ಕಾದಂಬರಿ : ಕಾಲಗರ್ಭ – ಚರಣ 9

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಅವಳು ಬಂದದ್ದನ್ನು ನೋಡಿ ಶಾರದೆ ”ಮಗಳೇ ಎಲ್ಲಿಗೆ ಹೋಗಿದ್ದೆ? ತಾತನವರ ಪೂಜೆ ಇನ್ನೇನು ಮುಗಿಯುತ್ತಾ ಬಂತು. ಬಾ ಊಟಕ್ಕೆ ಸಿದ್ಧಮಾಡು” ಎಂದರು. ಹಾಗೇ ಅವಳೆಡೆಗೆ ತಿರುಗಿ ”ನೀನು ಮೊದಲಿನಂತೆ ಪಟಪಟನೆ ಉತ್ತರ ಕೊಡುವುದನ್ನು ನಿಲ್ಲಿಸು. ಯಾವುದನ್ನೂ ಯೋಚಿಸಿ ಮಾತನಾಡುವುದನ್ನು ರೂಢಿಮಾಡಿಕೋ” ಎಂದರು.

”ಓ..ನೆನ್ನೆ ನಾನು ಮಾತನಾಡಿದ್ದು ಅಮ್ಮನಿಗೆ ಅಷ್ಟು ಇಷ್ಟವಾದಂತಿಲ್ಲ. ಮಿಗಿಲಾಗಿ ಗೌರತ್ತೆ ಅದಕ್ಕೇ ವಿಷಯಾಂತರ ಮಾಡಿ ನನ್ನ ಗಮನವನ್ನು ಬೇರೆಕಡೆಗೆ ತಿರುಗಿಸಿದ್ದು ಕಾರಣವಿರಬೇಕು. ಹೂಂ..ವಿದ್ಯಾವಂತ, ಬುದ್ಧಿವಂತ, ಆಗಿಂದಾಗ್ಯೆ ಕೃಷಿಗೆ ಸಂಬಂಧಿಸಿದ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಲು ವಿದೇಶಕ್ಕೂ ಹೋಗಿಬರುತ್ತಿರುವ ಮಹೀ ನೆನ್ನೆ ನನ್ನ ನೇರಮಾತುಗಳನ್ನು ಮತ್ತು ಸಿರಿಕಂಠವನ್ನು ತನಗೆ ಇಷ್ಟವಾಯಿತೆಂದು ನನಗೊಬ್ಬಳಿಗೇ ಕೇಳಿಸುವಂತೆ ಪಿಸುದನಿಯಲ್ಲಿ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದನು. ನಾನು ಹಾಕಿದ ಪ್ರಶ್ನೆಗೆ ಮಾತ್ರ..ಎಲ್ಲರಂತೇ. ಅವರವರ ದೃಷ್ಟಿಕೋನದಲ್ಲಿ ನೋಡುತ್ತಾರೆ. ಮುಷ್ಠಿಯಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ನಾನೇ ಆತುರಪಟ್ಟು ಮಾತನಾಡಿದನೇನೋ. ಇನ್ನುಮುಂದೆ ಎಚ್ಚರವಾಗಿರಬೇಕು” ಎಂದುಕೊಳ್ಳುತ್ತಾ ತಾಯಿಯ ಮಾತಿನಂತೆ ಊಟದ ಮನೆಯ ಕಡೆಗೆ ಕೆಲಸಕ್ಕಾಗಿ ನಡೆದಳು ದೇವಿ.

ನಿಶ್ಚಿತಾರ್ಥದ ದಿನಾಂಕ ನಿಗದಿಪಡಿಸಿದ ಕೂಡಲೇ ಎರಡೂ ಕುಟುಂಬದ ಹಿರಿಯರಾದ ನೀಲಕಂಠಪ್ಪ, ಗಂಗಾಧರಪ್ಪ ಮತ್ತು ಅಳಿಯ ಜಗದೀಶಪ್ಪ ಖುದ್ದಾಗಿ ತಮ್ಮ ಸಮೀಪದ ಕುಟುಂಬದವರು, ಅಳಿಯಂದಿರು, ಮಕ್ಕಳುಮರಿ, ಕೆಲವು ಆಪ್ತೇಷ್ಟರು, ನೆರೆಹೊರೆಯವರು, ರೈತಾಪಿ ಜನಗಳನ್ನೆಲ್ಲ ಆತ್ಮೀಯವಾಗಿ ಆಹ್ವಾನಿಸಿದರು. ಸುಬ್ಬಣ್ಣನ ಚಿಕ್ಕಪ್ಪ, ಚಿಕ್ಕಮ್ಮ ಮುಂದಾಗಿ ನಿಂತು ತಂದೆಯಿಲ್ಲದ ಅವನಿಗೆ ಆ ಸ್ಥಾನದಲ್ಲಿ ನಿಂತು ಕಾರ್ಯಗಳನ್ನು ನಡೆಸಲು ಒತ್ತಾಸೆಯಾಗುತ್ತೇವೆಂದಾಗ ಮಂಗಳಾ ಮತ್ತು ಸುಬ್ಬುವಿಗೆ ಹಿಡಿಸಲಾರದಷ್ಟು ಸಂತೋಷವಾಯಿತು.

ವಿಷಯ ತಿಳಿದ ಕೆಲವು ಊರವರು ”ಇದನ್ನು ಮಾಡಲು ಇಷ್ಟುವರ್ಷ ಕಾಯಬೇಕಿತ್ತಾ !” ಎಂದುಕೊಂಡರೆ ಮತ್ತೆ ಕೆಲವರು ಇವರಿಬ್ಬರ ಒಡನಾಟ ಕಂಡವರು ಯಾರು ಹೆಣ್ಣು ಕೊಡಲು ಮುಂದೆಬಂದಾರು. ಅಂಗೈನಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಲೆದಾಡಿದರಂತೆ ಅನ್ನೊ ಹಾಗೆ ಆಯ್ತು ಎಂದರು. ಕೆಲವರು ಎಷ್ಟು ಹಣಕಾಸು ಇದ್ದರೇನು ಕಂಕಣಬಲವೊಂದು ಕೂಡಿಬರಲು ಇಷ್ಟು ವರ್ಷ ಕಾಯಬೇಕಾಯ್ತು ಹೀಗೇ ಮಾತನಾಡಿದರು. ಆದರೆ ಎರಡೂ ಕುಟುಂಬದ ಮಕ್ಕಳು ಮಾತ್ರ ಭೇಷಾಯಿತು. ನಮ್ಮ ತವರು ನಮಗೆ ಉಳಿದಂತಾಯಿತು ಎಂದುಕೊಂಡರು. ರೈತಾಪಿ ಜನರಂತೂ ಸ್ನೇಹದ ಜೊತೆಗೆ ಬಾಂಧವ್ಯವನ್ನು ಬೆಸೆಯುತ್ತಿದ್ದಾರೆ. ಇವರು ನೂರ್ಕಾಲ ಚೆನ್ನಾಗಿ ಬಾಳಲೆಂದು ಮನದಲ್ಲೇ ಶುಭ ಕೋರಿದರು.

ಯಾರ ಅಭಿಪ್ರಾಯ ಏನೇ ಇರಲಿ ನಿಶ್ಚಿತಾರ್ಥದ ಸಿದ್ಧತೆಗಳು ಮಾತ್ರ ಜೋರಾಗಿ ನಡೆದಿದ್ದವು. ಆ ದಿನವೂ ಬಂದೇ ಬಿಟ್ಟಿತು. ಎರಡೂ ಕುಟುಂಬಗಳವರು ದೊಡ್ಡ ಕುಳಗಳೇ ಆದ್ದರಿಂದ ಕೇಳಬೇಕೇ. ಎದುರು ಬದುರಾಗಿದ್ದ ಮನೆಗಳಿಗೆ ಸೇರಿದಂತೆ ವಿಶಾಲವಾದ ಹಸಿರುವಾಣಿ ಚಪ್ಪರ, ಅದಕ್ಕೆ ಹೂವಿನಲಂಕಾರ, ಮನೆಗಳ ಮುಂದೆ ಬಣ್ನಬಣ್ಣದ ರಂಗೋಲಿಗಳು, ಓಣಿಯ ಕೊನೆಯವರೆಗೂ ಶಾಮಿಯಾನಾ, ಬಂದವರಿಗೆ ಕುಳಿತುಕೊಳ್ಳಲು ಕುರ್ಚಿಗಳು, ಅವರೆಲ್ಲರಿಗೂ ಪೂಜಾಕಾರ್ಯಗಳು ಕಾಣಿಸುವಂತೆ ಎರಡು ಮನೆಗಳ ಮಧ್ಯದಲ್ಲಿ ಸಿದ್ಧಪಡಿಸಿದ್ದ ಎತ್ತರದ ವೇದಿಕೆ, ಎರಡೂ ಕುಟುಂಬಸ್ಥರು ಕುಳಿತುಕೊಳ್ಳಲು ಅನುವಾಗುವಂತೆ ಮತ್ತು ಪೂಜಾ ಪರಕರಗಳನ್ನು ಒಪ್ಪವಾಗಿ ಜೋಡಿಸಿಟ್ಟು ಅಣಿಮಾಡಿದ್ದರು.

ನಿಗದಿತ ವೇಳೆಗೆ ಸ್ವಲ್ಪ ಮುಂಚಿತವಾಗಿ ಗುರುಗಳು ಆಗಮಿಸಿದರು. ಪೂಜಾಕಾರ್ಯದ ಮುಖ್ಯಸ್ಥರಾದ ಗಂಗಾಧರಪ್ಪನವರು, ನೀಲಕಂಠಪ್ಪನವರು ಅವರನ್ನು ಗೌರವಾದರಗಳಿಂದ ನಮಸ್ಕರಿಸಿ ಬರಮಾಡಿಕೊಂಡರು.

ಕಚ್ಚೆಪಂಚೆ, ಸಿಲ್ಕು ಷರ್ಟು, ಹೆಗಲಮೇಲೆ ಶಲ್ಯ, ಹಣೆಗೆ ಹಚ್ಚಿದ್ದ ವಿಭೂತಿಯಿಂದ ಕಂಗೊಳಿಸುತ್ತಿದ್ದ ಅವರಿಬ್ಬರನ್ನೂ ಕಂಡು ಗುರುಗಳು ”ಏನ್ರಯ್ಯಾ ಮಧುಮಕ್ಕಳಿಗಿಂತ ನೀವೇ ಜೋರಾಗಿ ತಯಾರಾಗಿದ್ದೀರಿ” ಎಂದು ಚುಡಾಯಿಸುತ್ತಾ ”ಎಲ್ಲಿ ನಿಮ್ಮ ಕನ್ಯಾ ಮಣಿಗಳ ಕಡೆಯವರು?” ಎಂದು ಕೇಳಿದರು.

”ಇಲ್ಲೇ ಇದ್ದೇವೆ ಗುರುಗಳೇ” ಎಂದು ನಮಸ್ಕರಿಸಿ ನಿಂತರು ಜಗದೀಶಪ್ಪ ಮತ್ತು ಶಂಕರಪ್ಪ. ಅವರನ್ನು ನೋಡಿ ”ಪಾಪ ಹೆಣ್ಣು ಕೊಡುವವರಲ್ಲವೇ ಸಾಧಾರಣ ಉಡುಪಿನಲ್ಲಿದ್ದಾರೆ, ಚಿಂತೆ ಪಾಪ” ಎಂದು ತಮಾಷೆ ಮಾಡುತ್ತಾ ತಾವು ತಂದಿದ್ದ ಕಡತಗಳನ್ನು ಅಲ್ಲಿ ಪೀಠದಮೇಲಿಟ್ಟು ಕೈಕಾಲು ತೊಳೆದು ತಮಗಾಗಿ ಸಿದ್ಧಪಡಿಸಿದ್ದ ಜಾಗದಲ್ಲಿ ಆಸೀನರಾದರು.

ಎರಡೂ ನವಜೋಡಿಗಳನ್ನು ಮತ್ತು ಆ ದಿನದ ಕಾರ್ಯಕ್ಕೆ ಸಂಬಂಧಪಟ್ಟ ಹಿರಿಯ ಜೋಡಿಗಳನ್ನು ಕರೆದರು. ಬಹುತೇಕ ಜುಬ್ಬಾ, ಪೈಜಾಮಾ ತೊಟ್ಟಿರುತ್ತಿದ್ದ ಮಹೇಶ ಮತ್ತು ಮಂಡಿಯಿಂದ ಕೆಳಕ್ಕಿದ್ದ ಚಡ್ಡಿ, ಅರ್ಧತೋಳಿನ ಷರಟಿನಲ್ಲಿರುತ್ತಿದ್ದ ಸುಬ್ಬಣ್ಣ ಇಬ್ಬರೂ ಈದಿನ ರೇಷಿಮೆ ಪಂಚೆ , ಷರಟು, ಹೆಗಲಮೇಲೆ ಶಲ್ಯದಿಂದ ಅಲಂಕೃತಗೊಂಡು ಹೊಸಬರಂತೆ ಕಂಡರು. ಇನ್ನು ಮಾದೇವಿ, ಚಂದ್ರಿಕಾ ಇಂದೇ ಧಾರೆ ಎರೆಸಿಕೊಳ್ಳುತ್ತಾರೇನೊ ಎಂಬಂತೆ ಅಡಿಯಿಂದ ಮುಡಿಯವರೆಗೆ ವಿಶೇಷವಾಗಿ ಅಲಂಕಾರ ಮಾಡಿಕೊಂಡು ಕಂಗೊಳಿಸಿದ್ದರು. ಎತ್ತರ, ಬಣ್ಣ ಲಕ್ಷಣ, ಉತ್ಸಾಹ ಹುಮ್ಮಸ್ಸು, ಆರೋಗ್ಯದಿಂದ ನಳನಳಿಸುತ್ತಾ ಒಬ್ಬರಿಗೊಬ್ಬರು ಪೈಪೋಟಿ ನಡೆಸುವಂತಿದ್ದ ಜೋಡಿಗಳು ಬಂದವರ ಕಣ್ಣನ್ನು ಸೆಳೆಯುವಂತಿದ್ದರು.

ಗಣಪತಿ ಪೂಜೆಯಿಂದ ಪ್ರಾರಂಭ ಮಾಡಿದ ಗುರುಗಳು ಮುಂದುವರೆಸುತ್ತಾ ಒಬ್ಬರಿಗೊಬ್ಬರು ನಿಶ್ಚಯದ ತಾಂಬೂಲಗಳನ್ನು ಬದಲಾಯಿಸಿಕೊಳ್ಳುವಿಕೆ, ಮನೆದೇವರಿಗೆ ಪೂಜೆ ಸಲ್ಲಿಸಿದ ನಂತರ ಹುಡುಗ ಹುಡುಗಿಯರ ನಡುವೆ ಉಂಗುರಗಳ ಬದಲಾವಣೆ, ಎಲ್ಲವನ್ನೂ ಯಾವುದೂ ಅತಿಯಾಗದಂತೆ ಚಿಕ್ಕದಾಗಿ ಲೋಪಬರದಂತೆ ಮಾಡಿ ಮುಗಿಸಿದರು. ಲಗ್ನ ಪತ್ರಿಕೆಯನ್ನು ಬರೆದು ಎರಡೂ ಕಡೆಯವರಿಗೆ ಪ್ರತಿಗಳನ್ನು ಹಸ್ತಾಂತರಿಸಿಕೊಟ್ಟರು. ಎರಡು ತಿಂಗಳ ನಂತರ ಇದೇ ಸ್ಥಳದಲ್ಲಿ ವಿವಾಹ ನೆರವೇರುವುದೆಂದು ಘೋಷಿಸಲಾಯಿತು.

ಕಾರ್ಯಕ್ರಮದ ನಂತರ ಬಂದವರಿಗೆಲ್ಲ ಊಟದ ಏರ್ಪಾಡು ಮಾಡಲಾಗಿತ್ತು. ಮೈಸೂರಿನಿಂದ ಕರೆಸಿದ್ದ ಬಾಣಸಿಗ ರಾಜು ಮತ್ತವರ ಸಿಬ್ಬಂದಿಯವರು ತಯಾರಿಸಿದ್ದ ಭೋಜನವನ್ನು ಸಾಂಪ್ರದಾಯಕ ರೀತಿಯಲ್ಲಿ ಬಾಳೆಯೆಲೆಯಲ್ಲಿ ಬಡಿಸಿದರು. ಹೋಳಿಗೆ, ಚಿತ್ರಾನ್ನ, ಪಕೋಡ, ಎರಡು ರೀತಿಯ ಪಲ್ಯಗಳು, ಕೋಸಂಬರಿ, ಅನ್ನ, ಸಾಂಬಾರು, ತಿಳಿಸಾರು, ಹಪ್ಪಳಸಂಡಿಗೆ, ಉಪ್ಪಿನಕಾಯಿ, ಗಟ್ಟಿಮೊಸರು, ಕುಡಿಯಲು ನೀರುಮಜ್ಜಿಗೆ, ಬಾಳೆಹಣ್ಣು, ಬೀಡಾ ಎಲ್ಲವೂ ಸಮರ್ಪಕವಾಗಿದ್ದವು. ಹೆಣ್ಣುಮಕ್ಕಳಿಗೆ ತಾಂಬೂಲದ ಜೊತೆಗೆ ರವಿಕೆಕಣವನ್ನಿತ್ತು ಸತ್ಕರಿಸಲಾಯಿತು. ನೀಲಕಂಠಪ್ಪ, ಬಸಮ್ಮನವರೇ ಖುದ್ದಾಗಿ ನಿಂತು ಎಲ್ಲರಿಗೂ ಉಪಚಾರ ಮಾಡಿದರು.
ಬಂದ ಅತಿಥಿ ಅಭ್ಯಾಗತರೆಲ್ಲ ಆತಿಥ್ಯವನ್ನು ಸ್ವೀಕರಿಸಿ ಶುಭ ಹಾರೈಸಿ ತಂತಮ್ಮ ಮನೆಗಳಿಗೆ ತೆರಳಿದರು. ಈ ಕಾರ್ಯಕ್ಕಾಗಿ ಬಂದಿದ್ದ ಅವರ ಕುಟುಂಬದ ಹೆಣ್ಣುಮಕ್ಕಳು ಒಂದೆರಡು ದಿನ ಉಳಿದು ಮದುವೆಯ ಸಂದರ್ಭದಲ್ಲಿ ಪೋಷಕರು ಕೊಡುವ ಉಡುಗೊರೆಗಳನ್ನು ಪಡೆದುಕೊಂಡು ತಂತಮ್ಮ ಊರುಗಳಿಗೆ ತೆರಳಿದರು.

ಕೊನೆಯದಾಗಿ ತನ್ನ ಕುಟುಂಬದೊಡನೆ ಹೊರಟುನಿಂತ ಜಗದೀಶ ಮಾವಾ ತಪ್ಪು ತಿಳಿಯದಿದ್ದರೆ ಒಂದು ಮಾತನ್ನು ಕೇಳಬೇಕೆನ್ನಿಸಿದೆ‌ಎಂದನು.

‘ಏ..ಅದಕ್ಯಾಕೆ ಅಷ್ಟು ಸಂಕೋಚ, ಕೇಳಿ’ ಎಂದರು ನೀಲಕಂಠಪ್ಪ.

‘ನಾನು ಮದುವೆಯಾದಾಗಿನಿಂದ ನೋಡುತ್ತಾ ಬಂದಿದ್ದೇನೆ. ನೀವು ಹೆಣ್ಣುಮಕ್ಕಳಿಗೆ ಹಬ್ಬ ಹರಿದಿನಕ್ಕೆ ಅರಿಷಿನ ಕುಂಕುಮ ಸೌಭಾಗ್ಯ ಸಂಕೇತವಾಗಿ ಬಳಸಿಕೊಳ್ಳಲು ಇಡುಗಂಟು ಇಟ್ಟಿದ್ದೀರ. ಅದು ಬಿಡಿ, ಆದರೆ ಮಧ್ಯೆಮಧ್ಯೆ ನಡೆಯುವ ಇಂಥಹ ಸಮಾರಂಭಗಳ ಸಂದರ್ಭದಲ್ಲಿ ಹಣವನ್ನಿಟ್ಟು ಕೊಟ್ಟಬಿಡುತ್ತೀರಿ. ಈ ಏರ್ಪಾಡಿಗೆ ಕಾರಣವೇನೆಂದು ಕೇಳಬಹುದೇ? ಏಕೆಂದರೆ ಇನ್ನೆರಡು ತಿಂಗಳಲ್ಲಿ ನಾನೂ ಮಗಳ ಮದುವೆ ಮಾಡುತ್ತೇನಲ್ಲ ಅದಕ್ಕೆ ತಿಳಿದುಕೊಳ್ಳುವ ಕುತೂಹಲ’ ಎಂದ ಜಗದೀಶ

‘ಓ ! ಇಷ್ಟುವರ್ಷ ನಿಮಗೆ ತಲೆಗೆಬಾರದ್ದು ಈಗ ಬಂತೇನು? ಹೇಳುತ್ತೇನೆ ಕೇಳಿ’ ಎಂದರು.
”ನನಗೆ ಸಪ್ತಮಾತೃಕೆಯರಂತೆ ಹೆಣ್ಣುಮಕ್ಕಳು. ಅವರುಗಳಿಗೆ ಕೊಡುಗೆಗಳನ್ನು ತಂದು ಒಪ್ಪಿಸಬೇಕಾದರೆ ಹರಸಾಹಸ ಪಡಬೇಕಾಗಿತ್ತು. ಅದಕ್ಕಾಗಿ ನಾನೇ ಕಂಡುಕೊಂಡ ಸುಲಭ ಉಪಾಯವಿದು. ಈಗ ಎಲ್ಲ ಮಕ್ಕಳೂ ಗೃಹಿಣಿಯರಾಗಿ ತಮ್ಮ ಮಕ್ಕಳಿಗೂ ಬದುಕು ಕಟ್ಟಿಕೊಟ್ಟಿದ್ದಾರೆ. ಈಗ ನೀವೂ ಕಟ್ಟಿಕೊಡಲು ಹೊರಟಿದ್ದೀರಿ. ಅವರು ಏನಾದರೂ ತೆಗೆದುಕೊಳ್ಳಲಿ ಬಿಡಲಿ ಅದೆಲ್ಲ ನನಗೆ ಸಂಬಂಧವಿಲ್ಲ. ನನ್ನ ಕೈಲಾಗುವುದಿಷ್ಟೇ ಎಂದು ಹೇಳಿಬಿಟ್ಟಿದ್ದೇನೆ. ಇದಕ್ಕೆ ಯಾರಿಂದಲೂ ತಕರಾರು ಬಂದಿಲ್ಲ ಎಂದರು ನೀಲಕಂಠಪ್ಪ.
ಅದನ್ನು ಕೇಳಿದ ಜಗದೀಶ ಮಾವನ ಚತುರಮತಿಯನ್ನು ಮನದಲ್ಲೇ ಪ್ರಶಂಸಿಸುತ್ತ ತನ್ನ ಮಗಳ ಮದುವೆಯ ಸಂದರ್ಭದಲ್ಲಿ ಯಾರ್‍ಯಾರಿಗೆ ಏನೇನು ಎಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಮಾವ ತೋರಿದ ಮಾರ್ಗ ನಿಚ್ಚಳವಾಗಿದೆಯೆಂದು ಸಮಾಧಾನದಿಂದ ಮಾವನಿಗೆ ನಮಸ್ಕರಿಸಿ ಮತ್ತೇನಾದರೂ ಕೇಳಬೇಕೆನ್ನಿಸಿದರೆ ಫೋನ್ ಮಾಡುತ್ತೇನೆ” ಎಂದು ಹೇಳಿ ತನ್ನವರೊಂದಿಗೆ ಊರಿಗೆ ಹೊರಟನು.

ಈ ಮಧ್ಯದಲ್ಲಿ ಚಂದ್ರಿಕಾ ಸುಬ್ಬುವನ್ನು ಏಕಾಂತದಲ್ಲಿ ಸಂಧಿಸಿ ಮಾತನಾಡಲಾಗಲಿಲ್ಲ. ಹಾಗೂ ಒಂದುದಿನ ಮಾದೇವಿಯ ರೂಮಿನಲ್ಲಿ ಅವಳ ಜೊತೆಯಲ್ಲಿದ್ದಾಗ ದೇವಿಯಕ್ಕಾ ಜಮೀನಿನ ಹತ್ತಿರ ಒಮ್ಮೆ ಹೋಗಿಬರೊಣವೇ ಎಂದು ಕೇಳಿದ್ದಳು.ಅದಕ್ಕವಳು ಈಗ ಬೇಡ ಚಂದ್ರಿಕಾ ನೆಂಟರ ಬಾಯಿಗೆ ಆಹಾರವಾಗುತ್ತೇವೆ. ಮದುವೆ ಜವಳಿ ತೆಗೆಯಲು ಒಟ್ಟಿಗೆ ಮೈಸೂರಿಗೆ ಹೋಗುವ ಕಾರ್ಯಕ್ರಮವಿದೆ. ಆಗ ಹೇಗಾದರೂ ಅವನ ಜೊತೆಯಲ್ಲಿ ಮಾತನಾಡುವೆಯಂತೆ. ಅವಕಾಶ ಮಾಡಿಕೊಡುತ್ತೇನೆ. ಈಗ ಬರೀ ಫೋನೇ ನಿನಗೆ ಗತಿ ಎಂದು ಬಾಯ್ಮುಚ್ಚಿಸಿದಳು. ಅದರಿಂದ ನಿರಾಸೆಯಾದರೂ ಚಂದ್ರಿಕಾಳಿಗೆ ಅವಳ ಮಾತಿನ ಹಿಂದಿರುವ ಕಾಳಜಿ ಅರ್ಥವಾಗಿ ತಂದೆತಾಯಿಗಳ ಜೊತೆ ಊರಿಗೆ ಹೊರಟಳು.

ಅವರನ್ನು ಬೀಳ್ಕೊಂಡು ಒಳಗೆ ಬಂದ ಮಾದೇವಿಯ ಮನಸ್ಸಿಗೆ ಪಿಚ್ಚೆನ್ನಿಸಿತ್ತು. ಪಾಪ ಚಂದ್ರಿಕಾ ಸುಬ್ಬುವನ್ನು ಕಂಡು ಮಾತನಾಡಲು ನನ್ನ ಸಹಾಯ ಕೇಳಿದಳು ನಾನೇನೂ ಮಾಡಲಾಗಲಿಲ್ಲ.ಆ ದಿನ ನಿಶ್ಚಿತಾರ್ಥಕ್ಕೆಂದು ಒಂದೆರಡು ದಿನ ಮುಂಚಿತವಾಗಿ ಬಂದಿದ್ದ ಮಹೇಶನ ಸೋದರಿಯರು ”ನೀನು ನಮ್ಮಮನೆಗೆ ಸೊಸೆಯಾಗಿ ಬರುತ್ತಿರುವ ಸುದ್ಧಿಯನ್ನು ಕೇಳಿಯೇ ನಮಗೆಲ್ಲ ಎಷ್ಟು ಸಂತಸವಾಯಿತು ಗೊತ್ತಾ. ಕುಣಿದು ಕುಪ್ಪಳಿಸಿಬಿಟ್ಟೆವು. ಚಿಕ್ಕಂದಿನಿಂದ ನೋಡಿರುವ ಹುಡುಗಿ, ಅನುರೂಪದ ಜೋಡಿ ಮಹೇಶನಿಗೆ” ಎಂದು ಹೊಗಳಿದ್ದೇ ಹೊಗಳಿದ್ದು. ಅದನ್ನು ಕೇಳಿ ಮಾದೇವಿ ಹಿಗ್ಗಿ ಹೀರೇಕಾಯಿಯಾಗಿದ್ದಳು. ಅದು ಬರಿಯ ಒಣ ಮಾತೆಂಬುದು ಒಂದೆರಡು ದಿವಸಗಳಲ್ಲೇ ಅರ್ಥವಾಯಿತು. ಶಾರದತ್ತೆ ನೀವು ದೇವಿಗೆ ಹೇಳಿ ಅವನೊಡನೆ ತೋಟಕ್ಕೆ ಹೋಗಿ ಬರುವುದನ್ನು ಸ್ವಲ್ಪ ದಿನ ನಿಲ್ಲಿಸೆಂದು. ಅಲ್ಲಾ..ಆ ರಣಬಿಸಿಲಿನಲ್ಲಿ ಏಕೆ ಅಲೆದಾಡಬೇಕು? ನಿಶ್ಚಿತಾರ್ಥವಾಗಿರುವ ಹುಡುಗಿ, ಮದುವೆಯಾದ ಮೇಲೆ ಹೋಗುವುದು ಇದ್ದದ್ದೇ. ಈಗವಳು ಮನೆತನಕ್ಕೆ ತಕ್ಕ ಹಾಗೆ ನಡೆದುಕೊಂಡರೆ ಒಳ್ಳಿತು. ತಪ್ಪು ತಿಳಿಯಬೇಡಿ, ಜನರ ಬಾಯಿಗೆ ಬೀಳಬಾರದೂಂತ ಹೇಳಿದೆವಷ್ಟೇ. ಎಂದು ಸಮರ್ಥಿಸಿಕೊಂಡರಂತೆ. ಅದನ್ನು ಅಳೆದೂ ಸುರಿದೂ ದೇವಿಗೆ ಅವರಮ್ಮ ಹೇಳಿದ್ದರು. ಹೀಗೆ ಹೇಳಿರುವುದು ಗೌರತ್ತೆ ಮತ್ತು ಮಹೀಗೆ ಗೊತ್ತೋ? ಅವರ ಗಮನಕ್ಕೆ ಬಂದಿತ್ತೋ ಇಲ್ಲವೋ? ಕೇಳೋಣವೆಂದರೆ ಈಗಲೇ ಬೇಹುಗಾರಿಕೆ ಮಾಡುತ್ತಾಳೆಂಬ ಆಪಾದನೆ ಬರುತ್ತದೆ. ತಾಯಿಯೊಡನೆ ವಾದ ಮಾಡದೆ ತೆಪ್ಪಗಾದಳು. ಮುಂದೆ ಇನ್ನೇನೇನು ಕಾಣಬೇಕೋ? ಚಂದ್ರಿಕಾಳ ತವರೇನೋ ದೂರ, ಆದರೆ ನನ್ನದು ಮನೆಯಿಂದ ಹೊರಗೆ ಕಾಲಿಟ್ಟರೆ ತವರುಮನೆ. ಅವತ್ತೇ ಅಜ್ಜಿ ಹೇಳಿದ್ದರು ಪುಟ್ಟೀ ಗೆಳೆತನ ಬೇರೆ, ಬೀಗತನ ಬೇರೇನೇ ಎಂದು. ಇದ್ಯಾವುದೇ ಗುಟ್ಟನ್ನು ಬಿಟ್ಟುಕೊಡದೇ ಚಂದ್ರಿಕಾಳಿಗೆ ಸಮಯಕ್ಕೊಂದು ಸಮಾಧಾನದ ಮಾತೇಳಿ ಕಳಿಸಿದ್ದಾಯಿತು ಎಂದುಕೊಂಡಳು ಮಾದೇವಿ.

ಮನೆ ತಲುಪಿ ನಂತರ ರಾತ್ರಿ ಮಲಗುವ ಮುನ್ನ ಚಂದ್ರಿಕಾ ಸುಬ್ಬುವಿಗೆ ಫೋನ್ ಮಾಡಿದಳು. ಅಲ್ಲಿಯವರೆಗೆ ನಡೆಸಿಕೊಂಡು ಬಂದಿದ್ದ ತಮ್ಮಿಬ್ಬರ ಒಡನಾಟವನ್ನು ನೆನಪಿಸಿ ಈಗ ಎಲ್ಲವೂ ನಿಶ್ಚಯವಾದರೂ ತಾವಿಬ್ಬರೇ ಏಕಾಂತದಲ್ಲಿ ಒಂದೆರಡು ಮಾತನಾಡಲಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದಳು. ಹಾಗೆಯೇ ಮಾದೇವಿಯ ಸಹಾಯವನ್ನು ಕೇಳಿದ್ದು ಅವಳು ಹೇಳಿದ ಪರಿಹಾರ ಎಲ್ಲವನ್ನೂ ಚಾಚೂ ತಪ್ಪದೆ ಅವನಿಗೆ ಒಪ್ಪಿಸಿದಳು.

ಅದೆಲ್ಲವನ್ನೂ ಕೇಳಿ ಸುಬ್ಬಣ್ಣ ”ಚಂದ್ರಾ ನಮ್ಮ ದೊಡ್ಡಮ್ಮ ಮನಸ್ಸು ಮಾಡಿ ನನ್ನನ್ನು ಇಲ್ಲಿಗೆ ಕರೆತರದಿದ್ದರೆ ನಾವಿಂದು ಯಾರ ಜೀತದಾಳಾಗಿರುತ್ತಿದ್ದೆವೋಗೊತ್ತಿಲ್ಲ. ಅವರಿಟ್ಟ ಭಿಕ್ಷೆ ಇವತ್ತು ನಮಗೆ ಈ ಸ್ಥಿತಿಗೆ ಮುಟ್ಟಲು ಕಾರಣವಾಗಿದೆ.ತಮ್ಮ ಮನೆಯ ಮಗನಿಗೆ ಸಮಾನವಾಗಿ ನನ್ನನ್ನು ಕಾಣುವ ಅಂತಃಕರಣ ಉಳ್ಳವರು ಅವರು. ದೊಡ್ಡಪ್ಪ, ಮಹೇಶಣ್ಣಾ ಅವರೂ ಅಷ್ಟೇ ಪ್ರೀತಿ ತೋರಿದ್ದಾರೆ. ಈಗ ಮನೆಗೆ ಬರುತ್ತಿರುವ ಚಿಕ್ಕ ಯಜಮಾನಿಯೂ ನಮಗೆ ಅಪರಿಚಿತಳಲ್ಲ. ನಾವು ಉಪ್ಪಿಟ್ಟವರನ್ನು ಮುಪ್ಪಿನ ತನಕಾ ಮರೆಯಬಾರದೆಂಬ ರೀತಿಯಲ್ಲಿ ನಾವಿರಬೇಕು. ನೀನು ಹೇಳುವುದನ್ನು ಕೇಳಿದರೆ ಮಹೇಶಣ್ಣನ ಸೋದರಿಯರ ಮೇಲೆ ಗುಮಾನಿ ಬರುತ್ತಿದೆ. ಅವರು ಇವರಷ್ಟು ಸರಳರಲ್ಲ. ಅವರು ಹುಟ್ಟಿದ ಮತ್ತು ಸೇರಿದ ಮನೆಗಳಲ್ಲಿ ಶ್ರೀಮಂತಿಕೆಯನ್ನು ಕಂಡವರೇ. ಇವರಲ್ಲಿ ಯಾರಿಗಾದರೂ ವಯಸ್ಕ ಹೆಣ್ಣುಮಕ್ಕಳಿದ್ದಿದ್ದರೆ ಹೇಗಾದರೂ ಮಾಡಿ ಅವಳನ್ನೇ ಮಹೇಶಣ್ಣನಿಗೆ ಕಟ್ಟಿಬಿಡುತ್ತಿದ್ದರೇನೋ? ಪುಣ್ಯಕ್ಕೆ ಇರುವುದೆಲ್ಲ ಗಂಡುಮಕ್ಕಳೇ. ಅಲ್ಲದೆ ನಾನು ಇಲ್ಲಿಗೆ ಬಂದಾಗಲಿಂದ ಈ ಮನೆಯ ವಿದ್ಯಮಾನಗಳನ್ನು ಗಮನಿಸುತ್ತಲೇ ಬಂದಿದ್ದೇನೆ. ನಾನಿಲ್ಲಿಗೆ ಬಂದಿರುವುದಾಗಲಿ ಹಾಗೂ ಈ ಮನೆಯ ಕಾರುಬಾರಿನಲ್ಲಿ ಒಂದಾಗಿರುವುದಾಗಲಿ, ಮಗನ ಸಮಾನವಾಗಿ ನನ್ನನ್ನು ಕಾಣುವುದಾಗಲೀ ಅವರಿಗೆ ಇಷ್ಟವಿಲ್ಲ. ಈಗಂತೂ ಮಹೇಶಣ್ಣ ದೇವಿಯಕ್ಕ ಮತ್ತು ನಾವಿಬ್ಬರೂ ಜೋಡಿಯಾಗುತ್ತಿರುವುದೂ ಅವರಿಗೆ ಸಹಿಸಲಾಗುತ್ತಿಲ್ಲ. ದೊಡ್ಡಮ್ಮ ಇಲ್ಲಿ ಅವರದ್ದೇನೂ ನಡೆಯುವುದಕ್ಕೆ ಬಿಡುವುದಿಲ್ಲ. ಆದರೂ ಏನಾದರೊಂದನ್ನು ತಂದು ಹಾಕಬಹುದು. ಎಚ್ಚರವಾಗಿರಬೇಕು. ದೇವಿಯಕ್ಕ ಮೇಲ್ನೊಟಕ್ಕೆ ಗಟ್ಟಿಗರಂತೆ ಕಾಣಿಸಿದರೂ ತುಂಬ ಸೂಕ್ಷ್ಮ ಪ್ರವೃತ್ತಿಯವರು. ಮೃದು ಸ್ವಭಾವದವರು. ಸ್ವಾಭಿಮಾನಿ. ಏನಾದರು ಗಾಳಿಸುದ್ಧಿ ಕಿವಿಗೆ ಬಿದ್ದರೆ ನನಗೆ ತಿಳಿಸು. ಹಿರಿಯರೆಲ್ಲರ ಸಮ್ಮತಿಯಿಂದ ಎಲ್ಲ ಸುಗಮವಾಗಿ ನಡೆದುಕೊಂಡು ಹೋಗುತ್ತಿದೆ. ಇನ್ನೆರಡು ತಿಂಗಳಷ್ಟೇ ಸಹನೆಯಿಂದ ಇದ್ದುಬಿಡು. ಏನಾದರು ಮಾತನಾಡಬೇಕೆಂದರೆ ಈ ಮೊಬೈಲ್ ಇದೆಯೆಲ್ಲ” ಎಂದು ತಿಳಿವಳಿಕೆ ಹೇಳಿ ಶುಭರಾತ್ರಿ ಕೋರಿ ಕರೆಯನ್ನು ನಿಲ್ಲಿಸಿದ.

