ಬಹುರೂಪಿ ಗಣಪನ ಹಬ್ಬ…

Share Button

ಹಿಂದುಗಳ ಪ್ರಮುಖ ದೇವತೆಯಾದ ಗಣಪತಿಯನ್ನ ಯಾವುದೇ ಶುಭ- ಸಮಾರಂಭಗಳಲ್ಲಿ ಮೊದಲು ಪೂಜೆ ಮಾಡುತ್ತಾರೆ. ವಿಘ್ನ ನಿವಾರಕ ಗಣಪ ಎಲ್ಲವನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆ ಅಚಲವಾದದ್ದು.

“ಗಣಪ” ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾನೆ. ಗಣಪನ ಕುರಿತಾದ ಅನೇಕ ಪುರಾಣ ಕಥೆಗಳು ಇವೆ. ಒಂದೊಂದು ಕಥೆಗಳು ಒಂದೊಂದು ರೀತಿಯಲ್ಲಿ ಭಿನ್ನ. ಗಣಪನಿಗೆ ಹೆಸರು ಕೂಡ ಅನೇಕ. ಜೊತೆಗೆ ಗಣಪನ ರೂಪ ಕೂಡ “ಬಹುರೂಪ”!. ಕಲಾವಿದನ ಕಲ್ಪನೆಗೆ ತಕ್ಕಂತೆ ಅರಳುತ್ತಾನೆ. ಗಣಪ ಹಬ್ಬದ ನೆಪದಲ್ಲಿ ಎಲ್ಲರ ಮೈ-ಮನಗಳನ್ನು ಮುದಗೊಳಿಸುತ್ತಾನೆ. ಗಣಪನ ವಿಗ್ರಹ, ಪೂಜಾ ಪರಿಕರಗಳು ಎಲ್ಲವೂ ಕೂಡ ಗಗನಕ್ಕೇರಿದ ಬೆಲೆಗಳ ನಡುವೆಯೂ ಕೂಡ ಗಣಪತಿ ಹಬ್ಬ ತನ್ನತನವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ವರ್ಷದಿಂದ ವರ್ಷಕ್ಕೆ ವೈವಿಧ್ಯಮಯವಾಗಿ ಜನರು “ವಿಶ್ವವಂದಿತ ಗಣಪನನ್ನು” ಪೂಜಿಸುತ್ತಾ ಬರುತ್ತಿದ್ದಾರೆ. ಗಣಪತಿಯ ಹಬ್ಬದಂದು ಎಲ್ಲಾ ಗಣಪನ ದೇವಾಲಯಗಳು ವರ್ಣ ರಂಜಿತವಾಗಿ ಆಕರ್ಷಿಸುತ್ತವೆ. ನಮಗೆಲ್ಲಾ ಗಣಪತಿ ಹಬ್ಬ ಬಂತೆಂದರೆ ಸಾಕು ಎಲ್ಲಿಲ್ಲದ ಸಡಗರ ಸಂಭ್ರಮ. ಬನ್ನಿ ಗಣಪನನ್ನು ನೆನೆಯೋಣ….

ಶಿವನು ಆನೆಯ ತಲೆಯನ್ನು ತಲೆಯಿಲ್ಲದ ಗಣೇಶನಿಗೆ ದಯಪಾಲಿಸಿದ ಎಂಬ ದೊಡ್ಡ ಕಥೆಯೇ ಇದೆ. ಗಣೇಶನ ಕುರಿತಾಗಿ ಅನೇಕ ಪುರಾಣ ಕಥೆಗಳು ಜನಜನಿತವಾಗಿವೆ. ಗಣಪನ ಜನನದ ಬಗ್ಗೆ ಅನೇಕ ವಿಭಿನ್ನ ಕಥೆಗಳನ್ನು ಹೇಳಲಾಗುತ್ತದೆ.ಶಿವ- ಪಾರ್ವತಿ ಒಂದು ದಿನ ತನ್ನ ಇಬ್ಬರು ಮಕ್ಕಳಾದ ಗಣೇಶ ಮತ್ತು ಸುಬ್ರಹ್ಮಣ್ಯನನ್ನು ಕರೆದು ಪ್ರಪಂಚವನ್ನು ಯಾರು ಬೇಗ ಸುತ್ತಿ ಬರುತ್ತೀರಿ ಎಂದು ಒಂದು ಸ್ಪರ್ಧೆ ನಡೆಸಿದರಂತೆ. ಅದರಲ್ಲಿ ಸುಬ್ರಹ್ಮಣ್ಯ ತನ್ನ ಸಂಚಾರವನ್ನು ಬೇಗ ಪ್ರಾರಂಭಿಸಿದ. ಆದರೆ ಗಣಪತಿ ತಟಸ್ಥನಾಗಿ ಕುಳಿತು, ಸ್ವಲ್ಪ ಸಮಯದ ನಂತರ ತನ್ನ ತಂದೆ- ತಾಯಿಯನ್ನು ಸುತ್ತಿ ಕುಳಿತುಕೊಂಡ. ಸ್ಪರ್ಧೆಯಲ್ಲಿ ಗಣಪತಿಯೇ ಗೆದ್ದ!. ಇಲ್ಲಿ ತಂದೆ ತಾಯಿಯೇ ಪ್ರಪಂಚ ಎಂಬುದು ಗಣಪನ ವ್ಯಾಖ್ಯಾನ.

ಗಣೇಶನ ಹಬ್ಬಕ್ಕೆ ಮುಂಚಿತವಾಗಿ ಗೌರಿಯನ್ನು ಸರ್ವಲಂಕಾರದಲ್ಲಿ ಕುಳ್ಳಿರಿಸಿ, ಪೂಜೆಯ ನಂತರ ಬಾಗಿನ ಕೊಡುತ್ತಾರೆ. ಗೌರಿ ಮನೆ-ಮಗಳೆಂದು ಭಾವಿಸಿ, ಪ್ರತಿ ವರ್ಷವೂ ಕೂಡ ಅವಳನ್ನು ಆಹ್ವಾನಿಸಿ, ಉಡಿ ತುಂಬುವುದು ಕೂಡ ಗೌರಿ ಹಬ್ಬದ ವಿಶೇಷ. ಹಬ್ಬಕ್ಕೆ ತವರು ಮನೆಗೆ ಬಂದು ಹೆಣ್ಣುಮಕ್ಕಳು ಸಂಭ್ರಮ ಪಡುತ್ತಾರೆ. ಅದರಿಂದಾಗಿ ಗೌರಿ ಹಬ್ಬಕ್ಕೂ ಹೆಣ್ಣು ಮಕ್ಕಳಿಗೂ ಒಂದು ರೀತಿಯಲ್ಲಿ ಅವಿನಾಭಾವ ಸಂಬಂಧವಿದೆ!. ಗಣಪತಿಯ ಹಬ್ಬದಂದು ಎಲ್ಲಾ ಗಣೇಶ ದೇವಾಲಯಗಳಲ್ಲೂ ಕೂಡ ವೈಭವದ ಪೂಜೆಗಳು ನಡೆಯುತ್ತವೆ. ಅಂದು ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಭಕ್ತರ ದಂಡೆ ಗಣಪತಿ ದೇವಸ್ಥಾನದಲ್ಲಿ ಇರುತ್ತದೆ.

ಗಣೇಶನ ಹಬ್ಬದ ವೈಶಿಷ್ಟ್ಯತೆಗಳು ಒಂದೇ ಎರಡೇ ಗಣಪನ ಕುರಿತಾದ ಕಥೆಗಳು, ಗಣಪತಿಯ ಅರ್ಥ, ಅದರ ಆಚರಣೆಯ ಮಹತ್ವ ಎಲ್ಲವೂ ಕೂಡ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. “ಅವರವರ ಭಾವಕ್ಕೆ, ಅವರವರ ಭಕುತಿಗೆ” ಗಣಪ ತೆರೆದುಕೊಳ್ಳುತ್ತಾ ಹೋಗುತ್ತಾನೆ. ಸಗಣಿ, ಗರಿಕೆ ಜೊತೆ ಪೂಜೆ ಮಾಡಿದರೆ ಅಲ್ಲೇ ಗಣಪನನ್ನು ಕಾಣುತ್ತಾರೆ. ಈ ರೀತಿ ಸರಳ ಪೂಜೆಯಿಂದ ಮೊದಲುಗೊಂಡು ಮಣ್ಣಿನಲ್ಲಿ ಮಾಡಿದ ಗಣಪ, ನಂತರ ವಿವಿಧ ಲೋಹಗಳಿಂದಲೂ ಕೂಡಿದ ಗಣಪತಿಯ ಪೂಜೆ ನಡೆಯುತ್ತದೆ. ಅದರಲ್ಲೂ ಪುರಾಣ ಪ್ರಸಿದ್ಧ ಕಲ್ಲಿನ ಗಣಪನ ದೇವಾಲಯಗಳು ಕೂಡ ಇವೆ.

ಶತಮಾನಗಳಿಂದಲೂ ಕೂಡ ಗಣಪನ ದೇವಾಲಯಕ್ಕೆ ಬಹಳ ಪ್ರಾಮುಖ್ಯತೆ ಇತ್ತು. ಅನೇಕ ರಾಜರುಗಳ ಕಾಲದಲ್ಲಿ ಗಣಪನ ದೇವಾಲಯಕ್ಕೆ ಹೆಚ್ಚು ಆದ್ಯತೆ ಕೊಟ್ಟು ಗಣಪತಿಯ ಸುಂದರ ವಿಗ್ರಹಗಳ ಕೆತ್ತನೆ ಕೆಲಸವೂ ಕೂಡ ಬಹಳ ಹಿಂದೆಯೇ ನಡೆದಿದೆ. ಇದರಿಂದಾಗಿ ಗಣಪ ತನ್ನ ಜೊತೆ ಇತಿಹಾಸವನ್ನು ಹೊಂದಿದ್ದಾನೆ. ಗಣಪನಿಗಾಗಿ ಅನೇಕ ಕ್ಷೇತ್ರಗಳು ಇವೆ. ಇಡಗಂಜಿ ಗಣಪ, ಸೌತಡ್ಕ ಗಣಪ, ಗೋಕರ್ಣ ಗಣಪ, ಹೀಗೆ ಒಂದೇ ಎರಡೇ?.

ಇನ್ನೊಂದು ವಿಷಯವೆಂದರೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರಿನ ಅರಮನೆಗೆ ಬೆಂಕಿ ಬಿದ್ದಾಗ ಬಹುತೇಕ ಬೆಂಕಿಗೆ ಅರಮನೆ ಆವತಿಯಾಯಿತು. ಆದರೆ ಅಲ್ಲಿದ್ದ “ಆತ್ಮವಿಲಾಸ ಗಣಪನಿಗೆ” ಸ್ವಲ್ಪವೂ ಕೂಡ ಹಾನಿಯಾಗಲಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಈ ಪ್ರಸಿದ್ಧ ಗಣಪತಿಯ ವಿಗ್ರಹ ಅವತ್ತಿನಿಂದ ಇವತ್ತಿನವರೆಗೂ ಕೂಡ ಅರಮನೆಯಲ್ಲಿ ನಾವು ಕಾಣಬಹುದು. ದಿನಾಲು ಪೂಜೆ ನಡೆಯುತ್ತದೆ.

ಬ್ರಿಟಿಷರ ಕಾಲದಿಂದಲೂ ಕೂಡ ಮಣ್ಣಿನ ಗಣೇಶನ ಮೂರ್ತಿಗೆ ಆದ್ಯತೆ ಇದೆ. ಹಂಪೆಯ ಸಾಸಿವೆ ಕಾಳು ಗಣಪ, ಮೈಸೂರಿನ ಅಗ್ರಹಾರದಲ್ಲಿರುವ ನೂರೊಂದು ಗಣಪ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜಡೆ ಹೊಂದಿರುವ ಗಣಪ. ಹೀಗೆ ಗಣಪನ ಮಹತ್ವದ ಜೊತೆಗೆ ಇತಿಹಾಸ ಸಾರುವ ರಾಜ್ಯ ಅಲ್ಲದೆ ಹೊರರಾಜ್ಯ, ವಿದೇಶಗಳಲ್ಲೂ ಕೂಡ ಗಣಪತಿಯ ದೇವಸ್ಥಾನಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ.

ಗಣಪತಿಯ ಬಗ್ಗೆ ನಾವು ಬರೆಯುತ್ತ ಹೋದರೆ ಅದೊಂದು ರೀತಿಯಲ್ಲಿ ಮುಗಿಯದ ಕಥಾವಿಹಾರವಾಗುತ್ತದೆ! ಗಣಪತಿಯ ಪರಿಕಲ್ಪನೆ ಜೊತೆಗೆ ಸಾಂಸ್ಕೃತಿಕ ಚಿಂತನೆ ಬಹಳ ಮಹತ್ವಪೂರ್ಣವಾದದ್ದು. ವೇದ- ಉಪನಿಷತ್ತು ಅಲ್ಲದೆ ಪುರಾಣ ಕಥನಗಳಲ್ಲಿ ಜೈನ, ಬೌದ್ಧ ಸಂಪ್ರದಾಯಗಳಲ್ಲಿ ವಿವಿಧ ಗ್ರಂಥಗಳಲ್ಲಿ ಗಣಪತಿಯ ಕುರಿತಾಗಿ ಅನೇಕ ಉಲ್ಲೇಖ ಇವೆ…. ವಿವರಗಳು ಇವೆ…. ಶ್ಲೋಕಗಳು ಇವೆ. ವಿವಿಧತೆಯಲ್ಲಿ ಏಕತೆಯ ಭಾವವನ್ನು ನಮ್ಮ ಗಣಪತಿ ಸಾರುತ್ತಾನೆ. ಗಣಪತಿಗೆ ಯಾವ ದೇವರಲ್ಲೂ ಇರದ ಒಂದು ರೀತಿಯ “ಪ್ರೇರಕ ಶಕ್ತಿ” ಇದೆ ಎನ್ನುವುದು ನಂಬಿಕೆ. ಅದರಿಂದಾಗಿ ನಾನು ಮೊದಲೇ ಹೇಳಿದಂತೆ ಗಣಪತಿ ಪ್ರಥಮ ಪೂಜಿತ ದೇವತೆ. ನಮ್ಮ ಭಾರತದ ಸಂಸ್ಕೃತಿಯ ಪ್ರತೀಕವೂ ಕೂಡ ಗಣಪ. ಭಕ್ತಿ- ಭಾವ ಮೂಡಿಸುವ ಗಣಪನ ಇತಿಹಾಸ ಸಾರ್ವಜನಿಕ ಆಚರಣೆಯಲ್ಲಿ ಬಹಳ ಮಹತ್ವ ಪಡೆಯುತ್ತದೆ. ಮುಂದುವರೆದು ನಮ್ಮ ಭಾರತೀಯ ಧರ್ಮ ಮತ್ತು ಸಂಸ್ಕೃತಿಯಲ್ಲಿ ಗಣಪತಿಗೆ ಮಹತ್ವದ ಸ್ಥಾನವಿದೆ. ವಿಘ್ನ ನಾಶಕನಾಗಿ….. ಗಣನಾಯಕನಾಗಿ….. ಎಲ್ಲರ ಗಮನ ಸೆಳೆಯುತ್ತಾನೆ. ದೇವಾದಿ ದೇವರುಗಳೊಡನೆ ಗಣಪತಿ ಉತ್ತಮ ಸಂಬಂಧ ಉಳ್ಳವನು. ಉಪನಿಷತ್ತುಗಳಲ್ಲಿ ವಿನಾಯಕನು….. ಗಣೇಶ, ಗಣಪತಿ, ಮಹಾಗಣಪತಿ, ಏಕದಂತ, ದಂತಿ, ವಕ್ರತುಂಡ, ಲಂಬೋದರ, ಶಿವಸುತ…… ಹೀಗೆ ಉದ್ದನೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇವುಗಳೆಲ್ಲದರ ನಡುವೆ ವೇದ ಕಾಲದಿಂದಲೂ ಕೂಡ ಗಣಪತಿಯ ಈ ರೀತಿಯ ಒಂದು ಆರಾಧನೆ ದಿನದಿಂದ ದಿನಕ್ಕೆ ವೃದ್ಧಿಗೊಂಡಿತು. ನಮ್ಮ ರಾಷ್ಟ್ರದ ಹಿತಕ್ಕಾಗಿ ಜನರನ್ನು ಒಗ್ಗೂಡಿಸುವದಕ್ಕಾಗಿ ಒಂದು ಉತ್ಸವವಾಗಿ ಮಾರ್ಪಾಡಿಸಿದ ಕೀರ್ತಿ ಖ್ಯಾತ ರಾಷ್ಟ್ರೀಯವಾದಿ ಬಾಲಗಂಗಾಧರ ತಿಲಕರಿಗೆ ಸಲ್ಲುತ್ತದೆ. ಇವರು ಗಣಪನ ಉತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಕರೆ ನೀಡಿದರು. ಮರಾಠಿ ಮನೆತನದಿಂದ ಬಂದಿದ್ದ ತಿಲಕರಿಗೆ ಗಣಪತಿ ಪೂಜೆಯ ಮಹತ್ವದ ಅರಿವಿತ್ತು. ಭಾರತೀಯರಿಗೆ ಗಣಪತಿ ಮುಖ್ಯ, ಆರಾಧ್ಯ ದೈವ ಎಂದು ತಿಳಿದಿತ್ತು. ಅದರಿಂದಾಗಿ ನಮ್ಮ ದೇಶದ ಜನರಲ್ಲಿ ತಿಲಕರು ಗಣಪನ ರೂಪದಲ್ಲಿ ಭಕ್ತಿ- ಭಾವ ತುಂಬಿದರು. ಕೇವಲ ಮನೆಗಳಿಗೆ ಸೀಮಿತವಾಗಿದ್ದ ಗಣಪನ ಪೂಜೆ ಸಾರ್ವಜನಿಕ ಉತ್ಸವವಾಗಿ ಮಾರ್ಪಡಿಸಲು ಪಣತೊಟ್ಟರು. ಪ್ರತಿ ಊರು-ಕೇರಿಗಳಲ್ಲಿ ಗಣಪತಿಯ ಪೂಜೆಯನ್ನು ಸಾರ್ವಜನಿಕ ಉತ್ಸವವಾಗಿ ಆಚರಿಸುವಂತೆ ಜನರಿಗೆ ಪ್ರೇರಣೆ ನೀಡಿದರು.

ಸಾರ್ವಜನಿಕ ಗಣಪತಿಯು ಈ ರೀತಿಯ ಉತ್ಸವವಾಗಿ ಗಣಪನ ಆಚರಣೆ ಮಹತ್ವ ಪಡೆಯಿತು. ನಮ್ಮ ದೇಶದ ಸ್ವಾತಂತ್ರ್ಯ ಪಡೆಯಲು ಕೂಡ ಇದು ಮುಖ್ಯ ವೇದಿಕೆಯಾಯಿತು. ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ, ಪಾಂಡಿಚೇರಿ, ಕರ್ನಾಟಕ, ಕೇರಳ, ತಮಿಳುನಾಡು, ಉತ್ತರ ಭಾರತ ಈ ಎಲ್ಲಾ ಕಡೆ ಗಣಪನ ಬಹಳ ಪ್ರಮುಖ ದೇವಾಲಯಗಳು ಮಹತ್ವದ ಸ್ಥಾನ ಪಡೆದು, ಎಲ್ಲರಲ್ಲೂ ಕೂಡ ಭಕ್ತಿ- ಭಾವ ಮೂಡಿಸುವುದರ ಜೊತೆಗೆ ತನ್ನದೇ ಆದ ರೀತಿಯ ಇತಿಹಾಸ ಹೊಂದಿವೆ. ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುವುದನ್ನು ನಾವು ಕಾಣಬಹುದು. ಆದರೆ ಈಗ ಕಾಲ ಬದಲಾದಂತೆ ಹಲವರು ಒಂದೇ ದಿನಕ್ಕೆ ಗಣಪತಿಯನ್ನು ವಿಸರ್ಜನೆ ಮಾಡುತ್ತಾರೆ. ಅವರ ಅನುಕೂಲಕ್ಕೆ ತಕ್ಕಂತೆ ಮೂರು ದಿನ, ಐದು ದಿನ, ಏಳು ದಿನ, ಒಂಬತ್ತು ದಿನ, ಹನ್ನೊಂದು ದಿನ ಗಳವರೆಗೂ ಕೂಡ ಪೂಜಿಸುವವರು ಇದ್ದಾರೆ.

ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಅತ್ಯಂತ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಕರಾವಳಿ ಪ್ರದೇಶದಲ್ಲಿ ತನ್ನದೇ ಆದ ಪರಂಪರೆ ಹೊಂದಿದೆ. ಇಲ್ಲಿ ಡೊಳ್ಳು ಕುಣಿತ, ಹುಲಿವೇಷ, ಯಕ್ಷಗಾನ ಮುಂತಾದವು ಇಲ್ಲಿನ ಗಣೇಶೋತ್ಸವಕ್ಕೆ ಮೆರಗು ತರುತ್ತದೆ. ಕುಂದಾಪುರ, ಶಿರೂರು, ಮಂಗಳೂರು, ಉಡುಪಿ ಮುಂತಾದ ಕಡೆಯಲ್ಲಿ ಸುಂದರವಾದ ಸಂಭ್ರಮದ ಗಣೇಶ ಚತುರ್ಥಿ ನಡೆಯುತ್ತದೆ.

ಇತಿಹಾಸದ ಪುಟಗಳಿಂದ ಹಿಡಿದು ಇವತ್ತಿನವರೆಗೂ ಕೂಡ ಗಣಪ ಬಹುರೂಪ. ಶಿಲ್ಪಿಗಳ, ಕಲಾವಿದರ ಕಲ್ಪನೆಯಲ್ಲಿ ಗಣಪ ವಿವಿಧ ರೂಪ ಪ್ರಚಲಿತ ವಿಷಯಗಳಿಗೆ ಸಂಬಂಧಿಸಿದಂತೆ ನಮಗೆ ದರ್ಶನ ನೀಡುತ್ತಿದ್ದಾನೆ. ನಿಜಕ್ಕೂ ಇಂತಹ ಸಂದರ್ಭದಲ್ಲಿ ಕಲಾವಿದರ ಕೈಚಳಕ ಮೆಚ್ಚುವಂತದ್ದು. ಗೌರಿ- ಗಣೇಶ ವಿಗ್ರಹಗಳನ್ನು ಬೇಡಿಕೆಗಾಧಾರವಾಗಿ ಮಾಡುತ್ತಿದ್ದಾರೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿಯ ಮೂರ್ತಿಗಳ ಆಕಾರಗಳು ವಿಭಿನ್ನವಾಗಿರುತ್ತದೆ. ಒಬ್ಬರಿಗಿಂತ ಒಬ್ಬರು ಸ್ಪರ್ಧಾ ಮನೋಭಾವದಿಂದ ಗಣಪತಿಯ ವಿಗ್ರಹಗಳನ್ನು ಖರೀದಿಸಿ ಪೂಜಿಸುತ್ತಾರೆ. ಮನೆಗಳಲ್ಲಿ ಮಾತ್ರ ಚಿಕ್ಕ ಗಣಪತಿ ಮೂರ್ತಿಗಳನ್ನು ಪೂಜಿಸುತ್ತಾರೆ. ಹಲವು ಕಡೆ ಪತ್ರಿಕೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗಣಪತಿಗೆ ಸಂಬಂಧಿಸಿದಂತೆ ಅನೇಕ ಮಾಹಿತಿಗಳು ಪ್ರದರ್ಶನ ಕೂಡ ಇರುತ್ತದೆ.

ಇನ್ನೂ ಒಂದು ವಿಷಯ ಎಂದರೆ ಈ ಗಣಪತಿ ಹಬ್ಬ ಜೀವನಕ್ಕೆ ಆಧಾರವಾಗಿದೆ. ಹಬ್ಬದ ನೆಪದಲ್ಲಿ ಅವರ ಜೀವನ ಸಾಗುತ್ತದೆ. ಗಣಪತಿ ಹಬ್ಬ ಬಂತೆಂದರೆ ಸಾಕು ನಮಗೆ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತದೆ. “ಗಣೇಶ ಬಂದ, ಕಾಯಿ ಕಡಬು ತಿಂದ, ಚಿಕ್ಕೆರೇಲಿ ಬಿದ್ದ, ದೊಡ್ಡ ಕೇರೇಲಿ ಎದ್ದ…”- ಎನ್ನುವ ಈ ಹಾಡು ಸರ್ವೇಸಾಮಾನ್ಯವಾಗಿತ್ತು. ಊರ ತುಂಬಾ ಮೈಕಾಸುರನಾವಳಿ….. ಹಾಡಿಗೆ ತಕ್ಕ ಕುಣಿತ. ದೊಡ್ಡವರು ಮಹಿಳೆಯರು ಒಂದು ತಿಂಗಳಿಗೆ ಮುಂಚಿತವಾಗಿಯೇ ಸಡಗರ ಸಂಭ್ರಮದಿಂದ ಎಲ್ಲವನ್ನು ಶುಚಿಗೊಳಿಸುತ್ತಾ ಹೋಗುತ್ತಾರೆ. ನಮಗೆ ಹೊಸ ಬಟ್ಟೆ. ಜೊತೆಗೆ ನಮ್ಮ ಬಾಲ್ಯದಲ್ಲಿ ನಾವು ಕೂಡ ಗಣಪತಿಯ ಹಬ್ಬಕ್ಕಾಗಿ ಚಂದಾ ವಸೂಲಿ ಮಾಡುತ್ತಿದ್ದೆವು. ಬಂದ ಹಣದಿಂದ ಆರ್ಥಿಕವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಗ್ರಹಗಳನ್ನು ಖರೀದಿ ಮಾಡಿ, ಜೊತೆಗೇ ತೆಂಗಿನ ಗರಿ, ಮಾವಿನ ಸೊಪ್ಪು, ಬಟ್ಟೆ, ಇವೆಲ್ಲದರ ಮೂಲಕ ಒಂದು ಸುಂದರ ಚಪ್ಪರವನ್ನು ಕಟ್ಟಿ, ಅದರ ಸುತ್ತ ಬಣ್ಣ ಬಣ್ಣದ ಪೇಪರ್ ಕಟಿಂಗ್ಗಳನ್ನು ಅಂಟಿಸಿ, ವರ್ಣ ರಂಜಿತ ವಿದ್ಯುತ್ತಿನ ಸೀರಿಯಲ್ ಹಾಕಿ, ಆ ಸಣ್ಣ ಮಂಟಪದ ಎದುರು ಸಗಣಿಯಿಂದ ಸಾರಿಸಿ, ರಂಗವಲ್ಲಿ ಹಾಕಿ, ನಮ್ಮ ಸುತ್ತಮುತ್ತ ಸಿಗುತ್ತಿದ್ದ ಬಗೆ ಬಗೆಯ ಹೂಗಳಿಂದ ಅಲಂಕರಿಸುತ್ತಿದ್ದೆವು. ಎಲ್ಲರೂ ಕುಳಿತುಕೊಳ್ಳಲು ವಿಶಾಲವಾದ ಜಾಗ ಮಾಡುತ್ತಿದ್ದೆವು. ಗಣಪತಿಯ ವಿಗ್ರಹದ ಮುಂದೆ ಬಗೆ ಬಗೆಯ ಹಣ್ಣು ಹಂಪಲಗಳು…. ತಿಂಡಿ ತಿನಿಸುಗಳು…. ಇದ್ದವು ಜೊತೆಗೆ ಲಕ್ಕಿ ಡಿಪ್, ಬಂಪರ್ ಬಹುಮಾನ ಯೋಜನೆ ಕೂಡ ಇತ್ತು. ಅದೃಷ್ಟವಂತರಿಗೆ ಆಕರ್ಷಕ ಬಹುಮಾನಗಳು ಸಿಗುತ್ತಿದ್ದವು. ಬೆಳಿಗ್ಗೆ, ಸಂಜೆ ಪ್ರಸಾದ ವಿತರಣೆಯಾಗುತ್ತಿತ್ತು. ಸಂಜೆ ಆರ್ಕೆಸ್ಟ್ರಾ ಕಾರ್ಯಕ್ರಮಗಳು ಇದ್ದೇ ಇರುತ್ತಿತ್ತು. ಹಾಡುಗಳು…. ನೃತ್ಯಗಳು…. ಹಾಸ್ಯ ಸನ್ನಿವೇಶಗಳು…. ಎಲ್ಲವೂ ನಡೆಯುತ್ತಿತ್ತು. ಎಲ್ಲಾ ಜನಾಂಗದವರು ಒಂದೆಡೆ ಸೇರಿ ಕಾರ್ಯಕ್ರಮವನ್ನು ಸವಿದು ನಂತರ ನಿದ್ರಿಸುತ್ತಿದ್ದೆವು. ಅದರಲ್ಲೂ ಗಣಪತಿ ವಿಸರ್ಜನೆ ಸಮಯದಲ್ಲಿ ಊರಿನ ಎಲ್ಲಾ ಬೀದಿಗಳಲ್ಲೂ ಕೂಡ ವಿವಿಧ ಜಾನಪದ ನೃತ್ಯಗಳೊಂದಿಗೆ, ಮೆರವಣಿಗೆ ಮಾಡಿ ನಂತರ ತಮ್ಮ ತಮ್ಮ ಊರಿನ ಪಕ್ಕದಲ್ಲಿರುವ ಕಾಲುವೆ ಅಥವಾ ನದಿಗಳಿಗೆ ಹೋಗುತ್ತಿದ್ದ ದಿನಗಳು ಸುವರ್ಣ ಕ್ಷಣಗಳಾಗಿವೆ.

ಕಡಿಮೆ ಹಣದಲ್ಲಿ ಹೆಚ್ಚಿನ ಸಂಭ್ರಮ ನಮಗೆ ಸಿಗುತ್ತಿತ್ತು. ಈಗ ಹಣದ ಕೊರತೆ ಇಲ್ಲ! ಆದರೂ ಕೂಡ ಹಬ್ಬಗಳ ಆಚರಣೆಯಲ್ಲಿ ಏನೋ ಒಂದು ರೀತಿಯಲ್ಲಿ ಲವಲವಿಕೆ ಕಾಣುತ್ತಿಲ್ಲ!. ಜೊತೆಗೆ ಇವತ್ತಿನ ಯಾಂತ್ರಿಕ ಯುಗದಲ್ಲಿ ಏನೋ ಹಬ್ಬ ಮಾಡಿ ಮುಗಿಸಿದರಾಯಿತು ಎನ್ನುವ ಮನೋಭಾವ ಎಲ್ಲರಲ್ಲೂ ಮೂಡುತ್ತಿದೆ!. ಒಟ್ಟು ಕುಟುಂಬಗಳು ಕಾಣೆಯಾಗಿವೆ!. ಜೊತೆಗೆ ಒಂದೇ ಕಡೆ ಕೂರಿಸುತ್ತಿದ್ದ ಗಣಪತಿ ಈಗ ಬೀದಿ ಬೀದಿಗೆ ಎರಡು ಮೂರು ಆಗಿವೆ!. ಇದರಿಂದಾಗಿ ಕೆಲವು ಕಡೆ ಗಲಾಟೆಯು ನಡೆಯುತ್ತಿದೆ. ಒಂದು ರೀತಿಯಲ್ಲಿ ಗಣಪತಿಯನ್ನು ಕೂರಿಸುವುದರಲ್ಲೂ ಕೂಡ ಪೈಪೋಟಿ.

ಚಲನಚಿತ್ರಗಳಲ್ಲೂ ಕೂಡ ಗಣಪತಿ ಕುರಿತಾದ ಅನೇಕ ಹಾಡುಗಳು ಇವೆ. “ಓಂಕಾರ ಗಣಪತಿಯೇ ಕೋಟಿ ವಂದನೆ…”, “ನೀ ನಮ್ಮ ಗೆಲುವಾಗಿ ಬಾ…”, “ಗಣೇಶ ನಿನ್ನ ಮಹಿಮೆ ಅಪಾರ….”, “ನಿನ್ನನ್ನೇ ನಂಬಿರುವೆ ಗಣಪತಿಯೇ…”, ಮಹಾ ಗಣಪತಿ…”, ಹೀಗೆ ಹಳೆಯ ಹಾಗೂ ಹೊಸ ಚಿತ್ರಗೀತೆಗಳ ಕಾರ್ಯಕ್ರಮಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಲ್ಲದೆ ಗಣಪನ ಕುರಿತಾದ ವಿವಿಧ ಗಾಯಕರುಗಳು ಹಾಡಿದ ಭಕ್ತಿ- ಗೀತೆಗಳು ನೂರಾರು ಇವೆ. ಈಗ ಗಣಪತಿ ಹಬ್ಬದ ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾ ಇದ್ದೇ ಇರುತ್ತದೆ. ಇದರ ಜೊತೆ ಈಗ ಸಂಗೀತ ಕಾರ್ಯಕ್ರಮಗಳು, ವೈವಿಧ್ಯಮ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತವೆ. ಅನೇಕ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಣೆ ಕೂಡ ನಡೆಯುತ್ತದೆ. ಜೊತೆಗೆ ಕಾರ್ಯಕ್ರಮಕ್ಕೆ ಹಲವು ಗಣ್ಯರು ಭಾಗಿಯಾಗುತ್ತಾರೆ.

ಹಿಂದೆ ಜೇಡಿಮಣ್ಣಿನಿಂದ ತಯಾರಿಸಿದ ಗಣಪತಿಯ ಮೂರ್ತಿಗಳನ್ನು ಎಲ್ಲರೂ ಪ್ರತಿಷ್ಠಾಪಿಸುತ್ತಿದ್ದೆವು. ಆದರೆ ಈಗ ಕಾಲ ಬದಲಾಗದಂತೆ ತಂತ್ರಜ್ಞಾನ ಬಳಸಿ ವಿಷ ರಾಸಾಯನಿಕ ಪದಾರ್ಥಗಳನ್ನು ಬಳಸಿ ಗಣಪತಿ ಮೂರ್ತಿಯನ್ನು ತಯಾರಿಸುವುದು ಶುರುವಾಗಿದೆ. ಅದು ಈಗ ಅತಿರೇಕಕ್ಕೆ ಹೋಗಿ ಗಣಪತಿಯ ವಿಸರ್ಜನೆಯ ನಂತರ ಪರಿಸರ ಮಾಲಿನ್ಯವಾಗುತ್ತಿದೆ. ದೊಡ್ಡ ದೊಡ್ಡ ವಿಗ್ರಹಗಳಿಗೆ ಕಬ್ಬಿಣದ ಸರಳುಗಳನ್ನು ಕೂಡ ಬಳಸುವುದರಿಂದ ಕೆರೆ-ಕಟ್ಟೆಗಳ ತುಂಬಾ ಹಬ್ಬವಾದ ನಂತರ ಮಾಲಿನ್ಯ ಉಂಟಾಗುತ್ತಿದೆ. ಇದನ್ನು ಮನಗಂಡ ನಮ್ಮ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿದೆ. ಪರಿಸರಕ್ಕೆ ಪೂರಕವಾಗುವ ರೀತಿಯಲ್ಲಿ ಗಣಪತಿಯ ವಿಗ್ರಹಗಳನ್ನು ತಯಾರಿಸುವಲ್ಲಿ ಕ್ರಮ ವಹಿಸುತ್ತಿದೆ. ಗಣಪತಿಯ ವಿಸರ್ಜನೆಯ ಸಮಯದಲ್ಲಿ ಎಲ್ಲೆಂದರಲ್ಲಿ ವಿಸರ್ಜಿಸದೆ, ನಿಗದಿತ ಸ್ಥಳದಲ್ಲಿ, ಗ್ರಾಮ ಪಂಚಾಯಿತಿಯಿಂದ ಹಿಡಿದು ನಗರ ಪ್ರದೇಶದವರೆಗೂ ಕೂಡ ನಿಗದಿತ ಸಮಯದಲ್ಲಿ ಒಂದೆಡೆ ವಿಸರ್ಜಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ “ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ” ಬಹು ಮುಖ್ಯ ಪಾತ್ರ ವಹಿಸುತ್ತಿದೆ. ಜೊತೆಗೆ ಸ್ಥಳೀಯ ಸಂಸ್ಥೆಗಳು ಕೂಡ ಪರಿಸರಕ್ಕೆ ಪೂರಕವಾಗುವ ರೀತಿಯಲ್ಲಿ ಕ್ರಮ ವಹಿಸುತ್ತಿದ್ದಾರೆ.

ಹಬ್ಬಗಳು ನಮ್ಮ ಸಂಸ್ಕೃತಿಗೆ ಪೂರಕವಾಗಿರುತ್ತವೆ. ಆದುದರಿಂದ ನಾವು ಪ್ರತಿಯೊಂದು ಹಬ್ಬಗಳ ಮಹತ್ವವನ್ನು ಅರಿಯೋಣ. ಅದರಲ್ಲೂ ಗಣಪತಿ ಹಬ್ಬದ ಸಂದರ್ಭದಲ್ಲಿ ನಾವು ಯಾರಿಗೂ ಕೂಡ ತೊಂದರೆ ನೀಡದೆ ನಮ್ಮ ಹಣಕಾಸಿಗೆ ತಕ್ಕಂತೆ ಗಣಪತಿಯನ್ನು ಪರಿಸರಕ್ಕೆ ಪೂರಕವಾಗುವಂತಹ ವಿಗ್ರಹಗಳನ್ನು ಕೂರಿಸಿ, ವಾಯುಮಾಲಿನ್ಯ…. ಶಬ್ದ ಮಾಲಿನ್ಯ…. ಪರಿಸರ ಮಾಲಿನ್ಯ….. ಮಾಡದೆ ಪರಿಸರಕ್ಕೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ. ರಾಷ್ಟ್ರೀಯ ಭಾವೈಕ್ಯತೆ ಸಾರುವ ಗಣಪತಿ ಹಬ್ಬ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ. ಎಲ್ಲರೂ ಕೂಡ ಸಡಗರ ಸಂಭ್ರಮದಿಂದ ಆಚರಿಸಿ ನಮ್ಮ ಮುಂದಿನ ಪೀಳಿಗೆಗೂ ಕೂಡ ಹಬ್ಬದ ಮಹತ್ವವನ್ನು ಸಾರೋಣ.

ಎಲ್ಲರಿಗೂ “ಗೌರಿ- ಗಣೇಶ” ಹಬ್ಬದ ಹಾರ್ದಿಕ ಶುಭಾಶಯಗಳು.

-ಕಾಳಿಹುಂಡಿ ಶಿವಕುಮಾರ್, ಮೈಸೂರು.

9 Responses

  1. ಮೊದಲನೆಯದಾಗಿ ನಿಮಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಸಾರ್…ಎರಡನೆಯದಾಗಿ ಗಣೇಶ ನ ಬಗ್ಗೆ ಮಾಹಿತಿಯುಳ್ಳ ಲೇಖನ ಚೆನ್ನಾಗಿದೆ… ಸಾರ್ ಧನ್ಯವಾದಗಳು

  2. ಶಂಕರಿ ಶರ್ಮ says:

    ಪ್ರಸ್ತುತ ಸಮಾಜದಲ್ಲಿ ನಡೆಯುವ ಸಾರ್ವಜನಿಕ ಗಣೇಶ ಹಬ್ಬದ ಆಚರಣೆಯ ಕುರಿತು ಮಾಹಿತಿ ಹೊತ್ತ ಸಕಾಲಿಕ ಲೇಖನ ಚೆನ್ನಾಗಿದೆ.

  3. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಬರಹ

  4. ಮೂರ್ತಿ, ಮೈಸೂರು says:

    ಪ್ರಚಲಿತ ವಿದ್ಯಾಮಾನಗಳಿಗೆ ಸೂಕ್ತ ಲೇಖನ,
    ನಿಮ್ಮ ಉತ್ತಮವಾದ ಸಾಮಾಜಿಕ ಕಳಕಳಿಯ ಲೇಖನಗಳು ಸದಾ ಜಾಗೃತಿ ಮೂಡಿಸುವ ನಿಮ್ಮ ನಿಷ್ಕಲ್ಮಶತೆಗೆ ವಂದನೆಗಳು ಅಭಿನಂದನೆಗಳು.
    ಪರಿಸರ ಪೂರಕ ಗಣಪನು ನಿಮ್ಮ ಅರೋಗ್ಯ ಹಾಗೂ ನೆಮ್ಮದಿಯನ್ನು ಕಾಪಾಡಲಿ.

  5. Prabhu says:

    ಶಿವಕುಮಾರ್ ಸರ್ ತಾವು ವಿದ್ಯಾಧಿ ದೇವತೆ ವಿಘ್ನ ವಿನಾಶಕ ಗಣಪ ನ ಮೇಲಿರುವ ಶ್ರದ್ದೆ ಭಕ್ತಿ ಗೆ ನನ್ನ ಅನಂತಾನಂತ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: