ಕಾದಂಬರಿ : ಕಾಲಗರ್ಭ – ಚರಣ 16
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ಅವ್ಯಾವುದೂ ಅಲ್ಲ. ಗುರುಗಳ ಪೂಜೆಗೆ ಅಣಿಮಾಡುವುದು, ಅಡುಗೆ ಇತ್ಯಾದಿಗಳಿಗೆಲ್ಲ ಅವರ ಸಿಬ್ಬಂದಿಯೇ ಇದೆ. ಅವರ ಹೊರತು ಬೇರೆ ಯಾರೂ ಅಡುಗೆ ಮಾಡಿದರೂ ಊಟಮಾಡುವುದಿಲ್ಲ. ಅವರು ಎಲ್ಲಿಗೇ ಹೋಗಲಿ, ಎಷ್ಟೇ ದಿನ ತಂಗಲಿ, ಅವರೆಲ್ಲರನ್ನು ತಮ್ಮ ಜೊತೆಯಲ್ಲಿಯೇ ಕರೆತರುತ್ತಾರೆ. ಪೂಜೆಪುನಸ್ಕಾರಗಳಲ್ಲಿ ಎಷ್ಟು ನೇಮನಿಷ್ಠೆಯೋ ಹಾಗೇ ಊಟ ತಿಂಡಿಗಳ ಸೇವನೆಯಲ್ಲಿಯೂ ಕಟ್ಟುನಿಟ್ಟು. ಮನೆಯವರು ಯಾರೂ ಅವರ ಬಳಿಗೆ ಬರಬೇಕೆಂದು ಬಲವಂತ ಮಾಡುವುದಿಲ್ಲ. ನಿಮಗೆ ನಾನು ಹಿಂದೆಯೇ ಹೇಳಿದ್ದೆನಲ್ಲ, ನಾನವರನ್ನು ಒಮ್ಮೆ ಮಾತ್ರ ನೋಡಿದ್ದಷ್ಟೇ. ಸತ್ಯ ಹೇಳಬೇಕೆಂದರೆ ನನಗೆ ಇವುಗಳಲ್ಲಿ ಆಸಕ್ತಿಯಿಲ್ಲ. ನಾನು ಮಾಡಿದ ಕರ್ಮ ನಾನು ಅನುಭವಿಸುತ್ತಿದ್ದೇನೆ, ಹೊಸದಾಗಿ ಹೇಳುವುದೇನಿದೆ. ಭಗವಂತನಲ್ಲಿ ನಾನು ಕೇಳುವುದಿಷ್ಟೇ, ನೀನೇ ಕೊಟ್ಟ ಜೀವವನ್ನು ನಿನ್ನೆಡಗೆ ಬರುವವರೆಗೂ ಕಷ್ಟಸುಖ ಎಲ್ಲವನ್ನೂ ನಿಭಾಯಿಸುವ ಶಕ್ತಿಯನ್ನು ಕೊಡು ಎಂದು. ಬಿಡಿ ನನ್ನ ಪುರಾಣಕ್ಕೆ ಕೊನೆಮೊದಲಿಲ್ಲ. ಗುರುಗಳು ಬಂದು ಹೋಗುವವರೆಗೂ ಮನೆಯವರೆಲ್ಲರೂ ಅಲ್ಲಿಯೇ ಇರುತ್ತಾರೆ. ರಾತ್ರಿ ಮಲಗಲು ಬರುತ್ತಾರೆ. ಬೆಳಗ್ಗೆ ಎದ್ದು ಸ್ನಾನ ಮುಗಿಸಿ ಮತ್ತೆ ಅಲ್ಲಿಗೆ ಹೋಗುವುದಷ್ಟೇ. ಎಲ್ಲರೂ ಯೋಗಶಾಲೆ, ಜ್ಯೋತಿಷ್ಯಶಾಲೆಯಲ್ಲೇ ಕಾರ್ಯಕ್ರಮ ನಡೆಸುವುದು. ಮನೆಯೊಳಗೇನೂ ನಡೆಸುವುದಿಲ್ಲ.” ಎಂದಳು ತಾಯಮ್ಮ.
“ಹೌದೇ ! ಹಾಗಾದರೆ ಆ ಗುರುಗಳ ಹೆಸರೇನು?” ಕೇಳಿದಳು ದೇವಿ.
“ರುದ್ರಮುನಿಗಳು ಎಂದು, ಸುತ್ತಮುತ್ತಲಿನವರು ಅವರನ್ನು ಮುನಿಸ್ವಾಮಿಗಳು ಎಂದು ಕರೆಯುತ್ತಾರೆ. ಅವರು ಶೀಘ್ರಕೋಪಿಗಳು ನಿಜ, ಆದರೆ ಯಾರಾದರೂ ಏನಾದರು ಕೇಳಬೇಕೆಂದರೆ ಅದನ್ನು ಯಾರ ಮುಂದೆಯೂ ಹೇಳುವುದಾಗಲೀ, ಗೇಲಿ ಮಾಡುವುದಾಗಲಿ ಮಾಡುವಂತಿಲ್ಲ. ಅವರೊಬ್ಬರೇ ಹೋಗಿ ಕೇಳಿ ಪರಿಹಾರ ತಿಳಿಯಬೇಕು. ಗೋಪ್ಯ ಕಾಯುತ್ತಾರಮ್ಮ. ಕೇಳಿಕೊಂಡವರು ಇನ್ನೊಬ್ಬರ ಹತ್ತಿರ ಹೇಳಿಕೊಂಡರಷ್ಟೇ ತಿಳಿಯುವುದು, ಇಲ್ಲದಿದ್ದರೆ ಇಲ್ಲ.” ಹೀಗೆ ಹೇಳುತ್ತಲೇ ದೇವಿಗೆ ಮಲಗಲು ಅಣಿಮಾಡಿಕೊಟ್ಟು ತಾನೂ ಅಲ್ಲಿಯೇ ಸ್ವಲ್ಪ ದೂರದಲ್ಲಿ ಚಾಪೆಯೊಂದನ್ನು ಹಾಸಿಕೊಂಡು, ಅದರ ಮೆಲೆ ಕೆಲವು ಕೌದಿಗಳನ್ನು ಹಾಕಿ ಮಲಗಲು ಸಿದ್ಧಪಡಿಸಿಕೊಂಡಳು. ಬಾಗಿಲು ಭದ್ರಪಡಿಸಿ ಲೈಟಾರಿಸಿ ಸಂಜೆಯೆ ಹಚ್ಚಿಟ್ಟಿದ್ದ ದೀಪವನ್ನು ಮೂಲೆಯಲ್ಲಿರಿಸಿ “ಏನಾದರೂ ಬೇಕಿದ್ದರೆ ಕೂಗಿ ಅಮ್ಮ” ಎಂದು ಹೇಳಿ ಮಲಗಿದಳು ತಾಯಮ್ಮ.
‘ನೀನೇ ಕೊಟ್ಟ ಜೀವ, ನಿನ್ನೆಡೆಗೆ ಬರುವವರೆಗೂ ಕಷ್ಟಸುಖಗಳನ್ನು ನಿಭಾಯಿಸಿಕೊಂಡು ಹೋಗುವ ಶಕ್ತಿ ಕೊಡು ಭಗವಂತಾ’ಎಷ್ಟು ಅರ್ಥಪೂರ್ಣವಾದ ಅಂತರಾಳದ ಮಾತುಗಳು ! ಸಾಮಾನ್ಯ ಮಹಿಳೆಯ ಬಾಯಿಂದ, ಆದರೆ ಇದವಳ ಅನುಭವದ ಅಭಿವ್ಯಕ್ತಿ. ಅದನ್ನೇ ಮೆಲುಕು ಹಾಕುತ್ತಾ ದೇವಿಯೂ ನಿದ್ರಾದೇವಿಯ ತೆಕ್ಕೆಯೊಳಗೆ ಸೇರಿಕೊಂಡಳು.
ಸುಶ್ರಾವ್ಯವಾದ ಗಾನವೊಂದು ದೇವಿಯನ್ನು ಬಡಿದೆಬ್ಬಿಸಿತು. ಹಾಗೇ ಮಲಗಿದ್ದಲ್ಲಿಂದಲೇ ಯೊಚಿಸಿದವಳಿಗೆ ಹಿಂದಿನ ರಾತ್ರಿ ತಾಯಮ್ಮ ಹೇಳಿದ ಸಂಗತಿಗಳೆಲ್ಲ ನೆನಪಿಗೆ ಬಂದವು. ಪಕ್ಕದಲ್ಲೆ ಇದ್ದ ಮೊಬೈಲ್ ತೆಗೆದು ಸಮಯವೆಷ್ಟೆಂದು ಕಣ್ಣಾಡಿಸಿದಳು. ಬೆಳಗಿನ ಆರೂವರೆ. ಇಷ್ಟುಹೊತ್ತಿಗೆ ಪೂಜೆ ಪ್ರಾರಂಭವಾಗಿರಬಹುದು, ಮನೆಯವರೆಲ್ಲ ಅಲ್ಲಿಗೆ ಹೋಗಿರಬಹುದು. ಹಾಡನ್ನು ಯಾರು ಹಾಡುವವರು? ಹೀಗೇ ಆಲೋಚಿಸುತ್ತಿರುವಾಗಲೆ ಆ ಧ್ವನಿ ಸಮೀಪಕ್ಕೆ ಬಂದಂತಾಯಿತು. ಸೂಕ್ಷ್ಮವಾಗಿ ಆಲಿಸಿದಾಗ ಅಲ್ಲೇ ಹೊರಗಿನ ರೂಮಿನಿಂದ ಎಂದರಿತು ತಡಮಾಡದೇ ತಾಯಮ್ಮಾ ಎಂದು ಕೂಗಿದಳು.
“ಅಮ್ಮಾ ಕರೆದಿರಾ? ಎಚ್ಚರವಾಯಿತೇ?” ಎಂದು ದೇವಿಯು ಮಲಗಿದ್ದ ರೂಮಿನೊಳಕ್ಕೆ ಇಣುಕಿದಳು ತಾಯಮ್ಮ.
“ಈಗ ಹಾಡಿದ್ದು ನೀವೇ ಎಂದಾಯಿತು. ಎಷ್ಟು ಚೆನ್ನಾಗಿ ಹಾಡುತ್ತೀರಿ ತಾಯಮ್ಮ. ಕೇಳೋಜಾಣಾ, ಶಿವಧ್ಯಾನವ ಮಾಡಣ್ಣಾ, ನಿನ್ನೊಳಗೆ ನೀನು ತಿಳಿದು ನೋಡಣ್ಣಾ. ಎಷ್ಟು ಅರ್ಥಪೂರ್ಣವಾಗಿದೆ. ಇದನ್ನು ಬರೆದವರು ಯಾರು ಗೊತ್ತೇ?” ಎಂದು ಕೇಳಿದಳು ದೇವಿ.
“ಹೌದಮ್ಮಾ ಶಿಶುನಾಳ ಷರೀಫರು. ನನಗೆ ಅವರ ಪದಗಳೆಂದರೆ ಬಹಳ ಇಷ್ಟ. ನೆನ್ನೆ ನೀವೂ ಅದನ್ನೇ ಕ್ಯಾಸೆಟ್ ಹಾಕಿ ಕೇಳುತ್ತಿದ್ದಿರಲ್ಲಾ” ಎಂದಳು ತಾಯಮ್ಮ.
“ಹೌದು ನನಗೂ ತತ್ವಪದಗಳು, ದಾಸರಪದಗಳು, ವಚನಗಳು, ಭಾವಗೀತೆಗಳು, ಜನಪದ ಹಾಡುಗಳು ಎಲ್ಲವೂ ಬಹಳಾ ಇಷ್ಟ. ನೀವು ಸಂಗೀತ ತರಗತಿಗೆ ಹೋಗಿ ಕಲಿತಿದ್ದೀರಾ? ಅಥವ ಹಾಗೇ ಬಾಯಿಂದ ಬಾಯಿಗೆ ಕೇಳಿ ಕಲಿತುಕೊಂಡಿರಾ?” ಪ್ರಶ್ನಿಸಿದಳು ದೇವಿ.
“ಹ್ಹೆ..ಹ್ಹೆ..ನಾನು ಯಾವ ತರಗತಿಗೂ ಹೋಗಿಲ್ಲಮ್ಮ. ನಮ್ಮ ತಾಯಿಯೇ ನನಗೆ ಗುರು. ಆಕೆ ಬಹಳಾ ಶೃತಿಬದ್ಧವಾಗಿ ಹಾಡ್ತಾರೆ. ಅವರಿಂದಲೇ ನಾನು ಅಷ್ಟೋ ಇಷ್ಟೋ ಕಲಿತಿದ್ದು. ಅದೇನೋ ಹೇಳ್ತಾರಲ್ಲಾ ಹಾಡ್ತಾ ಹಾಡ್ತಾ ರಾಗ, ನರಳ್ತಾ ನರಳ್ತಾ ರೋಗ ಅಂತ ಹಾಗೇ ಹಾಡಿಹಾಡಿ ಇಷ್ಟರಮಟ್ಟಿಗೆ ಬಂದಿದೆ. ನಿದ್ರೆ ಚೆನ್ನಾಗಿ ಬಂತೆ? ಏಳುವುದಿದ್ದರೆ ಏಳಿ, ನಿಮ್ಮ ಕೆಲಸಗಳನ್ನೆಲ್ಲ ಮುಗಿಸಿ. ಬಿಸಿಬಿಸಿ ಇಡ್ಲಿಚಟ್ನಿ, ಕಾಫಿ ಮಾಡಿ ತರುತ್ತೇನೆ ಆಗಬಹುದೇ?” ಎಂದಳು ತಾಯಮ್ಮ.
“ಬೇಡಿ ತಾಯಮ್ಮ, ಏನು ವ್ಯವಸ್ಥೆ ಇದೆಯೋ ಅದರಂತೆಯೇ ಇರಲಿ.” ಎಂದುಹೇಳಿ ಮಲಗಿದ್ದಲ್ಲಿಂದೆದ್ದು ಹಾಸಿದ, ಹೊದ್ದಿದ್ದ ಕೌದಿಗಳನ್ನು ಮಡಿಸಿಟ್ಟು ಬಾತ್‌ರೂಮಿಗೆ ಹೋದಳು ದೇವಿ. ಸ್ನಾನ ಮುಗಿಸಿ ಬಟ್ಟೆಗಳನ್ನು ಮಡಿಮಾಡಿ ಒಣಹಾಕುವುದರೊಳಗೆ ತಾಯಮ್ಮನ ಆಗಮನವಾಯಿತು. ಇಬ್ಬರೂ ಕುಳಿತು ತಿಂಡಿ ತಿಂದು ಕಾಫಿ ಸೇವನೆ ಮಾಡಿದರು. ತಮ್ಮ ಮನೆಯಲ್ಲಿನ ಬೆಳಗಿನ ಉಪಾಹಾರದ ಬಗ್ಗೆ ತಾಯಮ್ಮನಿಗೆ ಹೇಳುತ್ತಾ ಗಂಜಿ ಅಥವಾ ಕಷಾಯ ಮಾತ್ರ. ಯಾರಾದರು ಬಂದಾಗ, ಎಲ್ಲಿಗಾದರೂ ಹೋಗುವಾಗ, ಹಬ್ಬಹರಿದಿನಗಳಲ್ಲಿ ಮಾತ್ರ ತಿಂಡಿಗಳನ್ನು ಮಾಡುವ ಪದ್ಧತಿ ಇದೆಯೆಂದು ಹೇಳಿದಳು ದೇವಿ.
ತಾಯಮ್ಮನಿಗೆ ಪೂಜೆಪುನಸ್ಕಾರಗಳ ಬಗ್ಗೆ ಹೆಚ್ಚು ಆಸಕ್ತಿ ಇಲ್ಲವೆಂದರಿತ ದೇವಿ ಬೇರೆ ರೀತಿಯ ಮಾತುಕತೆಗಳು, ಒಂದಷ್ಟು ಹಾಡು ಹಸೆ, ಸ್ವಲ್ಪ ಓದು ಹೀಗೇ ಕಾಲಕಳೆಯುತ್ತಾ ಎರಡು ರಾತ್ರಿ, ಎರಡು ಹಗಲು ತಳ್ಳಿದಳು. ಈ ಅಂತರದಲ್ಲಿ ಮಹೇಶನಿಂದ ಪೋನ್ ಬಂದಿತ್ತಾದರೂ ಅದರಲ್ಲಿ ಪೂಜೆಯ ವರ್ಣನೆ, ಗುರುಗಳ ವಿದ್ವತ್ ಬಗ್ಗೆ, ಅಲ್ಲಿಗೆ ಆಗಮಿಸಿದ್ದವರ ಆಸಕ್ತಿ, ಅವೆಲ್ಲವುಗಳಿಂದ ವಂಚಿತಳಾದ ದೇವಿಯ ಕಡೆಗೆ ಅನುಕಂಪ. ಇತ್ಯಾದಿ.ಇತ್ಯಾದಿ. ಅವುಗಳಿಗೆಲ್ಲ ಉತ್ತರ ನೀಡುವ ಗೋಜಿಗೆ ಹೋಗದೆ ಸುಮ್ಮನಾಗಿದ್ದಳು. ಮಿಗಿಲಾಗಿ ಗಣಪನ ತಾಯಿಯಿಂದ ಯೋಗಕ್ಷೇಮದ ವಿಚಾರಣೆ ಅವಳಿಗೆ ಮುದ ಕೊಟ್ಟಿತ್ತು. ಹಾಗೇ ಆಯಾಯ ದಿನದ ಪೂಜೆಗೆ ತಕ್ಕಂತೆ ಸಂಪ್ರದಾಯದ ವ್ಯಂಜನಗಳ ಊಟಗಳಿದ್ದವು. ದೇವಿ ಹೆಚ್ಚು ಹೇಳಿಸಿಕೊಳ್ಳದೆ ರೀತಿನೀತಿಗಳನ್ನು ಪ್ರಶ್ನಿಸದೆ ತನಗೆಷ್ಟು ಬೇಕೋ ಅಷ್ಟು ತಿಂದು ಮುಗಿಸುತ್ತಿದ್ದಳು. ರಾತ್ರಿಯಂತೂ ಹಣ್ಣು ಹಾಲಿಗೆ ಸೀಮಿತಗೊಳಿಸಿಕೊಂಡು ಬಿಟ್ಟಿದ್ದಳು. ಎಲ್ಲಾ ಆಲೋಚನೆಗಳನ್ನು ಪಕ್ಕಕ್ಕೆ ಇಟ್ಟಿದ್ದರಿಂದ ನಿದ್ರೆಗೆಂದೂ ಕೊರತೆಯಾಗಲಿಲ್ಲ. ಊರಿನಿಂದ ಫೋನ್, ಯಥಾರೀತಿಯ ಮಾತುಕತೆಗಳು. ಪೂಜಾಪಾಠದ ಬಗ್ಗೆ ಯಾರೊಬ್ಬರೂ ಪ್ರಶ್ನಿಸದೆ ಇದ್ದುದರ ಹಿನ್ನೆಲೆೆ ದೇವಿಗೆ ಗೊತ್ತಿದ್ದರಿಂದ ತಾನಾಗಿಯೇ ಯಾವ ವಿಷಯವನ್ನು ಹಂಚಿಕೊಳ್ಳಲಿಲ್ಲ. ಏಕೆಂದರೆ ಮಹೇಶ ನನ್ನ ಸಂಗತಿಯನ್ನು ಹೇಳಬೇಡವೆಂದಿದ್ದರೋ ಹಾಗೇ ಪೂಜಾವಿಷಯ, ಗುರುಗಳ ವಿಷಯ ಬಹಿರಂಗಪಡಿಸಬೆಡ ಎಂದಿದ್ದರು. ಎಲ್ಲರಿಗಿಂತ ಅವರ ತಾಯಿಯ ಅರ್ಥಾತ್ ತನ್ನ ಅತ್ತೆಯ ನಿಲುವೇನಾಗಬಹುದೆಂದು ಆಲೋಚನೆ ..ಹುಂ..
ಗುರುಗಳೆಲ್ಲ ಕಾರ್ಯಗಳನ್ನು ಮುಗಿಸಿ ಅವರು ಮರಳಿದ ಮೇಲೆಯೇ ದೇವಿಗೆ ಕೆಳಗಿಳಿದು ಓಡಾಡುವ ಸ್ವಾತಂತ್ರ್ಯ ಸಿಕ್ಕಿದ್ದು. ಈ ಎಲ್ಲಾ ವಿದ್ಯಮಾನಗಳಿಂದ ಗಣಪನ ಮನೆಯವರು, ಅವರ ಗುರುಗಳು ಶಿವನ ಆರಾಧಕರೆಂಬ ಸಂಗತಿ ಮನದಟ್ಟಾಯಿತು. ಮತ್ತೊಂದು ದಿವಸ ಅಲ್ಲಿದ್ದು ತೋಟದ ಸುತ್ತಮುತ್ತಲಿನ ಜಾಗಗಳಲ್ಲೆಲ್ಲ ಅಡ್ಡಾಡಿ ಅವರಿತ್ತ ಆತಿಥ್ಯಕ್ಕೆ ಕೃತಜ್ಞತೆ ಸಲ್ಲಿಸಿ ಅವರನ್ನು ತಮ್ಮೂರಿಗೆ ಆಹ್ವಾನಿಸಿದ ದಂಪತಿಗಳು ತಮ್ಮ ಊರಿನ ದಾರಿ ಹಿಡಿದರು. ದಾರಿಯುದ್ದಕ್ಕೂ ಪೂಜೆ, ಗುರುಗಳ ಬಗ್ಗೆಯೇ ಮಾತುಕತೆಗಳು. ದೇವಿಗೆ ಇವೆಲ್ಲಾ ತುಂಬಾ ಅತಿಯೆನ್ನಿಸಿತು. ಆದರೆ ಮಾರುತ್ತರ ಕೊಡದೆ ಮೌನಕ್ಕೆ ಶರಣಾಗಿದ್ದಳು.
ದೇವಿ ಮಹೇಶರ ಆಗಮನವಾದಾಗ ಎರಡೂ ಮನೆಯವರು ಅತ್ಯಂತ ಆತ್ಮೀಯತೆಯಿಂದ ಸ್ವಾಗತಿಸಿದರು. ಊಟ ಉಪಚಾರಗಳೆಲ್ಲ ಮುಗಿದ ಮೇಲೆ ಚಂದ್ರಾ “ಅಕ್ಕಾ ಪ್ರವಾಸ ಚೆನ್ನಾಗಿತ್ತಾ? ಮಹೇಶಣ್ಣನ ಗೆಳೆಯರ ಮನೆಗೆ ಹೋಗಿದ್ದಿರಂತೆ? ಅಲ್ಲಿ ಯಾರೋ ಮಹಿಮಾ ಪುರುಷರು ಬಂದಿದ್ದು ಪೂಜೆ ಪುನಸ್ಕಾರಗಳೆಲ್ಲ ಅದ್ದೂರಿಯಾಗಿತ್ತೆಂದು, ನೀನು ಅದರಲ್ಲಿ ಭಾಗವಹಿಸಲಾಗದ್ದಕ್ಕೆ ಪೇಚಾಡಿಕೊಂಡ ಡ್ರೈವರ್ ರಾಮು. ಅದೆಲ್ಲ ಕೇಳಿದ ದೇವಿ ತಾನು ಫೋನ್ ಮಾಡಿದಾಗ ಅದರ ಬಗ್ಗೆ ಇಲ್ಲಿಯವರಿಗಾಗಲೀ, ಆ ಮನೆಯವರಿಗಾಗಲೀ ಯಾರಿಗೂ ಹೇಳದೆ ಇದ್ದದ್ದು ಗಮನಕ್ಕೆ ಬಂತು.” ತಕ್ಷಣ ಅವಳಿಗೆ ಈ ಸಂಗತಿಯನ್ನು ಡಂಗೂರ ಸಾರಬೇಡವೆಂದು ತಾಕೀತು ಮಾಡಿದಳು ದೇವಿ.
“ಹೂಂ ನಾವಿಬ್ಬರೂ ಎಂಥಹ ಅಮಾಯಕರು ನಮ್ಮ ಜೊತೆಯಲ್ಲಿ ಸಾರಥಿ ಒಬ್ಬ ಬಂದಿದ್ದ ಎಂಬ ವಿಷಯವನ್ನು ಮರೆತೇಬಿಟ್ಟೆವು. ಅವನು ಎಲ್ಲವನ್ನೂ ಇಲ್ಲಿ ಬಂದು ಒದರಿಬಿಟ್ಟಿದ್ದಾನೆ. ಪುಣ್ಯಕ್ಕೆ ಚಂದ್ರಾಳಿAದ ಮಾತುಬಂದಾಗ ನಿಧಾನವಾಗಿ ನಾನೇ ತಿಳಿಸಿಬಿಡಬೇಕು. ಪೋನ್ ಮಾಡಿದಾಗ ಹೇಳಲಿಲ್ಲ ಏಕೆ ಎಂಬುದಕ್ಕೆ ಏನಾದರೂ ಸಬೂಬು ಹೇಳಬೇಕು” ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡಳು. ಬಹಿರಂಗವಾಗಿ “ಹೂಂ ಚಂದ್ರಾ ಇನ್ನೂ ಟೈಮಿತ್ತು. ಆದರೆ ಅಲ್ಲೆಲ್ಲ ತುಂಬ ಓಡಾಡಿದ್ದರಿಂದ ಆಯಾಸವಾಗಿ ಹಾಗಾಗಿರಬೇಕು. ಪೂಜೇ ಬೇರೆ ಇತ್ತಲ್ಲ. ಅದೂ ಇದೂ ಹೇಳಿದರೆ ಅತ್ತೆಯ ಪ್ರಶ್ನೆಗಳಿಗೆ ಹೆದರಿ ಮುಚ್ಚಿಟ್ಟೆವು. ಈಗ ಸಮಯನೋಡಿ ಹೇಳುತ್ತೇನೆ. ಸದ್ಯಕ್ಕೆ ನಮ್ಮನ್ನು ಬಚಾವು ಮಾಡಿದ್ದಕ್ಕೆ ನಿನಗೆ ಥ್ಯಾಂಕ್ಸ್.” ಎಂದಳು.
“ಇದಕ್ಕೆಲ್ಲ ಥ್ಯಾಂಕ್ಸ್ ಏಕೆ, ಮಹೇಶಣ್ಣನ ಗೆಳೆಯರ ಮನೆಯವರು ಬಹಳ ಸಂಪ್ರದಾಯಸ್ಥರು. ಅವರು ಯಾವ ಪಂಗಡದವರು?” ಕೇಳಿದಳು ಚಂದ್ರಾ.
“ಅಯ್ಯೋ ಹೌದು ಚಂದ್ರಾ, ಜಾಲಿಯಾಗಿ ಒಂದೆರಡು ದಿನ ಸುತ್ತಾಡಿಕೊಂಡು ಬರಬಹುದು ಎಂದುಕೊಂಡಿದ್ದವಳಿಗೆ ಕೋಣೆಯೊಳಗಿನ ದಿಗ್ಭಂಧನವಾಗಿತ್ತು. ಅವರೂ ಬ್ರಾಹ್ಮಣರೇ, ಆದರೆ ಸ್ಮಾರ್ಥರಿರಬೇಕು. ಶಿವ ಪೂಜೆ ಮಾಡುತ್ತಾರೆ. ನಾನು ಹೆಚ್ಚು ಕೆದಕಲು ಹೋಗಲಿಲ್ಲ. ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಿದ್ದರು” ಎಂದು ಹೇಳಿ ಅಲ್ಲಿದ್ದ ತಾಯಮ್ಮನ ವಿಷಯ ತಿಳಿಸಿ ಅವಳೊಡನೆ ಕಾಲಕಳೆದ ಬಗೆಯನ್ನು ವಿವರಿಸಿ ಅವಳಿಲ್ಲದಿದ್ದರೆ ನನ್ನ ಸ್ಥಿತಿ ಊಹಿಸಿಕೊಳ್ಳಲೂ ಆಗುತ್ತಿರಲಿಲ್ಲವೆಂದು ಹೇಳಿದಳು ದೇವಿ.
ಹೀಗೇ ಒಬ್ಬರಿಗೊಬ್ಬರು ಮಾತನಾಡುತ್ತಾ ಖಾಲಿಯಾಗಿದ್ದ ಪಾತ್ರೆಗಳನ್ನು ತೊಳೆಯಲು ಹಾಕಿ ಮಾರನೆಯ ದಿನದ ತಯಾರಿಗಾಗಿ ಅತ್ತೆ ಹೇಳಿದಂತೆ ಸಜ್ಜುಗೊಳಿಸಿಟ್ಟು ಮಲಗಲು ತಮ್ಮ ತಮ್ಮ ರೂಮುಗಳತ್ತ ನಡೆದರು.
ಮಹಡಿ ಮೇಲಿನ ರೂಮಿಗೆ ಬಂದ ದೇವಿಗೆ ಮಹೇಶಯಾರ ಹತ್ತಿರವೋ ಮೊಬೈಲಿನಲ್ಲಿ ಮಾತನಾಡುವುದರಲ್ಲಿ ಮಗ್ನನಾಗಿರುವುದು ಕಂಡುಬಂತು. ಬಟ್ಟೆ ಬದಲಾಯಿಸಿ ಕೈಯಲ್ಲೊಂದು ಪುಸ್ತಕ ಹಿಡಿದು ಮಂಚದಮೇಲೆ ಉರುಳಿದಳು. ಕಣ್ಣುಬಿಟ್ಟಾಗ ಬೆಳಗಿನ ಸೂರ್ಯೋದಯ ! ಅಂದರೆ ರಾತ್ರಿ ಯಾವಾಗ ನಿದ್ರೆ ಆವರಿಸಿತೋ ತಿಳಿಯದು. ಮಹೀ ಎಂದೆನ್ನುತ್ತಾ ಪಕ್ಕಕ್ಕೆ ತಿರುಗಿದಳು. ಅಲ್ಲಿ ಕಂಡದ್ದೇನು? ಖಾಲಿಯಾಗಿದ್ದ ಜಾಗ. ಹಾಗಾದರೆ..ಎದ್ದು.. ಬಾತ್‌ರೂಮ್ ಕಡೆ ನೋಡಿದಳು. ಅಲ್ಲಿಯೂ ಮಹೇಶನ ಸುಳಿವಿಲ್ಲ. ಏಕೋ ಗಂಟಲು ಉಬ್ಬಿ, ಕಣ್ಣುತುಂಬಿ ಬಂದಂತಾಯಿತು. ಹೀಗೇಕೆ ವರ್ತಿಸುತ್ತಿದ್ದಾರೆ? ಇವತ್ತು ಕೇಳಿಯೇ ಬಿಡಬೇಕು ಎಂದುಕೊಂಡಳು. ಮತ್ತೆ ಮಂಚದ ಹತ್ತಿರ ಬಂದು ಬ್ಲ್ಯಾಂಕೆಟ್ ಮಡಿಸಿ, ಹಾಸಿಗೆಯನ್ನು ಸರಿಪಡಿಸಿದಳು. ತನ್ನ ಪ್ರಾತಃವಿಧಿಗಳನ್ನು ಪೂರೈಸಿ ಸ್ನಾನಮಾಡಿ ಕೆಳಗಿಳಿದು ಬಂದಳು. ಅಲ್ಲಿಯು ಗಂಡನನ್ನು ಕಾಣದೆ ಮೆಲ್ಲಗೆ ಚಂದ್ರಿಕಾಳನ್ನು ವಿಚಾರಿಸಿದಳು.
“ಮಹೇಶಣ್ಣನಿಗೆ ನೆನ್ನೆ ರಾತ್ರಿಯೇ ಬಹಳಷ್ಟು ಫೋನ್‌ಕಾಲ್‌ಗಳು ಬಂದವಂತೆ. ಅದೇನೋ ಬಾಳೆ, ತೆಂಗು, ಕಸಿ ಸಸಿಗಳ ವಿಲೇವಾರಿಗಳಿಗೆ ನೀವೇ ಬರಬೇಕು ಎಂದು ಒತ್ತಾಯಿಸಿದರಂತೆ. ಅದಕ್ಕೆ ಸುಬ್ಬು ಜೊತೆಗೆ ಜಮೀನಿನ ಹತ್ತಿರ ಹೋದರು. ಅವರೆದ್ದಾಗ ನೀವಿನ್ನೂ ಗಾಢನಿದ್ರೆಯಲ್ಲಿದ್ದಿರಂತೆ. ಅದಕ್ಕೆ ಎಬ್ಬಿಸಲು ಮನಸ್ಸಾಗಲಿಲ್ಲ ನೀನೆ ಹೇಳಿಬಿಡು ಚಂದ್ರಾ, ಬಿಡುವಾದಾಗ ಫೋನ್ ಮಾಡುತ್ತೇನೆ ಎಂದರು.”
ಏನೂ ಉತ್ತರ ಕೊಡದೆ ನಿಂತಿದ್ದ ದೇವಿಯನ್ನು ನೋಡಿದ ಚಂದ್ರಾ “ ನಿಮ್ಮ ಮನಸ್ಸಿನ ಆಂದೋಲನವನ್ನು ಸ್ವಲ್ಪ ಮಟ್ಟಿಗೆ ಊಹಿಸಬಲ್ಲೆ, ಮಹೇಶಣ್ಣ ನನಗೆ ಹೇಳಿಹೋಗಿದ್ದಕ್ಕಿಂತ ಅತ್ತೆ ಏನನ್ನುವರೋ ಎಂಬ ಚಿಂತೆ ಅಲ್ಲವೇ? ಯೋಚಿಸಬೇಡ, ಅತ್ತೆ ಮಾವ ಇಬ್ಬರೂ ಬೆಳ್ಳಂಬೆಳಗ್ಗೆಯೇ ಮಹೇಶಣ್ಣ ಬರುವುದಕ್ಕೆ ಮುಂಚೆಯೇ ಅತ್ತೆಯ ನೆಂಟರೊಬ್ಬರಿಗೆ ಹುಷಾರಿಲ್ಲವೆಂದು ಮೈಸೂರಿಗೆ ಹೋಗಿದ್ದಾರೆ. ಬರುವುದು ಇನ್ನು ಸಂಜೆಗೇ. ಹೇಳಿಯೇ ಹೋಗಿದ್ದಾರೆ. ಮುಂದೆ ಹೀಗೆ ಮಾಡಬೇಡವೆಂದು ಮಹೇಶಣ್ಣನಿಗೆ ಹೇಳುವೆಯಂತೆ. ಈಗ ಸ್ನಾನ ಆಗಿದೆಯಲ್ಲ, ಪೂಜೆ ಮುಗಿಸಿ ಬಾ ಮಂಗಳತ್ತೆ ಅಡುಗೆ ಮಾಡುತ್ತಿದ್ದಾರೆ. ಮನೆಗೆಲಸದ ಲಿಂಗಮ್ಮ ಬಂದು ಕೆಲಸ ಮುಗಿಸಿ ಹೋಗಿದ್ದಾಳೆ. ಅವಳು ಇನ್ನೊಮ್ಮೆ ಬರುವುದರೊಳಗೆ ತಾತನ ಮನೆಗೆ ಹೋಗಿಬರೊಣ. ನಾನು ನೋಡಿದಂತೆ ಎರಡು ಸಾರಿ ಈ ಮನೆಕಡೆ ಬಗ್ಗಿ ನೋಡಿದ್ದಾಯಿತು. ನಿನ್ನನ್ನೇ ಕಾಯುತ್ತಿದ್ದಾರೆನ್ನಿಸುತ್ತದೆ.” ಎಂದಳು.
ಅವಳು ಹೇಳಿದ್ದನ್ನು ಕೇಳಿಸಿಕೊಂಡ ದೇವಿ ನಿಡಿದಾದ ಉಸಿರುಬಿಟ್ಟು ಅಬ್ಬಾ ! ಸದ್ಯಕ್ಕೆ ಪಾರಾದೆ. ಚಂದ್ರಾ ಹೇಳಿದಂತೆ ಮಹೀಗೆ ಕೆಲವು ಸೂಕ್ಷ್ಮತೆಗಳನ್ನು ಹೇಳಿಕೊಡಬೇಕು ಎಂದುಕೊಂಡು ಪೂಜಾಕೋಣೆ ಹೊಕ್ಕಳು.
ಇತ್ತೀಚೆಗೆ ನೆಮ್ಮದಿಯಿಂದ ಪೂಜೆಮಾಡಲಾಗದ ದೇವಿ ಇವತ್ತು ಸುಮಾರು ಹೊತ್ತು ಶ್ಲೋಕಗಳು, ಭಕ್ತಿಗೀತೆಗಳನ್ನು ಹೇಳಿಕೊಳ್ಳುತ್ತ ಪೂಜೆ ಮುಗಿಸಿ, ಸ್ವಲ್ಪ ಹೊತ್ತು ಧ್ಯಾನಮಾಡಿ ಹೊರಬಂದಳು. ಇದರಿಂದ ಅವಳ ಮನಸ್ಸಿಗೆ ಒಂದು ರೀತಿಯ ಉಲ್ಲಾಸ ನೆಲೆಗೊಂಡಿತು. ಗಂಜಿ ಕುಡಿದು ಮಂಗಳಕ್ಕನ ಅನುಮತಿ ಪಡೆದು ಚಂದ್ರಾಳೊಡಗೂಡಿ ಎದುರಿಗೇ ಇದ್ದ ತವರು ಮನೆಯತ್ತ ಹೆಜ್ಜೆ ಹಾಕಿದಳು ದೇವಿ.
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40815
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಗೆಳತಿ ಹೇಮಾಳಿಗೆ ಧನ್ಯವಾದಗಳು
ಸುಂದರ ಕತೆ, ಸಣ್ಣ ಕುತೂಹಲವನ್ನು ಕಾಯ್ದುಕೊಂಡು ಸಾಗುತ್ತಿದೆ.
ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆ ಗೆ ಧನ್ಯವಾದಗಳು ನಯನ ಮೇಡಂ
ಸೊಗಸಾಗಿ ಸಾಗುತ್ತಿದೆ ಕಥೆ, ನಾಗರತ್ನ ಮೇಡಂ. ತಾಯಮ್ಮನ ನಿರಾಳ, ಆಧ್ಯಾತ್ಮಿಕ ಮನಸ್ಥಿತಿ ನಿಜಕ್ಕೂ ಎಲ್ಲರಿಗೂ ಕಷ್ಟಸಾಧ್ಯ! ಮುಂದಿನ ಕಂತಿಗೆ ಕುತೂಹಲದಿಂದ ಕಾಯುವಂತಾಗಿದೆ.
ಧನ್ಯವಾದಗಳು ಶಂಕರಿ ಮೇಡಂ