ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 1
ತಮಿಳುನಾಡಿನ ಐದು ದಿನಗಳ ಪ್ರವಾಸಾನುಭವ
ಉಪೋದ್ಘಾತ
ನಮಸ್ಕಾರ. ಪ್ರವಾಸವು ಬರಹಗಾರನಿಗೆ ಮೃಷ್ಟಾನ್ನ ಭೋಜನದಂತೆ. ಬರಹ ಕಲಿಯುತ್ತಿರುವ ನನ್ನಂತಹವನಿಗೂ ಅದು ಒಂದು ಸಂತೋಷ. ಇಂಡಿಯಾ ಹೋಗಿ ಭಾರತ ಪ್ರವರ್ಧಮಾನಕ್ಕೆ ಬರುತ್ತಿರುವ ಕಾಲವಿದು. ನಮ್ಮ ದೇವಾಲಯಗಳು ಇಷ್ಟು ಅದ್ಭುತವಾಗಿದೆಯೇ? ಎಂದು ನಾವು ಕೇಳುವ ಕಾಲವೂ ಈಗ ಬರುತ್ತಿದೆ.
ಏನು ಬರೆಯಲು ಕುಳಿತರೂ ಓಡದ ತಲೆ; ಒಂದು ಆಲೋಚನೆಯೂ ಇಲ್ಲ ಎಂದು ನಾನು ಚಿಂತೆಯಲ್ಲಿ ಮುಳುಗಿಹೋಗಿದ್ದೆ. ಬಹಳಷ್ಟು ಬಾರಿ ಹೀಗೆಯೇ. ಬರೆಯದೇ ಹೋದರೆ ಜೀವನದಲ್ಲಿ ನಾನು ಏನೂ ಮಾಡುತ್ತಿಲ್ಲವೆಂಬ ಭಯ ನನ್ನನ್ನು ಆವರಿಸಿಬಿಡುತ್ತದೆ. ಬೌದ್ಧಿಕ ವೃದ್ಧಾಪ್ಯ ಬಂದುಬಿಟ್ಟಿದ್ದೆಯೇ? ಇಷ್ಟೊಂದು ನಿಶ್ಚೇಷ್ಟಿತನಾಗಿಬಿಟ್ಟರೆ ನಾನು ಆಗುವುದೇನು-ಇತ್ಯಾದಿಯಾಗಿ ನನಗೆ ಆತಂಕವುಂಟಾಗಿಬಿಡುತ್ತದೆ. ಹೀಗಿರುವಾಗ ನನ್ನ ಶ್ರೀಗುರುಗಳಾದ ಡಾ ರಾ ಸ ನಂದಕುಮಾರ್‌ಅವರು ನನ್ನನ್ನು ತಮಿಳುನಾಡಿನ ಪ್ರವಾಸಕ್ಕೆ ಕರೆದೊಯ್ದರು. ಮುಂದಿನ ವೃತ್ತಾಂತವೆಲ್ಲವೂ ಅದೇಯೆ.
ಪಾತ್ರ ಪರಿಚಯ:
ಶ್ರೀಗುರುಗಳು– ಡಾ ರಾ ಸ ನಂದಕುಮಾರ್.ಗುರುಗಳು ನನಗೆ ಕೇವಲ ಸಂಗೀತದಲ್ಲಲ್ಲ-ಎಲ್ಲದರಲ್ಲಿಯೂ. ಅವರಿಗೆ ತಿಳಿಯದ ವಿಷಯವೇ ಇಲ್ಲ ಎಂದು ನನ್ನ ನಂಬಿಕೆ. ಅವರು ಬುದ್ಧಿ ಹೇಳಿದರೂ ಅದನ್ನು ಕೇಳುತ್ತಲೇ ಇರಬೇಕೆನ್ನುವಷ್ಟು ಸುಂದರವಾಗಿ ಹೇಳುತ್ತಾರೆ. ಎಲ್ಲದರಲ್ಲಿಯೂ ಕಾವ್ಯವನ್ನು ತತ್ವವನ್ನೂ ಅಡಗಿಸಿಬಿಟ್ಟು ಹೇಳುತ್ತಾರೆ.
ಹರ್ಷ ಅಣ್ಣ-ಶ್ರೀಹರ್ಷ. ಇವರನ್ನು ನೀವು ಜ಼ೀ ಸರಿಗಮಪದಲ್ಲಿ ಹಾಗೆಯೇ ಬೇರೆ ಬೇರೆ ಕಾರ್ಯಕ್ರಮದಲ್ಲಿ ನೋಡಿಯೇ ಇರುತ್ತೀರಿ. ಎಷ್ಟು ವಿನಯವಂತ ಎಂದರೆ-ಅವರ್ಣನೀಯ. ಗುರುಕುಲದಲ್ಲಿ ನನಗಿಂತ ಮೊದಲು ಬಂದು ಸೇರಿದವರಾದ್ದರಿಂದ, ನನಗಿಂತಲೂ ಗುರುಗಳ ಬಳಿ ಹೆಚ್ಚು ಕಲಿತಿರುವವರಾದ್ದರಿಂದ, ಇವರನ್ನು ನಾನು ಅಣ್ಣ ಎಂದು ಕರೆಯುತ್ತೇನೆ. ಪ್ರವಾಸದ ಸಾರಥಿ ಇವರೇ.
ಕೌಸ್ತುಭ ಅಣ್ಣ- ಕೌಸ್ತುಭ ಎಂ ಎಸ್.ಇವರೂ ಮೈಸೂರಿನ ಸಂಗೀತ ಸಾರಸ್ವತ ಲೋಕದಲ್ಲಿ ಚಿರಪರಿಚಿತರು. ಸಜ್ಜನ ಮಾನಸಕ್ಕೆ ಇವರು ತಕ್ಕ ಉದಾಹರಣೆ. ಗುರುಗಳ ಬಲಭುಜ ಎಂದು ಇವರನ್ನು ಗುರುಕುಲದಲ್ಲಿ ಕರೆಯುವುದುಂಟು. ಅಷ್ಟೇ ಹಾಸ್ಯವನ್ನೂ ಮಾಡುವ, ಹೊಸ ವಿಷಯಗಳನ್ನು ತಿಳಿದುಕೊಳ್ಳುವ, ಉಪ್ಪಿಟ್ಟನ್ನೇ ಇಷ್ಟ ಪಡುವ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಇವರನ್ನೂ ನಾನು ಅಣ್ಣ ಎಂದೇ ಕರೆಯುತ್ತೇನೆ.
ವಿಜಯ್‌ಅಂಕಲ್-ವಿಜಯಸಾರಥಿ ಮುತ್ತುಕೃಷ್ಣನ್. ನಮ್ಮ ಗುರುಕುಲದಲ್ಲಿ ಗುರುಗಳನ್ನು ಅಣ್ಣ ಎಂದು ಕರೆಯುವ, ಬಳಗದಲ್ಲಿ ತಮಿಳು ಗೊತ್ತಿರುವ ಏಕೈಕ ವ್ಯಕ್ತಿ ಇವರೇ. ಇವರ ಆಡಳಿತ ಕೌಶಲ್ಯವು ಬಹಳ ಬಹಳ ಶ್ಲಾಘನೀಯ. ಅವರಿಂದ ಕಲಿಯುವುದು ಬಹಳಷ್ಟಿದೆ. ಅಷ್ಟೇ ದೈವಭಕ್ತಿ, ನಗುಮುಖ, ಅದ್ಭುತವಾಗಿ ಕಾರನ್ನು ಚಲಾಯಿಸುತ್ತಾರೆ. ಇವರನ್ನು ನಾನು ಬಹಳ ಪ್ರೀತಿಯಿಂದ ಅಂಕಲ್ ಎನ್ನುತ್ತೇನೆ.(ಅದೇನೋ ಈ ಆಂಗ್ಲ ಸಂಬೋಧನೆ ನುಸುಳಿಬಿಟ್ಟಿದೆ. ಕ್ಷಮಿಸಿಬಿಡಿ).
ಈ ಮುಂದೆ ನನಗೆ ಹೊಳೆದ ವಿಷಯಗಳು, ಸಂಗ್ರಹಾರ್ಹ ಎನಿಸುವ ವಿಷಯಗಳನ್ನು ಬರೆದಿಟ್ಟಿದ್ದೇನೆ. ಹೇಳದೇ ಉಳಿದಿರುವ ಎಷ್ಟೋ ವಿಷಯಗಳಿವೆ. ಓದುವಾಗ ನಿಮಗೆ ಅಯ್ಯೋ ಮೊಳೆ ಹೊಡೆಯುತ್ತಿದ್ದಾನೆ, ಎಂದೆನಿಸಿಬಿಟ್ಟರೆ ದಯವಿಟ್ಟು ಹೊಟ್ಟೆಗೆ (ತಲೆಗೆ?) ಹಾಕಿಕೊಂಡು ಮುಂದುವರೆದು ಬಿಡಿ!
ಇಂತಿ,
ತೇಜಸ್ ಎಚ್ ಬಾಡಾಲ
“ಯಸ್ತು ಸಂಚರತೇ ದೇಶಾನ್ಯಸ್ತು ಸೇವೇತ ಪಂಡಿತಾನ್ |
ತಸ್ಯ ವಿಸ್ತಾರಿತಾ ಬುದ್ಧಿಸ್ತೈಲಬಿನ್ದುರಿವಾಮ್ಭಸಿ ||”
ಎನ್ನುತ್ತದೆ ಒಂದು ಸಂಸ್ಕೃತ ಸುಭಾಷಿತ. ಅರ್ಥಾತ್ ‘ಯಾರು ದೇಶ ಸುತ್ತುತ್ತಾನೋ; ಯಾರು ಪಂಡಿತರಿಗೆ ಸೇವೆ ಸಲ್ಲಿಸುತ್ತಾನೋ, ಅವನ ಬುದ್ಧಿಯು ನೀರಿನಲ್ಲಿ ತೈಲದ ಹನಿಯು ವಿಸ್ತರಿಸುವಂತೆ ವಿಸ್ತರಿಸಿಕೊಳ್ಳುತ್ತದೆ.’
