ಉತ್ತರ ಬೇಡದ ಪ್ರಶ್ನೆಗಳಿವು!
ಇಲ್ಲಿ ಹೇಳು,
ನೀನೇ ನನ್ನೊಳಗೆ ಹುಟ್ಟಿದ್ದ?
ಅಥವಾ
ನಾನೇ ನನ್ನೊಳಗೆ ನಿನ್ನ ನೆಟ್ಟಿದ್ದ?
ಈಗ…..
ನಾನು ನಿನ್ನೊಳಗೆ ಅರಳಿದ್ದ!?
ಅಥವಾ,
ನಾನೇ ನನ್ನೊಳಗೆ ನಿನ್ನ ಬೆಳೆಸಿದ್ದ!?
ಈ ಮೊದಲು…..
ನೀನೇ ನನ್ನ ಮೆಚ್ಚಿಕೊಂಡದ್ದ?
ಅಥವಾ,
ನಾನೇ ನಿನ್ನ ಹಚ್ಚಿಕೊಂಡದ್ದ?
ಇನ್ನು ಮುಂದೆ,
ನೀನೂ ನಿನ್ನೊಳಗೆ ನನ್ನ ಉಳಿಸಿಕೊಳ್ಳೋದ?
ಅಥವಾ,
ನಾನು ಮಾತ್ರ ನನ್ನೊಳಗೆ ನಿನ್ನ ನೆನಪಿಸಿಕೊಳ್ಳೋದ?
–ಶ್ರೀಮತಿ ಕೆ ಜಿ ನಂದಿನಿ, ಮೈಸೂರು
ಅಪರೂಪಕೆ ಕವಿತೆಯನ್ನು ಬರೆಯುವ ಮೈಸೂರಿನ ಶ್ರೀಮತಿ ನಂದಿನಿಯವರು ಇನ್ನೊಂದು ಚೆಂದದ ಕವಿತೆ ಕೈಗಿತ್ತು, ಸಹೃದಯರನ್ನು ಸಾರ್ಥಕಗೊಳಿಸಿದ್ದಾರೆ. ಕಡಮೆ ಬರೆದರೂ ಸ್ವಲ್ಪವೇ ಪದಗಳಲ್ಲಿ ಹಿರಿದರ್ಥ ಹುದುಗಿಸುವ ಕಲೆಯಲ್ಲಿ ಇವರು ನಿಷ್ಣಾತರು. ನಾನಿವರ ಬರೆಹಗಳ ಅಭಿಮಾನಿ. ಈಗಾಗಲೇ ಇವರ ಕೆಲವು ಕವಿತೆಗಳನ್ನು ಓದಿದ ಕೂಡಲೇ ಕುರಿತು ಬರೆದುಬಿಟ್ಟ ಅನಾಹುತಗಳನ್ನು ಪತ್ರಿಕೆಗಳು ಪ್ರಕಟಿಸಿವೆ! ಹಾಗೆ ನೋಡಿದರೆ ಕವಿತೆಯನ್ನು ವಿವರಿಸಬಾರದು; ನನ್ನೊಳಗೆ ವಿವರಿಸಿಕೊಳ್ಳಬೇಕು. ನನಗಿದು ಗೊತ್ತು. ಆದರೂ ಮತ್ತೆ ಇಂಥ ತಪ್ಪನ್ನು ಮಾಡುತ್ತಿರುವೆ. ನನಗೆ ನಾನೇ ಅಸ್ಪಷ್ಟಗೊಂಡಾಗ, ನನ್ನೊಳಗೆ ನಾನೇ ಮನದಟ್ಟು ಮಾಡಿಕೊಳ್ಳಬೇಕಾದಾಗ ತೀವ್ರವಾಗಿ ಕಾಡಿದಾಗ ಮಾತ್ರ ಬರೆವ/ ಟೈಪಿಸುವ ಖಯಾಲಿಗೆ ಇದು ಇನ್ನೊಂದು ನಿದರ್ಶನ.
ಇವರ ಈ ಕವಿತೆಗೆ ಶೀರ್ಷಿಕೆಯಿಲ್ಲ! ಕೊಡುವುದನ್ನು ಮರೆತರೆ? ಗೊತ್ತಿಲ್ಲ. ನನಗಿದು ಮ್ಯಾಟರಲ್ಲ! ಏಕೆಂದರೆ ಕವಿ ಬರೆದದ್ದರಲಿ ಹುಡುಕಾಡಬೇಕು; ಬರೆಯಬೇಕಿದ್ದರ ಕುರಿತು ಅಲ್ಲ! ಹಾಗಾಗಿ ಇದು ಶೀರ್ಷಿಕೆರಹಿತ ಕವನ. ಹಾಗೆಂದರೆ? ಹೌದು. ನನ್ನ ಪ್ರಕಾರ ಇದರ ಮೊದಲ ಸಾಲೇ ಕವಿತೆಯ ಶಿರೋನಾಮೆ. ‘ಇಲ್ಲಿ ಹೇಳು,’ ಎಂಬುದರ ಹಿಂದೆ ಅಡಗಿರುವ ಹಲವು ಸಂವಾದಗಳು ಅಧ್ಯಾಹಾರ. ಅಂದರೆ ಈ ಪದ್ಯದ ಸಾಲುಗಳ ಭಾವಾರ್ಥ ಮನವರಿಕೆ ಆಗಬೇಕಾದರೆ ಇಬ್ಬರ ನಡುವೆ ಏನೇನೋ ನಡೆದು ಹೋಗಿವೆ! ಆ ಇಬ್ಬರು ಯಾರು? ಯಾರು ಬೇಕಾದರೂ ಆಗಿರಬಹುದು! ಕವಯಿತ್ರಿಯು ಎಷ್ಟೊಂದು ಕುಶಲತೆಯಿಂದ ಇದನ್ನು ಹೆಣೆದಿದ್ದಾರೆಂದರೆ, ಅವರವರ ಭಾವಕ್ಕೆ ಅವರವರ ಜೀವಕ್ಕೆ ಪ್ರಿಯರಾದವರನ್ನು ಆವಾಹಿಸಿಕೊಳ್ಳಲು ಮತ್ತು ಆರೋಪಿಸಿಕೊಳ್ಳಲು ಸಮೃದ್ಧ ಅವಕಾಶ ನೀಡುತ್ತಾ, ಜಸ್ಟ್ ಕ್ರಿಯಾಪದಗಳಲ್ಲೇ ನಾಮಪದಗಳನ್ನು ಅಂತರ್ಗತಗೊಳಿಸಿದ್ದಾರೆ. ಮೇಲುನೋಟಕ್ಕೆ ಇದು ಹೆಣ್ಣುಗಂಡಿನ ಪ್ರೇಮಾಂಕುರ ಅಂತಲೋ ಮೈತ್ರಿ ಮೂಡಿದ್ದರ ಆವಿರ್ಭಾವ ಅಂತಲೋ ಆಲೋಚಿಸುವ ಹೊತ್ತಿಗೆ, ಮುಕ್ತಾಯಕ್ಕೆ ಹೊರಳುತ್ತಾ, ಬದುಕಿನ ಜೀವಮಾನವನ್ನೇ ಕುರಿತು ಹೇಳುತ್ತಿದೆಯೆಂಬ ಅನುಭವ ನಮಗಾಗುವುದು. ಎಲ್ಲವೂ ಮೊದಲಿನಂತಿಲ್ಲವೆಂಬ ತಿರುವನ್ನು ಕವಿತೆ ಸದ್ದಿಲ್ಲದೇ ಪ್ರತಿಪಾದಿಸುತ್ತದೆ.
ಕವನದಲ್ಲಿ ನಾಲ್ಕು ಸ್ಟಾಂಜ಼ಾಗಳಿವೆ. ಪ್ರತಿ ಸ್ಟಾಂಜ಼ಾವು ಒಂದೊಂದು ಗ್ರಹಿಕೆಯನ್ನು ನಿರೂಪಿಸುವುದರತ್ತ ಮಗ್ನವಾಗಿದೆ. ಮೊದಲ ಪದ್ಯಪಾದವು ಅಂಕುರಾರ್ಪಣೆ. ಈ ಬಂಧಕ್ಕೆ ಮೂಲವೇನಾಗಿತ್ತು? ಈಗ ಕೇಳಿಕೊಳ್ಳಲೇಬೇಕಾಗಿದೆ. ನಮ್ಮಿಬ್ಬರ ಈ ಸಂಬಂಧವು ಸಹಜವಾದ ಪ್ರೇಮವೋ? ಅಥವಾ ನಾನೇ ನಿನ್ನನ್ನು ನೆಟ್ಟು ಬೆಳೆಸಲು ಮುಂದಾದ ಮೋಹವೋ? ಈಗ ಇದನ್ನು ನಾನು ಕೇಳಿಕೊಳ್ಳುವಂತಾಗಿದೆ ಮಾತ್ರವಲ್ಲ, ನೀನೀಗ ಇದನ್ನು ಹೇಳಲೇಬೇಕಾಗಿದೆ! ಅಂಥ ಕಾಲ ಬಂದಿದೆ. ಆತ್ಮಾವಲೋಕನಕ್ಕೆ ಸಮಯ ಕೂಡಿದೆ. ಈ ಬಂಧವಿನ್ಯಾಸದಲ್ಲಿ ನನ್ನ ಪಾಲೆಷ್ಟು? ನನ್ನ ಹೊಣೆಯೆಷ್ಟು? ವಿಧಿವಿಲಾಸದ ಪರಿಯನ್ನು ಅರ್ಥ ಮಾಡಿಕೊಳ್ಳುವ ಅಂಚಿಗೆ ಬಂದು ಬಿಟ್ಟಾಗ ಈ ಉತ್ತರೋತ್ತರ ಕ್ರಿಯೆ ಬೇಕಾಗಿ ಬಂದಿದೆ! ಒಂದು ನಿಶ್ಚಿತ ತೀರ್ಮಾನಕ್ಕೆ ಬರುವಂತಾಗಿದೆ. ನಾನೇ ನನ್ನ ಕೈಯಾರೆ ನಿನ್ನನ್ನು ನೆಟ್ಟಿದ್ದು ಎನ್ನುವುದಾದರೆ ಈ ಎಲ್ಲ ಆಗುಹೋಗುಗಳಿಗೆ ನಾನಷ್ಟೇ ಜವಾಬುದಾರ/ರಿ. ಆದರೆ ನನ್ನ ಒಳಮನ ತುಡಿಯುತ್ತಿದೆ: ನೀನೇ ನನ್ನೊಳಗೆ ಹುಟ್ಟಿದ್ದಲ್ಲವಾ? ಸುಮ್ಮನಿದ್ದ ನನ್ನಲ್ಲಿ ನೀನೇ ಗುನುಗುನಿಸುವ ಹಾಡಾಗಲಿಲ್ಲವಾ? ಇದರಲ್ಲಿ ಸ್ವಾಭಾವಿಕವೆಷ್ಟು? ಮುಖವಾಡವೆಷ್ಟು? ಹೇಳೀಗ!
ಕವಿತೆಯ ಸಾಲುಗಳ ಎರಡನೆಯ ಪದ್ಯಪಾದವು ಮೊದಲ ಸ್ಟಾಂಜ಼ಾದ ಭಾವವನ್ನು ಬೆಳೆಸುತ್ತದೆ. ಇದು ಅಂತರಾವಲೋಕನ. ಹುಟ್ಟಿದ್ದೋ? ನೆಟ್ಟಿದ್ದೋ? ಇರಲಿ. ಈಗ ಅರಳಿ ಬೆಳೆದ ಪ್ರಕ್ರಿಯೆಯನ್ನು ಗಮನಿಸುವ. ನಾನು ನಿನ್ನೊಳಗೆ ಅರಳಿದೆನೆ? ಅಥವಾ ನಾನೇ ನನ್ನೊಳಗೆ ನಿನ್ನನ್ನು ಬೆಳೆಸಿದೆನೆ? ಇದೀಗ ಇನ್ನೊಂದು ಪ್ರಶ್ನೆಯಾಗಿದೆ! ಇದಕೂ ಉತ್ತರ ಬೇಕಾಗಿದೆ. ಅದಕಾಗಿಯೇ ಇಲ್ಲಿ ‘ಹೇಳೀಗ…….’ ಎಂದು ಒತ್ತಾಯಿಸುವಂತಾಗಿದೆ. ಇಷ್ಟು ದಿವಸ ಈ ಪ್ರಶ್ನೆ ಎದುರಾಗಿರಲಿಲ್ಲ. ಈಗ ಧುತ್ತೆಂದು ಬಂದು ಬೃಹದಾಕಾರವಾಗಿದೆ. ನನ್ನದು ಪೂರ್ವಗ್ರಹಿಕೆಯೋ? ತಪ್ಪುಗ್ರಹಿಕೆಯೋ? ಇದನ್ನು ಗೊತ್ತು ಮಾಡಿಕೊಳ್ಳಬೇಕು ಎನ್ನುತ್ತದೆ ಕವಿತೆಯ ನಿರೂಪ.
ನಾವೆಲ್ಲ ನಂನಮ್ಮ ಅನಿಸುವಿಕೆಗಳಲ್ಲಿ ಕಳೆದು ಹೋದವರು. ಇಲ್ಲಿ ನಿಂತರೆ ರಾಮ; ಅಲ್ಲಿ ನಿಂತರೆ ಭೀಮ ಎಂಬ ಏಕಪಾತ್ರಾಭಿನಯ ಮಾಡುವವರು. ವಾಸ್ತವಕೂ ಕಲ್ಪನೆಗೂ ಇರುವ ಅಂತರ ಅರಿಯದೇ ಒದ್ದಾಡಿದವರು. ನನ್ನಂತೆಯೇ ಇತರರು ಎಂದುಕೊಂಡು ಬೇಸ್ತು ಬಿದ್ದವರು! ಭಾವಜೀವಿಗಳ ತೀವ್ರತೆಯೇ ಹೀಗೆ; ಗುನ್ನ ಬಿದ್ದರೂ ತಿರುಗುವುದನು ನಿಲ್ಲಿಸದ ಬುಗುರಿಯ ಹಾಗೆ!! ಒಂದೇ ಒಂದು ಸ್ಪರ್ಶಕೆ ಅನುರಣನಗೊಳ್ಳುವ ದೇಗುಲಗಂಟೆಯ ಹೆಣಿಗೆ. ಸ್ಪಂದನಕೆ ಸಹಸ್ಪಂದನವಿದ್ದಾಗ ಭಾವಕೆ ಜೀವದ ಸಂಯೋಗ. ಪ್ರತಿಸ್ಪಂದನವಿಲ್ಲದಿದ್ದಾಗ ಕೇವಲ ಭ್ರಮೆ; ವಿಯೋಗ. ಇಲ್ಲಾಗಿರುವುದೂ ಇದೇ. ನನ್ನ ಕೈಯ್ಯಾರೆ ನೆಟ್ಟು ಬೆಳೆಸಿದ್ದೋ ಅಥವಾ ನಿನ್ನ ಪ್ರೀತಿಯ ನೀರೂ ಪರಿಶ್ರಮದ ಬೆವರೂ ಕೂಡಿಕೊಂಡು ಬೆಳೆದದ್ದೋ? ತಿಳಿಯಬೇಕಿದೆ; ಹಾಗಾಗಿ ನೀನು ತಿಳಿಸಬೇಕಾಗಿದೆ!
ಕವಿತೆಯ ಮೂರನೆಯ ಸ್ಟಾಂಜ಼ಾವು ಈಗ ಒಂಚೂರು ಫ್ಲ್ಯಾಷ್‌ಬ್ಯಾಕಿಗೆ ಹೋಗುತ್ತದೆ. ಹಿನ್ನೆಲೆಯ ನಿವೇದನವಿದು. ಜೀವಂತವಿದ್ದಾಗಲೇ ಜೀವವನ್ನು ಅಲ್ಲ, ಜೀವನವನ್ನು ಬಗೆಯುವ ‘ಪೋಸ್ಟ್‌ಮಾರ್ಟಂ’ ನಡೆಸಬೇಕಿದೆ. ಈ ಪ್ರಶ್ನಾವಳಿಗೆ ಉತ್ತರ ಹುಡುಕುವುದಾದರೆ ಇಂಥ ಪೂರ್ವಕಾಲವನ್ನು ಸ್ಮರಿಸಿಕೊಳ್ಳಬೇಕು. ಹೀಗಾಗಿ, ಈ ಮೊದಲು ‘ನೀನೇ ನನ್ನ ಮನಸಾರೆ ಮೆಚ್ಚಿದ್ದಾ? ಅಥವಾ ನಾನೇ ನಿನ್ನನ್ನು ಹಚ್ಚಿಕೊಂಡದ್ದಾ?’ ಕವಿತೆಯು ಪರೋಕ್ಷವಾಗಿ ಕೇಳಿಕೊಳ್ಳುತ್ತಿದೆ: ಬದುಕು ಒನ್ವೇ ಹೌದಾ? ಅಥವಾ ರನ್ವೇ ಕೂಡ ಇದೆಯಾ? ಇಷ್ಟು ಕಾಲದವರೆಗೂ ನಮ್ಮ ಬಾಳುವೆ ಟೂವೇ ಎಂದುಕೊಂಡಿದ್ದು ಇದೀಗ ಹಾಗಿಲ್ಲವಲ್ಲ ಎಂಬ ಶಂಕೆ ಮೂಡತೊಡೊಗಿದೆ; ಸಂದೇಹಿಸುವಂಥ ಸಂದರ್ಭಗಳು ಸೃಷ್ಟಿಯಾಗಿವೆ!
ಇಂಥ ಹೊತ್ತಲ್ಲಿ ನಾನೀಗ ಈ ಎಲ್ಲವನೂ ಹೊರ ಹಾಕುವಂತಾಗಿದೆ. ನಮ್ಮ ಅಥವಾ ನನ್ನ ಬದುಕೀಗ ಒಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ತಿರುವಿಗೆ ಬಂದು ನಿಂತಿದೆ. ಜೀವನಪಯಣದ ಓಟದ ಹಾದಿಯಲ್ಲಿ ಎರಡು ದಾರಿಗಳು ಕಾಣಿಸುತ್ತಿವೆ. ಯಾವ ದಾರಿಯನ್ನು ಆಯ್ದುಕೊಳ್ಳಬೇಕೆಂಬುದೂ ಈಗ ನಿನ್ನ ಉತ್ತರದಿಂದ ಸ್ಪಷ್ಟವಾಗಬೇಕಿದೆ. ಇನ್ನು ಮುಂದೆ ಏನು? ಹೇಗೆ? ಎಂಬ ದೊಡ್ಡ ಪ್ರಶ್ನಾರ್ಥಕ ನನ್ನನ್ನು ಕಾಡುತ್ತಿದೆ. ‘ನೀನು ನನ್ನನ್ನು ಉಳಿಸಿಕೊಳ್ಳುವುದೋ? ಅಥವಾ ನಾನಷ್ಟೆ ನನ್ನೊಳಗೆ ನಿನ್ನ ನೆನಪಿಸಿಕೊಳ್ಳವುದೋ?’ ಇದೀಗ ಸವಾಲು. ‘ಬಾಳಾಪಯಣದ ಹಾದೀಲಿ ಅಲ್ಲಲ್ಲಿ ನೂರಾರು ನಿಲ್ದಾಣ; ನೆನಪನ್ನ ಬಿಟ್‌ಹೋಗೋ ಪಯಣಿಗರ ಜೊತೆಯಲ್ಲಿ ಏನೆಲ್ಲಾ ಸಂಧಾನ……….’ ಎಂಬ ‘ಓ ಮಲ್ಲಿಗೆ’ ಚಿತ್ರಕೆ ವಿ ಮನೋಹರ್ ಬರೆದ ಮನೋಜ್ಞ ಸಾಲುಗಳು ನನ್ನ ಸ್ಮರಣಕೋಶದಲ್ಲಿದ್ದುದು ಮುನ್ನೆಲೆಗೆ ಬಂದವು. ಇವು ನಿರ್ಣಯಾತ್ಮಕವಾದವು. ಆದರೆ ಈ ಕವಿತೆಯ ಸಾಲುಗಳು ನಿರ್ಣಯಕ್ಕೆ ಕಾಯುತ್ತ ಕುಳಿತವು!
ಈ ಎಲ್ಲವನೂ ಕವಯಿತ್ರಿಯು ಓದುಗರ ಕಲ್ಪನೆಗೆ, ಊಹೆಗೆ ಮತ್ತು ಶಕ್ತ್ಯನುಸಾರ ಅವರ ದೃಷ್ಟಿಕೋನಗಳಿಗೆ ಬಿಟ್ಟು ತಮ್ಮ ಆ ಕ್ಷಣದ ತೂಗುಯ್ಯಾಲೆಯನ್ನು ಒಮ್ಮೆ ತೂಗಿ ದೂರ ನಿಂತು ಬಿಟ್ಟಿದ್ದಾರೆ. ಇದೀಗ ಓದಿದ ಮನಸುಗಳಿಗೆ ಜೀಕುತ್ತಿರುವ ತೂಗುಯ್ಯಾಲೆಯ ಸಶಬ್ದ ಪ್ರತಿಧ್ವನಿಸುತ್ತಿದೆ; ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ಸರಿಯುತ್ತಿರುವ ಲೋಲಕದಂತೆ ಚಿತ್ತ ಆಯಾಚಿತವಾಗಿ ಕವನದ ಆಳಕ್ಕೆ ಇಳಿದು ತಳ ಹುಡುಕುತ್ತ ಕಳೆದು ಹೋಗುತ್ತದೆ. ಮೇಲೆದ್ದು ಬರಲು ಏನಾದರೂ ಸಿಕ್ಕೀತೆ? ಎಂದು ಮತ್ತೆ ಕವಿತೆಯನ್ನು ಮೊದಲಿನಿಂದ ಓದಲು ಶುರು ಹಚ್ಚಿಕೊಳ್ಳುತ್ತದೆ. ಇದು ಕವಿತೆಯ ಮಹತ್ತತೆ ಮತ್ತು ಪ್ರಸ್ತುತತೆ. ಸಾಮಾನ್ಯ ಪದಪುಂಜದಲೇ ವ್ಯಾಪಕಾರ್ಥ ಧ್ವನಿಸುತಿರುವ ಈ ಸಾಲುಗಳ ಕ್ರಿಯಾಪದ ಬಳಕೆ ವಿಶೇಷವಾದುದು. ಹುಟ್ಟಿದ್ದು, ನೆಟ್ಟಿದ್ದು, ಅರಳಿದ್ದು, ಬೆಳೆಸಿದ್ದು, ಮೆಚ್ಚಿದ್ದು, ಹಚ್ಚಿಕೊಂಡದ್ದು, ಉಳಿಸಿಕೊಳ್ಳುವುದು ಮತ್ತು ನೆನಪಿಸಿಕೊಳ್ಳುವುದು – ಇವೆಲ್ಲ ಎಲ್ಲರಿಗೂ ಗೊತ್ತಿರುವಂಥವೇ. ಆದರೆ ಈ ಕವಿತೆಯ ಭಾವಕ್ಕೆ ಇವೆಲ್ಲ ಅಂಟಿಕೊಂಡಾಗ ಹೊಸದೊಂದು ತಾಕಲಾಟವನ್ನೂ ತೊಳಲಾಟವನ್ನೂ ಕಟ್ಟಿಕೊಡುವಲ್ಲಿ ಅಪರಿಮಿತ ಯಶಸ್ಸು ಸಾಧಿಸುತ್ತದೆ. ಇಂಥ ಸಶಕ್ತ ಕ್ರಿಯಾಪದಗಳ ಮೂಲಕವೇ ಕವಯಿತ್ರಿಯು ಕವನದ ವಸ್ತುವನ್ನು ನಿರ್ವಹಿಸಿದ್ದಾರೆ; ಅಸ್ಪಷ್ಟಗೊಂಡ ಮನದ ತಳ್ಳಂಕವನ್ನು ಸ್ಪಷ್ಟವಾಗಿ ಆದರೆ ಕಲಾತ್ಮಕವಾಗಿ ಅಭಿವ್ಯಕ್ತಿಸಿದ್ದಾರೆ. ಅದರಲ್ಲೂ ನನಗೆ ಬಹಳ ಮುಖ್ಯವೆನಿಸಿದ್ದು ‘ನೀನೇ ನನ್ನ ಮೆಚ್ಚಿಕೊಂಡದ್ದಾ? ಅಥವಾ ನಾನೇ ನಿನ್ನ ಹಚ್ಚಿಕೊಂಡದ್ದಾ?’ ಇದು ಮೊದಲು ಬಗೆಹರಿಯಬೇಕು ಎಂಬುದರ ಖಚಿತತೆ.
‘ಹಚ್ಚಿಕೊಳ್ಳುವುದು’ ಎಂಬುದು ನಮ್ಮ ಕನ್ನಡದ ಸುಂದರ ನುಡಿಗಟ್ಟು. ಕುಂಕುಮ ಹಚ್ಚಿಕೊಳ್ಳುವುದು, ವಿಭೂತಿ ಹಚ್ಚಿಕೊಳ್ಳುವುದು ಎಂಬಲ್ಲಿ ಇರುವ ಅರ್ಥವೇ ಬೇರೆ; ‘ಅವರನ್ನ ನಾನು ತುಂಬಾ ಹಚ್ಕೊಂಡಿದೀನಿ’ ಎಂದಾಗ ಉದ್ಭವಿಸುವ ಅರ್ಥಪರಂಪರೆಯೇ ಬೇರೆ. ಅಂದರೆ ನನ್ನದೇ ಜೀವವೆಂದುಕೊಂಡಿದ್ದೇನೆ ಎಂಬ ಆಪ್ತತೆ; ಆತ್ಮೀಯತೆ ಮತ್ತು ಮಾಧುರ್ಯತೆ. ಇಂಥದೊಂದು ಭಾವವನ್ನು ದೀಪ್ತಗೊಳಿಸಿದ ಕವಯಿತ್ರಿಯ ಬೆರಳಲ್ಲೂ ಕರುಳಲ್ಲೂ ಇರುವ ಕಕ್ಕುಲಾತಿಯನ್ನು ಗುರುತಿಸಬೇಕು; ಕಾರುಣ್ಯಮೂರ್ತಿಯೂ ಸಹನಾವಂತಳೂ ಆದ ಹೆಣ್ಣಿನ ಹೃದಯ ಮತ್ತು ಮನಸುಗಳಷ್ಟೇ ಹೀಗೆ ಹೇಳಲು ಸಾಧ್ಯ. ಹಾಗಾಗಿ ಇದು ಓರ್ವ ಹೆಣ್ಣಿನ ಅಂತರಾಳದ ಸದ್ದಿಲ್ಲದ ಚಡಪಡಿಕೆ ಎಂದಂದುಕೊಂಡರೆ ಕವಿತೆ ಹೆಚ್ಚು ಕನೆಕ್ಟ್ ಆಗುತ್ತದೆ ಎಂಬುದು ನನ್ನ ಅನಿಸಿಕೆ. ಇದರಾಚೆಗೂ ಇರುವ ಸಾಧ್ಯತೆಗಳನ್ನು ಸಹೃದಯರು ತಮ್ಮಳವಿನಲ್ಲಿ ಖಂಡಿತ ಕಂಡುಕೊಳ್ಳುವರು ಎಂಬ ವಿಶ್ವಾಸ ನನಗಿದೆ. ಇದು ಪ್ರೇಮವಾ? ಸಖ್ಯ ಮಾತ್ರವಾ? ವಿವಾಹಪೂರ್ವವಾ? ವಿವಾಹೋತ್ತರವಾ? ದಾಂಪತ್ಯದಲ್ಲಾಗುವ ಕಿನಿಸು ಮುನಿಸಿನ ರಂಪವಾ? ಶುದ್ಧ ಗೆಳೆತನವಾ? ಸ್ವಾರ್ಥ ದೊರೆತನವಾ? ಈ ಎಲ್ಲವನೂ ರಚನಾಕಾರ್ತಿಯು ಓದುಗದೊರೆಗಳಿಗೆ ಬಿಟ್ಟು ಬಿಟ್ಟಿದ್ದಾರೆ. ಅಭಿವ್ಯಕ್ತೀಕರಣ ಮಾತ್ರ ನನ್ನದು; ಅದರ ವ್ಯಕ್ತೀಕರಣ ನಿಮ್ಮದು ಎಂದು!! ಅಂತರಾಳವನ್ನು ಕಲಕುವ ಮತ್ತು ಭಾವ ವಿಭಾವಗಳನ್ನು ಬೆದಕುವ ಇಂಥ ಆತ್ಮಮುಖಿಯಾಗುವ ಕವನ ಕೊಟ್ಟಿದ್ದಕ್ಕೆ ಶ್ರೀಮತಿ ನಂದಿನಿಯವರಿಗೆ ಧನ್ಯವಾದ ಮತ್ತು ಅಭಿನಂದನೆ.
-ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ
Nice
ಧನ್ಯವಾದಗಳು
ಧನ್ಯವಾದಗಳು ಸುರಹೊನ್ನೆಗೆ
ಮತ್ತು
ಓದಿ ಪ್ರತಿಕ್ರಿಯಿಸುವ ಓದುಗರಿಗೆ…..
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಕವಿತೆಯೊಳಗಣ ಹೂರಣದ ಸೊಗಸಾದ ವಿಶ್ಲೇಷಣೆಯ ಬರಹವಿದು.
ಹೌದು ಮೇಡಂ, ಇವರ ಕವಿತೆಗಳಲಿ ಅದೇನೋ ವಿಶೇಷವಿದೆ.
ಗೊತ್ತಾಗುವ ತನಕ ಹೀಗೆ ಬರೆಯುತಲೇ ಇರುವೆ. ಗೊತ್ತಾದರೆ ನಿಲ್ಲಿಸಿ ಬಿಡುವೆ !
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ
ಆ ವಿಶೇಷ ಬರಿಯ ಅನುಭವ ವೇದ್ಯವಾಗಿರಲಿ, ಗೊತ್ತಾಗುವುದೇ ಬೇಡ, ನಿಲ್ಲಿಸದೆ ಹೀಗೇ ಬರೆಯುತ್ತಿರಿ, ನಾನು ಓದುತ್ತಿರುವೆ.
ಕವಿತೆಯ ವಿಶ್ಲೇಷಿಸಿ ದ ರೀತಿ ತುಂಬಾ ಅಪ್ಯಾಯಮಾನವಾಗಿಬಂದಿದೆ ಸಾರ್.. ಹಾಗೆ..ಯಾವುದಾದರೂ ಬರವಣಿಗೆ ಯಾಗಲಿ..ಸೂಕ್ಷಾವಲೋಕನಮಾಡುವ ಪ್ರವೃತ್ತಿ ಯನ್ನುಬಳಸಿಕೊಳ್ಳುವಂತೆ ಪ್ರೇರೇಪಿಸುವಂತಿದೆ ಸಾರ್ ವಂದನೆಗಳು.
ಧನ್ಯವಾದ ಮೇಡಂ
ಕವನದ ವಿಶ್ಲೇಷಣಾತ್ಮಕ ಬರಹವು ಚಿಂತನೆಗೆ ಹಚ್ಚುವಂತಿದೆ.
ಧನ್ಯವಾದ ಮೇಡಂ