ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ವೈಭವೋಪೇತವಾದ, ದಿವ್ಯ ಶ್ರೀರಂಗದ ಸಾನ್ನಿಧ್ಯದಿಂದ ನಾವು ವೇಗ ವೇಗವಾಗಿ ಜಂಬುಕೇಶ್ವರ ದೇವಾಲಯದ ಕಡೆಗೆ ಹೊರಟೆವು. ಈ ಜಂಬುಕೇಶ್ವರ ದೇವಾಲಯವು ಭಾರತದಲ್ಲಿರುವ ಪಂಚಭೂತ ತತ್ವಲಿಂಗಳಲ್ಲಿ ಒಂದು. ಕಾಂಚೀಪುರದ ಏಕಾಮ್ರನಾಥ ಪೃಥ್ವೀ ತತ್ವ, ಜಂಬುಕೇಶ್ವರ ಜಲ ತತ್ವ, ತಿರುವಣ್ಣಾಮಲೈನ ಅರುಣಾಚಲೇಶ್ವರ ಲಿಂಗವು ತೇಜ ಅಥವಾ ಅಗ್ನಿ ತತ್ವ, ಕಾಳಹಸ್ತಿಯ ಕಾಳಹಸ್ತೀಶ್ವರ ಲಿಂಗವು ವಾಯು ತತ್ವ, ಚಿದಂಬರಂನ ಚದಂಬರೇಶ್ವರ ಲಿಂಗವು ಆಕಾಶ ತತ್ವ. ಇದನ್ನು ಓದಿದ ಮೇಲೆ ನಿಮಗೂ ಒಂದು ಪ್ರಶ್ನೆ ಕೇಳಬೇಕೆನಿಸುವುದು-ಪಂಚಭೂತ ತತ್ವ ಲಿಂಗ ಎಂದರೆ ಏನು? ಅದರ ಪ್ರತಿಷ್ಠಾಪನೆ ಆಗುವುದು ಹೇಗೆ? ಜಂಬುಕೇಶ್ವರಕ್ಕೂ ಜಲಕ್ಕೂ ಇರುವ ಸಂಬಂಧವೇನು?

ಇವೇ ಪ್ರಶ್ನೆಗಳು ನನಗೆ ಮೂಡಿದಾಗ ನಾನು ಗುರುಗಳ ಮೊರೆ ಹೋದೆ. “ಗುರುಗಳೆ, ಪಂಚಭೂತ ತತ್ವ ಲಿಂಗ ಎಂದರೆ ಹೇಗೆ? ನನಗೆ ಅರ್ಥವಾಗುತ್ತಿಲ್ಲವಲ್ಲ”. ಗುರುಗಳು ಉತ್ತರಿಸಿದರು. “ಪ್ರತಿಯೊಂದು ಲಿಂಗವನ್ನು ಪ್ರತಿಷ್ಠಾಪಿಸುವ ಸಮಯದಲ್ಲಿ ಪಂಚಭೂತಗಳನ್ನು ಆವಾಹಿಸಿಯೇ ಅದಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾರೆ. ಈ ನಿರ್ದಿಷ್ಟ ಲಿಂಗಗಳಿಗೆ ಆಯಾ ರಾಜನ ಜಾತಕಕ್ಕೆ ಪೂರಕವಾಗಿ, ಗ್ರಹಗತಿಗಳಿಗನುಸಾರವಾಗಿ ಒಂದು ಪಂಚಭೂತವನ್ನು ಹೆಚ್ಚಾಗಿಸಿ, ಅದೇ ಪ್ರಧಾನವಾಗುವಂತೆ ಮಾಡುತ್ತಾರೆ. ಅಂತೆಯೇ ಈಗಲೂ ಎಲ್ಲಾದರೂ ಹೊಸತೊಂದು ಶಿವಲಿಂಗವು ಪ್ರತಿಷ್ಠಾಪನೆಯಾದರೆ ಅದನ್ನು ನಿತ್ಯವೂ ಪೂಜಿಸುವ ಪುರೋಹಿತನ ಜಾತಕ, ಪ್ರಾಣ ಪ್ರತಿಷ್ಠಾಪನೆಯ ಯಜ್ಞದ ಯಜಮಾನ, ಹಾಗೆಯೇ ಊರ ಪ್ರಮುಖರ ಜಾತಕಕ್ಕೆ ತಕ್ಕಂತೆ ಪಂಚಭೂತಗಳನ್ನು ಪ್ರತಿಷ್ಠಾಪಿಸಲಾಗುತ್ತದೆ”. ಇಷ್ಟನ್ನು ಕೇಳಿ ನಮಗೆ ಸಂದೇಹ ತೀರಿದಂತಾಯಿತು, ಜೊತೆಗೆ ಇತಿಹಾಸದ ಅಧ್ಯಯನಕ್ಕೂ ಇದು ಉಪಯೋಗವಾಗಬಹುದೆಂಬ ಉಪಾಯವು ನನಗೆ ಹೊಳೆಯಿತು. 

ಜಂಬುಕೇಶ್ವರ ದೇವಾಲಯದಲ್ಲಿ ಅದ್ಭುತವಾದ ಪ್ರಾಂಗಣಗಳಿವೆ. ಒಂದೇ ಸಮನೆ ಅಲ್ಲಿ ಇಲ್ಲಿ ಅಳತೆಯೇ ತಪ್ಪದೆ ಕಟ್ಟಲ್ಪಟ್ಟಿರುವ ಮಂಟಪಗಳು, ಆವರಣದ ಅಕ್ಕ-ಪಕ್ಕದ ಕಂಬಗಳು. ಒಂದು ತುದಿಯಿಂದು ಇನ್ನೊಂದು ತುದಿಗೆ ದಾರವನ್ನು ಕಟ್ಟಿದರೆ ಕಿಂಚಿತ್ತೂ ವ್ಯತ್ಯಾಸವಾಗದಷ್ಟು ನೇರ, ಪರಿಪೂರ್ಣ! ಈ ದೇವಾಲಯದ ಗರ್ಭಗುಡಿಯು ಇಡೀ ದೇಗುಲದ ಮಟ್ಟಕ್ಕಿಂತ ಕೆಳಕ್ಕಿದೆ. ಅಪ್ಪುಲಿಂಗದ(ಅಪ್=ನೀರು) ಪಾಣಿಪೀಠದಿಂದ ಎಡಬಿಡದೆ ನೀರು ಸುರಿಯುತ್ತಿರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಈ ಶಿವಲಿಂಗವನ್ನು ಪಾರ್ವತಿಯು ಕಾವೇರಿಯಿಂದಲೇ ಮಾಡಿ ಅಖಿಲಾಂಡೇಶ್ವರಿಯ ರೂಪದಲ್ಲಿ ಪೂಜಿಸಿದಳೆಂಬುದು ಪ್ರತೀತಿ. ಶ್ರೀರಂಗಂ ದೇವಸ್ಥಾನದಲ್ಲಿ ಕೆಲವು ಕಂಬಗಳಿಗೆ ಆತುಕೊಂಡಂತೆಯೇ ಐಯಂಗಾರ್‌ ಬ್ರಾಹ್ಮಣರು ಇರುವಂತೆ, ಈ ದೇವಸ್ಥಾನದಲ್ಲಿ ಐಯ್ಯರ್‌ ಬ್ರಾಹ್ಮಣರಿದ್ದಾರೆ. ಈ ವ್ಯತ್ಯಾಸವು ಸುಲಭವಾಗಿ ಅವರ ಹಣೆ ಹಾಗು ಶಿಖೆಯನ್ನು ಕಟ್ಟುವ ಶೈಲಿ, ಹಾಗು ಕೊರಳಲ್ಲಿನ ಮಾಲೆ (ರುದ್ರಾಕ್ಷಿ ಅಥವಾ ತುಲಸಿ) ಇವುಗಳನ್ನು ನೋಡಿ ಕಂಡುಹಿಡಿಯಬಹುದು.

ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ರೀ ಮುದ್ದುಸ್ವಾಮಿ ದೀಕ್ಷಿತರು ತಮಿಳುನಾಡಿನ ಬಹುತೇಕ ಕ್ಷೇತ್ರಗಳ ಕುರಿತಾದ, ಸ್ತುತಿಸುವ ಕೃತಿಗಳ ರಚನೆ ಮಾಡಿದ್ದಾರೆ. ಅಂತೆಯೇ ದ್ವಿಜಾವಂತಿ ಎಂಬ ಸುಂದರ ರಾಗದಲ್ಲಿ ಜಂಬುಕೇಶ್ವರನ ಸತಿಯಾದ ಅಖಿಲಾಂಡೇಶ್ವರಿಯ ಕುರಿತಾಗಿ ಶ್ರೀ ಅಖಿಲಾಂಡೇಶ್ವರಿ ರಕ್ಷಮಾಂ| ಆಗಮ ಸಂಪ್ರದಾಯ ನಿಪುಣೆ || ಎಂದು ಸ್ತುತಿಸುತ್ತಾ ಕೃತಿಯನ್ನು ರಚಿಸಿದ್ದಾರೆ. ಆ ಸಾಕ್ಷಾತ್‌ ಅಖಿಲಾಂಡೇಶ್ವರಿಯದ್ದು ಎಷ್ಟು ಸುಂದರ ರೂಪವೋ ಎನ್ನುವುದು ಅಲ್ಲಿ ನೋಡಿದ ಮೇಲೆಯೇ ನನಗೂ ಅರಿವಾಯಿತು. ಓರ್ವ ಸಂಗೀತಗಾರನ ಪುಣ್ಯವದೆಂತು! ಕೇವಲ ಉದ್ಗಾರದಲ್ಲಿಯೇ ಅವಳ ಆ ದಿವ್ಯ ರೂಪವನ್ನು ಮೆಚ್ಚಿಕೊಳ್ಳುವುದುಂಟು; ಸಂಗೀತಗಾರನ ಪುಣ್ಯ ನೋಡಿ-ಅವಳನ್ನು ಹಾಡಿನ ಮೂಲಕ ಸ್ತುತಿಸಬಹುದು. ಅದರಲ್ಲೂ ದೀಕ್ಷಿತರಂತಹ ವಾಗ್ಗೇಯಕಾರರು, ಮಹಾ ಶ್ರೀವಿದ್ಯೋಪಾಸಕರು, ಸಂಸ್ಕೃತ ವಿದ್ವಾಂಸರೂ ಎಷ್ಟು ಸುಲಲಿತವಾಗಿ ಸೂಚ್ಯ ಸಾಹಿತ್ಯದೊಂದಿಗೆ ಸಾಧಕರಿಗೆ ಮಾರ್ಗದರ್ಶಕವೂ ಆಗುವಂತಹ ಕೀರ್ತನೆಯನ್ನು ರಚಿಸಿ ಹಾಡಬಹುದಷ್ಟೇ ಅಲ್ಲದೆ, ಅವರ ನಂತರದ ನೂರಾರು ಪೀಳಿಗೆಗಳು ಅಖಿಲಾಂಡೇಶ್ವರಿ ತಾಯಿಯನ್ನು ಕಂಡಾಗ ದ್ವಿಜಾವಂತಿಯಲ್ಲೇ, ಗುರುಗುಹ ಎಂಬ ಅಂಕಿತವನ್ನೇ, ಅಖಿಲಾಂಡೇಶ್ವರಿ ರಕ್ಷಮಾಂ! ಎಂದು ಉದ್ಗರಿಸಬೇಕು! ಇದೆಂತಹ ವಿಶೇಷ ಸಂಗತಿ!

ಜಂಬುಕೇಶ್ವರ ದೇವಾಲಯ

ಮುದ್ದುಸ್ವಾಮಿ ದೀಕ್ಷಿತರ ಕುರಿತಾಗಿ ವಕೀಲರೂ, ಖ್ಯಾತ ನ್ಯಾಯಾಧೀಶರೂ ಆಗಿದ್ದ ನ್ಯಾಮೂರ್ತಿ ವೆಂಕಟರಾಮ ಐಯ್ಯರ್‌ ಅವರು ಜೀವನ ಚರಿತ್ರೆಯನ್ನು ರಚಿಸಿದ್ದಾರೆ! ಕಾನೂನಿನ ವಿದ್ಯಾರ್ಥಿಯಾದ ನನಗೆ ಇದು ತುಂಬಾ ಉತ್ಸಾಹ ತರಿಸುವ ಸಂಗತಿಯೇ ಹೌದು.

ತಾಯಿ ಅಖಿಲಾಂಡೇಶ್ವರಿಯನ್ನು ಕಂಡು, ನಾವು ಅಲ್ಲೇ ಪ್ರಾಂಗಣದಲ್ಲಿ ಕುಳಿತು ಮುದ್ದುಸ್ವಾಮಿ ದೀಕ್ಷಿತರ ಅಖಿಲಾಂಡೇಶ್ವರಿ ರಕ್ಷಮಾಂ, ಹಾಗೆಯೇ ಮೈಸೂರಿನ ರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ವಡಿಯರ್‌ ಅವರು ರಚಿಸಿದ್ದ ಶ್ರೀರಾಜರಾಜೇಶ್ವರೀಂ ಆಶ್ರಯಾಮಿ ಎಂಬ ಲಲಿತಾ ರಾಗದ ಕೀರ್ತನೆಯನ್ನೂ ಗುರುಗಳೊಂದಿಗೆ ಹಾಡಿದೆವು. ಅದು ಸರಿಯಾಗಿ ದೇವಾಲಯವನ್ನು ಮುಚ್ಚುವ ಸಮಯ. ಎಲ್ಲವೂ ನಿಶ್ಶಬ್ಧವಾಗಿತ್ತು. ಗುರುಗಳು ನಮ್ಮನ್ನೆಲ್ಲಾ ಮತ್ತೆ ಅಖಿಲಾಂಡೇಶ್ವರಿ ತಾಯಿಯ ದೇವಸ್ಥಾನಕ್ಕೆ ಕರೆದೊಯ್ದು, ಆ ದೇವಾಲಯದ ಹೊಸಲಿನ ಮೇಲೆ ಕೂರಿಸಿದರು. “ಈ ಸ್ಥಾನ ತಾಯಿಯದ್ದು ಅಲ್ಲವೇ” ಅವರೆಂದರು, “ಈ ಹೊಸಲು ಅವಳ ಮಡಿಲಿಗೆ ಸಮವಪ್ಪ, ಕುಳಿತು ಆ ಮಹದಾನಂದವನ್ನು ಅನುಭವಿಸಿರೋ”. ನಾವು ಅದೇ ಭಾವದಲ್ಲಿ ಕುಳಿತಾಗ ನಿಜವಾಗಲೂ ಯಾವುದೇ ಪೂರ್ವಗ್ರಹವಿಲ್ಲದೇ ಹೇಳುತ್ತಿದ್ದೇನೆ-ಒಂದು ರೀತಿಯ ಕ್ಷೇಮ ಭಾವದ ಅನುಭವವಾಯಿತು. “ಇವಳಿರುವಾಗ ನನಗೆ ಯಾವ ಭಯ, ಅಖಿಲಾಂಡೇಶ್ವರಿ ರಕ್ಷಮಾಂ ಎಂದು ಅಂತರಾಳದಿಂದ ಹಾಡಿದರೆ ಸಾಕು ಅವಳೇ ನೋಡಿಕೊಳ್ಳುತ್ತಾಳೆ” ಎನ್ನುವಂತಹ ಭಾವ! ಅದರೊಂದಿಗೆ ಗುರುಕೃಪೆಯೂ ಬೆರೆತುಬಿಟ್ಟರೆ ಅವನಿಗಿಂತ ಪುಣ್ಯವಂತ ಇನ್ಯಾರಿಹರಯ್ಯ?

ಈ ತಮಿಳುನಾಡಿನ ಎಲ್ಲಾ ಶೈವ ದೇವಸ್ಥಾನಗಳಲ್ಲೂ ಒಂದು ಪದ್ಧತಿಯಿದೆ. ಮಂಗಳಾರತಿಯಾದ ಮೇಲೆ ಎಲ್ಲರಿಗೂ ಒಂದು ಹಿಡಿ ವಿಭೂತಿಯನ್ನು ನೀಡುತ್ತಾರೆ. ಎಷ್ಟೂ ಅಂತ ಹಣೆಗೆ ಹಚ್ಚಿಕೊಳ್ಳುವುದು? ಅದರಲ್ಲೂ ದಿನಕ್ಕೆ ಮೂರು ಮೂರು ದೇವಾಲಯಗಳು-ಅದರಲ್ಲೂ ಗಣಪತಿ, ಸುಬ್ರಹ್ಮಣ್ಯ, ದಕ್ಷಿಣಾಮೂರ್ತಿ, ಕಾಲಭೈರವ ಹೀಗೆ ಬೇರೇ ಬೇರೇ ದೇವರುಗಳು, ಎಲ್ಲರೂ ವಿಭೂತಿ ಪ್ರಸಾದವೇ! ಅಲ್ಲಿನ ಜನರಂತೂ ಕೊಟ್ಟ ವಿಭೂತಿಯೆಲ್ಲವನ್ನೂ ಅಲ್ಲಿನ ಕಂಬಗಳಿಗೆ, ಕಂಬದಲ್ಲಿ ಕೆತ್ತಿರುವ ದೇವಮೂರ್ತಿಯ ಪಾದ, ಹಣೆ, ಕಿರೀಟ ಇತ್ಯಾದಿಗಳಿಗೆ ಲೇಪಿಸಿಬಿಡುತ್ತಾರೆ. ಮೊದಲೆರಡು ದೇವಸ್ಥಾನದಲ್ಲಿ ಇದನ್ನು ಗಮನಿಸಿದ ಗುರುಗಳು ಮುಂದಿನ ಬಾರಿ ಅರ್ಚಕರು ವಿಭೂತಿ ಕೊಟ್ಟಾಗ ಹಣೆಯನ್ನೇ ನೀಡಿದರು! ಆಗ ಅರ್ಚಕನು ಬೇರೆ ಆಯ್ಕೆಯೇ ಇಲ್ಲದೆ ಖುಷಿಯಿಂದ ಹಣೆಗೇ ವಿಭೂತಿಯನ್ನಿಟ್ಟ. ನಾವುಗಳೂ ಗುರುಗಳ ಈ ಉದಾಹರಣೆಯನ್ನೇ ಪಾಲಿಸಿದೆವು. ಕೈಗಳೋ ಶಿವನ ದೇವಾಲಯಗಳಲ್ಲಿ ವಿಭೂತಿಯನ್ನೂ ಶಕ್ತಿಯ ದೇವಸ್ಥಾನದಲ್ಲಿ ಕುಂಕುಮಗಳನ್ನೂ ಪಡೆದು ಪಡೆದು, ಹಣೆಗೆ ಯಥೇಚ್ಛವಾಗಿ ಬಳಿದುಕೊಂಡು ಉಳಿದದ್ದನ್ನು ಶ್ವೇತ ವರ್ಣದ ಪಂಚೆಯ ಒಂದು ಭಾಗಕ್ಕೆ ಒರೆಸಿ ಒರೆಸಿ ಬಣ್ಣ ಬದಲಾಗಿಬಿಟ್ಟಿತ್ತು. ಗುರುಗಳ ಇದೊಂದು ಕಾರ್ಯ ಅವೆಲ್ಲವನ್ನೂ ತಪ್ಪಿಸಿತು!

ಈ ಪ್ರವಾಸ ಕಥನದ ಹಿಂದಿನ ಭಾಗ ಇಲ್ಲಿದೆ :  https://www.surahonne.com/?p=40685

(ಮುಂದುವರಿಯುವುದು)

ತೇಜಸ್‌ ಎಚ್‌ ಬಾಡಾಲಮೈಸೂರು

5 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ

  2. ಪ್ರವಾಸ ಕಥನ ಓದಿಸಿಕೊಂಡು ಹೋಗುವಂತಹ ನಿರೂಪಣೆಯ ಶೈಲಿ..ಮನಕ್ಕೆ ಮುದತಂದಿತು.. ತೇಜಸ್.. ಶುಭವಾಗಲಿ..

  3. Padma Anand says:

    ಪ್ರವಾಸ ಕಥನ ಸುಲಲಿತವಾಗಿ ಓದಿಸಿಕೊಳ್ಳುತ್ತಾ ಅನೇಕಾನೇಕ ಅಪರೂಪದ ಮಾಹಿತಿಗಳನ್ನೂ ನೀಡುತ್ತಿರುವುದು ಖುಷಿಯ ವಿಚಾರ.

  4. ಚಂದದ ಪ್ರವಾಸ ಕಥನ

  5. ಶಂಕರಿ ಶರ್ಮ says:

    ಸುಂದರ ದೇವಾಲಯದ ಕುರಿತ ಮಾಹಿತಿಪೂರ್ಣ ಪ್ರವಾಸ ಕಥನವು ಚೆನ್ನಾಗಿ ಮೂಡಿಬರುತ್ತಿದೆ…ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: