ಅಡುಗೆ – ಅಡಿಗಡಿಗೆ!
(ಸೂಪಶಾಸ್ತ್ರದ ಮೂಲಕ ವಿಶ್ಲೇಷಿಸಿದ ಸರಳ ಸಸ್ಯಾಹಾರ ಕುರಿತು)
ಹಿಂದೆ ನಮ್ಮ ಆಹಾರವೇ ಆಸ್ವಾದಯೋಗ್ಯವೂ ಔಷಧವೂ ಆಗಿತ್ತು; ಈಗ ನಾವು ಔಷಧವನ್ನು ಆಹಾರ ಮಾಡಿಕೊಂಡಿದ್ದೇವೆ. ನಮ್ಮ ಶರೀರದ ಆರೋಗ್ಯಕಾಗಿ ಕಾಲಕಾಲಕೆ ಸಿಗುವ ಹಣ್ಣು, ತರಕಾರಿಗಳಿಂದ ವಿವಿಧ ಬಗೆಯ ಖಾದ್ಯಗಳನ್ನು ಸಿದ್ಧ ಮಾಡಿ ಬಳಸುತ್ತಿದ್ದೆವು; ಉಪವಾಸಗಳ ಹೆಸರಿನಲ್ಲಿ ಆಹಾರ ನಿಯಂತ್ರಣವೂ ಆಗುತ್ತಿತ್ತು. ‘ವ್ರತದ ಅಡುಗೆ’ ಎಂದು ಕರೆದುಕೊಂಡು ಒಂದೊಂದು ತಿಂಗಳಿನಲ್ಲಿ ಒಂದೊಂದು ಪದಾರ್ಥವನ್ನು ನಿಷೇಧಿಸಿ, ಇಡೀ ಒಂದು ತಿಂಗಳು ಮೆಣಸಿನಕಾಯಿಯ ಬದಲು ಮೆಣಸು, ಹುಣಸೆಹಣ್ಣಿನ ಬದಲು ನಿಂಬೆಹುಳಿ ಹೀಗೆ ಪರ್ಯಾಯ ಆಹಾರ ಸೇವನೆಗೆ ಶರೀರವನು ಒಗ್ಗಿಸಲಾಗಿತ್ತು. ಕೆಲವೊಮ್ಮೆ ಪೂರ್ಣ ನಿಷೇಧ. ಇಡೀ ಮಾಸವೊಂದರಲ್ಲಿ ಖಾರವೇ ಇಲ್ಲ, ಒಂದು ತಿಂಗಳು ಪೂರ್ತ ಸಿಹಿಯನ್ನು ಮುಟ್ಟುವಂತಿಲ್ಲ. ಹೀಗಿತ್ತು ಆಹಾರ ಪದ್ಧತಿ. ಈಗೀಗ ನಮಗೆ ನಮ್ಮ ಹಿಂದಿನವರ ಆಹಾರ ಪದ್ಧತಿ ಮತ್ತು ಪರಿಕ್ರಮಗಳು ವೈಜ್ಞಾನಿಕವಾಗಿ ಕಾಣುತ್ತಿವೆ. ಈ ಸಂಬಂಧವಾಗಿ ಆಹಾರ ತಯಾರಿಕೆಯು ಕಲೆಯಾಗಿ, ವಿಜ್ಞಾನವಾಗಿ, ಬದುಕಿನ ತಂತ್ರವಾಗಿ ನಮ್ಮಲ್ಲಿ ಅಂದಿನಿಂದಲೂ ಪ್ರಾಮುಖ್ಯ ಪಡೆದಿದೆ. ನಮ್ಮ ದೇಶದ ವೈಶಿಷ್ಟ್ಯವೆಂದರೆ ಆಯಾ ಪ್ರದೇಶದಲ್ಲಿ ಸಿಗುವ, ಅಲ್ಲಿ ಮಾತ್ರ ಲಭಿಸುತಿದ್ದ ವಿವಿಧ ಬಗೆಯ ದೇಶೀಯ ಆಹಾರಪದ್ಧತಿ. ಏಕೆಂದರೆ ಸಾವಿರಾರು ವರುಷಗಳಿಂದ ಒಂದು ಸ್ಥಳ-ಪ್ರದೇಶದಲ್ಲಿ ವಾಸಿಸುತ್ತಿದ್ದ ಜನ ಸಮುದಾಯವು ಅಲ್ಲಿನ ಆಹಾರಕ್ಕೆ ಒಗ್ಗಿಕೊಂಡಿರುತ್ತಿದ್ದರು. ನಮ್ಮ ದೇಹವೂ ಅಷ್ಟೇ; ಸ್ಥಳೀಯ ಬೆಳೆಗಳಿಗೆ ಅನುಗುಣವಾಗಿ ರೂಪಿತಗೊಂಡಿತ್ತು. ಯಾವಾಗ ಆಹಾರದ ಜಾಗತೀಕರಣವಾಯಿತೋ? ಅಂದಿನಿಂದ ನಮ್ಮ ಆರೋಗ್ಯದಲ್ಲೂ ಆಹಾರದಲ್ಲೂ ವ್ಯತ್ಯಯ ಉಂಟಾಯಿತು. ‘ಕಾಲಾಯ ತಸ್ಮೈ ನಮಃ’ ಎಂಬುದರ ಜೊತೆಗೆ ‘ಆಹಾರ ವೈವಿಧ್ಯೋ ವಿಧ ವಿಧ ಭೋಜ್ಯತೋ ದೇವ ಚರಣಾರವಿಂದಃ’ ಎಂದೂ ಹೇಳಿಕೊಳ್ಳಬೇಕಾಗಿದೆ. ಜಾಗತೀಕರಣ ತಪ್ಪು ಎನ್ನುತ್ತಿಲ್ಲ. ಆದರೆ ಅದರ ಪರಿಣಾಮವನ್ನಿಂದು ಅನುಭವಿಸುತ್ತಿದ್ದೇವೆ. ಇದರಲ್ಲಿ ಸಾಧಕಗಳಿರುವಂತೆ ಬಾಧಕಗಳೂ ಇವೆ. ವಾಣಿಜ್ಯ, ವ್ಯವಹಾರದ ಮಾರುಕಟ್ಟೆ ವಿಶಾಲವಾಯಿತು; ವಿದೇಶೀ ವಿನಿಮಯ ಸಂಗ್ರಹವಾಯಿತು; ಉದ್ಯೋಗ ಸೃಷ್ಟಿಯಾಯಿತು, ಅದದೇ ಖಾದ್ಯ ಪದಾರ್ಥಗಳನ್ನು ಸೇವಿಸಿ ಬೇಸತ್ತ ಬಾಯ್ಗೆ ಹೊಸ ರುಚಿಯೂ ದಕ್ಕಿತು. ಎಲ್ಲವೂ ಸರಿಯೇ. ಆದರೆ ಆರೋಗ್ಯ ಹದಗೆಡುವಂತಾಯಿತು. ಬೇಕೋ? ಬೇಡವೋ? ಎಲ್ಲವನೂ ಬಾಚಿ ಭೋಗಿಸುವಂತಾಯಿತು. ಸ್ಥಳೀಯವಾದ ದೇಶೀ ಆಹಾರ ಪದ್ಧತಿ ನಶಿಸಲು ಶುರುವಾಯಿತು. ವಿಧ ವಿಧವಾದ ವಿದೇಶೀ ಆಹಾರ ಮುಟ್ಟದವರನ್ನು ಔಟ್‌ಡೇಟೆಡ್ ಎಂದು ದೂರುವಂತಾಯಿತು. ಪಿಜ್ಜಾ, ಬರ್ಗರ್‌ಗಳ ಹೆಸರೇ ಗೊತ್ತಿಲ್ಲದ ಮಗುವೊಂದು ಬೆಂಗಳೂರಿನ ತನ್ನ ನೆಂಟರ ಮನೆಗೆ ಹೋಗಿ ಕೀಳರಿಮೆ ಅನುಭವಿಸುವಂತಾಯಿತು. ಇವನ್ನು ತಿಂದರೇನೇ ನಾವೀ ಕಾಲದವರೆಂಬ ಹುಸಿಭ್ರಮೆಯನ್ನು ಬಿತ್ತಲಾಯಿತು. ಮೋಜಿಗೆ, ಮಸ್ತಿಗೆ, ಖುಷಿಗೆ, ಆತಿಥ್ಯಕ್ಕೆ, ತಿಂದು ತೇಗುವ ಲೋಲುಪತೆಗೆ ಆಹಾರ ಬಳಕೆಯಾಯಿತು. ಬದುಕಲು ತಿನ್ನಬೇಕೆಂಬ ಸೂತ್ರ ಮರೆಯಾಗಿ ತಿನ್ನಲು ಬದುಕಿರಬೇಕೆಂಬುದೇ ಮೇಲುಗೈ ಪಡೆಯಿತು. ಆಹಾರದ ಮೇಲಿದ್ದ ಸದಾಚಾರಗಳು ಕ್ರಮೇಣ ಮರೆಯಾಗುತ್ತಾ, ಅದರ ಮೇಲೆ ಅನಾಚಾರಗಳೂ ಅತ್ಯಾಚಾರಗಳೂ ಆದವು. ಅಂದರೆ ವಿಶಾಲ ಪ್ರಪಂಚವು ನಮ್ಮ ಜೀವನಕ್ಕಾಗಿ ಚಿಕ್ಕದಾಗುತ್ತಾ ಬಂದಂತೆ, ನಾವುಗಳು ಅಲ್ಲಿಗೂ ಅವರುಗಳು ಇಲ್ಲಿಗೂ ಹೆಚ್ಚು ಹೆಚ್ಚು ಹೋಗಿ ಬಂದು ಮಾಡಿದಂತೆ, ಆಹಾರ ಸಂಸ್ಕೃತಿಯ ರೂಪುರೇಷೆಗಳು ಬದಲಾಗುತ್ತಾ ಹೋದವು. ವೈವಿಧ್ಯಕ್ಕೆ, ಫ್ಯಾಶನ್ನಿಗೆ, ದುಡ್ಡು ಖರ್ಚು ಮಾಡುವುದಕ್ಕೆ, ತಿಂದು ತೇಗಿ ವಾಂತಿ ಮಾಡಿಕೊಳ್ಳುವುದಕ್ಕೆ, ಪ್ರತಿಷ್ಠೆ-ಅಧಿಕಾರ-ಅಹಂಕಾರ ಮೆರೆಸುವುದಕ್ಕೆ ಆಹಾರವನ್ನು ಬಳಸಿಕೊಳ್ಳುವಂತಾಯಿತು. ಸಿರಿವಂತರ ಮದುವೆ ಮನೆಯ ಆರ್ಭಟವನ್ನು ನೆನಪಿಸಿಕೊಂಡರೆ ಸಾಕು. ನೂರಾರು ಐಟಂಗಳನ್ನು ಮಾಡಿಸುವುದು, ತಿಂದು ಚೆಲ್ಲಿಸುವುದು ಸಾಮಾನ್ಯವಾಗಿದೆ; ಶ್ರೀಮಂತಿಕೆಯ ಪ್ರದರ್ಶನದ ಭಾಗವೇ ಆಗಿಬಿಟ್ಟಿದೆ. ವಾಸ್ತವವಾಗಿ ಅಡುಗೆ ಹೇಗಾದರೂ ಇರಲಿ; ಬಡಿಸುವಾಗ ಪ್ರೀತಿ ಇರಲಿ ಎಂಬ ಮಾತು ನೆನಪಾಗುತ್ತದೆ. ಪ್ರೀತಿ, ಮಮತೆ ಮತ್ತು ಗೌರವಗಳಿಲ್ಲದ ಕಡೆ ಬರೀ ಆಡಂಬರ ಇದ್ದರೆ ಅದಕೇನು ಅರ್ಥ? ಇಂಥ ವೈಭೋಗದಡಿಯ ವೈಭವದ ಸಭೆ-ಸಮಾರಂಭಗಳಲ್ಲಿ ‘ಬಂದಿರಾ? ಹೋದಿರಾ? ತಿಂದಿರಾ?’ ಎಂದು ವಿಚಾರಿಸುವವರು ಇರುವುದಿಲ್ಲ. ಜಗಮಗಿಸುವ ಯಾವುದೋ ದೊಡ್ಡ ಹೊಟೆಲಿಗೆ ಹೋಗಿ ತಿಂದು ಬಂದ ಅನುಭವ! ಅನ್ನವೇ ದೇವರೆಂದು ಪೂಜಿಸಿದ ನಮ್ಮ ಸಂಸ್ಕೃತಿಯೆಲ್ಲಿ? ತಮ್ಮೆಲ್ಲ ಕಪ್ಪುಹಣವನ್ನು ಚೆಲ್ಲಾಡಿ, ಅಕ್ರಮವನ್ನು ಸಕ್ರಮ ಮಾಡಿಕೊಳ್ಳುವ ಲೋಲುಪರೆಲ್ಲಿ? ಹಾಗೆ ನೋಡಿದರೆ ಅನ್ನಕೆ ರುಚಿ ಬರುವುದು ನಮ್ಮೊಳಗಿನ ಹಸಿವೆಯಿಂದ ಮತ್ತು ಅಡುಗೆ ಮಾಡಿ ಬಡಿಸುವವರ ಪ್ರೀತ್ಯಾದರಗಳಿಂದ. ಇರಲಿ. ಇವನ್ನು ಕುರಿತು ಬರೆಯುತ್ತಾ ಹೋದರೆ ಲೇಖನವು ಬೇರೆಯೇ ಆಯಾಮ ಪಡೆದು ಬಿಡುತ್ತದೆ. ನನ್ನ ದೃಷ್ಟಿಯಿರುವುದು ನಮ್ಮ ಪ್ರಾಚೀನರು ಆಹಾರವನ್ನು ಕಂಡ ಬಗೆ ಮತ್ತು ಅದು ಕನ್ನಡದಲ್ಲಿ ಅರಳಿಕೊಂಡ ಬಗೆಯತ್ತ ಮಾತ್ರ.
ಅರುವತ್ತನಾಲ್ಕು ಕಲೆಗಳು ಬೇರೆ; ಅರುವತ್ತನಾಲ್ಕು ವಿದ್ಯೆಗಳು ಬೇರೆ! ನಮ್ಮ ಪ್ರಾಚೀನ ಭಾರತದಲ್ಲಿ ಐದುನೂರ ಹನ್ನೆರಡು ಬಗೆಬಗೆಯ ಕಲೆ ಮತ್ತು ವಿದ್ಯೆಗಳಿದ್ದುವಂತೆ. ಕ್ರಿ ಶ ನಾಲ್ಕು ಮತ್ತು ಆರನೇ ಶತಮಾನಗಳ ಮಧ್ಯೆ ಜೀವಿಸಿದ್ದ ಗುಪ್ತರ ಕಾಲದ ವಾತ್ಸಾಯನನ ಕಾಲಕ್ಕೇ ಅವು ಅರುವತ್ತನಾಲ್ಕಕ್ಕೆ ಇಳಿದು ಹೋಯಿತು. ಇವನ ‘ಕಾಮಸೂತ್ರ’ ಗ್ರಂಥದಲ್ಲಿ ಪಾಕಕರ್ಮ ಎಂಬುದಾಗಿ ಉಲ್ಲೇಖಿತವಾದ ಅಡುಗೆಯು ಕಲೆಯೂ ಹೌದು; ವಿದ್ಯೆಯೂ ಹೌದು; ಬಹಳ ಮುಖ್ಯವಾಗಿ ವಿಜ್ಞಾನವೂ ಹೌದು. ಕ್ರಿ ಶ ಒಂಬತ್ತನೇ ಶತಮಾನದ ಕನ್ನಡದ ಮೊದಲ ಗದ್ಯಕೃತಿ ವಡ್ಡಾರಾಧನೆಯಲ್ಲಿ ಸಹ ಅರುವತ್ತನಾಲ್ಕು ವಿದ್ಯೆಗಳ ಪ್ರಸ್ತಾಪವಾಗುತ್ತದೆ. ಕ್ರಿ ಶ ಹನ್ನೊಂದನೇ ಶತಮಾನದಲ್ಲಿದ್ದ ಚಾವುಂಡರಾಯನ ‘ಲೋಕೋಪಕಾರ’ ಕೃತಿಯೇ ಮೊದಲಿಗೆ ಅಡುಗೆಯನ್ನು ಒಂದು ಶಾಸ್ತ್ರವೆಂದು ಪರಿಗಣಿಸಿ ಶಾಸ್ತ್ರೋಕ್ತವಾಗಿ ವಿವರಿಸಿದ್ದು. ಹಾಗೆ ನೋಡಿದರೆ ಈ ಗ್ರಂಥವು ಗೃಹವಿಶ್ವಕೋಶ. ವೈದ್ಯ, ಆಯುರ್ವೇದ, ವಿಷತತ್ತ್ವ, ವಾಸ್ತುವಿಚಾರ, ಶಕುನ, ಪಂಚಾಂಗಫಲಗಳ ಜೊತೆಗೆ ಸೂಪಶಾಸ್ತ್ರವನ್ನು ಕುರಿತು ಹೇಳಿದೆ. ಇನ್ನು ಕಲ್ಯಾಣ ಚಾಳುಕ್ಯರ ರಾಜ ಹನ್ನೆರಡನೇ ಶತಮಾನದ ನಾಲ್ಮಡಿ ವಿಕ್ರಮಾದಿತ್ಯನ ಮಗ ಮುಮ್ಮಡಿ ಸೋಮೇಶ್ವರನು ಸಂಸ್ಕೃತದಲ್ಲಿ ಬರೆದಿರುವ ‘ಮಾನಸೋಲ್ಲಾಸ’ (ಇದರ ಇನ್ನೊಂದು ಹೆಸರು: ಅಭಿಲಷಿತಾರ್ಥ ಚಿಂತಾಮಣಿ) ಎಂಬ ವಿಶ್ವಕೋಶದಲ್ಲಿ ಅಡುಗೆಯ ವಿವರಗಳಿವೆ. ಸರಿಯಾಗಿ ನೂರು ಅಧ್ಯಾಯಗಳಿರುವ ಈ ಕೃತಿಯಲ್ಲಿ ಪಾಕಶಾಸ್ತ್ರವು ಒಂದು ಅಧ್ಯಾಯ ಅಷ್ಟೇ. ಮೂಲ ಸಂಸ್ಕೃತ ಮತ್ತು ಕನ್ನಡ ಅನುವಾದಗಳೊಂದಿಗೆ ಐದು ಸಂಪುಟಗಳಲ್ಲಿ ಇದು ಪ್ರಕಟವೂ ಆಗಿದೆ. ನಮ್ಮ ನಾಡಿನ ಬಹು ದೊಡ್ಡ ವಿದ್ವನ್ಮಣೀ ಸಂಶೋಧಕರಾದ ಡಾ. ಮಲ್ಲೇಪುರಂ ಜಿ ವೆಂಕಟೇಶ ಅವರು ಇದನ್ನು ಹೊರ ತಂದಿದ್ದಾರೆ. ಇದು ಬಿಟ್ಟರೆ ಅಡುಗೆಗೇ ಎಂದು ಮೀಸಲಾದ ಕನ್ನಡ ಕೃತಿ ‘ಸೂಪಶಾಸ್ತ್ರ.’ ಹದಿನಾರನೇ ಶತಮಾನದ ಪ್ರಾರಂಭದಲ್ಲಿದ್ದ ಮೂರನೆಯ ಮಂಗರಸನು ಬರೆದದ್ದು.
‘ನವ ಕವೀಶ್ವರ ವಿಕಸಿತಾನನ ಘಟಂಗಳೊಳು, ನವರಸವನಿಟ್ಟು ಪರಿಣತೆ ಪ್ರೇಕ್ಷೆ ಮೊದಲಾದ, ವಿವಿಧ ಪರಿಕರಮನೊಡಗಲೆಸಿ ಬಳಿಕವರ, ನಾಲಗೆಯೆಂಬ ದರ್ವಿವಿಡಿದು, ತವೆ ಪಾಕಮಂ ಮಾಡಿ ರಸಿಕ ಜನ ಸಂತತಿಯ ಕಿವಿಗೆ ತೀವುವ ಭಾರತೀದೇವಿಯಂ ನೆನೆದು, ಸವಿವಡೆದ ಷಡ್ರಸ ವಿಪಾಕಭೇದಮನೆನ್ನ ಬಲ್ಲಂದದಿಂ ಪೇಳ್ವೆನು’ ಎನ್ನುತ್ತಾನೆ ಈ ಕವಿ, ತನ್ನ ಕೃತಿಯ ಮೊದಲಲ್ಲಿ. ಸರಸ್ವತಿಯನ್ನು ಸ್ತುತಿಸಿರುವ ಪರಿಯಿದು; ಪಾಕದ ಪರಿಭಾಷೆಯನ್ನೇ ಬಳಸಿದ್ದಾನೆ. ಹೊಸ ಕವೀಶ್ವರರ ನಗುವಿನಿಂದಾಗಿ ಮುಖಗಳು ಬಿರಿದಿವೆ ಅಂದರೆ ಅರಳಿವೆ. ಇವನ್ನು ನವರಸಗಳೆಂಬ ಪಾತ್ರೆಗಳಲ್ಲಿ ಹಾಕಿ, ಕವಿತಾ ಪರಿಕರಗಳೊಂದಿಗೆ ಕಲೆಸಿ, ಅವರ ನಾಲಗೆಯೆಂಬ ಸೌಟಿನಿಂದ ತಿರುಗಿಸುತ್ತಾ, ಸದಭಿರುಚಿಯ ಅಡುಗೆಯೆಂಬ ಕಾವ್ಯ ಮೂಡಿಸಿ, ರಸಿಕ ಜನರ ಕಿವಿಗೆ ತುಂಬುವ ಭಾರತಿ ಅಂದರೆ ಸರಸ್ವತಿಯನ್ನು ಸ್ತುತಿಸಿ, ಷಡ್ರಸಗಳ ರುಚಿಯಿಂದ ಕೂಡಿದ ಪಾಕ ವಿಶೇಷಗಳನ್ನು ನನಗೆ ತಿಳಿದ ಮಟ್ಟಿಗೆ ಹೇಳುತ್ತೇನೆ’ ಎಂಬುದು ಇದರರ್ಥ. ಇಲ್ಲಿ ಸರಸ್ವತಿಯೇ ಪಾಕಶಾಸ್ತ್ರಜ್ಞೆಯಾಗಿರುವುದು ಮಂಗರಸನ ಚಮತ್ಕಾರ. ಆರುನೂರ ಐವತ್ತು ವಾರ್ಧಕ ಷಟ್ಪದಿ ಪದ್ಯಗಳಲ್ಲಿರುವ ಈ ಕೃತಿಯು ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ಸ್ಥಳೀಯ ಪಾಕವಿಧಾನಗಳನ್ನೂ ಕುರಿತು ಬರೆದಿರುವುದು ನಮ್ಮ ಹೆಮ್ಮೆ. ಇದರಲ್ಲಿ ಪಿಷ್ಟ ಪಾಕಾಧ್ಯಾಯ, ಪಾನಕಾಧ್ಯಾಯ, ಅನ್ನ ಪಾಕಾಧ್ಯಾಯ, ಶಾಖ ಪಾಕಾಧ್ಯಾಯ ಎಂದು ಹೆಸರೇ ಹೇಳುವಂತೆ ಕ್ರಮಾನುಗತವಾದ ವಿವರಣೆಗಳು ಬಂದಿವೆ. ಈತನು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯವನು ಎಂಬುದೇ ನಮ್ಮೆಲ್ಲರ ಅಭಿಮಾನ. ಅಡುಗೆಗೆ ಬೇಕಾದ ಪಾತ್ರೆ ಪರಿಕರಗಳು, ಒಲೆಗಳು ಮತ್ತು ಖಾದ್ಯಗಳ ತಯಾರಿಕಾ ತಂತ್ರಗಳನ್ನೂ ವಿಶದವಾಗಿ ತಿಳಿಸಿದ್ದಾನೆ. ಗೋಧಿ, ರವೆ ಮತ್ತು ನಾನಾ ಬಗೆಯ ಹಿಟ್ಟು(ಪಿಷ್ಟ)ಗಳಿಂದ ತಯಾರಿಸುವ ಒಂಬತ್ತು ಬಗೆಯ ರೊಟ್ಟಿಗಳ ಉಲ್ಲೇಖವಿದೆ. ಮಂಡಿಗೆ, ಫೇಣಿ, ಲಡ್ಡು, ಕರಜೀಕಾಯಿ, ಹೂರಣದ ವಡೆ, ಮೊಸರು ವಡೆ, ಪರಿವಿಳಂಗಾಯಿ (ಪುಳ್ಳಂಗಾಯುಂಡೆ) ಮೊದಲಾದ ಸಿಹಿಭಕ್ಷ್ಯಗಳ ತಯಾರಿಕೆಯೂ ಬಂದಿದೆ. ಹಿಮಾಂಬುಪಾನ, ಗುಜ್ಜರವೇಣಿ, ಅಮೃತವಲ್ಲರಿಗಳೆಂಬ ವಿಶಿಷ್ಟ ಪಾನಕಗಳೂ ಸೇರಿವೆ. ಹಾಲನ್ನು ಗಟ್ಟಿ ಮಾಡುವುದು ಹೇಗೆ? ಸುಗಂಧಭರಿತ ಮೊಸರು, ಕೃತಕ ತುಪ್ಪ ತಯಾರಿಕೆಗಳು ವಿವರವಾಗಿ ಬಂದಿವೆ. ಅಚ್ಚರಿಯೆಂದರೆ, ಗಂಗಾಳಕ್ಕೆ ಹಾಲು ಸುರಿದು ಕುದಿಯುವ ನೀರಿನ ಮಡಕೆಯ ಮೇಲಿರಿಸಿ, ತುರುವೇಬೇರು ಮತ್ತು ಮಾದಲದ ಕಡ್ಡಿಗಳಿಂದ ತೊಳೆಸಿದರೆ ಹಾಲಿನ ಪುಡಿ ದೊರೆಯುತ್ತದೆ ಎಂಬುದು. ಮಾದಲದ ಕಡ್ಡಿ ಗೊತ್ತು; ಆದರೆ ಈ ತುರುವೇಬೇರು ಯಾವುದೋ? ಇಡ್ಡಲಿಗೆ (ಇಡ್ಲಿ) ಮತ್ತು ದೋಸಕ (ದೋಸೆ) ಗಳ ವಿಚಾರ ಬಂದಿದೆ. ಮುನ್ನೂರಕ್ಕೂ ಹೆಚ್ಚಿನ ತಿಂಡಿಗಳ ಪ್ರಸ್ತಾಪವಿದೆ. ಜೋಳದರೊಟ್ಟಿ, ಚಪಾತಿಗಳ ವಿವರಣೆಯೂ ಇದೆ.
ವಾಸ್ತವವಾಗಿ ಸೂಪ ಎಂಬುದು ಸಂಸ್ಕೃತ ಪದ. ಇದೇ ವಿದೇಶಕ್ಕೆ ಹೋಗಿ ಸೂಪ್ ಎಂದಾಗಿದೆ. ಉಪ್ಪು, ಹುಳಿ ಮತ್ತು ಖಾರಗಳಿಂದ ಕೂಡಿದ ಒಗ್ಗರಣೆ ಬೆರೆಸಿದ ಬೇಳೆಯ ತೊವ್ವೆಯನ್ನು ಸೂಪ ಎಂದು ಗುರುತಿಸುವುದು. ಅಕ್ಕಿಯಿಂದ ಸಿದ್ಧಪಡಿಸುವ ಖಾದ್ಯಗಳು, ವಿವಿಧ ರೀತಿಯ ಪಲ್ಯ ಮತ್ತು ಕೋಸಂಬರಿಗಳು, ಕಳಲೆ (ಎಳೆಬಿದಿರು)ಯಿಂದ ತಯಾರಿಸುವ ಅಡುಗೆ ವಿಧಗಳನ್ನು ಸಹ ತಿಳಿಸಲಾಗಿದೆ. ಒಟ್ಟಿನಲ್ಲಿ ಸೂಪಶಾಸ್ತ್ರವು ನಮ್ಮೆಲ್ಲರ ಅಚ್ಚುಮೆಚ್ಚಿನ ದಕ್ಷಿಣ ಭಾರತದ ಭಕ್ಷ್ಯ ಭೋಜ್ಯಗಳನ್ನು ಕುರಿತು ಇದೆ. ೧೯೬೯ ರಲ್ಲೇ ಮೈಸೂರು ವಿವಿಯು ಎಸ್ ಎನ್ ಕೃಷ್ಣಾಜೋಯಿಸ್ ಅವರ ಸಂಪಾದಕತ್ವದಲ್ಲಿ ತಾಳೆಗರಿಯಿಂದ ಪುಸ್ತಕರೂಪಕ್ಕೆ ತಂದು ಪ್ರಕಟಿಸಿದೆ. ೨೦೧೨ ರಲ್ಲೇ ಧಾರವಾಡದ ಡಾ. ಯಶೋಧಾಭಟ್ ಎಂಬುವವರು ಮಂಗರಸನ ಈ ಶಾಸ್ತ್ರಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿ, ಪ್ರಪಂಚಾದ್ಯಂತ ಗೊತ್ತಾಗುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಪ್ರಪಂಚದ ಪ್ರಪ್ರಥಮ ಅಡುಗೆ ಪುಸ್ತಕ ಎಂಬ ಉಪಶೀರ್ಷಿಕೆಯಲ್ಲಿ ಆಯುರ್ವೇದ ವೈದ್ಯರಾದ ಡಾ. ಸತ್ಯನಾರಾಯಣ ಭಟ್ ಅವರು ಮಂಗರಸನ ಮೆನು ಎಂಬ ಹೆಸರಿನಲ್ಲಿ ಈ ಆರೋಗ್ಯಶಾಸ್ತ್ರವನ್ನು ವಿಶ್ಲೇಷಿಸಿದ್ದಾರೆ. ಇಂಥವುಗಳನ್ನೆಲ್ಲಾ ವಿದ್ಯಾರ್ಥಿಗಳಿಗೆ ಪಠ್ಯವಾಗಿಟ್ಟರೆ ಏಕಕಾಲಕ್ಕೆ ಥಿಯರಿಯೂ ಪ್ರಾಕ್ಟಿಕಲ್ಲೂ ಆಗಿ, ಅಟಲೀಸ್ಟು ಜೀವನದಲ್ಲಿ ಏನಿಲ್ಲವೆಂದರೂ ಅಡುಗೆ ಮಾಡುವುದನ್ನಾದರೂ ಕಲಿತು ಬದುಕು ಸಾಗಿಸಲು ಸಾಧ್ಯವಾಗುವುದು!
ಚಾವುಂಡರಾಯನ ಲೋಕೋಪಕಾರವನ್ನಂತೂ ‘ಬಾಣಸಿಗರ ವಿಶ್ವಕೋಶ’ ಎಂದೇ ಕರೆಯಲಾಗಿದೆ. ಹಣ್ಣುಗಳನ್ನು ಪಾಶ್ಚೀಕರಿಸಿ, ಇತರ ವಸ್ತುಗಳೊಂದಿಗೆ ಸಂಸ್ಕರಿಸಿ ಹಣ್ಣಿನ ರಸ ತಯಾರಿಸುವ ವಿಧಾನವನ್ನು ತಿಳಿಸಲಾಗಿದೆ. ಹಾಳಾದ ತುಪ್ಪಕ್ಕೆ ಮರು ಜೀವ ಕೊಡುವುದು, ಹಾಲನ್ನು ಗಟ್ಟಿ ಮಾಡುವುದು, ಹಣ್ಣಿನ ಪರಿಮಳವುಳ್ಳ ಮೊಸರುತ್ಪಾದನೆ, ಮೊಸರಿನಿಂದ ತಯಾರಿಸುವ ವಿಶೇಷ ವ್ಯಂಜನಗಳನ್ನು ತಿಳಿಸಿದ್ದಾನೆ. ಗೆಣಸು, ಬೆಂಡೇಕಾಯಿ, ದಪ್ಪಮೆಣಸಿನಕಾಯಿ, ತೊಗರಿಬೇಳೆ, ಗೋರೀಕಾಯಿಗಳಿಂದ ಮೊಸರುಬಜ್ಜಿ (ಸಿಹಿರಾಯ್ತಾ)ಯನ್ನು ಸಿದ್ಧ ಮಾಡುವ ಬಗೆ ಬಂದಿದೆ. ನಿರ್ದಿಷ್ಟ ಕಾಲದಲ್ಲಿ ಮಾತ್ರ ದೊರೆಯುವ ಹಲಸು, ಮಾವು, ನೇರಳೆ ಹಣ್ಣುಗಳನ್ನು ಕೆಲವೊಂದು ಗಿಡಮೂಲಿಕೆಗಳಿಂದ ಸವರಿ, ಬಿಸಿಲಿನಲ್ಲಿ ಒಣಗಿಸಿ, ಬೇಕಾದಾಗ ಬಳಸಿಕೊಳ್ಳುವ ವಿಧಾನವನ್ನೂ ತಿಳಿಸಿದ್ದಾನೆ. ಇದು ಬಿಟ್ಟರೆ ಕ್ರಿ ಶ ಸಾವಿರದ ಏಳುನೂರರಲ್ಲಿದ್ದ ಕೆಳದಿ ಸಂಸ್ಥಾನದ ರಾಜ, ವಿದ್ವಾಂಸ ಬಸವರಾಜನು ಸಂಸ್ಕೃತದಲ್ಲಿ ರಚಿಸಿದ ‘ಶಿವತತ್ತ್ವ ರತ್ನಾಕರ’ವೆಂಬ ಇನ್ನೊಂದು ವಿಷಯ ವಿಶ್ವಕೋಶದಲ್ಲಿ ಆಹಾರ ಮತ್ತು ಪಾಕಶಾಸ್ತ್ರವು ವರ್ಣಿತವಾಗಿದೆ. ಪಾಕಶಾಲೆ ಮತ್ತು ತಾಂಬೂಲ- ಇವೆಲ್ಲದರ ಸುದೀರ್ಘ ವಿವರಣೆಗಳು ಬಂದಿವೆ. ಹುಗ್ಗಿ, ಪಳದ್ಯ, ಗಂಜಿಯಂಬಲಿ, ಕೂಟು, ರಸವಾಂಗಿಗಳೆಂಬ ಮೇಲೋಗರಗಳನ್ನೂ ಹೆಸರಿಸಿ, ವೈವಿಧ್ಯ ಮೆರೆದಿದ್ದಾನೆ. ತುಂಬುಗಾಯಿ ಬದನೆ, ನೆಲ್ಲಿಬದನೆ, ದುಗ್ಧ ವೃಂತಾಕ, ನೀರುಳ್ಳಿ ಬದನೆ ಎಂಬಂಥ ಬದನೆಯ ಹಲವು ವ್ಯಂಜನಗಳನ್ನು ವಿವರಿಸಿದ್ದಾನೆ. (ವೃಂತಾಕ ಎಂದರೆ ಸಂಸ್ಕೃತದಲ್ಲಿ ಬದನೆ) ಹನ್ನೊಂದು ಬಗೆಯ ರೊಟ್ಟಿ (ಸಂಸ್ಕೃತದಲ್ಲಿ ರೋಟಿಕಾ)ಗಳನ್ನು ಮಾಡುವ ವಿಧಾನವಿದೆ. ಅಂಗರಪೋಳಿಗೆ ಅಂದರೆ ಕಣಕದ ಹೋಳಿಗೆ ಮಾಡುವ ಕ್ರಮವಿದೆ. ಪಂಚಾಮೃತ, ಹಾಲುಂಡೆ, ಲೇಹ್ಯಗಳ ವಿವರವಿದೆ. ಹಾಲುಮಂಡಗೆ (ಹಾಲುಬಾಯಿ) ಮಾಡುವ ವಿಧಾನವನ್ನು ತಿಳಿಸಿದ್ದಾನೆ.
ಮಂಗರಸನ ಸೂಪಶಾಸ್ತ್ರದ ಪದ್ಯವೊಂದು ಹೀಗಿದೆ ನೋಡಿ:
ತೊಳೆದ ಗೋಧುವೆಗೆ ಜೀರಿಗೆಯೆರಡ ಪೊರೆಯೆತ್ತಿ
ಕಳಿಯರ್ಧ ನೀರರ್ಧವಾದೆಸರನೆತ್ತಿಯದ
ರೊಳಗಿಕ್ಕಿ ಮಿಲುಗಿ ನೀರಿಂಗುವಂದದಿನಟ್ಟು ಕೊಂಡಿಳ ಹಿಯಾರಲೊಡನೆ
ಬಿಳಿಯರುವೆಯಿಂದ ಶೋಧಿಸಿ ಪಲಪಸುಗೆ ಮಾಡಿ
ಕೊಳುತೊಂದಕರ್ಧ ಹಾಲಿಕ್ಕಿ ಸಕ್ಕರೆಯಿಕ್ಕಿ
ಕುಳಿರ್ದ ಪನಿನೀರು ಕರ್ಪೂರವಿಕ್ಕಲದು ಹಾಲಗೋಧುವೆ ಯಂಬಲಿ ಕಣಾ
ಹಾಲು ಮತ್ತು ಗೋಧಿಯ ಜೊತೆಗೆ ಜೀರಿಗೆ, ಸಕ್ಕರೆ, ಪನ್ನೀರುಗಳಿಂದ ನೆನೆಸಿ, ಸೋಸಿ, ಕುದಿಸಿ ಮಾಡಿದ ಅಂಬಲಿಯ ವಿವರಣೆ. ಸೂಪು ಎಂದರೆ ಇದೇ; ಗಟ್ಟಿಯಾದ ಅಂಬಲಿ. ಐರೋಪ್ಯರು ಬಳಸುವ ಸೂಪ್ ಎಂಬ ಪದಕ್ಕೆ ಈ ಸಂಸ್ಕೃತದ ಸೂಪವೇ ಮೂಲ. ಒಟ್ಟಿನಲ್ಲಿ ಸೂಪು ಎಂದರೆ ಹಲವು ತೆರನಾದ ಬೇಳೆಗಂಜಿ, ಖಾರದ ರಸಾಯನ ಎಂದೂ ಅರ್ಥವುಂಟು. ಹಿಂದಿನ ಕಾಲದಲ್ಲಿ ನಮಗೆ ಜ್ವರ ಬಂದಾಗ ವೈದ್ಯರು ಅಕ್ಕಿಗಂಜಿ, ರವೆಗಂಜಿ ಎಂದೆಲ್ಲಾ ಕುಡಿಯಲು ಹೇಳುತ್ತಿದ್ದುದೇ ಸೂಪು. ಬೇಳೇ ತೊವ್ವೆಯೇ ದಾಲ್. ಸಂಸ್ಕೃತದಲ್ಲಿ ಇದನ್ನು ದಾಲೀ ಎನ್ನುವರು. ಈ ದಾಲೀ ಎಂಬುದೇ ಮುಂದೆ ದಾಲ್ ಆಯಿತು. ದ್ವಿದಳ ಧಾನ್ಯಗಳೇ ಇದರ ಬಂಡವಾಳ. ಇನ್ನೊಂದು ವಿಶೇಷವೆಂದರೆ ಮಂಗರಸನು ನಾವೀಗ ಬಳಸುತ್ತಿರುವ ನೂಡಲ್ಸ್ ಕುರಿತು ಒಂದೆಡೆ ಹೇಳಿದ್ದಾನೆ. ಕನ್ನಡದಲ್ಲಿ ಇದು ಸೇವಿಗೆ. ಇದರಲ್ಲಿ ಎರಡು ವಿಧ: ಖಾರಸೇವಿಗೆ ಮತ್ತು ಸಿಹಿಸೇವಿಗೆ. ಇದು ಜನರ ಬಾಯಲ್ಲಿ ಶ್ಯಾವ್ಗೆ, ಶ್ಯಾಂವ್‌ಗೆ ಎಂದೆಲ್ಲಾ ಅಪಭ್ರಂಶಗಳಾಗಿವೆ. (ಬೇಕರಿ ಮತ್ತು ಸ್ವೀಟ್ಸ್ ಅಂಗಡಿಗಳಲ್ಲಿ ‘ಕಾರಸೇವು’ ಎಂದು ಕರೆಸಿಕೊಳ್ಳುವುದೇ ಈ ಖಾರಸೇವಿಗೆ. ಹಲವರು ಇದನ್ನು ಚೌಚೌ ಎಂದು ಹೇಳುವುದುಂಟು. ಇದು ಚೀನೀ ಭಾಷೆಯ ಶಬ್ದ. ಇಂಗ್ಲಿಷಿನ ಮಿಕ್ಸರ್ ಎಂಬುದಕ್ಕೆ ಸಂವಾದಿ.) ಮಂಗರಸನು ಅಕ್ಕಿ ಮತ್ತು ಗೋಧುವೆಯ (ಗೋಧುವೆ > ಗೋಧಿ) ಸಿಹಿಸೇವಿಗೆಗಳನ್ನು ಕುರಿತು ಮಾತಾಡಿದ್ದಾನೆ. ಒತ್ತುಶಾವಿಗೆ ಎಂದು ಈಗಲೂ ಮನೆಗಳಲ್ಲಿ ಮಾಡುವುದುಂಟು. ಇತ್ತೀಚೆಗೆ ‘ಹೋಮ್ ಮೇಡ್ ಫುಡ್ ಪ್ರಾಡಕ್ಟ್ಸ್’ ಹೆಚ್ಚಾಗಿದ್ದು, ಇಲ್ಲಿ ಹಲವನ್ನು ಮಾರುವ ಮನೆಗಳಲ್ಲೂ ಒತ್ತುಶಾವಿಗೆ ದೊರೆಯುತ್ತದೆ. ಈಗಂತೂ ಬಗೆಬಗೆಯ ನೂಡಲ್ಸ್ಗಳ ಕಾಲ. ಒನ್ ಮಿನಿಟ್ ಮ್ಯಾಗಿ ಎಂಬುದೂ ಇದರಲ್ಲಿ ಒಂದು. ಈ ಸೇವಿಗೆಯ ಸೃಷ್ಟಿಯ ಹಿಂದೆ ತಮಾಷೆಯ ಮಾತೊಂದಿದೆ: ತಿನ್ನುವ ಪ್ರತಿ ಅಗುಳಿನಲ್ಲೂ ನಮ್ಮ ಹೆಸರು ಬರೆದಿರುತ್ತದಂತೆ. ನಮಗೆ ಅನ್ನದ ಋಣ ಇದ್ದರಷ್ಟೇ ಊಟ; ಇಲ್ಲದಿದ್ದರೆ ಇಲ್ಲ. ಕೆಲವರ ಹೆಸರು ಅಕ್ಕಿಕಾಳಿಗಿಂತಲೂ ಉದ್ದ ಇರುವುದರಿಂದ ಬ್ರಹ್ಮನು ಈ ಶಾವಿಗೆಯನ್ನು ಸೃಷ್ಟಿಸಿದನಂತೆ. ಎಂಥ ಸೃಜನಾತ್ಮಕ ರಮ್ಯಕಲ್ಪನೆಯಿದು!
ಜೀವದ ಅಸ್ತಿತ್ವಕ್ಕೆ ಅನ್ನವೇ ಮೂಲ. ‘ಪ್ರಾಣಾಃ, ಕಲೌತ್ಪನ್ನಾದಿಷುಸ್ಥಿತಾಃ’ ಎಂದು ಸ್ಮೃತಿಗಳು ಸಾರಿವೆ. ಎಂದರೆ ಕಲಿಯುಗದಲ್ಲಿ ಪ್ರಾಣಕ್ಕೆ ಅನ್ನವೇ ಆಶ್ರಯ. ಚೈತನ್ಯದ ಮೂಲವೇ ಅನ್ನ ಎಂದು ಶ್ರೀಮದ್ ಭಗವದ್ಗೀತಾ ಹೇಳುತ್ತದೆ. ಇನ್ನು ಛಾಂದೋಗ್ಯೋಪನಿಷತ್ತಂತೂ ಅನ್ನದ ಮಹಿಮೆಯನ್ನು ವಿವರವಾಗಿ ಕೊಟ್ಟಿದೆ. ‘ಅನ್ನಮಾಶ್ರಿತಂ ತ್ರೇದಾ ವಿಧೀಯತೆ ತಸ್ಯಯಃ ಸ್ಥವಿಷ್ಠೋಧಾತುಸ್ತತ್ಪುರೀಷಂ ಭವತಿ ಯೋ ಮದ್ಯ ಮಸ್ತನ್ಮಾಂಸಂ ಯೋಣಿಷ್ಠಸ್ತನ್ಮನಃ ॥ ಆಪಃ ಪೀತಾಸ್ತ್ರೇಧಾ ವಿಧೀಯಂತೆ ತಾಸಾಂ ಯಃ ಸ್ಥವಿಷ್ಠೋ ಧಾತುಸ್ತನ್ಮೂತ್ರಂ ಭವತಿ ಯೋ ಮಧ್ಯಮಸ್ತಲ್ಲೋಹಿತಂ ಯೋಣಿಷ್ಠಃ ಸ ಪ್ರಾಣಃ ತೇಜೋಶಿತಂ ತ್ರೇಧಾ ವಿಧೀಯತೆ ತಸ್ತ ಯಃ ಸ್ಥವಿಷ್ಟೋ ಧಾತುಸ್ತ ದಸ್ಥಿ ಭವತಿ ಯೋ ಮಧ್ಯಮಃ ಸ ಮಜ್ಜಾ ಯೋಣಿಷ್ಠಃ ಸಾ ವಾಕ್ ॥ ತೇಜಃ ತೈಲ ಘೃತಾದಿ ಮಜ್ಜಾ ಅಸ್ಥ್ಯಂತರ್ಗತ ಸ್ನೇಹಃ॥‘ (ನಾವು ತಿಂದ ಅನ್ನದ ಬಹುಭಾಗವು ಮಲವಾಗಿ, ಸ್ವಲ್ಪ ಭಾಗವು ಮಾಂಸವಾಗಿ, ಅದರ ಸೂಕ್ಷ್ಮಭಾಗವು ಮನೋವಿಕಾಸಕ್ಕೆ ಸಹಾಯವಾಗುವುದು. ಇಲ್ಲಿ ಅನ್ನ ಎಂದರೆ ಆಹಾರ ಎಂದರಿಯಬೇಕು. ಕುಡಿಯುವ ನೀರಿನ ಬಹುಭಾಗವು ಮೂತ್ರವಾಗಿ, ಮಧ್ಯಮಾಂಶವು ರಕ್ತವಾಗಿ, ಸೂಕ್ಷ್ಮಾಂಶವು ಪ್ರಾಣಧಾರಣೆಗೆ ಸಹಾಯವಾಗುವುದು. ಆಹಾರದ ಜೊತೆಯಲ್ಲಿ ಸೇರಿರುವ ಎಣ್ಣೆ, ತುಪ್ಪ ಮುಂತಾದ ಜಿಡ್ಡಿನ ಬಹುಭಾಗವು ಮೂಳೆಗೆ ನೆರವೀಯುವುದು, ಮಧ್ಯಮಾಂಶ ಮೇದಸ್ಸಾಗುವುದು, ಸೂಕ್ಷ್ಮ ಭಾಗವು ಪಚನಕ್ರಿಯೆಗೆ ನೆರವೀಯುವುದು.)
ರೋಟಿ, ಕಪಡಾ ಔರ್ ಮಕಾನ್ ಎಂದರೆ ಆಹಾರ, ಬಟ್ಟೆ ಮತ್ತು ವಸತಿಗಳು ಮನುಷ್ಯನ ಮೂಲಭೂತ ಅಗತ್ಯಗಳು. ಇವುಗಳಲ್ಲಿ ಆಹಾರ ಶೋಧನೆಯೇ ಪ್ರಾಚೀನ ಮಾನವನ ಹಲವು ಆವಿಷ್ಕಾರಗಳಿಗೆ ನಾಂದಿಯಾದವು. ಪ್ರಕೃತಿದತ್ತ ಹಣ್ಣು, ಕಾಯಿಗಳನ್ನು ತಿನ್ನುತ್ತಾ ಹಸೀಮಾಂಸವನ್ನೇ ಸೇವಿಸುತ್ತಾ ಇದ್ದವನಿಗೆ ಆಕಸ್ಮಿಕವಾಗಿ ಬೆಂದ ಗೆಡ್ಡೆಗೆಣಸಿನ, ಬೆಂದ ಮಾಂಸದ ರುಚಿ ದಕ್ಕಿರಬೇಕು. ಇದಕ್ಕೆ ಮೂಲವೇ ಕಾಳ್ಗಿಚ್ಚು. ಕಾಡಿಗೆ ಬೆಂಕಿ ಹತ್ತಿಕೊಂಡಾಗ ಹಣ್ಣು, ಗೆಡ್ಡೆ, ಗೆಣಸುಗಳು ಹದವಾಗಿ ಬೆಂದಿರಬೇಕು. ತಪ್ಪಿಸಿಕೊಳ್ಳಲಾಗದೇ ಅಗ್ನಿಗೆ ಸಿಕ್ಕಿಕೊಂಡ ಪ್ರಾಣಿಗಳ ಮಾಂಸವೂ ಹದವಾಗಿ ಬೆಂದಿರಬೇಕು. ಇವನ್ನು ತಿಂದ ಮಾನವನಿಗೆ ಬೆಂದ ಆಹಾರದ ರುಚಿ ಸಿಕ್ಕಿರಬೇಕು. ಅಲ್ಲಿಂದ ಅವನು ಅಡುಗೆಯನ್ನು ಕಲಿತಿರಬೇಕು. ಅಗ್ನಿಯಿಂದ ಅಡುಗೆ ಎಂಬ ಪರಿಕಲ್ಪನೆಯು ಆದಿಮಾನವನು ಮತಿವಂತ ಮಾನವನಾದ ಬಗೆಯನ್ನು ಸೊಗಸಾಗಿ ಅರುಹುತ್ತದೆ. ನಮ್ಮದು ಹಲವು ತೆರನಾದ ಜನಸಮುದಾಯಗಳಿಂದ ಕೂಡಿದ ಸಂಸ್ಕೃತಿಯಾದ್ದರಿಂದ ಹಲವು ರೀತಿಯ ಅಡುಗೆ ಪದ್ಧತಿಗಳು ವಿಕಾಸವಾದವು. ಭಾರತದಲ್ಲಿರುವಷ್ಟು ಬುಡಕಟ್ಟುಗಳೂ ಪಂಗಡಗಳೂ ಬೇರೆಲ್ಲಿಯೂ ಇಲ್ಲದಿರುವುದರಿಂದಲೂ ಪ್ರಾದೇಶಿಕ ಮತ್ತು ಭೌಗೋಳಿಕ ಅಡ್ಡಿ ಅಡಚಣೆಗಳಿದ್ದುದರಿಂದ ಒಂದೊಂದೂ ಗುಂಪು ಗುಂಪಾಗಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದುದರಿಂದಲೂ ವಿಭಿನ್ನ ಬಗೆಯ ಅಡುಗೆ ಮಾಡುವ ಪದ್ಧತಿ ಮತ್ತು ಥರಾವರೀ ಮೆನುಗಳು ರೂಪಿತಗೊಂಡವು. ಸಾವಿರಾರು ವರುಷಗಳ ಅವಧಿಯಲ್ಲಿ ಸಸ್ಯಾಹಾರದಲ್ಲೇ ನೂರು ಸಾವಿರ ಬಗೆಯ ಖಾದ್ಯಗಳು ಮತ್ತು ಪಾನೀಯಗಳು ಆವಿಷ್ಕಾರಗೊಂಡವು. ಮೂಲತಃ ಪ್ರಯೋಗಪಟುಗಳಾದ ನಾವು ಅವುಗಳಲ್ಲೇ ಉಪವಿಧಗಳನ್ನು ಕಂಡುಕೊಂಡು, ಅಸಂಖ್ಯಾತ ನಮೂನೆಗಳನ್ನು ಸೃಷ್ಟಿಸಿದೆವು. ಉಪ್ಪಿಟ್ಟೊಂದರಲ್ಲೇ ರವೆ ಉಪ್ಪಿಟ್ಟು, ಅಕ್ಕಿತರಿ ಉಪ್ಪಿಟ್ಟು, ಗೋಧೀನುಚ್ಚಿನ ಉಪ್ಪಿಟ್ಟು, ಅಕ್ಕಿನುಚ್ಚಿನ ಉಪ್ಪಿಟ್ಟು, ಅವಲಕ್ಕಿ ಉಪ್ಪಿಟ್ಟು, ಶ್ಯಾವಿಗೆ ಉಪ್ಪಿಟ್ಟು ಹೀಗೆ ಹಲವು ಉಪಪ್ರಕಾರಗಳು ಶೋಧಗೊಂಡವು. ಬರುಬರುತ್ತಾ ಜೀವಿಸಲು ಅಗತ್ಯವಾಗಿ ಬೇಕಾಗಿರುವ ಆಹಾರವು ಮುಂದೆ ಸ್ವಾದಿಷ್ಟಕರವಾಗಿಯೂ ಶಕ್ತಿವರ್ಧಕವಾಗಿಯೂ ಪರಿವರ್ತಿತವಾಯಿತು. ಈಗಂತೂ ಆಹಾರ ಪದಾರ್ಥಗಳ, ಪೊಟ್ಟಣಗಳ ಮೇಲಿರುವ ಪ್ರೋಟೀನು, ಕ್ಯಾಲ್ಸಿಯಂ, ಕಾರ್ಬೊಹೈಡ್ರೇಡ್, ಸೋಡಿಯಂ, ಆ್ಯಡೆಡ್ ಶುಗರ್, ಐರನ್ ಕಂಟೆಂಟ್, ಕೊಲೆಸ್ಟರಾಲ್, ಫೈಬರ್ ಎಂದೆಲ್ಲಾ ನ್ಯುಟ್ರಿಷಿನಲ್ ಇನ್‌ಫರ್‌ಮೇಷನ್‌ಗಳತ್ತ ಕಣ್ಣು ಹಾಯಿಸಿ, ಯಾವುದರಲ್ಲಿ ಎಷ್ಟೆಷ್ಟು ಪರ್ಸೆಂಟ್ ಇದೆ? ಎಂದು ಗುರುತಿಸುವ ಕಾಲ; ತೂಕ ಮಾಡಿ ಅಡುಗೆ ಮಾಡುವ ಕಾಲ! ಜಗತ್ತಿನ ಮುಮ್ಮೊದಲ ನಾಗರಿಕತೆ ಎಂದು ಕರೆಸಿಕೊಳ್ಳುವ ಹರಪ್ಪಾದ ಸಿಂಧೂ ಬಯಲಿನ ಜನರು ಆ ಕಾಲಕ್ಕಾಗಲೇ ಹಣ್ಣು ಮತ್ತು ತರಕಾರಿಗಳನ್ನು ಯಥೇಚ್ಛ ಬಳಸಿ, ಅಡುಗೆಗಳನ್ನು ಮಾಡುತ್ತಿದ್ದರೆಂದು ಸಂಶೋಧನೆ ಹೇಳುತ್ತದೆ. ಓಂ ಪ್ರಕಾಶ್ ಅವರ ‘ಫುಡ್ ಅ್ಯಂಡ್ ಡ್ರಿಂಕ್ಸ್ ಇನ್ ಏನ್‌ಷಿಯೆಂಟ್ ಇಂಡಿಯ’ ಎಂಬ ಕೃತಿಯಲ್ಲೂ ಡಾ. ಎನ್ ನಂದೀಶ್ವರ ಅವರ ‘ಮಧ್ಯಕಾಲೀನ ಕರ್ನಾಟಕದಲ್ಲಿ ಆಹಾರ ಮತ್ತು ಪಾನೀಯಗಳು’ ಎಂಬ ಕೃತಿಯಲ್ಲೂ ಪಾಕಶಾಸ್ತ್ರವು ಬೆಳೆದು ಬಂದ ಬಗೆಯನ್ನು ವಿಶದವಾಗಿ ನೋಡಬಹುದು. ಮಂಗರಸನಂತೂ ‘ಅಪೂಪ’ ಎಂಬ ಅಪರೂಪದ ರುಚಿಕರವಾದ ಸಿಹಿತಿನಿಸನ್ನು ಹೆಸರಿಸುತ್ತಾನೆ. ಸಂಸ್ಕೃತದಲ್ಲಿ ಇದನ್ನು ಅತಿರಸ ಎನ್ನುವರು. ಗ್ರಾಮೀಣ ಭಾಗದಲ್ಲಿ ಕಜ್ಜಾಯ ಎಂದು ಕರೆಯುವುದು ಇದನ್ನೇ. (ವಿಡಂಬನಾರ್ಥದಲ್ಲಿ ಕಜ್ಜಾಯ ಎಂಬುದಕೆ ಹೊಡೆತ ಎಂಬರ್ಥವಿದೆ) ಅನಾನಸಿನಿಂದ ಮಾಡಿದ ಅಪೂಪಕ್ಕೆ ಅನಾರಸ ಎಂದು ಕರೆಯುತ್ತಾರಂತೆ. ಇದರ ಹಿಟ್ಟನ್ನು ಸಿದ್ಧ ಮಾಡಿಕೊಳ್ಳುವುದೇ ಸಾಕಷ್ಟು ಸಮಯ ಹಿಡಿಯುವ ಪ್ರಯಾಸದ ಮತ್ತು ಹದದ ಕೆಲಸ. ಗರಿಗರಿಯಾದ ಅತಿರಸವೆಂದರೆ ಎಂಥವರ ಬಾಯಲ್ಲೂ ನೀರೂರುತ್ತದೆ. ಇದೆಲ್ಲವನೂ ಮಂಗರಸನು ಮರೆಯದೇ ಹೇಳಿದ್ದಾನೆ. ಇನ್ನೊಂದು ಸೋಜಿಗವೆಂದರೆ ಇದು ಮಡಿಗೆ ಬರುತ್ತದಂತೆ. ಅಧಿಕ ಶ್ರಾವಣ ಮಾಸ ಬಂದಾಗ ಮುತ್ತೈದೆಯರಿಗೆ ಮೂವತ್ಮೂರು ಅತಿರಸಗಳನ್ನು ದಾನ ಮಾಡುವುದೇ ಅಪೂಪ ದಾನ. ಯಾರೋ ಬಾಯಿಚಪಲದ ಫುಡ್ಡೀಗಳು ಇಂಥದೊಂದು ದಾನವನ್ನು ರೂಢಿಸಿಕೊಟ್ಟು ನಮ್ಮ ಜನರ ರಸಿ-ಕತೆಯನ್ನು ಸಾರ್ವತ್ರಿಕಗೊಳಿಸಿದ್ದಾರೆ. ಮೂವತ್ಮೂರು ಒಳ್ಳೆಯ ಸಂಖ್ಯೆಯೇ! ಪಟ್ಟಾಗಿ ಕೂತು ಪಟ್ಟಾಂಗ ಹೊಡೆಯುತ್ತಾ ತಿಂದು ತೇಗುವುದಕ್ಕೆ!!
ಅಡುಗೆಮನೆಯೇ ಬದುಕಿನ ಬೆರಗಿನರಮನೆ. ಒಪ್ಪ ಓರಣವಾಗಿ ಜೋಡಿಸಿದ ದಿನಸಿ ಪದಾರ್ಥಗಳು, ಒಂದೇ ಬಗೆಯ ಪಾರದರ್ಶಕ ಡಬ್ಬಿಗಳು, ಪದೇ ಪದೇ ಬೇಕಾಗುವಂಥ ಪದಾರ್ಥಗಳು ಸುಲಭವಾಗಿ ಕೈಗೆ ಸಿಗುವಂತೆ ಜೋಡಣೆ, ಬಳಸುವ ಪರಿಕರಗಳು, ಶುಚಿಗೆ ಆದ್ಯಗಮನ, ಒಲೆಯ ಮೇಲಿಡುವ ಪಾತ್ರೆಗಳು, ಬಡಿಸಲು ಬಳಸುವ ಪಾತ್ರೆಗಳು, ತಟ್ಟೆ ಲೋಟಗಳು ಇವೆಲ್ಲ ನಮ್ಮ ಜೀವನದ ಹಲವು ಸಂಗತಿಗಳ ಗುಟ್ಟುಗಳನ್ನು ಬಿಟ್ಟುಕೊಡುವಂಥ ಕೀಲಿಕೈ! ಹಾಗೆಯೇ ಆ ಮನೆಯ ಗೃಹಿಣಿಯ ಸ್ವಭಾವದ ದ್ಯೋತಕ. ಏನೋ ಹೇಗೋ ತಿಂದರಾಯಿತು ಎಂಬಂಥ ಸೋಂಬೇರಿ ಮಂದಿಯ ಅಡುಗೆಮನೆಯು ಗುಜರಿಯಂತೆ ಗಲೀಜಾಗಿರುತ್ತದೆ. ದಿನದ ಮುಖ್ಯಭಾಗ ಅದರಲ್ಲೂ ಶಾಖ, ಜಿಡ್ಡು ಮತ್ತು ತೇವದಿಂದ ಕೂಡಿದ ಪರಿಸರದಲ್ಲಿ ಅಡುಗೆ ಮಾಡುವಾಗ ಸ್ವಚ್ಛ ಗಾಳಿ-ಬೆಳಕು ಬೇಕೆಂಬ ಪ್ರಾಥಮಿಕ ಜ್ಞಾನವಿಲ್ಲದ ಎಷ್ಟೋ ಮಂದಿ ಅಡುಗೆಮನೆಯನ್ನು ಗೂಡಂಗಡಿ ಮಾಡಿರುತ್ತಾರೆ. ಏಕೆಂದರೆ ಮನೆ ಕಟ್ಟಿಸುವವರು ಗಂಡಸರು; ಅಡುಗೆ ಮಾಡಬೇಕಾದವರು ಹೆಂಗಸರು. ಇದು ನಮ್ಮ ದೇಶದಲ್ಲಿದ್ದ ಈ ಹಿಂದಿನ ಮಧ್ಯಮ ದರ್ಜೆಯವರ ಮನೋಭಾವ. ಹಿಂದಿನ ಕಾಲದ ಅಡುಗೆಮನೆಗಳಿಗೂ ಈಗಿನವಕ್ಕೂ ವ್ಯತ್ಯಾಸವಿದೆ. ಹಿಂದೆ ಯಾರು? ಏನು ಅಡುಗೆ ಮಾಡಿದರು? ಎಷ್ಟು ತಿಂದರು? ಎಂಬುದೆಲ್ಲಾ ಗುಟ್ಟಾಗಿತ್ತು. ವಿಶೇಷ ದಿನಗಳಲ್ಲಷ್ಟೇ ಆ ಕುಲಸ್ಥರಿಗೆ ಗೊತ್ತಾಗುತ್ತಿತ್ತು. ಗಂಜಿ ಕುಡಿದರೂ ಗಡದ್ದಾಗಿ ಕುಡಿಯುತ್ತಾ, ಬಡತನವನ್ನು ಮುಚ್ಚಿಟ್ಟು ಬದುಕುತ್ತಿದ್ದರು. ಈಗ ಹಾಗಲ್ಲ! ಎಲ್ಲವೂ ಖುಲ್ಲಂ ಖುಲ್ಲ; ಓಪನೋ ಓಪನು!! ಮನುಷ್ಯರು ಪ್ರದರ್ಶನಪಟುಗಳಾದಂತೆಲ್ಲಾ ನಂನಮ್ಮ ಅಡುಗೆಮನೆಯು ಬೀದಿಗೇ ಕಾಣುವಂತಾಯಿತು. ಅಂದಿನದು ಕೀಳರಿಮೆಯ ಕಾಲವೆಂದೂ ಇಂದಿನದು ಆತ್ಮವಿಶ್ವಾಸ ಸ್ವಲ್ಪ ಇರುವ ಅಹಂಭಾವ ಹೆಚ್ಚೇ ಇರುವ ಕಾಲ ಎಂದೂ ಗುರುತಿಸಬಹುದು. ಇದನ್ನು ಹೀಗೂ ಹೇಳಬಹುದು: ಮಧ್ಯಮ ವರ್ಗದ ಹೆಂಗಸರ ಕಷ್ಟನಷ್ಟಗಳನ್ನು ಗಂಡಸರಾದವರು ಅರ್ಥ ಮಾಡಿಕೊಳ್ಳುವಲ್ಲಿ ಮುಂದಾಗಿದ್ದಾರೆ. ಇಟಾಲಿಯನ್ ಓಪನ್ ಕಿಚನ್ ಪರಿಕಲ್ಪನೆಯಿಂದಾಗಿ ಆಧುನಿಕ ಅಡುಗೆಮನೆಗಳು ನೋಡಲೂ ಅಡುಗೆ ಮಾಡಲೂ ಕಣ್ತಂಪಾಗಿವೆ. ಮನೆಗೆ ಬಂದ ಎಲ್ಲರಿಗೂ ಕಾಣುವುದರಿಂದಾಗಿ ಶುಚಿಯಾಗಿಯೇ ಇಟ್ಟುಕೊಳ್ಳಬೇಕಾಗಿದೆ. ಹಾಗಾಗಿ, ಒಬ್ಬರ ಅಡುಗೆಮನೆಯನ್ನು ನೋಡಿಯೇ ಅವರ ಬದುಕಿನ ಅಭಿರುಚಿ, ಆಹಾರದ ಮೇಲಿನ ಕಾಳಜಿ, ಆತಿಥ್ಯದ ಪರಿ, ಆರ್ಥಿಕ ಮಟ್ಟ ಎಲ್ಲವನ್ನೂ ಹೇಳಿ ಬಿಡಬಹುದಾಗಿದೆ.
ಕೆಲವರ ಸ್ವಭಾವವಂತೂ ಬಲು ವಿಚಿತ್ರ. ಅಡುಗೆ ರುಚಿಯಾಗಿ ಆಗಬೇಕು; ವಿಧ ವಿಧ ಭಕ್ಷ್ಯಭೋಜ್ಯಗಳನ್ನು ತಯಾರಿಸಬೇಕು. ಆದರೆ ಅದಕ್ಕೆ ಬೇಕಾದ ಇನ್‌ಗ್ರಿಡಿಯಂಟ್ಸ್ ತಂದು ಕೊಡರು; ಪಾತ್ರೆಪಡಗಗಳನ್ನು ತೆಗೆದು ಕೊಡರು; ಅನುಕೂಲ ಮಾಡಿಕೊಡರು! ಇಂಥವರ ಪಾಲಿಗೆ ಮನೆಯು ಮಂತ್ರಾಲಯ ಆಗಿರುವುದಿಲ್ಲ; ಕಾರಾಗೃಹ ಆಗಿರುತ್ತದೆ. ಅಡುಗೆ ಕೆಲಸವು ರೇಜಿಗೆಯಾದರೂ ಅಚ್ಚುಕಟ್ಟಾಗಿ ತಯಾರಿಸಿದ ಮೇಲೆ ತಿನ್ನುವಾಗ ಆಗುವ ಸುಖಾನಂದಗಳು ಸ್ವರ್ಗಕ್ಕೆ ಸಮಾನ. ರುಚಿಕಟ್ಟಾದ ಅಡುಗೆ ಮಾಡಿ ಪ್ರೀತಿಯಿಂದ ಬಡಿಸುವವರೇ ದೇವತೆಗಳು. ಇದಕ್ಕೆ ಲಿಂಗಭೇದವಿಲ್ಲ. ಆದರೆ ಹಿಂದಿನ ಕಾಲದಲ್ಲಿದ್ದ ನಮ್ಮ ಅಜ್ಜಿಯರದು ಬೇರೆಯದೇ ಹದ ಮತ್ತು ಪಳಗಿದ ಹಸ್ತ. ಶ್ರದ್ಧೆ ಮತ್ತು ಏಕಾಗ್ರತೆಗಳನ್ನು ಕೇಳುವ ವಿದ್ಯೆಯಿದು. ಒಂಥರದಲ್ಲಿ ಇದೂ ಒಂದು ಧ್ಯಾನ. ಯಾವುದನ್ನು ಹೇಗೆ ಮಾಡಬೇಕೆಂಬುದನ್ನು ತಿಳಿದಿರುವುದರ ಜೊತೆಗೆ ಯಾವುದು ಎಷ್ಟೆಷ್ಟು? ಎಂಬ ಲೆಕ್ಕಾಚಾರವೂ ಗೊತ್ತಿರಬೇಕು. ಇಲ್ಲದಿದ್ದರೆ ಉಪ್ಪು, ಹುಳಿ, ಖಾರಗಳು ವ್ಯತ್ಯಯವಾಗಿ ರುಚಿ ಹಾಳಾಗಿ ಬಯ್ಯಿಸಿಕೊಳ್ಳಬೇಕಾಗುವುದು. ಏನೋ ತಿಂದರಾಯಿತು, ಹೇಗೋ ಮಾಡಿದರಾಯಿತು, ಹೆಂಗೆಂಗೋ ಬದುಕಿದರಾಯಿತು ಎಂಬಂಥ ಉಪೇಕ್ಷಾಜೀವಿಗಳಿಗೆ ಇದು ಅರ್ಥವಾಗುವುದಿಲ್ಲ. ತಿನ್ನುವುದಕೇಕಿಷ್ಟು ಮನ್ನಣೆ? ಎಂದು ನಮ್ಮನ್ನೇ ಪ್ರಶ್ನಿಸಿ, ಹುಬ್ಬು ಗಂಟಿಕ್ಕುತ್ತಾರೆ. ರುಚಿ ಮತ್ತು ಅಭಿರುಚಿಗಳೆರಡೂ ಜೀವನಪ್ರೀತಿ ಇಟ್ಟುಕೊಂಡಿರುವವರ ಸ್ವತ್ತು. ನೀಟಾಗಿ ಸಂಸಾರ ಮಾಡುವವರ, ಸಂಸ್ಕಾರವಂತರ, ಸುಸಂಸ್ಕೃತ ಮನೆತನದಿಂದ ಬಂದವರ ಲಕ್ಷಣ. ಈಗಂತೂ ನಾವು ಬೀದಿರುಚಿಯನ್ನು ಆಸ್ವಾದಿಸುವ ಪೀಳಿಗೆಯವರಾಗಿದ್ದೇವೆ. ನಮ್ಮ ಸಂಸ್ಕೃತಿಯ ಒಂದಂಗವಾಗಿದ್ದ ಅಡುಗೆ ಕಲೆಯು ಇದೀಗ ಪಾರಂಪರಿಕತೆಯನ್ನು ಕಳಚಿಕೊಂಡು ನವ್ಯವಾಗಿದೆ. ಹೊಸ ಬಗೆಯ ಖಾದ್ಯಗಳೂ ವಿಭಿನ್ನವಾದ ಮತ್ತು ವಿಚಿತ್ರವಾದ ಆಹಾರಗಳೂ ತಲೆ ಎತ್ತಿವೆ. ಮೊನ್ನೆ ಹೀಗೇ ನೋಡುತ್ತಿರಬೇಕಾದರೆ ರಾಗಿಹಿಟ್ಟಿನಿಂದ ಮಾಡುವ ಉಪ್ಪಿಟ್ಟು! ಎಂದು ಹೇಳಲು ಶುರು ಮಾಡಿದರು! ನಾನಂತೂ ಕಿವಿಗೆ ಬಿದ್ದಿಲ್ಲವೇನೋ? ಎಂಬಂತಿದ್ದು ಡಿಲೀಟು ಮಾಡಿದೆ. ರಾಗಿಹಿಟ್ಟಿನ ದೋಸೆ, ರೊಟ್ಟಿ, ಹುರಿಯಿಟ್ಟು, ಅಂಬಲಿ ಗೊತ್ತು. ಆದರೆ ಇದೇನೋ ರಾಗಿಹಿಟ್ಟಿನ ಉಪ್ಪಿಟ್ಟಂತೆ! ಕರ್ಮ. ಏನೇ ಆಗಲಿ, ಯಾರು ಏನೇ ಹೇಳಲಿ, ಊಟೋಪಚಾರಗಳಲ್ಲಿ ಸೌತ್ ಇಂಡಿಯನ್ನೇ ಸರಿ. ನಮ್ಮ ಸಾಂಪ್ರದಾಯಿಕ ಸಾರು, ಹುಳಿ, ಪಲ್ಯ, ಕೋಸಂಬರಿ, ಗೊಜ್ಜು ಚಟ್ನಿ, ಕೂಟು, ರಾಯ್ತ, ಪಳದ್ಯ, ತೊವ್ವೆ, ಹಪ್ಪಳ, ಸಂಡಿಗೆ, ಆಂಬೊಡೆ, ಬಗೆ ಬಗೆಯ ಪಾಯಸ, ಪೊಂಗಲು, ಶಾಲ್ಯಾನ್ನ, ಹಯಗ್ರೀವ, ಸಜ್ಜಿಗೆ, ಕಲಸನ್ನಗಳ ಮುಂದೆ ಯಾವುದೂ ಅಲ್ಲ; ಉಪ್ಪಿಟ್ಟು, ಅವಲಕ್ಕಿ, ರೊಟ್ಟಿ, ಪೂರಿ, ಚಪಾತಿ, ಇಡ್ಲಿ, ದೋಸೆ, ಪಡ್ಡುಗಳನ್ನು ಬಿಟ್ಟರಿಲ್ಲ! ಕುರುಕು ತಿಂಡಿಗಳಲ್ಲಿ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಮದ್ದೂರು ವಡೆ, ಉಪ್ಪೇರಿ, ತೇಂಗೊಳಲು, ಮುಚ್ಚೋರೆಗಳೇ ರುಚಿಕರ. ಸಿಹಿತಿಂಡಿಗಳಲ್ಲಿ ಹೋಳಿಗೆ, ಎಳ್ಳುಂಡೆ, ಲಾಡು, ಚಿರೋಟಿ, ಮಸ್ಸೂರ್ ಪಾಕು, ರವೆವುಂಡೆ, ಕೊಬ್ಬರಿ ಮಿಠಾಯಿ, ಹಾಲುಕೋವಗಳನ್ನು ಮೀರಿಸಿದವುಗಳಿಲ್ಲ! ಇವೇನಿದ್ದರೂ ಅವರವರ ಬಾಯಿರುಚಿ, ಚಿಕ್ಕಂದಿನ ಅಭ್ಯಾಸ, ಪ್ರಯೋಗಶೀಲತ್ವ, ಮನೆ-ಮನೆತನಗಳ ಸಂಪ್ರದಾಯ ಮತ್ತು ಆಸಕ್ತಿಗಳನ್ನು ಅವಲಂಬಿಸಿರುವಂಥದು. ಇವುಗಳನ್ನೇ ಹತ್ತಿಪ್ಪತ್ತು ವೆರೈಟಿಗಳಲ್ಲಿ ಮಾಡಿ ತಿನ್ನುವ ನಮ್ಮನ್ನು ಮೀರಿಸುವರಿಲ್ಲ! ಆರೋಗ್ಯದಾಯಕ, ಆರಾಮದಾಯಕ ಮತ್ತು ಆನಂದದಾಯಕ! ಇಂಥಲ್ಲಿ ದಾಯಕ ತ್ರಯಗಳೇ ನಾಯಕ!!
ನಮ್ಮದು ಅನ್ನ ಸಂಸ್ಕೃತಿ. ಅತಿಥಿ ಅಭ್ಯಾಗತರಿಗೆ ಮತ್ತು ಹಸಿದು ಬಂದವರಿಗೆ ಒಂದು ತುತ್ತು ಊಟ ಹಾಕಿ, ಪುಣ್ಯ ಕಟ್ಟಿಕೊಳ್ಳುವ ಹೃದಯವೈಶಾಲ್ಯದ ಪ್ರಕೃತಿ. ಅನ್ನದಾನವೇ ಮಹಾದಾನ ಎಂಬುದು ಏಕಕಾಲಕೆ ಅನ್ನಕೂ ಹಸಿವಿಗೂ ದಾನಕೂ ಇರುವ ಮಹತ್ವವನ್ನು ಮನಗಾಣಿಸುವುದು. ನೇತ್ರದಾನ, ರಕ್ತದಾನ, ದೇಹದಾನಗಳೆಲ್ಲ ಆಮೇಲೆ ಸೇರ್ಪಡೆಯಾದವು. ಇಂದಿಗೂ ನಮ್ಮ ದೇಶದ ಮೂಲೆಮೂಲೆಯಲ್ಲಿ ಯಾವುದೇ ಸಭೆ, ಸಮಾರಂಭ, ದೇವತಾಕಾರ್ಯ, ಶುಭಕಾರ್ಯ, ಶ್ರಾದ್ಧದಂಥ ಅಶುಭಗಳಲ್ಲೂ ಊಟೋಪಚಾರಗಳಿಂದ ಸತ್ಕರಿಸುವುದೇ ಸನ್ನಡತೆ ಮತ್ತು ಸದ್ಭಾವನೆಯಾಗಿದೆ. ಇನ್ನು ಶಕ್ತಿಕೇಂದ್ರಗಳಾಗಿರುವ ಪುಣ್ಯಕ್ಷೇತ್ರ, ಧರ್ಮಕ್ಷೇತ್ರ ಮತ್ತು ತೀರ್ಥಕ್ಷೇತ್ರಗಳಲ್ಲಿ ಅನ್ನದಾನವೇ ಪ್ರಮುಖ ಆಕರ್ಷಣೆ. ದೂರದೂರಿನಿಂದ ಬಂದ ಬಕುತರಿಗೆ ಒಂದು ತುತ್ತು ಅನ್ನವ ನೀಡಿ ಸಲಹುವ ಔದಾರ್ಯ ಮತ್ತು ಕಾರುಣ್ಯಗಳು ಜಗದಚ್ಚರಿಯಾಗಿವೆ. ಇಲ್ಲಿಯದು ಬರೀ ಊಟವಲ್ಲ; ಪ್ರಸಾದ. ಹನ್ನೆರಡನೆಯ ಶತಮಾನದ ಶಿವಶರಣರು ಕಾಯಕ-ದಾಸೋಹ ತತ್ತ್ವಕ್ಕೆ ಕೊಟ್ಟ ಮಹತ್ವವನ್ನು ಈ ಮೂಲಕ ಮನಗಾಣಿಸಲಾಗುತ್ತಿದೆ; ಮುಂದುವರಿಸಿಕೊಂಡು ಬರಲಾಗುತ್ತಿದೆ. ಕಗ್ಗಾಡಿನ, ಪರ್ವತಶ್ರೇಣಿಗ ತುದಿಯಲ್ಲಿ, ಕಾಡಂಚಿನ ಕಣಿವೆಗಳ ನಡುವೆ, ತಪ್ಪಲುಗಳ ಮಧ್ಯೆ ಇರುವ ಇಂಥ ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಎಲ್ಲೆಲ್ಲಿಂದಲೋ ಬರುವ ಜನಸಾಗರವು ಇನ್ನೆಲ್ಲಿಗೆ ಹೋಗಬೇಕು? ಹೀಗೆ ಈ ಅರ್ಥದಲ್ಲೂ ಅಲ್ಲಿ ತಂಗುವುದಕಾಗಿ ಊಟೋಪಚಾರಕಾಗಿ ಮಾಡುತಿದ್ದ ತಾತ್ಕಾಲಿಕ ವ್ಯವಸ್ಥೆಯೇ ಮುಂದೆ ಕೊಡುಗೈ ದಾನಿಗಳಾದ ಸೇವಾರ್ಥದಾರರ ಮತ್ತು ಭಕ್ತಾದಿಗಳ ಮೂಲಕ ಅಭೂತಪೂರ್ವವಾಗಿ ಮುಂದುವರೆದುಕೊಂಡು ಬಂದಿದೆ; ಬರುತ್ತದೆ ಕೂಡ!
ಹೀಗಾಗಿಯೇ ನಮ್ಮದು ಆಹಾರ ಸಂಸ್ಕೃತಿ; ನಾಲಗೆಯ ಸಂಸ್ಕೃತಿ. ಈ ನಾಲಗೆಯನ್ನು ತಿನ್ನಲೂ ಬಳಸುತ್ತೇವೆ; ಮಾತಾಡಲೂ ಬಳಸುತ್ತೇವೆ. ತಿನ್ನುವ ವಿಚಾರದಲ್ಲಿ ಜಾಸ್ತಿ ಮಾತಾಡುತ್ತೇವೆ ಅಷ್ಟೇ! ನಾಲ್ಕು ಜನ ಆತ್ಮೀಯರು ಸೇರಿದರೆ ಉಭಯಕುಶಲೋಪರಿ ಮುಗಿದ ಮೇಲೆ ಅದು ಹೇಗೋ ಮಾತು ಆಹಾರದತ್ತ, ಉಪಾಹಾರದತ್ತ ಹೋಗಿ ಬಿಡುತ್ತದೆ. ಅದೂ ನಿರುದ್ದೇಶಪೂರ್ವಕವಾಗಿ! ಇದು ನಮ್ಮ ರಕ್ತದಲ್ಲಿ ಬಂದಿರುವ ಕಲೆ, ವಿಜ್ಞಾನ ಮತ್ತು ಶಾಸ್ತ್ರ. ನಮ್ಮ ಜೀನುಗಳಿಗೂ ಇದು ಗೊತ್ತಾಗಿ ಹೋಗಿದೆ. ಇಬ್ಬರು ಹೆಂಗಸರು ಸೇರಿದರೆ ಅಡುಗೆಯ ಬಗ್ಗೆ ಮತ್ತು ಇಬ್ಬರು ಗಂಡಸರು ಸೇರಿದರೆ ಹೊಟೆಲಿನ ಬಗ್ಗೆ ಚರ್ಚೆಯಾಗದಿದ್ದರೆ ನಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ ಎಂದೇ ಅರ್ಥ! ಈಗಂತೂ ಡಯಟ್ ಕಾಲ. ಕೊಬ್ಬು ಕಡಮೆ ಮಾಡಿಕೊಳ್ಳಲು ಥರಾವರಿ ಸರ್ಕಸ್ಸುಗಳನ್ನು ಮಾಡುತ್ತಾ, ತೂಕಕಿಂತ ಮೊದಲೇ ತಾಳುಮೆಯನ್ನು ಕಳೆದುಕೊಳ್ಳುತ್ತಾ ಆತಂಕಿತರಾಗಿರುವ ಸಮಯ. ಇಂಥ ಹೊತ್ತಲೂ ನಾವು ಆಹಾರವನ್ನೇ ಧ್ಯಾನಿಸುತ್ತಿರುತ್ತೇವೆ. ಡಯಟ್ ಮಾಡುತ್ತಿದ್ದರೇನು? ಮೆನು ಕಾರ್ಡ್ ನೋಡಬಾರದೇ!? ಎಂದು ಕೇಳುವ ಕಾಲದಲ್ಲಿದ್ದೇವೆ. ಒಟ್ಟಿನಲ್ಲಿ ಮಿತಾಹಾರಿಗಳಿಗೂ ಹೊಟ್ಟೆಬಾಕರಿಗೂ ಆಹಾರವೇ ಧ್ಯಾನಕೇಂದ್ರ. ಇಷ್ಟಪಟ್ಟು ತಿನ್ನುವವರಿರುವಂತೆ ಇಷ್ಟಪಟ್ಟು ಅಡುಗೆ ಮಾಡಿ ಬಡಿಸುವವರು ಇರುವವರೆಗೂ ಆಹಾರವೇ ನಮಗೆ ಬಹು ದೊಡ್ಡ ಮ್ಯಾಟರು. ಹೀಗೆ ಇಷ್ಟಪಟ್ಟು ಅಡುಗೆ ಮನೆಯಲ್ಲಿರುವವರು ನಿಜವಾಗಿಯೂ ಜೀವನಪ್ರೀತಿಯುಳ್ಳವರೇ ಆಗಿರುತ್ತಾರೆ. ಅಂಥವರು ಅದನ್ನು ದೇವರಪೂಜೆಯಂತೆ ಶ್ರದ್ಧೆಯಿಂದಲೂ ಸಂಭ್ರಮದಿಂದಲೂ ಮಾಡುವುದನ್ನು ನೋಡಬಹುದು. ಯಾವತ್ತೂ ಅಷ್ಟೇ: ತಾವು ತಿನ್ನುವುದಕಿಂತಲೂ ತಮ್ಮಿಷ್ಟದವರಿಗೆ ಅಡುಗೆ ಮಾಡಿ ಬಡಿಸಿ, ತಿಂದುಂಡ ಅವರ ಧನ್ಯತೆಯಿಂದ ಆನಂದ ಹೊಂದುವ ಗುಣವೇ ಶ್ರೇಷ್ಠವಾದದ್ದು. ನಮ್ಮ ಪೂರ್ವಜರು ಇಂಥವರಾಗಿದ್ದರು. ಹಾಗಾಗಿ ನಮಗೆ ಸೂಪಶಾಸ್ತ್ರವು ಕೇವಲ ತಜ್ಞತೆಯಲ್ಲ; ಚಮತ್ಕಾರವಲ್ಲ; ಕುಶಲವಿದ್ಯೆಯೂ ಅಲ್ಲ. ಇದೊಂದು ಪುಣ್ಯದ ಕೆಲಸ; ದಾನಧರ್ಮದ ಕೆಲಸ. ಜೀವನವನ್ನು ಪ್ರೀತಿಸುವ, ನೆಂಟರಿಷ್ಟರನ್ನು ಆಹ್ಲಾದಗೊಳಿಸುವ ಕೃತಾರ್ಥವಾಗಿ ಕಂಡಿದೆ. ಆಹಾರಕ್ಕೆ ಪ್ರೀತಿ ಸೇರಿದರೆ ಅಮೃತವಾಗುತ್ತದೆ; ಭಕ್ತಿ ಸೇರಿದರೆ ಪ್ರಸಾದವಾಗುತ್ತದೆ ಎಂದು ಜಗತ್ತಿಗೆ ತೋರಿಸಿಕೊಟ್ಟವರು ನಮ್ಮವರು.
ಆಹಾರದ ಬಡತನ ಮತ್ತು ಸಿರಿತನ- ಎರಡನ್ನೂ ನೋಡಿದವ ನಾನು. ಅಡುಗೆ ಮಾಡುವವರು ಮತ್ತು ಅಡುಗೆಮನೆಗಳೆರಡೂ ನನ್ನ ಪಾಲಿಗೆ ಬೆರಗಿನ ವಿದ್ಯ-ಮಾನ. ಶುದ್ಧ ಸಸ್ಯಾಹಾರದಲಿ ಎಲ್ಲ ಥರದ ಕೈರುಚಿಯನ್ನು ಚಪ್ಪರಿಸಿರುವ ನನಗೆ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯು ಯಾವತ್ತೂ ಬೇಸರವೆನಿಸಿಲ್ಲ. ದಕ್ಷಿಣ ಕರ್ನಾಟಕದ ಶುದ್ಧ ಸಸ್ಯಾಹಾರೀ ಖಾದ್ಯಗಳಲ್ಲಿ ತೃಪ್ತಿಯನೂ ಸಂತಸವನೂ ಕಂಡಿರುವವನು. ಯಾಕೆ ಇಷ್ಟೆಲ್ಲ ಪೀಠಿಕೆಯೆಂದರೆ ಅಡುಗೆಗೆ ಬಳಸುವ ಪಾತ್ರೆ-ಪರಿಕರಗಳೂ ಹಾಕುವ ಬಗೆಬಗೆಯ ಪದಾರ್ಥಗಳೂ ನನಗೆ ದಿಗ್ಭ್ರಮೆ ತರಿಸುತ್ತವೆ. ಅದರಲ್ಲೂ ಬಂಧು-ಬಾಂಧವರು ಮನೆ ತುಂಬ ಇದ್ದರೂ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ನಡು ನಡುವೆ ಪ್ರತ್ಯುತ್ತರಿಸುತ್ತಾ, ತಮ್ಮ ಪಾಡಿಗೆ ತಾವು ಅಂದುಕೊಂಡದ್ದನ್ನು ಅಡುಗೆ ಮಾಡಿಯೇ ಬಡಿಸಿ ಸಂತೃಪ್ತಿಗೊಳಿಸುವ ಗೃಹಿಣಿಯರು ನನಗೆ ಯಾವತ್ತೂ ವಿಸ್ಮಯ! ಇಂಥವರಿಗೆ ನೊಬೆಲ್ ಬಹುಮಾನಗಳನ್ನು ಕೊಡುವುದಾದರೆ ನಾನು ಕಂಡಿರುವ ಹಲವರಿಗೆ ಹತ್ತಾರು ಸಲ ಕೊಡಬೇಕಾಗುವುದು ಇನ್ನೊಂದು ವಿಶೇಷ. ಈ ಏಕಾಗ್ರತೆ, ತನ್ಮಯತೆ, ಚಾಕಚಕ್ಯತೆಗಳು ಹೇಗೆ ಸಾಧ್ಯವಾಗುತ್ತದೆಂದು ಕೇಳಿಕೊಳ್ಳುತ್ತಲೇ ಇರುತ್ತೇನೆ. ಅವರನ್ನು ಕೇಳಿದರೆ ಇದು ಅಭ್ಯಾಸಬಲ, ಅನುಭವದ ಪಾಠ ಎನ್ನುವರು. ಅಡುಗೆ ಮಾಡುವಾಗ ಅವರಿಗೇ ಗೊತ್ತಿಲ್ಲದೇ ಧ್ಯಾನಸ್ಥರಾಗಿರುತ್ತಾರೆ. ಏಕೆಂದರೆ ಆಹಾರದ ಆಡುಂಬೊಲವು ದಾನವೂ ಆಗುವಂತೆ ಧ್ಯಾನವೂ ಆಗಿರುವಂಥದು. ಗೃಹಸಂಬಂಧಿತ ಹತ್ತಾರು ಉಪಕೆಲಸಗಳನ್ನು ಮಾಡುತ್ತಲೇ ರುಚಿಕಟ್ಟಾದ ಆಹಾರ ಸಿದ್ಧಪಡಿಸಿ ಕೊಡುವ ಇವರ ಕಾಯಕದ ಮಾಯಕಕ್ಕೆ ನಾನು ಫಿದಾ. ಇದೊಂದು ಯಜ್ಞಕಾರ್ಯ. ತಿನ್ನುವುದೆಂದರೆ ನಮ್ಮೊಳಗಿನ ಅಗ್ನಿದೇವನಿಗೆ ಹವಿಸ್ಸು ಅರ್ಪಿಸಿದಂತೆ. ಒಂದು ಕಡೆ ಓದಿದ್ದೆ: ಅಡುಗೆ ಮಾಡುವವರಿಗೆ ಕೋಪವಿದ್ದರೆ ಉಪ್ಪನ್ನೂ ವ್ಯಸನದಲ್ಲಿದ್ದರೆ ಹುಳಿಯನ್ನೂ ಹೆಚ್ಚು ಹಾಕಿ ಬಿಡುತ್ತಾರಂತೆ. ಅಂದರೆ ಇಲ್ಲಿ ಮನೋನಿಗ್ರಹಕೇ ಪ್ರಥಮ ಪ್ರಾಶಸ್ತ್ಯ.
ಅತಿಥಿದೇವೋಭವ ಎಂದು ಹೇಳಿದ್ದು ನಮ್ಮ ದೇಶದಲ್ಲಿ ಮಾತ್ರ. ಭಕ್ತ ಸಿರಿಯಾಳನು ಜಂಗಮವೇಷಧಾರಿ ಶಿವನಿಗಾಗಿ ತನ್ನ ಮಗನನ್ನೇ ಕತ್ತರಿಸಿ ಅಡುಗೆ ಮಾಡಿ ಬಡಿಸಿದ ಅತಿರೇಕದ ಕತೆಯಲ್ಲಿ ಮಹಾನ್ ನಿಷ್ಠೆ ಮತ್ತು ವ್ರತದ ತೀವ್ರತೆಯನ್ನು ಗಮನಿಸಬೇಕು. ದೇವರು ತನ್ನ ಭಕ್ತನನ್ನು ಪರೀಕ್ಷೆ ಮಾಡುವ ಈ ವಿಧಾನದಲ್ಲಿ ಕ್ರೌರ್ಯ ಕಾಣಿಸಬಹುದು; ಆದರೆ ಇಂಥ ಉತ್ಪ್ರೇಕ್ಷಿತ ಸಂಗತಿಯ ಮೂಲಕ ಮುಟ್ಟಿಸುತ್ತಿರುವ ಹೃದಯ ಸಂದೇಶವನ್ನು ಕಡೆಗಣಿಸಲಾಗದು. ಕೊನೆಯಲ್ಲಿ ಶಿವನು ಅವನ ಭಕ್ತಿಗೆ ಮೆಚ್ಚಿ ಮಗನನ್ನು ಮತ್ತೆ ಬದುಕಿಸುವ ಮೂಲಕ ಇದೊಂದು ಅಂತರಂಗದ ಶುದ್ಧ ಭಕ್ತಿಯ ಪರೀಕ್ಷೆಯೆಂಬುದನ್ನು ಕತೆ ಸಾರುತ್ತದೆ. ಏನಾದರಿರಲಿ, ಅನ್ನಕ್ಕೆ ಹಾಹಾಕಾರ ಇರುವುದೂ ನಮ್ಮಲ್ಲೇ; ಅನ್ನವನ್ನು ಬ್ರಹ್ಮವೆಂದು ಬಗೆದು ಎಲ್ಲ ರಿಚ್ಯುವಲ್‌ಗಳಿಗೆ ಬಳಸುವುದೂ ನಮ್ಮಲ್ಲೇ; ಸಿರಿವಂತರು ತಿಂದುಂಡು ತೇಗಿ ಬೀದಿಗೆ ಚೆಲ್ಲಾಡುವುದೂ ನಮ್ಮಲ್ಲೇ! ಅಂತೆಯೇ ಇಂಥ ಅನ್ನದ ಮೂಲಕ ಮಡಿ-ಮೈಲಿಗೆ, ವ್ರತ-ನೇಮ, ಸೂತಕ-ಪಾತಕ, ಪಾಪ-ಪುಣ್ಯ, ದಾನ-ವ್ಯಾಪಾರಗಳನ್ನು ನಡೆಸುತ್ತಾ ಒಬ್ಬೊಬ್ಬರೂ ಒಂದೊಂದು ಚಿತ್ರ ವಿಚಿತ್ರ ಭಾವಾನುಭಾವಗಳನ್ನು ಹೊಂದಿರುವುದೂ ನಮ್ಮಲ್ಲೇ!!
ಅನ್ನ ಬ್ರಹ್ಮಃ; ಆನಂದೋ ಬ್ರಹ್ಮಃ ಎಂಬ ಮಾತು ನಮ್ಮ ಪರಂಪರೆಯ ಪ್ರತೀಕ. ಅನ್ನದಿಂದ ಜೀವ, ಅನ್ನದಿಂದ ಭಾವ, ಅನ್ನವೇ ಸ್ವಭಾವ. ಹಾಗೆಯೇ ಅನ್ನದಿಂದ ಆನಂದ. ಹಿಂದಿಯಲ್ಲಿ ಜೈಸಾ ಅನ್ ವೈಸಾ ಮನ್ ಎಂಬ ಮಾತೊಂದಿದೆ. ನಾವೇನು ತಿನ್ನುತ್ತೇವೆಯೋ ಅದರಂತಾಗುತ್ತೇವೆ ಎಂದು. ಹಾಗಾಗಿ ಅನ್ನವೇ ನಮ್ಮೆಲ್ಲ ಭಾವ, ಸ್ವಭಾವಗಳಿಗೆ ಮೂಲ ಕಾರಣ ಮತ್ತು ಪ್ರೇರಣೆ. ಇದಕ್ಕಾಗಿಯೇ ನಮ್ಮಲ್ಲಿ ಆಹಾರ, ಅದರ ಸಿದ್ಧತೆ ಮತ್ತು ಸೇವನೆಯನ್ನು ಕುರಿತ ಹಲವು ಕಟ್ಟುಪಾಡುಗಳು ಹಿಂದೆ ಇದ್ದವು. ಆ ಕಾಲ ಹಾಗಿತ್ತು. ಈಗ ಕಾಲ ಬದಲಾಗಿದೆ ಮತ್ತು ಹೃದಯ ವಿಶಾಲವಾಗಿದೆ. ಆಹಾರದ ವಿಚಾರದಲ್ಲಿ ನಾವೀಗ ಶುಚಿ ಮತ್ತು ರುಚಿಗಳಿಗಷ್ಟೇ ಮಹತ್ವ ಕೊಡುವುದನ್ನು ಕಲಿತಿದ್ದೇವೆ. ಆಧುನಿಕತೆಯು ಕಲಿಸಿದ ಪಾಠಗಳಲ್ಲಿ ಇದು ಅತಿ ಮುಖ್ಯವಾದುದು. ಆಹಾರದೊಂದಿಗೆ ಹಲವು ನಂಬುಗೆಗಳು ಜೊತೆಗೂಡುವುದರಿಂದ ಕೇವಲ ಹಸಿವನ್ನು ನೀಗಿಸುವುದಷ್ಟೇ ಇದರ ಕೆಲಸವಾಗುಳಿಯಲಿಲ್ಲ. ಆಹಾರವೇ ಬದುಕಾಗಿ, ಆ ಬದುಕಿನಲ್ಲಿ ಹಲವು ನಂಬಿಕೆ ಮತ್ತು ಮೌಢ್ಯಗಳು ಜೊತೆಯಾಗಿ ಒಟ್ಟೂ ಸಮಾಜವನ್ನೇ ಮಡಿ-ಮೈಲಿಗೆಗಳ ಮೂಲಕ ಆಳಿತು. ಆಧುನಿಕತೆಯಿಂದಾಗಿ ನಾವೀಗ ಅಂಥ ಅಮಾನವೀಯ ಆಚರಣೆಗಳನ್ನು ಗುರುತಿಸಿ ಕೈ ಬಿಟ್ಟಿದ್ದೇವೆ. ಒಂದು ಕಾಲದ ಭಾರತದ ಸಮಾಜದಲ್ಲಿ ಹೊಟೆಲಿನಲ್ಲಿ ತಿನ್ನುವುದೇ ಕ್ರಾಂತಿಕಾರಕವಾಗಿತ್ತು. ಇದು ಕೇವಲ ತಿನ್ನುವ ವಿಚಾರ ಮಾತ್ರವಲ್ಲ; ಬದುಕಿನ ವಿಚಾರವೂ. ಏಕೆಂದರೆ ನಮ್ಮಲ್ಲಿ ಅನ್ನವನ್ನು ದಾನ ಮಾಡಬೇಕಿತ್ತೇ ವಿನಾ ಮಾರುವಂತಿರಲಿಲ್ಲ! ಅಂತಹುದರಲ್ಲಿ ಅನ್ನವನ್ನು ಮಾರುವ ಕಲ್ಪನೆಯೇ ಮಹಾಪಾಪವೆನಿಸಿತ್ತು! (ಈಗಂತೂ ನೀರನ್ನೂ ಮಾರುತ್ತಾ, ಕೊಳ್ಳುತ್ತಾ ಇದ್ದೇವೆ; ಸ್ವಲ್ಪವೇ ದಿವಸಗಳಲ್ಲಿ ಗಾಳಿಯನ್ನೂ ಕೊಳ್ಳಬೇಕಿದೆ!) ಆ ಕಾಲದ ಸಮಾಜ, ಮಂದಿಯ ಮನಸ್ಥಿತಿ ಹಾಗಿತ್ತು. ವ್ರತ-ನಿಯಮ-ನಿಷೇಧಗಳು ಹಾಗಿದ್ದವು. ಅಂದರೆ ಕಾಲಧರ್ಮ ಮತ್ತು ಮನೋಧರ್ಮಗಳು ಆಹಾರಕ್ಕೆ ಅತಿಯಾದ ಪಾವಿತ್ರ್ಯವನ್ನೂ ಪ್ರಾಮುಖ್ಯವನ್ನೂ ಕೊಟ್ಟಿದ್ದ ದಿನಮಾನ. ಶರೀರವನ್ನು ದಂಡಿಸಬೇಕಾದ ಮನಸ್ಸನ್ನು ನಿಯಂತ್ರಿಸಬೇಕಾದ ಕಾರಣಕ್ಕಾಗಿ ಆಹಾರಕ್ಕೆ ಹಲವು ತೆರನಾದ ವಿಧಿ-ನಿಷೇಧಗಳು ಹೇರಲ್ಪಟ್ಟಿದ್ದವು. ಈಗದು ಇತಿಹಾಸ. ಸಹಭೋಜನ ಮತ್ತು ಸಹಬಾಳ್ವೆಯ ಪ್ರಜಾಸತ್ತಾತ್ಮಕ ಯುಗದಲ್ಲಿ ನಾವಿದ್ದೇವೆ. ಆದರೆ ‘ಊಟ ನಿದ್ದೆ ಪಾಠ ಮಾಡಿದ ಹಾಗೆ’ ಎಂಬ ನಾಣ್ನುಡಿಯಂತೆ ಚಿಕ್ಕಂದಿನಿಂದ ಅಭ್ಯಾಸವಾದ ಆಹಾರಕ್ಕೇ ಮನಸ್ಸು ಜೋತು ಬೀಳುತ್ತದೆ. ಹೊಸದಕ್ಕೆ ತೆರೆದುಕೊಳ್ಳುವುದು ಕಡಮೆ. ಜೊತೆಗೆ ಎಲ್ಲದರಲ್ಲೂ ಆಯ್ಕೆಗಳು ಇರುವಂತೆ ಆಹಾರಕ್ಕೂ ಅವರದ್ದೇ ಆದ ಆಯ್ಕೆಗಳಿದ್ದು, ಒಬ್ಬರಿಗೆ ಪ್ರಿಯವೆನಿಸಿದ್ದು ಇನ್ನೊಬ್ಬರಿಗೆ ಅಪ್ರಿಯವೆನಿಸಬಹುದು! ಇದು ಸಹಜ. ನಮ್ಮ ಆಧುನಿಕ ಸಮಾಜವು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ಯಾವುದನ್ನೂ ಯಾರಿಗೂ ಒತ್ತಾಯಪೂರ್ವಕವಾಗಿ ಹೇರುವಂತಿಲ್ಲವೆಂಬ ನಾಗರಿಕ ಮೌಲ್ಯವನ್ನು ಗೌರವಿಸಿದ್ದರಿಂದ ಆಹಾರವು ಅವರವರಿಷ್ಟ ಎಂದಾಯಿತು. ‘ಅಂತರ್ಜಾತಿ, ಅಂತರ್ಧರ್ಮೀಯ ಮದುವೆಗಳಾಗುವುದು ಸುಲಭವಾಗಿದೆ; ಆದರೆ ಆಹಾರದ ವಿಚಾರದಲ್ಲಿ ರಾಜಿಯಾಗುವುದು ಕಷ್ಟವಾಗಿದೆ!’ ಅಷ್ಟರಮಟ್ಟಿಗೆ ಆಹಾರವು ನಮ್ಮನ್ನು ನಿಯಂತ್ರಿಸುತ್ತದೆ; ನಿರ್ದೇಶಿಸುತ್ತದೆ ಮತ್ತು ಆಹಾರವೇ ಜೀವನವಾಗಿದೆ.
ಆಹಾರ ವಿಹಾರಗಳೀಗ ಪ್ರಾಪಂಚಿಕ ಮನ್ನಣೆ ಪಡೆದಿವೆ. ಆಹಾರೋದ್ಯಮ ಮತ್ತು ಪ್ರವಾಸೋದ್ಯಮಗಳೇ ಅತಿ ಹೆಚ್ಚು ವಿದೇಶೀ ವಿನಿಮಯವನ್ನು ತಂದುಕೊಡುವಂತಾಗಿವೆ. ದೇಶದ ಒಳಗೂ ಇವೇ ಮುಖ್ಯ ಭೂಮಿಕೆಯಲ್ಲಿವೆ. ಜೊತೆಗೆ ಅಭಿವ್ಯಕ್ತಿ ಮಾಧ್ಯಮಗಳು ಹೆಚ್ಚಾಗಿ ಮನುಷ್ಯರಲ್ಲಿ ಎಲ್ಲವನ್ನೂ ಬಟಾ ಬಯಲು ಮಾಡುವ ಧಾವಂತ ಮತ್ತು ಉಮೇದುಗಳು ಸ್ಪರ್ಧೆಗೆ ಮತ್ತು ಜಿದ್ದಿಗೆ ಬಿದ್ದಿವೆ. ಹೀಗಾಗಿಯೇ ಈಗ ಎಲ್ಲರ ಬಾಯಲ್ಲೂ ಆಹಾರ; ಎಲ್ಲರ ಮೊಬೈಲ್ ಫೋನುಗಳಲ್ಲೂ ಗೂಗಲ್ ಮ್ಯಾಪಿನ ವಿಹಾರ! ಸದ್ಯದ ಪ್ರಪಂಚದಲ್ಲಿ ಫುಡ್ ಇಂಡಸ್ಟ್ರಿಯು ಬಹು ದೊಡ್ಡ ಲಾಭಕರ ಉದ್ಯಮವಾಗಿದೆ; ಉದ್ಯೋಗ ಸೃಷ್ಟಿಯಲ್ಲಿ ಮುಂದಿದೆ. ಹೊಟೆಲೋದ್ಯಮ ಕಲಿಕಾ ಕೋರ್ಸುಗಳು, ಆತಿಥ್ಯವಿಜ್ಞಾನ, ಆಹಾರ ತಯಾರಿಕಾ ಶಾಸ್ತ್ರಗಳೆಲ್ಲಾ ಮುಂಚೂಣಿಯಲ್ಲಿವೆ. ಗೃಹವಿಜ್ಞಾನ (ಹೋಮ್ ಸೈನ್ಸ್) ಮತ್ತು ಮಾನವ ಅಭಿವೃದ್ಧಿ ಶಾಸ್ತ್ರ (ಹ್ಯುಮನ್ ಡೆವಲಪ್‌ಮೆಂಟ್)ಗಳು ಪರೋಕ್ಷವಾಗಿ ಸೂಪಶಾಸ್ತ್ರವನ್ನೇ ಆಧರಿಸಿವೆ. ಫುಡ್ ಅ್ಯಂಡ್ ನ್ಯುಟ್ರಿಷಿಯನ್ ಕೋರ್ಸುಗಳೂ ಡಿಪ್ಲೊಮಾಗಳೂ ಔದ್ಯೋಗಿಕ ಅವಕಾಶಗಳನ್ನು ಹೆಚ್ಚು ಮಾಡಿವೆ. ಏನೇ ಆದರೂ ಈ ಹಿಂದೆ ವೈದ್ಯರ ಬಳಿ ಹೋಗುತ್ತಿದ್ದಂತೆ ಇದೀಗ ಡಯೆಟಿಷಿಯನ್‌ಗಳ ಬಳಿ ಹೋಗಿ ಆಹಾರ ಸಲಹೆ ಪಡೆದುಕೊಳ್ಳಲಾಗುತ್ತಿದೆ. ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳಂತೂ ಅವರಲ್ಲೇ ಇರುವ ಡಯೆಟಿಷಿಯನ್‌ಗಳ ಬಳಿ ಮೊದಲು ಕಳಿಸಿ, ಅವರ ತಜ್ಞತೆಯ ವರದಿಯನ್ನಾಧರಿಸಿ ಚಿಕಿತ್ಸೆ ನೀಡಲು ಶುರು ಮಾಡಿವೆ. ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮೊದಲಾದ ಸೋಶಿಯಲ್ ಮೀಡಿಯಾಗಳಲ್ಲಿ ಆಹಾರದ ಬಗೆಗಿನ ಕಾಳಜಿ, ಜಾಗೃತಿ, ಎಚ್ಚರಿಕೆ ಹಾಗು ಆಹಾರ ತಯಾರಿಕಾ ವಿಧಾನಗಳು ಕಾಣಿಸಿಕೊಂಡಿವೆ. ಇವನ್ನು ಕುರಿತು ನೂರಾರು ಯುಟ್ಯೂಬ್ ಚಾನೆಲ್‌ಗಳು ಸೃಷ್ಟಿಯಾಗಿವೆ. ಅಂದರೆ ಇಡೀ ಜಗತ್ತಿನಲ್ಲೇ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಮತ್ತು ಆರೋಗ್ಯ ಜಾಗೃತಿ ಮೂಡಿದೆ. ಆಹಾರಕ್ಕೂ ಉತ್ತಮ ಆರೋಗ್ಯಕ್ಕೂ ಸಂಬಂಧವಿದೆ ಎಂಬುದನ್ನು ನಿಧಾನವಾಗಿಯಾದರೂ ಸರಿಯಾಗಿ ಕಂಡುಕೊಂಡಿದೆ. ಮಾಂಸಾಹಾರವನ್ನು ತ್ಯಜಿಸುತ್ತಾ ಸಸ್ಯಾಹಾರಿಗಳಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರಜ್ಞಾವಂತರಲ್ಲಿ ಇಂಥ ಬದಲಾವಣೆ ಮೂಡಿದೆ. ಇದೇ ಸಂದರ್ಭದಲ್ಲಿ ಇದರ ಉಲ್ಟಾ ಥಿಯರಿಯೂ ಕಣ್ಣ ಮುಂದಿದೆ. ಸಸ್ಯಾಹಾರಿಗಳು ಸಹವಾಸ ದೋಷದಿಂದಲೋ ಅನಿವಾರ್ಯತೆಯಿಂದಲೋ ಮೋಜು-ಫ್ಯಾಷನ್ನುಗಳಿಂದಲೋ ಮಾಂಸಾಹಾರಿಗಳಾಗುತ್ತಿರುವುದೂ ಇದೆ. ಇದನ್ನರಿತೋ ಏನೋ ನಮ್ಮಲ್ಲಿ ಊಟ ತನ್ನಿಚ್ಛೆ; ನೋಟ ಪರರಿಚ್ಛೆ ಎಂಬ ಗಾದೆಮಾತಿದೆ. ವೀಗನ್‌ಗಳೆಂಬ ಇನ್ನೊಂದು ವರ್ಗವೂ ಹುಟ್ಟಿಕೊಂಡಿದೆ. ಪ್ರಾಣಿಜನ್ಯ ಆಹಾರಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪ, ಗಿಣ್ಣು, ಜೇನಿನತುಪ್ಪ ಇತ್ಯಾದಿಗಳನ್ನು ನಿಷೇಧಿಸಿಕೊಂಡಿದ್ದಾರೆ. ಸಸ್ಯಾಹಾರ ಎಂದರೆ ಶುದ್ಧ ಸಸ್ಯಾಹಾರ ಎಂದಿವರ ವಾದ.
ಒಟ್ಟಿನಲ್ಲಿ ಆಹಾರವೆನ್ನುವುದು ನಾವು ಮೇಲ್ನೋಟಕ್ಕೆ ಅಂದುಕೊಂಡಷ್ಟು ಸರಳವಾಗುಳಿದಿಲ್ಲ; ಅದು ಯಾವತ್ತೂ ಸರಳವಾಗಿರಲಿಲ್ಲ ಎಂಬುದೂ ಅಷ್ಟೇ ಸತ್ಯ. ಹಲವು ಕಟ್ಟುಪಾಡುಗಳ ನಡುವೆಯೇ ವ್ಯಾಖ್ಯಾನಗೊಂಡಿದೆ. ನಮ್ಮ ಸ್ವಭಾವ, ವರ್ತನೆ, ವ್ಯಕ್ತಿತ್ವಗಳ ದ್ಯೋತಕವಾಗಿದೆ. ಅಭಿರುಚಿಗಳ ಸಂಕೇತವಾಗಿದೆ. ತಿನ್ನುವುದು ಶರೀರಕ್ಕಾದರೂ ನಿಜವಾಗಿ ತಿನ್ನುವುದು ಮನಸ್ಸು! ಯಾವಾಗ ಮನಸ್ಸು ಪ್ರವೇಶಿಸುತ್ತದೆಯೋ ಅಲ್ಲೊಂದು ಸಂಕೀರ್ಣ ಆಯಾಮ ಆವರಿಸಿ ಬಿಡುತ್ತದೆ. ಏನು? ಎಷ್ಟು? ಹೇಗೆ? ಯಾವಾಗ ತಿನ್ನಬೇಕು? ಎಂಬುದಾಗಿ ನಿಯಮಗಳು ರೂಪಿತಗೊಳ್ಳುತ್ತವೆ. ಹಾಗೆಯೇ ಅಡುಗೆ ಸಹ. ಯಾರು? ಹೇಗೆ? ಯಾವಾಗ? ಎಷ್ಟು? ಏನು? ಎಂಬುದು. ಇದಕ್ಕಿರುವ ಸರಳ ಪರಿಹಾರವೆಂದರೆ ಬುದ್ಧಿಗಿಂತ ಹೃದಯದ ಮಾತು ಕೇಳುವುದು. ಇಷ್ಟಾನಿಷ್ಟವನ್ನರಿಯುವುದು. ನಮಗೇನು ಇಷ್ಟವೋ, ಯಾವುದು ಚಿಕ್ಕಂದಿನಿಂದ ಪಾಠವಾಗಿದೆಯೋ ಅದನ್ನು ಸೇವಿಸುವುದು ಅಷ್ಟೇ. ಏಕೆಂದರೆ ಆಹಾರಕ್ಕೆ ಎರಡು ಆಯಾಮಗಳಿವೆ. ಅಡುಗೆ ಸಿದ್ಧಪಡಿಸುವುದು ಒಂದು ಆಯಾಮವಾದರೆ ಅದರ ಇನ್ನೊಂದು ಆಯಾಮ ಸೇವನೆ. ಕುಳಿತಲ್ಲಿ, ನಿಂತಲ್ಲಿ, ಮನೆಯಲ್ಲಿ, ಹೊರಗಡೆಯಲ್ಲಿ ಪದೇ ಪದೇ ಕಾಡುವ ಬೃಹದಾಕಾರದ ಪ್ರಶ್ನೆಯೇ ಇದು: ಆಹಾರ. ಇದು ನಮಗೆ ಮ್ಯಾಟರೇ ಅಲ್ಲ ಎಂದು ಹೇಳುವವರು ಮಹಾನುಭಾವರು. ಅಂಥವರಿಗೆ ಶಿರಸಾಷ್ಠಾಂಗ ನಮಸ್ಕಾರ.
–ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ
ಪ್ರಕಟಿಸಿದ ಸುರಹೊನ್ನೆಗೆ ಕೃತಜ್ಞತೆಗಳು……
ಓದಿ ಕಮೆಂಟಿಸುವ ಎಲ್ಲ ಸಮಾನ ಮನಸ್ಕ
ಸಹೃದಯರಿಗೆ ಶರಣು 〽️
ಸಮೃದ್ಧ ಮಾಹಿತಿ ಯಿಂದ ಸಂಪನ್ನ ಗೊಂಡ ಬರಹ ಎಂದಿನಂತೆ ಖುಷಿ ಕೊಟ್ಟಿತು
ಧನ್ಯವಾದಗಳು ಮೇಡಂ, ನಿಮ್ಮ ಎಂದಿನ ಓದು ಮತ್ತು ಅದರ ಪ್ರತಿಕ್ರಿಯೆಗೆ ನಾ ಧನ್ಯ.
ಮಾಹಿತಿಪೂರ್ಣ
ಧನ್ಯವಾದ ಮೇಡಂ
ವಿಶೇಷ ಹಾಗೂ ಉತ್ತಮ ಮಾಹಿತಿಯನ್ನು ಒಳಗೊಂಡ ಲೇಖನ ಸೊಗಸಾದ ನಿರೂಪಣೆ ಯಿಂದ ಮೂಡಿಬಂದಿದೆ… ಎಲ್ಲದಕ್ಕಿಂತ ಬುದ್ದಿಗಿಂತ ಹೃದಯದ ಮಾತು ಕೇಳುವುದು…ನಮಗೆ ಚಿಕ್ಕಂದಿನಿಂದ… ಏನು ಪಾಠವಾಗಿದೆಯೋ ಅದನ್ನು ಸೇವಿಸುವುದು…ನಿಮ್ಮ ದೀರ್ಘ ಲೇಖನಕ್ಕೆ ಧನ್ಯವಾದಗಳು ಮಂಜು ಸಾರ್
ಅಲ್ಲವೇ ಮೇಡಂ, ಬಿಡುವಿಲ್ಲದ ನಿಮ್ಮ ಸಾಹಿತ್ಯಕ ಚಟುವಟಿಕೆಗಳ ನಡುವೆಯೂ ಬಿಡುವಿಸಿಕೊಂಡು
ಪೂರ್ಣ ಓದಿ, ಅಭಿಪ್ರಾಯಿಸಿದ್ದೀರಿ. ಅಷ್ಟೂ ಸಂಗತಿಗಳನು ಒಂದೇ ಸಾಲಿನಲಿ ನಮಗೆ ಏನು ಪಾಠವಾಗಿದೆಯೋ
ಅದನೇ ಸೇವಿಸುವುದು ಎಂದಿದ್ದೀರಿ. (ನಮ್ಮ ಪೀಳಿಗೆಯ ಗಳಿಗೆ ಅದೃಷ್ಟವಂತಿಕೆಯದು) ನಿಜ.
ಪ್ರತಿಸ್ಪಂದನಕೆ ನಾ ಆಭಾರಿ.
ಸೂಪಶಾಸ್ತ್ರದ ಕುರಿತು ಈ ವರೆಗೆ ತಿಳಿದಿರಲೇ ಇಲ್ಲ! ಪ್ರಪಂಚದ ಪ್ರಪ್ರಥಮ ಅಡುಗೆ ಪುಸ್ತಕ ನೋಡಿ ಆಶ್ಚರ್ಯವಾಯಿತು! ಅಡುಗೆಮನೆಯ ಅಚ್ಚುಕಟ್ಟುತನ, ಅದರಲ್ಲಿ ಅಟ್ಟುವ ವೈವಿಧ್ಯಮಯ ಆರೋಗ್ಯಯುತ ಅಡುಗೆಗಳು…ಇನ್ನೂ ಹಲವಾರು ವಿಚಾರಗಳನ್ನು ಒಳಗೊಂಡ ಸವಿಸ್ತಾರವಾದ, ಸೊಗಸಾದ ಅಡುಗೆ ಲೇಖನವು ಘಮವನ್ನು ಹರಡಿತು! ಧನ್ಯವಾದಗಳು ಸರ್.
ಆಹಾರದ ಬಗೆಗಿನ ನಿಮ್ಮ ಲೇಖನ ಚೆನ್ನಾಗಿದೆ.. ಅಂತೂ ಆಹಾರ ನಾವು ಅಂದುಕೊಂಡಷ್ಟು ಸರಳ ಅಲ್ಲ ಅನ್ನೋದು ನಿಜ!
ಸುದೀರ್ಘ ಪಾಂಡಿತ್ಯಪೂರ್ಣ ಲೇಖಕ. ಪಿ ಎಚ್ ಡಿ ಥೀಸಿಸ್ ಇದ್ದ ಹಾಗಿದೆ. ಇಷ್ಟೆಲ್ಲಾ ಮೂಲಗಳನ್ನು ಸಂಶೋಧಿಸಿ ಬರೆವ ನಿಮ್ಮ ಆಹರ್ ನಿಶಿ ಕಾಯಕಕ್ಕೆ ನಮೋ ನಮಃ.
ನಿಮ್ಮ ಮೈಗ್ರೇನ್ ಹೇಗಿದೆ. ಬಹುಶಃ ಮರೆಯಾಗಿರಬಹುದೆಂದು ಊಹಿಸುತ್ತೇನೆ.
ಇಂತಹ ವಿಷಯದ ಪಠ್ಯವನ್ನು ನಮ್ಮ ವಿದ್ಯಾರ್ಥಿಗಳಿಗೆ ಪರಿಚಯಿಸಿದರೆ ನಮ್ಮ ಕನ್ನಡ ಭಾಷೆಯ ಖ್ಯಾತಿ ಹೆಚ್ಚುತ್ತದೆ.
ಡಾ. ನಾ. ಸೋಮೇಶ್ವರರು ಕನ್ನಡದ ವಿಶಿಷ್ಟ (ಯಾವುದೇ ಭಾಷೆಯಲ್ಲಿ ಲಬ್ಯವಿರದ) ಅಂಕ ಕಾವ್ಯದ ಬಗ್ಗೆ ಬರೆಯಬಹುದೇ…
ಶುಭವಾಗಲಿ
ಪಠ್ಯವಾಗುವ ಎಲ್ಲ ಅರ್ಹತೆ ಹಾಗೂ ಘನತೆಗಳಿರುವ ನಿಮ್ಮ ಈ ಅಂಕಣ ಸಂಗ್ರಹಯೋಗ್ಯ.ದಯಮಾಡಿ ಅಂಕಣಗಳನ್ನು ಅಚ್ಚಿಸಿ ನಮ್ಮಂತವರಿಗೆ ಕೈಮರವಾಗುವ ಕೃಪೆತೋರಿ ಗುರುಗಳೆ
ಅತ್ಯುತ್ತಮವಾದ ಮನತಟ್ಟುವ ದೇಸೀ ಬರಹ…ಲೇಖಕರೂ,ಹಿತೈಷಿಗಳೂ ಆಗಿರುವ ಮಂಜುರಾಜ್ ಸರ್ ಅವರಿಗೆ ಅಭಿನಂದನೆಗಳು…