ಜೀವನವೇ ಒಂದು ಪಯಣವೆಂದು ರೂಪಕ ಉಪಮಾಲಂಕಾರ ಉಪಯೋಗಿಸಿಕೊಂಡು ನಿಶ್ಚೇಷ್ಟಿತರಾಗಿ ಮನೆಯಲ್ಲಿದ್ದು ಬಿಡಬಹುದು. ಆದರೆ ಉತ್ಸಾಹದಿಂದ ನೂರು ಮಂದಿ ನೂರು ಜಾಗಗಳನ್ನು ಸರಿಯಾದ ಸಹಪ್ರಯಾಣಿಕರೊಂದಿಗೆ ಅಥವಾ ದಿಕ್ಕು ತೋರಿಸುವವರೊಂದಿಗೆ ಹೋದಾಗಲಷ್ಟೆ ಮನವು ಸಂಸ್ಕರಿತವಾಗುವುದು; ಅನುಭವವು ಮುಂದಿನ ದಿನನಿತ್ಯಕ್ಕೆ, ಸಾಧನೆಗೆ ಪೂರಕವಾಗಿ ಅಂತಃಶಕ್ತಿಯು ಮೇಲ್ಮಟ್ಟಕ್ಕೇರುವುದು. ಪ್ರಯಾಣದ ಮುಂದಾಳತ್ವವನ್ನು ಅಷ್ಟೇ ಸಮರ್ಥನೊಬ್ಬನು ವಹಿಸಿಕೊಂಡಾಗ ಪಯಣಿಗರೆಲ್ಲರಿಗೂ ಸ್ವರ್ಗವೇ ಸರಿ.
ತಮಿಳುನಾಡು ಪುಣ್ಯಭೂಮಿಯ; ಅದರಸೌಂದರ್ಯ, ಮಹತ್ವ, ಶಕ್ತಿಗಳನ್ನು ನೋಡಬಹುದಾದ, ಅನುಭವಿಸಬಹುದಾದ ಕ್ಷೇತ್ರಗಳೋ ಅಸಂಖ್ಯಾತ. ಅವುಗಳು ಅವರ್ಣೀಯ. ಒಂದಕ್ಕಿಂತ ಒಂದು ದೇವಳಗಳು ಎಷ್ಟು ಸಮಾನರೂಪವೋ, ಅಷ್ಟೇ ವೈವಿಧ್ಯಮಯ. ಪ್ರತಿದೇವಾಲಯಕ್ಕೆ ಅಂಟಿಕೊಂಡಂತೆಯೇ ಒಂದು ಕ್ಷೇತ್ರ ಪುರಾಣ, ಇಲ್ಲವೇ ರಾಜನ ಔದಾರ್ಯ, ವಿಜಯ, ವೈಭವ. ವಾಸ್ತುಶಿಲ್ಪವೇ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದರೆ, ಆ ಕ್ಷೇತ್ರದ ಅದಿಧೈವ, ಆಗಮಾದಿ ಶಾಸ್ತ್ರಗಳಿಂದ ಅಲ್ಲಿ ಏರ್ಪಟ್ಟಿರುವ ದಿವ್ಯಾನುಭವದ ನೆನಪು ಸದಾ ಹೃದಯದಲ್ಲಿದ್ದು ಬಿಡುತ್ತದೆ. ಇನ್ನೂ ವಿಶೇಷ ಸಂಗತಿಯೆಂದರೆ ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ಕರೆಯಲ್ಪಡುವ ಶ್ರೀಶ್ಯಾಮಾಶಾಸ್ತ್ರಿಗಳು, ಶ್ರೀತ್ಯಾಗರಾಜರು, ಹಾಗೆಯೇ ಶ್ರೀಮುದ್ದುಸ್ವಾಮಿ ದೀಕ್ಷಿತರು ಬದುಕಿ ಬಾಳಿದ, ಹಾಡಿ ಹೊಗಳಿದ ದೇವತೆಗಳ ಸನ್ನಿಧಿಗಳೂ ಅಲ್ಲೇ ಇವೆ. (ತ್ಯಾಗರಾಜರ ಸ.ಮಾಧಿ ಅಲ್ಲೇ ಇದೆ. ಅವರು ಆರಾಧಿಸುತ್ತಿದ್ದ ಶ್ರೀರಾಮನ ವಿಗ್ರಹವನ್ನೂ ಅಲ್ಲೇ ಇಟ್ಟಿದ್ದಾರೆ. ಇದರ ಕುರಿತಾದ ವಿವರಣೆ ಮುಂದೆ ನೀಡುವೆ). ಅದ್ವೈತಿಯೂ, ಸದಾ ಸಮಾ ಸ್ಥಿತಿಯಲ್ಲೇ ಬಾಳುತ್ತಿದ್ದ, ಮಹಾಸಾಧಕ ಶ್ರೀ ಸದಾಶಿ ವಬ್ರಹ್ಮೇಂದ್ರ ಸಮಾಧಿಯೂ (5 ರಲ್ಲಿ ಒಂದು) ಅಲ್ಲೇ ಇದೆ.
ಅಷ್ಟಕ್ಕೂ ಈ ಪ್ರವಾಸದ ತೀರಾ ಅಸ್ಪಷ್ಟ ರೂಪದ ಒಂದುಪೀಠಿಕೆಯನ್ನಷ್ಟೇ ನೀಡಿದೆ. ಇನ್ನೇನು ಬಿಸಿಲುಗಾಲ ಆರಭವಾಗ ಬೇಕಾದ ಕಾಲ; ಶಿವರಾತ್ರಿಗೆ ಒಂದೇ ವಾರ; ಈಗಲೇ ಆರಂಭವಾದ ಕಾಲೇಜು- ಇಷ್ಟರನಡುವೆ ಐದು ದಿನಗಳ ದೀರ್ಘಯಾತ್ರೆ?
ಹರ್ಷ ಅಣ್ಣ, ವಿಜಯ್ಅಂ ಕಲ್, ಕೌಸ್ತುಭ ಅಣ್ಣರಂತಹ ಧುರೀಣೂ, ಗುರುಗಳಂತಹ ಮಹಾ ಮೇಧಾವಿಯವರೊಂದಿಗೆ ಸೇರಿಕೊಂಡು ನಿರ್ಧರಿಸಿದ ಪ್ರಯಾಣ ದಾರಿ. ಕೇಳಬೇಕಾದ್ದೇನು?
ನಡು ನಡುವೇ ನನ್ನದೇ ವ್ಯಾಖ್ಯಾನ ಸೇರಿಸಿಕೊಂಡು ಈ ಪ್ರವಾಸದ ಕಲಿಕೆ, ವಿವರಣೆಗಳನ್ನು ನೀಡುತ್ತೇನೆ. ಸಹಜ ಎನ್ನುವ ಪದವನ್ನು ತಿರುವಣ್ಣಾಮಲೈನ ಅರಣಾಚಲೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ನಿಂತು ಹರ್ಷ ಅಣ್ಣ ಹಾಗು ಗುರುಗಳು ಮೀಮಾಂಸೆ ಮಾಡುತ್ತಿದ್ದರು. ಗುರುಗಳು ಅದಕ್ಕೂ ಮುನ್ನ ನೃತ್ಯಕ್ಕೆ ಅಥವಾ ನಟನೆಗೆ ಮೇಕಪ್ ಅಥವಾ ಪ್ರಸಾಧನದ ಕುರಿತಾಗಿ ಹೇಳುತ್ತಿದ್ದರು. ನಮ್ಮ ಇಡೀ ದೇಹದ ಛಾಯಾಚಿತ್ರವನ್ನು ತೆಗೆದು ಮೈ-ಮುಖಗಳನ್ನು-ಅದರ ರೂಪರೇಖೆಗಳನ್ನು ಬಿಡಿಸಿದರೆ, ಮುಖದ ಭಾವನೆಗಳಿಗೆ ಸರಿಯಾಗಿ ದೇಹದ ರೇಖೆಗಳು ಹೊಂದಿಕೊಂಡೋ ಇಲ್ಲವೇ ಸ್ವಲ್ಪ ವಿಚಿತ್ರವಾಗಿಯೋ ಇಲ್ಲವೇ ಅಳತೆಗೆಟ್ಟಂತೆ ಕಾಣಬಹುದು. ಈ ರೇಖೆಗಳನ್ನು ಸಹಜರೇಖೆ ಹಾಗು ಅಭಿನಯರೇಖೆ ಎಂದು ವಿಂಗಡಿಸಬಹುದು. ಹೆಸರೇ ಹೇಳುವಂತೆ ಯಾವುದೇ ಭಾವವು ನಮ್ಮಲ್ಲಿ ಸ್ವಾಭಾವಿಕವಾಗಿ ವ್ಯಕ್ತವಾದಾಗ ಕಾಣುವುದು ಸಹಜ ರೇಖೆ. ನಮ್ಮ ಶ್ರಮದಿಂದ ಇದೇ ಭಾವವನ್ನು ವ್ಯಕ್ತಪಡಿಸಬೇಕೆಂಬ ಹಂಬಲದೊಂದಿಗೆ ಭಾವವನ್ನು ವ್ಯಕ್ತಪಡಿಸಿದಾಗ ಬೆಳಕಿಗೆ ಬರುವುದು ಅಭಿನಯ ರೇಖೆಗಳು. ಯಾವಾಗ ಈ ಅಭಿನಯ ರೇಖೆ ಹಾಗು ಸಹಜ ರೇಖೆ ಒಂದಾಗುವುದೋ ಅಂತಹ ನಟನ, ಇಲ್ಲವೇ ನೃತ್ಯಗಾರ್ತಿಯ ಪ್ರದರ್ಶನ ಅತ್ಯಂತ ಸುಂದರವೂ, ಹಾಗು ಸಂಪೂರ್ಣವೂ ಆಗುತ್ತದೆ. ಕೆಲುವೊಮ್ಮೆ ಸಹಜರೇಖೆಯು ಅಭಿನಯರೇಖೆಗೆ ಹೊಂದಿಕೊಳ್ಳದಂತೆ ಜನ್ಮತಃ ಬಂದ, ಸರಿಪಡಿಸಲಾಗದ ನ್ಯೂನತೆಗಳಿರುತ್ತವೆ. ಆ ನ್ಯೂನತೆಗಳನ್ನು ಸರಿಪಡಿಸಲು ಇರುವ ಸಾಧನವೆ ಪ್ರಸಾಧನ. ಆ ಸಹಜ ರೇಖೆಯನ್ನು ಬಣ್ಣ ಇತ್ಯಾದಿಗಳನ್ನು ಬಳಸಿ, ವೇದಿಕೆಯ ಮೇಲಿನ ಬೆಳಕಿಗನುಸಾರವಾಗಿ ತಿದ್ದಲಾಗುತ್ತದೆ. ಇದರಿಂದ ಸಹಜರೇಖೆಯೂ ಅಭಿನಯರೇಖೆಯೂ ಕೂಡಿಕೊಂಡು ಪ್ರದರ್ಶನವನ್ನು ಚಂದಗೊಳಿಸುತ್ತದೆ. ಇಷ್ಟಕ್ಕೂ ಇವೆಲ್ಲವೂ ಸಹಜ ಎನ್ನುವ ಪದಕ್ಕೆ ಮೀಮಾಂಸೆ ಏಕಾಯಿತು ಎನ್ನುವುದಕ್ಕೆ ಹಿನ್ನೆಲೆ. ಸಹಜ ಎನ್ನುವ ಪದವನ್ನು ಗಮನಿಸಿದರೆ, ಜ ಎಂದರೆ ಹುಟ್ಟಿದ್ದು; ಸಹ ಎಂದರೆ ಜೊತೆಯಲ್ಲಿ. ಅರ್ಥಾತ್‌ಸಹಜ ಎಂದರೆ ಜೊತೆಯಲ್ಲಿ ಹುಟ್ಟಿದ್ದು. ನಮ್ಮೊಂದಿಗೆ ಹುಟ್ಟಿದ ಒಂದು ಸ್ವಭಾವವನ್ನೋ, ಗುಣವನ್ನೋ, ಲಕ್ಷಣವನ್ನೋ ಸಹಜ ಎನ್ನಬಹುದು;ಸಹಜವೆಂದರೆ ಅವನತನ ಎನ್ನಬಹುದೇನೋ. ದಿನನಿತ್ಯವೂ ಸಹಜವಾಗಿರಬೇಕಾದದ್ದು ಎಷ್ಟು ಮುಖ್ಯ ಎಂದು ನಾವು ಅರಿಯಬೇಕು, ಅಲ್ಲವೇ? ಅಷ್ಟಕ್ಕೂ ಸಹಜ ಎನ್ನುವ ಪದದ ಮೂಲ ಇಷ್ಟು ಸುಂದರವಾಗಿದೆ ಎಂದು ಯೋಚಿಸಿದ ಮೇಲಷ್ಟೇ ಅಲ್ಲವೇ ತಿಲಿಯುವುದು? ಹಾಗಾಗಿಯೇ, ಯಸ್ತು ಸೇವೇತ ಪಂಡಿತಾನ್…
ತಮಿಳುನಾಡಿನ ಈ ಕ್ಷೇತ್ರಗಳಿಗೆ ಗುರುಗಳು ಕೆಲವು ಶಿಷ್ಯರೊಂದಿಗೆ ಹೋಗುವ ಯೋಜನೆಯೇನೋ ಇತ್ತು. ಅದನ್ನು ನಾನು ನಮ್ಮಪ್ಪನಿಗೆ ಹೇಳಿದಾಗ ಅವರೇನಷ್ಟು ಧನಾತ್ಮಕವಾಗಿ ಪ್ರತಿಕ್ರಯಿಸಲಿಲ್ಲ; ಅದಾವ ಗುರುಕೃಪೆಯಿಂದ ರಾತ್ರೋರಾತ್ರಿ ಅವರಿಗೆ ನನ್ನನ್ನು ಕಳುಹಿಸಬೇಕೆಂಬ ಯೋಚನೆ ಬಂದಿದೆ. ಮುಂದಿನ ದಿನವೇ ಅದನ್ನು ಮೊದಲು ಕೌಸ್ತುಭ ಅಣ್ಣನಿಗೆ ತಿಳಿಸಿ ನಂತರ ನನಗೆ ತಿಳಿಸಿದರು. ನನಗೆ ಎಲ್ಲಿಲ್ಲದಷ್ಟು ಸಂತೋಷವಾಯಿತು. ಹಣ ಇತ್ಯಾದಿಗಳನ್ನು ಹೇಗೆ ಹೊಂದಿಸುವರೋ ಎಂಬುದನ್ನೂ ಯೋಚಿಸಿದೆ; ಆದರೆ ಹೀಗೆ ಕಳುಹಿಸುವ, ಪ್ರೋತ್ಸಾಹಿಸುವ ತಂದೆ ತಾಯಿಯರು ಸಿಕ್ಕಿದರೆಂಬ ಕೃತಜ್ಞತೆ ನನ್ನಲ್ಲಿ ಮೂಡಿಯೇ ತೀರಿತು.
ತ್ರಯೀಲಕ್ಷ್ಮಿಯಿಂದ ಹೊರಟೆವು. ಹೊರಡುತ್ತಲೇ ಎಲ್ಲರಿಗೂ ಉತ್ಸಾಹ. ಇರಬೇಕಾದದ್ದೇ-ಸಹಜ ಅಲ್ಲವೇ?! ಭಾರತದ ಪ್ರಗತಿ, ರಾಜಕೀಯ, ಸಂವಿಧಾನ, ಕಾನೂನು ಇತ್ಯಾದಿಗಳಿಂದ ಆರಂಭವಾದ ಮಾತುಕತೆ, ತಮಿಳುನಾಡಿನ ರಾಜರ ಕಡೆಗೆ, ಬೃಹದೀಶ್ವರ ದೇವಾಲಯವನ್ನು ರಾಜರಾಜ ಚೋಳ ಹೇಗೆ ಕಟ್ಟಿದ್ದಿರಬಹುದು ಎಂಬುದರ ಕಡೆಗೆ ತಿರುಗಿತು. ಹೀಗೆ ಸಾಗಬೇಕಾದರೆ ನಡುವೆ ಸಿಕ್ಕುವ ಸತ್ಯಮಂಗಲಂ ಘಟ್ಟದ ದಾರಿ ಬಂತು. ಕೌಸ್ತುಭ ಅಣ್ಣನ ಸೂಕ್ಷ್ಮ ದೃಷ್ಟಿಗೆ ಎಷ್ಟೊಂದು ಜಿಂಕೆಗಳು ಕಂಡವು. ಗುರುಗಳಲ್ಲಿ ನನಗೆ ಅತ್ಯಂತವಾಗಿ ಇಷ್ಟವಾಗುವ ಸಂಗತಿ ಒಂದಿದೆ. ಅವರ ತಲೆಯಲ್ಲಿ ಜಗತ್ತಿನಲ್ಲಿರುವ ಎಲ್ಲಾ ವಿಷಯಗಳ ಬಗ್ಗೆಯೂ ಏನೋ ಒಂದು ವಿಶಿಷ್ಟ ಸಂಗತಿ ಇರುತ್ತದೆ. ಅಂತೆಯೇ ಈ ಜಿಂಕೆಗಳು ಸಹ ಅವರಲ್ಲಿ ಒಂದು ನೆನಪನ್ನು ಹೆಕ್ಕಿ ತೆಗೆಯಿತು. ಅಷ್ಟೇ ಅಲ್ಲದೆ ಅದಕ್ಕೆ ಸಂಬಂಧ ಪಟ್ಟ ಏನೋ ಒಂದು ವಿಶಿಷ್ಟ ವಸ್ತು. ಈ ಜಿಂಕೆಗೆ ಇನ್ನೊಂದು ಹೆಸರು ಮಿಕ! ಗುರುಗಳು ಹಿಂದೆ ಒಬ್ಬರು ಕವಿಯನ್ನು ಏಕಶ್ಲೋಕೀ ರೂಪದಲ್ಲಿ ರಾಮಾಯಣವನ್ನು ಬರೆದುಕೊಡಲು ಕೇಳಿದ್ದಾಗ ಆ ಕವಿಯೂ ಬಂಗಾರದ ಮಿಕ ಎನ್ನುವ ನುಡಿಯನ್ನು ಬಳಸಿದ್ದರಂತೆ. ಈ “ಮಿಕವು ಬಲೆಗೆ ಬಿತ್ತು” ಎಂಬ ನುಡಿಗಟ್ಟು ಇದರಿಂದಲೇ ಬಂದಿದ್ದು. ಕೌಸ್ತುಭ ಅಣ್ಣನ ತೀಕ್ಷ್ಣ ದೃಷ್ಟಿಯನ್ನು ಶ್ಲಾಘಿಸುತ್ತಾ ಗುರುಗಳು, “ನೀನು ಹಿಂದಿನ ಜನ್ಮದಲ್ಲಿ ಬೇಟೆಗಾರ ಆಗಿದ್ಯೇನೋ ಕಣಯ್ಯ” ಎಂದು ಕಾರನ್ನೆಲ್ಲಾ ನಗೆಯಲ್ಲಿ ತುಂಬಿಸಿದರು!
ಗೂಗಲ್ ನಕ್ಷೆಯ ದಿಕ್ಸೂಚನೆಗಳೊಂದಿಗೆ ಮುಂದುವರೆಯುತ್ತಾ ತಮಿಳುನಾಡನ್ನು ಪ್ರವೇಶಿಸಲು ಎಲ್ಲೆಲ್ಲೂ ಕಂಡಿದ್ದು ಎರಡು ಪಕ್ಷಗಳ ಧ್ವಜಗಳು ಹಾಗು ಫಲಕಗಳು. ಬಹುಶಃ ತಮಿಳುನಾಡಿನಲ್ಲಿ ಫಲಕಗಳ ಮುದ್ರಣ ಹಾಗು ಏರಿಸುವಿಕೆಯದ್ದೇ ಒಂದು ಕೈಗಾರಿಕೆ-ಉದ್ದಿಮೆ ಇರಬಹುದು! ಎಲ್ಲಿ ನೋಡಿದರಲ್ಲಿ ಯಾರಾದರೊಬ್ಬ ನಾಯಕನ, ಅವನ ಮಗನ, ತಂದೆಯ ಚಿತ್ರಗಳು; ಅವೇ ಪಕ್ಷದ ಬಣ್ಣಗಳು! ಪ್ರತಿಮೆಗಳು! ಇವಿಷ್ಟೂ ಋಣಾತ್ಮಕ ಸ್ಥಿತಿಯ ನಡುವೆ ಹಾಯಾಗಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿರುವ ಆ ಅದ್ಭುತ ದೇವಾಲಯಗಳು ಶಕ್ತಿ ಎಂಥದ್ದು! ಭಕ್ತರ ಆಸ್ಥೆ ಎಂಥದ್ದು. ತಮಿಳುನಾಡಿನಲ್ಲಿ ವ್ಯಕ್ತಿಪೂಜೆ ಹಾಗೆಯೇ ಉಳಿದಿದೆ. ವಿಚಾರವ್ಯಾಧಿಯಂತೂ ಈಗಾಗಲೇ ಬುದ್ಧಿಜೀವಿಗಳಿಂದ ಹಿಡಿದು ಏನೂ ತಿಳಿಯದ ಮುಗ್ಧ ತಳಮಟ್ಟದ ಜನರವರೆಗೂ ಹಬ್ಬಿಬಿಟ್ಟಿದೆ. ಆದರೆ ಅವು ಯಾವುದೂ ಈ ದೇವಾಲಯಗಳ ಕಾರ್ಣಿಕವನ್ನು ಮೀರಿರುವಂಥದ್ದಲ್ಲವೇ ಅಲ್ಲ. ಈಗಲೂ ಅವು ಅಷ್ಟು ಗಂಭೀರವಾಗಿ ನಿಂತು ಬಹುಪಾಲು ಸರ್ಕಾರದ ಬೊಕ್ಕಸವನ್ನು ತುಂಬುತ್ತಿದೆ, ಲಕ್ಷಾಂತರ ಜನಗಳ ಜೀವನವಾಗಿದೆ, ಬಹಳಷ್ಟು ನೊಂದ ಜೀವಗಳಿಗೆ ಸಮಾಧಾನವಾಗಿದೆ-ಇದಕ್ಕಿಂತಲೂ ಏನು ಬೇಕು? ಇಂಡಿಯಾ ಹೋಗಿ ಭಾರತ ಮತ್ತೆ ಬೆಳಗುತ್ತಿದೆ ಎನ್ನುವುದಕ್ಕೆ ಇವೇ ಅಲ್ಲವೇ ಸಾಕ್ಷಿ?
ತಮಿಳುನಾಡಿನಲ್ಲಿ, ವಿಶೇಷವಾಗಿ ದಕ್ಷಿಣ ಭಾರತದ ಇತರ ರಾಜ್ಯಗಳ ಜನಗಳಿಗೆ ಊಟದ ಕೊರತೆಯ ಅನುಭವ ಆಗುವುದೇ ಇಲ್ಲ. ಊಟಕ್ಕೆಂದು ನಾವು ಹೋಗಿದ್ದ ಹೋಟೆಲಿನಲ್ಲಂತೂ ಮನೆಯವರಿಗಿಂತ ಹೆಚ್ಚಾಗಿ ಬಡಿಸಿದ್ದು ಇನ್ನೂ ನೆನಪಿನಲ್ಲಿ ಉಳಿದಿದೆ. ನೇರವಾಗಿ ಹೋದ ಮೊದಲ ಸ್ಥಳ ನೆರೂರು. ಈ ನೆರೂರೆಂಬುದು ಒಂದು ಚಿಕ್ಕ ಹಳ್ಳಿ. ಸುಮಾರು 100-150 ಮನೆಗಳಿಂದ ಕೂಡಿದ ಈ ಹಳ್ಳಿಯೊಳಗಿನ ಶಕ್ತಿಸ್ಥಾನವೇ ಸದಾಶಿವಬ್ರಹ್ಮೇಂದ್ರರ ಸಮಾಧಿ ಸ್ಥಳ. ನೆರೂರಿನ ಲಾಡ್ಜಿನ (ಅರುಣ್ ಮಹಲ್)ರೂಮಿಗೆ ಹೋದಾಗ ನನ್ನನ್ನು ಹರ್ಷ ಅಣ್ಣ ಮೊದಲು ಕೇಳಿದ ಪ್ರಶ್ನೆಯೇ “ಸದಾಶಿವ ಬ್ರಹ್ಮೇಂದ್ರರ ಬಗ್ಗೆ ತಿಳಿದುಕೊಂಡಿದ್ದೀಯೇನೋ?” ಪ್ರವಾಸಕ್ಕೆ ತೆರಳಬೇಕಾದರೆ ಅಪ್ಪ ಹೇಳಿ ಕಳುಹಿಸಿದ್ದರು-“ಗುರುಗಳು, ಹರ್ಷ ಅಣ್ಣ, ಕೌಸ್ತುಭ ಅಣ್ಣ, ವಿ.ಸಾ ಅಂಕಲ್, ಇವರುಗಳಿಂದ ಕಲಿಯುವುದು ಬಹಳಷ್ಟಿರುತ್ತೆ. ಕೇವಲ ಪ್ರವಾಸ, ರಜಾ ಎಂದು ಮಜಾ ಹೊಡೆಯುವುದಲ್ಲ; ಅವರುಗಳಿಂದ ಎಷ್ಟು ಕಲಿಯುವೆಯೋ ಅದೇ ನಿನಗೆ ನೀನು ಮಾಡಿಕೊಳ್ಳುವ ಸಹಾಯ”. ನಾನೂ “ಹೂಂಪ್ಪಾ” ಎಂದು ಸುಮ್ಮನಾಗಿಬಿಟ್ಟಿದ್ದೆ. ಮೊದಲ ಪಾಠ ಮೊದಲ ಕ್ಷೇತ್ರದಿಂದಲೇ ಆರಂಭವಾಯಿತು. ಯಾವ ಸ್ಥಳಕ್ಕೆ ಹೋದರು ಅಲ್ಲಿನ ಮಹನೀಯರ ಕುರಿತಾಗಲಿ, ಆ ಕ್ಷೇತ್ರದ ಕುರಿತಾಗಲಿ ತಿಳಿದುಕೊಂಡೇ ಹೋಗಬೇಕು. ಆಗಲೇ ಅಲ್ಲವೇ ಸೌಖ್ಯ, ಸಾರ್ಥಕ್ಯ? ಪುಣ್ಯಕ್ಕೆ ನಾನು ಅಷ್ಟೋ ಇಷ್ಟೋ ಜಾಲತಾಣಗಳಿಂದ ಅವರ ಕುರಿತು ಓದಿದ್ದೆ. ಆದರೆ ಇನ್ನೂ ಚೆನ್ನಾಗಿ ಅರ್ಥವಾಗಬೇಕು ಎಂದು ಮತ್ತೆ ಗೂಗಲ್‌ತೆಗೆದು ಓದಿಕೊಂಡೆ. ಹರ್ಷ ಅಣ್ಣ ಗಾಡಿಯನ್ನು ಚಲಾಯಿಸಿ ದಣಿದುಬಿಟ್ಟಿದ್ದರಾದರೂ ಮಲಗಿಕೊಳ್ಳುವ ವೇಳೆಯನ್ನೂ ಅವರು ವ್ಯರ್ಥ ಮಾಡಲಿಲ್ಲ. ಯೂಟ್ಯೂಬಿನಲ್ಲಿ ಸದಾಶಿವ ಬ್ರಹ್ಮೇಂದ್ರರ ಕುರಿತಾದ ಒಂದು ವಿಡಿಯೋವನ್ನು ಕೇಳುತ್ತಾ ವಿಶ್ರಮಿಸಿದರು.
(ಮುಂದುವರಿಯುವುದು)
–ತೇಜಸ್ ಎಚ್ ಬಾಡಾಲ, ಮೈಸೂರು
ಸವಿವರದಿಂದ ಕೂಡಿದ ಲೇಖನ ಸೊಗಸಾಗಿದೆ.
ನಮೋ ನಮಃ, ಮೇಡಮ್
ಅತ್ಯಂತ ಧನ್ಯವಾದಗಳು ಮೇಡಮ್
ಪ್ರವಾಸದ ಲೇಖನದ ಆರಂಭ ಸೊಗಸಾಗಿದೆ…ಸ್ವಲ್ಪ.. ಸರಳ ಪದಗಳನ್ನು ಉಪಯೋಗಿಸುವ… ಪ್ರಯತ್ನ ಮಾಡು…ತೇಜಸ್… ಉದಾಹರಣೆಗೆ..
ಉಪೋದ್ಘಾತ.. ಅನ್ಯಥಾ ಭಾವಿಸಬೇಡ…ಸಾಮಾನ್ಯ ಓದುಗರು ಸರಳ ಸುಂದರ..ಭಾಷೆಯ ಬಳಕೆ ಇಷ್ಟ ಪಡುತ್ತಾರೆ…ನನ್ನ ಅಭಿಪ್ರಾಯ..
ಖಂಡಿತ ಮೇಡಮ್, ಮುಂದಿನ ಬಾರಿ ಇದನ್ನು ಅಳವಡಿಸಿಕೊಳ್ಳುವೆ
ಪ್ರವಾಸ ಕಥನದ ಪೀಠಿಕೆ ಪೊಗದಸ್ತಾಗಿದೆ…. ಖುಷಿಯಾಯ್ತು….ಮುಂದಿನ ಕಂತಿಗೆ ಕುತೂಹಲದಿಂದ ಕಾಯುತ್ತಿರುವೆವು.
ನಮೋ ನಮಃ ಮೇಡಮ್, ಅನಿಸಿದ್ದೆಲ್ಲವನ್ನೂ ಗುರುಗಳ ಕೃಪೆಯಿಂದ ಹೇಳಿರುವೆ, ಎಲ್ಲಾ ಕಂತುಗಳನ್ನು ಓದಿ, ಅಭಿಪ್ರಾಯ ತಿಳಿಸಿ
ವಿಶೇಷ ಬರೆಹ. ಪ್ರವಾಸವಿಲ್ಲಿ ನಿರಾಯಾಸ ಅಭಿವ್ಯಕ್ತಿ ಪಡೆದಿದೆ. ಶುಭವಾಗಲಿ.
ಧನ್ಯವಾದಗಳು ಸರ್! ಎಲ್ಲಿ ನನ್ನ ಸತತ ಮೊಳೆಯಿಂದ ಓದುಗರಿಗೆ ಆಯಾಸವಾಗುತ್ತದೋ ಎಂಬ ಭಯ ಇತ್ತು
ಏನೇ ಕಳುಹಿಸಿದರೂ ಪ್ರಕಟಿಸಿ, ಬೆನ್ನು ತಟ್ಟುವ ಹೇಮಮಾಲಾ ಮೇಡಮ್ ಅವರಿಗೆ ನನ್ನ ಪ್ರಣಾಮಗಳು!
ಆಪ್ತವಾಗಿ ಪ್ರಾರಂಭಗೊಂಡ ಲೇಖನ ಹಲವಾರು ವಿಷಯಗಳತ್ತ ಬೆಳಕು ಚೆಲ್ಲುತ್ತಾ ಸಾಗಿತು.