ತಿಳಿಸಾರೆಂಬ ದೇವಾಮೃತ
ಏನು ತಿಂದರೂ ತಿಂದಿದ್ದನ್ನು ಕುರಿತು ಬರೆದರೂ ನನಗೆ ಸಮಾಧಾನವಾಗದೇ ಇದ್ದಾಗ ಯಾಕೆಂದು ನನ್ನನೇ ಕೇಳಿಕೊಳ್ಳುತಿದ್ದೆ: ಅಂದು ಭಾನುವಾರ. ಮಧ್ಯಾಹ್ನಕೆ ಏನು ಬೇಕೆಂದು ಮಡದಿ ಕೇಳಿದಾಗ ‘ಸಿಂಪಲ್ಲಾಗಿ ಏನಾದರೂ ಮಾಡಮ್ಮ ಸಾಕು’ ಎಂದಿದ್ದೆ. ನನ್ನ ಮೆನುವಿನ ಪರಿಧಿ ಪುಟ್ಟದು. ವೈವಿಧ್ಯಕಿಂತ ಗುಣಾಧಿಕ್ಯಕೆ ಮನ್ನಣೆ ನೀಡುವವ. ಯಾವುದೇ ಹೊಸರುಚಿಯನ್ನು ಸಿದ್ಧಪಡಿಸುವ ಮತ್ತು ಅದನ್ನು ತಿನ್ನುವ ಪೈಕಿ ನಾನಲ್ಲ. ತಿನ್ನುವುದು ಸ್ವಲ್ಪವೇ ಆದರೂ ಪರ್ಟಿಕ್ಯುಲರು. ಅದು ಅನ್ನ ಮೊಸರೇ ಆಗಿರಲಿ, ಬಿಸಿಯನ್ನಕೆ ಗಟ್ಟಿ ಮೊಸರು, ಮೇಲೆ ಒಗ್ಗರಣೆ. ನಂಚಿಕೊಳ್ಳಲು ಚಟ್ನಿಪುಡಿ ಅಥವಾ ಖಾರ ಮತ್ತು ಎಣ್ಣೆ ಕಡಮೆ ಇರುವ ತರಕಾರಿ ಪಲ್ಯ ಅಥವಾ ಬಾಯಲಿ ನೀರೂರಿಸುವ ಗೊಜ್ಜು, ಹೀಗೆ.
‘ಹಳೆಯ ಮೆನು ಬೇಸರವೇ ಆಗದೇ ಇದ್ದಾಗ ಹೊಸ ಮೆನುವೇಕೆ?’ ಎಂಬ ತರ್ಕದವ ನಾನು. ಹಾಗಾಗಿ ನಾನು ತಿನ್ನುವ ಮತ್ತು ನನಗಿಷ್ಟವಾಗುವ ಕೆಲವೇ ಸಸ್ಯಾಹಾರೀ (ಶುದ್ಧ) ಮೆನುಗಳು ನನ್ನ ಮಿತ್ರರು. ಜಗತ್ತು ಏನಾದರೂ ತಿನ್ನಲಿ, ಹೇಗಾದರೂ ತಿನ್ನಲಿ, ನನಗಿಷ್ಟು ಸಾಕು ಎಂದು ಎಂದೋ ಡಿಸೈಡಿಸಿ, ಸೈಡಿನಲ್ಲಿರುವವ. ಈ ಊಟ, ತಿಂಡಿಗಳಿಂದಾಗಿಯೇ ನನಗೆ ಹಲವು ತೆರನಾದ ಸ್ವದೇಶೀ ಪ್ರವಾಸಗಳ ಆಫರು ಮತ್ತು ವಿದೇಶಕೆ ಹೋಗಬಹುದಾದ ವಿಮಾನದ ಹಾರು- ಇವು ಎದುರಾದರೂ ಅಲ್ಲಾಡದೇ ನಾನಿರುವೆಡೆಯಲ್ಲೇ ಸುಖ ನೆಮ್ಮದಿಯಲ್ಲಿರುವವ. ಪ್ರವಾಸ ನನಗೆ ನಿಜಕೂ ಪ್ರಯಾಸ! ಒಂದು ತಿಂಡಿ, ಎರಡು ಊಟ ಕೊಟ್ಟರೆ ನಾನಿರುವ ಮನೆಯಲ್ಲೇ ತಿಂಗಳುಗಟ್ಟಲೆ ಒಳಗೇ ಬಂಧಿಯಾಗಿ ಜೀವಿಸಬಹುದಾದ ಕಲೆಯನ್ನು ಕಲಿತವ. ಹಾಗಾಗಿ ಸರಳ ವಿರಳ ಜೀವನಶೈಲಿಯಲಿ ಮಹರ‍್ಥವಿದೆ ಎಂಬ ಜ್ಞಾನೋದಯವಾದಂದಿನಿಂದ ಊಟೋಪಚಾರಗಳಲ್ಲೂ ಸೆಲೆಕ್ಟೆಡ್; ಅದಕೇ ಅಡಿಕ್ಟೆಡ್!
ಹೀಗೆ ಏನೋ ಯೋಚನೆಯಲಿರುವಾಗ ಮಧ್ಯಾಹ್ನದ ಊಟಕೆ ನನಗೆ ಎದುರಾದದ್ದು ಕೇವಲ ಬಿಸಿಯನ್ನ, ಹೊಳೆನರಸೀಪುರದ ಕಟ್ಟೆ ಹೊಸಳ್ಳಿ ಮೂಲದ ಹಸುವಿನ ಬೆಣ್ಣೆ ಕಾಯಿಸಿದ ಶುದ್ಧ ತುಪ್ಪ ಮತ್ತು ಪರಿಶುದ್ಧ ತಿಳಿಸಾರು! ‘ಅರೆ, ಏನೇನೋ ಬರೆಯಲು ಹೊರಡುವೆ, ಈ ತಿಳಿಸಾರೆಂಬ ಮಾಯಾಂಗನೆಯ ವ್ಯಾಮೋಹಕೆ ಸಿಕ್ಕಿಕೊಂಡು ಆನಂದವಾಗಿಹ ನನ್ನ ಅನುಭವಾಮೃತವನ್ನು ಕುರಿತು ಬರೆದಿಲ್ಲವಲ್ಲ!’ ಎಂದು ಒಂದರೆಕ್ಷಣ ಚಕಿತನಾದೆ. ‘ಯಾರ‍್ಯಾರು ಬರೆದಿದ್ದಾರೆ?’ ಎಂದು ರ‍್ಚಿಸಿದೆ. ತಿಳಿಸಾರನ್ನು ಕುರಿತ ಬರೆಹ ಕಡಮೆ. ಏಕೆಂದರೆ ‘ಅದೇನು ಮಹಾ ಮೆನುವೇ?’ ಎಂಬ ದಿವ್ಯ ನಿರ್ಲಕ್ಷ್ಯ ಇರಬೇಕು. ಇನ್ನು ಯುಟ್ಯೂಬಿನಲ್ಲಂತೂ ಬಗೆ ಬಗೆಯಾದ ತಿಳಿಸಾರನ್ನು ಹೇಗೆ ಮಾಡುವುದೆಂಬ ಸಚಿತ್ರೀಕರಣ ಇದೆಯೇ ವಿನಾ ಅದರ ದಿವ್ಯ ಭವ್ಯ ಮೀಮಾಂಸೆಯೇ ಇಲ್ಲ. ಪಂಡಿತ ಪಾಮರರಿಬ್ಬರಿಗೂ ಪ್ರಿಯರಾದ ನಮ್ಮ ಕನ್ನಡದ ಹೆಮ್ಮೆಯ ವಿದ್ವತ್ತಿನ ಗಣಿ, ಪ್ರಗಲ್ಭ ಭಾಷಾತಜ್ಞರಾದ ಶ್ರೀಯುತ ಕೆ ರಾಜಕುಮಾರ್ ಅವರು ಇತ್ತೀಚೆಗೆ ‘ರಸಂ ಎಂಬ ದಿವ್ಯಾಮೃತ: ಒಂದು ರಸಚಿಂತನೆ’ ಎಂದು ಬರೆದು, ಫೇಸ್ಬುಕ್ಕಿನಲಿ ಪ್ರಕಟಿಸಿದ್ದನ್ನು ಇನ್ನೊಮ್ಮೆ ಓದಿದೆ. ಖುಷಿಯಾಯಿತು. ಒಂರ‍್ಥದಲಿ ಅವರ ಲೇಖನದಿಂದ ಪ್ರಭಾವಿತನೂ ಆದೆ. ನಾನೂ ಸಾರಿನ ಬಗ್ಗೆ ಅದಕಿಂತ ವಿಭಿನ್ನವಾಗಿ ಬರೆಯಬೇಕೆಂದುಕೊಂಡು ಮೂಡಿಗಾಗಿ ಕಾಯುತಿದ್ದೆ ಕೂಡ. ತಕ್ಷಣಕೆ ‘ಕಾವ್ಯದ ಬಗ್ಗೆ ದೊಡ್ಡಕೆ ತಿಳಿದವರೇ ಹೇಳಿ? ಗೊತ್ತೆ ತಿಳಿಸಾರು ನಿಮಗೆ? ಕ್ಷಮಿಸಿ ಗೊತ್ತಿಲ್ಲ ನನಗೆ……..’ ಎಂಬ ನನ್ನಿಷ್ಟದ ವೈದೇಹಿಯವರ ‘ತಿಳಿಸಾರು’ ಪದ್ಯ ನೆನಪಾಯಿತು. ಅವರು ತಿಳಿಸಾರಿನ ಮೂಲಕ ಹೇಳ ಹೊರಟ ವಿಡಂಬನೆಯನ್ನೇ ಮೆಲುಕು ಹಾಕುತ್ತಾ ಕುಳಿತೆ. ಈ ಕವಿತೆಯನ್ನು ಈ ಹಿಂದೆ ಪಾಠ ಮಾಡುವಾಗ ಏನು ಹೇಳಿದೆ? ಎಂಬುದನ್ನು ಜ್ಞಾಪಿಸಿಕೊಳ್ಳುತ್ತಾ ಹೋದೆ. ಆದರೆ ತಿಳಿಸಾರಿನ ಘಮಲೇ ಮುಂದಾಯಿತು. ಇನ್ನು ಘಟಾನುಘಟಿ ಪ್ರಬಂಧಕಾರರಾದ ರಾಕು, ಗೊರೂರು, ಡಿವಿಜಿ, ಎ ಎನ್ ಮೂರ್ತಿರಾಯರೇ ಮೊದಲಾದ ನವೋದಯ ಕಾಲದ ಸಾಹಿತಿವರೇಣ್ಯರೇನಾದರೂ ತಿಳಿಸಾರನ್ನು ಕುರಿತು ಬರೆದಿದ್ದಾರಾ? ತಕ್ಷಣಕೆ ಗೊತ್ತಾಗಲಿಲ್ಲ. ಅವರು ಬರೆದಿರಲಿ, ಬಿಡಲಿ, ನಾನಂತೂ ಬರೆಯೋಣವೆಂದುಕೊಂಡು ಸಂತೃಪ್ತಿಯಾಗಿ ಅನ್ನ-ತಿಳಿಸಾರು ಊಟ ಮಾಡುತಾ ಮನದಲೇ ಸ್ಕೆಚ್ ಹಾಕಿಕೊಂಡೆ.
ತಿಳಿಸಾರಿಗೊಂದು ಯೋಗ್ಯತೆ ಮತ್ತು ಅರ್ಹತೆ ಇದೆ. ಅದನು ಕಂಡುಕೊಂಡವರು ವಿರಳ. ನನ್ನ ಷಡ್ಡುಕ (Co-Brother) ರೊಬ್ಬರು ಇದ್ದರು. ಅವರಿಗೆ ತಿಳಿಸಾರು ಮಾಡುವಾಗ ಅದರ ಕನ್ಯತ್ವಹರಣ ಮಾಡುವುದು ಇಷ್ಟವಾಗುತಿರಲಿಲ್ಲ. ಟೊಮ್ಯಾಟೊ ಬಳಸಬಾರದು, ಇನ್ನೇನೋ ಹಾಳೂಮೂಳು ಹಾಕಬಾರದು. ಪರಿಶುದ್ಧವಾಗಿರಬೇಕು. ತಿಳಿಸಾರು ಹೆಸರೇ ಹೇಳುವಂತೆ ತಿಳಿಯಾಗಿರಬೇಕು. ಬೇಳೆ ಇರಬೇಕು; ಅದೇ ಮುಂದಾಗಿರಬಾರದು. ಬಡಿಸುವ ಸಮಯದಲ್ಲಿ ಒಗ್ಗರಣೆ ತೋರಬೇಕು. ಸಾರಿನಪುಡಿಯನ್ನು ಎಂದೋ ಮಾಡಿಟ್ಟುಕೊಂಡಿರಬಾರದು; ಮಾರಿಕೆ (ಅಂಗಡಿಯಿಂದ ತಂದದ್ದು) ಯದಾಗಿರಬಾರದು. ಹುಣಸೆಹಣ್ಣು ತಕ್ಕಮಟ್ಟಿಗೆ ಹಳೆಯದಾಗಿರಬೇಕು. ಬೆಲ್ಲದಪುಡಿಗಿಂತ ಬೆಲ್ಲವನ್ನು ಕುಟ್ಟಿ ಅದರ ತುಣಕನ್ನು ಹಾಕಬೇಕು. ಅಡುಗೆ ಅರಿಷಿಣವನ್ನು ಅಂಗಡಿಯಿಂದ ತರದೇ ಅರಿಶಿನದ ಕೊನೆಯನ್ನು ಒಣಗಿಸಿ, ಪುಡಿ ಮಾಡಿಟ್ಟುಕೊಂಡಿರಬೇಕು. ಇನ್ನು ಬೇಳೆಯಂತೂ ಅಗಲಗಲವಾದ ಶಿವಲಿಂಗದ ಮೂಟೆ (ದಶಕಗಳಿಂದ ಹೆಸರಾದ ತೊಗರಿಬೇಳೆ ಮಾರಾಟದ ಬ್ರಾಂಡ್ ಕಂಪೆನಿ) ಯ ಮೇಲ್ಭಾಗದ್ದಾಗಿರಬೇಕು. (ಕೆಳಭಾಗದ್ದಾದರೆ ಮುಕ್ಕಾದ ಬೇಳೆ ಮತ್ತದರ ಹೊಟ್ಟು ಸೇರಿಬಿಟ್ಟಿರುತ್ತದೆ!) ಬೇಳೆಯು ಚೆನ್ನಾಗಿ ಆದರೆ ಹದವಾಗಿ ಬೆಂದು ಅದು ಕುದಿಯುವಾಗ ಹಿಟ್ಟಿಟ್ಟಾಗಬೇಕೇ ವಿನಾ ನಾವೇ ಕಡೆಗೋಲಿನಿಂದ ಕಡೆದು ಹುಡಿ ಮಾಡಬಾರದು. ಇನ್ನು ವಗ್ಗರಣೆಗೆ ಬಳಸುವ ಎಣ್ಣೆ ಗಾಣದ್ದಾಗಿರಬೇಕು. ಮೀಡಿಯಂ ಸಾಸುವೆ ಚೆನ್ನ, ವಗ್ಗರಣೆಗೆ ಜೀರಿಗೆ ಬೇಕು; ಆದರೆ ಅದು ಹೆಚ್ಚಾಗಬಾರದು. ಘಮ ಬರುವ ಇಂಗನ್ನು ಬಳಸಬೇಕು. ತಿಳಿಸಾರಿನ ವಿಚಾರದಲ್ಲಿ ಟೊಮ್ಯಾಟೋ ಇರಲಿ, ಈರುಳ್ಳಿ ಬೆಳ್ಳುಳ್ಳಿಗಳ ಹೆಸರೆತ್ತುವಂತೆಯೇ ಇರಲಿಲ್ಲ. ಅಷ್ಟರಮಟ್ಟಿಗೆ ಅದು ಅಚ್ಚ ಸ್ವಚ್ಛ ತಿಳಿ ತಿಳಿಯಾದ ಬೇಳೆಸಾರು. ಕೇವಲ ಒಂದು ಸಾರು ಮಾಡಿ, ಇವರನ್ನು ಮೆಚ್ಚಿಸಲು ಆಗುತ್ತಿರಲಿಲ್ಲ. ಅವರು ಗತ್ತಿನಿಂದ ತಾವು ತಿಂದ ತಿಳಿಸಾರಿನ ಗಮ್ಮತ್ತನ್ನು ಕುತ್ತಿಗೆ ಕುಣಿಸಿ ಸಾಂಗೋಪಾಂಗವಾಗಿ ಹೇಳುತಿದ್ದರೆ ನಮ್ಮ ಬಾಯ ಸಲೈವಾ ಕ್ರೋಡೀಕೃತಗೊಂಡು ತೊಟ್ಟಿಕ್ಕುತಿದ್ದರೂ ಗೊತ್ತಾಗುತ್ತಲೇ ಇರಲಿಲ್ಲ!
ನಮ್ಮಜ್ಜಿ ಮಾಡುತಿದ್ದ ತಿಳಿಸಾರು ನನಗೆ ಆಗಾಗ ನೆನಪಾಗುವುದು. ಆಗೆಲ್ಲಾ ಸೌದೆಯೊಲೆಯ ಬಳಕೆ. ಕಲಾಯ ಹಾಕಿದ ಹಿತ್ತಾಳೆ ಪಾತ್ರೆಗಳು. ಸೌದೆಯುರಿಯ ಒಂದು ಬಗೆಯ ಮಸಿವಾಸನೆಯು ಸಾರಿಗಡರಿ ಅದೊಂಥರ ಮಡಿ ಹಿಡಿದ ಅಜ್ಜಿಯರು ಮಾಡುತಿದ್ದ ಸಾರಿನ ವೈಖರಿಯೇ ಆಗಿ ಹೋಗಿತ್ತು. ನನ್ನ ಕೋಬ್ರಾ ಬಣ್ಣಿಸುತಿದ್ದ ಹಾಗೆಯೇ ಅದು ಇರುತಿತ್ತು. ನೀರು ನೀರಾಗಿರುತಿದ್ದರೂ ಅದೇನೋ ದಿವ್ಯ ಪರಿಮಳ. ಈಗಿನವರ ಹಾಗೆ ಹಸಿಮೆಣಸಿನಕಾಯನ್ನು ಸೀಳಿ ಸಾರಿಗೆ ಹಾಕುತ್ತಿರಲಿಲ್ಲ. ಟೊಮ್ಯಾಟೊ, ಬೆಳ್ಳುಳ್ಳಿಗಳನ್ನು ಮನೆಗೇ ತರುತ್ತಿರಲಿಲ್ಲ. ನಮ್ಮಜ್ಜಿ ಮಾಡಿ ಬಡಿಸುತಿದ್ದ ಸಾರಿಗೆ ಮಾರು ಹೋದ ನಾನು ನಮ್ಮಮ್ಮ ಮಾಡುತಿದ್ದ ಸಾರನ್ನು ಇಷ್ಟಪಡುತಿರಲಿಲ್ಲ. ಅದು ಹಾಗೆಯೇ. ಮನಕೊಪ್ಪುವ ರಾಗದಲಿ ಭಾವಗೀತೆಯೊಂದನ್ನು ಆಲಿಸಿದ ಮೇಲೆ ಅದನ್ನೇ ಬೇರೊಂದು ರಾಗದಲಿ ಇನ್ನಾರೋ ಹಾಡಿದರೆ ಸಹ್ಯವಾಗುವುದಿಲ್ಲವಲ್ಲ, ಹಾಗೆಯೇ. ತಿಳಿಸಾರು ಮಾಡುವುದು ಸುಲಭವಾದರೂ ಅದಕೊಂದು ದೇವಾಮೃತದ ರುಚಿ ಬರಲು ಅದೃಷ್ಟವೂ ಇರಬೇಕು. ಕೆಲವೊಮ್ಮೆ ನಿಷ್ಠೆಯಿಟ್ಟು ಮಾಡಿದರೂ ಬರದ ಆ ರುಚಿಯು ಅರುಜೆಂಟಾಗಿ ಹೇಗೆ ಹೇಗೋ ಮಾಡಿದಾಗ ಲಭಿಸಿ ಬಿಡುತ್ತದೆ. ಅದಕ್ಕೇ ಇದನ್ನು ಅದೃಷ್ಟ ಎಂದದ್ದು. ಮೃಷ್ಟಾನ್ನ ಭೋಜನಕಿಂತಲೂ ತಿಳಿಸಾರು ನಿಸ್ಸಂಶಯವಾಗಿ ರುಚಿಕರವಾದುದು ಮತ್ತು ನಿರಪಾಯಕಾರಿಯಾದದ್ದು. ಉಪ್ಪು, ಹುಳಿ, ಖಾರ, ಸಿಹಿ, ಕಹಿ ಮತ್ತು ಒಗರುಗಳೆಂಬ ಷಡ್ರಸಗಳೂ ಈ ತಿಳಿಸಾರಿನಲ್ಲಿವೆ ಎಂದರೆ ನಿಜಕೂ ಸೋಜಿಗ ಎನಿಸುತ್ತದೆ. ಉಪ್ಪು, ಹುಳಿ, ಖಾರ ಮತ್ತು ಸಿಹಿ ಸರಿ, ಇಲ್ಲೇಕೆ ಕಹಿ ಮತ್ತು ಒಗರು? ಎಂದು ನೀವು ಕೇಳಬಹುದು. ತಿಳಿಸಾರಿಗೆ ನಾವು ಬಳಸುವ ಪರಿಕರಗಳಲ್ಲಿ ಇರುವ ಹಸಿವಾಸನೆಯೊಳಗೆ ಒಂಥರಾ ಕಹಿತನ ಅಡಗಿರುತ್ತದೆ. ಇದು ಬಿಸಿಯಲ್ಲಿ ಬೆಂದು ಉಳಿದ ರಸಗಳೊಂದಿಗೆ ಬೆರೆತು ಬಿಡುತ್ತದೆ. ಇನ್ನು ಒಗರಿನ ವಿಷಯ. ನಾವು ಬಳಸುವ ಹುಣಸೇಹಣ್ಣಿನಲ್ಲಿ ಹುಳಿಯೂ ಒಗರೂ ಒಟ್ಟಿಗಿರುತ್ತದೆ. ನಾನು ಹೀಗಂದುಕೊಂಡಿದ್ದೇನೆ. ತಪ್ಪೋ ಸರಿಯೋ? ತಿಳಿದವರು ಪರಾಂಬರಿಸಬೇಕು.
ಐವತ್ತು ದಾಟಿದ ಎಲ್ಲ ಸ್ತ್ರೀ-ಪುರುಷರಿಗೆ ತಿಳಿಸಾರು ತರುವ ಸಂತೋಷ ಬಣ್ಣಿಸಲಸದಳ. ಒಂದು ತುತ್ತು ಹೆಚ್ಚು ತಿಂದರೂ ಅಷ್ಟೇನೂ ಹೊಟ್ಟೆಭಾರ ಎನಿಸುವುದಿಲ್ಲ. ನನ್ನ ಪ್ರಕಾರ ಏನನ್ನೇ ತಿಂದರೂ ತಿಂದ ಮೇಲೆ ದೇಹಕೆ ಕಷ್ಟನಷ್ಟಗಳಾಗಬಾರದು ಮತ್ತು ಎಂಥದೇ ಅಪರಾಧೀಭಾವ ಕಾಡಬಾರದು. ಆಗ ಅದು ಅತ್ಯುತ್ತಮ ಆಹಾರ. ತಿಳಿಸಾರು ತಿಂದು ವ್ಯಥೆ ಪಟ್ಟವರನ್ನು ನಾನು ಕಂಡಿಲ್ಲ. ಕೆಲವರೇಕೋ ತಿಳಿಸಾರನ್ನು ಇಷ್ಟಪಡುವುದಿಲ್ಲ, ಲೋಕೋಭಿನ್ನರುಚಿಃ ಎಂದದ್ದುಕೊಂಡು ಸುಮ್ಮನಾಗುತ್ತೇನೆ. ಬಹುಶಃ ಅಂಥವರಿಗೆ ಅತ್ಯುತ್ಕೃಷ್ಟ ತಿಳಿಸಾರೇ ಇನ್ನೂ ಪರಿಚಯವಾಗಿಲ್ಲವೇನೋ? ಪಾಪ, ತನ್ನ ಪಾಡಿಗೆ ತಾನಿದ್ದು, ತನ್ನ ಸೌಮ್ಯ ಸ್ವಭಾವದಿಂದ ಮನ ಸೆಳೆಯುವ ತಿಳಿಸಾರು ಇಡೀ ಅಡುಗೆಯ ಮೆನುಗಳಲ್ಲೇ ಸರಳ ಸಾಧಾರಣ ದರ್ಜೆಯದು. ಅಡುಗೆ ಮನೆಯಲೂ ಅಷ್ಟೇ: ಎಲ್ಲ ಬಗೆಯ ರಸಗಳನ್ನೂ ಹೀರಿಕೊಂಡು, ಕೊತಕೊತನೆ ಕುದಿದು, ಕಾದು, ಮಾಗಿ, ಹದವಾಗಿ ಪಾತ್ರೆಯಲಿ ತಣ್ಣಗೆ ಕುಳಿತು ಸರ‍್ಪಿಸಿಕೊಳಲು ಕಾಯುತಿರುತ್ತದೆ. ಮತ್ತೊಂದರ ಜೊತೆಗೆ ಬೆರೆತು ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವ ಸಾರನ್ನು ಕುರಿತು ನನಗೆ ಒಂಥರಾ ಹೆಮ್ಮೆ ಮತ್ತು ಅಭಿಮಾನ. ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ಕಗ್ಗದ ಸಾಲಿನಂತೆ ಸಾರು ಎಂದರೆ ಘನ, ದ್ರವ, ಅನಿಲಗಳೊಂದಿಗೆ ಹೋರಾಡಿ, ಕೊನೆಗೆ ಎಲ್ಲ ಅಹಮುಗಳು ಆವಿಯಾಗಿ, ರುಚಿಕರ ಪದರ‍್ಥವಾಗುವ ವಿಸ್ಮಯ. ತಿಳಿಸಾರಿನಂತೆ ಬದುಕಿರಲಿ ಎಂದು ಯಾರಾದರೂ ಹಾರೈಸಿದರೆ ಅದಕಿಂತ ದೊಡ್ಡ ತತ್ತ್ವ ಬೇರೊಂದಿಲ್ಲ ಎಂದು ನಾನು ಬೆರಗಾಗುವೆ.
ಇನ್ನು ಹಲವರು ಮೊಸರನ್ನ ಕಲೆಸಿಕೊಂಡು ಮಧ್ಯದಲೊಂದು ಗುಂಡಿ ತೋಡಿ, ಅಲ್ಲಿಗೆ ತಿಳಿಸಾರನ್ನು ಸುರಿದುಕೊಳ್ಳುತ್ತಾರೆ. ಹಬ್ಬದ ದಿನ ತೊವ್ವೆ ಮಾಡಲು ಸಮಯವಾಗದೇ ಹೋದಾಗ, ಇದೇ ತಿಳಿಸಾರಿನ ಬೇಳೆಯ ಚರಟವನ್ನೇ ಎಲೆಯ ತುದಿಗೆ ಬಡಿಸಿ, ಶಾಸ್ತ್ರಾನು-ಸಂಧಾನ ಮಾಡುತ್ತಾರೆ. ಮಿಕ್ಕಿರುವ ಬೇಳೆಯ ಚರಟಕ್ಕೆ ಬಿಸಿಯನ್ನ ಮತ್ತು ಬಿಸಿತುಪ್ಪ ಕಲೆಸಿಕೊಂಡು ಉಂಡೆ ಮಾಡಿ ಗುಳಕ್ಕನೆ ನುಂಗುತ್ತಾರೆ. ನನಗೇ ಗೊತ್ತಿರುವಂತೆ ಏನಿಲ್ಲವೆಂದರೂ ಹದಿನೈದರಿಂದ ಇಪ್ಪತ್ತು ನಮೂನೆಯ ತಿಳಿಸಾರನ್ನು ಮಾಡಬಹುದಾಗಿದೆ. ಗೊಡ್ಡು ಸಾರು (ಗೊಡ್ಸಾರು ಎಂದು ಇದರ ಹ್ರಸ್ವರೂಪ ಮತ್ತಿದು ಬೇಳೆರಹಿತ), ಹುಣಸೇಸಾರು, ಗೋಧೀಸಾರು, ಸಿಹಿಸಾರು, ಮಜ್ಜಿಗೆಸಾರು, ಜೀರಿಗೆಸಾರು, ಮೆಣಸಿನಸಾರು, ನಿಂಬೆಹಣ್ಣಿನಸಾರು, ಶುಂಠಿಸಾರು, ಹುರುಳಿಸಾರು, ಈರುಳ್ಳಿಸಾರು, ಉಡುಪಿಸ್ಟೈಲ್ ಬೇಳೆಸಾರು, ದೇವಸ್ಥಾನ ಶೈಲಿಯ ತಿಳಿಸಾರು, ರುಬ್ಬಿ ಹಾಕಿದ ತಿಳಿಸಾರು, ಮೆಂತ್ಯ ಹುರಿದು ಹಾಕಿದ ಸಾರು, ಒಗ್ಗರಣೆಯೇ ಪ್ರಧಾನವಾದ ಸಾಸುವೆ ಸಾರು, ಹೂರಣ ಕಟ್ಟಿದ ಸಾರು, ಹಸಿಮೆಣಸಿನಕಾಯಿ ಬಳಸಿದ ಹಸಿರುಸಾರು, ಸೊಪ್ಸಾರು, ಉಪ್ಸಾರು, ಬಸ್ಸಾರು, ಹೆಸರುಬೇಳೆಸಾರು ಇತ್ಯಾದಿ. ಕೋವಿಡ್ ಕಾಲದಲ್ಲಿ ನಮ್ಮ ಮನೆಯಲ್ಲಿ ಜನಪ್ರಿಯವಾದ ತಿಳಿಸಾರಿಗೆ ‘ಕೊರೋನಾ ಸಾರು’ ಎಂದೇ ನಾನು ನಾಮಕರಣ ಮಾಡಿದೆ. ಜೀರಿಗೆ, ಮೆಣಸು, ದನಿಯಾ ಮೊದಲಾದ ಔಷಧೀಯ ಗುಣಗಳಿರುವ ಪದಾರ್ಥಗಳನ್ನು ಬಳಸಿ ಮಾಡಿದ ತಿಳಿಸಾರಿಗೆ ಈ ನಾಮಧೇಯ. ಒಟ್ಟಿನಲ್ಲಿ ಸಾರು ಎಂಬುದು ಪಚನಸ್ನೇಹಿ, ಬಡವರ ಬಂಧು, ಆರೋಗ್ಯಸಿಂಧು, ಷಡ್ರಸಶೋಭಿತ, ಸಗುಣಸಚಿತ್ರಸಮ್ಮೋಹಿನಿ, ಘಮ್ಮೆನ್ನುವ ಸೌಗಂಧಿಕಾ, ನೇತ್ರಾಲಿಂಗನ, ನಾಲಗೆಗೆ ಆಪ್ತಮಿತ್ರ, ಕರುಳಿನ ಕರೆಯೋಲೆ, ಪಾರಂಪರಿಕ ಜೀವರಸ, ರೋಗಿಷ್ಠರ ಸಂಜೀವಿನಿ, ಅನ್ನದ ಬಾಳಸಂಗಾತಿ, ಮೊಸರನ್ನದ ರೂಪಕಾಲಂಕಾರ; ಬದುಕಿನ ಸಾರಾಸಾರ ವಿಚಾರ! ಯಾವ ರೀತಿಯಲಿ ಇದನ್ನು ಹೊಗಳಿದರೂ ಕಡಮೆಯೇ; ಒಟ್ಟಿನಲ್ಲಿ ಸಾರು ಗರೀಬರ ಮನೆಯ ದೇವರು!! ಮನೆ ಬಡವರದಾದರೇನು? ಅತ್ಯದ್ಭುತ ತಿಳಿಸಾರಿನಿಂದಾಗಿ ಜೀವನವೇ ಸಂಪನ್ನಗೊಳ್ಳುತ್ತದೆ. ಅದಕೇ ಏನೋ ಬಡವರ ಮನೆ ಊಟ ಚೆಂದ; ಸಿರಿವಂತರ ಮನೆ ನೋಟ ಚೆಂದ ಎಂಬುದು ಗಾದೆ.
ಸಾರಿನಲ್ಲಿ ಪ್ರಮುಖ ಪಾತ್ರ ವಹಿಸುವುದೇ ತೊಗರಿಬೇಳೆ. ಬೇಳೆರಹಿತ ಸಾರು ಕೂಡ ಅಷ್ಟೇ ಸೊಗಸಾಗಿದ್ದು, ಇವುಗಳ ರೆಸಿಪಿ ಕೂಡ ಪಾಪ್ಯುಲರಾಗಿವೆ. ನನ್ನ ಮಡದಿಯು ಬೆಂಗಳೂರಿಗೂ ಮೈಸೂರಿಗೂ ಓಡಾಡುವ ವೇಳೆಯಲ್ಲಿ ನನಗಾಗಿ, ಇನ್ಸ್ಟಂಟ್ ಬೇಳೆಸಾರಿನ ಪುಡಿಯನ್ನು ಮಾಡಿಡುತ್ತಿದ್ದಳು. ಬಿಸಿನೀರಿಗೆ ಇದರ ಪುಡಿಯನ್ನು ಹಾಕಿ, ಮೇಲೆ ಒಗ್ಗರಣೆ ಕೊಟ್ಟು ಸಾರನ್ನು ಸೃಷ್ಟಿಸಿಕೊಳ್ಳುತ್ತಿದ್ದೆ. ಒಮ್ಮೆ ಹೀಗೆಯೇ ಒಂಟಿ ಜೀವನ ನಡೆಸುತ್ತಿದ್ದಾಗ ನಮ್ಮ ತಾಯಿಮನೆಯ ಕಡೆ ದೂರದ ಬಂಧು ಬಿಳಿಸೀರೆ ನಾಗೂಬಾಯಿಯವರ ಸಾರಿನ ರೆಸಿಪಿ ನೆನಪಾಯಿತು. ಮಾಡಿ, ನೋಡಿಯೇ ಬಿಡೋಣವೆಂದು ಪ್ರಯೋಗಿಸಿದೆ; ಅದರ ರೆಸಿಪಿ ಹೀಗಿದೆ: ಜಾಮೂನು ಬಟ್ಟಲಿನ ಕಾಲುಭಾಗದಷ್ಟು ತೊಗರಿಬೇಳೆ, ಒಂದೆರಡು ಗುಂಟೂರು ಮತ್ತು ಬ್ಯಾಡಗಿ ಮೆಣಸಿನಕಾಯಿ, ಒಂದು ಚಮಚೆ ಕೊತ್ತಂಬರಿ ಬೀಜ ಮತ್ತು ಜೀರಿಗೆ, ಐದಾರು ಕಾಳುಮೆಣಸು- ಇವಿಷ್ಟನ್ನು ಪಾತ್ರೆಯೊಂದಕ್ಕೆ ಹಾಕಿ, ನೀರು ಸುರಿದು ಅರ್ಧಗಂಟೆ ನೆನೆಯಲು ಬಿಡಬೇಕು. ಆನಂತರ ನೀರನ್ನು ಬಸಿದು, ಬೇರೆಡೆ ಇಟ್ಟುಕೊಂಡು, ನೆನೆದ ಎಲ್ಲವನೂ ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ, ನೆನೆಸಿದ್ದ ನೀರನ್ನು ಸ್ವಲ್ಪ ಸ್ವಲ್ಪವೇ ಸೇರಿಸುತಾ, ತರಿತರಿಯಾಗಿ ರುಬ್ಬಿಕೊಳ್ಳಬೇಕು. ತೀರಾ ನುಣ್ಣಗೆ ರುಬ್ಬಿಕೊಳ್ಳಬಾರದು; ಲೋಳೆಯಂತಾಗಿ ಬಿಡುತ್ತದೆ. ಈ ಮಿಶ್ರಣವನ್ನು ಪಾತ್ರೆಗೆ ಸುರಿದು, ನೆನೆಯಲು ಇಟ್ಟಿದ್ದ ಹುಣಸೇಹಣ್ಣಿನ ನೀರು, ಇಂಗು, ಚೂರು ಬೆಲ್ಲ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ, ಕುದಿಯಲು ಇಡಬೇಕು. ತಳ ಹಿಡಿಯದಂತೆ ಆಗಾಗ ಸೌಟಿನಲ್ಲಿ ಕೈಯಾಡಿಸುತಾ, ಬೇಳೆಯನ್ನು ನೆನೆಸಲು ಬಳಸಿದ್ದ ನೀರನ್ನು ಆಗಾಗ ಸ್ವಲ್ಪವೇ ಹಾಕುತ್ತಾ, ಚೆನ್ನಾಗಿ ಕುದಿಸಬೇಕು. ಪದಾರ್ಥಗಳೆಲ್ಲಾ ಹಸಿಯಾಗಿಯೇ ಇದ್ದುದರಿಂದ ಅದರ ಹಸಗುವಾಸನೆ ಹೋಗುವತನಕ ಚೆನ್ನಾಗಿ ಕುದಿಸಿಕೊಳ್ಳಬೇಕು. ಮೇಲೆ ಬರುವ ನೊರೆಯು ಮರೆಯಾಗುವತನಕ ಅದು ಕುದಿಯಬೇಕು. ಇದಕ್ಕೆ ತುಪ್ಪದ ಒಗ್ಗರಣೆ ಕೊಟ್ಟು ಅನ್ನಕೆ ಕಲೆಸಿಕೊಂಡು ತಿಂದರೆ, ಆಹಾ! ಬಲು ಟೇಸ್ಟು; ತಿನ್ನದ ನಾಲಗೆ ವೇಸ್ಟು! ಇದಕ್ಕೆ ನಾನಿಟ್ಟ ಹೆಸರು ‘ಕುದಿಸಾರು.’ ಏಕೆಂದರೆ ಕುದ್ದೂ ಕುದ್ದೂ ತನ್ನೊಳಗಿನ ಹಸಿತನವನ್ನು ಕಳೆದುಕೊಳ್ಳಬೇಕಲ್ಲ, ಅದಕೆ. ನೀವೊಮ್ಮೆ ಈ ಕುದಿಸಾರನ್ನು ಮಾಡಿ ಸವಿಯಬಹುದು.
ನಾನು ಚಿಕ್ಕವನಿದ್ದಾಗ ನಮ್ಮ ಬಂಧುಗಳು ಮಳೆಗಾಲದ ಸಾರೊಂದನ್ನು ಮಾಡುತಿದ್ದರು. ಒಂದು ಚಮಚ ತುಪ್ಪ ಬಿಸಿ ಮಾಡಿಕೊಂಡು, ಒಂದು ಚಮಚ ಜೀರಿಗೆಯಲ್ಲಿ ಹುರಿದು, ಒಂದು ಚಮಚ ಕಾಳುಮೆಣಸಿನ ಜೊತೆಗೆ ಕರಿಬೇವು. ಅದಕೆ ಎರಡು ಬ್ಯಾಡಗಿ ಮೆಣಸಿನಕಾಯಿ ಮತ್ತು ಅರಿಶಿನದ ಪುಡಿ. ಇವುಗಳ ಹಸಗುವಾಸನೆ ಹೋಗುವತನಕ ಹುರಿದು, ಒಣಕೊಬ್ಬರಿ ಚೂರುಗಳ ಸೇರಿಸಿ, ಮಿಕ್ಸಿಜಾರಿಗೆ ಹಾಕಿಕೊಂಡು, ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಪಾತ್ರೆಯಲಿ ಒಗ್ಗರಣೆ ಮಾಡಿಕೊಂಡು, ನಂತರ ರುಬ್ಬಿದ ಈ ಮಸಾಲೆ ಹಾಕಿ, ಅಗತ್ಯ ಪ್ರಮಾಣದಷ್ಟು ನೀರು ಸೇರಿಸಿ, ರುಚಿಗೆ ತಕ್ಕ ಉಪ್ಪು ಬೆರೆಸಿ, ಚೆನ್ನಾಗಿಯೇ ಕುದಿಸಬೇಕು. ಸ್ಟವ್ ಆಫ್ ಮಾಡಿ, ತಣ್ಣಗಾದ ಮೇಲೆ ಒಂದು ಲೋಟ ಕಾಯಿಸಿ, ಆರಿಸಿದ ಹಾಲನ್ನು ಸೇರಿಸಬೇಕು. ಹಾಗಾಗಿ ಇದು ಹಾಲು ಮೆಣಸಿನ ಸಾರು. ಬೇಕಾದರೆ ಊಟಕೆ ಕುಳಿತಾಗ ನಿಂಬೆರಸ ಹಿಂಡಿಕೊಳ್ಳಬಹುದು!
‘ಏನಡಿಗೆ ಮಾಡಲಿ?’ ಎಂದಾಗ ‘ಅನ್ನ, ತಿಳಿಸಾರು’ ಎಂಬುದು ಉತ್ತರವಾದರೆ, ಅದರಂಥ ಸರಳಾತಿ ಸರಳವಾದ ಆರೋಗ್ಯಕರ ಬದುಕು ಇನ್ನೊಂದಿಲ್ಲ ಎಂಬುದು ನನ್ನ ಅಭಿಮತ. ಸಾರೆಂಬುದು ಜೀವ ಜೀವನದ ಸಾರ ಎಂದು ತಿಳಿದವರು ಪ್ರಬುದ್ಧರು; ಎಲ್ಲ ರಾಗದ್ವೇಷಗಳನ್ನು ಕೈ ಬಿಟ್ಟ ಕಬೀರರು! ಸಾರನ್ನೇ ಹೆಚ್ಚು ಪ್ರೀತಿಸುವ ಬ್ರಾಹ್ಮಣ ಪಂಗಡವನ್ನು ‘ಪುಳ್ಚಾರು’ ಎಂದು ಕರೆಯುತಿದ್ದರೇನೋ!? ಹುಣಸೇಹಣ್ಣು ಮತ್ತು ಬೆಲ್ಲ ಬಳಸಿ ಮಾಡುವ ಹುಳಿ ಮುಂದಾದ ಬೇಳೆಸಾರನ್ನು ಮಾಡುವವರಾದ್ದರಿಂದ ಈ ಹೆಸರು ಬಂದಿರಬೇಕು. ಮೊದಲಿಗೆ ಗುರುತಾಗಿ, ಆಮೇಲೆ ಹೆಮ್ಮೆ-ಅಭಿಮಾನಗಳಿಂದ ಕರೆಯುತಿದ್ದರೆನಿಸುತ್ತದೆ. ಅನಂತಮೂರ್ತಿಯವರ ಕತೆಗಳಲ್ಲಿ ಬರುವ ಬಹಳಷ್ಟು ಪಾತ್ರಗಳಲ್ಲಿ ಈ ಬೇಳೆವಾಸನೆ ಅಡರುತ್ತದೆ! ಎಲ್ಲರ ಆಹಾರವನ್ನೂ ಗೌರವಿಸದೇ ತಮ್ಮದೇ ಶ್ರೇಷ್ಠವೆಂದು ಬೀಗಲಾರಂಭಿಸಿದಾಗ ಬಹುಶಃ ಈ ಪದವು ಒಂದು ಪಂಗಡಕ್ಕೆ ವ್ಯಂಗ್ಯ ಮತ್ತು ಟೀಕೆಗಳೆನಿಸಿ, ನಮ್ಮನ್ನು ಅಪಮಾನಿಸುತಿದ್ದಾರೆಂದು ತಿಳಿದರೋ? ಗೊತ್ತಿಲ್ಲ. ನನಗೇನಾದರೂ ಹಾಗೆಂದರೆ!? ನಾನು ಖುಷಿ ಪಡುತ್ತೇನೆ ಮತ್ತು ಅಂಥವರನ್ನು ನಮ್ಮ ಮನೆಗೆ ಅತಿಥಿಯಾಗಿ ಕರೆದುಕೊಂಡು ಹೋಗಿ, ತಿಳಿಸಾರಿನ ರುಚಿಯನ್ನು ಹಂಚಿಕೊಳ್ಳುತ್ತೇನೆ. ಯಾರು? ಏನೆನ್ನಲಿ? ನಾವದನ್ನು ಭಾವಿಸುವ ಮತ್ತು ಸ್ವೀಕರಿಸುವ ರೀತಿ ಮುಖ್ಯ. ‘ಕೈಯ್ಯಲ್ಲಿ ಸುತ್ತಿಗೆ ಇದ್ದಾಗ ಕಾಣುವುದೆಲ್ಲಾ ಮೊಳೆಯೇ!’ ಎಂಬ ಗಾದೆಮಾತಿನ ಮರ್ಮವನ್ನು ಅರಿತರೆ ಬದುಕಿನ ಬಹಳಷ್ಟು ಭ್ರಮೆಗಳು ಬಗೆಹರಿಯುತ್ತವೆ. ಆದರೆ, ‘ಏನಡಿಗೆ?’ ಎಂದು ಕೇಳಿದಾಗ ‘ಅನ್ನ ಸಾರು’ ಎಂದರೆ ಎದುರಿನವರು ಮುಖ ಕಿವುಚಿಕೊಳ್ಳುತ್ತಾರೆ. ಗತಿ ಇಲ್ಲದವರೆಂದೋ ಜಿಪುಣರೆಂದೋ ಭಾವಿಸುತ್ತಾರೆ. ತಿಂದಾಗ ಆರಾಮೆನಿಸುವ ಮತ್ತು ಇನ್ನೊಬ್ಬರಿಗೆ ಹೇಳುವಾಗ ಪಿಚ್ಚೆನ್ನಿಸುವ ಅಡುಗೆ ಎಂಬುದೇನಾದರೂ ಇದ್ದರೆ ಅದು ಈ ಪುಳ್ಚಾರೇ!
‘ಸಾರು’ ಎಂಬುದಕೆ ಕನ್ನಡ ರತ್ನಕೋಶವು ‘ಅನ್ನದೊಡನೆ ಕಲೆಸಿಕೊಳ್ಳಲು ಬಳಸುವ ನೀರಾದ ಅಡುಗೆ ಪದಾರ್ಥ’ ಎಂದರ್ಥ ಕೊಟ್ಟು ಸುಮ್ಮನಾಗಿದೆ. ಸಂಸ್ಕೃತದ ‘ರಸಂ’ ಎಂಬುದು ಯಾವಾಗ ಸಾಂಬಾರಾಗಿ ಸಾರು ಆಯಿತೋ? ಗೊತ್ತಿಲ್ಲ. ಈಗ ಅರ್ಥ ಬದಲಾಗಿದೆ. ಸಾಂಬಾರು ಎಂಬುದಕೆ ತರಕಾರಿ ಹಾಕಿದ ಗಟ್ಟಿ ಸಾರೆಂದೂ ರಸಂ ಎಂದರೆ ತಿಳಿಯಾದ ಸಾರೆಂದೂ ಜನಮಾನಸವೇ ತೀರ್ಮಾನಿಸಿ ಬಿಟ್ಟಿದೆ. ‘ಒಂದು ಸ್ವಲ್ಪ ಸಾರು ಬೇಕು’ ಎಂದಾಗ ‘ರಸಂ ತಾನೇ’ ಎಂದು ಬಡಿಸುವವರು ಕನ್ಫರ್ಮ್ ಮಾಡಿಕೊಳ್ಳುತಾರೆ! ಎಂಟಿಆರ್ ಅವರ ರಸಂ ಕ್ಯೂಬ್, ಇಂದಿರಾಸ್ ಅವರ ಪೆಪ್ಪರ್ ರಸಂ ಅನ್ನು ಸವಿದವರು ಸಾರಿನ ಬೇರೊಂದು ಆಯಾಮವನ್ನೇ ಕಾಣುವರು. ‘ಒನ್ ಮಿನಿಟ್ ರಸಂ’ ಅಂತೂ ಒಂದು ಕಾಲದಲ್ಲಿ ಜನಪ್ರಿಯವಾಗಿತ್ತು. ಬಿಸಿನೀರಿಗೆ ಇದರ ಕ್ಯೂಬ್ ಹಾಕಿ ಬಿಟ್ಟರೆ ಮುಗಿಯಿತು, ಸಾರು ರೆಡಿಯಾದ ಹಾಗೆಯೇ. ಈಗ ಇಂದಿರಾಸ್ ಅವರ ‘ಪೆಪ್ಪರ್ ರಸಂ’ ಪ್ಯಾಕೆಟುಗಳು ಇಂಥದೇ ಜನಪ್ರೀತಿ ಗಳಿಸಿವೆ. ವಿದೇಶದಲ್ಲಿರುವ ನನ್ನ ಮಗನಿಗೆ ನಾವಿದನ್ನು ‘ರಫ್ತು’ ಮಾಡುತ್ತೇವೆಂದರೆ ನೀವೇ ತೀರ್ಮಾನಿಸಿ! ಈಗಂತೂ ಯುಟ್ಯೂಬ್ ವಾಹಿನಿಕಾಲ. ಅಲ್ಲಿ ಬಗೆಬಗೆಯ ರಸಂ ರೆಸಿಪಿಗಳು ಇರುವಂತೆ ರಸಂ ಥೆರಪಿಗಳೂ ಇವೆ. ಹಲ ಬಗೆಯ ಸಾರಿನ ಮೆನುಗಳು ಸಚಿತ್ರವಾಗಿ ದೊರೆಯುತ್ತವೆ. ವೈರಲ್ ನೆಗಡಿ ಕೊರೋನಾ ಪರಿಚಯವಾದ ಮೇಲೆ ಜೀರಿಗೆ ಮೆಣಸಿನ ಸಾರು ಒಂದರ್ಥದಲಿ ಥೆರಪಿಗಳಾಗಿಯೇ ಕೆಲಸ ಮಾಡಿದವು; ಮಾಡುತ್ತಿವೆ.
ಸರಳ ಸಾಧಾರಣ ಸಹಜ ಸಾರು ಕೂಡ ಸಾಮಾಜಿಕ ಜಾಲತಾಣಗಳಿಂದಾಗಿ ಮೇರುಗಿರಿಯಾಗಿ ವೈಭವದಿಂದ ವರ್ಣಿಸಿಕೊಳ್ಳುತ್ತಿವೆ! ಇಷ್ಟೆಲ್ಲಾ ಹೇಳಿದ ಮೇಲೆ ನನಗೆ ಗೊತ್ತಾದ ಒಂದು ಹೀನೋಪಮೆಯನ್ನು ಹೇಳಲೇಬೇಕು. ಮದ್ಯಪಾನದ ಅಭ್ಯಾಸ ಇರುವ ಸ್ನೇಹಿತರೊಬ್ಬರು ಹೇಳಿದ ಮಾತು. ‘ಡ್ರಿಂಕ್ಸಿಗೆ ತಿಳಿಯಾದ ಸಾರನ್ನು ಮಿಕ್ಸ್ ಮಾಡಿಕೊಂಡು ಕುಡಿಯಬೇಕು, ಆಗಿನ ಕಿಕ್ ನೋಡಬೇಕು’ ಎಂದು! ನಾನು ಹೌಹಾರಿಬಿಟ್ಟೆ. ಪಾಪ, ದೇವಸ್ಥಾನದ ಅಡುಗೆಮನೆಯಲ್ಲಿ ಸಾಚಾ ಆಗಿದ್ದ ಈ ತಿಳಿಸಾರನ್ನು ಬಾರಿಗೂ ಬರಮಾಡಿಕೊಂಡಿರಲ್ಲಾ ಎಂದು ಕಂಗಾಲಾದೆ. ‘ನಮ್ಮಂಥವರಿಗೆ ತಿಳಿಸಾರೇ ಕಿಕ್ ಕೊಡುತ್ತದೆ, ಅಷ್ಟು ಸಾಕು’ ಎಂದುತ್ತರಿಸಿ ಸುಮ್ಮನಾದೆ. ಆಮೇಲೆ ಅನಿಸಿತು. ನಮ್ಮಂಥವರಿಗೆ ಇದು ನೀಚೋಪಮೆ. ಪಾಪ, ಅವರಿಗೆ? ಮಹೋಪಮೆಯೇ ಆಗಿದೆ ಎಂದುಕೊಂಡೆ. ನಮ್ಮದೇ ಸರಿ, ನಮ್ಮದೇ ಶ್ರೇಷ್ಠ ಎಂಬ ಮೇಲರಿಮೆಯ ಗರಿಮೆಯ ಭಾವವು ಹೆಚ್ಚಾಗಿರುವುದೇ ಈ ಊಟೋಪಚಾರದಲ್ಲಿ. ಅಭಿಮಾನ ಓಕೆ, ಆದರೆ ಅದು ದುರಭಿಮಾನವೋ ಅಂಧಾಭಿಮಾನವೋ ಆಗಬಾರದು. ಅದರಲ್ಲೂ ಇನ್ನೊಬ್ಬರ ಆಹಾರವನ್ನು ಹೀಗಳೆಯಬಾರದು ಎಂಬುದೊಂದು ಬಹು ದೊಡ್ಡ ಪ್ರಬುದ್ಧತೆ. ಎಷ್ಟು ವಯಸಾದರೂ ನಮಗೀ ಮೆಚೂರಿಟಿ ಮರೆತೇ ಹೋಗುತ್ತದೆ. ಎಲ್ಲವನೂ ಮಾತಾಡಿಯೋ, ಕೇಳಿಸಿಕೊಂಡಿಯೋ ಕೊನೆಗೆ ‘ನೀವು ಏನೇ ಹೇಳೀ, ನಮ್ಮ ಆಹಾರ ಪದ್ಧತಿಯೇ ಶ್ರೇಷ್ಠ’ ಎನ್ನುವವರ ಬಳಿ ನಾನು ವಾದ ಮಾಡುವುದಿಲ್ಲ. ಅವರ ಮಟ್ಟವನ್ನು ಅರಿತು ಸುಮ್ಮನಾಗುತ್ತೇನೆ. ಊಟ ನಿದ್ದೆ ಪಾಠ ಮಾಡಿದಂತೆ ಎಂಬಂತೆ ನಮ್ಮ ತಾಯ್ತಂದೆಯರು ಚಿಕ್ಕಂದಿನಲ್ಲಿ ನಮಗೇನು ಅಭ್ಯಾಸ ಮಾಡಿಸಿದ್ದರೋ ಅದಕ್ಕೆ ನಾವು ಹೊಂದಿಕೊಂಡಿರುತ್ತೇವೆ, ಅಷ್ಟೇ. ಇನ್ನೇನಿಲ್ಲ. ಅದು ಗ್ರೇಟೂ ಅಲ್ಲ; ಗೋಟೂ ಅಲ್ಲ. ಅವರವರ ಭಾವ, ಅವರವರ ಬಕುತಿ, ಅವರವರ ಶಕುತಿ.
ಮಲಯ ಮಾರುತ ಸಿನಿಮಾದಲ್ಲಿ ಕೆ ಜೆ ಏಸುದಾಸ್ ಹಾಡಿರುವ ‘ನಟನ ವಿಶಾರದ ನಟಶೇಖರ…….’ ಎಂಬ ಹಾಡನ್ನು ಕೇಳುತಿದ್ದರೆ ನನಗಂತೂ ಗೌರೀಶಂಕರನ ನಾಟ್ಯಕಿಂತ ಈ ತಿಳಿಸಾರೇ ಕಣ್ಮುಂದೆ ಬರುತ್ತದೆ. ‘ನವವಿಧ ವಿನ್ಯಾಸ ನವರಸ ನವ ಲಾಸ್ಯ ನವ ಕಾವ್ಯ ಕಾರಣ ನವ ಚೇತನ, ನವಕೋಟಿ ಲೀಲಾ ವಿನೋದ ವಿಲಾಸ, ನವಭಾವ ಆನಂದ ಗೌರೀವರ…….’ ಎಂದು ಅವರು ಹಾಡುತಿದ್ದರೆ ಈ ತಿಳಿಸಾರಿನ ಬಗೆಬಗೆಯ ರೆಸಿಪಿಗಳು ಸುಳಿದಾಡುತ್ತವೆ. ‘ಏಕಮೇವ ಅದ್ವಿತೀಯ, ಲೋಕ ಲೋಕ ಪೂಜಿತ’ ಎಂಬುದಂತೂ ಸಾಕ್ಷಾತ್ ಶಂಕರನೇ ಸಾರನ್ನು ಶ್ಲಾಘಿಸುತ್ತಿದ್ದಾನೆ ಎನಿಸುತ್ತದೆ. ‘ವಿಶ್ವನಾಥ, ವಿಶ್ವರೂಪ, ವಿಶ್ವೇಶ್ವರ, ವಿರೂಪಾಕ್ಷ’ ಎಂದಾಗಲಂತೂ ತಿಳಿಸಾರು ಬೇರಲ್ಲ; ಲಿಂಗರೂಪೀ ಶಿವ ಬೇರಲ್ಲ ಎಂದು ಮನಸು ತರ‍್ಮಾನಿಸಿ ಬಿಡುತ್ತದೆ! ಹಾಗಾಗಿ ಇದನ್ನು ದೇವಾಮೃತ ಎಂದು ಹೆಸರಿಸಲು ಇಷ್ಟಪಡುವೆ. ‘ಉದಕದಲ್ಲಿ ಬಯ್ಚಿಟ್ಟ ಬಯಕೆಯ ಕಿಚ್ಚಿನಂತಿದ್ದಿತ್ತು’ ಎಂಬ ಬಸವಣ್ಣನವರ ವಚನವನ್ನು ಓದುವಾಗೆಲ್ಲಾ ಅದು ಯಾಕೋ ನನಗೆ ತಿಳಿಸಾರೇ ನೆನಪಾಗುವುದು. ಹಿಂದಿನ ಕಾಲದಲಿ, ಗ್ರಾಮೀಣ ಭಾಗದಲಿ ಸಾರನ್ನು ‘ಉದಕ’ ಎಂದೇ ಕರೆಯುತ್ತಿದ್ದರು. ನಾವೀಗ ನೀರುಸಾರನ್ನು ‘ಸಾರೋದಕ’ ಎಂದು ಕರೆಯಬಹುದು! ಯಾವ ಕಾರಣಕೂ ಬಿ ಟಿ ರೈಸ್ನಿಂದ ಮಾಡಿದ ಅನ್ನಕೆ ಸಾರನ್ನು ಕಲೆಸಿಕೊಳ್ಳಬಾರದು. ಅನ್ನವೇ ಒಂದು ಕಡೆ, ಸಾರೇ ಒಂದು ಕಡೆ ಮುನಿಸಿಕೊಂಡು ದೂರವಾಗುತ್ತವೆ. ತಿಳಿಸಾರನ್ನು ಕುಡಿಯುವುದರ ಜೊತೆಗೆ ಅನ್ನಕೆ ಕಲೆಸಿಕೊಳ್ಳುವುದಾದರೆ ಸ್ವಲ್ಪವಾದರೂ ಅನ್ನವು ಮುದ್ದೆಯಾಗಿರಬೇಕು; ಸ್ವಲ್ಪ ನೀರನ್ನು ಹೆಚ್ಚಿಗಿಟ್ಟು ಕುಕ್ಕರ್ ಕೂಗಿಸಿರಬೇಕು. ಮುದ್ದಾದ ಮುದ್ದೆಯಾದ ಅನ್ನ ಮತ್ತು ತಿಳಿಸಾರು ಎಂಬುದು ಅರ್ಥಪೂರ್ಣ ದಾಂಪತ್ಯದಂತೆ. ಜೀವನದ ಸೊಗಸು. ನೀರು ಸಾರು ಎಂದಾಗ ನೆನಪಾಯಿತು. ಊಟದ ವೇಳೆಗೆ ಯಾರಾದರೂ ದಿಢೀರನೆ ಮನೆಗೆ ಬಂದಾಗ ನಮ್ಮ ದೊಡ್ಡಮ್ಮ (ತಾಯಿಯ ಅಕ್ಕ)ನವರು ಕಲ್ಲುಗಡಿಗೆಯಲ್ಲಿ ಮಾಡಿಟ್ಟಿದ್ದ ಸಾರಿಗೆ ನೀರು ಬೆರೆಸಿ ಮತ್ತೆ ಕುದಿಸುತಿದ್ದರು. ಸುರಿದ ನೀರಿನಿಂದಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತಿದ್ದ ಸಾರು ಮಾತ್ರ ಅನ್ನಕೆ ಬೆರೆಯದೇ ಮುಷ್ಕರ ಹೂಡುತಿತ್ತು. ಇದೇನ್ ದೊಡ್ಡಮ್ಮ ಅಂದರೆ, ‘ನೀವೆಲ್ಲಾ ಬಂದ್ರಲ್ಲಾ, ಎಲ್ರಿಗೂ ಒದಗಬೇಕಲ್ಲ!’ ಎಂಬ ಅಡಿಟಿಪ್ಪಣಿಯಲ್ಲಿ ಚುರುಕು ಮುಟ್ಟಿಸುತಿದ್ದರು. ಹೀಗಾಗಿಯೋ ಏನೋ ಮಡದಿಯ ಕೈರುಚಿ ಬಗೆಬಗೆಯ ತಿಳಿಸಾರನ್ನು ಸವಿಯುವ ತನಕ ಎಷ್ಟೋ ವರುಷಗಳ ಕಾಲ ಸಾರಿನ ಮೇಲೆಯೇ ನನಗೆ ಜುಗುಪ್ಸೆ ಬಂದಿತ್ತು. ಬಹಳ ಹಿಂದೆ ತಮಿಳುನಾಡಿನ ಮೂಲದ ಕುಟುಂಬಮಿತ್ರರ ಮನೆಗೆ ಹೋಗಿದ್ದಾಗ ಪಚ್ಚೆಪುಳಿರಸಂ ಎಂಬ ದಿಢೀರ್ ಸಾರನ್ನು ಸವಿದಿದ್ದೆ. ಐದಾರು ಮೆಣಸಿನಕಾಳು, ಅರ್ಧ ಚಮಚೆ ಜೀರಿಗೆ, ಒಂದೆರಡು ಹಸಿಮೆಣಸಿನಕಾಯಿ ಮತ್ತು ಏಳೆಂಟು ಸಣ್ಣೀರುಳ್ಳಿ (ಸಾಂಬಾರ್ ಈರುಳ್ಳಿ) – ಇವನ್ನು ಒರಳುಕಲ್ಲಿನಲ್ಲಿ ಜಜ್ಜಿಕೊಂಡು (ನುಣ್ಣಗೆ ಮಾಡಿಕೊಳ್ಳಬಾರದು ಎಂಬುದೊಂದೇ ನಿಯಮ) ಇದಕ್ಕೆ ಬಿಸಿನೀರಿನಲ್ಲಿ ನೆನಸಿ ಇಟ್ಟಿದ್ದ ಹುಣಸೇನೀರನ್ನು ಸೇರಿಸಿ, ಉಪ್ಪು, ಕರಿಬೇವು ಮತ್ತು ಕೊತ್ತಂಬರಿಸೊಪ್ಪನ್ನು ಹೆಚ್ಚಿ ಹಾಕಿ, ಒಲೆಯ ಮೇಲಿಟ್ಟು ಕುದಿಸಬೇಕು. ಬೇಳೆ ಹಾಕದ ಈ ರೆಸಿಪಿ ಗೊತ್ತಾದ ಮೇಲೆ ಬಹಳಷ್ಟು ಸಾರಿ ಹಾಸ್ಟೆಲಿನಲ್ಲಿದ್ದಾಗ ನಾವು ಮಾಡಿಕೊಂಡಿದ್ದಿದೆ.
ಇದೀಗ ವೈದೇಹಿಯವರ ‘ತಿಳಿಸಾರು’ ಕವಿತೆಗೆ ಬರುತ್ತೇನೆ. ‘ಕಾವ್ಯದ ಬಗ್ಗೆ ತಿಳಿದವರೇ ಹೇಳಿ, ಕಾವ್ಯ ಗೊತ್ತಿಲ್ಲ ನನಗೆ, ತಿಳಿಸಾರು ಗೊತ್ತುಂಟು. ತಿಳಿಸಾರು ಎಂದರೆ ಏನೆಂದುಕೊಂಡಿರಿ? ಅದಕೂ ಬೇಕು ಒಳಗೊಂದು ಜಲತತ್ವ, ಗಂಧತತ್ವ, ಕುದಿದು ಹದಗೊಂಡ ಸಾರತತ್ವ……’ ಹೀಗೆ ಕವಿತೆ ಮುಂದುವರಿಯುತ್ತದೆ. ಒಂದು ಕಾಲದಲ್ಲಿ ಲೇಖಕಿಯರ ಬರೆವಣಿಗೆಯನ್ನು ಹಗುರವಾಗಿ ಪರಿಗಣಿಸಿದ್ದ ಪುರುಷ ಲೇಖಕರು ಮತ್ತು ವಿಮರ್ಶಕರಿಗೆ ಇಂಥದೊಂದು ರೂಪಕದ ಭಾಷೆಯಲ್ಲಿ ಕವಯಿತ್ರಿಯು ತರಾಟೆಗೆ ತೆಗೆದುಕೊಳ್ಳುತ್ತಾರೆ. ವಿಡಂಬನೆಯ ಈ ತೀವ್ರತೆಯು ತಿಳಿಸಾರನ್ನು ಬಳಸಿಕೊಂಡಿದೆ ಎಂಬುದೇ ವಿಶೇಷ. ಹೆಸರಿಗೆ ತಿಳಿಸಾರಾದರೂ ಅದೇನು ಸಲೀಸಿನ ಮೆನುವಲ್ಲ. ಅಳತೆ, ಪ್ರಮಾಣಗಳಿಲ್ಲದೇ ಹೋದರೆ ತಿಳಿಸಾರು ರುಚಿಯನ್ನು ಕಳೆದುಕೊಂಡು ಕಲಗಚ್ಚಾಗುತ್ತದೆ. ಕಾವ್ಯಾನುಭೂತಿಯೂ ತಿಳಿಸಾರಿನ ರಸಾನುಭೂತಿಯೂ ಸಮನಾದದ್ದು ಎಂಬುದರ ದರ್ಶನ ಇಲ್ಲಿಯದು. ‘ಕಾವ್ಯ ಗೊತ್ತಿಲ್ಲ ನನಗೆ’ ಎನ್ನುತ್ತಲೇ ಅಡುಗೆಮನೆಯ ಐಡೆಂಟಿಟಿಯಾಗಿರುವ ತಿಳಿಸಾರಿನ ಮೂಲಕ ಕಾವ್ಯ ತಿಳಿದವರೆಂಬ ಫೋಸು ಕೊಟ್ಟವರನ್ನು ತರಾಟೆಗೆ ತೆಗೆದುಕೊಳ್ಳುವ ಮರ್ಮ ಇಲ್ಲಿಯ ವೈದೇಹಿಯವರ ಕವಿತೆಯ ಧರ್ಮವಾಗಿದೆ!
ಸಾರು ಎಂದಾಗಲೆಲ್ಲಾ ನಮಗೆ ಜೀವನದ ಸಾರವೇ ಮುನ್ನೆಲೆಗೆ ಬರುವುದು. ಫಂಕ್ಷನ್ನುಗಳ ಭರ್ಜರಿ ಭೋಜನ ಮಾಡಿದ ಮೇಲೆ ರಾತ್ರಿಗೆ ಏನೂ ಬೇಡವೆನಿಸುವುದು. ಅದರ ಮಹಿಮೆ ಹೆಚ್ಚಾಗಿ ಮಾರನೆಯ ದಿನವೂ ಏನೂ ಬೇಡವೆನಿಸಿದಾಗ ನೆನಪಾಗುವುದೇ ಈ ತಿಳಿಸಾರು. ಆಗ ಅನ್ನ ಮತ್ತು ತಿಳಿಸಾರು ಕೊಡುವ ಸುಖವೇ ಸ್ವರ್ಗ. ಸಿಂಪ್ಲಿ ಬ್ಯೂಟಿಫುಲ್! ಸರಳತೆಯೇ ಸತ್ಯ ಮತ್ತು ಶಾಶ್ವತ ಎಂಬುದನ್ನು ನಾವು ತಿಳಿಸಾರಿನ ಮೂಲಕವೇ ಮನದಟ್ಟು ಮಾಡಿಕೊಳ್ಳಬಹುದು. ‘ಸಾರಿಲ್ಲದ ಬಾಳು ನಿಸ್ಸಾರ’ ಎಂದು ನಿರ್ಭಿಡೆಯಿಂದ ಹೇಳಿದರೆ ಅದೇನು ಉತ್ಪ್ರೇಕ್ಷೆಯ ಮಾತಾಗುವುದಿಲ್ಲ. ನಮ್ಮ ತಂದೆಯ ಕಡೆಯ ಬಂಧುವೊಬ್ಬರು ನೂರೆಂಟು ದೇಶ ಸುತ್ತಿ ಬಂದವರು. ನಮ್ಮ ಮನೆಯ ತಿಳಿಸಾರು ತಿಂದು ಸಂತೋಷಪಟ್ಟರು. ಮಾಮೂಲಿಯಂತೆ ಕೊನೆಗೊಂದು ಕ್ಯಾತೆ ತೆಗೆದು, ‘ಈ ತೊಗರೀಬೇಳೆ ಇದ್ಯಲ್ಲ, ಇದರದು ಬೋರಿಕ್ ಆಸಿಡ್ಡು. ವಯಸಾದವರಿಗೆ ಒಳ್ಳೇದಲ್ಲ’ ಎಂದರು. ಇದನ್ನೂ ಬಯ್ಯುವವರಿದ್ದಾರಲ್ಲ ಎಂದುಕೊಂಡು, ವಯಸಾಗುವುದೇ ಒಳ್ಳೇದಕ್ಕಲ್ಲ! ಎಂದು ನೊಂದು, ಸಮಾಧಾನ ತಂದುಕೊಂಡೆ.
ಒಮ್ಮೆ ಗುರುಗಳನ್ನು ಕಾಣಲು ಕುಟೀರಕ್ಕೆ ಹೋಗಿದ್ದಾಗ ನಡೆದ ಘಟನೆ: ‘ಅವಿನಾಶಿ ಆತ್ಮ ಮತ್ತು ಎಟರ್ನಲ್ ಟ್ರೂಥ್’ ಎಂಬ ವಿಷಯವನ್ನು ಕುರಿತು ಯಾವುದೋ ಜರ್ನಲ್‌ಗೆ ಲೇಖನವೊಂದನ್ನು ಬರೆಯಲು ಅವರೊಂದಿಗೆ ಮಾತುಕತೆಯಾಡುವುದು ನನ್ನ ಉದ್ದೇಶವಾಗಿತ್ತು. ವಿಷಯ ಪ್ರಸ್ತಾಪಿಸಿದೆ. ಊಟದ ಸಮಯ. ಊಟ ಮಾಡುತ್ತಾ ಮಾತಾಡೋಣ ಎಂದರು. ನನಗಿಷ್ಟವಾದ ಅಷ್ಟೇನೂ ಉದುರುದುರಲ್ಲದ ಮುದ್ಮುದ್ದೆಯಾದ ಅನ್ನ, ತಿಳಿಸಾರು ಮತ್ತು ಗೋರೀಕಾಯಿ ಸಿಹಿ ಪಲ್ಯ. ತಿಳಿಸಾರೆಂದರೆ ನಿಜವಾದ ತಿಳಿಸಾರೇ. ಆಶ್ರಮದ ವಾತಾವರಣಕ್ಕೆ ತಕ್ಕುದಾದ ಮೈಲ್ಡ್ ಸ್ವಭಾವವು ಸಾರಿಗೂ ಆವರಿಸಿತ್ತು. ಘಮಘಮಿಸುವ ತುಪ್ಪವನ್ನು ಮೊದಲೇ ಹಬೆಯಾಡುವ ಅನ್ನಕೆ ಕಲೆಸಿಕೊಂಡವನೇ ಸಾರು ಸುರಿದುಕೊಂಡು ಬೆರಳು ಸುಡುತಿದ್ದರೂ ಲೆಕ್ಕಿಸದೇ ಆಗಾಗ ಚುರುಕ್ ಎಂದಾಗಲೆಲ್ಲಾ ಬಾಯಲಿಟ್ಟುಕೊಂಡು, ಸುಮ್ಮನೆ ಸವಿದೆ. ‘ಜೊತೆಗೇನೂ ಬೇಡವೇ?’ ಎಂದರು. ‘ಏನೂ ಬೇಡ ಗುರುಗಳೇ, ಸಾರಿನ ರುಚಿ ಮಂಕಾಗುವುದು’ ಎಂದೆ. ಕಣ್ಣಲೇ ನಕ್ಕರು. ‘ಅರ್ಧ ಭಾಗ ತಿಂದ ಮೇಲೆ ಪಲ್ಯವನ್ನು ಬಳಸು, ರುಚಿ ಹೆಚ್ಚಾಗುವುದು’ ಎಂದರು. ಅವರೂ ನನ್ನಂತೆಯೇ ತಿಳಿಸಾರು ಪ್ರಿಯರು. ಆರೋಗ್ಯದಾಯಕ ಎಂದು ಬಗೆಬಗೆಯ ಸಾರುಗಳನ್ನು ಮಾಡಿಸುತ್ತಿದ್ದರು. ಕೆಲವೊಮ್ಮೆ ಅವರೇ ನಿಂತು ತಯಾರಿಸುತಿದ್ದರು. ಊಟವಾದ ಮೇಲೆ ನಾನು ಬಂದ ಉದ್ದೇಶವನ್ನು ತಿಳಿಸಿದೆ. ‘ಇಷ್ಟು ಬೇಗ ಸಾರಿನ ನೆನಪು ಮಸುಳಿಸಿತೇ?’ ಎಂದರು. ನಾನು ಪೆಚ್ಚಾದೆ. ಅವಿನಾಶಿ ಆತ್ಮವೇ ಎಟರ್ನಲ್ ಟ್ರೂಥ್ ಎಂದು ನಗೆಯಾಡಿದರು. ‘ನಿನ್ನ ಅನುಭವಕ್ಕೆ ಬರದೇ ಇರುವುದನ್ನು ಕುರಿತು ಮತ್ತು ಅದನ್ನು ವಾಸ್ತವವಾಗಿಸಿಕೊಳ್ಳುವ ತನಕ ಮಾತಾಡಬಾರದು!’ ಎಂದರು. ‘ಬೇಕಾದರೆ ಈಗ ನೀನು ತಿಂದ ತಿಳಿಸಾರಿನ ಬಗ್ಗೆ ಮಾತಾಡು. ಸದ್ಯಕೆ ನಮಗೆ ಅದೇ ಎಟರ್ನಲ್ ಟ್ರೂಥ್’ ಎಂದು ನನ್ನ ಬೆನ್ನು ತಟ್ಟಿದರು. ನಾನು ಮಂಕಾಗಿದ್ದನ್ನು ಕಂಡು, ‘ತಮಾಷೆ ಮಾಡಿದೆ, ಗುರುತು ಹಾಕಿಕೋ, ನನಗನಿಸಿದ್ದನ್ನು ಹೇಳುತ್ತಾ ಹೋಗುವೆ’ ಎಂದು ಹುರಿದುಂಬಿಸಿದರು. ಆಗ ಅಂದುಕೊಂಡೆ: ‘ಇವರು ಬದುಕನ್ನು ತಿಳಿಸಾರಿನಂತೆಯೇ ತೆಗೆದುಕೊಂಡಿದ್ದಾರೆ; ಎರಡನ್ನೂ ಎಷ್ಟು ಚೆನ್ನಾಗಿ ಆಸ್ವಾದಿಸುತ್ತಾರೆ!’
-ಡಾ. ಹೆಚ್ ಎನ್ ಮಂಜುರಾಜ್,ಮೈಸೂರು
ದಿಢೀರನೆ ಬರೆದ ಈ ಲೇಖನವನ್ನು ದಿಢೀರನೆ ಪ್ರಕಟಿಸಿದ
ಸುರಹೊನ್ನೆಗೆ ನಾನೆಷ್ಟು ಆಭಾರಿಯಾದರೂ ಸಾಲದು!
ಓದಿದ ಸಹೃದಯರು ತಿಳಿಸಾರು ಊಟ ಮಾಡುವಾಗ ನಾನು
ನೆನಪಾದರೆ ಬರೆಹ ಸಾರ್ಥಕ; ಆ ಮಟ್ಟಿಗೆ ಅರ್ಥಪೂರ್ಣ ಸಾರೋದಕ!!
ಪುಟ್ಟ ಶೀರ್ಷಿಕೆ, ಆಗಾಧ ಮಾಹಿತಿ. ತಿಳಿಸಾರಿನಂತೆಯೇ ಸೊಗಸಾಗಿದೆ.
ಎಂದಿನಂತೆ ಧನ್ಯವಾದಗಳು ನಿಮಗೆ………
‘ಸಾರವತ್ತಾದ’ ಬರಹದ ರಸಾಸ್ವಾದನೆ ಮಾಡಿದೆ! ಅಡುಗೆಗೆ ಸಮಯವಿಲ್ಲದಾಗ, ಮನೆಯಲ್ಲಿ ತರಕಾರಿ ಇಲ್ಲದಿರುವಾಗ, ದಿಢೀರನೆ ಅತಿಥಿಗಳು ಬಂದಾಗ, ಬಾಯಿರುಚಿ ಕೆಟ್ಟಾಗ, ಜ್ವರ ಬಂದಾಗ …..ಹೀಗೆ ಸಕಲ ಸಂದರ್ಭಗಳಿಗೂ ಅತಿ ಸುಲಭವಾಗಿ , ವೈವಿಧ್ಯಮಯವಾಗಿ ಅತಿ ಕಡಿಮೆ ಸಾಮಗ್ರಿ ಬಳಸಿ ತಯಾರಿಸಬಹುದಾದ ಸಾರ್ವಕಾಲಿಕ ಸರಳ ಅಡುಗೆ ತಿಳಿಸಾರು. ಅಬಾಲವೃದ್ಧರಿಗೆ ತಿಳಿಸಾರು ಪ್ರಿಯವಾಗುತ್ತದೆ. ಚಳಿಗಾಲದಲ್ಲಿ ಸೂಪ್ ನಂತೆ ಕುಡಿಯಲೂ ಸೈ. ಬಳಸಿದ ಸಾಮಗ್ರಿಗಳು ತುಸು ಹೆಚ್ಚು-ಕಡಿಮೆ ಆಗಿ ಸ್ವಲ್ಪ ರುಚಿ ಬದಲಾದರೂ, ಸೂಕ್ತವಾಗಿ ಬ್ಯಾಲೆನ್ಸ್ ಮಾಡಿ, ರುಚಿಕೆಡದಂತೆ ‘ರಿಪೇರಿ’ ಮಾಡಬಹುದಾದ ಅಥವಾ ರೂಪಾಂತರಗೊಳಿಸಬಹುದಾದ ಅಡುಗೆ ತಿಳಿಸಾರು. ಇನ್ನು ದೇವಸ್ಥಾನಗಳಲ್ಲಿ ಬಡಿಸುವ ತಿಳಿಸಾರಿನಲ್ಲಿ ‘ಏನೇನೂ ಸಾಮಗ್ರಿ ಇಲ್ಲ’ ಎಂಬಂತೆ ಕಂಡರೂ ದಿವ್ಯವಾದ ರುಚಿ ಇರುತ್ತದೆ ಎಂದು ನನ್ನ ಅನಿಸಿಕೆ.
ಸತ್ಯವಾದ ಮಾತು………ನಿಮ್ಮ ಈ ಮಾತುಗಳಿಂದ ಬರೆಹವು ಅರ್ಥಪೂರ್ಣ ಅಂತ್ಯವನ್ನು ಕಂಡಿದೆ !
ಸದಭಿರುಚಿ ಮತ್ತು ಸಹೃದಯಕೆ ನಾ ಶರಣು.
ನಿಜಕ್ಕೂ ಶೀರ್ಷಿಕೆ ಈ ಲೇಖನಕ್ಕೆ ತುಂಬಾ ಚೆನ್ನಾಗಿ ಒಪ್ಪುತ್ತದೆ. ಲೇಖನ ಓದಿ ಬಾಯಲ್ಲಿ ನೀರೂರಿತು.. ಕೆಲವು ರೆಸಿಪಿಗಳೂ ತಿಳಿಯಿತು..ಲೇಖನ ಸೂಪರ್
ಸಾರ್ ನಿಮ್ಮ ತಿಳಿಸಾರಿನ ಲೇಖನ… ಸೊಗಸಾಗಿ ಅನಾವರಣ ವಾಗಿದೆ ಅದರಲ್ಲಿ ಎರಡು ಮಾತಿಲ್ಲ..ಅದರ ಜೊತೆಗೆ ನನಗೆ ಎಷ್ಟೋ ತಿಳಿಸಾರನ್ನು ಮಾಡುವ ಮಾಹಿತಿ ಸಿಕ್ಕಿ ತು ಅದಕ್ಕಾಗಿ ಧನ್ಯವಾದಗಳು ಮಂಜು ಸಾರ್
ನಿಮಗೂ ಧನ್ಯವಾದ ಮೇಡಂ
Set doose kaichatni bageetisi
ಹೌದು… ಆಬಾಲವೃದ್ಧರಿಗೆ ಪ್ರಿಯವಾದ, ಕೇವಲ ಐದು ನಿಮಿಷಗಳಲ್ಲಿ ಸಿದ್ಧವಾಗುವ, ಕರುಕುರು ಹಪ್ಪಳದೊಂದಿಗೆ ಅತ್ಯುತ್ಕೃಷ್ಟವಾಗಿ ಬೆರೆತುಕೊಳ್ಳುವ ತಿಳಿಸಾರಿನ ಲೇಖನವು ಅಷ್ಟೇ ರುಚಿಕಟ್ಟಾಗಿದೆ!
ನೀವು ಹಪ್ಪಳ, ಸಂಡಿಗೆ ನೆನಪಿಸಿದಿರಿ! ಸಾರಿನ ಸೊರ ಸೊರ ಎಂಬ ಸ್ವರದ ಜೊತೆಗೆ ಈ ಹಪ್ಪಳ-ಸಂಡಿಗೆಗಳ ಸಶಬ್ದಗಳು ಜೊತೆಗೂಡಿದರೆ
ಎಂಥ ಚೆಂದದ ಸಂಗೀತವಲ್ಲವೇ? ಪ್ರತಿಸ್ಪಂದನಕೆ ಧನ್ಯವಾದ ಮೇಡಂ
ತುಸು ದೀರ್ಘವಾಯಿತು. ಇತ್ತೀಚಿನ ದಿನಗಳಲ್ಲಿ ಓದುಗರನ್ನು ತಣಿಸುವುದು ಪುಟ್ಟ ಪುಟ್ಟ ಲೇಖನಗಳು. ಬೇಸರಿಸಬೇಡಿ. ಸೊಗಸಾದ ತಿಳಿಸಾರಿನ ಮಹತ್ವ ಹಾಗೂ ಬಗೆಗಳು ಅದ್ಭುತವಾಗಿ ಮೂಡಿಬಂದಿದೆ.
ಗುರೂಜಿ, ಈ ನಿಮ್ಮ ಲೇಖನ ಓದಿ ತಿಳಿಸಾರು ಉಂಡು ಆನಂದಪಟ್ಟಷ್ಟು ಆನಂದವಾಯಿತು. ಬಹುರೂಪಿ ತಿಳಿಸಾರಿನ ಹಲವಾರು ಬಗೆಗಳ ಬಗ್ಗೆ ತಿಳಿದು ಬಾಯಲ್ಲಿ ನೀರೂರಿತು. ತಿಳಿಸಾರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ವಿಷಯ ಮನದಟ್ಟಾಯಿತು
ತಿಳಿಸಾರು ನನಗೂ ಕೂಡ ತುಂಬಾ ಇಷ್ಟವಾದುದು.
ಅದರ ಸಾರವನ್ನು ತುಂಬಾ ಸ್ವಾರಸ್ಯವಾಗಿ ಬರೆದು ಉಣಬಡಿಸಿದ ತಮಗೆ ಧನ್ಯವಾದಗಳು ಗುರುಗಳೇ.
Sir, ತಿಳಿಸಾರು ನನಗೆ ತುಂಬಾ ಇಷ್ಟವಾದುದು. ತಮ್ಮ ಲೇಖನದ ಮುಖಾಂತರ ಅದನ್ನು ಉಣಬಡಿಸಿದ ತಮಗೆ ಧನ್ಯವಾದಗಳು.