ಮದುವೆಗೆ ಜವಳಿ ತೆಗೆಯಲು ಬಂದಾಗ ಚಂದ್ರಿಕಾ ಸುಬ್ಬವನ್ನು ಏಕಾಂತದಲ್ಲಿ ಭೇಟಿಮಾಡಿಸಲು ಸಹಾಯ ಕೇಳಬಹುದೆಂದುಕೊಂಡಿದ್ದ ದೇವಿಗೆ ಅದರ ಬಗ್ಗೆ ಚಕಾರವನ್ನೂ ಎತ್ತದೆ ಇದ್ದದ್ದು ಸೋಜಿಗವೆನ್ನಿಸಿತ್ತು. ಅದರ ಹಿಂದೆಯೇ ಬಿಡು ಆದದ್ದೆಲ್ಲ ಒಳ್ಳೆಯದೇ ಆಯ್ತು. ಬೆಳಗ್ಗೆದ್ದರೆ ಕಾಣುವ ನಾನೇ ನನ್ನನ್ನು ನಿರ್ಬಂಧಿಸಿಕೊಂಡಿಲ್ಲವೇ ಇದನ್ನು ನೋಡಿ ತಾತ ನೋಡೇ ”ನಮ್ಮ ಕೂಸು ಎಷ್ಟು ತಿಳಿವಳಿಕಸ್ಥಳಾಗಿಬಿಟ್ಟಿದ್ದಾಳೆ. ಗಳಿಗೊಮ್ಮೆ ಅ ಮನೆಗೆ ಎಡತಾಕುತ್ತಾ ಮಹೇಶನ ಜೊತೆಗೆ ಹೊತ್ತುಗೊತ್ತಿಲ್ಲದೆ ಹಿಂದೆಮುಂದೆ ತಿರುಗುತ್ತಿದ್ದವಳು ಘನಗಂಭೀರೆಯಾಗಿ ಕೆಲಸಕಾರ್ಯಗಳಲ್ಲಿ ಮಗ್ನಳಾಗಿದ್ದಾಳೆ” ಎಂದು ತಾರೀಫ್ ಮಾಡುತ್ತಿದ್ದರು.
ಅದನ್ನು ಕೇಳಿ ಅಜ್ಜಿ ಅಲ್ವಾ ಮತ್ತೇ ನಮ್ಮ ಪುಟ್ಟೀ ಜಾಣೆ, ಸಮಯ ಸನ್ನಿವೇಶ ಸಂದರ್ಭಗಳನ್ನು ಬೇಗ ಅರ್ಥಮಾಡಿಕೊಳ್ಳುತ್ತಾಳೆ. ಎಂದು ಧ್ವನಿಗೂಡಿಸುತ್ತಿದ್ದರು.ಆಗೆಲ್ಲ ಅದು ಬೇಕಿತ್ತು ಇದುಬೇಕಿತ್ತು ಎಂದು ಸಬೂಬು ಹೇಳಿ ಅಲ್ಲಿಂದ ಜಾಗ ಖಾಲಿಮಾಡುತ್ತಿದ್ದಳು ಮಾದೇವಿ.

ಸುಬ್ಬು ಮಹೇಶ ಜವಳಿ ತೆಗೆಯುವುದರಿಂದ ಹಿಡಿದು ಲಗ್ನಪತ್ರಿಕೆ ಸಿದ್ಧವಾಗುವವರೆಗೂ ಕೆಲಸ ಮುಗಿಸಿ ಆಹ್ವಾನಿಸುವ ಕಾರ್ಯವನ್ನು ಹಿರಿಯರಿಗೆ ಬಿಟ್ಟುಕೊಟ್ಟರು. ಅದೂ ಹಿರಿಯರೊಡನೆ ಸಮಾಲೋಚಿಸಿ ಆಗುತ್ತದೆಂದು ಅವರುಗಳು ಒಪ್ಪಿಕೊಂಡಮೇಲೆ.
ಶಂಕರಪ್ಪ, ಗಂಗಾಧರಪ್ಪ, ನೀಲಕಂಠಪ್ಪನವರು ತಮ್ಮ ಬಾಳಸಂಗಾತಿಗಳೊಡನೆ ಅವರಿಗೆ ಬೇಕಾದವರನ್ನು ಖುದ್ದಾಗಿ ಆಹ್ವಾನಿಸಿದರು. ತೀರಾ ದೂರದೂರಿನಲ್ಲಿರುವವರಿಗೆ ಲಗ್ನಪತ್ರಿಕೆಯೊಡನೆ ಒಂದು ಆತ್ಮೀಯತೆಯ ಪತ್ರ ಬರೆದು ಟಪಾಲುಮೂಲಕ ರವಾನಿಸಿದರು. ಇನ್ನೂ ಕೆಲವರಿಗೆ ಪತ್ರಿಕೆ ಕಳಿಸಿ ವಾಟ್ಸಪ್ ಮುಖಾಂತರ ಬರಲಾಗದ್ದಕ್ಕೆ ಅನಿವಾರ್ಯತೆಯನ್ನು ತಿಳಿಸಿದರು. ಮತ್ತೂ ಕೆಲವರಿಗೆ ಖುದ್ದಾಗಿ ಫೋನ್ ಮಾಡಿ ಆಹ್ವಾನಿಸಿದರು. ಅಡುಗೆಯವರು, ಪೆಂಡಾಲ್ ಹಾಕುವವರು, ಅಲಂಕಾರ ಮಾಡುವವರು, ಮಂಗಳವಾದ್ಯಕಾರರಿಗೆ ಮುಂಚಿತವಾಗಿಯೇ ಆಹ್ವಾನವಿತ್ತು ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಹೇಗೆ ಮಾಡಬೇಕೆಂದು ತಿಳಿಸಿದರು. ಹದಿನೈದು ದಿವಸಗಳಿರುವಾಗಲೇ ಸಮರ್ಪಕವಾಗಿ ತಯಾರಿಗಳೆಲ್ಲವು ಮುಗಿದಿವೆ ಎನ್ನಿಸಿತು.

ಈ ಅವಧಿಯಲ್ಲಿ ದೇವಿಯ ಮೌನ ಮಹೇಶನಿಗೆ ಅಚ್ಚರಿಯ ಸಂಗತಿಯಾಗಿ ತೋರಿತು. ವಿಚಾರಿಸಲು ಅವನಿಗೆ ಪುರುಸೊತ್ತು ಸಿಗದೆ ಎಲ್ಲೋ ಮನೆಯಲ್ಲಿ ಹಿರಿಯರು ನಿರ್ಬಂಧ ಮಾಡಿರಬೇಕು ಎಂದುಕೊಂಡನು. ಫೋನ್ ಸಂಪರ್ಕದಲ್ಲಿದ್ದರೂ ಬಿಡುಬೀಸಾಗಿ ಹರಟೆ ಹೊಡೆಯಲಿಕ್ಕಾಗುತ್ತಿರಲಿಲ್ಲ. ಇನ್ನೇನು ಸ್ವಲ್ಪ ದಿನಗಳಲ್ಲಿ ನನ್ನವಳಾಗುತ್ತಾಳೆ. ಇಲ್ಲದೆ ಇರುವ ಕಾರಣ ಕಲ್ಪಿಸಿಕೊಳ್ಳುವುದೇಕೆಂದು ಸುಮ್ಮನಾದ.

ಹೀಗೇ ಮದುವೆ ಇನ್ನೊಂದು ವಾರವಿದೆ ಎನ್ನುವಾಗ ಒಂದುದಿನ ಬೆಳಗ್ಗೇಬೆಳಗ್ಗೇನೇ ಟೆಂಪೋವೊಂದು ಮಾದೇವಿಯ ಮನೆಯ ಮುಂದೆ ಬಂದು ನಿಂತಿತು. ಅದರ ತುಂಬ ಸಾಮಾನುಗಳು. ಅದನ್ನು ನೋಡಿದ ತಾತನವರು ಅಜ್ಜಿಯೊಡನೆ ಅಲ್ಲಿಗೆ ಬಂದರು. ಖಾಲಿಯಾಗಿದ್ದ ಮನೆಯೊಂದರೊಳಕ್ಕೆ ಅವನ್ನೆಲ್ಲ ಇರಿಸಿ ಬೀಗಹಾಕಿಕೊಂಡು ಬಂದರು.

ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40606

(ಮುಂದುವರಿಯುವುದು)
ಬಿ.ಆರ್.ನಾಗರತ್ನ, ಮೈಸೂರು

9 Responses

  1. ನಯನ ಬಜಕೂಡ್ಲು says:

    ಎಂದಿನಂತೆ ಸೊಗಸಾಗಿ ಸಾಗಿದೆ,

  2. ಧನ್ಯವಾದಗಳು ನಯನಮೇಡಂ

  3. ಪ್ರಕಟಣೆಗಾಗಿ ಹೃತ್ಪೂರ್ವಕವಾದ ಧನ್ಯವಾದಗಳು ಗೆಳತಿ.. ಹೇಮಾ

  4. ಶಂಕರಿ ಶರ್ಮ says:

    ಮದುವೆ ತಯಾರಿ ಜೋರಾಗಿಯೇ ನಡೆದಿದೆ! ಮದುವೆ ಊಟಕ್ಕೆ ಇನ್ನೂ ಒಂದು ವಾರ ಕಾಯಬೇಕಲ್ಲಾಎಂಬ ಚಿಂತೆ ನನ್ನದು.
    ಎಂದಿನಂತೆ ಸೊಗಸಾದ ಮನಸೆಳೆಯುವ ನಿರೂಪಣೆ … ಧನ್ಯವಾದಗಳು ನಾಗರತ್ನ ಮೇಡಂ.

  5. MANJURAJ H N says:

    ಒಂಬತ್ತನೆಯ ಭಾಗ ಚೆನ್ನಾಗಿ ಬಂದಿದೆ. ಅಭಿನಂದನೆ ಮೇಡಂ. ಹೀಗೆಯೇ ಸಾಗಲಿ

  6. ಧನ್ಯವಾದಗಳು ಸಾರ್

  7. Padma Anand says:

    ಲೋಕಾರೂಢಿಯಾಗಿ ಜನರ ವರ್ತನೆಗಳ ವರ್ಣನೆ ತುಂಬಾ ಸಹಜವಾಗಿ ಮೂಡಿ ಬಂದಿದೆ. ಕುತೂಹಲ ಹುಟ್ಡಿಸಿ ಕಂತು ಮುಗಿಸಿಬಿಟ್ಟಿರಲ್ಲಾ . .

  8. ಧನ್ಯವಾದಗಳು ಪದ್ಮಾ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: