ಕಾದಂಬರಿ : ಕಾಲಗರ್ಭ – ಚರಣ 17

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮೊಮ್ಮಕ್ಕಳನ್ನು ಕಂಡ ನೀಲಕಂಠಪ್ಪ “ಬನ್ನಿ..ಬನ್ನೀ ಚಂದ್ರಾಳೂ ಬಂದಿದ್ದಾಳೆ. ಅಡುಗೆ ಕೆಲಸ ಬೊಗಸೆ ಇರಲಿಲ್ಲವೇನು?” ಎಂದು ಕೇಳಿದರು.

“ಇಲ್ಲದೆ ಏನು ತಾತಾ, ಇವತ್ತು ಅದಕ್ಕೆಲ್ಲ ಚುಟ್ಟಿ” ಎಂದು ಅದಕ್ಕೆ ಕಾರಣ ತಿಳಿಸಿ “ನಿಮ್ಮ ಮುದ್ದಿನ ಮೊಮ್ಮಗಳನ್ನು ಭೇಟಿ ಮಾಡಿಸಲು ಕರೆದುಕೊಂಡು ಬಂದಿದ್ದೇನೆ. ಇನ್ನು ನೀವುಂಟು ನಿಮ್ಮ ಮೊಮ್ಮಗಳುಂಟು” ಎಂದು ಹೇಳುತ್ತಾ “ಅಜ್ಜೀ ನೋಡಿಬನ್ನೀ ಯಾರು ಬಂದಿದ್ದಾರೆ ಅಂತ” ಎಂದು ಹೇಳುತ್ತಾ ಬಸಮ್ಮನವರನ್ನು ಕರೆದಳು.

ಇತ್ತ ನೀಲಕಂಠಪ್ಪನವರು “ಬಾ ಕೂಸೇ,ನೀನಿಲ್ಲದೆ ಮನೆಯೆಲ್ಲ ಬಿಕೋ ಅನ್ನಿಸುತ್ತಿದೆ. ನಾನೇ ನಿನಗೆ ಫೋನ್ ಮಾಡೊಣ ಅಂತಿದ್ದೆ. ನಿಮ್ಮಜ್ಜಿಯ ಆವಾಜಿಗೆ ಹೆದರಿ ತೆಪ್ಪಗೆ ಕೂತಿದ್ದೆ”. ಎಂದರು
“ಏನೆಂದ್ರೀ ನನ್ನ ಆವಾಜಿಗೆ ಹೆದರಿ ! ವ್ಹಾರೆವ್ಹಾ ನಾನು ಆವಾಜ್ ಹಾಕಲಿಲ್ಲಾಂದಿದ್ರೆ..ಭೋಳೆ ಸ್ವಭಾವದ ನಿಮ್ಮನ್ನು ಈ ಕಾಲದ ಜನರು ನೆತ್ತೀಲಿ ಒಂದೂ ಕೂದಲಿಲ್ಲದಂತೆ ಬೋಳಿಸಿಬಿಡುತ್ತಿದ್ದರು. ಹಾಗೇ ಆಸ್ತೀನೂ ಜೊತೆಯಲ್ಲಿ” ಎನ್ನುತ್ತಾ ಒಳಗಿನಿಂದ ಬಂದರು ಬಸಮ್ಮ.

ಹೂಂ..ನಾನಿವರನ್ನು ಹೀಗೇ ಮಾತನಾಡಲು ಬಿಟ್ಟರೆ ಮುಗಿಯದ ಕತೆಯಾಗುತ್ತದೆಂದು ಹೆದರಿದ ದೇವಿ “ಹಾಂ..ಹಾಂ. .ಅದಿರಲಿ, ಏನೇನು ಕಡಿದು ಗುಡ್ಡೆ ಹಾಕಿದಿರಿ? ಇವತ್ತು ನಮ್ಮ ಮಾವನಿಲ್ಲ. ನೀವೂ ಜಮೀನಿನ ಕಡೆ ಹೋಗಲು ರಜೆ ಹಾಕಿದಂತೆ ಕಾಣಿಸುತ್ತೆ.” ಎಂದಳು.

“ಹ್ಹೆ..ಹ್ಹೆ..ಮದುವೆಯ ಸಡಗರ ಸಂಭ್ರಮಗಳಾದ ಮೇಲೆ ಮದುಮಕ್ಕಳಿಗೆ ರಜೆ ಕೊಡುತ್ತೇವೆಂದು ತಮಗೆ ತಾವೇ ಘೋಷಿಸಿಕೊಂಡು ಓಡಾಡಿದ್ದೂ ಓಡಾಡಿದ್ದೇ..ಸುಬ್ಬು ಬಂದು ಶಂಕರನಿಗೆ ಜೋಡಿಯಾಗಿ ನಿಂತನಲ್ಲಾ, ಇವರಿಬ್ಬರೂ ಗೆಳೆಯರು ಯಥಾ ಪ್ರಕಾರ ಪೂಜಾಪಾಠ, ಮಾತುಕತೆ, ಊಟೋಪಚಾರ, ನಿದ್ರೆ ಇತ್ಯಾದಿಗಳಿಗೆ ಮರಳಿದ್ದಾರೆ” ಎಂದು ಅಣಕವಾಡಿದರು ಬಸಮ್ಮನವರು.

“ಕೂಸೇ, ನಿಮ್ಮಜ್ಜಿಗೆ ನನ್ನನ್ನು ಅಂದು ಆಡದಿದ್ದರೆ ದಿನ ಹೋಗುವುದೇ ಇಲ್ಲ ಅನ್ನಿಸುತ್ತದೆ. ಇರಲಿಬಿಡು ನೀನು ಗಂಜಿ ಕುಡಿದೆಯಾ? ಧರ್ಮಸ್ಥಳದಲ್ಲಿ ದೇವರ ದರ್ಶನ ಚೆನ್ನಾಗಿ ಆಯಿತೇ? ಮಹೇಶಪ್ಪನ ಗೆಳೆಯರ ಮನೆಯವರು ಹೇಗಿದ್ದಾರೆ. ಅವರದ್ದೂ ವ್ಯವಸಾಯದ ಕುಟುಂಬವಂತೆ, ತೋಟ. ಹೊಲ. ಗದ್ದೆ ಬಹಳ ವೈನಾಗಿ ಮಾಡಿದ್ದಾರಂತೆ. ಅದಲ್ಲದೆ ಜ್ಯೋತಿಷ್ಯಶಾಸ್ತ್ರ. ಯೋಗ, ವೈದ್ಯಕೀಯ ಏನೇನೋ ಮಾಡುತ್ತಾರಂತೆ, ರಾಮು ಹೇಳಿದ. ಅಚ್ಚುಕಟ್ಟಾಗಿದೆ ಒಳ್ಳೆ ಜನವೆಂದು ತಾರೀಫು ಮಾಡಿದ” ಎಂದರು ನೀಲಕಂಠಪ್ಪ.
“ಹೂಂ..ಎಲ್ಲಾ ಸರಿ, ಹಾರುವರಾಗಿದ್ದುಕೊಂಡು ವ್ಯವಸಾಯ ಮಾಡುತ್ತಾರೆ. ಅದೇ ನನಗೆ ಹೊಸ ವಿಷಯ.” ಎಂದಳು ದೇವಿ.

“ಹ್ಹೆ..ಹ್ಹೆ..ಕೂಸೇ, ಅದರಲ್ಲೇನಿದೆ ಹಿಂದೆ ಒಂದು ಕಾಲದಲ್ಲಿ ಜಾತಿಯಿಂದಲೇ ಇಂಥವರು ಇಂಥಹುದೇ ಕಸುಬು ಮಾಡಬೇಕೆಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಅವರವರ ಆಸಕ್ತಿಮೇಲೆ ರೂಢಿಸಿಕೊಂಡು ಹೋಗುವುದು ಚಾಲ್ತಿಗೆ ಬಂತು. ಈಗ ನಾನು ನನ್ನ ಗೆಳೆಯ ಗಂಗೂನೆ ಉದಾಹರಣೆಗೆ ತೊಗೋ, ತಲೆಮಾರಿನಿಂದ ಗುತ್ತಿಗೆ, ಗೇಣಿಗೆ ಎಂದು ಕೊಟ್ಟಿದ್ದ ಜಮೀನನ್ನು ಬಿಡಿಸಿಕೊಂಡು ನಾವೇ ನೇಗಿಲು ಹಿಡಿದೆವು. ಮಕ್ಕಳ ಕಾಲಕ್ಕಂತೂ ಹೆಚ್ಚು ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ನಮಗಿಂತ ಚೆನ್ನಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಬೇರೆಯವರಿಗೂ ಮಾರ್ಗದರ್ಶಕರಾಗಿದ್ದಾರೆ. ಅದು ನಿನಗೂ ಗೊತ್ತಲ್ವಾ. ಮಹೇಶಪ್ಪನ ಗೆಳೆಯ ಗಣಪತಿ ವ್ಯವಸಾಯದಲ್ಲೇ ತರಬೇತಿ ಪಡೆದವನು ಕೇಳಬೇಕೇ..ಒಬ್ಬನೇ ಮಗನಂತೆ, ಮದುವೆಯಾಗಿಲ್ಲವೆಂದು ರಾಮುವೇ ಹೇಳಿದ. ಕಾರಣವೇನೋ?” ಎಂದರು ನೀಲಕಂಠಪ್ಪ.

ಓ ! ಈ ಪ್ರಾಣಿ ರಾಮು ಚಾಚೂ ತಪ್ಪದೆ ಎಲ್ಲವನ್ನೂ ಒಪ್ಪಿಸಿಬಿಟ್ಟಿದ್ದಾನೆ. ಚಂದ್ರಾ ಹೇಳಿದಂತೆ ಕೆಲವು ಅಂಶಗಳನ್ನು ಮಾತ್ರ ಬಿಟ್ಟಿರಬಹುದು ಅಥವಾ ಅದನ್ನೂ… ಇನ್ನು ಮುಚ್ಚಿಡುವುದರಿಂದ ಏನೂ ಪ್ರಯೊಜನವಿಲ್ಲವೆಂದು ಅಲ್ಲಿಗೆ ಹೋಗಿ ಮರಳಿ ಬರುವವರೆಗೆ ನಡೆದ ಎಲ್ಲಾ ಸಂಗತಿಗಳನ್ನು ಅಜ್ಜಿ ತಾತನ ಮುಂದೆ ಹೇಳಿಬಿಟ್ಟಳು.

ಅವಳು ಹೇಳಿದ್ದನ್ನೆಲ್ಲ ಕೇಳಿಸಿಕೊಂಡ ಬಸಮ್ಮ “ಏ ಪುಟ್ಟೀ, ಆ ಸಿದ್ಧಿಪುರುಷನ ಸಾಧನೆ, ಸಾಮರ್ಥ್ಯ ಅವೆಲ್ಲ ಒತ್ತಟ್ಟಿಗಿರಲಿ. ಅದು ಅವರವರ ಪಾಡು. ಆದರೆ ನಾವು ಏನಾದರೂ ಕತೂಹಲದಿಂದ ಕೇಳಲು ಹೋದೆವೋ ಕೆಟ್ಟೆವೆಂದು ತಿಳಿ. ಕೆದಕಿ ಕೆದಕಿ ನಮ್ಮ ಬಾಯಿಂದಲೇ ಎಲ್ಲವನ್ನು ಕಕ್ಕಿಸಿ ಆನಂತರ ತಲೆಗೊಂದು ಹುಳು ಬಿಡುತ್ತಾರೆ. ಸದ್ಯ ನೀನು ಅವರಲ್ಲಿಗೆ ಹೋಗದೇ ಇದ್ದುದೇ ಒಳ್ಳೆಯದಾಯಿತು.” ಎಂದರು.

ಹುಂ..ನಾನೇನೋ ಹೋಗಲಿಲ್ಲ. ಆದರೆ ನನ್ನ ಪತಿದೇವರು ಕೇಳಲಿಲ್ಲವೆಂದು ಯಾವ ಗ್ಯಾರಂಟಿ? ಮೊದಲೇ ಏನೇನೋ ಅಡೆತಡೆಗಳು. ಆ ಪುಣ್ಯಾತ್ಮನ ತಲೆಯಲ್ಲಿ ಏನೇನು ಓಡುತ್ತಿದೆಯೋ ನಾ ಕಾಣೆ. ಉಪಾಯವಾಗಿ ಬಾಯಿಬಿಡಿಸಬೇಕೆಂದು ಮನಸ್ಸಿನಲ್ಲಿ ಅಂದುಕೊಂಡಳು ದೇವಿ. “ಆ ಸಂಗತಿ ಬಿಡಿ ಅಜ್ಜೀ ಇಷ್ಟೊತ್ತಿಗೆ ಅಡುಗೆ ಮುಗಿದಿರಬೇಕು ಜಮೀನಿನ ಹತ್ತಿರಕ್ಕೆ ಊಟ ತೆಗೆದುಕೊಂಡು ಹೋಗಬೇಕೇನೋ” ಎನ್ನುತ್ತಾ ಎದ್ದಳು.

“ದೇವಿಯಕ್ಕಾ, ಈಗ ಅವೆಲ್ಲಾ ಏನೂ ಇಲ್ಲ. ನಮ್ಮತ್ತೆಯವರು ಅರ್ಥಾತ್ ನಮ್ಮಿಬ್ಬರ ಅತ್ತೆಮ್ಮನವರು ಮದುವೆಯಾದ ಹೆಣ್ಣುಮಕ್ಕಳು ಜಮೀನಿನ ಹತ್ತಿರ ಅಲೆಯುವುದು ಬೇಡ, ಎಲ್ಲರ ಕಣ್ಣೂ ಬೀಳುತ್ತೆ, ಅದಕ್ಕೆ ಯಾವಾಗಲಾದರೂ ಒಮ್ಮೆ ಹೋಗಿಬಂದರಾಯಿತು, ನಾವೆಲ್ಲ ಹೋಗುತ್ತೇವಲ್ಲ ಹಬ್ಬ, ಹರಿದಿನ, ಸುಗ್ಗಿಕಾಲದಲ್ಲಿ, ಶಿವಾಲಯಕ್ಕೆ ಅಂತ ಅಷ್ಟು ಸಾಕು ಎಂದಿದ್ದಾರೆ. ಅದಕ್ಕಾಗಿ ಶಿವನ ದೇವಾಲಯದಲ್ಲಿ ಅರ್ಚಕರಿದ್ದಾರಲ್ಲ ಅವರ ಮನೆಯಲ್ಲಿ ದೂರದ ನೆಂಟನೊಬ್ಬ ಸೇರಿಕೊಂಡಿದ್ದಾನೆ. ಅವನು ಕೆಲಸವೇನೂ ಮಾಡದೆ ಊರಲ್ಲೆಲ್ಲ ಅಂಡಲೆದುಕೊಂಡಿದ್ದಾನೆ ಕಾಶೀನಾಥ ಅಂತ. ಅವನನ್ನು ಖಾಯಮ್ಮಾಗಿ ಈ ಕೆಲಸಕ್ಕೆ ಒಪ್ಪಿಸಿಬಿಟ್ಟಿದ್ದಾರೆ.” ಎಮದು ಹೆಳಿದಳು ಚಂದ್ರಾ.

“ ಓ..ಅಜ್ಜೀ ನಿಮ್ಮ ಗೆಳತಿ ಒಂದು ಕಡೆಯಿಂದ ನಿರ್ಬಂಧ ಹೇರುವ ಹುನ್ನಾರ ಇದರಲ್ಲಿ ಕಾಣುತ್ತಿದೆ. ಹಾಗಾದರೆ ನಾನು ಸಂಘಕಟ್ಟಿ ಏನೇನೋ ಮಾಡಬೇಕೆಂದು ಆಲೋಚಿಸಿದ್ದೆ. ಇದಕ್ಕೆ ಅವರ ಪ್ರತಿಕ್ರಿಯೆ ಹೇಗಿರುತ್ತೋ?” ಎಂದು ಆತಂಕಗೊಂಡಳು ದೇವಿ.
“ಛೇ ಹಾಗೇಕೆ ಅಂದುಕೊಳ್ಳುತ್ತೀ ಪುಟ್ಟಿ ಹೆಣ್ಣುಮಕ್ಕಳು ಬಿಸಿಲು, ಗಾಳಿ ಮಳೆಯಲ್ಲಿ ಅಲೆಯುವುದು ಬೇಡವೆಂದು ಈ ಏರ್ಪಾಡಿರಬಹುದು. ಸ್ವಲ್ಪ ಸಮಯ ಕಳೆಯಲಿ ಬಿಡು. ಆನಂತರ ಸಂದರ್ಭ ನೋಡಿಕೊಂಡು ಮಾತನಾಡುವೆಯಂತೆ’ ಎಂದರು ಬಸಮ್ಮ.

“ ಏನು ಹೀಗೇ ಮಾತನಾಡುತ್ತಾ ಕುಳಿತಿರುತ್ತೀರೋ ಇಲ್ಲ ಊಟಕ್ಕೆ ಬರುತ್ತೀರೋ” ಎಂದೆನ್ನುತ್ತಾ ಒಳಗಿನಿಂದ ಬಂದಳು ಶಾರದೆ.
“ಅಮ್ಮಾ ನೀವು ಇಷ್ಟುಹೊತ್ತು ಒಳಗೇ ಇದ್ದಿರಾ? ಏನು ಮಾಡುತ್ತಿದ್ದಿರಿ?” ಎಂದಳು ದೇವಿ.
“ಹಿತ್ತಲಲ್ಲಿ ಸ್ವಲ್ಪ ಕೆಲಸವಿತ್ತು, ರಂಗ ಬಂದಿದ್ದ, ಆತನಿಂದ ಮಾಡಿಸುತ್ತಿದ್ದೆ. ಈಗೇನು ಊಟಕ್ಕೇಳುತ್ತೀರಾ?” ಎಂದಳು ಶಾರದೆ.
“ಅಯ್ಯಪ್ಪಾ ನಾವೇನಾದರೂ ಇಲ್ಲೇ ಊಟಮಾಡಿದೆವೆಂದರೆ ಮಂಗಳತ್ತೆ ಹಿಟ್ಟಿನ ದೊಣ್ಣೆ ಕೈಗೆ ತೆಗೆದುಕೊಳ್ಳುತ್ತಾರೆ ನಾನು ಮಾಡಿರುವ ಅಡುಗೆ ಏನು ಮಾಡಲಿ ಅಂತ. ಸಂಜೆಗೆ ಬೇಕಾದರೆ ಹೇಳಿ ಬರುತ್ತೇವೆ. ದೇವಿಯಕ್ಕಾ ನಡೆ ಹೋಗೋಣ” ಎಂದು ಮೇಲೆದ್ದಳು ಚಂದ್ರಿಕಾ.

ಅಷ್ಟರಲ್ಲಿ “ಯಾರಿಗೆ ಯಾರೂ ಹೊಡೆಯೋದಿಲ್ಲ, ನಾನೂ ಶಾರದಕ್ಕಾ ಬೆಳಿಗ್ಗೇನೇ ಮಾತಾಡಿಕೊಂಡಿದ್ದೆವು.ಬನ್ನಿ ಎಲ್ಲರೂ ಒಟ್ಟಿಗೆ ಊಟಮಾಡೋಣ” ಎಂದುಕೊಂಡು ಅಲ್ಲಿಗೇ ಬಂದರು ಮಂಗಳಮ್ಮ. ಇಬ್ಬರ ಮನೆಯವರೂ ತಾವುತಾವು ಮಾಡಿದ್ದನ್ನು ಹಂಚಿಕೊಂಡು ಊಟ ಮುಗಿಸಿ ವಿಶ್ರಮಿಸಿಕೊಳ್ಳುವ ಕಾರಣದಿಂದ ಅವರವರ ಮನೆಗೆ ತೆರಳಿದರು. ನೀಲಕಂಠಪ್ಪನವರೂ ವಿಶ್ರಾಂತಿಗೆ ತೆರಳಿದರು.

ಸಂಜೆಗೆ ಜಮೀನಿನಿಂದ ಹಿಂತಿರುಗಿ ಬಂದ ಮಹೇಶ, ಸುಬ್ಬಣ್ಣ ಸ್ನಾನ ಪೂಜೆ ಊಟ ಮುಗಿಸುವಷ್ಟರಲ್ಲಿ ಮೈಸೂರಿಗೆ ಹೋಗಿದ್ದ ಗಂಗಾಧರಪ್ಪ ಪತ್ನಿ ಗೌರಮ್ಮನವರೊಡನೆ ಬಂದಿಳಿದರು. ತಮ್ಮೆಲ್ಲ ಕೆಲಸಗಳನ್ನು ಮುಗಿಸಿದರು. ಹಾಗೇ ಮಗನೊಡನೆ ಸ್ವಲ್ಪ ಮಾತನಾಡಬೇಕೆಂದಾಗ ನಿರ್ವಾಹವಿಲ್ಲದೆ ಮಹೇಶ ಅವರ ಬಳಿ ಕುಳಿತನು. ದೇವಿ ಚಂದ್ರಿಕಾಳ ಜೊತೆಗೂಡಿ ಮನೆಗೆಲಸಗಳನ್ನೆಲ್ಲ ಮುಗಿಸಿ ಮಹೇಶನ ಬರುವಿಗಾಗಿ ಕಾಯ್ದಳು. ಆದರೆ ತಂದೆಮಗನ ವ್ಯವಹಾರದ ಮಾತುಕತೆಗಳು ಮುಗಿಯುವ ಲಕ್ಷಣ ಕಾಣದೆ ಸಾಕಾಗಿ ತಾನೊಬ್ಬಳೇ ರೂಮಿಗೆ ಹೋಗಿ ಮಲಗಿದಳು. ಎಚ್ಚರವಾಗುವಷ್ಟರಲ್ಲಿ ಬೆಳಗಾಗಿತ್ತು. ಪಕ್ಕಕ್ಕೆ ತಿರುಗಿ ನೋಡಿದಳು. ಮಹೇಶನಿನ್ನೂ ನಿದ್ರಾವಸ್ಥೆಯಲ್ಲಿದ್ದುದು ಕಂಡಿತು. ಎಷ್ಟು ಹೊತ್ತಿಗೆ ಬಂದು ಮಲಗಿದರೋ ಪುಣ್ಯಾತ್ಮ ಅಂದುಕೊಂಡಳು. ತನ್ನ ಪ್ರಾತಃವಿಧಿಗಳನ್ನು ಮುಗಿಸಿ ಸ್ನಾನ ಮಾಡಿಯೇ ಕೆಳಗಿಳಿದು ಬಂದಳು.

ಸೊಸೆಯನ್ನು ನೋಡಿದ ಗೌರಮ್ಮ “ಓ ! ದೇವಿ, ಪೂಜೆ ಮುಗಿಸಿ ಬೇಗನೇ ಬಾ, ಮಹೇಶ ಬೆಂಗಳೂರಿಗೆ ಹೊರಟಿದ್ದಾನೆ. ಅದೇನೋ ಅವನು ಓದಿದ ಕಾಲೇಜಿನಲ್ಲಿ ವ್ಯವಸಾಯಕ್ಕೆ ಸಂಬಂಧಪಟ್ಟ ಕಮ್ಮಟವಂತೆ, ಅದ್ಯಾರೋ ನಡೆಸಿಕೊಡಬೇಕಾದವರು ಕೊನೇ ಗಳಿಗೆಯಲ್ಲಿ ಬರಲಿಕ್ಕಾಗದೆಂದು ಹೇಳಿಬಿಟ್ಟರಂತೆ. ಅದಕ್ಕೆ ಕಾಲೇಜಿನವರು ಇವನಿಗೆ ಫೋನ್ ಮಾಡಿ ಜುಲುಮೆ ಮಾಡಿ ಬರಬೇಕೆಂದು ಒಪ್ಪಿಸಿದರಂತೆ. ರಾತ್ರಿಯೇ ಹೇಳಿದ. ಏಕೆ? ನಿನಗೆ ಹೇಳಲಿಲ್ಲವೇನು?” ಎಂದರು.

ಈ ವಿಚಾರವನ್ನೇ ತಿಳಿಯದ ದೇವಿ ತಬ್ಬಿಬ್ಬಾದಳು. ಏನು ಹೇಳುವುದು ಎಂದು ಯೋಚಿಸುವಷ್ಟರಲ್ಲಿ ಮಹಡಿಮೇಲಿನಿಂದ ಕೆಳಗಿಳಿದು ಬಂದ ಮಹೇಶ.
“ಅಮ್ಮಾ ನಾನು ಬಂದಾಗಿನಿಂದ ಒಂದು ನಿಮಿಷವೂ ಪುರುಸೊತ್ತಿಲ್ಲದಂತಾಗಿದೆ. ರಾತ್ರಿ ಬೇರೆ ಮಲಗುವಾಗಲೇ ಬಹಳ ಹೊತ್ತಾಗಿತ್ತು ಮಲಗಿಬಿಟ್ಟೆ” ಎಂದನು. ಹಾಗೇ ದೇವಿಯ ಕಡೆ ತಿರುಗಿ ವಿಷಯ ಹೇಳಿ “ನೀನೂ ಬರುವುದಾದರೆ ಹೊರಡು, ಒಂದುಮೂರುದಿನದ ಕಾರ್ಯಾಗಾರ. ಜೇನುಸಾಕಣೆ, ಸಸಿಗಳನ್ನು ಕಸಿ ಮಾಡುವ ಭಾಗವನ್ನು ನನಗೆ ವಹಿಸಿದ್ದಾರೆ. ನಿನಗೂ ಆಸಕ್ತಿ ಇರುವಂತಹುದೇ” ಎಂದು ಹೇಳಿದ.
ಗಂಡನ ಮಾತುಗಳನ್ನು ಕೇಳಿದ ದೇವಿ ಇವರೇನು ತಿಳಿದುಕೊಂಡಿದ್ದಾರೆ ! ಮದುವೆಯಾದಾಗಿನಿಂದಲೂ ಭಾವನೆಗಳನ್ನು ಬದಿಗಿಟ್ಟು ತಿರುಗಾಡುವ ಗೊಂಬೆಯೇ ನಾನು. ಛೀ..ಗೆಳೆಯನಾಗಿದ್ದಾಗಲೇ ಚೆನ್ನಾಗಿತ್ತು. ಗಂಡನಾದ ಮೇಲೆ ಇವರ ರೀತಿನೀತಿಗಳೇ ಅರ್ಥವಾಗುತ್ತಿಲ್ಲ. ಇವರ ಬತ್ತಳಿಕೆಯಲ್ಲಿ ಇನ್ನೂ ಯಾವ್ಯಾವ ಬಾಣಗಳಿವೆಯೋ? ಮನಸ್ಸು ಭಾರವಾಯಿತು. ಮಾತನ್ನು ಹೊರಡಿಸಲು ನಾಲಿಗೆ ತಡವರಿಸಿತು. ಮಹೇಶ ಮತ್ತೆ ಮತ್ತೆ ಪ್ರಶ್ನಿಸಿದಾಗ ಅತ್ತೆಯ ಮುಂದೆ ತನ್ನ ಅಸಮಾಧಾನವನ್ನು ತೋರಿಸಿಕೊಳ್ಳಬಾರದೆಂದು ಬಹಳ ಕಷ್ಪಪಟ್ಟು “ಇಲ್ಲ ಮಹೀ, ನಾನು ಬರುವುದಿಲ್ಲ. ನೀವು ಹೋಗಿಬನ್ನಿ. ಮೂರುದಿನ ತಾನೇ” ಎಂದವಳೇ ಪೂಜಾಕೋಣೆ ಹೊಕ್ಕಳು.

ಅಳು ಒತ್ತರಿಸಿಕೊಂಡು ಬಂದರು ಅಳಲಾಗದೆ ಯಾಂತ್ರಿಕವಾಗಿ ಪೂಜೆಯನ್ನು ಮುಗಿಸಿದಳು. ಮನಸ್ಸು ತಹಬಂದಿಗೆ ಬರುವವರೆಗೆ ಅಲ್ಲಿಯೇ ಕುಳಿತಿದ್ದು ನಂತರ ಹೊರಬಂದಳು. ಮಹೇಶನಿಂದ ಬಟ್ಟಬರೆ ಜೋಡಿಸಿಟ್ಟುಕೊಡಲು ಮೆಸೇಜ್ ಬಂದರೂ ಅವಳು ಮಹಡಿ ಹತ್ತಿ ಹೋಗಲಿಲ್ಲ. ಕೊನೆಗೆ ಅವನು ಹೊರಡುವಾಗಲೂ ಮೌನವಾಗಿಯೇ ಬೀಳ್ಕೊಟ್ಟಳು.

ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಚಂದ್ರಿಕಾಳಿಗೆ ಏಕೋ ಏನೋ ಇವರಿಬ್ಬರಲ್ಲಿ ಹೊಂದಾಣಿಕೆ ಆದಂತೆ ಕಾಣುತ್ತಿಲ್ಲವೆಂದೆನ್ನಿಸಿತು. ವ್ಯವಸಾಯಗಾರರ ಮನೆಯಲ್ಲಿ ಮುಗಿಯಲಾರದಷ್ಟು ಕೆಲಸ. ಅದರಲ್ಲೂ ಮಹೇಶಣ್ಣನಂತೂ ಹತ್ತು ಜನರಿಗೆ ಬೇಕಾದವನು. ಹೆಚ್ಚು ತಿಳಿದವನು. ಮನೆಯ ಜವಾಬ್ದಾರಿಯ ಜೊತೆಗೆ ಇತರರಿಗೂ ಸಲಹೆ, ಮಾರ್ಗದರ್ಶನ ನೀಡುವವನು. ಅದಕ್ಕಾಗಿ ಓಡಾಟಗಳು ಇದ್ದೇ ಇರುತ್ತೆ. ಇದರಲ್ಲಿ ಹೊಸದೇನೂ ಇಲ್ಲವಲ್ಲ. ಅದು ದೇವಿಯಕ್ಕನಿಗೂ ತಿಳಿದದ್ದೇ. ಮದುವೆಯಾದ ಹೊಸದರಲ್ಲಿ ಗಂಡ ತನ್ನ ಹತ್ತಿರ ಇರಬೇಕೆಂದು ಬಯಸುವುದು ತಪ್ಪೇನಲ್ಲ. ತಾನೂ ಸುಬ್ಬವೂ ಹೊಸ ಮದುವಣಿಗರೇ. ಸುಬ್ಬುವಿಗೂ ಬೆಳಗೂ ಬೈಗೂ ಕೆಲಸವೇ, ಆದರೆ ರಾತ್ರಿ ತಮ್ಮಿಬ್ಬರದ್ದೇ ಸಾಮ್ರಾಜ್ಯ. ಇದರಿಂದ ಎಲ್ಲ ಬೇಸರ ಆಸರಿಕೆಗಳು ಮಾಯವಾಗಿ ಇಷ್ಟು ಬೇಗ ಬೆಳಕರಿಯಿತೇ ಎನ್ನಿಸುವುದುಂಟು. ಬೆಳಗ್ಗೆ ಹೊಸ ಚೈತನ್ಯ, ಹುರುಪು ಬಂದು ಹಿಂದಿನ ಬೇಸರವೆಲ್ಲವನ್ನೂ ಮರೆಯಾಗಿಸಿಬಿಡುತ್ತದೆ. ಸಮಯ ನೋಡಿ ನನಗೆ ತೋಚಿದಂತೆ ಅಕ್ಕನನ್ನು ಸಂತೈಸಬೇಕು ಎಂದುಕೊಂಡಳು. ಹಾಗೇ ಈ ಮಹೇಶಣ್ಣನೂ ಅಷ್ಟೇ ಮೂರುಹೊತ್ತೂ ಅಮ್ಮನ ಸೆರಗನ್ನು ಹಿಡಿದು ಓಡಾಡುವ ಕೂಸಿನಂತೆ ಪ್ರತಿಯೊಂದಕ್ಕೂ ಅಮ್ಮನ ಹಿಂದೆಯೇ..ವಿಷಯವನ್ನು ದೇವಿಯಕ್ಕನಿಗೆ ಮೊದಲೇ ತಿಳಿಸಿದ್ದರೇನಾಗುತ್ತಿತ್ತು. ಬೇಡ ಫೋನ್ ಮಾಡಿ ಮೆಸೇಜ್ ಕೊಡಬಹುದಿತ್ತು. ಕೋಪ ಬಾರದೇ ಇರುತ್ತದೆಯೇ. ಮದುವೆಗೆ ಮುನ್ನ ಸುಬ್ಬು ಹೇಳಿದ್ದ ಮಾತು ಚಂದ್ರಿಕಾಳಿಗೆ ನೆನಪಾಯ್ತು ‘ನೋಡು ಚಂದ್ರಿಕಾ ನಮ್ಮ ದೇವಿಯಕ್ಕ ನೋಡಲಷ್ಟೇ ದಿಟ್ಟೆಯಾಗಿ ಕಾಣಿಸುತ್ತಾಳೆ. ಮನಸ್ಸು ತುಂಬಾ ನಾಜೂಕು’ ಎಂದು. ಪ್ರಾರಂಭದಲ್ಲಿಯೇ ಹೀಗಾದರೆ ಮುಂದೇನು? ಎಂದೆಲ್ಲ ಆಲೋಚಿಸಿದಳು ಚಂದ್ರಿಕಾ.

ಇತ್ತ ದೇವಿಯ ಕೈಗಳು ಕೆಲಸದಲ್ಲಿ ತೊಡಗಿದ್ದರೂ ತಲೆಯಲ್ಲಿ ದೊಂಬರಾಟ ನಡೆಯುತ್ತಿತ್ತು. ಈತನನ್ನು ಆ ಕಾಲೇಜಿನವರೇ ಕರೆದರೋ ಅಥವಾ ತಾವೇ ಹೋಗುತ್ತಿದ್ದಾರೋ? ಒಂದು ಮಾತು, ಒಂದೇ ಒಂದು ಮಾತು. ಮಲಗಿದ್ದರೇನಂತೆ ಎಬ್ಬಿಸಿ ಹೇಳಿದ್ದರೆ..ಬೇಡ, ನನಗೊಂದು ಫೋನ್ ಮೆಸೇಜ್ ಮಾಡಬಹುದಿತ್ತಲ್ಲ. ಎಷ್ಟು ನಯವಾಗಿ ಸಂದರ್ಭವನ್ನು ನಿಭಾಯಿಸುತ್ತಿದ್ದಾರಲ್ಲಾ ಅಬ್ಬಾ ! ಇವರ ನಟನಾಕೌಶಲ್ಯ ಬೆರಗುಗೊಳಿಸುವಂತಿದೆ. ಹೂಂ..ಎಷ್ಟು ವರ್ಷಗಳ ಒಡನಾಟವಿದ್ದರೇನು, ಒಂದೇ ಸೂರಿನಡಿಯಲ್ಲಿ ವಾಸಮಾಡುವಾಗಲೇ ತಿಳಿಯುವುದು ಅವರನ್ನು ನಾವೆಷ್ಟು ಅರ್ಥ ಮಾಡಿಕೊಂಡಿದ್ದೇವೆ ಎಂಬುದು. ನನ್ನ ಆರಾಧ್ಯ ದೈವ, ಅಂತರಂಗದ ಗೆಳೆಯ, ಮನಃಪೂರ್ವಕವಾಗಿಯೇ ಒಪ್ಪಿ ಮದುವೆಯಾದವನು. ಈ ಸಾರಿ ಎಲ್ಲ ಮುಗಿಸಿಕೊಂಡು ಹಿಂದಕ್ಕೆ ಬರಲಿ ಗಟ್ಟಿಸಿ ಕೇಳಿಬಿಡುತ್ತೇನೆ. ಎಲ್ಲರ ಮುಂದೆ ನಾನೇಕೆ ಜೋಲುಮೋರೆ ಹಾಕಿಕೊಂಡು ಎಲ್ಲರ ಕನಿಕರಕ್ಕೆ ಪಾತ್ರಳಾಗಲಿ ಎಂದುಕೊಂಡಳು.

ದೇವಿಯ ಅತ್ತೆ ಗೌರಮ್ಮತಮ್ಮ ಸೊಸೆಯ ಮೌನವನ್ನು ಕಂಡು ಮದುವೆಯಾದ ಹೊಸತಲ್ಲವೇ? ಹೀಗಾಗುವುದು ಸಹಜ, ಕ್ರಮೇಣ ಸರಿಹೋಗಬಹುದು. ಅವಳೇನು ತಿಳಿದುಕೊಳ್ಳಲಾಗದ ದಡ್ಡಿಯೇ ಎಂದುಕೊಂಡರು. ಅಕೆಯ ಮನಸ್ಸನ್ನು ತಿರುಗಿಸಲೋಸುಗ “ದೇವಿ, ಬಾರವ್ವ ಇನ್ನೂ ಊಟಕ್ಕೆ ಟೈಮಾಗಿಲ್ಲ. ಒಂದೆರಡು ಹಾಡುಗಳನ್ನಾದರೂ ಹೇಳು ಕೇಳೋಣ. ಚಂದ್ರಿಕಾ ನೀನೂ ಬಾ, ಸಂಗೀತ ಕಲಿತಿದ್ದೀಯಲ್ಲವ್ವಾ ಬನ್ನಿ ಇಬ್ಬರೂ ಹಾಡಿ, ಆದರೆ ನಾನೂ ಧ್ವನಿ ಕೂಡಿಸುತ್ತೇನೆ.” ಎಂದು ಕರೆದರು. ಅವರ ಆಹ್ವಾನವನ್ನು ನಿರಾಕರಿಸಲಾಗದೆ ದೇವಿ ತನ್ನ ಆಲೋಚನೆಗಳನ್ನು ಬದಿಗಿಟ್ಟು ಬಂದಳು, ಚಂದ್ರಿಕಾಳೂ ಅವಳನ್ನು ಅನುಸರಿಸಿದಳು.

‘ದಯವೇ ಧರ್ಮದ ಮೂಲವಯ್ಯಾ’ಎಂಬ ಬಸವಣ್ಣನವರ ವಚನದಿಂದ ಪ್ರಾರಂಭವಾದ ಅವರಿಬ್ಬರ ಗಾಯನ ‘ಸೋರುತಿಹುದು ಮನೆಯ ಮಾಳಿಗಿ, ಅಜ್ಞಾನದಿಂದ ಸೋರುತಿಹುದು’ ಎಂಬ ಶಿಶುನಾಳ ಷರೀಫರ ಗೀತೆಯೊಂದಿಗೆ ಮುಂದುವರಿಸಿ ‘ರಾಮನಾಮ ಪಾಯಸಕ್ಕೆ ಕೃಷ್ಣ ನಾಮಸಕ್ಕರೆ, ವಿಠಲನಾಮ ತುಪ್ಪವ ಬೆರೆಸಿ ಬಯಿ ಚಪ್ಪರಿಸಿರೋ’ ಎಂಬ ದಾಸರ ಪದ ಇಂಪಾಗಿ ಹೊರ ಹೊಮ್ಮುತ್ತಿರುವಾಗಲೆ ಮಂಗಳಮ್ಮನಿಂದ ಕರೆ ಬಂತು. ಹೀಗೆ ಬೆಳಗಿನ ಬಿಗುವಿನ ವಾತಾವರಣ ಸಡಿಲವಾಗಿ ಒಬ್ಬ್ಬರಿಗೊಬ್ಬರು ಉಪಚರಿಸಿಕೊಳ್ಳುತ್ತ ಊಟವನ್ನು ಮುಗಿಸಿದರು.

ವಿಷಯ ತಿಳಿದ ದೇವಿಯ ಮಾತಾಪಿತೃಗಳು ಮಹೇಶನ ಕಾರುಬಾರಿನ ಬಗ್ಗೆ ಅರಿವಿದ್ದುದರಿಂದ ಸ್ವಾಭಾವಿಕವಾಗಿಯೇ ಅದನ್ನು ಸ್ವೀಕರಿಸಿದರು. ಆದರೆ ದೇವಿಯ ಅಜ್ಜಿ ತಾತ ಮಾತ್ರ ಅವನು ತನ್ನ ಹೆಂಡ್ತಿಯನ್ನು ಜೊತೆಯಲ್ಲೇ ಕರೆದುಕೊಂಡು ಹೋಗಿದ್ದರೆ ಚೆಂದಿತ್ತು ಅಂದುಕೊಂಡರು.ಪಾಪ ಇತ್ತೀಚೆಗೆ ದೇವರಿಗೆಂದು ಹೋಗಿ ಅಲ್ಲಿಂದ ಅವನ ಗೆಳೆಯನ ಮನೆಗೆ ಹೋದರೂ ಅಲ್ಲಿನ ಕಟ್ಟುನಿಟ್ಟಿನ ಪೂಜೆ ಪುನಸ್ಕಾರಗಳ ಕಾಯಾಚರಣೆ, ಆ ಸಂಧರ್ಭದಲ್ಲಿ ದೇವಿಯ ದೈಹಿಕ ಪರಿಸ್ಥಿತಿ, ಹಿಂದಿರುಗಿ ಬಂದಿನ್ನೂ ಎರಡು ದಿನವೂ ಆಗಿಲ್ಲ. ಹೀಗಾಯಿತಲ್ಲ ! ಹೊಲಮನೆ ಕೆಲಸಗಳನ್ನು ಮಾಡಿಕೊಂಡು ಚಿಗರೆಯಂತೆ ಓಡಾಡಿಕೊಂಡಿದ್ದ ಹುಡುಗಿಗೆ ಕಾಲುಕಟ್ಟಿದ ಹಾಗಾಯಿತು. ಅಡುಗೆ ಮನೆಯಲ್ಲಿ ಕೆಲಸ ಇನ್ನೆಷ್ಟಿದ್ದೀತು? ಮಹೇಶ, ಗೌರಮ್ಮ, ಗಂಗಾಧರಪ್ಪನವರಿಗೆ ಸನ್ನಿವೇಶವನ್ನು ವಿವರಿಸಿ ದೇವಿಯು ಮಾಡಬೇಕೆಂದಿದ್ದ ಸಂಘದ ಕೆಲಸವನ್ನು ಪ್ರಾರಂಭಿಸಲು ಒಪ್ಪುವಂತೆ ಮಾಡಬೇಕು ಎಂದುಕೊಂಡರು.

ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ:   https://www.surahonne.com/?p=40817
(ಮುಂದುವರಿಯುವುದು)

ಬಿ.ಆರ್.ನಾಗರತ್ನ, ಮೈಸೂರು

7 Responses

  1. ಪ್ರಕಟಣೆಗಾಗಿ ಗೆಳತಿ ಹೇಮಾರವರಿಗೆ ಧನ್ಯವಾದಗಳು

  2. ನಯನ ಬಜಕೂಡ್ಲು says:

    ಎಂದಿನಂತೆ ಸೊಗಸಾಗಿದೆ

  3. ಶಂಕರಿ ಶರ್ಮ says:

    ದೇವಿಯು ತನ್ನ ಪತಿಯ ಬಗ್ಗೆ ಅಸಹನೆಗೊಂಡದ್ದು ಸಹಜವೇ ಹೌದು. ಬಹಳ ಕುತೂಹಲಕಾರಿಯಾಗಿದೆ ಕಾಲಗರ್ಭದ ಕಥಾಹಂದರ…ಧನ್ಯವಾದಗಳು ನಾಗರತ್ನ ಮೇಡಂ.

  4. S.sudha says:

    ಕುತೂಹಲ ಹುಟ್ಟಿಸುವ ಕೆಲಸ ನಿಮ್ಮದು..
    ಆಗಲಿ

  5. ಧನ್ಯವಾದಗಳು ಸುಧಾ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: