‘ಅರುಂಧತಿ’ (ಕಥಾ ಸಂಕಲನ), ಲೇಖಕರು :- ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ
ಪುಸ್ತಕ :- ಅರುಂಧತಿ (ಕಥಾ ಸಂಕಲನ)
ಲೇಖಕರು :- ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ
ಪ್ರಕಾಶಕರು :- ನ್ಯೂ ವೇವ್ ಬುಕ್ಸ್
ಪುಟಗಳು :-164
ಬೆಲೆ :- 180/-
“ಪ್ರೀತಿ” ಸಮಯ, ಸಂಧರ್ಭ, ಪರಿಸ್ಥಿತಿಗಳನ್ನು ನೋಡಿ ಹುಟ್ಟಿಕೊಳ್ಳುವುದಿಲ್ಲ. ಇದೊಂದು ನವಿರಾದ ಮನಸ್ಸಿನ ಭಾವ. ಕೆಲವೊಂದು ಪರಿಸ್ಥಿತಿಗಳು ಬದುಕಲ್ಲಿ ಹೇಗೆ ಬರುತ್ತವೆ ಎಂದರೆ ಮನಸ್ಸಿನಲ್ಲಿ ಇರುವ ಪ್ರೀತಿಯನ್ನು ಹೇಳಿಕೊಳ್ಳಲಾಗುವುದಿಲ್ಲ. ಯಾರು ಇಷ್ಟವಾಗಿರುತ್ತಾರೋ ಅವರ ಮುಂದೆ ಅರುಹಲಾಗುವುದಿಲ್ಲ. ಇಂತಹ ಸ್ಥಿತಿ ನರಕ ಸದೃಶ. “ಮತ್ತೆ ಪಲ್ಲವಿಸಿದ ಪ್ರೀತಿ”- ಕತೆಯಲ್ಲಿ ಕಾಲವೇ ನಾಯಕನ ಪ್ರೀತಿಗೆ ನ್ಯಾಯ ಒದಗಿಸುತ್ತದೆ. ಪ್ರಸಿದ್ಧ ಹಾಸ್ಯ ಲೇಖಕರಾದ ಎನ್ ರಾಮನಾಥ ಸರ್ ಹೇಳಿರುವಂತೆ ಸವಿತಾ ಮಾಧವ ಶಾಸ್ತ್ರಿ ಅವರು ಸರಳವಾದ ರೀತಿಯಲ್ಲಿ, ಭಾಷೆಯಲ್ಲಿ ಕಥೆಗಳನ್ನು ಬರೆದಿದ್ದಾರೆ ಅನ್ನುವುದು ಮೊದಲ ಕಥೆ ಓದುವಾಗಲೇ ಅರಿವಾಗುತ್ತದೆ. ಮಧ್ಯದಲ್ಲಿ ಕಥೆ ದುರಂತದಲ್ಲಿ ಕೊನೆಗೊಳ್ಳುತ್ತದೋ ಏನೋ ಅನ್ನುವ ಆತಂಕ, ಏನಾಯಿತು ಅನ್ನುವ ತವಕಕ್ಕೆ ಓದು ಅಡೆತಡೆ ಇಲ್ಲದೆ ಸಾಗುತ್ತದೆ ಹಾಗೂ ಕತೆ ಸುಗಮವಾದ ಅಂತ್ಯ ಕಂಡಾಗ ಒಂದು ಸಮಾಧಾನದ ನಿಟ್ಟುಸಿರು ಹೊರಬರುತ್ತದೆ.
ಹಣೆಬರಹದಲ್ಲಿ ಬರೆದಿದ್ದನ್ನು ಯಾರಿಂದಲೂ ತಪ್ಪಿಸಲಾಗದು. ಈ ಸತ್ಯವನ್ನು ಅರಿತಿದ್ದರೂ ನಾವು ಮನುಷ್ಯರು ಅದನ್ನು ಮೀರಿ ನಮ್ಮ ಆಟಗಳನ್ನು ಆಡಲು ಪ್ರಯತ್ನಿಸುತ್ತೇವೆ. ಒಮ್ಮೆಗೆ ನಾವು ಅಂದುಕೊಂಡಿದ್ದು ನಡೆಯಬಹುದು ಆದರೆ ಆ ನಡೆಯುವ ಘಟನೆಗಳು ಕೂಡ ವಿಧಿ ಬರಹವೇ ಆಗಿರಬಹುದಲ್ಲವೇ? ಕೆಲವೊಂದು ಸಂದರ್ಭಗಳೇ ಹಾಗೆ ನಾವಂದುಕೊಂಡಿದ್ದಕ್ಕಿಂತ ವ್ಯತಿರಿಕ್ತವಾಗಿ ಬರುತ್ತವೆ. ಅಸಹಾಯಕತೆ ಮನುಷ್ಯನನ್ನು ಬಂಧಿಸುತ್ತದೆ. ಪ್ರೀತಿ ಪ್ರೇಮದ ವಿಷಯದಲ್ಲಿಯೂ ಹಾಗೆಯೇ. ನಾವು ಪ್ರೀತಿಸುವವರು ಹೆಣ್ಣು/ಗಂಡು ನಮ್ಮ ಜೀವನ ಸಂಗಾತಿ ಆಗಬೇಕು ಅಂತ ಇದ್ದರೆ ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಹೆತ್ತವರು ಎಷ್ಟೇ ಹಠ ಮಾಡಿ ಆ ಪ್ರೀತಿಯನ್ನು ತಪ್ಪಿಸಲು ಪ್ರಯತ್ನಿಸಿದರೂ ಹಣೆಬರಹದಲ್ಲಿ ಬರೆದಿದ್ದರೆ ಇಷ್ಟ ಪಟ್ಟವರು ಸಿಕ್ಕೇ ಸಿಗುತ್ತಾರೆ – “ಅರವಿಂದನ ಹೆಂಡತಿ” ಕಥೆ ಹುಟ್ಟು ಹಾಕಿದ ಆಲೋಚನೆ.
ಲಿವ್ ಇನ್ ರಿಲೇಷನ್ಶಿಪ್ ನಮ್ಮ ಭಾರತೀಯ ಸಂಸ್ಕೃತಿಯ ಕೊಡುಗೆ ಅಲ್ಲ. ಇದೊಂದು ಅಪ್ಪಟ ಪಾಶ್ಚಾತ್ಯ ಸಂಸ್ಕೃತಿಯ ಕೊಡುಗೆ. ನಮ್ಮ ದೇಶಕ್ಕೂ ಲಗ್ಗೆ ಇಟ್ಟಿರುವುದು ಖೇದಕರ. ಇಂತಹ ಒಂದು ಸಂಸ್ಕೃತಿ, ವಿಚಾರ ಕೆಟ್ಟದ್ದು, ತಪ್ಪು ಎಂದಲ್ಲ ಆದರೆ ನಮ್ಮ ದೇಶದ ಪದ್ಧತಿ, ಆಚಾರ -ವಿಚಾರಗಳಿಗೆ ಇಂತಹ ಒಂದು ಜೀವನ ಪದ್ಧತಿ ಸರಿ ಹೊಂದಲಾರದು. ವಿವಾಹಕ್ಕೆ ಇಲ್ಲಿ ಬಹಳ ಗೌರವ, ಪ್ರಾಮುಖ್ಯತೆ, ಪಾವಿತ್ರ್ಯತೆ ಇದೆ. ಪ್ರತಿಯೊಬ್ಬ ಹೆತ್ತವರು ತಮ್ಮ ಮಕ್ಕಳು ವಿವಾಹವಾಗಿ ಸಂತೃಪ್ತ ವೈವಾಹಿಕ ಜೀವನ ನಡೆಸಿ ಸುಂದರ ಸಂಸಾರವನ್ನು ಕಟ್ಟಿಕೊಳ್ಳಬೇಕು ಎನ್ನುವ ಕನಸನ್ನು ಕಾಣುತ್ತಾರೆ. ಇವತ್ತು ಕಾಲ ಬದಲಾದಂತೆ ಇಂತಹ ಸಂಪ್ರದಾಯ, ಆಚಾರ ವಿಚಾರ ಮೂಲೆ ಗುಂಪಾಗಿ ಜನ ಕಡಿವಾಣವಿಲ್ಲದ ಕುದುರೆಯಂತೆ, ಅಂಕುಶವಿಲ್ಲದಂತೆ ವರ್ತಿಸುತ್ತಿರುವುದು ಬಹಳ ನೋವಿನ ಸಂಗತಿ. ಕಾನೂನು ಕೂಡ ಬದಲಾಗಿ ಜನರ ಸ್ವೇಚ್ಚಾಚಾರಕ್ಕೆ ಅಂಕೆ ಇಲ್ಲದಂತೆ ಈಗಾಗಲೇ ಆಗಿದೆ. ಮುಂದೆ ಎಂತಹ ದಿನಗಳ ದರ್ಶನವಾಗಲಿರುವುದೋ ಆ ದೇವರೇ ಬಲ್ಲ. ಲಿವ್ ಇನ್ ರಿಲೇಷನ್ಶಿಪ್ ಅನ್ನುವುದು ಬದುಕಿನ ಸರಿಯಾದ ಆಯ್ಕೆ ಅಲ್ಲ. ಇಲ್ಲಿ ಮನಸ್ಸುಗಳು ಬೆಸೆಯುವುದಿಲ್ಲ, ಕೇವಲ ದೇಹದ ತೃಷೆ ತೀರುವವರೆಗಷ್ಟೇ ಜೊತೆ. ಭಾವ, ಬಂಧ, ಅನುಬಂಧ, ಬಂಧನ ಇವು ಯಾವುದು ಅಲ್ಲಿರುವುದಿಲ್ಲ – ಒಂದು ‘ಲಿರ್ ‘ನ ಕಥೆ.
ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಯಾವ ರೀತಿಯಿಂದಲೂ ಕಡಿಮೆ ಏನಿಲ್ಲ. ಹಾಗೆ ನೋಡಿದರೆ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣೇ ಗಂಡಿಗಿಂತ ಒಂದು ಹೆಜ್ಜೆ ಮುಂದೆ ಇದ್ದಾಳೆ. ಹೆಣ್ಣು ಸಂಭಾಳಿಸದ ಕ್ಷೇತ್ರಗಳೆ ಇಲ್ಲ ಇವತ್ತು. ಕಾಲ ಎಷ್ಟೇ ಬದಲಾದರೂ ಇವತ್ತಿಗೂ ಜನ ಹೆಣ್ಣು ಹಾಗೂ ಗಂಡಿನಲ್ಲಿ ಭೇದಭಾವ ತೋರುತ್ತಿರುವುದು ಬೇಸರದ ಸಂಗತಿ. ಹೆಣ್ಣು ಎಷ್ಟೇ ಸಾಧನೆ ಮಾಡಿದರು ಅವಳು ಗಂಡಿಗೆ ಸಮನಲ್ಲ ಅನ್ನುವ ಭಾವದಿಂದ ನೋಡುವ ದೃಷ್ಟಿ ಬದಲಾಗಿಲ್ಲ. ಗಂಡೆಂದು ತಲೆ ಮೇಲೆ ಹೊತ್ತು ಮೆರೆಸಿದರೂ ಕೊನೆಗೆ ಹೆತ್ತವರಿಗೆ ಅವನಿಂದ ಸಿಗುವುದು ನಿರ್ಲಕ್ಷ್ಯ, ಭದ್ರತೆ ಇಲ್ಲದ ಬದುಕು, ಕೆಟ್ಟ ಚಟಗಳ ದಾಸನಾದ ಮಗನಿಂದ ಹಿಂಸೆ, ಹೊಡೆತ ಇತ್ಯಾದಿ. ಆದರೂ ಗಂಡು ಮಗನೆಂಬ ಮಮಕಾರ, ವಾಂಛೆ, ಮೋಹ ಹೆತ್ತವರನ್ನು ಬಿಡುವುದಿಲ್ಲ. ಹೆಣ್ಣೆಂದು ನಿರ್ಲಕ್ಷಕ್ಕೆ ಒಳಪಟ್ಟರು ಬದುಕು ಕಟ್ಟಿಕೊಂಡು, ಕೊನೆಗೆ ಬೀದಿಗೆ ಬಿದ್ದ ಹೆತ್ತವಳನ್ನೂ ನೋಡಿಕೊಳ್ಳುವ, ವಾಸ್ತವದ ಮೇಲೆ ಬೆಳಕು ಚೆಲ್ಲುವ ಕಥೆ -“ಅವ್ವ”.
ಹಿಂದೊಂದು ಕಾಲವಿತ್ತು ಓದು, ವಿದ್ಯಾಭ್ಯಾಸ, ಶಾಲೆ ಎಂದರೆ ಎಲ್ಲಾ ಮಕ್ಕಳು ಜೊತೆ ಸೇರಿ ಆಟ, ಪಾಠ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು, ನೃತ್ಯ, ಸಂಗೀತ ಇತ್ಯಾದಿಗಳೇ ಹೆಚ್ಚಾಗಿದ್ದವು. ಆದರೆ ಇಂದು ವಿದ್ಯಾಭ್ಯಾಸ ಓದು ಎಂದರೆ ಶಿಕ್ಷಣದ ಹೆಸರಲ್ಲಿ ಮಕ್ಕಳ ಮೇಲೆ ಹೆತ್ತವರು ವಿಪರೀತ ಒತ್ತಡ ಹೇರಿ, ಎಲ್ಲಾ ಸಂತೋಷಗಳಿಂದಲೂ, ಅವರ ಇಷ್ಟದ ವಿಚಾರಗಳಿಂದಲೂ ಅವರನ್ನು ವಂಚಿತರನ್ನಾಗಿಸಿ ಅವರಿಗೆ ಮನೆ, ಶಿಕ್ಷಣ ಸಂಸ್ಥೆಗಳು ಎಂದರೆ ಸೆರೆಮನೆ ವಾಸದಂತೆ ಎನ್ನುವ ಅನುಭವವಾಗುವಷ್ಟು ಹದಗೆಟ್ಟಿದೆ ಪರಿಸ್ಥಿತಿ. ಓದು ಒಂದನ್ನು ಬಿಟ್ಟು ಬೇರೆ ಯಾವುದರ ಕಡೆಗೂ ಗಮನ ಕೊಡುವಂತಿಲ್ಲ ಮಕ್ಕಳು. ಹೆತ್ತವರು ಮಕ್ಕಳ ಬಾಲ್ಯವನ್ನೇ ಕಿತ್ತುಕೊಳ್ಳುವಷ್ಟು ಕಠಿಣ ಮನಸ್ಥಿತಿಯನ್ನು ಹೊಂದಿದ್ದಾರೆ ಇವತ್ತು. ಇವೆಲ್ಲದರ ಪರಿಣಾಮ ಎಲ್ಲೋ ಒಂದು ಕಡೆ ಮಕ್ಕಳು ಖಿನ್ನತೆ, ನಶೆ, ಚಟಗಳ ದಾಸರಾಗುತ್ತಿರುವುದು ದುರಂತ. ಕರೋನಾ ಕಾಲದಲ್ಲಿ ಏನೆಲ್ಲಾ ಆಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಂತಹದೇ ಘಟನೆಯ ಎಳೆಯನ್ನು ಇಟ್ಟುಕೊಂಡು ಹೆಣೆಯಲ್ಪಟ್ಟ ಕಥೆ- ಮಾಹಿ. ತಾಯಿ ನಿನಗೇನು ಕೊಡಿಸಲಿ ಎಂದು ಮಗಳನ್ನು ಕೇಳಿದಾಗ ಮಗಳು ಹೋದ ಖುಷಿ, ಸಂತಸ, ಹವ್ಯಾಸ, ಸಮಯ, ನಗು ಇವೆಲ್ಲವನ್ನು ಮತ್ತೆ ಕೊಡು ಎಂದು ಕೇಳುವ ಸಾಲುಗಳು ಬಹಳ ನೋವಿನಿಂದ ಕೂಡಿವೆ.
ಬಂಧು, ಬಂಧ, ಸಂಬಂಧಗಳನ್ನು ಬದುಕಿನಲ್ಲಿ ಒಗ್ಗೂಡಿಸುತ್ತ, ಕಾಪಾಡಿಕೊಳ್ಳುತ್ತ ಸಾಗುವುದು ಸಂಸಾರದಲ್ಲಿ ಮಾಡುವ ಒಂದು ತಪಸ್ಸೇ ಸರಿ. ಒಂದು ಸಂಬಂಧ ಕಳಚಿಕೊಳ್ಳಲು, ದೂರವಾಗಲು ಕ್ಷಣಾರ್ಧ ಸಾಕು, ಆದರೆ ಎಲ್ಲಾ ತಪ್ಪುಕಲ್ಪನೆಗಳನ್ನು ದೂರವಾಗಿ ಸುತ್ತಾ ವಾಸ್ತವವನ್ನು ಅರ್ಥ ಮಾಡಿಸುತ್ತಾ ಎಲ್ಲರನ್ನು ಒಗ್ಗೂಡಿಸಲು ಎಷ್ಟು ಸಂಯಮ ತಾಳ್ಮೆ ಇದ್ದರೂ ಸಾಲದು – ಲಾಕರ್ ನಂಬರ್ ಸೆವೆನ್.
“ಇಲ್ಲಿ ಒಬ್ಬರ ಬದುಕಿನಂತೆ ಇನ್ನೊಬ್ಬರದ್ದಿಲ್ಲ. ದೇವರು ನಮಗೆ ಕೊಟ್ಟ ಬದುಕನ್ನೇ ಇದ್ದುದರಲ್ಲೇ ಚಂದಗಾಣಿಸಬೇಕು” – ಮನಸ್ಸನ್ನು ಸೆರೆಹಿಡಿದ ಸಾಲುಗಳು. ಎಷ್ಟೊಂದು ಸತ್ಯ ಅಡಗಿದೆ ಈ ಸಾಲುಗಳಲ್ಲಿ. ಇಲ್ಲಿ ಎಲ್ಲವೂ ಅವರವರ ಪಾಲಿಗೆ ಬಂದದ್ದನ್ನು ಅವರವರೆ ಅನುಭವಿಸಬೇಕು. ಬಡತನ ಸಿರಿತನ ಎಲ್ಲವೂ ನಾವು ಪಡೆದುಕೊಂಡು ಬಂದದ್ದು. ಬಡತನದಲ್ಲಿ ಹೊಟ್ಟೆ ಬಟ್ಟೆಗೆ ಪರದಾಡಿ ದುಡಿದರೆ, ಬದುಕಿನಲ್ಲಿ ಒಂದು ಹಂತ ತಲುಪಿದ ಮೇಲೆ ದುಡಿಯದೆ ಸುಮ್ಮನಿರಬೇಕು ಅಂತ ಏನಿಲ್ಲ. ಇನ್ನೊಬ್ಬರ ಸಹಾಯಕ್ಕೆ ಆಗುತ್ತೇವೆ ಎಂದರೆ ಅದನ್ನು ಮಾಡಲು ಸದಾ ಸಿದ್ಧರಿರಬೇಕು. ಇದು ನಮಗೆ ಆತ್ಮೀಯರು, ಸ್ನೇಹಿತರು, ಬಂಧು ಬಳಗ, ಜನಬಲವನ್ನು ನೀಡುತ್ತದೆ. ಕಷ್ಟದಲ್ಲಿ ಬದುಕಿನಲ್ಲಿ ಮೇಲೆ ಬಂದು ಮಗನನ್ನು ಒಳ್ಳೆಯ ದಾರಿ, ಗುರಿ ಸೇರಿಸಿಯೂ ಅಗತ್ಯ ಇರುವವರಿಗೆ ಸಹಾಯ ಹಸ್ತ ಚಾಚುತ್ತ ಬದುಕುವ ಅಮ್ಮ ಮಗನ ಆಪ್ತ ಬಾಂಧವ್ಯದ ಕಥೆ- ಸ್ವರ್ಗಾರೋಹಣ. ಐಶ್ವರ್ಯ ಬಂದಾಗ ಅಹಂಕಾರ ಬೆಳೆಸಿಕೊಳ್ಳದೆ ಅವಶ್ಯಕತೆ ಇದ್ದವರ ನೆರವಿಗೆ ಒದಗುತ್ತಾ ಸಾಗಿದಾಗ ಎಲ್ಲರೂ ನಮ್ಮನ್ನು ಗೌರವಿಸುತ್ತಾರೆ. ಬದುಕಿದ್ದಾಗ ಹತ್ತು ಜನಕ್ಕೆ ಉಪಕಾರಕ್ಕಾದರೆ ಆ ಜನ ಸತ್ತ ಮೇಲು ನೆನಪಿಸಿಕೊಳ್ಳುತ್ತಾರೆ.
ಅಗತ್ಯ ಇದ್ದಾಗ ಉಪಯೋಗಿಸಿಕೊಂಡು ಕೆಲಸ ಆದ ಮೇಲೆ, ಅವಶ್ಯಕತೆ ಮುಗಿದ ಮೇಲೆ ಉಪಯೋಗಿಸಿಕೊಂಡವರನ್ನು ದೂರ ಮಾಡುವುದು ಈ ಪ್ರಪಂಚದಲ್ಲಿ ನಾವು ಕಾಣುವ ಸಹಜ ದೃಶ್ಯ. ಪ್ರತಿಯೊಬ್ಬ ಮನುಷ್ಯನು ಸ್ವಾರ್ಥಿ. ತಾನು ತನ್ನದು ಎನ್ನುವ ವಾಂಛೆ ಬೇಗ ಯಾರನ್ನು ಬಿಡದು. ಇದರ ಸಲುವಾಗಿ ಜನ ಯಾವ ಹಂತಕ್ಕೆ ಬೇಕಾದರೂ ತಲುಪುತ್ತಾರೆ. ಅದೂ ಹೆತ್ತ ಮಕ್ಕಳು, ಕರುಳಬಳ್ಳಿಯ ವ್ಯಾಮೋಹ ಏನೇ ಆದರೂ ಎಂದಿಗೂ ತೀರದ್ದು. ಮಗ ಏನೇ ಮಾಡಿರಲಿ, ಎಷ್ಟೇ ದೂರ ಉಳಿದಿರಲಿ ಒಮ್ಮೆ ಅವ ತಿರುಗಿ ಬಂದ ಎಂದಾದರೆ ಅವನ ಸಲುವಾಗಿ ಆಸರೆ ಆದವರನ್ನು ತೊರೆಯಲು ಹಿಂದೆ ಮುಂದೆ ನೋಡುವುದಿಲ್ಲ ಜನ. ಆ ಹಂತದಲ್ಲಿ ಆಸರೆಯಾದವರ ನೆನಪು, ಅವರು ಪಟ್ಟ ಕಷ್ಟ ಯಾವುದು ಲೆಕ್ಕಕ್ಕೆ ಬರುವುದಿಲ್ಲ. ಇಂತಹುದೇ ಹಿನ್ನೆಲೆ ಹೊಂದಿರುವ ಕಥೆ- “ಊರುಗೋಲು”. ಇಲ್ಲಿ ಕಥಾನಾಯಕ ತೆಗೆದುಕೊಂಡ ನಿರ್ಧಾರ ಬುದ್ಧಿವಂತಿಕೆಯಿಂದ ಕೂಡಿರುವಂಥದ್ದು.
” ಒಲವೆಂಬ ಒಗಟು,
ಯಾರ ಅರಿವಿಗೂ ಬಾರದ ಗುಟ್ಟು,
ನಿಗೂಢ ಇದರ ಹುಟ್ಟು,
ಕಳೆದುಹೋಗುವುದು ಮನಸ್ಸು ಇಲ್ಲಿ ಇರುವುದೆಲ್ಲವ ಬಿಟ್ಟು”.
ಮದುವೆ ಎಂಬ ಮೂರು ಗಂಟಿನಲ್ಲಿ ಮನಸುಗಳನ್ನು ಬೆಸೆಯಲಾಗದು. ಹೊಂದಾಣಿಕೆ ಎಂಬ ಸೂತ್ರ ಇಲ್ಲದೆ ಹೋದಾಗ ಒತ್ತಾಯಪೂರ್ವಕವಾಗಿ ಮಾಡಿದ ಮದುವೆಯು ಮುಂದೊಂದು ದಿನ ವಿಚ್ಛೇದನದಲ್ಲಿ ಕೊನೆಗೊಳ್ಳುವುದು. ಪರಸ್ಪರ ಅರ್ಥಮಾಡಿಕೊಳ್ಳುವ ವ್ಯವಧಾನ ಇದ್ದಾಗ ಮಾತ್ರ ಸಂಸಾರ ರಥ ಸಾಗುತ್ತದೆ.
ಅರುಂಧತಿ – ಜೀವನ ತಂದೊಡ್ಡುವ ಕಷ್ಟ, ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ನ್ಯಾಯಯುತವಾದ ದುಡಿಮೆಯ ದಾರಿಯನ್ನು ತನ್ನದಾಗಿಸಿಕೊಂಡ ಹೆಣ್ಣು ಮಗಳೊಬ್ಬಳ ಕಥೆ. ಇಲ್ಲಿ ಗಂಡ ಅನ್ನಿಸಿಕೊಂಡವನಿಗೆ ಕೆಲಸ ಕಳೆದುಕೊಂಡಿದ್ದರೂ ಒಣ ಪ್ರತಿಷ್ಠೆ, ಸಣ್ಣ ಕೆಲಸಗಳ ಬಗ್ಗೆ ಕೀಳರಿಮೆ ಇರುತ್ತದೆ. ಜೀವನ ನಿಲ್ಲುವುದಿಲ್ಲವಲ್ಲ. ಇಲ್ಲಿ ಹೊಟ್ಟೆಪಾಡು, ಮಕ್ಕಳ ಭವಿಷ್ಯದ ನಿರ್ವಹಣೆ ವೇಗವಾಗಿ ಸಾಗುತ್ತಲೇ ಇರುತ್ತದಲ್ಲ. ಇದನ್ನೆಲ್ಲಾ ನಿಭಾಯಿಸದೆ ಇರಲು ಸಾಧ್ಯವೇ? ಹೆಂಡತಿ ದುಡಿಯುವುದು ಕಥಾನಾಯಕನಿಗೆ ಇಷ್ಟವಿರುವುದಿಲ್ಲ. ನೂರಾರು ಸಮಸ್ಯೆಗಳ ಮಧ್ಯೆಯೂ ದಾರಿ ಕಂಡುಕೊಂಡು ನ್ಯಾಯವಾಗಿ ಸಂಪಾದಿಸುವ ಯಾವ ಕೆಲಸವು ಕೀಳಲ್ಲ ಎಂದು ನಂಬಿ ಬದುಕು ಕಟ್ಟಲು ಹೊರಟ ಸಾಹಸಿ ಹೆಣ್ಣು ಅರುಂಧತಿ. ಓದಿದ ಯಾರಲ್ಲಾದರೂ ಬದುಕಿನ ಪ್ರತಿ ಸ್ಪೂರ್ತಿ ತುಂಬುವಂತಹ ಕಥೆ.
ಸಂಬಂಧಗಳು ಬೆಸೆಯುವ ಪರಿಯೇ ಅದ್ಭುತ. ಬದುಕು ತಂದೊಡ್ಡುವ ಪರೀಕ್ಷೆಗಳನ್ನು ಎದುರಿಸಲಾಗದೆ ಎಲ್ಲವನ್ನು ಎಲ್ಲರನ್ನು ತೊರೆದು ದೂರ ಹೋದರೂ ಯಾವುದೋ ಒಂದು ತಿರುವಿನಲ್ಲಿ ತೊರೆದ ಆ ಸಂಬಂಧಗಳು ಮತ್ತೆ ಬೆಸೆಯುವುದು ಇದೆಯಲ್ಲ ಅದು ಕಥೆಯಲ್ಲಿ ಮಾತ್ರವಲ್ಲ ಹಲವಾರು ಬಾರಿ ನಿಜಜೀವನದಲ್ಲೂ ನಡೆಯುತ್ತದೆ. ನಾವು ಬೇಡವೆಂದು ಬಿಟ್ಟು ಬಂದ ರಕ್ತಸಂಬಂಧದ ನಂಟು ಹಲವಾರು ವರ್ಷಗಳ ನಂತರವೂ ಗೊತ್ತಿಲ್ಲದಂತೆ ಅಂಟಿಕೊಳ್ಳುತ್ತದೆ. ಹುಡುಕಿದರೆ ಇಲ್ಲಿ ಅಂತಹ ಹಲವಾರು ಉದಾಹರಣೆಗಳು ಸಿಗಬಹುದು. ಅಣ್ಣ-ತಂಗಿಯ ನವಿರಾದ ಬಾಂಧವ್ಯದ ಕಥೆ- ನೀಲವ್ವ.
“ಕೈಜಾರಿದ ಮುತ್ತೊಂದು,
ಬೆಳಕಾಯಿತು ಜೊತೆ ಆದವರ
ಬಾಳಲ್ಲಿ ಹೊಳಪನ್ನು ತಂದು,
ಎಲ್ಲವೂ ಅದೃಷ್ಟದಾಟ ಇಲ್ಲಿ ತಿಳಿಯೋ ನೀ ಬಂಧು,
ಮಾಡಿದ ಕರ್ಮ
ಫಲ ನೀಡುವುದು ಇಲ್ಲಿಯೇ
ಮತ್ತೆ ತಿರುಗಿ ಬಂದು”.
15 ಕಥೆಗಳನ್ನು ಒಳಗೊಂಡಿರುವ ಅರುಂಧತಿ ಕಥಾಸಂಕಲನದಲ್ಲಿ ನನಗೆ ಬಹಳ ಇಷ್ಟವಾದ ಕಥೆ – ಉಡುಗೊರೆ. ನಮ್ಮ ಪ್ರೀತಿಪಾತ್ರರಿಗೆ ನಾವು ಉಡುಗೊರೆ ಕೊಡಲು ಬಯಸುವುದು ಸಹಜ. ಆದರೆ ಕೊಡುವ ಆ ಉಡುಗೊರೆ ಎಷ್ಟು ಆಕರ್ಷಕವಾಗಿರಬೇಕು, ಪಡೆಯುವವರ ಮನಸ್ಸನ್ನು ಹೇಗೆ ಗೆಲ್ಲಬೇಕು ಅನ್ನುವ ಚಿಂತೆ ಕೊಡುವವರಿಗೆ ಸಹಜ. ಮಗಳೊಬ್ಬಳು ತನ್ನ ಅಮ್ಮನಿಗೆ ಅವಳ ಬದುಕಲ್ಲಿ ದಾಖಲೆಯಾಗಿ ಉಳಿಯುವಂತಹ, ಯಾವತ್ತು ಮರೆಯಲಾರದಂತಹ ಸುಂದರ ಉಡುಗೊರೆ ನೀಡುತ್ತಾಳೆ. ಆ ಉಡುಗೊರೆ ಯಾವುದು ಅನ್ನುವುದನ್ನು ಅರುಂಧತಿ ಕಥಾಸಂಕಲನ ಬಹಿರಂಗ ಪಡಿಸುತ್ತದೆ, ನಾನಲ್ಲ.
ಇಲ್ಲಿರುವ ಎಲ್ಲಾ ಕಥೆಗಳು ಬಹಳ ಸುಂದರ ಹಾಗೂ ವಾಸ್ತವಕ್ಕೆ ಹತ್ತಿರ. ಬಹುಷಃ ಯಾರೋ ಒಬ್ಬರ ಬದುಕೇ ಆಗಿದ್ದಿರಲೂಬಹುದು ಈ ಕಥೆಗಳು. ಸ್ವಲ್ಪವೂ ನಿಲ್ಲಿಸದಂತೆ ಒಂದು ಕಥೆಯನ್ನೂ ಬಿಡದಂತೆ ಓದಿಸಿಕೊಂಡು ಹೋಗುತ್ತದೆ ಪುಸ್ತಕ. ಒಂದು ಸುಂದರವಾದ, ಮನಸಿಗೆ ಹಿತವಾಗುವಂತಹ ಓದನ್ನು ನೀಡಿದ ಲೇಖಕಿ ಸವಿತಾ ಮಾಧವ ಶಾಸ್ತ್ರಿಯವರಿಗೆ ಧನ್ಯವಾದಗಳು. ಇನ್ನಷ್ಟು ಕೃತಿಗಳು ಮೂಡಿ ಬರಲಿ ಅನ್ನುವ ಹಾರೈಕೆಯೊಂದಿಗೆ,
– ನಯನ ಬಜಕೂಡ್ಲು
ಪುಸ್ತಕ ಪರಿಚಯ ಮಾಡಿಕೊಟ್ಟ ನಯನಮೇಡಂಗೆ.. ಧನ್ಯವಾದಗಳು..ಬಹಳ ಚೆನ್ನಾಗಿದೆ..
ಹೃತ್ಪೂರ್ವಕ ಧನ್ಯವಾದಗಳು ಮೇಡಂ.
ಚೆನ್ನಾಗಿದೆ ನಯನ ಮೇಡಂ
ಸೊಗಸಾದ ಕಥಾಸಂಕಲನದ ವಿಮರ್ಶಾತ್ಮಕ ಪರಿಚಯವು ಅತ್ಯಂತ ಸುಂದರವಾಗಿ ಮೂಡಿಬಂದಿದೆ ನಯನಾ ಮೇಡಂ.
ತುಂಬಾ ಚೆಂದದ ಪುಸ್ತಕ ಪರಿಚಯ. ಒಂದೊಂದು ಕಥೆಯ ಒಳಗಿರಬಹುದಾದ ರಸದ ಸವಿಯನ್ನು ವಿವರಿಸಿರುವ ರೀತಿ, ಸವಿಯಲೇ ಬೇಕೆನ್ನುವ ಆಸೆಯನ್ನು ಹುಟ್ಟು ಹಾಕುವಂತಿದೆ.