏನಾದರೊಂದು ತೊಡಕು, ತೊಂದರೆ, ತಾಪತ್ರಯಗಳನ್ನು ಅಂಟಿಸಿಕೊಂಡೇ ಬಂಧು ಬಾಂಧವರು ಮತ್ತು ಗೆಳೆಯರ ಅನುಕಂಪ ಗಿಟ್ಟಿಸಿಕೊಂಡೇ ಬದುಕುವಂಥವರು. ಸಿಂಪಥಿಯ ಸ್ವೀಕರಿಸುವ ಪತಿಪತ್ನಿಯರಿವರು! ತಮ್ಮ ಬೇಜವಾಬ್ದಾರಿ, ಅದಕ್ಷತೆ, ಕೆಲಸಗಳ್ಳತನ, ಆತ್ಮವಂಚನೆಗಳನ್ನು ಮುಚ್ಚಿಟ್ಟುಕೊಳ್ಳಲು ಅಧಿಕಾರಿಗಳಿಂದ ಸಹಾನುಭೂತಿ ನಿರೀಕ್ಷಿಸುವ ಸೂಡೋ ವ್ಯಕ್ತಿತ್ವದವರು. ವಯಸ್ಸು ಮತ್ತು ಅನಾರೋಗ್ಯವನ್ನು ಮುಂದು ಮಾಡಿಕೊಂಡು ರಿಯಾಯಿತಿ ಮತ್ತು ವಿನಾಯಿತಿಗಳನ್ನು ಪಡೆದುಕೊಳ್ಳುವ ಮನೋರೋಗಿಗಳು. ಎಲ್ಲವೂ ಬಗೆಹರಿದರೆ ಅಂಥವರಿಗೆ ತಲೆ ಕೆಟ್ಟು ಹೋಗುತ್ತದೆ. ಬಗೆಹರಿದ ಖುಷಿಯನ್ನು ಅನುಭವಿಸುವುದನ್ನು ಬಿಟ್ಟು ಹೊಸ ತೊಡಕುಗಳನ್ನು ಮೈಮೇಲೆ ಎಳೆದುಕೊಳ್ಳಲು ಹರ ಸಾಹಸ ಪಡುತ್ತಾರೆ. ಸುಮ್ಮನೆ ಹೋಗುತಿದ್ದ ಇರುವೆಯನ್ನು ಮೈಮೇಲೆ ಬಿಟ್ಟುಕೊಂಡು ಕೈಗೆ ಸಿಗದ ಜಾಗಕ್ಕೆ ಹೋದ ಮೇಲೆ ತಕ ಪಕ ಕುಣಿಯುವವರಿವರು, ಪಕ್ಕಾ ವಿದೂಷಕರು. ಕೈಗೆಟುಕುವಷ್ಟು ದೂರದಲಿ ಬೆಳಕಿದ್ದರೂ ಅತ್ತ ಚಲಿಸದೆ, ಕತ್ತಲಿನತ್ತ ತೆವಳುವ ಕ್ಯಾರೆಕ್ಟರು. ಇಂಥ ನಾಟಕೀಯ ಸಂಕಟಿಗರು ಬದಲಾಗುವುದಿಲ್ಲ. ಏಕೆಂದರ ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ದೋಷ, ದೌರ್ಬಲ್ಯ ಮತ್ತು ಸೋಲುಗಳನ್ನು ವ್ಯವಸ್ಥೆಯ ಮೇಲೆ ಅನಾಮತ್ತಾಗಿ ಹಾಕಿ ದೂರುವ ದುಃಖಿಗಳೇ ಹೆಚ್ಚು. ಅಭಾವ ವೈರಾಗ್ಯದ ಮಂದಿಯಿವರು, ಹಳದಿಕಣ್ಣಿನ ದೃಷ್ಟಿದೋಷದವರು. ಎಲ್ಲರೂ ಹೀಗಿರುವುದಿಲ್ಲ. ಕೆಸರಿನಿಂದ ಮೇಲೆ ಬರಲು ಪ್ರಯತ್ನಿಸಿ ಸೋತವರೂ ಇರುತ್ತಾರೆ. ಅಂಥವರಿಗೆ ನಿಜವಾದ ಮಾರ್ಗದರ್ಶನ ಬೇಕು; ತಜ್ಞರ ಸಲಹೆ ಬೇಕು. ಕುಳಿತು ಕೇಳುವ ಮತ್ತು ಹೇಳುವ ಮನಸ್ಸಿರಬೇಕು. ಅನುಷ್ಠಾನಕ್ಕೆ ತರುವಂಥ ಪರಿಶ್ರಮ ಬೇಕು. ಒಂದು ಮಾತು, ಒಂದು ಪ್ರಾತ್ಯಕ್ಷಿಕೆ ಮತ್ತು ಒಂದು ಪ್ರಾಮಾಣಿಕ ಬೆಂಬಲವು ದುಃಖದಿಂದ ಈಚೆ ಬರಲು ನೆರವೀಯುವುದು. ಚೋದ್ಯವೆಂದರೆ ದುಃಖದ ಮೂಲ ಕಾರಣವನ್ನು ಗುರುತಿಸಿದೆವೆಂದರೆ ನಾವು ದುಃಖಿಗಳಲ್ಲ; ಆ ಮಟ್ಟಿಗೆ ಸೆಲ್ಫ್ ಅವೇರ್‌ನೆಸ್ ಇದೆ,  ಪರಿಹಾರಗಳನ್ನು ಹುಡುಕುವ ಆರೋಗ್ಯವಂತ ಮನಸ್ಸಿದೆ ಅಂತರ್ಥ. ಮುಖ್ಯವಾಗಿ ಅಹಮನ್ನು ಕೈ ಬಿಟ್ಟು ದುಃಖದ ನಿವಾರಣೆಗಾಗಿ ತಿಳಿದವರಿಂದ ಆಪ್ತಸಲಹೆ, ಮಾರ್ಗದರ್ಶನ ಮತ್ತು ಗುರೂಪದೇಶಗಳಿಗಾಗಿ ಹಾತೊರೆಯುವವರೂ ಇದ್ದಾರೆ. ದುಃಖವೂ ಅಲ್ಲದ, ಸಂತಸವೂ ಅಲ್ಲದ ಸಮಸ್ಥಿತಿಯೇ ವೈರಾಗ್ಯ! ಇದನ್ನೇ ನಾವು ನಿರ್ಲಿಪ್ತತೆ ಎನ್ನುವುದು. ಎಲ್ಲವನ್ನೂ ಕೊನೆಗೆ ನಮ್ಮನ್ನೂ ಸಾಕಷ್ಟು ಸದೂರದಲ್ಲಿಟ್ಟು ನೋಡುವುದು. ಸಾಕ್ಷಿತ್ವವಾಗುವುದು. ನಮ್ಮ ಅನುಮತಿಯಿಲ್ಲದೇ ಯಾರೂ ನಮಗೆ ದುಃಖ ಕೊಡಲು ಸಾಧ್ಯವಿಲ್ಲ ಎಂಬ ಮನೋವಿವೇಕ ಜಾಗೃತಗೊಳ್ಳುವುದು. ಅಲ್ಲಿಂದಾಚೆಗೆ ಇರುವುದು ಬರೀ ಶುದ್ಧ ಸಲಿಲ; ತಿಳಿಯಾದ ಗಂಗಾಜಲ. 

ಪರರ ದುಃಖವೆಂಬುದು ರೈಲ್ವೆ ನಿಲ್ದಾಣದಲ್ಲಿರುವ ವೇಯ್ಟಿಂಗ್ ರೂಮಿನಂತೆ! ಎಲ್ಲರೂ ಯಾವುದೋ ಒಂದು ಕಾರಣದಿಂದ ಅಲ್ಲಿ ಕಾಯುತ್ತಿದ್ದಾರೆ. ನಾವೂ ಕಾಯುತ್ತಿದ್ದೇವೆ. ಅವರವರ ಕಾಯುವಿಕೆ ಅವರವರವೇ! ಅಲ್ಲಿ ಜನರು ಬರುತ್ತಾರೆ ಮತ್ತು ಹೋಗುತ್ತಾರೆ. ಯಾರ ದುಃಖವು ಯಾರನ್ನೂ ಬಾಧಿಸುತ್ತಿಲ್ಲ. ಬಾಳ್ವೆಯೂ ಹೀಗಾಗಬೇಕು. ದುಃಖದಿಂದ ವಿಚಲಿತರಾಗಬಾರದು ಎನ್ನುತ್ತಾರೆ ಎಲ್ಲ ಮಹಾಮಹಿಮರು. ನಮ್ಮ ಮನೆಯಲ್ಲಿ ಹೀಗಾಗುವುದಿಲ್ಲ. ಕುಟುಂಬದ ಸದಸ್ಯರು ಹೀಗೆ ಯಾವುದೋ ಕಾರಣಕ್ಕೆ ಕಾಯುತ್ತಾ ಆತಂಕಿತರಾದರೆಂದರೆ ನಾವೂ ಉದ್ವೇಗಕ್ಕೆ ಒಳಗಾಗುತ್ತೇವೆ. ಅವರ ದುಃಖ ನಮ್ಮದೂ ಆಗುತ್ತದೆ. ಸಂಕಟದಷ್ಟು ಸಾಂಕ್ರಾಮಿಕ ಜಗತ್ತಿನಲ್ಲೇ ಇಲ್ಲ. ದುಃಖಕ್ಕೆ ಮರುಗುವುದು ಬೇರೆ; ನಾವೂ ದುಃಖಿತರಾಗುವುದು ಬೇರೆ. ಅದಕ್ಕಾಗಿಯೇ ಸಂತರು ಮತ್ತು ದಾರ್ಶನಿಕರು ನಿಧಾನವಾಗಿ, ಕಿಂಚಿತ್ತೂ ಡಿಸ್ಟರ್ಬಾಗದೇ ತಮ್ಮ ಶಿಷ್ಯರ, ಅನುಯಾಯಿಗಳ, ತಮ್ಮೊಂದಿಗಿರುವವರ ಹಾಗೂ ದರ್ಶನಾರ್ಥಿಗಳ ಸಂಕಟಗಳನ್ನು ಕಂಡು ಮರುಗಿ, ಪರಿಹರಿಸಲು ಮುಂದಾದರು. ಅವರೂ ಅವರೊಂದಿಗೆ ಸೇರಿಕೊಂಡು ‘ಗೊಳೋ’ ಎಂದು ಅಳಲು ಪಡಲಿಲ್ಲ!

ಗುರುವಿಗೆ ಓರ್ವ ಅತೃಪ್ತ ಶಿಷ್ಯನಿದ್ದ. ಯಾವುದಾದರೊಂದು ಕಾರಣದಿಂದ ಸದಾ ದುಃಖಿಯಾಗಿ ವ್ಯಥೆ ಪಡುತ್ತಿದ್ದ. ಒಂದು ದಿನ ಗುರುವಿನ ಬಳಿ ಬಂದು ಗುರುವೇ, ನಿಮ್ಮಂತೆ ಸದಾ ಹಸನ್ಮುಖತೆಯಿಂದ ಇರುವುದು ಹೇಗೆ?’ ಎಂದ. ಆಗ ಗುರುವು ಒಂದು ಮುಷ್ಟಿ ಉಪ್ಪನ್ನು ಲೋಟವೊಂದಕ್ಕೆ ಹಾಕಿ, ಕರಗಿಸಿ ಕುಡಿಯಲು ಕೊಟ್ಟರು. ನೀರು ಬಾಯಿಗೆ ಹೋಗುತ್ತಲೇ ಅಸಹ್ಯಸಿಕೊಂಡು, ವಾಂತಿ ಮಾಡಿಕೊಂಡ. ಆಗ ಗುರುವು ಆತನನ್ನು ಕೊಳದ ಬಳಿ ಕರೆದುಕೊಂಡು ಹೋಗಿ ಮುಷ್ಟಿ ಉಪ್ಪು ಸುರಿದು ‘ಇದರ ನೀರು ಕುಡಿದು ಹೇಳು’ ಎಂದರು. ಶಿಷ್ಯನು ಬೊಗಸೆಯಿಂದ ನೀರು ಕುಡಿದು ಹೇಳಿದ: ‘ಅಷ್ಟು ಉಪ್ಪೇನಿಲ್ಲ, ರುಚಿಯಾಗಿದೆ!’ ಆಗ ಗುರುಗಳು ಹೇಳಿದರು: ‘ಭ್ರಮೆ ಹರಿದು ನೋಡಿದರೆ ನಮ್ಮೆಲ್ಲರ ಜೀವನದಲ್ಲಿ ದುಃಖ ದುಗುಡಗಳ ಪ್ರಮಾಣ ಒಂದು ಮುಷ್ಟಿ ಉಪ್ಪಿನಷ್ಟೇ! ಅದನ್ನು ಅನುಭವಿಸುವಾಗ ನೀನು ಲೋಟವಾಗಬೇಡ; ಕೊಳದಷ್ಟಾಗು!! ವ್ಯಸನವನ್ನು ಭರಿಸುವ ನಿನ್ನ ಅರಿವಿನ ವ್ಯಾಪ್ತಿಯು ಕೊಳದಷ್ಟು ವಿಶಾಲವಾಗಬೇಕು. ಆಗ ಬದುಕು ಮುಷ್ಟಿಯಷ್ಟು ಉಪ್ಪು ಕರಗಿಸಿಕೊಂಡ ಕೊಳದ ನೀರಿನಂತೆ ರುಚಿಯಾಗೇ ಇರುವುದು.’

ದುಃಖ ನನ್ನಲ್ಲಿದೆಯೆಂದೂ ಲೋಕದಲ್ಲಿದೆಯೆಂದೂ ಹರಡುತ್ತಾ ಹೋಗಬಾರದು. ಒಮ್ಮೊಮ್ಮೆ ನಮ್ಮೆಲ್ಲರ ಜೀವಿತದಲ್ಲಿ ಆಕಸ್ಮಿಕವಾಗಿ ದುಃಖ ಎದುರಾಗುವುದು. ಸಂತಸವೇ ಬೇಕೆಂದು ಹಟ ಹಿಡಿದರಾಗದು. ನಮ್ಮದಲ್ಲದ ತಪ್ಪಿಗೆ ನಾವು ದುಃಖಿತರಾಗುವುದೂ ಉಂಟು. ಸಂತಸ ಮತ್ತು ದುಃಖ ಎಂಬ ಎರಡು ದಡಗಳ ನಡುವೆ ಬಾಳ್ವೆಯ ನದಿ ಹರಿಯುತ್ತದೆ. ನದಿಯಾಗಲು ಎರಡು ದಡ ಬೇಕೇ ಬೇಕು. ದಡವ ನುಂಗಿದ ನದಿಗೆ ಅಸ್ತಿತ್ವವಿಲ್ಲ; ಅರ್ಥವೂ ಇಲ್ಲ! ನಾವು ನಮ್ಮೊಂದಿಗೆ ಅಪರಿಚಿತರಾದಾಗಲೇ ಇಂಥ ದುಮ್ಮಾನಗಳು ಅಟ್ಯಾಕ್ ಮಾಡುತ್ತವೆ. ಅಂಥ ಸಂದರ್ಭದಲ್ಲಿ ಮನೋಬಲವೇ ಉತ್ತರ ಮತ್ತು ಸಮರ್ಪಕ ಅಸ್ತ್ರ. ನಮ್ಮೊಳಗೆ ಸಾಕಷ್ಟು ಪಾಸಿಟಿವ್ ಎನರ್ಜಿ ಸಂಚಿತಗೊಂಡಿರಬೇಕು. ದುಃಖವನ್ನು ತುಟಿ ಕಚ್ಚಿ ಅನುಭವಿಸಿಯಾದ ಮೇಲೆ ಖಂಡಿತ ಬಿಡುಗಡೆ ಉಂಟು. ಅಲ್ಲಿಯವರೆಗೂ ಕಾಯುವಿಕೆ ಮುಖ್ಯ. ನೋವಿಗೆ ಹೆದರಿ ಆಪರೇಷನ್ನು ಮುಂದಕ್ಕೆ ಹಾಕಿದರೆ ಆರೋಗ್ಯ ಮರಳಿ ಬಂದೀತೇ? ಸ್ವಲ್ಪ ಪ್ರಮಾಣದ ಬೇಗುದಿ ಬದುಕಿನಲ್ಲಿ ಇರಲೇಬೇಕು. ಇಲ್ಲದಿದ್ದರೆ ಅದರಲ್ಲಿ ಸ್ವಾರಸ್ಯವೇ ಇರುವುದಿಲ್ಲ. ನದಿ ಬಯಲ ಸೇರಿ ಹರಡಿಕೊಂಡು, ಶಾಂತವಾಗಿ ಹರಿಯುತ್ತಿದೆಯೆಂದರೆ ಅದು ಹಳ್ಳ ಕೊಳ್ಳ ಬೆಟ್ಟ ಗುಡ್ಡಗಳ ನಡುವೆ ರಭಸವಾಗಿ ಹರಿದು ಬಂದು, ಜಲಪಾತದಲ್ಲಿ ಬಿದ್ದೆದ್ದು ಈಗ ಅಪಾರ ಪಾರಾವಾರ ಸೇರಲು ಸನ್ನದ್ಧವಾಗಿದೆ ಎಂದೇ ಅರ್ಥ! ಮುಖದಲ್ಲಿ ಮಂದಸ್ಮಿತ ಇದೆಯೆಂದರೆ ಎಲ್ಲವನೂ ಈಗಾಗಲೇ ಅನುಭವಿಸಿ, ಏಳುಬೀಳುಗಳನ್ನು ಕಂಡು, ಅರಿವನ್ನು ಹೊಂದಿ, ವಿವೇಕದ ಆಡುಂಬೊಲದಲ್ಲಿ ಇದೀಗ ವಿಶ್ರಮಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಯಬೇಕು. ನಗೆಯ ಹಿಂದೆ ನೋವನ್ನನುಭವಿಸಿದ ಕುರುಹು ಇರುತ್ತದೆ. ಅದನ್ನು ಗುರುತಿಸಲು ಅಂಥದೇ ಇನ್ನೊಂದು ಸಹೃದಯ ಬೇಕಾಗುತ್ತದೆ. ಎಷ್ಟೇ ಶ್ರೀಮಂತರಿರಲಿ, ದುಃಖವನ್ನು ಮಾರಲಾರರು; ಸುಖವನ್ನು ಕೊಳ್ಳಲಾರರು! ನಾವು ತಿಂದದ್ದೇ ಜೀರ್ಣವಾಗಬೇಕು; ಪರರು ತಿಂದರೆ ನಮಗೆ ಹೊಟ್ಟೆ ತುಂಬುವುದೂ ಇಲ್ಲ; ಸಮಾಧಾನ ಆಗುವುದೂ ಇಲ್ಲ. ಹಾಗಾಗಿ ಅತಿ ಆಳದ ದುಃಖಕ್ಕೆ ನಮ್ಮನ್ನು ಶುದ್ಧೀಕರಿಸುವ ಗುಣವಿದೆ. ದುಃಖಪಟ್ಟು, ಅತ್ತು ಹಗುರಾದ ಮೇಲೆಯೇ ಮನಸ್ಸು ನಿರ್ಮಲವಾಗುತ್ತದೆ; ಮಳೆ ಬಿದ್ದ ನಂತರದ ತಿಳಿವಿನಾಕಾಶ ಬೆಳಗುತ್ತದೆ. ಆಗದು ಶುಭ್ರ, ನಿಚ್ಚಳ ಮತ್ತು ನಿರಾಲಂಕಾರ! ಅದಕಾಗಿಯೇ ಶೋಕ ಮತ್ತು ವೇದನೆಯ ಹಾಡುಗಳು ನಮ್ಮನ್ನು ಆವರಿಸುವಷ್ಟು, ಕಲಕುವಷ್ಟು ಸುಖದ ಗೀತಗಳು ತಟ್ಟುವುದಿಲ್ಲ! ಇಂಗ್ಲಿಷ್ ಕವಿ ಪಿ ಬಿ ಶೆಲ್ಲಿಯ ಮಾತಿದು: ‘Our sweetest songs are those that give us saddest thoughts’ ಶೋಕ ಸಂದೇಶವನ್ನು ಸಾರುವ ಗೀತೆಗಳೇ ನಮಗೆ ಅತಿ ಮಧುರ, ಹೃದಯಕ್ಕೆ ಅತಿ ಹತ್ತಿರ!

-ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

5 Responses

  1. MANJURAJ says:

    ಅನಂತ ಧನ್ಯವಾದಗಳು

  2. ಉತ್ತಮ ಲೇಖನ ಸೊಗಸಾದ ನಿರೂಪಣೆಯಲ್ಲಿ..
    ಅನಾವರಣಗೊಳಿಸಿರುವ ನಿಮಗೆ ಧನ್ಯವಾದಗಳುಮಂಜು ಸಾರ್

  3. ನಯನ ಬಜಕೂಡ್ಲು says:

    ಚೆನ್ನಾಗಿದೆ ಲೇಖನ

  4. Shivanna K says:

    Really experience truth sir

  5. ಶಂಕರಿ ಶರ್ಮ says:

    ದು:ಖವನ್ನು ಅನುಭವಿಸುವಾಗ ಲೋಟವಾಗಬೇಡ, ಕೊಳವಾಗು…ಎಂತಹ ಅರ್ಥಗರ್ಭಿತವಾದ ನುಡಿ! ಚಿಂತನ ಯೋಗ್ಯ ಬರಹ ಬಹಳ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: